ಭಾನುವಾರ, ಜೂನ್ 19, 2016

ತಿಲ್ಲಾರಿ...!

 

ಅಕ್ಟೋಬರ್ ೧೩, ೨೦೦೭. ಧಾರವಾಡ ಕೋರ್ಟ್ ಬಸ್ಸು ತಂಗುದಾಣದಲ್ಲಿ ನಾನು ಬಸ್ಸಿನಿಂದ ಇಳಿದಾಗ ಸರಿಯಾಗಿ ಮುಂಜಾನೆ ೪ ಗಂಟೆಯಾಗಿತ್ತು. ಅದೇ ಸಮಯಕ್ಕೆ ವಿವೇಕ್, ಗಂಗಾಧರ್ ಕಲ್ಲೂರ್, ಡಾ|ಸಂಜೀವ್ ಕುಲಕರ್ಣಿ, ಕುಮಾರ್ ಮತ್ತು ಮಕ್ಕಳಾದ ಮಿಂಚು ಮತ್ತು ನವೀನ್ ’ತಿಲ್ಲಾರಿ’ಗೆ ಹೊರಡುವವರಿದ್ದರು. ಕಲ್ಲೂರ್ ಯಾವಾಗಲೂ ಸಮಯದ ವಿಷಯದಲ್ಲಿ ಪಕ್ಕಾ. ನಾಲ್ಕು ಅಂದರೆ ನಾಲ್ಕೇ. ಒಂದು ನಿಮಿಷ ಆಚೀಚೆ ಇಲ್ಲ. ಸಮಯಕ್ಕೆ ಸರಿಯಾಗಿ ತಲುಪುತ್ತೇನೋ ಎಂಬ ಡೌಟು ನನಗಿತ್ತು. ರಾತ್ರಿ ೨ ರಿಂದಲೇ ವಿವೇಕ್ ನನಗೆ ಕರೆ ಮಾಡುತ್ತಾ ’ಎಲ್ಲಿದ್ದೀರಿ...ಎಲ್ಲಿದ್ದೀರಿ’ ಎಂದು ವಿಚಾರಿಸುತ್ತಾ ಇದ್ದರು.


ಸರಿಯಾಗಿ ನಾಲ್ಕಕ್ಕೇ ಧಾರವಾಡದಲ್ಲಿಳಿದೆ. ಅಷ್ಟರಲ್ಲಿ ಮತ್ತೆ ವಿವೇಕ್‍ರ ಫೋನ್. ಕೋರ್ಟ್ ಸ್ಟಾಪಿನಲ್ಲಿ ಇಳಿದಿದ್ದೇನೆ ಎಂದು ಹೇಳಿದ ಕೂಡಲೇ ’ಅಲ್ಲೇ ಇರಿ. ನಾವೂ ಹೊಂಟೀವಿ, ಇನ್ನೊಂದ್ ೫ ನಿಮಿಷದೊಳಗ ಅಲ್ಲಿರ್ತೀವಿ’ ಎಂದರು. ಮುಂಜಾನೆಯ ಕೆಲಸಗಳನ್ನು ಮುಗಿಸಲು ಸಮಯವಿರಲಿಲ್ಲ. ಸಮಯಕ್ಕಿಂತಲೂ ಹೆಚ್ಚಾಗಿ ಸರಿಯಾದ ಸ್ಥಳವಿರಲಿಲ್ಲ ಎನ್ನಬಹುದು. ಆದರೆ ಹಲ್ಲನ್ನಾದರೂ ತಿಕ್ಕಿಕೊಳ್ಳಬಹುದಲ್ಲ ಎಂದು ಅಲ್ಲೇ ’ಬ್ಯಾಂಕ್ ಆಫ್ ಇಂಡಿಯಾ’ದ ಮುಂದೆ ಬ್ರಶ್ ಮಾಡಿ ಕುಡಿಯಲು ತಂದಿದ್ದ ನೀರಿನಿಂದ ತೊಳೆದುಕೊಳ್ಳಬೇಕಾದರೆ ಸಂಜೀವ್ ಕುಲಕರ್ಣಿಯವರ ’ಓಮ್ನಿ’ ಬಂದು ನಿಂತಿತು.



ಮುಂಜಾನೆ ೫.೩೦ಕ್ಕೆ ಬೆಳಗಾವಿ. ಹಳೇದೆಲ್ಲಾ ನೆನಪು ಬರತೊಡಗಿತು. ಎರಡು ವರ್ಷ ಬೆಳಗಾವಿಯಲ್ಲಿ ವ್ಯಾಸಂಗ ಮಾಡುವ ನೆವದಲ್ಲಿ ಮಜಾ ಉಡಾಯಿಸಿದ್ದು ನೆನಪಾಗತೊಡಗಿತು. ಇಲ್ಲಿ ಉಪಹಾರ ಮುಗಿಸಿ ಅಂಬೋಲಿ ದಾರಿಯಲ್ಲಿ ಓಮ್ನಿ ಓಡಿತು. ಅಂಬೋಲಿ ದಾರಿಯಲ್ಲಿ ತೆರಳುವಾಗ ೧೯೯೬ರಲ್ಲಿ ನಾವು ೨೦ ಗೆಳೆಯರು ಸೇರಿ ೧೦ ಬೈಕಿನಲ್ಲಿ ಅಂಬೋಲಿಗೆ ಹೋಗಿದ್ದೆಲ್ಲಾ ಮತ್ತೆ ಮತ್ತೆ ನೆನಪಾಗತೊಡಗಿತು.



ರಾಜ್ಯದ ಗಡಿ ದಾಟಿ ಮಹಾರಾಷ್ಟ್ರ ಪ್ರವೇಶಿಸಿದೊಡನೆ ಸಿಗುವುದು ಮಹಿಪಾಲ್ ಘಡ್ ಎಂಬ ಕೋಟೆ. ಭೀಮಸೇನ ಜೋಶಿಯ ’ಆರಂಭೀ ವಂದೀನ...ಅಯೋಧ್ಯೇಚಾ ರಾಜಾ...’ ಹಾಡು ಮಹಿಪಾಲ್ ಘಡದ ಒಳಗಿನಿಂದ ತೇಲಿಬರುತ್ತಿತ್ತು. ಈಗ ಕೋಟೆಯಲ್ಲಿ ಏನೂ ಉಳಿದಿಲ್ಲ. ಬೆಳಗಾವಿಯ ವಿಹಂಗಮ ನೋಟ ಇಲ್ಲಿಂದ ಲಭ್ಯ. ’ಘಡ್’ ಎಂಬ ಹೆಸರು ಮಾತ್ರ ಆದರೆ ಅಲ್ಲಿ ಏನೂ ಇಲ್ಲ. ಸುಂದರ ದೃಶ್ಯ ಅಸ್ವಾದಿಸಲು ಹೋಗಬಹುದಷ್ಟೇ. ಕೋಟೆಯ ಗೋಡೆಗಳ ಕುರುಹು ಒಂದೆರಡು ಕಡೆ ಕಾಣಸಿಗುತ್ತವೆ. ಎಲ್ಲ ಕಡೆ ಮನೆಗಳು ಎದ್ದಿವೆ. ಮಹಿಪಾಲ್ ಘಡ್ ಮಹಾರಾಷ್ಟ್ರದಲ್ಲಿದ್ದರೂ ಇಲ್ಲಿಗೆ ದಿನಕ್ಕೆ ಆರೇಳು ಬಾರಿ ಬರುವ ಬಸ್ಸು ಮಾತ್ರ ಕರ್ನಾಟಕದ್ದು! ಅಲ್ಲಿಂದ ಹೊರಡುವಾಗ ಜೋಶಿಯವರ ’ಪಾವಲೊ.. ಪಾವಲೊ.. ಪಾವಲೊ ಪಂಢರಿ... ವೈಕುಂಠ ಭುವನ..’ ಹಾಡು ಮುಂಜಾನೆಯ ಆ ಹಿತವಾದ ವಾತಾವರಣದಲ್ಲಿ ಬಹಳ ಇಂಪಾಗಿ ಮಹಿಪಾಲ್ ಘಡದಿಂದ ಕೇಳಿಸುತ್ತಿತ್ತು. ದಾರಿಯಲ್ಲಿ ಸಿಗುವ ದೇವಸ್ಥಾನವೊಂದರ ಸಣ್ಣ ಕೊಳದಲ್ಲಿ ಎಲ್ಲರೂ ಸ್ನಾನ ಮಾಡಿದರು.



ನಂತರ ತಿಲ್ಲಾರಿ ನದಿಗೆ ನಿರ್ಮಿಸಲಾಗಿರುವ ಅಣೆಕಟ್ಟಿನೆಡೆ ತೆರಳಿದೆವು. ನದಿ ಮಹಾರಾಷ್ಟ್ರದಲ್ಲಿದ್ದರೂ, ಅಣೆಕಟ್ಟು ಕರ್ನಾಟಕದಲ್ಲಿದೆ! ಆದರೆ ಅಣೆಕಟ್ಟನ್ನು ನೋಡಿಕೊಳ್ಳುವುದು ಮಾತ್ರ ಮಹಾರಾಷ್ಟ್ರ ಸರಕಾರ! ಅಲ್ಲಿನ ಜನರಿಂದ ನಮಗೆ ತಿಳಿದ ವಿಷಯವಿದು. ’ಹೋ ಸಾವ್ಕಾರ್. ಡ್ಯಾಮ್ ತುಮ್ಚಾ ಕರ್ನಾಟಕ್ ಮದೀ ಆಹೆ, ಪಣ್ ಅಮ್ಚಾ ಮಹಾರಾಷ್ಟ್ರಾ ಸರ್ಕಾರ್ಚಾ ಆಧೀನ್ ಮದೀ ಅಹೆ’ ಎಂದು ಅಲ್ಲಿದ್ದ ಇಬ್ಬರು ಸ್ಥಳೀಯರು ತಿಳಿಸಿದಾಗ ನಾನು ಕಕ್ಕಾಬಿಕ್ಕಿ. ಇದು ಹೇಗೆ ಸಾಧ್ಯ ಎಂದು ಕಲ್ಲೂರ ಅವರಲ್ಲಿ ಕೇಳಿದಾಗ ಅವರೂ ಆ ಸ್ಥಳೀಯರು ಹೇಳಿದ ಮಾತಿಗೆ ಸಮ್ಮತಿ ಸೂಚಿಸಿದರು. ಈ ಮಾತನ್ನು ನಾನು ಈಗಲೂ ನಂಬುತ್ತಿಲ್ಲ.


ಇಲ್ಲಿ ಕರ್ನಾಟಕಕ್ಕೆ ಸೇರಿದ ಕೆಲವೊಂದು ಭಾಗಗಳಿಗೆ ರಸ್ತೆ ಇರುವುದು ಮಹಾರಾಷ್ಟ್ರದಲ್ಲಿ! ಮಹಾರಾಷ್ಟ್ರದೊಳಗೇ ನಮ್ಮ ರಾಜ್ಯದ ನೆಲ ತೂರಿಕೊಂಡಿದೆ. ಹಾಗಿರುವಲ್ಲೆಲ್ಲಾ ನಮ್ಮ ರಾಜ್ಯ ಸರಕಾರ ಬೇಲಿ ಹಾಕಿ ಕಾಯ್ದುಕೊಂಡಿದೆ. ತಿಲ್ಲಾರಿ ಅಣೆಕಟ್ಟಿನಿಂದ ಹೊರಗೆ ಹರಿಯುವ ನೀರು ಜಲಧಾರೆಯನ್ನೊಂದನ್ನು ನಿರ್ಮಿಸಿದೆ. ಇದಕ್ಕೆ ತಿಲ್ಲಾರಿ ಜಲಧಾರೆ ಎಂದು ಹೆಸರು.



ತಿಲ್ಲಾರಿ ಅಣೆಕಟ್ಟಿನಿಂದ ಸಮೀಪವೇ ಇದೆ ಸುಮಾರು ೪೦ ಅಡಿ ಎತ್ತರವಿರುವ ಸುಂದರ ತಿಲ್ಲಾರಿ ಜಲಧಾರೆ. ಜಲಧಾರೆಯ ಮುಂದಿರುವ ವಿಶಾಲ ಕೊಳದಿಂದ ಈ ಸ್ಥಳದ ಸೌಂದರ್ಯ ಇಮ್ಮಡಿಯಾಗಿದೆ ಎಂದು ಹೇಳಬಹುದು. ಜಲಧಾರೆಯ ನೀರು ಸೂರ್ಯನ ಮುಂಜಾನೆಯ ಕಿರಣಗಳಲ್ಲಿ ನೃತ್ಯ ಮಾಡುವಂತೆ ಹೊಳೆಯುತ್ತಿತ್ತು. ಈಜಾಡಲು ಬಹಳ ಪ್ರಶಸ್ತವಾದ ಸ್ಥಳ. ಒಂದೇ ತಾಸಿಗೆ ಮೊದಲು ಮಹಿಪಾಲ್ ಘಡದ ದೇವಸ್ಥಾನದ ಕೊಳದಲ್ಲಿ ಸ್ನಾನ ಮಾಡಿದರೂ, ಈ ಜಲಧಾರೆಯ ಅಂದಕ್ಕೆ ಮನಸೋತು ಎಲ್ಲರೂ ಮತ್ತೆ ನೀರಿಗಿಳಿದರು. ವಿಶಾಲ ಕೊಳಕ್ಕೆ ಹೊಳೆಯುತ್ತಾ ಧುಮುಕುತ್ತಿರುವ ಜಲಧಾರೆ. ಈ ಜಲರಾಶಿಯನ್ನು ಸುತ್ತುವರಿದ ಮರಗಿಡಗಳು. ನಾನು ಕಂಡ ಸುಂದರ ಜಲಧಾರೆಗಳಲ್ಲಿ ಇದೂ ಒಂದು.



ಅಲ್ಲಿಂದ ಸುಮಾರು ೧೦-೧೨ ಕಿಮಿ ದೂರವಿರುವ ಖಾಸಗಿ ಸ್ಥಳವೊಂದಕ್ಕೆ ಭೇಟಿ ನೀಡಿದೆವು. ಅಕ್ಕ ಪಕ್ಕದಲ್ಲಿ ೫೦ ಮೀಟರ್ ನಷ್ಟು ಅಂತರದಲ್ಲಿ ಸರಿಸುಮಾರು ೧೦೦ ಅಡಿಯಷ್ಟು ಆಳಕ್ಕೆ ಅವಳಿ ಜಲಧಾರೆಗಳು ಧುಮುಕಿ ಹಾಗೆ ಕೆಳಗೆ ಹರಿದು ತಿಲ್ಲಾರಿ ನದಿಯನ್ನು ಸೇರಿಕೊಳ್ಳುತ್ತವೆ. ಇಲ್ಲಿಂದ ತಿಲ್ಲಾರಿ ಕಣಿವೆಯ ಅದ್ಭುತ ದೃಶ್ಯ ಲಭ್ಯ. ದೂರದಲ್ಲೆರಡು ಜಲಧಾರೆಗಳು ಗೋಚರಿಸುತ್ತಿತ್ತು. ಕಲ್ಲೂರ್‌ರವರ ಬೈನಾಕ್ಯುಲರ್‌ನಲ್ಲಿ ವೀಕ್ಷಿಸಿದಾಗ ಅದ್ಭುತವಾಗಿ ಕಂಡವು ಈ ಜಲಧಾರೆಗಳು. ’ಅಲ್ಲಿಗೂ ಹೋಗೋಣ್ರೀ’ ಎಂದು ಅದಾಗಲೇ ಅಲ್ಲಿಗೆ ಭೇಟಿ ನೀಡಿದ್ದ ಕಲ್ಲೂರ್ ಹೇಳಿದಾಗ ಸುಮ್ಮನೆ ತಲೆಯಾಡಿಸಿದೆ.



ಅಲ್ಲಿಂದ ಮುಂದೆ ನಾವು ತೆರಳಿದ್ದು ತಿಲ್ಲಾರಿನಗರಕ್ಕೆ. ಇದು ಮಹಾರಾಷ್ಟ್ರದಲ್ಲಿದೆ. ತಿಲ್ಲಾರಿ ಅಣೆಕಟ್ಟು ನಿರ್ಮಿಸುವಾಗ ಉತ್ತುಂಗದಲ್ಲಿದ್ದ ತಿಲ್ಲಾರಿನಗರ ಈಗ ಪಾಳುಬಿದ್ದಿದೆ. ಸಾವೆಹಕ್ಲು ಮತ್ತು ಚಕ್ರಾ ಅಣೆಕಟ್ಟುಗಳನ್ನು ನೋಡಲು ತೆರಳುವಾಗ ನೋಡಿದ ’ಚಕ್ರಾನಗರ’ದ ನೆನಪಾಗತೊಡಗಿತು.


ಹಾಳಾದ ಸರಕಾರಿ ಕಟ್ಟಡಗಳು, ಹಾಳಾದ ಸರಕಾರಿ ವಾಹನಗಳು, ಮುರಿದುಬಿದ್ದ ಕುಸಿಯುತ್ತಿರುವ ಮನೆಗಳು, ಕುರುಚಲು ಸಸ್ಯಗಳಿಂದ ತುಂಬಿಹೋಗಿದ್ದ ಉದ್ಯಾನವನ. ಸರಕಾರಿ ವಾಹನಗಳಂತೂ ಅವುಗಳನ್ನು ಕೊನೆಯ ಬಾರಿ ಓಡಿಸಿದ ನಂತರ ತಂದು ಎಲ್ಲಿ ಹೇಗೆ ನಿಲ್ಲಿಸಲಾಗಿತ್ತೋ ಹಾಗೇ ನಿಂತುಕೊಂಡು ಮಳೆ ಗಾಳಿಗೆ ಸಂಪೂರ್ಣವಾಗಿ ಹಾಳಾಗಿಹೋಗಿವೆ.


ತಿಲ್ಲಾರಿನಗರದಲ್ಲಿ ಈಗಿರುವುದು ಒಂದು ವೃತ್ತ. ಒಂದು ರಸ್ತೆ ಪಟ್ನಿ ಕ್ರಾಸ್ ಮೂಲಕ ಬೆಳಗಾವಿಗೆ, ಇನ್ನೊಂದು ರಸ್ತೆ ಕೊಲ್ಲಾಪುರಕ್ಕೆ, ೩ನೇ ರಸ್ತೆ ತಿಲ್ಲಾರಿ ಅಣೆಕಟ್ಟಿಗೆ ಮತ್ತು ನಾಲ್ಕನೇ ರಸ್ತೆ ಗೋವಾಕ್ಕೆ.


ಗೋವಾದ ರಸ್ತೆಯಲ್ಲಿ ಒಂದು ಕಿಮಿ ಚಲಿಸಿದರೆ ಕಾಲುವೆಯೊಂದು ಸಿಗುತ್ತದೆ. ಈ ಕಾಲುವೆಯಲ್ಲಿ ತಿಲ್ಲಾರಿ ಅಣೆಕಟ್ಟಿನಿಂದ ನೀರು ಹರಿದು ಬರುತ್ತದೆ. ಇಲ್ಲಿ ಮತ್ತೊಮ್ಮೆ ಜಲಕ್ರೀಡೆ. ಕಾಲುವೆಯಲ್ಲಿ ಜಿಗಿಯುವುದು ಮತ್ತು ಶವಾಸನ, ಆ ಅಸನ, ಈ ಆಸನ ಎಂದು ಮಲ್ಕೊಂಡು ಬಿಟ್ಟರೆ ನೀರಿನ ಹರಿವು ದೇಹವನ್ನು ತಂತಾನೇ ಮುಂದಕ್ಕೆ ಒಯ್ಯುತ್ತಿತ್ತು. ಕಾಲುವೆಯಿಂದ ಮೇಲೆ ಬರುವುದು, ಮತ್ತೆ ಒಂದು ಕಿಮಿನಷ್ಟು ದೂರ ನಡೆದುಕೊಂಡು ಹೋಗಿ, ಪುನ: ಕಾಲುವೆಯಲ್ಲಿ ಜಿಗಿಯುವುದು, ನೀರಿನ ಹರಿವಿನೊಂದಿಗೆ ಸಲೀಸಾಗಿ ಬರುವುದು. ನಾಲ್ಕೈದು ಬಾರಿ ಈ ಕ್ರಿಯೆಯನ್ನು ಪುನರಾವರ್ತಿಸಲಾಯಿತು. 


ಗೋವಾ ರಸ್ತೆಯಲ್ಲಿ ೮ ಕಿಮಿ ಚಲಿಸಿದರೆ ದೋಣಗಾಂವ ಘಟ್ಟ ಸಿಗುವುದು. ಬಹಳ ಕಡಿದಾದ ಘಟ್ಟ. ಈ ದಾರಿಯಿಂದ ಚಲಿಸುವ ವಾಹನಗಳಿಗೆ ವಿಮೆ ಅನ್ವಯ ಆಗುವುದಿಲ್ಲ ಎಂಬ ಮಾತೇ ಈ ಘಟ್ಟದ ಅಪಾಯವನ್ನು ಎತ್ತಿ ಹೇಳುತ್ತದೆ. ಅಕ್ಟೋಬರ್ ೨ನೇ ವಾರದ ಮೊದಲು ಈ ಜಾಗಕ್ಕೆ ತೆರಳಿದರೆ ನೆಲದ ತುಂಬಾ ಹಳದಿ ಹೂವಿನ ಹಾಸಿಗೆ.


ಅಲ್ಲಿಂದ ನಂತರ ಕಾಳಿನಂದಿ ಎಂಬ ಹಳ್ಳಿಗೆ ತೆರಳಿದೆವು. ಈ ಊರಿಗೆ ಸಮೀಪವಿರುವ ಬೆಟ್ಟದ ಮೇಲೆ ಶಿವಾಜಿ ಕಟ್ಟಿಸಿದ ಕೋಟೆಯೊಂದಿದೆ. ಈ ಕೋಟೆಗೆ ಕಾಳಿನಂದಿಘಡ್ ಎನ್ನುತ್ತಾರೆ. ಇಲ್ಲಿ ಚಾರಣ ಆರಂಭಿಸಿದಾಗಲೇ ಸಂಜೆ ನಾಲ್ಕರ ಸಮಯ. ಕೇವಲ ೪೫ ನಿಮಿಷದ ಚಾರಣ. ದಾರಿ ಬಹಳ ಸುಂದರವಾಗಿತ್ತು. ಕೋಟೆಯಿಂದ ೩೬೦ ಕೋನದ ಅದ್ಭುತ ದೃಶ್ಯ. ಮತ್ತೆ ಕೆಳಗೆ ಹಳ್ಳಿ ತಲುಪಿದಾಗ ಸಮಯ ೬.೩೦. ಅಲ್ಲಿಂದ ನೇರವಾಗಿ ಧಾರವಾಡಕ್ಕೆ ಓಡಿತು ಓಮ್ನಿ.

3 ಕಾಮೆಂಟ್‌ಗಳು: