ಭಾನುವಾರ, ನವೆಂಬರ್ 09, 2014

ಶಾಂತಪ್ಪ ನಾಯಕ ತಿರುಮಲ ದೇವಾಲಯ ಹಾಗೂ ರಘುನಾಥ ದೇವಾಲಯ - ಭಟ್ಕಳ


ಇಸವಿ ೧೫೫೫ರಲ್ಲಿ ಶಾಂತಪ್ಪ ನಾಯಕ ಎಂಬವರು ನಿರ್ಮಿಸಿದ್ದರಿಂದ, ಈ ದೇವಾಲಯವನ್ನು ಶಾಂತಪ್ಪ ನಾಯಕ ತಿರುಮಲ ದೇವಾಲಯವೆಂದು ಕರೆಯಲಾಗುತ್ತದೆ. ಗೌಡ ಸಾರಸ್ವತ ಬ್ರಾಹ್ಮಣರ ಪ್ರಿಯ ದೇವರಾದ ವೆಂಕಟರಮಣನ ಸನ್ನಿಧಿಯಿದು.


ಈ ದೇವಾಲಯ ರಚನೆಯಲ್ಲಿ ಎಲ್ಲಾ ರೀತಿಯಿಂದಲೂ ಸಮೀಪದಲ್ಲೇ ಇರುವ ಹಾಗೂ ಹೆಚ್ಚು ಪ್ರಸಿದ್ಧಿ ಪಡೆದಿರುವ ಖೇತ್ ಪೈ ನಾರಾಯಣ ದೇವಾಲಯವನ್ನು ಹೋಲುತ್ತದೆ. ಈ ದೇವಾಲಯ ನಿರ್ಮಿಸಿದ ಶಾಂತಪ್ಪ ನಾಯಕನು, ನಾರಾಯಣ ದೇವಾಲಯದ ನಿರ್ಮಾತೃ ಖೇತ್ ಪೈಯ ಸಮೀಪದ ಸಂಬಂಧಿಯಾಗಿದ್ದನು.

 

ನಾನು ತೆರಳಿದಾಗ, ಮನೆಯವರು ವಾರದ ಪೂಜೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರಿಂದ ನನಗೆ ದೇವಾಲಯದ ಒಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ದ್ವಾರದಿಂದಲೇ ವೆಂಕಟರಮಣನಿಗೆ ನಮಸ್ಕರಿಸಿದೆ ಮತ್ತು ಅಲ್ಲಿಂದಲೇ ದೇವಾಲಯದ ಒಳಗಿನ ಕೆಲವು ಚಿತ್ರಗಳನ್ನು ತೆಗೆದೆ.


ನವರಂಗ, ಅಂತರಾಳ ಮತ್ತು ಗರ್ಭಗುಡಿ ಇರುವ ದೇವಾಲಯದ ನವರಂಗದ ನೆಲಕ್ಕೆ ಮಾರ್ಬಲ್ ಹಾಸಲಾಗಿದೆ. ನವರಂಗದ ನಾಲ್ಕೂ ಕಂಬಗಳು ಪ್ರಭಾವಳಿ ಕೆತ್ತನೆಗಳನ್ನು ಹೊಂದಿವೆ. ಛಾವಣಿಯಲ್ಲಿ ಕಮಲದ ಸುಂದರ ಕೆತ್ತನೆಯ ಸುತ್ತಲೂ ಅಷ್ಟದಿಕ್ಪಾಲಕರನ್ನು ಕಾಣಬಹುದು.


ಅಂತರಾಳದ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದ್ದು, ಇಕ್ಕೆಲಗಳಲ್ಲಿ ಹನುಮಂತನ ಹಾಗೂ ದೇವಿಯೊಬ್ಬಳ ಕೆತ್ತನೆಯಿದೆ. ಧ್ವಜಸ್ತಂಭದ ಮುಂಭಾಗದಲ್ಲಿ ತಿರುಮಲನಿಗೆ ನಮಸ್ಕರಿಸುವ ಭಂಗಿಯಲ್ಲಿ ಇರುವ ವ್ಯಕ್ತಿಯ ಕೆತ್ತನೆ ಶಾಂತಪ್ಪ ನಾಯಕನದ್ದು ಎಂದು ನಂಬಲಾಗಿದೆ.


ಪೌಳಿಯ ಸುತ್ತಲೂ, ಅಂದಿನ ಜಮಜೀವನದ ಚಿತ್ರಣ ನೀಡುವ ಕೆತ್ತನೆಗಳನ್ನು ಕಾಣಬಹುದು.


ದೇವಾಲಯದ ಪೌಳಿಯನ್ನೇ ವಿಸ್ತರಿಸಿಕೊಂಡು, ದೇವಾಲಯದ ಸುತ್ತಲೂ ಮನೆಯನ್ನು ರಚಿಸಲಾಗಿದ್ದು, ಅಲ್ಲಿ ದೇವಾಲಯದ ನಿರ್ಮಾತೃ ಶಾಂತಪ್ಪ ನಾಯಕರ ಕುಟುಂಬದವರು ವಾಸಿಸುತ್ತಿದ್ದಾರೆ. ದೈನಂದಿನ ಪೂಜಾ ಕಾರ್ಯಕ್ರಮಗಳನ್ನೂ ಈ ಮನೆಯವರೇ ನಿರ್ವಹಿಸುತ್ತಾರೆ. ಇದೊಂದು ಕೂಡು ಕುಟುಂಬವಾಗಿದ್ದು, ದೇವಾಲಯದ ಸುತ್ತಲೂ ಮನೆಯವರು ಓಡಾಡುತ್ತಿರುವುದು, ಮಕ್ಕಳು ಪಾಠ ಅಭ್ಯಾಸ ಮಾಡುವುದು, ಕೂಸು ಅಳುವುದು, ಇತ್ಯಾದಿ ಕೇಳುತ್ತಾ ದೇವಾಲಯ ನೋಡಬಹುದು.

ರಘುನಾಥ ದೇವಾಲಯ


ಈ ದೇವಾಲಯವನ್ನು ಇಸವಿ ೧೫೬೭ರಲ್ಲಿ ಬಾಳ ಕಿಣಿ ಮತ್ತು ನಾರಾಯಣ ಕಿಣಿ ಎಂಬ ಸಹೋದರರಿಬ್ಬರು ನಿರ್ಮಿಸಿದರು. ಈ ವಿಷಯವನ್ನು ಹೇಳುವ ಶಾಸನ ದೇವಾಲಯದಲ್ಲಿ ದೊರಕಿದೆ.


ರಘುನಾಥ ದೇವಾಲಯವನ್ನು ಹುಡುಕುವುದು ಸ್ವಲ್ಪ ಕಷ್ಟದ ಕೆಲಸ. ಮನೆಯೊಂದರ ನಟ್ಟನಡುವೆ ಅಂಗಳದಲ್ಲಿ ಈ ದೇವಾಲಯವಿರುವುದರಿಂದ, ದೇವಾಲಯದ ಗೋಪುರದ ಮೇಲ್ಭಾಗ ಮಾತ್ರ ಹೊರಗಿನಿಂದ ಗೋಚರಿಸುತ್ತದೆ.


ದೇವಾಲಯವನ್ನು ಸುಮಾರು ೩ ಅಡಿ ಎತ್ತರದ ಜಗತಿಯ ಮೇಲೆ ನಿರ್ಮಿಸಲಾಗಿದೆ. ಮುಖಮಂಟಪ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ಈ ದೇವಾಲಯದ ಹೊರಗೋಡೆಯುಲ್ಲಿ ಅಲಂಕಾರಿಕಾ ಬಳ್ಳಿಗಳು, ಸಣ್ಣ ಸಣ್ಣ ಗೋಪುರಗಳು, ಮಂಟಪಗಳು, ಯಕ್ಷ-ಯಕ್ಷಿಯರು, ದೇವತೆಗಳು, ಇತ್ಯಾದಿಗಳ ಕೆತ್ತನೆಗಳನ್ನು ಕಾಣಬಹುದು.


ಗೋಪುರದ ರಚನೆಯು ಸಣ್ಣದಾಗಿ ಅಚ್ಚುಕಟ್ಟಾಗಿದ್ದು, ಹಲವಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ನವೀಕರಿಸಲಾಗಿರುವ ಮುಖಮಂಟಪದ ಮೆಲೆ ಯಜ್ಞಕುಂಡವನ್ನು ಹೋಲುವ ರಚನೆಯೊಂದನ್ನು ಕಂಡು ಸೋಜಿಗವಾಯಿತು.

3 ಕಾಮೆಂಟ್‌ಗಳು: