ಭಾನುವಾರ, ಅಕ್ಟೋಬರ್ 14, 2007

ಎರಡು ಜಲಧಾರೆಗಳಿಗೆ ಚಾರಣ


ದೂರದಲ್ಲಿ ಎರಡು ಗುಡ್ಡಗಳು ಸಂಧಿಸುವಲ್ಲಿ ಜಲಧಾರೆಯೊಂದು ಧುಮುಕುವುದನ್ನು ಈ ಸ್ಥಳಕ್ಕೆ ನನ್ನ ಪ್ರಥಮ ಭೇಟಿಯಿಂದಲೇ ನೋಡುತ್ತಿದ್ದೆ. ನನಗೆ ಅದೊಂದು ಅನಾಮಿಕ ಜಲಧಾರೆಯಾಗಿತ್ತು. ಅದರ ಹೆಸರು ಗೊತ್ತಿರಲಿಲ್ಲ, ಎಲ್ಲೂ ಅದರ ಬಗ್ಗೆ ಓದಿರಲಿಲ್ಲ. ೨೦೦೭ ಅಗೋಸ್ಟ್ ತಿಂಗಳ ಉಡುಪಿ ಯೂತ್ ಹಾಸ್ಟೆಲ್ ಮೀಟಿಂಗು ನಡೆದಿತ್ತು. ಮೀಟಿಂಗಿಗೆ ನಾನು ಗೈರುಹಾಜರಾಗಿದ್ದೆ. ಹೊಸ ತಾಣಕ್ಕೆ ಹೋಗುವ ಬಗ್ಗೆ ಫೋನಿನಲ್ಲೇ ಚರ್ಚಿಸಲಾಯಿತು. ಈ ಜಲಧಾರೆಯ ನೆನಪಾಗಿ ಅಲ್ಲಿಗೆ ತೆರಳುವ ಪ್ರಸ್ತಾಪ ಮಾಡಿದೆ. ಹಾಗೇ ಸಮಯವಿದ್ದಲ್ಲಿ ಸಮೀಪವಿರುವ ಇನ್ನೊಂದು ಜಲಧಾರೆಗೂ ಹೋಗಿ ಬರೋಣವೆಂದಾಗ ಎಲ್ಲರೂ 'ಜೈ' ಎಂದುಬಿಟ್ಟರು.

ನಮ್ಮ ಅಸಾಮಾನ್ಯ ಲೀಡರ್ ಶ್ರೀ ಸೂರ್ಯನಾರಾಯಣ ಅಡಿಗರ ನೇತೃತ್ವದಲ್ಲಿ ೨೦೦೭ ಅಗೋಸ್ಟ್ ೧೮ರ ಶನಿವಾರ ನಾವು ಇಲ್ಲಿ ತಲುಪಿದಾಗ ಸಂಜೆ ೫.೪೫ ಆಗಿತ್ತು. ವಾಹನದಿಂದ ಇಳಿದ ಕೂಡಲೇ ತಮ್ಮ ಶಿಷ್ಯ ರಾಕೇಶ್ 'ಜಿರಾಫೆ' ಹೊಳ್ಳನೊಂದಿಗೆ ಅಡಿಗರು ೨ ಕಿ.ಮಿ ದೂರವಿರುವ ರಾತ್ರಿ ಉಳಿದುಕೊಳ್ಳುವ ಸ್ಥಳದತ್ತ ವೇಗವಾಗಿ ಹೆಜ್ಜೆ ಹಾಕಿದರು. ಉಳಿದವರು ತಲುಪುವಷ್ಟರಲ್ಲಿ ಚಹಾ ಮತ್ತು ತಿಂಡಿ ರೆಡಿಯಾಗಿತ್ತು! ದೇವಸ್ಥಾನದ ಬಳಿ ಇರುವ ಜಲಧಾರೆಯಲ್ಲಿ ಮೀಯಲು ಕೆಲವರು ತೆರಳಿದರೆ, ಅಡಿಗರು ರಾತ್ರಿಯ ಊಟದ ತಯಾರಿ ಮಾಡತೊಡಗಿದರು. ಈ ಅಡಿಗರು ಅಡಿಗೆ ಮಾಡುವುದರಲ್ಲಿ ಎತ್ತಿದ ಕೈ. ಒಬ್ಬರೇ ಪಾದರಸದಂತೆ ಅತ್ತಿತ್ತ ಓಡಾಡುತ್ತ ಅಡಿಗೆ ತಯಾರಿಯಲ್ಲಿ ತೊಡಗಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಸರಾಸರಿ ೨೫ ಜನರಿಗೆ ಎರಡು ಊಟ ಮತ್ತು ೨ ಉಪಹಾರಗಳಿಗಾಗುವಷ್ಟು ಅಡಿಗೆಯ ವಸ್ತುಗಳನ್ನು ಹಲವಾರು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ತಮ್ಮ ಮನೆಯಿಂದಲೇ ಶ್ರೀ ಅಡಿಗರು ಕಟ್ಟಿಕೊಂಡು ಬಂದಿರುತ್ತಾರೆ. ಎರಡು ದಿನಗಳ ಮಟ್ಟಿಗಾದರೂ ಕೆಡದೆ ಇರುವಂತಹ ಅದ್ಭುತ ರುಚಿಯ ಪಲ್ಯವನ್ನು ಮನೆಯಲ್ಲೇ ಮಾಡಿ, ಡಬ್ಬಿಯೊಂದರಲ್ಲಿ ತುಂಬಿಸಿ ತರುತ್ತಾರೆ. ಈ ಪಲ್ಯದ ರುಚಿ ಮಾತ್ರ ಅಹಾಆಆಆಆ! ಎಲ್ಲರೂ ಮತ್ತೆ ಮತ್ತೆ ಬಡಿಸಿ ತಿನ್ನುವುದನ್ನೊಮ್ಮೆ ನೋಡಬೇಕು. ಹೆಚ್ಚಾಗಿ ರಾತ್ರಿಗೆ ಭರ್ಜರಿ ಊಟದ ತಯಾರಿ, ಬೆಳಗ್ಗೆ ಗಂಜಿ ಮತ್ತು ಮಧ್ಯಾಹ್ನಕ್ಕೆ ಚಿತ್ರಾನ್ನ ಅಥವಾ ಪಲಾವ್ ಮಾಡುವುದು ಅಡಿಗಾ ಸ್ಟೈಲ್. ಇದೆಲ್ಲಾ ಈ ಹಿರಿಯರ ನಿಸ್ವಾರ್ಥ ಸೇವೆ. ಊಟ, ತಿಂಡಿ, ಚಹಾ ಇವುಗಳಿಗೆಲ್ಲಾ ಒಂದು ಪೈಸೆಯನ್ನೂ ಅಡಿಗರು ತಗೊಳ್ಳುವುದಿಲ್ಲ. ಎಳಗ್ಗಿನ ಜಾವ ೪ ಗಂಟೆಗೇ ಎದ್ದು ಅಡಿಗರು ಗಂಜಿ ಮತ್ತು ಕಟ್ಟಿಕೊಂಡು ಒಯ್ಯಬೇಕಾಗಿದ್ದ ಅಪರಾಹ್ನದ ಊಟ - ಚಿತ್ರಾನ್ನದ ತಯಾರಿಯನ್ನು ಶುರುಮಾಡಿಯಾಗಿತ್ತು. ಪಾತ್ರೆಯೊಂದರಲ್ಲಿ ಚಿತ್ರಾನ್ನವನ್ನು ಚೆನ್ನಾಗಿ 'ಪ್ಯಾಕ್' ಮಾಡಿ ಆ ಅನಾಮಿಕ ಜಲಧಾರೆಯತ್ತ ಹೊರಟೆವು.

ಆ ದಾರಿಯಾಗಿ ಸಿಗುವ ಕೊನೆಯ ಮನೆಯ ಬಳಿ ಪೋರನೊಬ್ಬ ಕಾಣಸಿಕ್ಕಿದ. ಅವನಲ್ಲಿ ಆ ಜಲಧಾರೆಯ ಬಗ್ಗೆ ಕೇಳಿದರೆ 'ನಾನು ಈ ಊರಿನವನಲ್ಲ. ನನ್ನ ಮಾಮನನ್ನು ಕೇಳಿ' ಎಂದು ತನ್ನ ಮಾಮನನ್ನು ಕರೆದ. ಸುಂದರ ಯುವಕನೊಬ್ಬ ನನ್ನೆಡೆಗೆ ಬರಲು ಆತನಲ್ಲಿ ಈ ಜಲಧಾರೆಯ ಬಗ್ಗೆ ಕೇಳಿದೆ. ತಾನು ಈಗ ಸಂತೆಗೆ ಹೊರಟಿರುವುದಾಗಿಯೂ, ಆದ್ದರಿಂದ ಮಾರ್ಗದರ್ಶಿಯಾಗಿ ಬರಲಾಗುವುದಿಲ್ಲವೆಂದೂ ತನ್ನ ಅಸಹಾಯಕತೆಯನ್ನು ಹೇಳಿಕೊಂಡ. ಆತನ ಹೆಸರು ಗಣಪತಿ. ಮತ್ತೆ ನಾನು ಪರಿಪರಿಯಾಗಿ ವಿನಂತಿಸಿ, 'ಕಾಡಿನಲ್ಲಿ ಸ್ವಲ್ಪ ದೂರದವರೆಗಾದರೂ ಬಂದು ದಾರಿ ತೋರಿಸಿದರೆ ನಂತರ ನಾವೇ ಹೇಗಾದರೂ ಮಾಡಿ ಜಲಧಾರೆಯನ್ನು ಹುಡುಕಿಕೊಳ್ಳುತ್ತೇವೆ. ದೂರದಿಂದ ನಿಮ್ಮೂರಿನ ಈ ಜಲಧಾರೆಯನ್ನು ನೋಡಲು ಬಂದಿದ್ದೇವೆ' ಎಂದಾಗ, ಗಣಪತಿ ಒಪ್ಪಿಕೊಂಡು, ಕತ್ತಿಯೊಂದನ್ನೆತ್ತಿಕೊಂಡು ಮುನ್ನಡೆದರು. ಅವರೊಂದಿಗೆ ಆ ಪೋರನೂ ಬಂದ. ಈತನ ಹೆಸರು ಸಂತೋಷ.

ಗಣಪತಿ ಇಲ್ಲಿಗೆ ಬಂದು ನೆಲೆಸಿ ೧೫ ವರ್ಷಗಳಾದವಂತೆ. ಆದರೆ ಈ ಜಲಧಾರೆಯನ್ನು ನೋಡಲು ಈವರೆಗೆ ಯಾರೂ ಬಂದಿಲ್ಲವಂತೆ. ನಾವೇ ಮೊದಲಿಗರಂತೆ. ಈ ಮಾತನ್ನು ನಾನು ನಂಬದಿದ್ದರೂ, ಒಂದು ಕ್ಷಣ ಇದ್ದರೂ ಇರಬಹುದೆಂದು ಯೋಚಿಸಿ ಸಂತೋಷವೆನಿಸಿತು. ಕಾಡಿನಲ್ಲಿ ಅರ್ಧ ಗಂಟೆ ನಮ್ಮೊಂದಿಗೆ ಗಣಪತಿ ದಾರಿ ತೋರಿಸುತ್ತಾ ಮುನ್ನಡೆದರು. ಅವರನ್ನು ಬರುವಂತೆ ಕೇಳಿಕೊಂಡಿದ್ದು ಒಳ್ಳೆಯದೇ ಆಯಿತು. ದಟ್ಟ ಕಾಡಿನಲ್ಲಿ ದಾರಿಯೇ ಇರಲಿಲ್ಲ. ಮರಗಳ ನಡುವೆ ನುಸುಳಿಕೊಂಡು, ಬಂಡೆಗಳನ್ನು ಏರಿ, ಕೊರಕಲನ್ನು ಇಳಿದು ಹತ್ತಿ ಒಂದೆಡೆ ಬಂದಾಗ ಗಣಪತಿ, 'ನಾನಿಲ್ಲಿಂದ ಹಿಂತಿರುಗುತ್ತೇನೆ' ಎಂದಾಗ ನನಗೆ ದಿಗಿಲಾಯಿತು. ಮುಂದೆ ಕಡಿದಾದ ಏರು. ಒಂದೊಂದಕ್ಕೆ ತಾಗಿಕೊಂಡೇ ಇದ್ದ ಮರಗಳು. ದೊಡ್ಡ ಗಾತ್ರದ ಬಳ್ಳಿಗಳು. ಹನಿಹನಿಯಾಗಿ ಎಲೆಗಳ ನಡುವಿನಿಂದ ತನ್ನದೇ ಆದ ಗತ್ತಿನಲ್ಲಿ ಧರೆಗಿಳಿಯುತ್ತಿದ್ದ ಜಿಟಿ ಜಿಟಿ ಮಳೆಯ ನೀರು. ತಮ್ಮಲ್ಲೇ ಅದೇನೋ ಪಿಸುಗುಟ್ಟುತ್ತಿರುವಂತೆ ಕಾಣುತ್ತಿದ್ದ ಮಳೆಯಲ್ಲಿ ಮಿಂದಿದ್ದ ವೃಕ್ಷಗಳು. ನೆಲವನ್ನು ಮರೆಮಾಚಿದ್ದ ಒದ್ದೆಯಾಗಿದ್ದ ಕಪ್ಪು ತರಗೆಲೆಗಳು. ಕತ್ತಲೆಯ ವಾತಾವರಣ ಮತ್ತು ಅದಕ್ಕೆ ತಕ್ಕುದಾಗಿ ಮಳೆಯ ಶಬ್ದ.


'ಇನ್ನೇನು ದೂರವಿಲ್ಲ. ಹೀಗೆ ಮೇಲಕ್ಕೇರಿ, ಎಡಕ್ಕೆ ಮತ್ತೆ ಮೇಲಕ್ಕೇರಿ, ಬಲಕ್ಕೆ ಸ್ವಲ್ಪ ದೂರ ನಡೆದು ಕೆಳಗಿಳಿದರಾಯಿತು', ಎಂದು ಗಣಪತಿ ಹಿಂತಿರುಗಿದರು. ಸಂತೋಷ ನಮ್ಮೊಂದಿಗೆ ಮುನ್ನಡೆದ. ಆತನೂ ನಮ್ಮಂತೆ ಮೊದಲ ಬಾರಿ ಇಲ್ಲಿಗೆ ಬರುತ್ತಿದ್ದ. ಗಣಪತಿ ಅಂದಂತೆ ಅಲ್ಲಲ್ಲಿ ಮೇಲೇರಿ, ಅಚೀಚೆ ನಡೆಯುತ್ತಾ ಮುನ್ನಡೆದೆವು. ಏರುದಾರಿಯಲ್ಲಿ, ನೆಲವೆಲ್ಲಾ ಒದ್ದೆಯಾಗಿದ್ದರಿಂದ ಜಾರುತ್ತಿತ್ತು. ಜಾರಿ ಬೀಳದವರಿಲ್ಲ ನಮ್ಮಲ್ಲಿ. ಗೊತ್ತಿಲ್ಲದ ಕಾಡಿನ ಹಾದಿಯಲ್ಲಿ ಹಾಗೆ ಮುನ್ನಡೆದೆವು. ಕೆಲವರಂತೂ ಹಲ್ಲಿಗಳಂತೆ ಏರುದಾರಿಯಲ್ಲಿ ಮೇಲಕ್ಕೆ ಬರುತ್ತಿದ್ದರು. ಆಗಾಗ ಜಾರಿ ಕೆಳಗೆ ಹೋಗುತ್ತಿದ್ದರೂ, ಪಟ್ಟು ಬಿಡದೆ ಮತ್ತೆ ಮೇಲೆ ಬರುತ್ತಿದ್ದರು. ಬಟ್ಟೆಯನ್ನೆಲ್ಲಾ ಕಪ್ಪು ಮಣ್ಣು ಮೆತ್ತಿಕೊಂಡಿತ್ತು.

ಏರುಹಾದಿ ಮುಗಿದ ಬಳಿಕ ಒಂದೆರಡು ನಿಮಿಷ ಸಮತಟ್ಟಾದ ಹಾದಿಯಲ್ಲಿ ನಡೆದ ಬಳಿಕ ಇಳಿಜಾರು. ಇಳಿಜಾರಿನ ಕೊನೆಯಲ್ಲಿ ಕಾಣುತ್ತಿತ್ತು ಜಲಧಾರೆ. 'ಅಬ್ಬಾ. ಅಂತೂ ಸಿಕ್ಕಿತು' ಎಂದುಕೊಂಡೆ. ಇಳಿಜಾರಿನ ಹಾದಿ ಕಷ್ಟಕರವಾಗಿತ್ತು. ಹೆಜ್ಜೆ ತಪ್ಪಿದರೆ ಉರುಳಿ ಬೀಳುವ ಅಪಾಯ. ಮರಗಳೆಡೆಯಿಂದ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು ಜಲಧಾರೆ. ಕೆಳಗೆ ತಲುಪಿದಾಗ ಉಂಟಾದ ಸಂತೋಷ ವರ್ಣಿಸಲಸಾಧ್ಯ. ಬರೀ ೫೦ ಅಡಿ ಎತ್ತರವಿರುವ ಜಲಧಾರೆಯಾದರೂ ಚಾರಣದ ಹಾದಿ ಅತ್ಯುತ್ತಮವಾಗಿತ್ತು. ಹಾಗೆ ಮುಂದೆ ಈ ಜಲಧಾರೆ ಇನ್ನೆರಡು ಹಂತಗಳನ್ನು ಹೊಂದಿದೆ. ದಟ್ಟವಾದ ಕಾಡಿನ ನಡುವೆ ಸಣ್ಣ ತೆರೆದ ಜಾಗವೊಂದರಲ್ಲಿ ತನ್ನಷ್ಟಕ್ಕೆ, ಯಾರ ಗೋಜಿಗೂ ಹೋಗದೆ, ಯಾರ ಕಣ್ಣಿಗೂ ಬೀಳದೆ, ಲಜ್ಜಾವತಿಯಾಗಿ ಧುಮುಕುತ್ತಿರುವ ಈ ಜಲಧಾರೆಯನ್ನು ಕಣ್ತುಂಬಾ ನೋಡಿ ಆನಂದಿಸಿದೆ.


೯೦ ನಿಮಿಷದಲ್ಲಿ ಮರಳಿ ಗಣಪತಿಯವರ ಮನೆ ಬಳಿ ಬಂದಾಗ, ಅವರಿನ್ನೂ ಸಂತೆಗೆ ಹೊರಟಿರಲಿಲ್ಲ. ಈ ಜಲಧಾರೆಗೆ 'ಕಲ್ಲುಶಂಖ' ಜಲಧಾರೆ ಎನ್ನುತ್ತಾರೆಂದೂ, ಜಲಧಾರೆಗಿಂತ ಸ್ವಲ್ಪ ಮೇಲೆ ಸರಳಾ ನದಿಯ ಉಗಮವಾಗುತ್ತದೆಂದೂ ತಿಳಿಸಿದರು. ಕಲ್ಲುಶಂಖ ಎಂಬ ಹೆಸರು ಯಾಕೆ ಬಂತು ಎಂಬುದು ಅವರಿಗೆ ಗೊತ್ತಿರಲಿಲ್ಲ.

ಗಣಪತಿಯವರು ನಮ್ಮನ್ನು ಕಲ್ಲುಶಂಖ ಜಲಧಾರೆಯೆಡೆಗೆ ಕರೆದೊಯ್ಯುತ್ತಿರುವಾಗ ಜೊತೆಗೆ ಬಂದಿದ್ದ ಸಂತೋಷನೊಂದಿಗೆ ಮಾತಿಗಿಳಿದಾಗ ಆತ ೬ನೇ ತರಗತಿ ಓದುತ್ತಿದ್ದಾನೆಂದೂ, ಊರು ಬಿಳಚಿಗೋಡು ಎಂದೂ, ಇಲ್ಲಿ ತನ್ನ ಮಾಮನ ಮನೆಗೆ ಮುನ್ನಾ ದಿನ ಬಂದಿದ್ದು, ಮರುದಿನ ತನ್ನೂರಿಗೆ ಮರಳಲಿದ್ದಾನೆಂದೂ ತಿಳಿಯಿತು. ಸಂತೋಷನೊಂದಿಗೆ ಹಾಗೆ ಮಾತು ಮುಂದುವರಿಸಿ, 'ಈ ಬಿಳಚಿಗೋಡು ಎಲ್ಲಿ ಬರುತ್ತೆ?' ಎಂದು ಕೇಳಲು, ಆತ 'ಕಟ್ಟಿನಕಾರು ಬಳಿ' ಎಂದಾಗ ನನ್ನ ಕಿವಿಗಳು ನೆಟ್ಟಗಾದವು. ಯಾಕೆಂದರೆ ನಾವು ನೋಡಬೇಕೆಂದಿದ್ದ ಮತ್ತೊಂದು ಜಲಧಾರೆ ಇರುವುದು ಈ ಕಟ್ಟಿನಕಾರು ಬಳಿಯೇ!

'ಕಟ್ಟಿನಕಾರಿಗೆ ಹೋಗಿದ್ದೀಯಾ' ಎಂದು ಕೇಳಿದಾಗ, 'ದಿನಾಲೂ ಹೋಗ್ತಿರ್ತೀನಿ. ಅಲ್ಲೇ ನಾನು ಶಾಲೆಗೆ ಹೋಗೋದು' ಎಂದುಬಿಟ್ಟ. ನನ್ನ ಮುಂದಿನ ಪ್ರಶ್ನೆಗೆ ಈತ 'ಹೌದು' ಎಂದು ಉತ್ತರ ಕೊಟ್ಟುಬಿಟ್ಟರೆ ಈತನನ್ನೇ ಮಾರ್ಗದರ್ಶಿಯನ್ನಾಗಿ ಮಾಡಿ ಗೂದನಗುಂಡಿಗೆ ಹೋಗುವುದು ಎಂದು ಮನದಲ್ಲೇ ನಿರ್ಧರಿಸಿ ಪ್ರಶ್ನೆ ಕೇಳಿದೆ.
'ಅಲ್ಲಿರುವ ಜಲಧಾರೆ ಗೊತ್ತಾ?'.
'ಹೋಓಓಓಓಓಓ.... ಗೊತ್ತು. ಹೋಗಿದ್ದೀನಿ ಕೂಡಾ'.
'ದಾರಿ ನೆನಪಿದೆಯಾ?'
'ಹೌದು, ರಸ್ತೆ ಇದೆ . ನಂತರ ನದಿಗುಂಟ ಹೋದ್ರಾತು'.
'ಹಾಗಿದ್ರೆ ನಂಜೊತೆ ಬಂದ್ಬಿಡು. ಜಲಧಾರೆ ನೋಡಿ ನಂತ್ರ ಬಿಳಚಿಗೋಡ್ನಲ್ಲಿ ನಿನ್ನ ಇಳಿಸ್ತೀವಿ' ಎಂದಾಗ ಹುಡ್ಗ ಸುಮ್ನಾದ. ನಂತರ ನಾನೂ ಸುಮ್ಮನಾದೆ. ನಮಗೆ ಅದಾಗಲೇ ನಂತರದ ಜಲಧಾರೆಗೆ 'ಗೈಡ್' ಸಿಕ್ಕ ವಿಷಯವನ್ನು ಅಡಿಗರಿಗೆ ತಿಳಿಸಿ, 'ಅವನನ್ನು ಅವನ ಮನೆಯವರ ಒಪ್ಪಿಗೆ ಪಡೆದು ಹೊರಡಿಸುವ ಜವಾಬ್ದಾರಿ ನಿಮ್ಮದು' ಎಂದು ಅಡಿಗರಲ್ಲಿ ಹೇಳಿದೆ.

ಅಡಿಗರು ತಮ್ಮ 'ಮಾಸ್ತರಿಕೆ'ಯ ದಿನಗಳ ಅನುಭವಗಳನ್ನು ಬಳಸಿ ಸಂತೋಷನನ್ನೂ ಅವನ ಮಾಮನನ್ನೂ ಒಪ್ಪಿಸಿ, ಅವನನ್ನು ಕರೆತಂದರು. ಕಟ್ಟಿನಕಾರು ತಲುಪಿದಾಗ ೧೨.೩೦ ಆಗಿತ್ತು. ಅಲ್ಲಿಂದ ಪಡುಬೀಡು ಎಂಬಲ್ಲಿಗೆ ತೆರಳುವ ಹಾದಿಯಲ್ಲಿ ೪ ಕಿಮಿ ಕ್ರಮಿಸಿದ ಬಳಿಕ ವಾಹನ ನಿಲ್ಲಿಸುವಂತೆ ನಮ್ಮ ಯುವ ಗೈಡ್ ಸೂಚಿಸಿದ. ಎಲ್ಲಾ ಕಡೆ ಹಸಿರು ತುಂಬಿ ತುಳುಕುತ್ತಿದ್ದ ದಾರಿಯಲ್ಲಿ ಸಂತೋಷ ನಮ್ಮನ್ನು ಕರೆದೊಯ್ಯತೊಡಗಿದ್ದ. ಆಹ್ಲಾದಕರವಾದ ನಡಿಗೆಯಾಗಿತ್ತು. ಅಲ್ಲಲ್ಲಿ ಪುಟ್ಟ ಪುಟ್ಟ ನೀರಿನ ಝರಿಗಳು ದಾರಿಯ ಬದಿಯಲ್ಲಿ ಬಳುಕುತ್ತಾ ಹರಿಯತೊಡಗಿದ್ದವು. ಕಲ್ಲುಶಂಖದ ದಣಿವಿನ ದಾರಿಯ ನಂತರ ಈ ಹಸಿರಿನ ದಾರಿಯನ್ನು ತುಂಬಾ ಮೆಚ್ಚಿಕೊಂಡೆ. ಸುಮಾರು ಅರ್ಧ ಗಂಟೆಯ ನಡಿಗೆಯ ಬಳಿಕ ಒಂದೆಡೆ ಕುರುಚಲು ಸಸ್ಯಗಳು 'ತಾವು ರಸ್ತೆ ತಡೆ ನಡೆಸಿದ್ದೇವೆ' ಎಂಬಂತೆ ರಸ್ತೆಯನ್ನು ಸುಮಾರು ೫೦ ಮೀಟರುಗಳಷ್ಟು ದೂರದವರೆಗೆ ಸಂಪೂರ್ಣವಾಗಿ ಆವರಿಸಿಕೊಂಡಿದ್ದವು. ಈ ಅಂತರದಲ್ಲಿದ್ದಷ್ಟು ಇಂಬಳಗಳ ಸಾಂದ್ರತೆಯನ್ನು ಬೇರೆಲ್ಲೂ ನಾನು ಕಂಡಿಲ್ಲ. ೫೦ ಮೀಟರ್ ನಡೆದು ಆ ಸಸ್ಯರಾಶಿಯಿಂದ ಹೊರಬರುವಷ್ಟರಲ್ಲಿ ಎಲ್ಲರ ಕಾಲ ಮೇಲೂ ಏಳೆಂಟು ಇಂಬಳಗಳು!


ನಂತರ ಒಂಥರಾ ಕತ್ತಲ ದಾರಿ. ರಸ್ತೆ ಹಾಗೆ ಅಂಕುಡೊಂಕಾಗಿ ಮುಂದುವರಿದಿತ್ತು. ಕಾಡಿನ 'ಕಪ್ಪು'ತನ ಅದುವರೆಗಿದ್ದ ಹಸಿರನ್ನು ಮರೆಮಾಚಿತ್ತು. ಎಲ್ಲೆಡೆ ವಿಜೃಂಭಿಸುತ್ತಿತ್ತು ಕಪ್ಪು ಬಣ್ಣ. ರಸ್ತೆಯ ಎರಡೂ ಬದಿಗಳಲ್ಲಿದ್ದ ಮರಗಳು, ರಸ್ತೆಯ ಮೇಲೆ ಉದುರಿದ್ದ ತರಗೆಲೆಗಳು, ಅಲ್ಲಲ್ಲಿ ಉರುಳಿಬಿದ್ದಿದ್ದ ಮರದ ಗೆಲ್ಲುಗಳು, ಆಗಸದಲ್ಲಿ ಮೂಡಿದ್ದ ಕರಿಮೋಡಗಳು, ಹೀಗೆ ಎಲ್ಲವೂ ಕಪ್ಪು. ಅಳಿದುಳಿದಿದ್ದ ಅಲ್ಪ ಸ್ವಲ್ಪ ಬೆಳಕನ್ನು ಕೂಡಾ ತಡೆಹಿಡಿದ ದಟ್ಟ ಕಾಡು ಕತ್ತಲ ಅನುಭವವನ್ನು ಮತ್ತಷ್ಟು ಹೆಚ್ಚಿಸಿತ್ತು. ನಿಧಾನವಾಗಿ ಹನಿಹನಿಯಾಗಿ ಬೀಳುತ್ತಿದ್ದ ಮಳೆ ಸೃಷ್ಟಿಸುತ್ತಿದ್ದ ಸದ್ದು ನನ್ನಿಂದ ವಿವರಿಸಲಸಾಧ್ಯ. ಕಾಡಿನ ಸದ್ದಿಗೆ ಈ ಮಳೆಯ ಸದ್ದು ಮತ್ತಷ್ಟು ರಂಗನ್ನು ನೀಡಿತ್ತು. ಈ ಹಾದಿಯನ್ನು ಸಂಪೂರ್ಣವಾಗಿ ಆನಂದಿಸುತ್ತಾ ೧೦ ನಿಮಿಷ ನಡೆದಂತೆ ಎದುರಾಯಿತು ಜಲಧಾರೆಯನ್ನು ನಿರ್ಮಿಸುವ ಹಳ್ಳ.

ಹಳ್ಳ ಉಕ್ಕಿ ಹರಿಯುತ್ತಿತ್ತು. ಆ ಹರಿವಿನ ವೇಗ ಕಂಡು ನಮ್ಮ ಯುವ ಗೈಡ್ ಸಂತೋಷ ಸ್ವಲ್ಪ ಗಲಿಬಿಲಿಗೊಂಡ. ಆದರೂ ತೋರ್ಗೊಡದೆ ಹಳ್ಳಗುಂಟ ಒಂದೈದು ನಿಮಿಷ ನಮ್ಮನ್ನೆಲ್ಲ ಕರೆದೊಯ್ದ. ಆತ ಇಲ್ಲಿಗೆ ಬಂದದ್ದು ಹಳ್ಳದಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆಯಿದ್ದಾಗ. ಆದ್ದರಿಂದ ಈಗ ಹಳ್ಳವನ್ನು ದಾಟುವುದೆಲ್ಲಿ ಎಂಬುದು ತಿಳಿಯದೆ ಚಡಪಡಿಸುತ್ತಿದ್ದ. ಕಡೆಗೆ ಒಂದೆಡೆ ೩ ಅಡಿಯಷ್ಟು ಆಳವಿದ್ದಲ್ಲಿ ಸುಮಾರು ೨೦ಅಡಿಯಷ್ಟು ದೂರಕ್ಕೆ ನಿಧಾನವಾಗಿ ದಾಟಿದೆವು. ನಂತರ ಮತ್ತೊಂದು ೩೦ಅಡಿಯಷ್ಟು ದೂರ ಜಾರುವ ಕಲ್ಲುಬಂಡೆಗಳ ರಾಶಿಯನ್ನು ದಾಟುವ ಸನ್ನಿವೇಶ. ಮರವೊಂದು ಅಲ್ಲೇ ಉರುಳಿಬಿದ್ದಿದ್ದರಿಂದ ಮತ್ತಷ್ಟು ಕಷ್ಟವಾಯಿತು.


ಈಗ ಮತ್ತೆ ಕಾಡಿನ ಅಂಚಿನಲ್ಲಿದ್ದೆವು. ಹಳ್ಳ ತನ್ನ ಹರಿವನ್ನು ಅಂಕುಡೊಂಕಾಗಿ ಮುಂದುವರೆಸಿತ್ತು. ತನ್ನ ಅಧ್ಯಾಪಕರೊಂದಿಗೆ ಮತ್ತು ನಾಲ್ಕೈದು ಸಹಪಾಠಿಗಳೊಂದಿಗೆ ಡಿಸೆಂಬರ್ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಸಂತೋಷ, ಈಗ ದಾರಿ ತೋಚದವನಂತಾಗಿದ್ದ. ಎಲ್ಲರೂ ಆತನನ್ನು 'ಇನ್ನೂ ಎಷ್ಟು ದೂರ' ಎಂದು ಕೇಳುತ್ತಿದ್ದರು. ಅತನಂತೂ ಸಣ್ಣ ಹುಡುಗ. ಇನ್ನು ಎಷ್ಟು ದೂರವಿದೆ, ಎಂದು ಕೇಳಿದರೆ ಏನು ಉತ್ತರ ನೀಡಬಲ್ಲ? ಆತನ ನಿರುತ್ತರದಿಂದ ಸಹನೆ ಕಳಕೊಂಡು 'ಈ ಚಾರಣ ನಮಗೆ ಬೇಡವಾಗಿತ್ತು' ಎಂದು ನಮ್ಮಲ್ಲಿಯ ಹಿರಿತಲೆಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೂ ಆತ ಸರಿಯಾದ ದಾರಿಯಲ್ಲೇ ಮುನ್ನಡೆಯುತ್ತಿದ್ದಾನೆ ಎಂದು ನನಗನಿಸತೊಡಗಿದ್ದರಿಂದ ಕಣ್ಣ ಸನ್ನೆಯಲ್ಲೇ ಆತನಿಗೆ ಮುಂದುವರಿಯಲು ಸೂಚಿಸಿದೆ.

ಸಣ್ಣ ಏರುಹಾದಿಯಲ್ಲಿ ಸಂತೋಷ ಮುನ್ನಡೆದ. ಮಳೆಯಂತೂ ತನ್ನ ಹನಿಹನಿ ಪ್ರೋಕ್ಷಣೆ ಮುಂದುವರಿಸಿತ್ತು. ಇಲ್ಲಿ ದಾರೀನೇ ಇರಲಿಲ್ಲ. ಕೇವಲ ದಿಕ್ಕನ್ನು ಗಮನದಲ್ಲಿರಿಸಿ ಸಂತೋಷ ಮುನ್ನಡೆಯುತ್ತಿದ್ದ. ತುಂಬಾ ದಟ್ಟವಾದ ಕಾಡು. ಏರುಹಾದಿಯ ಮೇಲೆ ತಲುಪಿದಾಗ ಸಂತೋಷ ನನ್ನಲ್ಲಿ ಮೆಲ್ಲನೆ ಪಿಸುಗುಟ್ಟಿದ 'ಈಗ ಮತ್ತೊಮ್ಮೆ ನದಿ ದಾಟಬೇಕಾಗಬಹುದು' ಎಂದು. ಅದಾಗಲೇ ಬಹಳ ಕಷ್ಟಪಟ್ಟು 'ಉಸ್ಸಪ್ಪಾ' ಎಂದು ಎಲ್ಲರೂ ನದಿ ದಾಟಿದ್ದರು. ಉಳಿದವರಿಗೆ ಈ ಮಾತನ್ನು ತಿಳಿಸದೆ, ಆತನನ್ನು ಮತ್ತು ರಾಕೇಶ ಹೊಳ್ಳನನ್ನು ದಾರಿ ಹುಡುಕಿಕೊಂಡು ಬನ್ನಿ ಎಂದು ಮುಂದಕ್ಕೆ ಕಳಿಸಿದೆ. ಹತ್ತು ನಿಮಿಷದಲ್ಲಿ ಇಬ್ಬರೂ ಹಿಂತಿರುಗಿದರು. ಆ ದಾರಿಯಿಲ್ಲದ ದಾರಿಯಲ್ಲಿ ೧೫ ನಿಮಿಷ ನಡೆದ ಬಳಿಕ ಮತ್ತೆ ಹಳ್ಳ ಎದುರಾಯಿತು. ಹಳ್ಳ ದಾಟಲು ಪ್ರಶಸ್ತವಾದ ಸ್ಥಳವನ್ನು ಸಂತೋಷ ನೋಡಿಕೊಂಡು ಬಂದಿದ್ದರಿಂದ ಇಲ್ಲಿ ಸುಲಭವಾಯಿತು. ಆದರೂ ನೀರಿನ ಹರಿವಿನಲ್ಲಿ ವೇಗವಿದ್ದಿದ್ದರಿಂದ ಎಚ್ಚರಿಕೆಯಿಂದಲೇ ದಾಟಬೇಕಾಗಿತ್ತು. ಈ ಎರಡನೇ ಬಾರಿಯ ಹಳ್ಳ ದಾಟುವಿಕೆಯನ್ನು ಎಲ್ಲರೂ ಎಂಜಾಯ್ ಮಾಡಿದರು. ಕಡಿಮೆ ಆಳವಿದ್ದ ಸ್ಥಳವಾಗಿದ್ದ ಕಾರಣ ಹಳ್ಳ ಇಲ್ಲಿ ೪ ಕವಲುಗಳಲ್ಲಿ ವಿಶಾಲವಾಗಿ ಹರಿಯುತ್ತಿತ್ತು ಮತ್ತು ಸುಮಾರು ೩೦೦ ಅಡಿಗಳಷ್ಟು ದೂರದವರೆಗೆ ಹಳ್ಳವನ್ನು ದಾಟಬೇಕಾಗಿತ್ತು.


ಈಗಂತೂ ಸಂತೋಷ ನಗುಮುಖದಿಂದ ಮುನ್ನಡೆಯುತ್ತಿದ್ದರಿಂದ ನಾವು ಜಲಧಾರೆಯ ಸಮೀಪಕ್ಕೆ ಬಂದಿದ್ದೇವೆ ಎಂದು ತಿಳಿದುಕೊಂಡೆ. ಇದನ್ನು ತಿಳಿಯದ ಹಲವರು ಇನ್ನೂ ನಕಾರಾತ್ಮಕವಾಗಿ ಮಾತನಾಡುತ್ತ ಆಯೋಜಕರಾದ ಶ್ರೀ ಅಡಿಗರ ತಲೆ ತಿನ್ನುತ್ತಿದ್ದರು. ಹಳ್ಳವನ್ನು ಎರಡನೇ ಬಾರಿ ದಾಟುವಾಗ, 'ಈಗ ದಾಟಿದ ನಂತರ ಅಲ್ಲಿ ಮೇಲೆ ಹತ್ತಿ ಕೆಳಗಿಳಿದರೆ ಗುಂಡಿ' ಎಂದು ಸಂತೋಷ ನನ್ನಲ್ಲಿ ಹೇಳಿದ್ದರಿಂದ ನಾನು, "ಇನ್ನೊಂದು ೧೫ ನಿಮಿಷ ಹೋಗೋಣ ಸರ್, ಫಾಲ್ಸ್ ಸಿಗದಿದ್ದರೆ ಅಲ್ಲೇ ಸಮೀಪದಲ್ಲೆಲ್ಲಾದರೂ ಕುಳಿತು ವಿಶ್ರಮಿಸಿ ಹಿಂತಿರುಗುವ" ಎಂದು ನನ್ನೆಡೆ 'ಏನು ಮಾಡುವುದೆಂದು ತೋಚದ' ನೋಟ ಬೀರುತ್ತಿದ್ದ ಅಡಿಗರಲ್ಲಿ ಎಲ್ಲರಿಗೆ ಕೇಳಿಸುವಂತೆ ಹೇಳಿದೆ.

ಜಾರುವ ಏರುಹಾದಿಯಲ್ಲಿ ಮುನ್ನಡೆದೆವು. ಹತ್ತು ನಿಮಿಷದಲ್ಲಿ ಗೂದನಗುಂಡಿಯ ಮೇಲ್ಭಾಗಕ್ಕೆ ಬಂದು ತಲುಪಿದೆವು. ಇಲ್ಲಿ ಮತ್ತೊಮ್ಮೆ ಹಳ್ಳವನ್ನು ದಾಟಬೇಕಾಗಿತ್ತು. ವಿಶಾಲವಾದ ಹರಿವಾಗಿದ್ದರಿಂದ, ಆಳ ಕಡಿಮೆಯಿತ್ತು. ಇಲ್ಲಿ ಹಳ್ಳದ ಹರಿವಿನ ನೋಟ ಬಹಳ ಸುಂದರವಾಗಿದೆ. ಸ್ವಲ್ಪ ಮುಂದೆಯೇ ನೀರು ಕೆಳಗೆ ಧುಮುಕುವ ಶಬ್ದ ಕೇಳುತ್ತಿತ್ತು. ಅಲ್ಲಿ ತಲುಪಿ, ಕೆಳಗೆ ಇಣುಕಿ ನೋಡಿದಾಗ ಅಬ್ಬಾ ಚಾರಣ ಸಾರ್ಥಕ ಎಂಬ ಭಾವ ಮನದಲ್ಲಿ. ನೀರಿನ ಪ್ರಮಾಣ ವಿಪರೀತವಾಗಿದ್ದಿದ್ದರಿಂದ ಕೆಳಗೆ ಇಳಿಯುವ ಸಾಹಸ ಮಾಡಲಿಲ್ಲ. ಜಲಪಾತದ ಮೇಲ್ಭಾಗದಿಂದ ಸಿಗುವ ನೋಟಕ್ಕೇ ತೃಪ್ತಿಪಟ್ಟೆವು. ಮಂಜು ಪೂರ್ತಿಯಾಗಿ ಆವರಿಸಿದ್ದರಿಂದ ಸದ್ಯಕ್ಕೆ ನಮಗೆ ದೂರದ ನೋಟವೇನೂ ಕಾಣಿಸುತ್ತಿರಲಿಲ್ಲ. ಸ್ವಲ್ಪ ಮೋಡ ಕವಿದಿದ್ದರಿಂದ ಮಳೆ ಬಿರುಸಾಗಿ ಬೀಳಬಹುದೆಂದು, ಅಡಿಗರು ವೇಗವಾಗಿ ಊಟದ ತಯಾರಿ ನಡೆಸಿದರು. ಭೀಮೇಶ್ವರದಿಂದ ರಾಕೇಶ್ ಹೊಳ್ಳ ಹೊತ್ತುಕೊಂಡು ತಂದಿದ್ದ ಚಿತ್ರಾನ್ನದ ಪಾತ್ರೆಯಿಂದ ಎಲ್ಲರಿಗೂ ರುಚಿರುಚಿಯಾದ ಊಟವನ್ನು ಅಡಿಗರು ಹಂಚಿದರು.


ಈಗ ಮಂಜು ಸರಿದು ಶುಭ್ರ ನೋಟ ಲಭ್ಯವಿತ್ತು. ಆಶ್ಚರ್ಯವೊಂದು ನನಗೆ ಕಾದಿತ್ತು. ಜಲಧಾರೆಯ ಮೇಲೆ ನಿಂತಾಗ ದೂರದಲ್ಲಿ ಕಡಲ ತೀರ ಕಾಣಿಸುತ್ತಿತ್ತು. ಈ ದೃಶ್ಯವನ್ನು ಅದೆಲ್ಲೋ ನೋಡಿದ ನೆನಪು ಬರತೊಡಗಿತು. ದೂರದಲ್ಲಿ ಕಾಣುವ ಊರು 'ಶಿರೂರು' ಎಂದು ಸಂತೋಷ ಹೇಳಿದಾಗ ನನ್ನ ಶಂಕೆ ಮತ್ತಷ್ಟು ಬಲವಾಯಿತು. ಸಮುದ್ರ ತೀರ ಕಾಣಿಸುವ ಜಲಧಾರೆ ಕರ್ನಾಟಕದಲ್ಲಿ ಒಂದೇ ಇರುವುದು ಮತ್ತು ಅದಿರುವುದು ಶಿರೂರಿನ ಸಮೀಪದಲ್ಲೇ ಮತ್ತು ಅದಾಗಲೇ ನಾನದನ್ನು ಭೇಟಿ ನೀಡಿಯಾಗಿತ್ತು ಕೂಡಾ! ಹೊಸ ಜಲಧಾರೆಯಿರಬಹುದು ಎಂದು ಇಲ್ಲಿಗೆ ಬಂದು, ನಾಲ್ಕು ವರ್ಷಗಳ ಹಿಂದೆ ತಳಭಾಗದಿಂದ ನೋಡಿದ್ದ ಜಲಧಾರೆಯ ಮೇಲ್ಭಾಗಕ್ಕೆ ಈಗ ಬಂದು ನಿಂತಿದ್ದೇನೋ ಎಂಬ ವಿಚಾರ ತಲೆಯೊಳಗೆ ಕೊರೆಯಲು ಆರಂಭವಾಯಿತು.

ನೀರು ಇಲ್ಲಿ ಎಂದು ಕರೆಯಲ್ಪಡುವಲ್ಲಿ ಧುಮುಕಿ, ಸುಮಾರು ೧೫೦ ಅಡಿ ನೇರವಾಗಿ ಮುಂದಕ್ಕೆ ಹರಿದು ಮತ್ತೆ ಧುಮುಕುವಂತೆ ತೋರುತ್ತಿತ್ತು. ಸಂತೋಷನಲ್ಲಿ 'ಅಲ್ಲಿ ಮುಂದೆ ನೀರು ಮತ್ತೆ ಕೆಳಗೆ ಬೀಳುತ್ತಾ' ಎಂದು ಕೇಳಿದಾಗ ಆತ 'ಹೌದು, ಬಹಳ ಆಳಕ್ಕೆ ಬೀಳುತ್ತೆ ಮತ್ತೆ ಮುಂದೆ ಇನ್ನೂ ಕೆಳಕೆಳಗೆ ಬೀಳುತ್ತಾ ಹರಿಯುತ್ತೆ' ಎಂದ.


ಆದರೂ ಕೆಳಗಿಳಿದು ಮುಂದೆ ನೀರು ಆಳಕ್ಕೆ ಧುಮುಕುವಲ್ಲಿ ಕೆಳಗಿನ ನೋಟವನ್ನೊಮ್ಮೆ ನೋಡಿದರೆ ನಿಸ್ಸಂದೇಹವಾಗಿ ಇದೇ ನಾನು ಈ ಮೊದಲೇ ಭೇಟಿ ನೀಡಿರುವ ಜಲಧಾರೆ ಎನ್ನಬಹುದು. ಕೆಳಗಿಳಿಯುವ ಹುಚ್ಚು ಸಾಹಸ ಮಾಡಲಿಲ್ಲ.

ಈ ಚಾರಣ/ಪ್ರಯಾಣದ ಕಾರ್ಯಕ್ರಮ ಬಹಳ ಸೊಗಸಾಗಿತ್ತು. ಒಂದೇ ದಿನದಲ್ಲಿ ಎರಡು ಚಂದದ ಜಲಧಾರೆಗಳಿಗೆ ಪೈಲಟ್ ಟ್ರೆಕ್ಕಿಂಗ್ ಇಲ್ಲದೆ ಚಾರಣ ಮಾಡಿದ್ದು ವಿಶೇಷ. ಕಲ್ಲುಶಂಖ ಜಲಧಾರೆಗೆ ತೆರಳುವ ಇಳಿಜಾರಿನ ಹಾದಿಯಲ್ಲಿ ಮತ್ತು ಎರಡನೇ ಜಲಧಾರೆಯ ಹಾದಿಯಲ್ಲಿ ಮೊದಲ ಬಾರಿ ಹಳ್ಳ ದಾಟುವಾಗ ರಿಸ್ಕ್ ಇತ್ತು. ಆದರೆ ಏನೂ ಆಗದೇ ಸುರಕ್ಷಿತವಾಗಿ ಎಲ್ಲರೂ ಹಿಂತಿರುಗಿದ್ದು ನನಗೆ ಬಹಳ ಸಮಾಧಾನ ತಂದಿತು. ಸೊಗಸಾದ ನೆನಪುಗಳು.

11 ಕಾಮೆಂಟ್‌ಗಳು:

  1. ಹೊಸ ಜಾಗಗಳನ್ನು ಅರಸುವ ನಿಮ್ಮ ಸಾಹಸ ಮೆಚ್ಚಬೇಕಾದದ್ದು. ಭೀಮೇಶ್ವರಕ್ಕೆ ಹೋದಾಗ ಆ ಜಲಪಾತವನ್ನು ದೂರದಿಂದ ನೋಡಿದ್ದೆ. ಇನ್ನೊಂದು ಸಲ ಹೋಗೋಣ ಎಂದುಕೊಂಡಿದ್ದೆ. ಅದು ಇನ್ನು ಆಗಿಲ್ಲ.

    ಇನ್ನೊಂದು ವಿಷಯ, ಕಟ್ಟಿನಕಾರಿಗೆ ಹೇಗೆ ಹೋಗುವುದು?

    ಪ್ರತ್ಯುತ್ತರಅಳಿಸಿ
  2. ಅದ್ಭುತ....
    ಸರಿಯಾದ ಮಾರ್ಗದರ್ಶಿ ಇಲ್ಲದೆ ಸಂತೋಷನನ್ನೇ ನೆಚ್ಚಿಕೊಂಡು ಅಪರಿಚಿತ ಜಾಗವನ್ನು ನೋಡಿ ಬಂದಿದ್ದೀರಿ....ಶಾಭಾಷ್
    ಈ ಜಾಗದ ವಿವರಣೆ, ‘ಅಡಿಗರ ಅಡುಗೆ’-ಮೃಷ್ಟಾನ್ನಭೋಜನ ಸವಿದ ಹಾಗಾಯ್ತು.

    ಪ್ರತ್ಯುತ್ತರಅಳಿಸಿ
  3. wow! Godanagundi last yearnalli navu hodaga ashtondu neeru irlilla... adroo it was such a pleasant and untouched jaga..bahala manamechittu...

    Navu hodaga kadina naduve daari madikondu jalapatada melinda kelagina varegoo hogi, jalapathadalli mindu bandiddevu.

    Adhbuta jaaga... samshayave illa :-)

    kallushankha bahala chennagide... hogabeku anta annistide :)

    ಪ್ರತ್ಯುತ್ತರಅಳಿಸಿ
  4. ಭಾರೀ ಸಾಹಸ ಮಾಡ್ತೀರ್ರೀ ನೀವು! ಕರ್ನಾಟಕ ಜಲಪಾತಗಳ ಎನ್ಸೈಕ್ಲೋಪೀಡಿಯಾ ನೀವು!

    ನಾನು ಉಡುಪಿಗೆ ಬಂದ ಹೊಸತರಲ್ಲಿ ಅಡಿಗರನ್ನು ಭೇಟಿ ಮಾಡಿದ್ದೆ. ಆಗ ಅವರು ಈ ಕಥೆಯ ಸಾರಂಶ ಹೇಳಿದ್ದರು. ನೀವು ಬರೆದಿರುವುದು ಓದಿದಾಗ, ಚಿತ್ರಗಳು ನೋಡಿದಾಗ ನಾನೇ ಚಾರಣ ಮಾಡಿದಷ್ಟು ಸಂತೋಷವೂ, ರೋಮಾಂಚನವೂ ಆಯಿತು.

    ಅದ್ಯಾಕೋ ಏನೋ ಉಡುಪಿ ಯೂತ್ ಹಾಸ್ಟೆಲ್ ಗುಂಪಿನೊಡನೆ ಚಾರಣಕ್ಕೆ ಹೋಗುವ ನನ್ನ ಆಸೆ ಇನ್ನೂ ಕೈಗೂಡಿಲ್ಲ. ಮುಂದಿನ ಚಾರಣಕ್ಕೆ ಬರಲು ಆಗುತ್ತದೇ ಕಾದು ನೋಡಬೇಕು.

    ಪ್ರತ್ಯುತ್ತರಅಳಿಸಿ
  5. ರಾಜೇಶ್,

    ಅದ್ಭುತ ಚಾರಣ. ಅದಕ್ಕಿಂತ ವಿಶಿಷ್ಟವಾದ ವಿವರಣೆ. ನಿಮ್ಮ ಏರುಹೆಜ್ಜೆ ಜಾರುಹೆಜ್ಜೆ ಎರಡರ ಜೊತೆಗೂ, ಉಸಿರುಬಿಗಿಹಿಡಿದು ಓದಿಕೊಂಡೆ ಏರಿಳಿದೆ ನಾನೂ..

    ಯಾವಾಗ ಇಲ್ಲೆಲ್ಲ ಹೋಗಲಾಗುತ್ತದೋ ನನಗೆ.. ?!

    ತುಂಬ ಇಷ್ಟವಾಯಿತು.
    ಸಿಂಧು

    ಪ್ರತ್ಯುತ್ತರಅಳಿಸಿ
  6. ಅರವಿಂದ್,
    ಜೋಗ-ಭಟ್ಕಳ ರಸ್ತೆಯಲ್ಲಿ ಕೋಗಾರು ದಾಟಿ ೩ಕಿಮಿ ಬಳಿಕ ಸಿಗಂದೂರಿಗೆ ತೆರಳುವ ತಿರುವು ಸಿಗುವುದು. ಈ ದಾರಿಯಲ್ಲಿ ೮-೧೦ ಕಿಮಿ ಕ್ರಮಿಸಿದರೆ ಕಟ್ಟಿನಕಾರು.

    ವೇಣು,
    ಸಂತೋಷ ಚಾಣಾಕ್ಷ ಹುಡುಗ. ಎಂದೋ ಹೋಗಿದ್ದು ನೆನಪಿಟ್ಟುಕೊಂಡು ನಮ್ಮನ್ನೆಲ್ಲಾ ಸರಿಯಾದ ದಾರಿಯಲ್ಲಿ ಕರೆದೊಯ್ದದ್ದನ್ನು ಮೆಚ್ಚಬೇಕು. ಇನ್ನು ಅಡಿಗರ ಅಡಿಗೆಯ ರುಚಿ..ಸಾಟಿಯಿಲ್ಲದ್ದು.

    ಶ್ರೀಕಾಂತ್,
    ನಿಮ್ಮ ಗೂದನಗುಂಡಿ-ಪಡುಬೀಡು ಚಾರಣದ ಬಗ್ಗೆ
    'ಪಯಣಿಗ'ದಲ್ಲಿ ಓದಿದ್ದೆ. ಬಹಳ ಸುಂದರ ಜಾಗ ಎಂಬುದರಲ್ಲಿ ಸಂಶಯವಿಲ್ಲ. ಆ ದಾರಿ, ಸ್ಥಳ ಮತ್ತು ಚಾರಣ ನೆನಪಿರುವಂತದ್ದು.

    ಶ್ರೀಕಾಂತ್ ಕೆ ಎಸ್,
    ಅಡಿಗರ ರೋಚಕ ರೋಮಾಂಚಕ ಕಥೆಗಳನ್ನೂ ನೀವಿನ್ನೂ ಕೇಳಿಲ್ಲವೆನಿಸುತ್ತೆ. ಅದನ್ನೆಲ್ಲಾ ನಿಮಗೆ ಕೊರೆಯದೆ ನಿಮ್ಮನ್ನು ಅವರ ಮನೆಯಿಂದ ಹೋಗಲು ಬಿಟ್ಟದ್ದು ನನ್ನಿಂದ ನಂಬಲಾಗುತ್ತಿಲ್ಲ. ಮುಂದಿನ ಚಾರಣಕ್ಕೆ ಬರಲು ಪ್ರಯತ್ನಿಸುವಿರಂತೆ.

    ಸಿಂಧು,
    ಈ ಚಾರಣದ ವಿವರ ಸ್ವಲ್ಪ ಹೆಚ್ಚೇ ಬರೆದೆನೇನೋ ಎಂದು ನನಗನಿಸಿತ್ತು. ವಿವರಣೆ ನಿಮಗಿಷ್ಟವಾದದ್ದು ಸಂತೋಷ. ಬಿಡುವಾದಾಗ ಇಂತಹ ಸ್ಥಳಗಳಿಗೆ ಹೋಗುತ್ತಿರುತ್ತಿರಲ್ಲವೇ ನೀವು?

    ಪ್ರತ್ಯುತ್ತರಅಳಿಸಿ
  7. Govinda Raju

    Dear Sir

    Nanage sirasi bali iruva bennehole falls nodalu tumba ishta, sir nanage kasage tanaka hogalu gottu munde esthu doora kramisabeku embudara sankshipta vivarane needuvira, nimminda uttara nireekshisuttiruva, nimmava
    R. govinda Raju

    ಪ್ರತ್ಯುತ್ತರಅಳಿಸಿ
  8. ಗೋವಿಂದ್
    ಕಸಗೆಯಿಂದ ೨ ದಾರಿ ಇವೆ. ಕಸಗೆಯಿಂದಲೇ ೨ ಕಿಮಿ ಕ್ರಮಿಸಿದರೆ ಹೊಸೂರು ಎಂಬ ಹತ್ತಾರು ಮನೆಗಳುಳ್ಳ ಸ್ಥಳ. ಅಲ್ಲಿಂದ ಮತ್ತೆರಡು ಕಿಮಿ ಕ್ರಮಿಸಿದರೆ ಹೊಸೂರಿನ ಕೊನೆಯ ಮನೆ. ಕಸಗೆಯಿಂದ ಒಟ್ಟಾರೆ ೪ ಕಿಮಿ ಕ್ರಮಿಸಿದರೆ ಹೊಸೂರಿನ ಕೊನೆಯ ಮನೆಯಲ್ಲಿ ರಸ್ತೆ ಕೊನೆಗೊಳ್ಳುತ್ತದೆ. ಮತ್ತೊಂದು ದಾರಿ ಕಸಗೆಗಿಂತ ಸ್ವಲ್ಪ ಮುಂದೆ ಕುಮಟಾ ಬದಿ ತೆರಳುವಾಗ ಒಂದು ಕಿಮಿ ಬಳಿಕ ಇದೆ. ಇದು ಹೊಸದಾಗಿ ಮಾಡಿರುವ ದಾರಿ. ಈ ದಾರಿಯಲ್ಲಿ ತೆರಳಿದರೆ ಹೊಸೂರು ಹಳ್ಳಿಯ ಬಳಿಕ ಮೊದಲ ದಾರಿಗೆ ಬಂದು ಸೇರಬಹುದು. ಮನೆಯ ಬಳಿಯ ದಿಬ್ಬವನ್ನೇರಿ ಅಗಲವಾದ ದಾರಿಯಲ್ಲಿ ಸ್ವಲ್ಪ ಮುಂದೆ ನಡೆದು ಬಲಕ್ಕೆ ಕಾಡಿನಲ್ಲಿಳಿದು ನಂತರ ತೊರೆಯೊಂದು ಸಿಗುವಲ್ಲಿ ತರೆಯ ಎಡ ಪಾರ್ಶ್ವದಲ ೧೫ ನಿಮಿಷ ಮನ್ನಡೆದರೆ ಬೆಣ್ಣೆ ಹೊಳೆ ಜಲಧಾರೆ.

    ಪ್ರತ್ಯುತ್ತರಅಳಿಸಿ
  9. R. govinda Raju

    Dear Sir,

    Nannu nimma Chaaranada "ONE DAY THREE WATER FALLS" idara Bagge thilididine, idaralli nanagondu maahiti bekagide enendare Mattigatta jalapathakke sirasi inda
    hoguvudu hege embudara Sankshipta vivrane needuvira, nimminda uttara nireekshistuttiruva, nimmava
    R. Govinda Raju
    Bangalore

    ಪ್ರತ್ಯುತ್ತರಅಳಿಸಿ
  10. R. govinda Raju

    Dear Sir,

    Nannu nimma Chaaranada "ONE DAY THREE WATER FALLS" idara Bagge thilididine, idaralli nanagondu maahiti bekagide enendare Mattigatta jalapathakke sirasi inda
    hoguvudu hege embudara Sankshipta vivrane needuvira, nimminda uttara nireekshistuttiruva, nimmava
    R. Govinda Raju
    Bangalore

    ಪ್ರತ್ಯುತ್ತರಅಳಿಸಿ
  11. whatever u wrote beautifully... i was searching for mattigataa falls... by the time i got ur blog... can u guide me which falls it is.. and road directions... me from udupi itself.. next week my colleagues are coming to my home from Bangalore so i wanna take them to some falls.. so.. even i know Hanumangundi, Kudlu thirtha and jomlu.. i been over here many times.. this time wanna go some far.. can u help me??

    ಪ್ರತ್ಯುತ್ತರಅಳಿಸಿ