ಗುರುವಾರ, ಡಿಸೆಂಬರ್ 20, 2012

ನಾರಾಯಣ ದೇವಾಲಯ - ಸವಡಿ


ಶಾಸನಗಳಲ್ಲಿ ಸವಡಿಯನ್ನು ’ಸಯ್ಯಡಿ’ ಹಾಗೂ ’ಸೈವಿಡಿ’ ಎಂದು ಕರೆಯಲಾಗಿದೆ. ಪಂಚತಂತ್ರದ ಲೇಖಕ ’ದುರ್ಗಸಿಂಹ’ ಇದೇ ಊರಿನವನಾಗಿದ್ದನು. ಇಲ್ಲಿ ಎರಡು ಪುರಾತನ ದೇಗುಲಗಳಿವೆ - ನಾರಾಯಣ ಮತ್ತು ಬ್ರಹ್ಮೇಶ್ವರ. ನಾರಾಯಣ ದೇವಾಲಯದೆಡೆಗೆ ಊರವರಿಗಿರುವ ಅಸಡ್ಡೆಯನ್ನು ಕಂಡು ಅಚ್ಚರಿಯಾಗದೇ ಇರದು. ದೇವಾಲಯ ಸ್ವಚ್ಛವಾಗಿಲ್ಲ. ದೇವಾಲಯದ ಒಂದು ಪಾರ್ಶ್ವ ಕಸಕಡ್ಡಿಗಳನ್ನು ಎಸೆಯುವ ಜಾಗ. ದೇವಾಲಯದ ಗೋಡೆಗಳು ’ಸೆಗಣಿ ರೊಟ್ಟಿ’ ಒಣಗಿಸಲು ಬಳಕೆಯಾಗುತ್ತಿವೆ. ದೇವಾಲಯವನ್ನು ಹಳ್ಳಿಗರು ತಮ್ಮ ವಸ್ತುಗಳನ್ನು ಇಡಲು ಬಳಸುತ್ತಾರೆ! ನವರಂಗದಲ್ಲಿ ಮರದ ರೀಪುಗಳು, ಮರಳು, ಸೆಗಣಿ ರೊಟ್ಟಿ, ಇತ್ಯಾದಿಗಳು ಕಂಡುಬಂದವು.


ದೇವಾಲಯದ ಒಳಗೆಲ್ಲಾ ಬಾವಲಿ ಹಿಕ್ಕೆಗಳ ರಾಶಿ. ಗರ್ಭಗುಡಿ ಪ್ರವೇಶಿಸಬೇಕಾದರೆ ಬಹಳ ಧೈರ್ಯ ಮಾಡಬೇಕು. ಒಮ್ಮೆಲೇ ೨೫ಕ್ಕೂ ಮಿಕ್ಕಿ ಬಾವಲಿಗಳು ಪಟಪಟ ಶಬ್ದ ಮಾಡುತ್ತಾ ನಮ್ಮೆಡೆ ಹಾರಿಬರುತ್ತವೆ. ಅವುಗಳ ಹಿಕ್ಕೆಗಳಿಂದ ನೆಲಕ್ಕೆ ಕಪ್ಪು ಹಾಸು ಹೊದಿಸಿದಂತೆ ಕಾಣುತ್ತಿತ್ತು. ದೇವಾಲಯದ ಒಳಗೆಲ್ಲ ವಾಸನೆ. ನಾರಾಯಣನ ಸುಂದರ ಮೂರ್ತಿಗೆ ಪೂಜೆ ನಡೆಯುವುದೇ ಇಲ್ಲ. ಪೂಜೆ ನಡೆಯುವುದಿಲ್ಲ ಎಂಬ ಕಾರಣದಿಂದ ಊರವರಿಗೆ ದೇವಾಲಯದ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ.


ಹೂವು, ಹಾಲು, ನೀರು ಇತ್ಯಾದಿಗಳಿಂದ ಅಭಿಷೇಕಗೊಳ್ಳಬೇಕಾದ ನಾರಾಯಣನಿಗೆ ಈಗ ಫುಲ್‍ಟೈಮ್ ಬಾವಲಿ ಹಿಕ್ಕೆಗಳ ಅಭಿಷೇಕ. ದೇವರಿಗೆ ಇಂತಹ ದುರ್ಗತಿ ಬಂದ ಊರು ಉದ್ಧಾರವಾದಿತೇ? ಸವಡಿಯಲ್ಲಿ ವಿದ್ಯುತ್ ಕೈಕೊಟ್ಟರೆ ನಾಲ್ಕಾರು ತಾಸು ಬಿಡಿ, ನಾಲ್ಕಾರು ದಿನಗಳವರೆಗೆ ಬರುವುದೇ ಇಲ್ಲ. ನೀರಿಗಂತೂ ೧೦ ತಿಂಗಳು ಹಾಹಾಕಾರ. ನಳ್ಳಿಯ ಮುಂದೆ ಕೊಡಪಾನಗಳ ಸಾಲು ಕಂಡರೆ ನೈಜ ಪರಿಸ್ಥಿತಿಯ ಅರಿವಾಗುವುದು. ನೀರು ಬಂದರೂ ಎಲ್ಲರಿಗೂ ಸಿಗುವುದೂ ಇಲ್ಲ. ಅರ್ಧ ಸಾಲು ಕೊಡಪಾನಗಳು ತುಂಬುವಷ್ಟರಲ್ಲಿ ನೀರು ಬಂದ್. ಹೀಗಿರುವಾಗ ದಿನಾಲೂ ಸ್ನಾನ ಮಾಡುವುದು ಅಸಾಧ್ಯ. ಕುಡಿಯಲಿಕ್ಕೇ ನೀರಿಲ್ಲದಿರುವಾಗ ಇನ್ನು ಕಕ್ಕಸು ತೊಳಿಯಲಿಕ್ಕೆ ಎಲ್ಲಿಂದ ಬರಬೇಕು ನೀರು? ಆದ್ದರಿಂದ ಊರಿನಲ್ಲಿ ಎಲ್ಲೆಲ್ಲಿ ಖುಲ್ಲಾ ಸ್ಥಳಗಳಿವೆಯೇ ಅವೇ ಕಕ್ಕಸುಗಳಾಗಿಬಿಟ್ಟಿವೆ. ಹಾಗಾಗಿ ಊರು ತುಂಬಾ ಅದೇ ವಾಸನೆ. ಈ ಸೀಮೆಯ ಹೆಚ್ಚಿನ ಊರುಗಳಲ್ಲಿ ಜನರ ಬವಣೆ ಮತ್ತು ಪರಿಸ್ಥಿತಿ ಹೀಗೇ ಇದೆ.


ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯಿರುವ ಈ ದೇವಾಲಯ, ಶಂಖಚಕ್ರಗದಾಪದ್ಮಧಾರಿಯಾಗಿರುವ ನಾರಾಯಣನ ಸುಮಾರು ೪ ಅಡಿ ಎತ್ತರದ ಆಕರ್ಷಕ ಮೂರ್ತಿಯನ್ನು ಹೊಂದಿದೆ. ನಾರಾಯಣನ ವಿಗ್ರಹವು ಪ್ರಭಾವಳಿ ಕೆತ್ತನೆ ಮತ್ತು ಇಕ್ಕೆಲಗಳಲ್ಲಿ ಶ್ರೀದೇವಿ ಹಾಗೂ ಭೂದೇವಿಯರನ್ನು ಹೊಂದಿದೆ. ಪ್ರಭಾವಳಿಯಲ್ಲಿ ದಶಾವತಾರವನ್ನು ತೋರಿಸಲಾಗಿದೆ ಎನ್ನಲಾಗುತ್ತದಾದರೂ ಅವೆಲ್ಲಾ ನಶಿಸಿಹೋಗಿರುವುದರಿಂದ ಏನೂ ಕಾಣಬರುವುದಿಲ್ಲ. ಕಾಯಕಲ್ಪವನ್ನು ಎದುರುನೋಡುತ್ತಿರುವಂತೆ ನಾರಾಯಣ ದಿಟ್ಟಿಸತೊಡಗಿದ್ದಾನೆ ಎಂದು ಭಾಸವಾಗತೊಡಗಿತ್ತು!


ಗರ್ಭಗುಡಿಯು ಉತ್ತಮ ಅಲಂಕಾರವುಳ್ಳ ಪಂಚಶಾಖಾ ದ್ವಾರವನ್ನು ಹೊಂದಿದೆ. ದ್ವಾರಕ್ಕೆ ಸುಣ್ಣ ಬಳಿಯಲಾಗಿರುವುದರಿಂದ ಅಲಂಕಾರವನ್ನು ಅಸ್ವಾದಿಸುವುದು ಅಸಾಧ್ಯವಾಗಿದೆ. ನಾಲ್ಕು ಕಂಬಗಳ ನವರಂಗವು ಮೊದಲು ಮೂರು ದ್ವಾರಗಳನ್ನು ಹೊಂದಿತ್ತು. ಈಗ ದಕ್ಷಿಣದ ದ್ವಾರ ಮಾತ್ರ ಇದೆ. ಉತ್ತರದ ದ್ವಾರವನ್ನು ಕಲ್ಲುಗಳನ್ನು ಪೇರಿಸಿ ಮುಚ್ಚಲಾಗಿದ್ದು, ದೇವಾಲಯದ ಈ ಪಾರ್ಶ್ವವನ್ನೀಗ ತಿಪ್ಪೆಗುಂಡಿಯನ್ನಾಗಿ ಬಳಸಲಾಗುತ್ತಿದೆ!

 
ಪೂರ್ವದ ದ್ವಾರವನ್ನು ಸಂಪೂರ್ಣವಾಗಿ ಮಾರ್ಪಾಡು ಮಾಡಿ ಇನ್ನೊಂದು ಗರ್ಭಗುಡಿಯನ್ನಾಗಿ ಪರಿವರ್ತಿಸಲಾಗಿದೆ. ಇದು ಶಿವಭಕ್ತರ ಕೆಲಸವಿದ್ದಿರಬೇಕು. ಯಾಕೆಂದರೆ ಈ ಗರ್ಭಗುಡಿಯಂತೆ ಭಾಸವಾಗದ ಮಾರ್ಪಾಡಿತ ಗರ್ಭಗುಡಿಯಲ್ಲಿ ಶಿವಲಿಂಗವನ್ನು ಇರಿಸಲಾಗಿದೆ. ಲಿಂಗದ ಮುಂದೆನೇ ನಂದಿಯಿದೆ. ಪಕ್ಕದಲ್ಲೇ ಸೆಗಣಿ ರೊಟ್ಟಿಗಳೂ ಇವೆ!


ನವರಂಗದಲ್ಲಿ ಉಮಾಮಹೇಶ್ವರ, ಗಣಪತಿ ಮತ್ತು ಸಪ್ತಮಾತೃಕೆಯರ ಮೂರ್ತಿಗಳಿವೆ. ಗೆಳೆಯ ಗೆಳತಿಯರು ಹೆಗಲ ಮೇಲೆ ಕೈಹಾಕಿ ಕುಳಿತಿರುವಂತೆ ಮಹೇಶ್ವರ ಮತ್ತು ಉಮೆ ಕುಳಿತಿರುವ ಈ ಮೂರ್ತಿಯನ್ನು ಕಂಡು ಸೋಜಿಗವೆನಿಸಿತು.


ನಾಲ್ಕೈದು ಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣಗೊಂಡಿರುವ ದೇವಾಲಯದ ಪ್ರಮುಖ ದ್ವಾರವು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದ್ದು ಐದು ತೋಳಿನದ್ದಾಗಿದೆ. ಪ್ರತಿ ತೋಳಿನಲ್ಲೂ ಅಲಂಕಾರಿಕ ಕೆತ್ತನೆಗಳಿವೆ. ಇಲ್ಲೂ ಸುಣ್ಣ ಬಳಿಯಲಾಗಿರುವುದರಿಂದ ನೋಟ ವಿರೂಪ.


ಊರಿನ ಐದು ಉಡಾಳ ಹುಡುಗರು ನನ್ನ ಜೊತೆಗೇ ಇದ್ದರು. ಇವರ ಪ್ರಕಾರ ಗರ್ಭಗುಡಿ ಹೊಕ್ಕರೆ ಕಣ್ಣು ಕಳಕೊಂಡೇ ಹೊರಬರಬೇಕಾಗುತ್ತದೆ! ’ಕಣ್ಣುಕುಟ್ಕ’ (ಬಾವಲಿ) ಕಣ್ಣನ್ನೇ ಕುಕ್ಕಿಬಿಡುತ್ತವೆ ಎಂದು ಅವರ ನಂಬಿಕೆ. ಹೆಸರೂ ಹಾಗೇ ಇಟ್ಟುಬಿಟ್ಟಿದ್ದಾರೆ! ಇದೇ ಕಾರಣದಿಂದ ನಾರಾಯಣನ ಸುತ್ತಲೂ ಬಿದ್ದಿರುವ ಹಿಕ್ಕೆಗಳನ್ನು ಯಾರೂ ಚೊಕ್ಕ ಮಾಡುತ್ತಿಲ್ಲ ಎಂಬ ಸಬೂಬು. ’ಅದೆಲ್ಲಾ ಸುಳ್ಳು. ಬಾವಲಿಗಳು ಕಣ್ಣು ಕುಕ್ಕೋದಿಲ್ಲ....’ ಎಂದು ನಾನು ಭಾಷಣ ಆರಂಭಿಸಿದಾಗ, ನನ್ನ ಮಾತನ್ನು ಮಧ್ಯದಲ್ಲೇ ನಿಲ್ಲಿಸಿದ ಅವರಲ್ಲೊಬ್ಬ (ನಾಮ ಹಾಕಿರುವ ಹುಡುಗ), ’ಸರ, ಧೈರ್ಯ ಇದ್ರೆ ನೀವೊಬ್ರೆ ಹೊಗ್‍ಬರ್ತೀರೇನ...?’ ಎಂದು ಸವಾಲೆಸೆದ. ಮರ್ಯಾದೆ ಪ್ರಶ್ನೆ. ಹೋಗಲೇಬೇಕಾಗಿತ್ತು. ಅಳುಕಿದರೂ ತೋರಗೊಡದೆ ನಾರಾಯಣನ ಸಮೀಪ ತೆರಳಿದೆ. ಗರ್ಭಗುಡಿ ಪ್ರವೇಶಿಸಿದ ಕೂಡಲೇ ಒಂದಷ್ಟು ಬಾವಲಿಗಳು ಹೊರಗೆ ಹಾರಿದವು. ಮಕ್ಕಳೆಲ್ಲಾ ’ಹೋ’ ಎಂದು ದೇವಾಲಯದಿಂದ ಹೊರಗೆ ಓಡಿಬಿಟ್ಟರು! ನಂತರ ನಾನು ಹೊರಬಂದಾಗ ಅವರು ನನ್ನ ಎರಡೂ ಕಣ್ಣುಗಳನ್ನು ದುರುಗುಟ್ಟಿ ನೋಡುತ್ತ ಪರೀಕ್ಷಿಸಿದ ಪರಿಯನ್ನು ನೆನೆದರೆ ನಗು ಬರುತ್ತದೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ.

4 ಕಾಮೆಂಟ್‌ಗಳು:

  1. ಪ್ರಿಯ ರಾಜೇಶ್,
    ಆಭರಣಗಳ ತೊಟ್ಟು ಮಿಂಚುವ ಅಲೆಮಾರಿಯನ್ನ ನೋಡುತ್ತಲೇ ಇದ್ದೆ. ಕಮೆಂಟು ಮಾಡಲು ಅವಕಾಶವಾಗಿರಲಿಲ್ಲ.
    ಈ ದೇವಾಲಯದ ಲೇಖನ ಓದಿ ಸುಮ್ಮನಿರಲಾಗಲಿಲ್ಲ. ಅದೇಕೋ ನನಗೆ ಈ away from the lime lights..and for that matter.. light itself" ದೇವಳಗಳು ತುಂಬ ಇಷ್ಟ.
    ಹಳೆಯ ಕಾಲದ ಮೂರ್ತ ರೂಪಗಳಂತೆ, ನಮ್ಮ ವರ್ತಮಾನದ ಓಟಕ್ಕೆ ಕಾಲು ಚೆಲ್ಲಿ ಪಕ್ಕಕ್ಕೆ ಸರಿದು ಕೂತವರಂತೆ ಇರುವ ಈ ಸ್ಥಾವರಗಳ ಅಭಿವ್ಯಕ್ತಿಯೇ ಬೇರೆ!
    ಈ ಫೋಟೋಗಳು ಚಂದ ಇದೆ ಅನ್ನಲೋ ಇವುಗಳ ದುಸ್ಥಿತಿಗೆ ದುಃಖಿಸಲೋ ಗೊತ್ತಾಗ್ತಾ ಇಲ್ಲ.
    ಎಷ್ಟು ವಿರೂಪಗೊಂಡಿದ್ದರೂ ನೀವು ಗಮನ ಸೆಳೆದ ಉಮಾ-ಮಹೇಶ್ವರರ ಕೆಳೆತನದ ಮೂರ್ತಿ ಒಪ್ಪವಿಟ್ಟು ದಿನದಿನವೂ ಪೂಜಿಸಿಕೊಳ್ಳುವ ಮೈ ಕಾಣದ ಹಾಗೆ ಹೂ ಹೇರಿಸಿಕೊಂಡಿರುವ ಮೂರ್ತಿಗಳಿಗಿಂತ ಅದೆಷ್ಟು ಚೆನ್ನಾಗಿದೆ ಗೊತ್ತೆ.
    ಇದನ್ನು ವಿರೂಪ ಮಾಡಿದವರ ಮನದ ಕತ್ತಲು ಎಷ್ಟಿತ್ತೋ
    ಏನೇ ಮಾಡು ನಮ್ಮ ಚಂದವನ್ನ ಬಿಟ್ಟುಕೊಡಲ್ಲ ಎಂದು ಕೂತಿರುವ ಇವರ ಅದಮ್ಯ ಚೆಲುವು ಅದಕ್ಕಿಂತ ಹೆಚ್ಚೆನಿಸುತ್ತದೆ. ಇಂತಹದನ್ನ ಕಂಡರಿಸಿದ ಆ ಶಿಲ್ಪಿಗೆ ಶರಣು.
    ಅವನ್ನ ನಮಗೆ ಹಂಚಿದ ನಿಮಗೆ ನಮಸ್ಕಾರ.

    ಪ್ರೀತಿಯಿಂದ,
    ಸಿಂಧು

    ಪ್ರತ್ಯುತ್ತರಅಳಿಸಿ
  2. Amazing write-up...!!!
    Especially last Paragraph was wonderful with lot of fun contents..
    Thanks for Sharing :-)

    ಪ್ರತ್ಯುತ್ತರಅಳಿಸಿ
  3. ಸಿಂಧು,
    ಅದೆಷ್ಟು ಸುಂದರ ಕಮೆಂಟ್ ಬರೆದಿದ್ದೀರಿ! ಓದೊದೇ ಸಂತೋಷ. ಮತ್ತೆ ಮತ್ತೆ ಓದಿದೆ. ’ಹಳೆಯ ಕಾಲದ ಮೂರ್ತ ರೂಪಗಳಂತೆ, ನಮ್ಮ ವರ್ತಮಾನದ ಓಟಕ್ಕೆ ಕಾಲು ಚೆಲ್ಲಿ ಪಕ್ಕಕ್ಕೆ ಸರಿದು ಕೂತವರಂತೆ ಇರುವ ಈ ಸ್ಥಾವರಗಳ ಅಭಿವ್ಯಕ್ತಿಯೇ ಬೇರೆ!’ ಈ ವಾಕ್ಯ ಬಹಳ ಇಷ್ಟವಾಯಿತು. ನಿಖರವಾಗಿ ಪ್ರಸಕ್ತ ಪರಿಸ್ಥಿತಿಯನ್ನು ವಿವರಿಸುವಂತಹ ಸುಂದರ ಸಾಲು. ಕೇವಲ ಚಿತ್ರ ನೋಡಿಯೇ ಉಮಾ-ಮಹೇಶ್ವರ ಮೂರ್ತಿಯ ಬಗ್ಗೆ ನೀವು ಬರೆದ ಮಾತುಗಳು ಇನ್ನಷ್ಟು ಇಷ್ಟವಾದವು. ಈ ಅದ್ಭುತ ಟಿಪ್ಪಣಿಗಾಗಿ ತುಂಬಾ ಧನ್ಯವಾದ.

    ರಾಕೇಶ್,
    ಧನ್ಯವಾದ.

    ಪ್ರತ್ಯುತ್ತರಅಳಿಸಿ