ಭಾನುವಾರ, ಜುಲೈ 08, 2012

ಈಶ್ವರ ದೇವಾಲಯ - ಹಂಸಭಾವಿ


ಹಂಸಭಾವಿ ಮೂಲಕ ಮುಂದಿನ ಊರಿಗೆ ಹೋಗಬೇಕಾಗಿತ್ತು. ನಾನು ತೊಡೆಯ ಮೇಲೆ ನಕಾಶೆ ಹರಡಿ ಅದರಲ್ಲಿ ಮಗ್ನನಾಗಿದ್ದೆ. ನನ್ನ ಚಾಲಕ ಟ್ಯಾಕ್ಸಿ ನಿಲ್ಲಿಸಿದ. ’ಏನಾಯ್ತು’ ಎಂದು ಕೇಳಿದರೆ, ’ನೋಡಿ, ಹಳೇ ದೇವಾಲಯ’ ಎಂದು ರಸ್ತೆಯ ಮತ್ತೊಂದು ಮಗ್ಗುಲಲ್ಲಿ ಮರದ ನೆರಳಿನಲ್ಲಿರುವ ಈಶ್ವರ ದೇವಾಲಯದೆಡೆ ಕೈತೋರಿಸಿದರು. ಹಂಸಭಾವಿಯಲ್ಲಿ ಹಳೇ ದೇವಾಲಯವಿದ್ದ ಮಾಹಿತಿಯೇ ನನ್ನಲ್ಲಿರಲಿಲ್ಲ. ಅನಿರೀಕ್ಷಿತವಾಗಿ ಇನ್ನೊಂದು ದೇವಾಲಯವನ್ನು ನೋಡಿದಂತಾಯಿತು.


ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಲಿಲ್ಲ. ಇಸವಿ ೧೨೦೮ರ ವೀರಗಲ್ಲೊಂದನ್ನು ದೇವಾಲಯದ ಮುಂಭಾಗದಲ್ಲಿ ಕಾಣಬಹುದು. ದೊರೆತಿರುವ ಶಾಸನವೊಂದನ್ನೂ ಅಲ್ಲಿರಿಸಲಾಗಿದೆ. ಕೆರೆಯ ತಟದಲ್ಲಿರುವ ದೇವಾಲಯದ ಮೇಲೆಲ್ಲಾ ಹುಲ್ಲು ಬೆಳೆದಿದೆ.


ದೇವಾಲಯವು ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಮೊದಲು ಮುಖಮಂಟಪ ಇದ್ದಲ್ಲಿ ಈಗ ನಾಲ್ಕು ಕಂಬಗಳನ್ನು ಛಾವಣಿಗೆ ಆಸರೆಯಾಗಿ ನೀಡಲಾಗಿದೆ.


ದೇವಾಲಯವನ್ನು ಪೂರ್ವದಿಂದ ಮತ್ತು ದಕ್ಷಿಣದಿಂದ ಪ್ರವೇಶಿಸಬಹುದು. ದಕ್ಷಿಣದ ದ್ವಾರ ನೇರವಾಗಿ ನವರಂಗಕ್ಕೇ ತೆರೆದುಕೊಳ್ಳುತ್ತದೆ. ಪೂರ್ವದಲ್ಲಿ ಮುಖಮಂಟಪ ಕಣ್ಮರೆಯಾಗಿರುವುದರಿಂದ, ಮುಖಮಂಟಪದಿಂದ ನವರಂಗಕ್ಕೆ ತೆರೆದುಕೊಳ್ಳುತ್ತಿದ್ದ ದ್ವಾರವೇ ಈಗ ದೇವಾಲಯದ ಪೂರ್ವದ ದ್ವಾರವಾಗಿದೆ.


ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ಇಲ್ಲಿರುವ ಮೂರು ದೇವಕೋಷ್ಠಗಳಲ್ಲಿ ಗಣೇಶ, ಮಹಿಷಮರ್ದಿನಿ ಮತ್ತು ನನ್ನಿಂದ ಗುರುತುಹಿಡಿಯಲಾಗದ ವಿಗ್ರಹವೊಂದನ್ನು ಇರಿಸಲಾಗಿದೆ. ದೇವಾಲಯದ ದಕ್ಷಿಣದ ದ್ವಾರದ ಇಕ್ಕೆಲಗಳಲ್ಲಿ ಕಕ್ಷಾಸನವಿದೆ. ಈ ಕಕ್ಷಾಸನಕ್ಕೆ ತಾಗಿಕೊಂಡೇ ಸಪ್ತಮಾತೃಕೆಯ ವಿಗ್ರಹವನ್ನು ಇಡಲಾಗಿದೆ.


ಅಂತರಾಳದ ಮತ್ತು ಗರ್ಭಗುಡಿಯ ದ್ವಾರದ ಶಾಖೆಗಳಲ್ಲಿ ಯಾವುದೇ ಅಲಂಕಾರಗಳಿಲ್ಲ. ಎರಡೂ ದ್ವಾರಗಳ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕೆತ್ತಲಾಗಿದೆ. ಅಂತರಾಳದ ದ್ವಾರಕ್ಕೆ ಜಾಲಂಧ್ರಗಳ ರಚನೆಯಿದೆ.


ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಮುಖಮಾಡಿ ನಂದಿ ಅಂತರಾಳದಲ್ಲಿ ಆಸೀನನಾಗಿದ್ದಾನೆ. ಅಂತರಾಳದ ದ್ವಾರದ ತಳಭಾಗದಲ್ಲಿ ಇಬ್ಬದಿಗಳಲ್ಲಿ ತ್ರಿಶೂಲ ಮತ್ತು ಢಮರುಗಧಾರಿಯಾಗಿರುವ ಶಿವನ ಮಾನವರೂಪವನ್ನು ಕೆತ್ತಲಾಗಿದೆ. ಶಿವನ ಬದಿಯಲ್ಲಿ ಚಾಮರಧಾರಿಣಿಯೊಬ್ಬಳಿದ್ದಾಳೆ (ಪಾರ್ವತಿ ಇರಬಹುದು).


ಮುಖ್ಯರಸ್ತೆಯ ಬದಿಯಲ್ಲೇ ಇರುವ ದೇವಾಲಯ ಪ್ರಾಚ್ಯ ವಸ್ತು ಇಲಾಖೆಯ ಸುಪರ್ದಿಗೆ ಒಳಪಟ್ಟಿದೆ.

4 ಕಾಮೆಂಟ್‌ಗಳು: