ಭಾನುವಾರ, ಸೆಪ್ಟೆಂಬರ್ 22, 2013

ಶಾಸನ ಸುಂದರಿ



ದೇವಾಲಯಗಳ ಬಗ್ಗೆ ಮಾಹಿತಿ ಹುಡುಕುವಾಗ ಅದೊಂದು ದಿನ ಈ ಸುಂದರಿಯ ಚಿತ್ರ ಸಿಕ್ಕಿತು. ಜಲಸಂಗಿಯ ಕಲ್ಮೇಶ್ವರ ದೇವಾಲಯದ ಹೊರಗೋಡೆಯಲ್ಲಿ ಅತ್ಯಾಕರ್ಷಕ ಭಂಗಿಯಲ್ಲಿ ನಿಂತಿರುವ ಈ ’ಶಾಸನ ಸುಂದರಿ’ಯನ್ನು ಕಣ್ಣಾರೆ ಕಾಣುವ ತವಕ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು.


ಆಕೆಯ ಚಿತ್ರ ನೋಡಿದ ಆರು ವರ್ಷಗಳ ಬಳಿಕ ಆಕೆಯನ್ನು ಕಣ್ಣಾರೆ ಕಾಣುವ ಸಮಯ ಬಂದೇ ಬಿಟ್ಟಿತು. ದೇವಾಲಯವಿರುವ ಪ್ರಾಂಗಣ ಪ್ರವೇಶಿಸಿದ ಕೂಡಲೇ ಆಕೆ ಕಣ್ಣಿಗೆ ಬಿದ್ದಳು. ವಾಹನದಿಂದ ಇಳಿದ ಕೂಡಲೇ ನೇರವಾಗಿ ಆಕೆಯ ಸನಿಹ ತೆರಳಿದೆ. ಅದೇನು ಮೈಮಾಟ, ಅದೇನು ಆಕರ್ಷಣೆ. ಆಕೆಯ ಕಣ್ಣುಗಳೇ ಕಾಣದಿದ್ದರೂ, ಆಕೆಯ ಸೌಂದರ್ಯವನ್ನು ನೋಡುಗ ಮೆಚ್ಚಬೇಕಾದರೆ ಶಿಲ್ಪಿಯ ಕೆತ್ತನೆ ಕ್ಷಮತೆ ಅದ್ಯಾವ ಮಟ್ಟದಿರಬಹುದೆಂದು ಊಹಿಸಬಹುದು.


ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನನ್ನು ಹೊಗಳುವ ಶಾಸನವೊಂದನ್ನು ಬರೆಯುವ ರೀತಿಯಲ್ಲಿ ಈ ಮದನಿಕೆಯನ್ನು ಕೆತ್ತಲಾಗಿರುವುದರಿಂದ ಈಕೆಗೆ ಶಾಸನ ಸುಂದರಿ ಎಂಬ ಹೆಸರು. ಈಕೆಯನ್ನು ಲೇಖನ ಸುಂದರಿ ಎಂದೂ ಕರೆಯಲಾಗುತ್ತದೆ. ಶಾಸನ ಬರೆಯುವ ರೀತಿಯಲ್ಲಿ ಮದನಿಕೆಯನ್ನು ತೋರಿಸಬೇಕಾದರೆ, ಹಲವಾರು ಆಯ್ಕೆಗಳನ್ನು ಪರಿಗಣಿಸಿದ ನಂತರ ಶಿಲ್ಪಿ ಈ ಭಂಗಿಯನ್ನು ಅಂತಿಮಗೊಳಿಸಿರಬಹುದು.


ಕೇಶವನ್ನು ಸುಂದರವಾಗಿ ವಿನ್ಯಸಿಸಿ ಅದಕ್ಕೊಂದು ಬಿಂದಿ, ಆಭರಣಗಳಿಂದ ಅಲಂಕರಿತ ತುರುಬು, ಕಿವಿಗೆ ವೃತ್ತಾಕಾರದ ಉತ್ತಮ ವಿನ್ಯಾಸವುಳ್ಳ ಬಂಗಾರದ ಬೆಂಡೋಲೆ, ತೋಳಿಗೆ ಮುತ್ತುರತ್ನಹವಳಖಚಿತ ಬಂದಿ, ಕೈಗೆ ಚಿನ್ನದ ಕಡಗ, ಬಲಗೈಯ ಹೆಬ್ಬೆರಳು ಮತ್ತು ತೋರುಬೆರಳುಗಳಲ್ಲಿ ವಜ್ರದುಂಗುರಗಳು, ಎದೆಯ ಮೇಲೆ ಇಳಿಬಿಟ್ಟಿರುವ ಮುತ್ತಿನ ಹಾರ, ಕಾಲಿಗೆ ಚಿನ್ನದ ಕಾಲಂದಿಗೆ, ಕಣಕಾಲಿಗೆ ಬೆಳ್ಳಿಯ ನೂಪುರ, ಹೀಗೆ ಈಕೆಯನ್ನು ಸರ್ವಾಭರಣಧಾರಿಣಿಯಾಗಿಸಿ ಕಂಗೊಳಿಸುವಂತೆ ಮಾಡಿದ್ದಾನೆ ಶಿಲ್ಪಿ.


ಈ ಕೆತ್ತನೆಯಲ್ಲಿರುವ ಪರಿಪೂರ್ಣತೆ ನನ್ನನ್ನು ಬಹಳ ಆಕರ್ಷಿಸಿತು. ಎಡಗಾಲು ನೇರವಾಗಿದ್ದು, ಬಲಗಾಲನ್ನು ಕೊಂಚವೇ ಬಗ್ಗಿಸಿ, ಹಿಮ್ಮಡಿ ನೆಲದಿಂದ ಸ್ವಲ್ಪ ಮೇಲಿರುವಂತೆ ಕೆತ್ತಲಾಗಿದೆ. ಹಾಗೆ ನಿಲ್ಲುವಾಗ ಸೊಂಟ ಪಡೆದುಕೊಳ್ಳುವ ತಿರುವು, ನಾಭಿಯ ಕೆಳಗಿನ ನೆರಿಗೆ, ಕೈಗಳನ್ನು ಅಷ್ಟು ಮೇಲಕ್ಕೆತ್ತಿ ಬರೆಯಬೇಕಾದರೆ ತೋರುವ ಕುಚದ ಭಾಗ, ಸುಂದರವಾಗಿ ತೋರಿಸಲಾಗಿರುವ ಎಡಗೈಯ ಹೆಬ್ಬೆರಳು ಹಾಗೂ ತೋರುಬೆರಳುಗಳ ಉಗುರುಗಳು, ಬಲಗೈಯ ಎರಡು ಬೆರಳುಗಳ ನಡುವಿರುವ ಲೇಖನಿ, ಶಾಸನವನ್ನು ಹಿಡಿದಿರುವ ರೀತಿ, ಹೀಗೆ ಎಲ್ಲೆಡೆ ನಿಖರತೆಯನ್ನು ಈ ಕೆತ್ತನೆ ಹೊಂದಿದೆ.


ಈ ಶಾಸನ ಸುಂದರಿಯು, "ಚಾಲುಕ್ಯ ವಂಶದ ವಿಕ್ರಮಾದಿತ್ಯ ಎಂಬ ರಾಜನು ಏಳು ದ್ವೀಪಗಳಿಂದ ಸಮಾವೇಶಗೊಂಡ ಭೂಮಿಯನ್ನು ತನ್ನದಾಗಿ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದಾನೆ" ಎಂದು ಶಾಸನದಲ್ಲಿ ಬರೆದಿದ್ದಾಳೆ. ಈ ದೇವಾಲಯದಲ್ಲಿ, ಈಕೆಯನ್ನು ಹೊರತುಪಡಿಸಿ ಇನ್ನೂ ೨೯ ಮದನಿಕೆಯರಿದ್ದಾರೆ. ಎಲ್ಲರೂ ಶಾಸನ ಸುಂದರಿಯಂತೆ ಸರ್ವಾಭರಣಧಾರಿಣಿಯಾಗಿದ್ದಾರೆ ಮತ್ತು ಅತ್ಯಾಕರ್ಷಕ ರೂಪ ಹೊಂದಿದ್ದಾರೆ. ಆದರೆ ನನ್ನನ್ನು ಅತಿಯಾಗಿ ಆಕರ್ಷಿಸಿದ್ದು ಈ ಶಾಸನ ಸುಂದರಿ.

7 ಕಾಮೆಂಟ್‌ಗಳು:

  1. This very beautiful temple with these wonderful celestial ladies. Wonderful narration.....

    ಪ್ರತ್ಯುತ್ತರಅಳಿಸಿ
  2. ರಾಜೇಶ್,

    ನಿಮ್ಮ ವರ್ಣನೆ ಶಾಸನ ಸುಂದರಿಗಿಂತಲೂ ಸುಂದರವಾಗಿದೆ.

    ಪ್ರತ್ಯುತ್ತರಅಳಿಸಿ
  3. ರಾಜೇಶರೆ,
    ಶಾಸನಸುಂದರಿಯ ಚಿತ್ರ ಹಾಗು ಲೇಖನಕ್ಕಾಗಿ ಧನ್ಯವಾದಗಳು.
    ನಮ್ಮ ಇತಿಹಾಸದ ಒಂದು ಮುಖದ ಮೇಲೆ ಈ ಶಿಲ್ಪ ಚೆಲ್ಲುವ ಬೆಳಕು ಅಪೂರ್ವವಾದದ್ದು.

    ಪ್ರತ್ಯುತ್ತರಅಳಿಸಿ
  4. ಧೀರಜ್‍ಅಮೃತಾ, ಲಕ್ಷ್ಮೀಪತಿ, ಸುನಾಥ್, ಸಿಂಧು,
    ಧನ್ಯವಾದ.

    ಪ್ರತ್ಯುತ್ತರಅಳಿಸಿ
  5. ನಮಸ್ಕಾರ . ನಿಮ್ಮ ಬ್ಲಾಗನ್ನು ಓದಿ (ನೋಡಿ ) ತುಂಬಾ ಖುಷಿ ಆಯಿತು . ನನ್ನದೊಂದು ವಿನಂತಿ . ಪ್ರತಿ ಸ್ಥಳದ ಮಾಹಿತಿ ವಿವರಣೆಯಲ್ಲಿ ಆ ಜಾಗಕ್ಕೆ ತಲುಪುವ ಮಾಹಿತಿ ನೀಡಿದಲ್ಲಿ ನಮಗೂ ಇಂಥಹ ರಮ್ಯ ಸ್ಥಳಗಳನ್ನು ಪ್ರತ್ಯಕ್ಷ ನೋಡಲು ಸಹಾಯವಾಗಬಹುದು . ಅಂದಹಾಗೆ ಈ ಶಾಸನ ಸುಂದರಿ ಇರುವುದು ಎಲ್ಲಿ !?.. ಧನ್ನ್ಯವಾದಗಳು

    ಪ್ರತ್ಯುತ್ತರಅಳಿಸಿ
  6. ಶ್ರೀನಾಥ್,

    ಶಾಸನ ಸುಂದರಿ ಎಲ್ಲಿದ್ದಾಳೆ ಎಂಬ ಬಗ್ಗೆ ಲೇಖನದಲ್ಲೇ ಮಾಹಿತಿಯಿದೆ! ಇನ್ನು ದಿಕ್ಕು, ದೂರ, ದಾರಿ, ಇವುಗಳ ಬಗ್ಗೆ ನಾನೆಂದೂ ಮಾಹಿತಿ ನೀಡುವುದಿಲ್ಲ. ಊರಿನ ಹೆಸರು ಹೇಳಿರುತ್ತೇನೆ. ಆಸಕ್ತಿಯಿದ್ದವರು ಹುಡುಕಿಕೊಂಡು ಹೋಗಬೇಕು.
    ಧನ್ಯವಾದ.

    ಪ್ರತ್ಯುತ್ತರಅಳಿಸಿ