ಭಾನುವಾರ, ಆಗಸ್ಟ್ 12, 2012

ಚನ್ನಕೇಶವ ದೇವಾಲಯ - ತಂಡಗ


ತಂಡಗ ಚನ್ನಕೇಶವ ದೇವಾಲಯವನ್ನು ಇಸವಿ ೧೩೧೬ರಲ್ಲಿ ನಿರ್ಮಿಸಲಾಯಿತು. ಅದು ಕೊನೆಯ ಹೊಯ್ಸಳ ದೊರೆ ೩ನೇ ವೀರ ಬಲ್ಲಾಳನ ಆಳ್ವಿಕೆಯ ಸಮಯ. ನಿರ್ಮಿಸಿದವರು ಯಾರು ಎಂಬ ಬಗ್ಗೆ ಮಾಹಿತಿ ದೊರಕಲಿಲ್ಲ. ಜಗತಿಯ ಮೇಲೆ ನಿರ್ಮಾಣಗೊಂಡಿರುವ ಈ ಏಕಕೂಟ ದೇವಾಲಯವು ಪೂರ್ವಾಭಿಮುಖವಾಗಿದ್ದು ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿದೆ.


ಶಿಖರದ ಎಲ್ಲಾ ೩ ತಾಳಗಳಲ್ಲಿ ಕೆತ್ತನೆಗಳಿದ್ದು ವಿಷ್ಣುವಿನ ಹಲವು ರೂಪಗಳನ್ನು ತೋರಿಸಲಾಗಿದೆ. ಶಿಖರದ ಮೇಲಿನ ಕಲಶ ಇನ್ನೂ ಉಳಿದುಕೊಂಡಿದೆ. ಹಾನಿಗೊಂಡಿರುವ ಚನ್ನಕೇಶವನ ಮೂರ್ತಿಯೊಂದನ್ನು ದೇವಾಲಯದ ಹೊರಗೆ ಇರಿಸಲಾಗಿದೆ.


ದೇವಾಲಯ ಕೈಪಿಡಿಯನ್ನು ಹೊಂದಿದ್ದು ಇಲ್ಲಿಯೂ ಸುಂದರ ಕೆತ್ತನೆಗಳಿವೆ. ದೇವಾಲಯದ ಮುಂಭಾಗದ ಕೈಪಿಡಿ ಎಂದೋ ಬಿದ್ದುಹೋಗಿದ್ದು, ಅಲ್ಲೀಗ ತೇಪೆ ಸಾರಿಸಲಾಗಿದೆ.


ಕೊನೆಯ ಕೆಲವು ಹೊಯ್ಸಳ ದೊರೆಗಳ ಆಳ್ವಿಕೆಯ ಸಮಯದಲ್ಲಿ ಮುಖಮಂಟಪದ ವೈಭವೀಕರಣವನ್ನು ಕಡಿಮೆಗೊಳಿಸಿದಂತೆ ಕಂಡುಬರುತ್ತದೆ. ಇಲ್ಲೂ ಎರಡು ಕಂಬಗಳ ಸರಳ ಹೊರಚಾಚು ಮುಖಮಂಟಪವಿದ್ದು ದೇವಾಲಯದ ದ್ವಾರಕ್ಕೆ ವ್ಯಕ್ತಿಯೊಬ್ಬ ಉದ್ದಂಡ ನಮಸ್ಕಾರ ಮಾಡುವ ಉಬ್ಬುಶಿಲ್ಪವನ್ನು ನೆಲದಲ್ಲಿ ಕೆತ್ತಲಾಗಿದೆ. ಜಗತಿಯ ಮೆಟ್ಟಿಲುಗಳನ್ನೇರಿದ ಕೂಡಲೇ ಚೌಕಾಕಾರದ ಕಲ್ಲೊಂದು ಕಾಣಬರುವುದು. ಇದನ್ನು ’ಆಣೆ ಮಾಡುವ ಕಲ್ಲು’ ಎಂದು ಕರೆಯುತ್ತಾರೆ. ಈ ಉಬ್ಬುಶಿಲ್ಪ ಮತ್ತು ಆಣೆಕಲ್ಲಿನ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ಓದಬಹುದು.


ದೇವಾಲಯದ ಹೊರಗೋಡೆಯಲ್ಲಿ ಕೆಲವು ಭಿತ್ತಿಚಿತ್ರಗಳಿವೆ. ಇವುಗಳಲ್ಲಿ ಎಲ್ಲವೂ ವಿಷ್ಣುವಿನ ಹಲವು ರೂಪಗಳು. ಪ್ರಮುಖವಾದವು ಲಕ್ಷ್ಮೀನರಸಿಂಹನ ಮತ್ತು ಉಗ್ರನರಸಿಂಹನ ಕೆತ್ತನೆಗಳು.


ಚನ್ನಕೇಶವನಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಊರಿನ ೨ ಕುಟುಂಬಗಳು ಪೂಜೆಯ ಜವಾಬ್ದಾರಿಯನ್ನು ಹೊತ್ತಿದ್ದು ಒಂದು ವರ್ಷದ ಅವಧಿಯ ನಂತರ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ಬಿಟ್ಟುಕೊಡುತ್ತಾರೆ. ದೇವಾಲಯದ ಸಮೀಪದವರೆಗೂ ಮನೆಗಳಿದ್ದರೂ ಒಳಗೆಲ್ಲಾ ಸ್ವಚ್ಛವಾಗಿದೆ. ದಿನಾಲೂ ದೇವಾಲಯವನ್ನು ಒರಸಿ ಸ್ವಚ್ಛಗೊಳಿಸಲಾಗುತ್ತದೆ. ನವರಂಗದ ಕಂಬಗಳಿಗೆ, ಅಂತರಾಳ ಮತ್ತು ಗರ್ಭಗುಡಿಯ ದ್ವಾರಗಳಿಗೆ ಸುಣ್ಣ ಬಳಿದಿರುವುದನ್ನು ಪ್ರಾಚ್ಯ ವಸ್ತು ಇಲಾಖೆ ಬಹಳ ಶ್ರಮವಹಿಸಿ ಹೆಚ್ಚಿನ ಮಟ್ಟಿಗೆ ಅಳಿಸಿಹಾಕುವಲ್ಲಿ ಯಶಸ್ವಿಯಾಗಿದೆ.


ಅಂತರಾಳದ ದ್ವಾರಕ್ಕೆ ಕಲಾತ್ಮಕ ಲತಾತೋರಣಗಳಿದ್ದು ಇಬ್ಬದಿಗಳಲ್ಲಿ ಜಾಲಂಧ್ರಗಳಿವೆ. ಮೇಲ್ಗಡೆ ಮಕರತೋರಣದಿಂದ ಅಲಂಕೃತ ಗಜಲಕ್ಷ್ಮೀಯ ಕೆತ್ತನೆಯಿದೆ.


ಗರ್ಭಗುಡಿಯ ದ್ವಾರವು ಐದು ತೋಳುಗಳನ್ನು ಹೊಂದಿದ್ದು ಕೆಳಗಡೆ ಶಂಖಚಕ್ರಗದಾಪದ್ಮಧಾರಿಯಾಗಿರುವ ವಿಷ್ಣುವಿನ ಕೆತ್ತನೆಯಿದೆ. ವಿಷ್ಣುವಿನ ಇಕ್ಕೆಲಗಳಲ್ಲಿ ದೇವಿಯರ ಕೆತ್ತನೆಯಿದೆ(ಭೂದೇವಿ ಮತ್ತು ಶ್ರೀದೇವಿ ಆಗಿರಬಹುದು). ಮೇಲ್ಗಡೆ ಗರುಡನ ಕೆತ್ತನೆಯಿದೆ. ಗರುಡನ ಕೆತ್ತನೆಯ ಮೇಲಿನ ಸಾಲಿನಲ್ಲಿ ೫ ಸಣ್ಣ ಗೋಪುರಗಳನ್ನು ಕೆತ್ತಲಾಗಿದೆ. ಗರುಡಪೀಠದ ಮೇಲಿರುವ ಚನ್ನಕೇಶವನ ವಿಗ್ರಹವನ್ನು ಚೆನ್ನಾಗಿ ಅಲಂಕರಿಸಲಾಗಿತ್ತು. ಪೀಠದ ಮುಂಭಾಗದಲ್ಲಿ ಗರುಡನ ಕೆತ್ತನೆಯ ’ನೂತನ ಆವೃತ್ತಿ’ಯನ್ನು ಗ್ರಾಮಸ್ಥರೇ ಅಳವಡಿಸಿದ್ದಾರೆ!


ದೇವಾಲಯದಲ್ಲಿರುವ ೩ ದ್ವಾರಗಳ ಲಲಾಟಗಳಲ್ಲಿ ೩ ಪ್ರತ್ಯೇಕ ಕೆತ್ತನೆಗಳಿವೆ ಎಂಬುವುದು ಗಮನಾರ್ಹ. ಪ್ರಮುಖ ದ್ವಾರದ ಲಲಾಟದಲ್ಲಿ ಶಾಸನವೊಂದನ್ನು ಕೆತ್ತಲಾಗಿದೆ (ಹೆಚ್ಚಾಗಿ ಈ ಸ್ಥಳದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿರುವುದು ಕಂಡುಬರುತ್ತದೆ). ಅಂತರಾಳದ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ ಮತ್ತು ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಗರುಡನ ಕೆತ್ತನೆಯಿದೆ.


ಹಿಂದೆ ತಂಡಗವು ಒಂದು ಅಗ್ರಹಾರವಾಗಿತ್ತು (ಬಳುವಳಿಯಾಗಿ ಬ್ರಾಹ್ಮಣರಿಗೆ ನೀಡುವ ಊರು. ತೆರಿಗೆ ಮತ್ತು ಬಾಡಿಗೆಗಳಿಂದ ಮುಕ್ತವಾಗಿರುವ ಊರು). ಶಾಸನಗಳಲ್ಲಿ ತಂಡಗವನ್ನು ’ಶಂಕರನಾರಾಯಣಪುರ’ ಎಂದು ಕರೆಯಲಾಗಿದೆ. ಪುರಾತನ ಭಾರತದ ಬಹು ಪ್ರಸಿದ್ಧ ದೊರೆ ಶಾಲಿವಾಹನ ತಂಡಗದಲ್ಲೇ ಹುಟ್ಟಿದ್ದನಂತೆ. ನಂಬಲಸಾಧ್ಯ! ಯಾವುದೇ ಸಾಕ್ಷಿ ಪುರಾವೆ ಎಲ್ಲೂ ದೊರಕಿಲ್ಲ.

4 ಕಾಮೆಂಟ್‌ಗಳು:

  1. ರಾಜೇಶ್, ತಂಡಗಕ್ಕೆ ಯಾವಾಗ ಹೋಗಿದ್ರಿ?? ಮೊದಲೇ ವಿಷ್ಯ ತಿಳಿಸಿದ್ದರೆ ನಿಮಗೆ ಅಲ್ಲೇ ಊಟ ಮತ್ತು ಉಳಿಯುವ ವ್ಯವಸ್ಥೆ ಮಾಡ್ತಾ ಇದ್ದೆ... ನಮ್ಮ ಸೋದರತ್ತೆ ಮನೆ ಆ ದೇವಸ್ಥಾನದ ಗರುಡಗಂಭದ ಮುಂದೆಯೇ ಇರೋದು...

    ಪ್ರತ್ಯುತ್ತರಅಳಿಸಿ
  2. ಪ್ರಶಾಂತ್,
    ನಾನು ತೆರಳಿದ್ದು ಎಪ್ರಿಲ್ ೨೦೧೧ರಂದು. ನಿಮ್ಮ ಸೋದರತ್ತೆ ಮನೆ ಅಲ್ಲೇ ಇರುವುದರ ಬಗ್ಗೆ ನನಗೆ ತಿಳಿದಿತ್ತು. ಧನ್ಯವಾದ.

    ಪ್ರತ್ಯುತ್ತರಅಳಿಸಿ
  3. ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ ... ನನ್ನದೊಂದು ಪ್ರಶ್ನೆ ಇದೆ ನೀವು ಎಲ್ಲ ದೇವಾಲಯಗಳಿಗೆ ಹೋದಾಗ ಹಳೆಗನ್ನದದಲ್ಲಿರುವ ಶಾಸನಗಳನ್ನು ಹೇಗೆ ಓದುತ್ತೀರಿ ?
    ಹಳೆಗನ್ನಡ ನಿಮಾಗೆ ಗೊತ್ತ ? ನಾನೂ ಇಂಥಹ ದೇವಸ್ಥಾನಗಳಿಗೆ ಹೋದಾಗ ಓದಲು ಪ್ರಯತ್ನಿಸುತ್ತೇನೆ ಆದರೆ ಕೆಲವು ಅಕ್ಷರಗಳು ಮಾತ್ರ ಓದಲು ಸಾಧ್ಯವಾಗುತ್ತದೆ :( ದಯವಿಟ್ಟೂ ತಿಳಿಸಿ :)

    ಪ್ರತ್ಯುತ್ತರಅಳಿಸಿ
  4. ಶ್ರೀನಾಥ್,
    ನನಗೆ ಹಳೆಗನ್ನಡ ಓದಲು ಬರುವುದಿಲ್ಲ!!! ನೀವು ಅದ್ಯಾಕೆ ಹಾಗೆ ಗ್ರಹಿಸಿದರೋ ನಾನರಿಯೆ. ಧನ್ಯವಾದ.

    ಪ್ರತ್ಯುತ್ತರಅಳಿಸಿ