ಭಾನುವಾರ, ಏಪ್ರಿಲ್ 27, 2008

ಕಲ್ಲೇಶ್ವರ ದೇವಾಲಯ - ಅಂಬಳಿ


ದೇವಾಲಯ ಚೆನ್ನಾಗಿರಬಹುದೆಂಬ ನಿರೀಕ್ಷೆಯೊಂದಿಗೆ ಅಂಬಳಿ ತಲುಪಿದರೆ, ಕಲ್ಲೇಶ್ವರ ದೇವಾಲಯ ನಿರಾಸೆ ಮಾಡಿತು. ದೇವಾಲಯದ ಸಂಪೂರ್ಣ ನೋಟ ಕಣ್ಣಿಗೆ ಇಷ್ಟು ನಿರಾಶದಾಯಕವಾಗಿತ್ತೆಂದರೆ, ದೇವಾಲಯದ ಒಂದೇ ಒಂದು ಸಂಪೂರ್ಣ ಚಿತ್ರವನ್ನು ನಾನು ತೆಗೆಯಲಿಲ್ಲ. ಇದು ಪಶ್ಚಿಮ ಚಾಲುಕ್ಯ ಕಾಲದ ಏಕಕೂಟ ದೇವಾಲಯ.


ಅಲ್ಲಿದ್ದ ಪುರಾತತ್ವ ಇಲಾಖೆಯ ಸಿಬ್ಬಂದಿಯ ಪ್ರಕಾರ, ದೇವಾಲಯದ ಗೋಪುರಕ್ಕೆ ಹಲವು ಬಾರಿ ಸುಣ್ಣ ಬಳಿದು ಬಳಿದು ಅದು ತನ್ನ ಅಂದಗೆಡಿಸಿಕೊಂಡ ಬಳಿಕ ಊರವರು ಕಡೆಗೆ ಅದನ್ನು ಬೀಳಿಸಿ(?) ಅದರ ಜಾಗದಲ್ಲಿ ಹೊಸ ಗೋಪುರವನ್ನು ನಿರ್ಮಿಸಿದರು ಎಂದು! ಇಷ್ಟೇ ಅಲ್ಲದೆ, ನವರಂಗ/ಸುಖನಾಸಿಯ ಸುತ್ತಲು ಮಾರ್ಬಲ್!!! ಅದರ ಮೇಲೆ ಕುಳಿತು ವಿಶ್ರಮಿಸುತ್ತಿದ್ದರು ಊರವರು. ಇದಕ್ಕೆಲ್ಲಾ ಕಲಶವಿಟ್ಟಂತೆ ನವರಂಗದಿಂದ ಅಂತರಾಳಕ್ಕೆ ತೆರೆದುಕೊಳ್ಳುವ ದ್ವಾರಕ್ಕೆ ಹೊಸ ದ್ವಾರವೊಂದನ್ನು ಅಳವಡಿಸಿ ಅದರ ಮೇಲೆ ’ನೌಕರರ ದೇಣಿಗೆ ಅಂಬಳಿ ೧೯೮೮’ ಎಂಬ ಬರಹ ಬೇರೆ!


ಇಷ್ಟೆಲ್ಲಾ ಆದ ಬಳಿಕ ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡು ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಸುಂದರ ಉದ್ಯಾನವನ್ನು ನಿರ್ಮಿಸಿಕೊಂಡು, ಸಿಬ್ಬಂದಿಯೊಬ್ಬನನ್ನು ನೇಮಿಸಿ ಕಲ್ಲೇಶ್ವರನ ಸನ್ನಿಧಿಯನ್ನು ಕಾಪಾಡಿಕೊಂಡು ಬಂದಿದೆ.


ಮೇಲೆ ತಿಳಿಸಿದ್ದನ್ನೆಲ್ಲಾ ಮರೆತು ದೇವಾಲಯವನ್ನು ವೀಕ್ಷಿಸುವುದಾದರೆ ಇದೊಂದು ಸುಂದರ ದೇವಾಲಯ. ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖಮಂಟಪವನ್ನು ಈ ದೇವಾಲಯ ಹೊಂದಿದೆ. ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಪಾಣಿಪೀಠವಿಲ್ಲ(!) ಮತ್ತು ನಂದಿ ಗರ್ಭಗುಡಿಯಲ್ಲೇ ಇದ್ದಾನೆ! ಇದು ಈ ದೇವಾಲಯದ ವೈಶಿಷ್ಟ್ಯ ಎನ್ನಬಹುದು.


ನವರಂಗದಲ್ಲಿ ಪ್ರಭಾವಳಿ ಕೆತ್ತನೆಯಿರುವ ನಾಲ್ಕು ಸುಂದರ ಕಲ್ಲಿನ ಕಂಬಗಳು. ನವರಂಗದಿಂದ ಅಂತರಾಳಕ್ಕೆ ತೆರೆದುಕೊಳ್ಳುವ ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳು. ದೇವಾಲಯದ ಸುತ್ತಲೂ ಹೊರಗೋಡೆಯಲ್ಲಿರುವ ಸಿಂಹಗಳ ಮತ್ತು ಮೊಸಳೆಗಳ ತಲೆಗಳ ಕೆತ್ತನೆಯಿದೆ.


ದೇವಾಲಯದ ನಿರ್ಮಾಣಗೊಂಡ ವರ್ಷದ ಬಗ್ಗೆ ತಿಳಿಸುವ ಶಾಸನ ಲಭ್ಯವಾಗಿಲ್ಲ. ಈ ದೇವಾಲಯದಲ್ಲಿ ಪಶ್ಚಿಮ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದ (ಇಸವಿ ೧೦೮೧ ಮತ್ತಿ ೧೧೦೫) ಎರಡು ಶಾಸನಗಳು ದೊರಕಿವೆ. ಮೊದಲ ಶಾಸನದಲ್ಲಿ ಈ ದೇವಾಲಯಕ್ಕೆ ಮಾಡಲಾಗಿರುವ ದಾನದತ್ತಿಗಳ ಬಗ್ಗೆ ವಿವರಗಳಿರುವುದರಿಂದ ೧೦೮೧ ಕ್ಕಿಂತ ಮೊದಲೇ ಈ ದೇವಾಲಯದ ನಿರ್ಮಾಣವಾಗಿದೆಯೆಂದು ಇತಿಹಾಸಕಾರರ ಅಭಿಪ್ರಾಯ. ಊರಿನಲ್ಲಿರುವ ಹನುಮಂತನ ದೇವಾಲಯದಲ್ಲಿ ಪಶ್ಚಿಮ ಚಾಲುಕ್ಯ ದೊರೆ ಎರಡನೇ ಜಗದೇಕಮಲ್ಲನ ಕಾಲದ (ಇಸವಿ ೧೧೪೩) ಶಾಸನವೂ ದೊರಕಿದೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

2 ಕಾಮೆಂಟ್‌ಗಳು: