ಭಾನುವಾರ, ಜೂನ್ 22, 2014

ಚಂದ್ರಮೌಳೇಶ್ವರ ದೇವಾಲಯ - ಲಕ್ಕುಂಡಿ


ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನೊಳಗೊಂಡಿರುವ ಈ ದೇವಾಲಯ ಜೀರ್ಣಾವಸ್ಥೆಯಲ್ಲಿದೆ. ದೇವಾಲಯದ ಹೊರಗೋಡೆಯ ಕಲ್ಲಿನ ಮೇಲ್ಪದರ ಅರ್ಧದಷ್ಟು ಕಣ್ಮರೆಯಾಗಿದೆ. ಎರಡು ಅಡಿ ಎತ್ತರದ ಅಧಿಷ್ಠಾನದ ಮೇಲೆ ನಿರ್ಮಿತಗೊಂಡಿರುವ ದೇವಾಲಯ ಒಂದು ಪಾರ್ಶ್ವದಲ್ಲಿ ಪುರಾತನ ಬಾವಿಯಿದೆ.


ಹೊರಗಿನಿಂದ ಪಾಳುಬಿದ್ದಂತೆ ತೋರುವ ದೇವಾಲಯದ ಒಳಗೆ ಕೆಲವು ವೈಶಿಷ್ಟ್ಯತೆಗಳನ್ನು ಕಾಣಬಹುದು. ನಾಲ್ಕು ಕಂಬಗಳ ನವರಂಗದ ಛಾವಣಿಯಲ್ಲಿ ಚಚ್ಚೌಕದೊಳಗೆ ಸುಂದರ ಕಮಲವನ್ನು ಕೆತ್ತಲಾಗಿದ್ದು, ಈ ಕಮಲದ ನಟ್ಟನಡುವೆ ಉಗ್ರನರಸಿಂಹ ಹಿರಣ್ಯಕಶಿಪುವಿನ ವಧೆಗೈಯುವ ಆಕರ್ಷಕ ಚಿತ್ರಣವಿದೆ. ಉಗ್ರನರಸಿಂಹನ ಸುತ್ತಲೂ ಅಷ್ಟದಿಕ್ಪಾಲಕರನ್ನು ತೋರಿಸಲಾಗಿದೆ.


ನವರಂಗದ ಮೇಲ್ಛಾವಣಿಯಲ್ಲೇ ನಾಲ್ಕೂ ಕಂಬಗಳ ನಡುವೆ ನಾಲ್ಕೂ ದಿಕ್ಕಿನಲ್ಲಿ ವಿವರವಾಗಿ ಬರೆಯಲಾಗಿರುವ ಶಾಸನಗಳನ್ನು ಕಾಣಬಹುದು. ದೇವಾಲಯವನ್ನು ಯಾರು ಯಾವಾಗ ನಿರ್ಮಿಸಿದರು ಎಂಬ ಮಾಹಿತಿ ದೊರಕಲಿಲ್ಲ. ನವರಂಗದ ಬಳಿಕ ಇರುವ ತೆರೆದ ಅಂತರಾಳದಲ್ಲಿ ನಂದಿಯ ಸಣ್ಣ ಮೂರ್ತಿಯಿದೆ.


ಗರ್ಭಗುಡಿಯ ದ್ವಾರವು ಪಂಚಶಾಖೆಗಳನ್ನು ಹೊಂದಿದೆ. ಈ ಶಾಖೆಗಳು ಕ್ರಮವಾಗಿ ವಜ್ರತೋರಣ, ಸಂಗೀತಗಾರರು, ಜೋಡಿ ನಾಟ್ಯಗಾರರು, ಸ್ತಂಭ ಹಾಗೂ ಬಳ್ಳಿತೋರಣಗಳಿಂದ ಅಲಂಕೃತಗೊಂಡಿವೆ.


ಶಾಖೆಗಳ ತಳಭಾಗದಲ್ಲಿ ಮಾನವ ಆಕೃತಿಗಳನ್ನು ಕಾಣಬಹುದು. ದ್ವಾರದ ಎರಡೂ ಬದಿಗಳಲ್ಲಿ ನಾಲ್ಕನೇ ಶಾಖೆಯಲ್ಲಿ ಮಾತ್ರ ಮಾನವ ಆಕೃತಿ ಇರದಿರುವುದನ್ನು ಗಮನಿಸಬಹುದು.


ದ್ವಾರದ ಮೇಲ್ಗಡೆ ಗಜಲಕ್ಷ್ಮೀಯ ಕೆತ್ತನೆಯಿದೆ. ಈ ದೇವಾಲಯದ ಎರಡನೇ ವೈಶಿಷ್ಟ್ಯೆತೆಯೆಂದರೆ ಗಜಲಕ್ಷ್ಮೀಯ ಮೇಲಿರುವ ದುರ್ಗಾದೇವಿಯ ಕೆತ್ತನೆ. ತನ್ನ ಕೈ ಮತ್ತು ಕಾಲುಗಳಿಂದ ದುಷ್ಟಸಂಹಾರ ಮಾಡುತ್ತಿರುವ ದುರ್ಗಾದೇವಿಯ ನಿರೂಪಣೆಯು ಬಹಳ ಅಪರೂಪವಾಗಿ ಕಾಣಬರುವಂತಹ ಕೆತ್ತನೆಯಾಗಿದೆ.


ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಸುಂದರ ಶಿವಲಿಂಗವಿದೆ. ದೇವಾಲಯವು ಪುರಾತತ್ವ ಇಲಾಖೆಯಿಂದ ನಿರ್ವಹಿಸಲ್ಪಟ್ಟಿದ್ದು, ಸುತ್ತಲೂ ಬೇಲಿ ಹಾಕಲಾಗಿದೆ. ದೇವಾಲಯದ ಹೊರಗೋಡೆಯ ಕಲ್ಲಿನ ಹಾಸುಗಳನ್ನು ಪುನ: ನಿರ್ಮಿಸಿದರೆ ದೇವಾಲಯದ ಆಯುಷ್ಯ ಇನ್ನಷ್ಟು ವೃದ್ಧಿಯಾಗಬಹುದು.

2 ಕಾಮೆಂಟ್‌ಗಳು: