ಭಾನುವಾರ, ಮಾರ್ಚ್ 27, 2016

ನೀಲಕಂಠ ಕಾಳೇಶ್ವರ ದೇವಾಲಯ - ಕಾಳಗಿ

















ಶಾಸನಗಳಲ್ಲಿ ಕಾಳಗಿಯನ್ನು ’ಕಾಳುಗೆ’ ಎಂದು ಬರೆಯಲಾಗಿದೆ. ಕಲ್ಯಾಣಿ ಚಾಲುಕ್ಯ ಹಾಗೂ ಕಳಚೂರಿ ವಂಶದ ಆಳ್ವಿಕೆಯ ಕಾಲದಲ್ಲಿ ಸುತ್ತಮುತ್ತಲಿನ ಒಂದು ಸಾವಿರ ಹಳ್ಳಿಗಳಿಗೆ ಕಾಳಗಿ ರಾಜಧಾನಿಯಾಗಿತ್ತು. ಭಾರತದಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಅವುಗಳಿರುವ ಮೂಲದಿಕ್ಕುಗಳಿಗೆ ಅನುಸಾರವಾಗಿಯೇ ಇಲ್ಲಿಯೂ ಪ್ರತಿಷ್ಠಾಪಿಸಲಾಗಿರುವುದರಿಂದ ಕಾಳಗಿಯನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ.


ಇಲ್ಲಿರುವ ನೀಲಕಂಠ ಕಾಳೇಶ್ವರ ದೇವಾಲಯವು ಬಹಳ ಪುರಾತನವಾದದ್ದು ಎಂದು ನಂಬಲಾಗಿದೆ. ಇತಿಹಾಸಕಾರರು ಈ ದೇವಾಲಯವು ೨ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ ಎನ್ನುತ್ತಾರೆ. ಇಸವಿ ೧೧೦೩ರ ಶಾಸನವೊಂದರಲ್ಲಿ ಈ ದೇವಾಲಯವನ್ನು ಸ್ವಯಂಭೂ ಕಾಳೇಶ್ವರ ಎಂದು ಸಂಬೋಧಿಸಲಾಗಿದೆ. ಇನ್ನೊಂದು ಶಾಸನದಲ್ಲಿ ಬಾಣವಂಶದ ದೊರೆ ಗೊಂಕರಸನ ತಂದೆ ವೀರ ಕಾಳರಸನು ಈ ದೇವಾಲಯಕ್ಕೆ ಭೂಮಿ ನೀಡಿದ್ದಾನೆ ಎಂದು ತಿಳಿಸಲಾಗಿದೆ. ಶಾಸನಗಳಿಂದ ತಿಳಿದುಬಂದಿರುವ ಇನ್ನೊಂದು ಮಾಹಿತಿಯೆಂದರೆ ಇಸವಿ ೧೦೯೩ರಲ್ಲಿ ಚಾಲುಕ್ಯ ದೊರೆ ತ್ರಿಭುವನಮಲ್ಲನು ಈ ದೇವಾಲಯಕ್ಕೆ ದಾನ ನೀಡಿರುವುದು.


ದೇವಾಲಯದ ಆವರಣದಲ್ಲಿ ಆಯತಾಕಾರದ ಪುಷ್ಕರಿಣಿಯಿದೆ. ಎಂದೂ ಬತ್ತದ ಗಂಗೆ ಎಂದು ಈ ಪುಷ್ಕರಿಣಿಯನ್ನು ಕರೆಯಲಾಗುತ್ತದೆ. ಇಲ್ಲಿ ಉದ್ಭವವಾಗುವ ನೀರು ನೆಲದಡಿಯಿಂದಲೇ ಹರಿದು ಸಮೀಪದಲ್ಲೇ ಹರಿಯುವ ರುದ್ರಹಳ್ಳಕ್ಕೆ ಸೇರುತ್ತದೆ. ಪುಷ್ಕರಿಣಿಯಿಂದ ಹೊರಹರಿಯುವ ನೀರು, ರುದ್ರಹಳ್ಳಕ್ಕೆ ಸೇರುವ ಸ್ವಲ್ಪ ಮೊದಲು ಶಿವಲಿಂಗವೊಂದನ್ನು ಹಾದುಹೋಗುತ್ತದೆ. ಸದಾ ನೀರಿನಲ್ಲೇ ಇರುವ ಈ ಶಿವಲಿಂಗ, ನಾನು ತೆರಳಿದ ಮುನ್ನಾ ದಿನ ಮಳೆಬಿದ್ದಿದ್ದರಿಂದ, ನೀರಿನ ಪ್ರಮಾಣ ಹೆಚ್ಚಾಗಿ, ನೀರಿನಲ್ಲಿ ಮುಳುಗಿತ್ತು ಮತ್ತು ಕಾಣುತ್ತಿರಲಿಲ್ಲ.


ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿರುವ ದೇವಾಲಯ ಕಾಲಕಾಲಕ್ಕೆ ನವೀಕರಣಗೊಂಡಿರುವುದರಿಂದ, ಆಧುನಿಕ ದೇವಾಲಯದಂತೆ ಕಾಣುತ್ತದೆ. ಮುಖಮಂಟಪದಲ್ಲಿ ಒತ್ತೊತ್ತಾಗಿ ಹಲವಾರು ಕಂಬಗಳಿವೆ. ನವರಂಗ, ಅಂತರಾಳ ಹಾಗೂ ಗರ್ಭಗುಡಿಗಳ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರನ್ನು ಹಾಗೂ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕಾಣಬಹುದು. ಸಣ್ಣ ಉದ್ಭವ ಶಿವಲಿಂಗಕ್ಕೆ ದಿನಾಲೂ ಪೂಜೆ ನಡೆಯುತ್ತದೆ.


ನವರಂಗದಲ್ಲಿ ಚತುರ್ಮುಖ ಗಣೇಶನ ಅಪರೂಪದ ಮೂರ್ತಿಯಿದೆ. ಈ ಮೂರ್ತಿಗೊಂದು ಪ್ರಶಸ್ತ ಸ್ಥಾನ ನೀಡಿ ಪೂಜೆ ಸಲ್ಲಿಸಬಹುದು. ಆದರೆ ತೀರಾ ಸಣ್ಣದಿರುವ ನವರಂಗದ ಮೂಲೆಯಲ್ಲಿ ಈ ಮೂರ್ತಿಯಿದೆ. ಇಟ್ಟಿರುವ ಸ್ಥಳ ಎಷ್ಟು ಇಕ್ಕಟ್ಟಾಗಿದೆಯೆಂದರೆ ಈ ಚತುರ್ಮುಖ ಗಣೇಶನ ನಾಲ್ಕನೇ ಮುಖ ನೋಡುವುದು ಅಸಾಧ್ಯ! ನವರಂಗದ ಛಾವಣಿಯಲ್ಲಿ ಸುಂದರ ಕೆತ್ತನೆಯೊಂದಿದೆ.


ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮೇಲೆ ಹಾಕಿರುವ (ಪ್ರಜಾವಾಣಿಯಲ್ಲಿ ಈ ದೇವಾಲಯದ ಬಗ್ಗೆ ಬಂದ ಲೇಖನದ ತುಣುಕು) ಲೇಖನವನ್ನು ಓದಿ ತಿಳಿದುಕೊಳ್ಳಬಹುದು.


ದೇವಾಲಯಕ್ಕೆ ತಾಗಿಕೊಂಡೇ ಹರಿಯುವ ರುದ್ರಹಳ್ಳವನ್ನು ದಿಟ್ಟಿಸುತ್ತ ಕುಳಿತಿರುವಂತೆ ಗಣೇಶನ ಮತ್ತು ಬಸವನ ಮೂರ್ತಿಗಳಿವೆ. ಗಣೇಶನಿಗೆ ತಾಗಿಕೊಂಡೇ ನಾಗನ ಕಲ್ಲೊಂದು ಅಡ್ಡ ಮಲಗಿದೆ. ಹಳ್ಳಿಗರ ಅಸಡ್ಡೆ ಅದೆಷ್ಟರ ಮಟ್ಟಿಗೆ ಇದೆಯೆಂದರೆ ಈ ಮೂರ್ತಿಗಳಿಗೆ ಯಾವ ಗೌರವನೇ ಇಲ್ಲ! ಅನತಿ ದೂರದಲ್ಲಿ ಹಸ್ತಿಯ (ಹಾಗೆಂದು ನಾನು ತಿಳಿದುಕೊಂಡಿದ್ದೇನೆ) ಮೂರ್ತಿಯೊಂದು ಗಣೇಶ ಮತ್ತು ಬಸವನಂತೆ ರುದ್ರಹಳ್ಳದತ್ತ ದಿಟ್ಟಿಸಿ ನೋಡುತ್ತಿತ್ತು. ಇನ್ನೂ ಸ್ವಲ್ಪ ದೂರದಲ್ಲಿ ಚನ್ನಕೇಶವನ ಭಗ್ನ ಮೂರ್ತಿಯೊಂದು ಮಣ್ಣಿನಲ್ಲಿ ಅರ್ಧ ಹೂತುಹೋಗಿದ್ದು, ಅದೆಲ್ಲೋ ದಿಟ್ಟಿಸುವಂತೆ ತೋರುತ್ತಿತ್ತು.


ರುದ್ರಹಳ್ಳದ ಇನ್ನೊಂದು ದಡದಲ್ಲಿ ೪೦ ಗುಣಿಸು ೪೦ ಅಳತೆಯುಳ್ಳ ಚೌಕಾಕಾರದ ಪುಷ್ಕರಿಣಿಯಿದೆ. ಈ ಪುಷ್ಕರಿಣಿಯನ್ನು ಲಕ್ಷ್ಮೀನರಸಿಂಹ ತೀರ್ಥ ಎಂದು ಕರೆಯುತ್ತಾರೆ. ಈ ಲಕ್ಷ್ಮೀನರಸಿಂಹ ತೀರ್ಥದ ನಟ್ಟನಡುವೆ ನಾಲ್ಕು ದಿಕ್ಕುಗಳಿಂದ ಪ್ರವೇಶದ್ವಾರಗಳುಳ್ಳ ಸಣ್ಣ ದೇವಾಲಯವಿದೆ. ಒಳಗಡೆ ಪೀಠ ಬಿಟ್ಟರೆ ಈ ಪಾಳು ದೇವಾಲಯದಲ್ಲಿ ಯಾವುದೇ ಮೂರ್ತಿಯಿಲ್ಲ.


ಈ ಪುಷ್ಕರಿಣಿಯ ನೀರು ಶುದ್ಧವಾಗಿದ್ದು, ತಿಳಿ ನೀಲಿ ಬಣ್ಣವನ್ನು ಹೊಂದಿದೆ. ಆದರೂ ನೀರಿನಲ್ಲಿ ತೇಲುತ್ತಿರುವ ಪಾಚಿಯನ್ನು ತೆಗೆದು ಸ್ವಚ್ಛಗೊಳಿಸಿದರೆ ಪುಷ್ಕರಿಣಿ ಇನ್ನಷ್ಟು ಆಕರ್ಷಕವಾಗಿ ಕಾಣುವುದು.

3 ಕಾಮೆಂಟ್‌ಗಳು:

  1. ಕಾಳಗಿಯ ಕಾಳೇಶ್ವರ ದೇವಾಲಯ ಕ್ರಿಶ 2ನೆಯ ಶತಮಾನದಲ್ಲಿ ನಿರ್ಮಾಣವಾಗಿದೆ ಎಂಬ ಮಾಹಿತಿ ತಪ್ಪು.
    ಇದು ಕ್ರಿಶ 11..12 ನೆಯ ಶತಮಾನದ ರಚನೆ.
    ವಿಜಯೇಂದ್ರ ಕುಲಕರ್ಣಿ ಕಲಬುರಗಿ

    ಪ್ರತ್ಯುತ್ತರಅಳಿಸಿ
  2. ಸರ್ ದೇವಸ್ಥಾನದ ಹೊರಗಡೆ ಇನ್ನೊಂದು ದೇವಸ್ಥಾನ ಇದೆ ಅದರ ಬಗ್ಗೆ ಸ್ವಲ್ಪ ಬರೆಯಬೇಕಿತ್ತು..

    ಪ್ರತ್ಯುತ್ತರಅಳಿಸಿ