ಮಂಗಳವಾರ, ನವೆಂಬರ್ 19, 2013

ತುರುವೇಕೆರೆಯ ದೇವಾಲಯಗಳು


ತುರುವೇಕೆರೆ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳ. ದೇವಾಲಯಗಳನ್ನು ನಿರ್ಮಿಸಲು ಅಗತ್ಯವಿರುವ ಬಳಪದ ಕಲ್ಲುಗಳು ತುರುವೆಕೆರೆಯಲ್ಲೇ ಸಿಗುತ್ತಿದ್ದರಿಂದ ಹೊಯ್ಸಳ ದೊರೆಗಳು ಇಲ್ಲಿಂದಲೇ ಆ ಕಲ್ಲುಗಳನ್ನು ತಮ್ಮ ಸಾಮ್ರಾಜ್ಯದಲ್ಲಿ ದೇವಾಲಯ ನಿರ್ಮಿಸುವಲ್ಲಿಗೆ ಸಾಗಿಸುತ್ತಿದ್ದರು ಎಂದು ನಂಬಲಾಗಿದೆ. ತುರುವೇಕೆರೆಯ ಪ್ರಮುಖ ಪ್ರಾಚೀನ ದೇವಾಲಯಗಳೆಂದರೆ ಚನ್ನಕೇಶವ, ಮೂಲೆ ಶಂಕರೇಶ್ವರ ಮತ್ತು ಗಂಗಾಧರೇಶ್ವರ ದೇವಾಲಯಗಳು.


ಚನ್ನಕೇಶವ ದೇವಾಲಯವನ್ನು ಇಸವಿ ೧೨೬೩ರಲ್ಲಿ ಹೊಯ್ಸಳ ದೊರೆ ೩ನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಆತನ ದಂಡನಾಯಕನಾಗಿದ್ದ ಸೋಮಣ್ಣ ಎಂಬವನು ನಿರ್ಮಿಸಿದನು. ಸುಮಾರು ೩ ಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣಗೊಂಡಿರುವ ಸರಳ ಶೈಲಿಯ ಈ ಏಕಕೂಟ ದೇವಾಲಯವು ಪೂರ್ವಾಭಿಮುಖವಾಗಿದ್ದು ಗರ್ಭಗುಡಿ, ನವರಂಗ, ಸುಕನಾಸಿ ಮತ್ತು ಹೊರಚಾಚು ಮುಖಮಂಟಪವನ್ನು ಹೊಂದಿದೆ. ಗರ್ಭಗುಡಿಯಲ್ಲಿರುವ ಚನ್ನಕೇಶವನ ಮೂರ್ತಿಯು ಪ್ರಭಾವಳಿ ಮತ್ತು ವಿಷ್ಣುವಿನ ಹತ್ತು ಅವತಾರಗಳ ಕೆತ್ತನೆಗಳಿಂದ ಅಲಂಕೃತವಾಗಿದೆ.


ಇತರ ಹೊಯ್ಸಳ ದೇವಾಲಯಗಳ ಪೂಜಿತ ವಿಗ್ರಹಗಳಿಗೆ ಹೋಲಿಸಿದರೆ ಈ ದೇವಾಲಯದ ಚನ್ನಕೇಶವನ ವಿಗ್ರಹ ಕಳಪೆ ಮಟ್ಟದ್ದಾಗಿದೆ ಎಂದು ಇತಿಹಾಸಕಾರರ ಅಭಿಪ್ರಾಯ. ಈ ರೀತಿ ಅಭಿಪ್ರಾಯ ಬರಲು ಕಾರಣವೇನೆಂದರೆ ಇಲ್ಲಿನ ವಿಗ್ರಹ ಸ್ವಲ್ಪ ಸಣ್ಣದಾಗಿದ್ದು ಹೊಟ್ಟೆ ಭಾಗದಲ್ಲಿ ಅಗಲವೂ ಆಗಿ ಕೆತ್ತಲ್ಪಟ್ಟಿದೆ. ದೇವಾಲಯಕ್ಕೆ ಬೀಗ ಹಾಕಿದ್ದರಿಂದ ಕಳಪೆ ಗುಣಮಟ್ಟವನ್ನು ಕಣ್ಣಾರೆ ನೋಡಲು ಆಗದೇ ಹೋಗಿದ್ದು ನನಗೆ ನಿರಾಸೆಯುಂಟುಮಾಡಿತು.


ಗೋಪುರವನ್ನು ನಾಲ್ಕು ತಾಳಗಳಲ್ಲಿ ನಿರ್ಮಿಸಲಾಗಿದ್ದು ಮೂಲ ಕಲಶ ಎಂದೋ ಬಿದ್ದುಹೋಗಿದೆ. ದೇವಾಲಯದ ಹೊರಗೋಡೆಯಲ್ಲಿ ಅಲ್ಲಲ್ಲಿ ಕೆಲವು ಗೋಪುರಗಳನ್ನು ಕೆತ್ತಲಾಗಿದ್ದು ಬಿಟ್ಟರೆ ಬೇರೆ ಯಾವ ಯಾವುದೇ ಭಿತ್ತಿಗಳಿಲ್ಲ.


ಹೆಸರಿಗೆ ತಕ್ಕಂತೆ ಊರಿನ ಒಂದು ಮೂಲೆಯಲ್ಲಿ ಮೂಲೆ ಶಂಕರೇಶ್ವರ ದೇವಾಲಯವಿದೆ. ಆದರೆ ಈ ಹೆಸರು ಬರಲು ಅಸಲಿ ಕಾರಣವೆಂದರೆ ಗೋಪುರದಲ್ಲಿ ಕೆತ್ತಿರುವ ೬೪ ಮೂಲೆಗಳಿಂದಾಗಿ ಎಂದು ಈ ದೇವಾಲಯದ ಬಗ್ಗೆ ಡಿ.ಎನ್.ಮಂಜುನಾಥ್ ಎಂಬವರು ಲೇಖನವೊಂದರಲ್ಲಿ ಬರೆದಿದ್ದಾರೆ. ಗೋಪುರದ ತುಂಬಾ ಸಣ್ಣ ಸಣ್ಣ ಶಿಖರಗಳೇ ತುಂಬಿಹೋಗಿದ್ದು ಮೂಲೆಗಳು ಯಾವುವು ಎಂದು ತಿಳಿಯಲೇ ಇಲ್ಲ. ಈ ದೇವಾಲಯವನ್ನು ಕೂಡಾ ಹೊಯ್ಸಳ ದಂಡನಾಯಕ ಸೋಮಣ್ಣನೇ ೧೨ನೇ ಶತಮಾನದಲ್ಲಿ ನಿರ್ಮಿಸಿರಬೇಕು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.


ದಕ್ಷಿಣಾಭಿಮುಖವಾಗಿ ಜಗತಿಯ ಮೇಲೆ ನಿರ್ಮಾಣಗೊಂಡಿರುವ ಈ ದೇವಾಲಯವು ಆಸನದ ವ್ಯವಸ್ಥೆಯಿರುವ ಎರಡು ಕಂಬಗಳ ಸುಂದರ ಮುಖಮಂಟಪ, ವಿಶಾಲ ನವರಂಗ ಮತ್ತು ಗರ್ಭಗುಡಿಗಳನ್ನು ಹೊಂದಿದೆ. ಹೊಳಪಿರುವ ಕರಿಕಲ್ಲಿನಿಂದ ನಿರ್ಮಿಸಲಾಗಿರುವ ಇಲ್ಲಿನ ಶಿವಲಿಂಗ ನಾಲ್ಕು ಅಡಿ ಎತ್ತರವಿದ್ದು ಆಕರ್ಷಕವಾಗಿದೆ ಎನ್ನಲಾಗುತ್ತದೆ.


ಗೋಪುರವನ್ನು ನಾಲ್ಕು ತಾಳಗಳಲ್ಲಿ ನಿರ್ಮಿಸಲಾಗಿದ್ದು, ಮೇಲಿರುವ ಪದ್ಮವು ಉಳಿದ ದೇವಾಲಯಗಳಿಗಿಂತ ಭಿನ್ನವಾಗಿದ್ದು ಅತ್ಯಾಕರ್ಷಕವಾಗಿದೆ. ಚನ್ನಕೇಶವ ದೇವಾಲಯದಂತೆ ಇಲ್ಲೂ ಹೊರಗೋಡೆಯಲ್ಲಿ ಕೆಲವು ಗೋಪುರಗಳನ್ನು ಕೆತ್ತಿದ್ದು ಬಿಟ್ಟರೆ ಬೇರೆ ಭಿತ್ತಿಚಿತ್ರಗಳಿಲ್ಲ. ಹೊರಗೋಡೆಯಲ್ಲಿ ಜಕ್ಕಣ್ಣ, ಸರೋಜ ಮತ್ತು ಈಶ್ವರ ಎಂಬ ಹೆಸರುಗಳಿವೆಯಂತೆ. ಇವು ದೇವಾಲಯ ಕೆತ್ತಿದ ಶಿಲ್ಪಿಗಳ ಹೆಸರುಗಳಿರಬಹುದು. ಸ್ವಲ್ಪ ಹುಡುಕಾಡಿದ ನನಗೆ ಆ ಹೆಸರುಗಳನ್ನು ಕೆತ್ತಿದ ಸ್ಥಳ ಸಿಗಲಿಲ್ಲ.


ಇಪ್ಪತ್ತು ವರ್ಷಗಳ ಮೊದಲು ಈ ದೇವಾಲಯಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದವು. ಚನ್ನಕೇಶವ ದೇವಾಲಯ ಜೀರ್ಣಾವಸ್ಥೆಗೆ ತಲುಪಿದ್ದು ಸುತ್ತಲೂ ಗಿಡಗಂಟಿಗಳಿಂದ ಆವೃತವಾಗಿತ್ತು. ಮೂಲೆ ಶಂಕರೇಶ್ವರ ದೇವಾಲಯ ಮಣ್ಣಿನಲ್ಲಿ ಹೂತುಹೋಗಿತ್ತು ಮತ್ತು ಮೇಲ್ಛಾವಣಿ ಕುಸಿದುಬಿದ್ದಿತ್ತು. ಸ್ಥಳೀಯರ ಪ್ರಯತ್ನದಿಂದ ಪ್ರಾಚ್ಯ ವಸ್ತು ಇಲಾಖೆ ಮತ್ತು ಧರ್ಮಸ್ಥಳದ ಧರ್ಮೋತ್ಠಾನ ಟ್ರಸ್ಟ್ ವತಿಯಿಂದ ಅನುದಾನ ಬಂದು ದೇವಾಲಯದ ಜೀರ್ಣೋದ್ಧಾರ ಸಾಧ್ಯವಾಗಿದೆ. ಎರಡೂ ದೇವಾಲಯಗಳನ್ನು ಸಂಪೂರ್ಣವಾಗಿ ಬಿಚ್ಚಿ ಮೂಲ ನಿರ್ಮಾಣಕ್ಕೆ ತಕ್ಕಂತೆ ಮರು ಜೋಡಿಸಿ ಗತವೈಭವ ಮರಳಿ ಬರುವಂತೆ ಮಾಡಲಾಗಿದೆ. ಆದರೂ ನನ್ನಂತಹ ಪ್ರವಾಸಿಗರು ಭೇಟಿ ನೀಡಿದಾಗ ದೇವಾಲಯಗಳಿಗೆ ಬೀಗ ಜಡಿದಿರುತ್ತದೆ. ಮೂಲೆ ಶಂಕರೇಶ್ವರ ದೇವಾಲಯದ ಪ್ರಾಂಗಣ ದನ, ನಾಯಿ ಮತ್ತು ಹಂದಿಗಳು ಅಲೆದಾಡುವ ತಾಣವಾಗಿದೆ. ಸಮೀಪದ ಮನೆಗಳಲ್ಲಿ ಕೇಳಿದರೆ ಆಸಕ್ತಿಯೇ ಇಲ್ಲದವರಂತೆ ಉತ್ತರಿಸುತ್ತಾರೆ. ದೇವಾಲಯಗಳ ವೈಭವ ಮರಳಿ ಬಂದಿದೆ ಆದರೆ ಸ್ಥಳೀಯರ ಮನ:ಸ್ಥಿತಿ ಬದಲಾಗದೇ ಇರುವುದು ವಿಪರ್ಯಾಸ.


ಉತ್ತರಾಭಿಮುಖವಾಗಿರುವ ಗಂಗಾಧರೇಶ್ವರ ದೇವಾಲಯಕ್ಕೂ ಬೀಗ ಹಾಕಲಾಗಿತ್ತು. ಈ ದೇವಾಲಯದಲ್ಲಿ ೩ ಪ್ರಮುಖ ಆಕರ್ಷಣೆಗಳಿವೆ. ಮೊದಲನೇದಾಗಿ ಕಾಣಬರುವುದು ತನ್ನದೇ ಆದ ಮಂಟಪದಲ್ಲಿ ಆಸೀನನಾಗಿರುವ ಬೃಹತ್ ಗಾತ್ರದ ಅದ್ಭುತ ನಂದಿ. ಈ ದೇವಾಲಯದ ಎರಡನೇ ವೈಶಿಷ್ಟ್ಯವೆಂದರೆ ಶಿವಲಿಂಗದ ಹಿಂದೆ ಕಮಾನಿನ ಆಕಾರದಲ್ಲಿ ಶಿವನ ಜಟೆಯನ್ನು ತೋರಿಸಲಾಗಿದ್ದು, ಅದರ ಕೆಳಗೆ ಪದ್ಮಾಸನದಲ್ಲಿ ಕುಳಿತಿರುವ ಗಂಗೆಯ ವಿಗ್ರಹವನ್ನು ಕೆತ್ತಲಾಗಿದೆ.

 

ಪ್ರಮುಖ ದ್ವಾರವನ್ನು ಹೊರತುಪಡಿಸಿ ದೇವಾಲಯದ ನವರಂಗಕ್ಕೆ ಎಡ ಪಾರ್ಶ್ವದಿಂದ ಇನ್ನೊಂದು ದ್ವಾರವಿದೆ. ಈ ದ್ವಾರವು ೨ ಕಂಬಗಳ ಮುಖಮಂಟಪವನ್ನು ಹೊಂದಿದ್ದು ಈ ಕಂಬಗಳಲ್ಲಿ ಕೆಲವು ಆಕರ್ಷಕ ಕೆತ್ತನೆಗಳಿವೆ. ಬೇಡರ ಕಣ್ಣಪ್ಪನ ಕೆತ್ತನೆಯೂ ಇಲ್ಲಿ ಕಂಡು ಬಂದದ್ದು ಒಂದು ಸೋಜಿಗ. (ನಿಲ್ಕುಂದದ ವೀರಭದ್ರೇಶ್ವರ ದೇವಾಲಯದಲ್ಲೂ ಬೇಡರ ಕಣ್ಣಪ್ಪನ ಕೆತ್ತನೆ ಇದೆ). ದೇವಾಲಯದ ೩ನೇ ಆಕರ್ಷಣೆಯೆಂದರೆ ಈ ದ್ವಾರದ ಮುಖಮಂಟಪದ ಛಾವಣಿಯಲ್ಲಿ ತೂಗುಹಾಕಲಾಗಿರುವ ದೊಡ್ಡ ಗಾತ್ರದ ಕಲ್ಲಿನ ಗಂಟೆ.


ತುರುವೇಕೆರೆಯನ್ನು ೧೩ನೇ ಶತಮಾನದ ಮಧ್ಯಭಾಗದಲ್ಲಿ ಒಂದು ಅಗ್ರಹಾರವನ್ನಾಗಿ (ಬಾಡಿಗೆ ಕೊಡುವ ಅವಶ್ಯಕತೆಯಿಲ್ಲದ ಹಳ್ಳಿ) ಹೊಸದಾಗಿ ನಿರ್ಮಿಸಿ ಅರ್ಚಕ ಸಮುದಾಯದವರಿಗೆ ವಾಸಿಸಲು ನೀಡಲಾಯಿತು. ಹೊಯ್ಸಳ ದಂಡನಾಯಕನಾಗಿದ್ದ ಸೋಮಣ್ಣನು ತನ್ನ ದೊರೆಯಾಗಿದ್ದ ೩ನೇ ನರಸಿಂಹನ ಮೇಲಿನ ಅಭಿಮಾನದಿಂದ ಈ ಸ್ಥಳಕ್ಕೆ ’ಸರ್ವಜ್ಞ ಶ್ರೀವಿಜಯ ನರಸಿಂಹಪುರ’ ಎಂಬ ಹೆಸರನ್ನಿಟ್ಟನು. (ತಿ.ನರಸೀಪುರ ತಾಲೂಕಿನ ಸೋಮನಾಥಪುರವನ್ನು ಅಗ್ರಹಾರವನ್ನಾಗಿ ಮಾಡಿ ಅಲ್ಲಿ ಪ್ರಸಿದ್ಧ ಕೇಶವ ದೇವಾಲಯವನ್ನು ಇಸವಿ ೧೨೫೮ರಲ್ಲಿ ನಿರ್ಮಿಸಿದವನು ಕೂಡಾ ಈ ಸೋಮಣ್ಣನೇ). ಶಿಲಾಶಾಸನವೊಂದರಲ್ಲಿ ಹೊಯ್ಸಳ ರಾಜ ೩ನೇ ನರಸಿಂಹನು, ಈ ’ಸರ್ವಜ್ಞ ಶ್ರೀವಿಜಯ ನರಸಿಂಹಪುರ’ ಎಂದು ಹೆಸರಿಟ್ಟ ನೂತನ ಅಗ್ರಹಾರಕ್ಕೆ ದಾನಗಳನ್ನು ನೀಡಿದ ವಿವರಗಳೂ ಇವೆ. ಈ ಅಗ್ರಹಾರ, ೩ನೇ ನರಸಿಂಹನ ರಾಣಿ ಲೋಕಾಂಬಿಕೆಯ ತವರೂರು ಕೂಡಾ ಆಗಿತ್ತು.

3 ಕಾಮೆಂಟ್‌ಗಳು:

  1. ಇತ್ತೀಚೆಗೆ ಈ ದೇವಾಲಯಗಳಿಗೆ ಭೇಟಿ ನೀಡಿದ್ದೆ.

    ಮೂಲೆ ಶಂಕರ ಹೆಸರು ಬರಲು ಕಾರಣ - ಅದು ಊರಿನ ಮೂಲೆಯಲ್ಲಿರುವುದು. ಇನ್ನೊಂದು ಕಾರಣ ಮೂಲ ಹೋಗಿ ಮೂಲೆ ಆಗಿದೆಯೆಂದು. ಇದು ದೇವಾಲಯದ ಪೂಜಾರಿ ಹೇಳಿದ್ದು.

    ಪ್ರತ್ಯುತ್ತರಅಳಿಸಿ
  2. ನಮ್ಮೂರಿಗೆ ಬಂದಿದರಲ್ಲ ಸಾರ್

    ಪ್ರತ್ಯುತ್ತರಅಳಿಸಿ