ಮಂಗಳವಾರ, ಏಪ್ರಿಲ್ 19, 2016

ಮಲ್ಲಿಕಾರ್ಜುನ ದೇವಾಲಯ - ಲಕ್ಕುಂಡಿ

 

ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನೊಳಗೊಂಡಿರುವ ಚಾಲುಕ್ಯ ಶೈಲಿಯ ದೇವಾಲಯವಿದು. ಲಕ್ಕುಂಡಿಯ ಊರ ನಡುವೆ ಮನೆಗಳ ಮರೆಯಲ್ಲಿ ಅಡಗಿರುವ ಹಲವಾರು ದೇವಾಲಯಗಳಲ್ಲಿ ಇದೂ ಒಂದು. ಅದೃಷ್ಟವಶಾತ್ ಈ ದೇವಾಲಯ ಸುದೃಢವಾಗಿದೆ.



ವಿಶಾಲವಾಗಿದ್ದು, ಸುಂದರವಾಗಿರುವ ಮುಖಮಂಟಪ ೧೨ ಕಂಬಗಳನ್ನು ಹೊಂದಿದ್ದು, ಇಳಿಜಾರಿನ ಮಾಡನ್ನು ಹೊಂದಿದೆ. ಊರ ಜನರು ದೇವಾಲಯದ ಮುಖಮಂಟಪ ಮತ್ತು ನವರಂಗವನ್ನು ವಿಶ್ರಾಂತಿ ಪಡೆಯಲು ಹಾಗೂ ಹರಟೆ ಹೊಡೆಯಲು ಧಾರಾಳವಾಗಿ ಉಪಯೋಗಿಸುತ್ತಾರೆ!


 
ನವರಂಗದ ದ್ವಾರವು ಅಲಂಕಾರರಹಿತ ಪಂಚಶಾಖೆಗಳನ್ನು ಹೊಂದಿದ್ದು, ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ನವರಂಗಕ್ಕೆ ದೇವಾಲಯದ ಬಲಭಾಗದಿಂದ ಸಪ್ತಶಾಖೆ ಹಾಗೂ ಗಜಲಕ್ಷ್ಮೀಯುಳ್ಳ ಇನ್ನೊಂದು ದ್ವಾರವಿದೆ. ಈ ದ್ವಾರ ಮುಚ್ಚಿತ್ತು.



ನವರಂಗದಲ್ಲಿ ಪ್ರಭಾವಳಿ ಕೆತ್ತನೆಗಳಿಂದ ಅಲಂಕೃತವಾಗಿರುವ ನಾಲ್ಕು ಸುಂದರ ಕಂಬಗಳಿವೆ. ಮೇಲೆ ಚಿತ್ತಾರಗಳ ಕೆತ್ತನೆಯಿದ್ದರೆ, ತಳಭಾಗದಲ್ಲಿ ನಾಲ್ಕೂ ಬದಿಗಳಲ್ಲಿ ಪ್ರಭಾವಳಿ ಕೆತ್ತನೆಗಳನ್ನು ಕಾಣಬಹುದು.



 
ಒಂದು ಕಂಬದಲ್ಲಿ ಶಾಸನವೊಂದನ್ನು ಬರೆಯಲಾಗಿದೆ. ಈ ಶಾಸನವನ್ನು ಇತಿಹಾಸಕಾರರು ಚಾಲುಕ್ಯ ದೊರೆ ಎರಡನೇ ಜಗದೇಕಮಲ್ಲನ ಆಳ್ವಿಕೆಯ ಕಾಲದ್ದು ಎಂದು ಗುರುತಿಸಿದ್ದಾರೆ. ಈ ಶಾಸನದಲ್ಲಿ ಇಸವಿ ೧೧೪೦ರಲ್ಲಿ ದಂಡನಾಯಕನೊಬ್ಬನು ತೆಲಿಗೇಶ್ವರ ದೇವರಿಗೆ ಮಾಡಿರುವ ದಾನದ ಬಗ್ಗೆ ವಿವರವಿದೆ. ಇದೇ ದೇವಾಲಯದಲ್ಲಿ ದೊರಕಿರುವ ಇನ್ನೊಂದು ಶಾಸನದಲ್ಲಿ ಇಸವಿ ೧೦೭೬ರಲ್ಲಿ, ದೇವೇಂದ್ರ ಪಂಡಿತ ಎಂಬುವವರ ಶಿಷ್ಯನಾಗಿದ್ದ ಶಂಕರಕೋಟಿ ಎನ್ನುವವನು ಕಲಿದೇವನಿಗೆ ಉಡುಗೊರೆಗಳನ್ನು ನೀಡಿದ ಬಗ್ಗೆ ವಿವರಗಳಿವೆ. ಇತಿಹಾಸಕಾರರ ಪ್ರಕಾರ ಆಗಿನ ಕಾಲದಲ್ಲಿ ಈ ದೇವಾಲಯವನ್ನು ತೆಲಿಗೇಶ್ವರ ಹಾಗೂ ಕಲಿದೇವ ಎಂದು ಕರೆಯಲಾಗುತ್ತಿತ್ತು.



ತೆರೆದ ಅಂತರಾಳದಲ್ಲಿ ನಂದಿಯ ಸಣ್ಣ ಮೂರ್ತಿಯಿದೆ. ಗರ್ಭಗುಡಿಯ ದ್ವಾರವು ಅಲಂಕಾರರಹಿತ ಪಂಚಶಾಖೆಗಳನ್ನು ಹೊಂದಿದ್ದು, ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದೆ.



 
ಚೌಕಾಕಾರದ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಊರವರು ದಿನಾಲೂ ಪೂಜೆ ಸಲ್ಲಿಸುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ