ಕಲಕೇರಿಯಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಲು ೨೦೧೧ರಲ್ಲಿ ತೆರಳಿದಾಗ ಶಿವನಂದಪ್ಪ ಕಮ್ಮಾರರ ಪರಿಚಯವಾಗಿತ್ತು. ಅಂದು ಅಲೆದಾಡಿ, ತಿರುಗಾಡಿ ಹಸಿದು ಹೈರಾಣಾಗಿದ್ದ ನನಗೆ ಹಾಗೂ ನನ್ನ ಟ್ಯಾಕ್ಸಿ ಚಾಲಕನಿಗೆ ಹೊಟ್ಟೆ ತುಂಬಾ ಊಟ ಹಾಕಿ ಆ ಋಣ ಬಾಕಿ ಉಳಿಸಿಕೊಂಡವರು ಈ ಕಮ್ಮಾರರು. ಅಂದು ಊಟದ ರೂಪದಲ್ಲಿ ಅವರು ನೀಡಿದ ಮೊಸರು, ಪಡ್ಡು, ತೆಂಗಿನಕಾಯಿ ಚಟ್ಣಿ, ರೊಟ್ಟಿ, ಶೇಂಗಾ ಚಟ್ಣಿಯ ನೆನಪು ಎಂದೂ ಮಾಸುವುದಿಲ್ಲ. ಕಲಕೇರಿಯ ಇತಿಹಾಸದ ಬಗ್ಗೆ, ಹಾವೇರಿ ಜಿಲ್ಲೆಯ ದೇವಾಲಯಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದಲ್ಲದೇ, ರಾಜ್ಯದಲ್ಲಿರುವ ಪ್ರಾಚೀನ ದೇವಾಲಯಗಳ ಬಗ್ಗೆ ಮಾಹಿತಿ ಎಲ್ಲಿ ದೊರಕುತ್ತದೆ ಎಂದು ತಿಳಿಸಿ, ನನಗೆ ತುಂಬಾ ಸಹಕರಿಸಿ ಉಪಕಾರ ಮಾಡಿದವರೂ ಈ ಕಮ್ಮಾರರೇ.
ಅವರ ಆತಿಥ್ಯ ಸವಿಯಲು ೨೦೧೩ರ ಜೂನ್ ತಿಂಗಳಲ್ಲಿ ಇನ್ನೊಮ್ಮೆ ಕಲಕೇರಿಗೆ ಹೋಗುವ ಪ್ಲ್ಯಾನ್ ಕೊನೆಯ ಹಂತದಲ್ಲಿ ರದ್ದಾಯಿತು. ಬರಲಾಗುವುದಿಲ್ಲವೆಂದು ತಿಳಿಸಿದಾಗ ಅವರು ಬೇಜಾರು ಮಾಡಿಕೊಂಡರು. ಈಗ್ಗೆ ಸುಮಾರು ನಾಲ್ಕು ತಿಂಗಳ ಹಿಂದೆ ಕಮ್ಮಾರರು ವಿಧಿವಶಗೊಂಡಿದ್ದಾರೆ ಎಂದು ಕಳೆದ ವಾರ ತಿಳಿಯಿತು. ಇದೇ ಅಗೋಸ್ಟ್ ಅಥವಾ ಸೆಪ್ಟ್ಂಬರ್ ತಿಂಗಳಲ್ಲಿ ಆ ಕಡೆ ತೆರಳುವ ಇರಾದೆಯಿದ್ದು, ಶೀಘ್ರದಲ್ಲೇ ಅವರಿಗೆ ಫೋನ್ ಮಾಡುವವನಿದ್ದೆ. ಈಗ, ತುಂಬಾನೇ ತಡಮಾಡಿಬಿಟ್ಟೆ ಎಂದೆನಿಸುತ್ತಿದೆ. ಪರಿಚಯವಿದ್ದವರು ತೀರಿಕೊಂಡಾಗ, ಅವರ ನೆನಪಿಗಾಗಿ ಹೆಸರು ಮತ್ತು ಸಂಖ್ಯೆಯನ್ನು ನಾನು ’ಡಿಲೀಟ್’ ಮಾಡುವುದಿಲ್ಲ. ಶಿವನಂದಪ್ಪ ಕಮ್ಮಾರರ ಹೆಸರು ಮತ್ತು ಮೊಬೈಲ್ ಸಂಖ್ಯೆ ನನ್ನ ಮೊಬೈಲಿನಲ್ಲಿ ಹಾಗೇ ಉಳಿಯಲಿದೆ.
ನೀವು ಕೊಡುತ್ತಿರುವ ಸ್ಥಾವರಗಳ ಚಿತ್ರಗಳ ಜೊತೆಗೆ ಈ ಪರೋಪಕಾರಿ ಜಂಗಮನ ಚಿತ್ರ ಹೃದಯ ಮಿಡಿಯುವಂತಿದೆ.
ಪ್ರತ್ಯುತ್ತರಅಳಿಸಿKammararu Ele mareya alaru..
ಪ್ರತ್ಯುತ್ತರಅಳಿಸಿ