ಬಾಳಂಬೀಡನ್ನು ಶಾಸನಗಳಲ್ಲಿ ’ಬಳ್ಳಾರೆಯ ಬೀಡು’ ಎಂದು ಕರೆಯಲಾಗಿದೆ. ಕದಂಬರ ಮತ್ತು ಕಲ್ಯಾಣಿ ಚಾಲುಕ್ಯರ ಆಳ್ವಿಕೆಯ ಸಮಯದಲ್ಲಿ ಚಟುವಟಿಕೆಯಿಂದ ಕೂಡಿದ ಊರಾಗಿತ್ತೆಂದು ಶಾಸನಗಳ ಮೂಲಕ ತಿಳಿದುಬರುತ್ತದೆ. ಇಲ್ಲಿ ಬ್ರಹ್ಮೇಶ್ವರ ಮತ್ತು ರಾಮೇಶ್ವರ ಎಂಬ ಎರಡು ಪ್ರಮುಖ ಚಾಲುಕ್ಯ ಶೈಲಿಯ ದೇವಾಲಯಗಳಿದ್ದು, ೩ ಶಿಲಾಶಾಸನಗಳು ಮತ್ತು ಒಂದು ವೀರಗಲ್ಲು ದೊರೆತಿವೆ.
ಬ್ರಹ್ಮೇಶ್ವರ ದೇವಾಲಯವನ್ನು ಬೋಳುದೇವರ ದೇವಾಲಯವೆಂದೂ ಕರೆಯುತ್ತಾರೆ. ಗೋಪುರರಹಿತ ದೇವಾಲಯವು ಬೋಳುಬೋಳಾಗಿ ಕಾಣುವುದರಿಂದ ಊರಿನವರೇ ’ಬೋಳುದೇವರು’ ಎಂದು ಕರೆಯುತ್ತಿರಬೇಕು! ಈ ದೇವಾಲಯ ಗರ್ಭಗುಡಿ, ಅಂತರಾಳ ಮತ್ತು ನವರಂಗವನ್ನು ಹೊಂದಿದೆ. ನವರಂಗದಲ್ಲಿ ೧೨ ಕಂಬಗಳಿವೆ. ನಡುವೆ ಇರುವ ನಾಲ್ಕು ಸುಂದರ ಕಂಬಗಳ ನಡುವೆ ನಂದಿ ಇದೆ. ಈಗ ಇದು ’ಓಪನ್’ ನವರಂಗದಂತೆ ಕಾಣಿಸಿದರೂ, ೩ ದಿಕ್ಕುಗಳಿಂದ ದ್ವಾರಗಳಿದ್ದ ಕುರುಹುಗಳನ್ನು ಸ್ಪಷ್ಟವಾಗಿ ಕಾಣಬಹುದು.
ಅಂತರಾಳದ ದ್ವಾರದ ಒಂದು ಬದಿಯಲ್ಲಿರುವ ಜಾಲಂಧ್ರ ಮಾತ್ರ ಉಳಿದುಕೊಂಡಿದೆ. ಮೇಲ್ಗಡೆ ಮಕರ ತೋರಣದಿಂದ ಅಲಂಕೃತ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣು ಕೆತ್ತನೆಯಿದೆ. ಬ್ರಹ್ಮನ ಪಾದದ ಬಳಿ ಬಲಭಾಗದಲ್ಲಿ ಹಂಸದ ಕೆತ್ತನೆಯಿದೆ. ಮಹೇಶ್ವರನ ಪಾದದ ಒಂದು ಬದಿಯಲ್ಲಿ ಬಸವನಿದ್ದರೆ ಇನ್ನೊಂದು ಬದಿಯಲ್ಲಿ ಗಣೇಶನ ಕೆತ್ತನೆಯಿದೆ. ವಿಷ್ಣುವಿನ ಪಾದದ ಎಡಬದಿಯಲ್ಲಿ ಗರುಡನಿದ್ದಾನೆ. ಮಕರಗಳ ಮೇಲೆ ಯಕ್ಷರು ಆಸೀನರಾಗಿರುವುದನ್ನು ತೋರಿಸಲಾಗಿದೆ.
ಗರ್ಭಗುಡಿಯಲ್ಲಿ ಚಾಲುಕ್ಯ ಶೈಲಿಯ ಪೀಠದ ಮೆಲೆ ಸುಮಾರು ಒಂದು ಅಡಿ ಎತ್ತರದ ಶಿವಲಿಂಗವಿದೆ. ದೇವಾಲಯದ ಹೊರಗೋಡೆಯಲ್ಲಿ ಚೆನ್ನಾಗಿ ಕೆತ್ತಲಾಗಿರುವ ಗೋಪುರಗಳು ಮತ್ತು ಮಂಟಪಗಳಿವೆ.
ದೇವಾಲಯದ ಬಳಿಯಲ್ಲೇ ಒಂದು ಶಿಲಾಶಾಸನ ಮತ್ತು ವೀರಗಲ್ಲನ್ನು ಇಡಲಾಗಿದೆ. ಈ ಶಿಲಾಶಾಸನದಲ್ಲಿ ಇಸವಿ ೧೧೨೩ರಲ್ಲಿ ಕಲ್ಯಾಣ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಸಮಯದಲ್ಲಿ ಆತನ ಪಾಳೇಗಾರನಾಗಿದ್ದ ’ಮಹಾಪ್ರಭು ಬಮ್ಮಗಾವುಂದ’ ಎಂಬವನು ಬ್ರಹ್ಮೇಶ್ವರ ದೇವಾಲಯವನ್ನು ನಿರ್ಮಿಸಿದನೆಂದು ತಿಳಿಸಲಾಗಿದೆ.
ಅನತಿ ದೂರದಲ್ಲಿರುವ ರಾಮೇಶ್ವರ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಮತ್ತು ’ವೇಸರ’ ಶೈಲಿಯ ಗೋಪುರವನ್ನು ಹೊಂದಿದೆ. ಈ ದೇವಾಲಯವನ್ನು ಕಲ್ಲುದೇವರ ಗುಡಿ ಎಂದೂ ಕರೆಯುತ್ತಾರೆ.
ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ. ಬ್ರಹ್ಮೇಶ್ವರ ದೇವಾಲಯದಲ್ಲಿರುವಂತೆ ಇಲ್ಲೂ ಅಂತರಾಳದ ದ್ವಾರದ ಮೇಲ್ಗಡೆ ಮಕರ ತೋರಣದಿಂದ ಅಲಂಕೃತಗೊಂಡಿರುವ ಬ್ರಹ್ಮ, ವಿಷ್ಣು, ಮಹೇಶ್ವರರ ಕೆತ್ತನೆಯಿದೆ. ಒಂದೇ ವ್ಯತ್ಯಾಸವೆಂದರೆ ಶಿವನ ಪಾದದ ಬಳಿಯಿರುವ ನಂದಿ ಮತ್ತು ಗಣೇಶ ತಮ್ಮ ಸ್ಥಾನಗಳನ್ನು ಅದಲು ಬದಲು ಮಾಡಿಕೊಂಡಿರುವುದು.
ಅಂತರಾಳದ ದ್ವಾರದ ಇಕ್ಕೆಲಗಳಲ್ಲಿರುವ ಕವಾಟಗಳಲ್ಲಿ ಕಾರ್ತಿಕೇಯ ಮತ್ತು ಗಣೇಶನ ವಿಗ್ರಹಗಳಿವೆ. ಇವೆರಡೂ ಹಾನಿಗೊಂಡಿವೆ. ನವರಂಗದಲ್ಲಿರುವ ನಾಲ್ಕು ಕಂಬಗಳೂ ಆಕರ್ಷಕವಾಗಿದ್ದು ಹೂವು, ಬಳ್ಳಿಗಳ ಸುಂದರ ಕೆತ್ತನೆಗಳನ್ನು ಹೊಂದಿವೆ. ಈ ನಾಲ್ಕು ಕಂಬಗಳ ನಡುವೆಯೇ ನಂದಿಯ ಮೂರ್ತಿ ಇದೆ. ಗರ್ಭಗುಡಿಯಲ್ಲಿ ಸಣ್ಣ ಶಿವಲಿಂಗವಿದೆ. ಸಪ್ತಮಾತೃಕೆಯ ಕೆತ್ತನೆಯಿರುವ ಕಲ್ಲೊಂದನ್ನು ನವರಂಗದಲ್ಲಿರಿಸಲಾಗಿದೆ.
ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಭಿತ್ತಿಗಳಿಲ್ಲ. ಐದು ತೋಳುಗಳ ಪ್ರಮುಖ ದ್ವಾರದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಮೇಲಿರುವ ಅಡ್ಡಪಟ್ಟಿಯಲ್ಲಿ ೨ ತಾವರೆಗಳನ್ನು ಕಾಣಬಹುದು.
ಈ ದೇವಾಲಯದಲ್ಲಿ ೧೧ನೇ ಶತಮಾನದ ೨ ಶಾಸನಗಳಿವೆ. ಇವುಗಳ ಪ್ರಕಾರ ಇಸವಿ ೧೧೨೩ರಲ್ಲಿ ಕಲ್ಯಾಣಿ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ಸ್ಥಳೀಯ ಪಾಳೇಗಾರನಾಗಿದ್ದ ’ಬಮ್ಮಗಾವುಂದ’ (ಬ್ರಹ್ಮೇಶ್ವರ ದೇವಾಲಯ ನಿರ್ಮಿಸಿದವನೂ ಈತನೇ) ಎಂಬವನು ರಾಮೇಶ್ವರ ದೇವಾಲಯಕ್ಕೆ ಸ್ಥಳವನ್ನು ದಾನವನ್ನಾಗಿ ನೀಡಿದ್ದನು ಎಂದು ತಿಳಿದುಬರುತ್ತದೆ.
ಎರಡೂ ದೇವಾಲಯಗಳು ಪ್ರಾಚ್ಯ ವಸ್ತು ಇಲಾಖೆಯ ಸುಪರ್ದಿಗೆ ಒಳಪಟ್ಟಿದ್ದು, ಪ್ರಾಂಗಣದೊಳಗೆ ಸುರಕ್ಷಿತವಾಗಿಯೂ ಸ್ವಚ್ಛವಾಗಿಯೂ ಇವೆ.
ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ
Wonderful temples and looks like nicely maintained also.
ಪ್ರತ್ಯುತ್ತರಅಳಿಸಿHaleya kalegaara kaichalaka, janme nimma chayachitradalli sogasagi bandide.
ಪ್ರತ್ಯುತ್ತರಅಳಿಸಿWow! Hats off, yet again Rajesh
ಪ್ರತ್ಯುತ್ತರಅಳಿಸಿ- Srik
ಧನ್ಯವಾದ. ಧೀರಜ್ ಅಮೃತಾ, ಅಶೋಕ್ ಹಾಗೂ ಶ್ರೀಕಾಂತ್.
ಪ್ರತ್ಯುತ್ತರಅಳಿಸಿ