ಭಾನುವಾರ, ಜೂನ್ 01, 2014

ಕರ್ನಲ್ ಕಂಬ


ಹೊನ್ನಾವರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇರುವ ಸಣ್ಣ ಬೆಟ್ಟದ ಮೇಲಿರುವ ಈ ಸ್ಮಾರಕವನ್ನು ಸರಿಸುಮಾರು ೧೬೯ ವರ್ಷಗಳ ಹಿಂದೆ ನಿರ್ಮಿಸಲಾಗಿದೆ.


ಬ್ರಿಟಿಷರ ಮದ್ರಾಸ್ ರೆಜಿಮೆಂಟ್‍ಗೆ ಒಳಪಟ್ಟಿದ್ದ ಇನ್‍ಫ್ಯಾಂಟ್ರಿಯೊಂದರ ಭಾಗವಾಗಿದ್ದ ಸಣ್ಣ ತುಕಡಿಯೊಂದರ ನಾಯಕರಾಗಿದ್ದ ಮೇಜರ್ ಜನರಲ್ ಕ್ಲೆಮೆಂಟ್ ಹಿಲ್ ಎಂಬವರು ಮೃತರಾದಾಗ ಅವರ ಸಮಾಧಿಯ ಮೇಲೆ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.


ಈಗ ಈ ಸ್ಥಳ 'ಕರ್ನಲ್ ಬೆಟ್ಟ' ಎಂದು ಊರಿನಲ್ಲಿ ಹೆಸರುವಾಸಿ. ಹಾಗೇನೆ ಸ್ಮಾರಕವನ್ನು 'ಕರ್ನಲ್ ಕಂಬ' ಎಂದು ಕರೆಯಲಾಗುತ್ತದೆ.


ಮೊದಲು ಅವಗಣನೆಗೆ ತುತ್ತಾಗಿದ್ದ ಕರ್ನಲ್ ಬೆಟ್ಟವನ್ನು, ಊರಿನ ರೋಟರಿ ಸಂಸ್ಥೆ, ಕಲ್ಲಿನ ಬೆಂಚುಗಳು, ಉದ್ಯಾನ, ಮಕ್ಕಳ ಪಾರ್ಕ್, ಇತ್ಯಾದಿ ನಿರ್ಮಿಸಿ ಸಂಜೆ ಕಳೆಯಲು ಉತ್ತಮ ತಾಣವನ್ನಾಗಿ ಮಾರ್ಪಾಡಿಸಿದೆ.


ಸ್ಮಾರಕದ ತಳಭಾಗದಲ್ಲಿರುವ ಫಲಕವೊಂದು ಇತಿಹಾಸವನ್ನು ನಮ್ಮ ಮುಂದೆ ಬಿಚ್ಚಿಡುತ್ತದೆ. ಈ ಫಲಕವನ್ನು ಒಂದೆರಡು ಕಡೆ ವಿರೂಪಗಳಿಸಲಾಗಿದೆ. ಕಪ್ಪು ಬಣ್ಣ ಎರಚಲಾಗಿರುವುದರಿಂದ ಬರೆದಿರುವುದನ್ನು ಓದಲು ಕಷ್ಟ. ಒಂದು ಸಂಪೂರ್ಣ ಸಾಲನ್ನು ಕೆರೆದು ವಿರೂಪಗೊಳಿಸಲಾಗಿದೆ (ಅಥವಾ ಕಾಲನ ದಾಳಿಗೆ ತುತ್ತಾಗಿ ವಿರೂಪಗೊಂಡಿರಲೂಬಹುದು).


ಈ ಫಲಕದಲ್ಲಿ ಹೀಗೆ ಬರೆಯಲಾಗಿದೆ - “This column is erected by the 14th Madras Native Infantry, a Guard of which Regiment in escorting to their final earthly resting place the remains of Major General Clement Hill had the sad duty of paying the last honours to ____ ____ ____ ____ and active military life. Won the love of every officer and man with whom he served. He died at the falls of Gairsuppah on the 20th of January 1845 in the 62nd year of his age while defending the Mysore Division”.


ಮೇಜರ್ ಜನರಲ್ ಕ್ಲೆಮೆಂಟ್ ಡೆಲ್‍ವ್ಸ್ ಹಿಲ್ ಅವರು ಹೊನ್ನಾವರದ ’ಹಿಲ್’ ಒಂದರ ಮೇಲೆ ಸಮಾಧಿಯಾದರು ಎಂಬುದೇನೋ ಸರಿ. ಆದರೆ ’ಕರ್ನಲ್ ಹಿಲ್(ಬೆಟ್ಟ)’ ಎಂದು ಈ ಬೆಟ್ಟಕ್ಕೆ ಹೆಸರು ಬರಲು ಕಾರಣವೇನಿರಬಹುದು? ಹಿಲ್ ಅವರು ಕರ್ನಲ್ ಆಗಿರಲಿಲ್ಲ. ಅವರೊಬ್ಬರು ಮೇಜರ್ ಜನರಲ್ ಆಗಿದ್ದರು. ಆಷ್ಟೇ ಅಲ್ಲದೆ, ಈ ಸ್ಮಾರಕದಲ್ಲಿರುವ ಫಲಕದಲ್ಲಿ ಅವರ ವಯಸ್ಸು ೬೨ ಆಗಿತ್ತು ಎಂದು ಬರೆಯಲಾಗಿದೆ. ಆದರೆ ಬ್ರಿಟಿಷ್ ದಾಖಲೆಗಳ ಪ್ರಕಾರ ಅವರು ಡಿಸೆಂಬರ್ ೬, ೧೭೮೧ ರಂದು ಜನಿಸಿದ್ದು, ಮರಣ ಹೊಂದಿದಾಗ ಅವರ ವಯಸ್ಸು ೬೩ ಆಗಿತ್ತು!


ಕ್ಲೆಮೆಂಟ್ ಹಿಲ್ ಅವರ ಪ್ರೀತಿಯ ನಾಯಿಯೊಂದಿತ್ತಂತೆ. ಈ ನಾಯಿ ಅವರ ದೇಹವನ್ನು ಬಿಟ್ಟು ದೂರ ಸರಿಯುತ್ತಿರಲಿಲ್ಲವಂತೆ. ಆ ಮೂಕ ಪ್ರಾಣಿಯ ಪ್ರೀತಿಯನ್ನು ಅರಿತು, ಸೈನಿಕರು ಅದನ್ನು ಹತ್ಯೆಗೈದು ಹಿಲ್ ಅವರ ಶವದೊಂದಿಗೆ ಅಲ್ಲೇ ಹೂಳಿದರಂತೆ. ಈ ಕಥೆಗೆ ಎಲ್ಲೂ ಮಾನ್ಯತೆ ಇಲ್ಲ. ಹಿಲ್ ಅವರ ಸಮಾಧಿಯಲ್ಲಿ ಅವರ ದೇಹದೊಂದಿಗೆ ನಾಯಿಯ ಶವವನ್ನೂ ಹೂಳಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.


ಕರ್ನಲ್ ಬೆಟ್ಟದ ಕೆಂಪು ಮಣ್ಣನ್ನು ಲೂಟಿ ಮಾಡುವ ಸಲುವಾಗಿ ಬೆಟ್ಟವನ್ನು ಕೊರೆಯುತ್ತಿರುವ ಬಗ್ಗೆ ಪ್ರಜಾವಾಣಿಯಲ್ಲಿ ಬಂದ ವರದಿಯನ್ನು ಯಥಾವತ್ತಾಗಿ ಮೇಲೆ ಹಾಕಿದ್ದೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ