ವಿಶ್ವನಾಥ ದೇವಾಲಯವನ್ನು ಕಾಶಿ ವಿಶ್ವನಾಥ ದೇವಾಲಯವೆಂದೂ ಕರೆಯುತ್ತಾರೆ. ಮುಖಮಂಟಪ, ಆಯತಾಕಾರದ ಸಣ್ಣ ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯವಿದು.
ಮೂಲ ಮುಖಮಂಟಪವು ೧೨ ಕಂಬಗಳನ್ನು ಹೊಂದಿದ್ದು, ಮುಂಭಾಗದ ನಾಲ್ಕು ಕಂಬಗಳು ಬಿದ್ದುಹೋಗಿರುವ ಕುರುಹುಗಳಿವೆ. ಈಗ ಇರುವ ೮ ಕಂಬಗಳಲ್ಲಿ ನಡುವೆ ಇರುವ ನಾಲ್ಕು ಕಂಬಗಳಿಗೆ ಪ್ರಭಾವಳಿ ಕೆತ್ತನೆಯಿದ್ದರೂ ಅವೆಲ್ಲಾ ನಶಿಸಿ ಹೋಗುತ್ತಿವೆ. ಮುಖಮಂಟಪವನ್ನು ಒಳಗೊಂಡು ದೇವಾಲಯದ ಒಳಗೆಲ್ಲಾ ತುಂಬಾ ಕೆಟ್ಟದಾಗಿ ಸುಣ್ಣಬಣ್ಣ ಬಳಿಯಲಾಗಿರುವುದರಿಂದ ಕೆತ್ತನೆಗಳ ನೈಜ ರೂಪ ಮಾಸಿದೆ.
ಈ ನಾಲ್ಕು ಕಂಬಗಳ ಪೈಕಿ ಎರಡು ಕಂಬಗಳ ಶಿರಭಾಗದಲ್ಲಿ ವೃತ್ತಾಕಾರದ ಕಬ್ಬಿಣದ ಸಲಕರಣೆಯನ್ನು ಜೋಡಿಸಿರುವುದು ವಿಸ್ಮಯಕಾರಿಯಾಗಿದೆ. ಅದರ ಮಹತ್ವ ನನಗೆ ತಿಳಿಯಲಿಲ್ಲ. ಇದು ಎಲ್ಲೂ ಕಾಣದ ವೈಶಿಷ್ಟ್ಯ. ಆ ಕಬ್ಬಿಣದ ’ರಿಂಗ್’ಗಳನ್ನು ಅಲ್ಲಿ ಹೇಗೆ ಇರಿಸಲಾಯಿತು ಎಂಬುವುದೇ ಆಶ್ಚರ್ಯ.
ಈ ದೇವಾಲಯದಲ್ಲಿ ನಂದಿಯ ಸುಳಿವಿಲ್ಲ. ಗರ್ಭಗುಡಿಯಲ್ಲಿ ಬಹಳ ಸಣ್ಣ ಶಿವಲಿಂಗವಿದೆ. ಗರ್ಭಗುಡಿಯು ಚತುರ್ಶಾಖಾ ದ್ವಾರವನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮೀಯಿದ್ದಾಳೆ. ದ್ವಾರದ ಶಾಖೆಗಳಲ್ಲಿ ನೃತ್ಯಜೋಡಿಯ, ಸಂಗೀತ/ವಾದ್ಯಗಾರರ ಮತ್ತು ಅಲಂಕಾರಿಕ ಕೆತ್ತನೆಗಳಿರುವುದನ್ನು ಕಾಣಬಹುದು. ಆದರೆ ಈ ಕೆತ್ತನೆಗಳಿಗೆ ಬಹಳ ಅಸಹ್ಯವಾಗಿ ಬಣ್ಣವನ್ನು ಹಚ್ಚಲಾಗಿದೆ. ಮೊದಲು ಯಾವುದೋ ಬಣ್ಣ ಹಚ್ಚಿ ನಂತರ ಅದರ ಮೇಲೆಯೇ ಸುಣ್ಣವನ್ನು ಬಳಿದು ಸಂಪೂರ್ಣ ವಿರೂಪಗೊಳಿಸಲಾಗಿದೆ.
ಗಜಲಕ್ಷ್ಮೀಯ ಆಕರ್ಷಕ ಕೆತ್ತನೆಯ ಮೇಲೆ ಮನಬಂದಂತೆ ಬಣ್ಣಗಳ ಎರಚಾಟ ಮಾಡಲಾಗಿದೆ. ಹೂಲಿಯಲ್ಲಿ ವಿಕೃತ ’ಹೋಲಿ’! ಅದೂ ಪುರಾತನ ದೇವಾಲಯಗಳ ಕೆತ್ತನೆಗಳ ಜೊತೆಗೆ.
ವಿಶ್ವನಾಥ ದೇವಾಲಯದ ಇನ್ನೊಂದು ವೈಶಿಷ್ಟ್ಯವೆಂದರೆ, ಹೊರಗೋಡೆಯ ಮೂರೂ ಪಾರ್ಶ್ವಗಳಲ್ಲಿ ತಲಾ ಒಂದರಂತೆ ಬಳಸಲಾಗಿರುವ ವೃತ್ತಾಕಾರದ ಉದ್ದನೆಯ ಸ್ತಂಭ. ಏನಾದರೂ ಹೊಸತನವಿರಲಿ ಎಂಬಷ್ಟಕ್ಕೆ ಮಾತ್ರ ಈ ಕಂಬಗಳನ್ನು ವೃತ್ತಾಕಾರವಾಗಿ ರಚಿಸಿರಬಹುದೇ ವಿನ: ಬೇರೆ ಮಹತ್ವವೇನೂ ಇರಲಾರದು.
ದೇವಾಲಯದ ಶಿಖರ ಬಿದ್ದುಹೋಗಿದೆ. ಶಿಖರದ ತಳಭಾಗ ಆಂದರೆ ಮೊದಲನೇ ಮತ್ತು ಭಾಗಶ: ಎರಡನೇ ತಾಳಗಳು ಮಾತ್ರ ಉಳಿದುಕೊಂಡಿವೆ. ಹೊರಗೋಡೆಯಲ್ಲಿ ಕೆಲವು ಮಿನಿ ಗೋಪುರಗಳನ್ನು ಕೆತ್ತಲಾಗಿದ್ದು ಇವುಗಳಲ್ಲಿ ಕೆಲವು ಒಂದು ಸ್ತಂಭವನ್ನು ಹೊಂದಿದ್ದರೆ ಉಳಿದವು ಎರಡು ಸ್ತಂಭಗಳನ್ನು ಹೊಂದಿವೆ.
ವಿಶ್ವನಾಥನ ಸಮೀಪವೇ ಭೀಮೇಶ್ವರನಿದ್ದಾನೆ. ರಚನೆಯಲ್ಲಿ ವಿಶ್ವನಾಥ ದೇವಾಲಯವನ್ನೇ ಹೋಲುವ ಈ ದೇವಾಲಯವು ಆಯತಾಕಾರದ ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ದೇವಾಲಯಕ್ಕೆ ಹೊರಚಾಚು ಮುಖಮಂಟಪವಿದ್ದ ಕುರುಹು ಕಾಣಬರುತ್ತದೆ. ಈಗ ಮುಖಮಂಟಪದ ನೆಲಹಾಸು ಮಾತ್ರ ಉಳಿದುಕೊಂಡಿದೆ. ನವರಂಗದಲ್ಲಿ ನಾಲ್ಕು ಖಾಲಿ ದೇವಕೋಷ್ಠಗಳಿವೆ. ಅಂತರಾಳದಲ್ಲಿ ನಂದಿಯ ಮೂರ್ತಿಯಿದೆ ಮತ್ತು ಗರ್ಭಗುಡಿಯಲ್ಲಿರುವ ಭೀಮೇಶ್ವರ ಹೆಸರಿನ ಲಿಂಗವನ್ನು ಆಕರ್ಷಕ ಪೀಠದ ಮೇಲಿರಿಸಲಾಗಿದೆ.
ಈ ದೇವಾಲಯದಲ್ಲೂ ಭರ್ಜರಿಯಾಗಿಯೇ ’ಹೋಲಿ’ ಆಡಲಾಗಿದೆ. ಶಿವಲಿಂಗ (ಪೀಠವನ್ನೂ ಬಿಟ್ಟಿಲ್ಲ) ಮತ್ತು ನಂದಿಯನ್ನು ಬಿಟ್ಟು ಉಳಿದೆಲ್ಲೆಡೆ ಸುಣ್ಣಬಣ್ಣಗಳದ್ದೇ ದರ್ಬಾರು. ಆಕರ್ಷಕ ಕೆತ್ತನೆಗಳನ್ನೊಳಗೊಂಡಿರುವ ಗರ್ಭಗುಡಿಯ ಚತುರ್ಶಾಖಾ ದ್ವಾರದ ದುರವಸ್ಥೆ ನೋಡಿದರೆ ಖೇದವಾಗುತ್ತದೆ.
ದೇವಾಲಯದ ಶಿಖರ ಎಂದೋ ಕಳಚಿಬಿದ್ದಿದೆ. ಹೊರಗೋಡೆಯಲ್ಲಿ ಸುಂದರ ಮಂಟಪದ ರಚನೆಯಿರುವ ಮೂರು ಖಾಲಿ ದೇವಕೋಷ್ಠಗಳಿವೆ. ಹಲವು ಮಕರತೋರಣಗಳನ್ನು, ಸಣ್ಣ ಗೋಪುರಗಳನ್ನು ಮತ್ತು ಒಂದೆರಡು ಕೆತ್ತನೆಗಳನ್ನು ಕೂಡಾ ಇಲ್ಲಿ ಕಾಣಬಹುದು.
ಈ ದೇವಾಲಯವನ್ನು ಊರವರು ’ಕಲ್ಲೇಶ್ವರ’ ಎಂದು ಕರೆಯುತ್ತಾರೆ. ಕಲ್ಲೇಶ್ವರನಿಗೆ ದೊಡ್ಡ ಪ್ರಮಾಣದಲ್ಲಿ ವಾರ್ಷಿಕ ಜಾತ್ರೆಯೂ ನಡೆಯುವುದರಿಂದ ಈ ದೇವಾಲಯಕ್ಕೆ ಬಣ್ಣ ಬಳಿಯಲಾಗಿದೆ. ಕಲ್ಲೇಶ್ವರ ದೇವಾಲಯ ಇರುವ ಪ್ರಾಂಗಣದಲ್ಲೇ ಇವೆ ಎಂಬ ಕಾರಣಕ್ಕೆ ವಿಶ್ವನಾಥ ಮತ್ತು ಅಗಸ್ತ್ಯೇಶ್ವರ ದೇವಾಲಯಗಳಿಗೂ ಬಣ್ಣ ಬಳಿಯಲಾಗಿದೆ.
ಅಗಸ್ತ್ಯೇಶ್ವರ ದೇವಾಲಯವು ಅಂತರಾಳ ಮತ್ತು ಗರ್ಭಗುಡಿಯನ್ನು ಮಾತ್ರ ಹೊಂದಿದೆ. ನವರಂಗ ಮತ್ತು ಮುಖಮಂಟಪಗಳು ಕುರುಹುಗಳೇ ಇಲ್ಲದಂತೆ ನಾಶವಾಗಿವೆ. ಅಂತರಾಳದಲ್ಲಿ ನಂದಿಯ ಮೂರ್ತಿಯಿದೆ. ಅಂತರಾಳದ ದ್ವಾರಕ್ಕೆ ಜಾಲಂಧ್ರಗಳ ರಚನೆಯಿರುವುದು ಮತ್ತು ದ್ವಾರದ ಇಕ್ಕೆಲಗಳಲ್ಲಿ ದೇವಕೋಷ್ಠಗಳಿರುವುದು ನವರಂಗ ಇದ್ದ ಸ್ಪಷ್ಟ ಸಾಕ್ಷಿಯನ್ನು ಒದಗಿಸುತ್ತವೆ. ನವರಂಗ ಇದ್ದ ಬಳಿಕ ಮುಖಮಂಟಪವೂ ಇದ್ದಿರಬಹುದು ಎನ್ನುವುದು ನನ್ನ ಊಹೆ ಮಾತ್ರ.
ಗರ್ಭಗುಡಿಯು ಯಾವುದೆ ಕೆತ್ತನೆಗಳಿಲ್ಲದ ಸರಳ ತ್ರಿಶಾಖಾ ದ್ವಾರವನ್ನು ಹೊಂದಿದೆ. ಲಲಾಟದಲ್ಲಿ ಶಂಖಚಕ್ರಪದ್ಮಗದಾಧಾರಿಯಾಗಿರುವ ವಿಷ್ಣುವಿನ ಕೆತ್ತನೆಯಿರುವುದು ಈ ದೇವಾಲಯದ ಬಹಳ ಪ್ರಮುಖ ವೈಶಿಷ್ಟ್ಯ. ಶಿವಲಿಂಗವಿರುವ ಗರ್ಭಗುಡಿಯ ದ್ವಾರದ ಲಲಾಟದಲ್ಲಿ ವಿಷ್ಣು!
ಅಂದು-ಇಂದು:
ಕಪ್ಪುಬಿಳುಪಿನಲ್ಲಿರುವುದು ಒಂದೇ ಪ್ರಾಂಗಣದೊಳಗಿರುವ ಈ ೩ ದೇವಾಲಯಗಳ ೧೮೭೪ರಲ್ಲಿ ತೆಗೆದ ಚಿತ್ರ. ವರ್ಣಚಿತ್ರವನ್ನು ೨೦೧೧ರಲ್ಲಿ ತೆಗೆಯಲಾಗಿದೆ. ಮೂರೂ ದೇವಾಲಯಗಳು ಸುಣ್ಣ ಬಣ್ಣದಿಂದ ಮುಕ್ತವಾಗಿರುವುದನ್ನು ಗಮನಿಸಿ. ಉಳಿದಂತೆ ಆಗ ಹೇಗಿದ್ದವೋ ಇಂದಿಗೂ ಹಾಗೇ ಇವೆ.
ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ
Navu hoolige hogidru e templegalannu miss madkondevu..
ಪ್ರತ್ಯುತ್ತರಅಳಿಸಿAdbootha . Nice to know about the use of iron ring , very special and unique . Hooli can be consider as Grad, college of Architecture .
ಪ್ರತ್ಯುತ್ತರಅಳಿಸಿಸೊಗಸಾದ ಲೇಖನ.
ಪ್ರತ್ಯುತ್ತರಅಳಿಸಿಆದೇಕೆ ಹಳೆಯ ದೇವಾಲಯಗಳಿಗೆ ಸುಣ್ಣ ಬಣ್ಣ ಬಳಿಯುತ್ತಾರೋ ಗೊತ್ತಿಲ್ಲ. ಕೊನೆಯ ಚಿತ್ರಗಳನ್ನು ನೋಡಿ ಅಚ್ಚರಿಯಾಯಿತು!! ೧೪೦ ವರ್ಷಗಳಿಂದ ಈ ಜಾಗ ತುಂಬಾ ಬದಲಾಗಿಲ್ಲ!!
ಅಶೋಕ್,
ಪ್ರತ್ಯುತ್ತರಅಳಿಸಿಮತ್ತೊಂದ್ಸಲ ಹೋಗ್ಬನ್ನಿ....
ಧೀರಜ್ ಅಮೃತಾ,
ಹೂಲಿಯ ಪ್ರತಿ ದೇವಾಲಯದಲ್ಲೂ ಒಂದೊಂದು ವೈಶಿಷ್ಟ್ಯತೆಯನ್ನು ಕಾಣಬಹುದು. ಧನ್ಯವಾದ.
ಅರವಿಂದ್,
ಸುಣ್ಣ ಬಳಿಯುವ ಬಗ್ಗೆ ನನಗೂ ಅದೇ ಪ್ರಶ್ನೆ ಇದೆ. ಯಾಕೆ ಬಳಿಯುತ್ತಾರೆ ಎಂದೇ ತಿಳಿಯುತ್ತಿಲ್ಲ. ಧೀರಜ್ ಬ್ಲಾಗಿನಲ್ಲಿ ಸದ್ಯದಲ್ಲೇ ಹಾಕಿರುವ ಬಾಗಳಿ ದೇವಾಲಯದ ಚಿತ್ರ ನೋಡಿ ಖೇದವಾಯಿತು. ಗೋಪುರಕ್ಕೆ ಬಿಳಿ ಬಣ್ಣ ಬಳಿಯಲಾಗಿದೆ. ನಾಲ್ಕು ವರ್ಷಗಳ ಮೊದಲು ಬಣ್ಣವಿರಲಿಲ್ಲ.