ಭಾನುವಾರ, ಅಕ್ಟೋಬರ್ 21, 2007

ಇನ್ನೆರಡು ಜಲಧಾರೆಗಳು


ಮನೆಯೊಂದರ ತೋಟದಲ್ಲಿ ೧೦ ನಿಮಿಷ ನಡೆದರೆ ಸುಂದರ ಜಲಪಾತದ ದರ್ಶನವಾಗುವುದು. ಸುಮಾರು ೧೨೫ ಆಡಿಯಷ್ಟು ಎತ್ತರದಿಂದ ಒಂದೇ ನೆಗೆತದಲ್ಲಿ ಧುಮುಕುವ ಈ ಜಲಪಾತದಲ್ಲಿ ಬೇಸಗೆಯಲ್ಲೂ ನೀರಿರುವುದು. ಜಲಪಾತವನ್ನು ಸಮೀಪದಿಂದ ನೋಡಬೇಕಿದ್ದಲ್ಲಿ ಹಳ್ಳವನ್ನು ಸಾವಕಾಶವಾಗಿ ಎಚ್ಚರಿಕೆಯಿಂದ ದಾಟಿ ಹೋಗಬೇಕು.

ಜಲಧಾರೆ ಇರುವ ಜಾಗಕ್ಕೆ ೩ ಕಿಮಿ ದಾರಿ ಕಚ್ಚಾ ರಸ್ತೆಯಾಗಿದ್ದು, ನಡೆದುಕೊಂಡು ಕ್ರಮಿಸುವುದೇ ಲೇಸು. ಸ್ವಲ್ಪವಾದರೂ ಚಾರಣ ಮಾಡಿದಂತಾಗುತ್ತದೆ. ಈ ದಾರಿಯಲ್ಲಿ ಸ್ವಲ್ಪ ದೂರ ಬೈಕ್ ಓಡಿಸಿದ ನಾವು ನಂತರ ಮನೆಯೊಂದರ ಬಳಿ ಬೈಕ್ ಇಟ್ಟು ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಿದೆವು. ಐದಾರು ಮನೆಗಳು ಒಂದೇ ಕಡೆ ಸುಂದರ ಪರಿಸರದಲ್ಲಿ ಕಾಣಬಂದಾಗ ಜಲಪಾತದ ದಾರಿ ಕೇಳಿದೆವು. ಇಲ್ಲಿ 'ಮರಾಠೆ ಮನೆ' ಎಂಬ ಹೆಸರಿನ ಮನೆಯೊಂದಿದೆ. ಅನುಮತಿ ಪಡೆದು ಇವರ ತೋಟದಲ್ಲಿ ಹತ್ತು ನಿಮಿಷ ನಡೆದು ಸುಂದರ ಆನಡ್ಕ ಜಲಪಾತದ ಬಳಿ ಬಂದೆವು. ಮರಾಠೆಯವರ ತೋಟದಲ್ಲಿ ನಡೆಯುತ್ತಿರುವಾಗ ಮೇಲೆ ಬಹಳ ಎತ್ತರದಲ್ಲಿ ಇದೇ ಹಳ್ಳ ಮತ್ತೆರಡು ಜಲಪಾತಗಳನ್ನು ಸೃಷ್ಟಿಸಿರುವುದು ಕಾಣಬರುವುದು.

ನೀರಿನ ಹರಿವು ಸಾಧಾರಣ ಮಟ್ಟದಲ್ಲಿದ್ದರಿಂದ ಹಳ್ಳವನ್ನು ದಾಟಿ ಜಲಪಾತದ ಮುಂದೆ ಬಂದು ಒಂದು ತಾಸು ವಿಶ್ರಮಿಸಿ ಪ್ರಕೃತಿಯ ಸೌಂದರ್ಯವನ್ನು ಮನಸಾರೆ ಆಸ್ವಾದಿಸಿದೆವು. ಹೆಚ್ಚು ಕಷ್ಟಪಡದೆ ಸುಂದರ ಜಲಪಾತವೊಂದನ್ನು ಸಂದರ್ಶಿಸಿ ಒಂದಷ್ಟು ಹೊತ್ತನ್ನು ಪ್ರಕೃತಿಯ ಮಡಿಲಲ್ಲಿ ನೀರಿಗೆ ಮೈಯೊಡ್ಡಿ ಕಳೆಯುವ ಇಚ್ಛೆಯಿದ್ದವರಿಗೆ ಈ ಜಲಪಾತ ಹೇಳಿ ಮಾಡಿಸಿದಂತಿದೆ. ಈ ಜಲಪಾತಕ್ಕೆ ಮತ್ತೊಂದು ಹೆಸರು ಕಡಮೆಗುಂಡಿ ಜಲಪಾತ ಎಂದು.


ಸಮೀಪದಲ್ಲೇ ಇದೆ ಇನ್ನೊಂದು ಜಲಧಾರೆ. ವಿಜಯ ಕರ್ನಾಟಕದಲ್ಲಿ ಈ ಜಲಧಾರೆಯ ಚಿತ್ರ ಬಂದಿತ್ತು. ದೇವಯ್ಯ ಗೌಡರ ಮನೆಯಿಂದ ಅವರ ತೋಟದಲ್ಲಿ ಒಂದೈದು ನಿಮಿಷ ನಡೆದರೆ ಈ ಜಲಧಾರೆ.

ಶಿವರಾಜಕುಮಾರನ ಯಾವುದೋ ಚಲನಚಿತ್ರದ ಚಿತ್ರೀಕರಣ ಈ ಜಲಧಾರೆಯ ಸಮೀಪ ನಡೆದಿದ್ದರಿಂದ ಅಲ್ಲಿವರೆಗೂ ರಸ್ತೆ ಮಾಡಲಾಗಿತ್ತು. ಈಗ ಆ ರಸ್ತೆಯನ್ನು ಗೌಡರು ಮುಚ್ಚಿದ್ದಾರೆ. ಬದಿಯಿಂದಲೇ ಮೇಲೇರಿ ಜಲಧಾರೆಯ ಮೇಲ್ಭಾಗಕ್ಕೆ ತಲುಪಬಹುದು. ಇದು ೨ ಹಂತಗಳುಳ್ಳ ಸುಮಾರು ೬೫-೭೦ ಅಡಿಯಷ್ಟೆತ್ತರವಿರುವ ಜಲಧಾರೆ. ದೊಡ್ಡ ಗಾತ್ರದ ಮೀನುಗಳು ಈ ಜಲಧಾರೆಯ ಗುಂಡಿಯಲ್ಲಿ ಅರಾಮವಾಗಿ ಈಜಾಡಿಕೊಂಡಿವೆ. ಮನಸಾರೆ ಜಲಕ್ರೀಡೆಯಾಡಬಹುದು ಇಲ್ಲಿ.

'ಎರ್ಮಾಯಿ' ಎಂಬ ಹೆಸರು ಬರಲು ಒಂದು ಕಾರಣವಿದೆ. ಬಹಳ ಹಿಂದೆ ಒಂದು ಎತ್ತು (ತುಳು ಭಾಷೆಯಲ್ಲಿ 'ಎರು') ಇಲ್ಲಿ ಕಣ್ಮರೆ (ತುಳು ಭಾಷೆಯಲ್ಲಿ 'ಮಾಯಿ') ಆಗಿತ್ತು. ಹಾಗೆ 'ಎರ್ಮಾಯಿ ಎಂಬ ಹೆಸರು. ಏಳುವರೆ ಹಳ್ಳ ಎಂಬ ವಿಚಿತ್ರ ಹೆಸರು ಈ ಹಳ್ಳಕ್ಕೆ. ಕಡ್ತಕುಮೇರು ಶ್ರೇಣಿಯ ಬೆಟ್ಟ ಗುಡ್ಡಗಳಿಂದ ಏಳು ಹಳ್ಳಗಳು ಕೆಳಗೆ ಹರಿದು ಬಂದು ಜತೆಗೂಡಿ, ಅವುಗಳೊಂದಿಗೆ ಒಂದು ಸಣ್ಣ ಹಳ್ಳವೂ ಜತೆಗೂಡಿ ಈ ಹಳ್ಳ ನಿರ್ಮಿತವಾಗಿರುವುದರಿಂದ 'ಏಳುವರೆ ಹಳ್ಳ' ಎಂಬ ಹೆಸರು.

11 ಕಾಮೆಂಟ್‌ಗಳು:

  1. ಉತ್ತಮ ವಿವರಣೆ. ಕಳೆದ ವಾರ ಈ ಎರಡೂ ಜಲಪಾತಗಳಿಗೆ ಹೋಗಿದ್ದೆ. ಅದ್ಭುತವಾದ ಜಾಗ.

    ಪ್ರತ್ಯುತ್ತರಅಳಿಸಿ
  2. ಆನಡ್ಕ ಜಲಪಾತ ನೋಡಿದ್ದೀನಿ. ಬಹಳ ಚೆನ್ನಾಗಿದೆ. ಜಲಪಾತಕ್ಕೆ ಬೆನ್ನೊಡ್ಡಿ ಕುಳಿತರೆ ಒಳ್ಳೆ 'ಮಸಾಜ್' ಆಗತ್ತೆ ಕೂಡ! ಆದರೆ ನಾವು ಜಲಪಾತಕ್ಕೆ ಸುಮಾರು ಒಂದು ಘಂಟೆಯಾದರೂ ನಡೆದಿರಬಹುದು. ನೀವು ರಸ್ತೆ ಇರುವವರೆಗೂ ಬೈಕಿನಲ್ಲಿ ಹೋದಿರಿ ಅನ್ನಿಸತ್ತೆ. ಆ ರಸ್ತೆಯಲ್ಲಿ ಹಿಂದಿರುಗುವಾಗ ಕಂಡ ಕುದುರೆಮುಖದ ದೃಶ್ಯ ಮಾತ್ರ ಮರೆಯಲಸಾಧ್ಯ!

    ಎರ್ಮಾಯಿ ನೋಡಿಲ್ಲ. ಆ ಜಲಪಾತ ವಿಚಾರ ಗೊತ್ತೇ ಇರಲಿಲ್ಲ. ಆನಡ್ಕ ನೋಡಿಕೊಂಡು ಬೆಂಗಳೂರಿಗೆ ಹೋದಮೇಲೆ ನನಗೆ ಒಬ್ಬರು ಹೇಳಿದ್ದು. ಮುಂದೆಂದಾದರೂ ಅತ್ತ ಕಡೆ ಹೋದಾಗ ನೋಡಬೇಕು.

    ಪ್ರತ್ಯುತ್ತರಅಳಿಸಿ
  3. ಅಲೆಮಾರಿ ನಾಯ್ಕರೇ , ನಿಮ್ಮ ಆಸಕ್ತಿ ಅದ್ಭುತ. ನೀವು ಭೇಟಿ ಕೊಟ್ಟ ತಾಣಗಳನ್ನೆಲ್ಲಾ ಚಿತ್ರ,ವಿವರಣೆ ಸಮೇತ ಹಂಚಿಕೊಂಡು ನಮ್ಮೆಲ್ಲರಿಗೆ ಮಾಹಿತಿ ಒದಗಿಸುತ್ತಿರುವುದಕ್ಕೆ ಬಹಳ ಧನ್ಯವಾದ. ನಿಮ್ಮ ಬ್ಲಾಗ್ ನೋಡಿದ ಮೇಲೆ ಎಷ್ಟೋ ಒಳ್ಳೋಳ್ಳೇ ಸ್ಥಳಗಳ ಬಗ್ಗೆ ಗೊತ್ತಾಗಿ ಅವುಗಳನ್ನೆಲ್ಲಾ ಭೇಟಿ ಮಾಡಲು ಮನಸ್ಸಾಗಿದೆ. ಯಾವುದೇ ತೊಂದರೆಯಿಲ್ಲದೇ ಹೀಗೆ ಮುಂದುವರೆಯಲಿ ನಿಮ್ಮ ಅಲೆದಾಟ.

    ಪ್ರತ್ಯುತ್ತರಅಳಿಸಿ
  4. ಮತ್ತೆ ಮತ್ತೆ ಅದೇ comment ಬರೆದು ಸಾಕಾಗಿದೆ...ನಿಮ್ಮ ಸರಳ ವಿವರಣೆ , ಚಿತ್ರಗಳು ಮಸ್ತ್ :)

    ಪ್ರತ್ಯುತ್ತರಅಳಿಸಿ
  5. naav hOdaaga "aanaDka" tumba saNNadaagi beeLtaa ittu.. snaana maaDOke maja ittu.. :-)

    ಪ್ರತ್ಯುತ್ತರಅಳಿಸಿ
  6. ಅರವಿಂದ್ ಮತ್ತು ಶ್ರೀಕಾಂತ್,
    ಧನ್ಯವಾದಗಳು.

    ಶ್ರೀಕಾಂತ್ ಕೆ ಎಸ್
    ಕುದುರೆಮುಖದ ನೋಟ ಅದ್ಭುತ. ನನಗೂ ಅದು ಒಂದು ಮರೆಯಲಾಗದ ದೃಶ್ಯ.

    ವಿಕಾಸ್,
    ತುಂಬಾ ಹೊಗಳಿದ್ದೀರಿ. ಇಲ್ಲಿಗೆ ಬರುತ್ತಾ ಇರಿ. ಈ ಬ್ಲಾಗಿನಿಂದ ಹೊಸ ತಾಣಗಳ ಬಗ್ಗೆ ನಿಮಗೆ ಮಾಹಿತಿ ದೊರಕಿದೆ ಎಂದಾದರೆ ನಾನು ಧನ್ಯ.

    ಮನಸ್ವಿನಿ,
    ಹಾಗಂತ ಕಾಮೆಂಟ್ ಬರೆಯುವುದನ್ನು ನಿಲ್ಲಿಸಬೇಡಿ. ಮತ್ತೆ ಮತ್ತೆ ಅದೇ ಕಮೆಂಟ್ ಬರೆದರೂ ನನಗೆ ಸಂತೋಷ.

    ಪರಿಸರ ಪ್ರೇಮಿ ಅರುಣ್,
    ನಿಮ್ಮ ಅನಡ್ಕ ಭೇಟಿಯ ಚಿತ್ರಗಳನ್ನು ಆರ್.ಎಚ್.ಎಮ್ ಇಲ್ಲಿ ನೋಡಿದ್ದೀನಿ.

    ಪ್ರತ್ಯುತ್ತರಅಳಿಸಿ
  7. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  8. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  9. ಸಂಗ್ರಾಮ್,
    ದಯವಿಟ್ಟು ಕ್ಷಮಿಸಿ. ನೀವು ವಿನಂತಿಸಿದ್ದನ್ನು ಮಾಡುವುದು ನನ್ನ ಸಾಮರ್ಥ್ಯದ ಪರಿಧಿಯ ಹೊರಗಿದೆ. ದಯವಿಟ್ಟು ಸಮಯವಿದ್ದಾಗ ಬ್ಲಾಗ್ ನಲ್ಲಿ ಹುಡುಕುವಿರಂತೆ ... ನಿಮಗೆ ಬೇಕಾದ್ದು ದೊರಕಬಹುದು.

    ಪ್ರತ್ಯುತ್ತರಅಳಿಸಿ
  10. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ