ಬುಧವಾರ, ಫೆಬ್ರವರಿ 15, 2012

ಜಲಧಾರೆ ಮತ್ತು ಆದರಾತಿಥ್ಯ


ಮಳೆ ಶುರುವಾದೊಡನೆ ವಿವೇಕ್, ’ಎಲ್ಲಾದರು ಪ್ಲ್ಯಾನ್ ಮಾಡ್ರಿ...’ ಎಂದು ದುಂಬಾಲು ಬೀಳುತ್ತಾರೆ.  ಅಂದು ಈ ಜಲಧಾರೆಗೆ ತೆರಳುವ ಸಲುವಾಗಿ ದೇವರು ಹೆಗಡೆಯವರ ಮನೆ ತಲುಪಿದೆವು. ಬಿರುಸಾಗಿ ಮಳೆ ಸುರಿಯುತ್ತಿತ್ತು. ಅಗಂತುಕರಾಗಿದ್ದ ನಮ್ಮನ್ನು ದೇವರು ಹೆಗಡೆ ಮತ್ತು ಅವರ ಮಗ ಪ್ರಸನ್ನ ಹೆಗಡೆ ಆದರದಿಂದ ಬರಮಾಡಿಕೊಂಡರು. ಜಲಧಾರೆಗೆ ತೆರಳಬೇಕೆಂಬ ಇರಾದೆಯನ್ನು ನಾನು ಅರುಹಿದಾಗ ಅವರಿಬ್ಬರು ಅವಾಕ್ಕಾಗಿ ಒಂದು ಕ್ಷಣ ಮಾತನಾಡಲೇ ಇಲ್ಲ.


ಆಘಾತಗೊಂಡವರಂತೆ ಕಂಡ ಅವರ ಮುಖಭಾವ ಕಂಡು ಏನಾದರೂ ತಪ್ಪು ಹೇಳಿದೆನೇ ಎಂದು ನಾನು, ವಿವೇಕ್ ಮತ್ತು ಮುರಳಿ ಮುಖ ಮುಖ ನೋಡಿಕೊಂಡೆವು. ಕೂಡಲೇ ಸಾವರಿಸಿಕೊಂಡ ಅಪ್ಪ ಮಗ ಗೊಳ್ಳನೆ ನಕ್ಕುಬಿಟ್ಟರು. ’ನಿಮ್ಗೆ ಅಲ್ಲಿಗೆ ಹೋಗುವ ದಾರಿ ಬಗ್ಗೆ ಗೊತ್ತಿಲ್ಲ ಅನ್ಸುತ್ತೆ.... ಹಳ್ಳದಲ್ಲೇ ಹೋಗ್ಬೇಕು....ಮಳೆಗಾಲದಲ್ಲಿ ಅಷ್ಟೆಲ್ಲಾ ನೀರಿರುವಾಗ.... ಸಾಧ್ಯಾನೇ ಇಲ್ಲಾ.... ದೀಪಾವಳಿ ನಂತರ ಬನ್ನಿ....’ ಎಂದರು ಪ್ರಸನ್ನ. ಆದರೂ ನಾನು ಉಡುಪಿಯಿಂದ ಆಷ್ಟು ದೂರ ಬಂದದ್ದು ಮತ್ತು ಅವರಿಬ್ಬರು ಧಾರವಾಡದಿಂದ ಅಷ್ಟು ದೂರ ಬಂದದ್ದು ’ಬಂದ ದಾರಿಗೆ ಸುಂಕ ಇಲ್ಲ’ ಎಂಬಂತಾಗಬಾರದು ಎಂದು ’ಆದರೂ... ನೋಡಿಬರೋಣ’ ಎಂದು ಮತ್ತೆ ಅಪ್ಪ ಮಗನನ್ನು ಪೀಡಿಸತೊಡಗಿದೆವು.


ಆಗ ’ಆಸರೆ’ ಸರಬರಾಜು ಆಯಿತು. ಅದು ಹೊಟ್ಟೆಗಿಳಿದ ಬಳಿಕ ಮಾತು ಮುಂದುವರಿಸಿದ ದೇವರು ಹೆಗಡೆಯವರು, ’ನೋಡಿ... ಈಗ ಹೋಗ್ಲಿಕ್ಕೆ ಸಾಧ್ಯನೇ ಇಲ್ಲ. ನೀವು ಎಷ್ಟೇ ಒತ್ತಾಯ ಮಾಡಿದರೂ ನಾವು ನಿಮ್ಮನ್ನು ಇಲ್ಲಿಂದ ಮುಂದೆ ಹೋಗ್ಲಿಕ್ಕೆ ಬಿಡೋದಿಲ್ಲ. ದೀಪಾವಳಿ ಆದ್ಕೂಡಲೇ ಬನ್ನಿ. ನನ್ನ ಮಗನೇ ನಿಮ್ಮೊಟ್ಟಿಗೆ ಬರ್ತಾನೆ’ ಎಂದು ಖಡಾಖಂಡಿತವಾಗಿ ಹೇಳಿದಾಗ ನಾವು ಸುಮ್ಮನಾದೆವು.


ದೀಪಾವಳಿ ಆದ ಕೂಡಲೇ ನಾವಲ್ಲಿ ಹಾಜರು. ನಮ್ಮನ್ನು ಕಂಡು ಆ ಮನೆಯವರಿಗೆ ಎಲ್ಲಿಲ್ಲದ ಸಂತೋಷ! ಭರ್ಜರಿ ಉಪಚಾರ ಮಾಡಿದರೆನ್ನಿ. ’ಜೋನ್ಸ್’ ತರಹ ಟೊಪ್ಪಿಯನ್ನೇರಿಸಿ, ಸೊಂಟಕ್ಕೊಂದು ಟವೆಲ್ ಸುತ್ತಿ ಪ್ರಸನ್ನ ನಮ್ಮ ಮಾರ್ಗದರ್ಶಕರಾಗಿ ಹೊರಟೇಬಿಟ್ಟರು. ನಮಗೆ ಜಲಧಾರೆ ನೋಡುವುದಕ್ಕಿಂತಲೂ, ನಮಗೆ ಜಲಧಾರೆ ತೋರಿಸಲು ಅವರು ಹೆಚ್ಚು ಉತ್ಸುಕರಾಗಿದ್ದರು.


ಹಳ್ಳಗುಂಟ ಸುಮಾರು ದೂರ ಸಾಗಿದ ಕೂಡಲೇ ನಾಲ್ಕಾರು ಹಂತಗಳಲ್ಲಿ ಜಲಧಾರೆ ಕೆಳಗೆ ಬೀಳುವುದನ್ನು ಕಾಣಬಹುದು. ಮೊದಲ ಹಂತ ನೋಡಲು ಅಷ್ಟು ಆಕರ್ಷಕವಾಗಿಲ್ಲ. ಆದರೆ ಇಲ್ಲಿ ಪ್ರಕೃತಿಯ ರಚನೆ ಬಹಳ ಚೆನ್ನಾಗಿದೆ. ಕಣಿವೆ ಆರಂಭವಾಗುವುದೇ ಇಲ್ಲಿಂದ. ಸಾವಕಾಶವಾಗಿ ಕೆಳಗಿಳಿದ ಬಳಿಕ ಮುಂದಿನ ಹಂತಗಳತ್ತ ಪ್ರಸನ್ನ ಕರೆದೊಯ್ದರು.


ಸುಮಾರು ಒಂದು ಕಿಮಿ ಉದ್ದವಿರುವ ಈ ಕಣಿವೆಯಲ್ಲಿ ಮೊದಲ ಹಂತದ ಬಳಿಕ ಹಳ್ಳ ಕಣಿವೆಯ ಆಳಕ್ಕೆ ಇಳಿಯಲು ಆರಂಭಿಸುತ್ತದೆ. ಮುಂದೆ ಸಾಗಿದಂತೆ ಇಳಿಜಾರು ಕಡಿದಾಗುತ್ತಾ ಸಾಗುತ್ತದೆ. ನೋಡಲು ಯೋಗ್ಯವಾಗಿರುವಷ್ಟು ದೂರ ಪ್ರಸನ್ನ ನಮ್ಮನ್ನು ಕರೆದೊಯ್ದರು.


ಬಹಳ ಜಾಗರೂಕರಾಗಿ ಮುಂದೆ ಸಾಗಬೇಕಾಗುತ್ತದೆ. ಕಲ್ಲುಬಂಡೆಗಳ ರಾಶಿಯ ನಡುವೆ ನೀರು ಹರಿಯುವ, ಧುಮುಕುವ ಸುಂದರ ಸದ್ದನ್ನು ಕಿವಿ ತುಂಬಾ ತುಂಬಿಸಿಕೊಳ್ಳುತ್ತಾ ಇತರರನ್ನು ನಿಧಾನವಾಗಿ ಹಿಂಬಾಲಿಸಿದೆ. ನಾನಿನ್ನು ಸುಮಾರು ಹಿಂದೆ ಇರುವಾಗಲೇ ಪ್ರಸನ್ನ ಉಳಿದವರನ್ನು ’ಲಾಸ್ಟ್ ಪಾಯಿಂಟ್’ಗೆ ತಲುಪಿಸಿಯಾಗಿತ್ತು. ಅದಾಗಲೇ ಅವರೆಲ್ಲಾ ಬಟ್ಟೆ ಬಿಚ್ಚಲಾರಂಭಿಸಿದ್ದರು, ಸ್ನಾನ ಮಾಡಲು.


ನೀರಿನ ಹರಿವು ಜಲಧಾರೆಗೆ ಬಹಳ ಅಂದದ ರೂಪವನ್ನು ನೀಡಿತ್ತು. ಎಲ್ಲರೂ ಬಹಳ ಹೊತ್ತು ನೀರಿನಲ್ಲೇ ಕಳೆದರು. ನಾನು ಚಿತ್ರಗಳನ್ನು ತೆಗೆಯುವುದರಲ್ಲೇ ಮಗ್ನನಾಗಿದ್ದೆ.


ಇಲ್ಲಿಂದ ಮುಂದೆ ಹಳ್ಳ ಇನ್ನಷ್ಟು ಕಡಿದಾದ ಪ್ರಪಾತಕ್ಕೆ ಇಳಿದು ಮುಖ್ಯ ನದಿಯೊಂದನ್ನು ಸೇರುತ್ತದೆ. ’ಇನ್ನು ಮುಂದೆ ನೋಡಲು ಯೋಗ್ಯವಾದದ್ದೇನೂ ಇಲ್ಲ, ಹೋಗಬೇಕೆಂದಿದ್ದರೆ ಮುಂದಕ್ಕೆ ಸಾಗುವ’ ಎಂದು ಪ್ರಸನ್ನ ಹೇಳಿದರೂ ನಾವು ಆಸಕ್ತಿ ತೋರಲಿಲ್ಲ. ನಮಗಿಷ್ಟೇ ಸಾಕು. ಸ್ವರ್ಗ ದರ್ಶನ ಪ್ರಾಪ್ತಿಯಾಗಿತ್ತು. ಅದಕ್ಕಿಂತ ಹೆಚ್ಚು ಬೇಕಾಗಿರಲಿಲ್ಲ.


ಜಲಧಾರೆಯಿಂದ ಹಿಂತಿರುಗುವಾಗ ಮೊದಲ ಹಂತದ ಸಮೀಪ ಮುರಳಿ ಸ್ವಲ್ಪನೇ ಜಾರಿ ಬಲಗೈಯ ಮಣಿಗಂಟನ್ನು ಮುರಿದುಕೊಂಡರು. ಅದೇನು ಅತಿ ಸಣ್ಣ ಗಾಯ ಮಾಡಿಕೊಳ್ಳುವ ಪ್ರಮಾಣದ ಅನಾಹುತವೂ ಅಲ್ಲ. ಆದರೆ ಮುರಳಿಯ ಗ್ರಹಾಚಾರ, ಪೆಟ್ಟು ದೊಡ್ಡದೇ ಆಯಿತು. ಅಲ್ಲಿಗೆ ಮುಂದಿನ ಆರು ತಿಂಗಳವರೆಗೆ ಮುರಳಿಯವರ ಚಾರಣ ಬಂದ್. ಆರು ತಿಂಗಳ ಬಳಿಕ ಮಣಿಗಂಟನ್ನು ಎಲ್ಲಾ ಕೋನಗಳಲ್ಲಿ ತಿರುಗಿಸುತ್ತಾ, ’ನೋಡ್ರಿ... ಈಗ ಪರ್‌ಫೆಕ್ಟ್’ ಎನ್ನುತ್ತಾ ಮತ್ತೆ ಚಾರಣ ಮುಂದುವರಿಸಿದ್ದಾರೆ.


ನಂತರ ದೇವರು ಹೆಗಡೆಯವರ ಮನೆಯಲ್ಲಿ ನಾವು ಊಟ ತಂದಿದ್ದನ್ನು ತಿಳಿದು ಅವರು ಬೇಜಾರು ಮಾಡಿಕೊಂಡರು! ಆದರೂ ಮಜ್ಜಿಗೆ ಮೊಸರಿನ ಅಭಿಷೇಕವೇ ನಡೆಯಿತು ಎನ್ನಬಹುದು. ನಾವು ಸ್ವಲ್ಪನೂ ದಾಕ್ಷಿಣ್ಯ ಇಲ್ಲದೇ ತಂದಿಟ್ಟ ಅಷ್ಟೂ ಮಜ್ಜಿಗೆ ಮತ್ತು ಮೊಸರು ಖಾಲಿ ಮಾಡಿದ್ದನ್ನು ಕಂಡು ಸಂತೋಷಗೊಂಡ ಆ ಮನೆಯವರು ಇನ್ನಷ್ಟು ತಂದಿರಿಸಿದರು. ಅದೂ ಖಾಲಿ ಮಾಡಿ, ಇನ್ನು ಸಾಕು ಎಂದೆವು. ಮನೆಯಲ್ಲೆ ಮಾಡಿದ ಹಳ್ಳಿ ಸೊಗಡಿನ ತಾಜಾ ತುಪ್ಪ ತಂದಿರಿಸಿದರು. ಅದನ್ನೂ ಅಷ್ಟು ಖಾಲಿ ಮಾಡಿದೆವು. ಇಂದಿನ ದಿನಗಳಲ್ಲಿ ಇಷ್ಟು ಉತ್ತಮವಾಗಿ ಆತಿಥ್ಯ ಯಾರು ಮಾಡುತ್ತಾರೆ ಅದೂ ಆಗಂತುಕರನ್ನು? ನಮಗಂತೂ ಈ ಜಿಲ್ಲೆಯ ಎಲ್ಲೆಡೆ ಇಂತಹದೇ ಅನುಭವ. ಇತ್ತೀಚೆಗಂತೂ ಚಾರಣಕ್ಕಿಂತ ಹೆಚ್ಚಾಗಿ ಚೆನ್ನಾದ ಅತಿಥ್ಯ ಸಿಗಬಹುದಾ ಎಂಬ ಬಗ್ಗೆಯೇ ಮಾತನಾಡಿಕೊಳ್ಳುತ್ತಿರುತ್ತೇವೆ!

9 ಕಾಮೆಂಟ್‌ಗಳು:

  1. Adbhuta anubhava. Jaladhaareyaddu matthu avaru torida aatithyaddu. Ee chaaranakke neevu hogiddu hoda varsha anta kaantade. Bahala sundara chitragaLu. Mungaarigagi eega naavu haathorita idivi.

    ಪ್ರತ್ಯುತ್ತರಅಳಿಸಿ
  2. Halligalalli athityada sogadu innu mareyagilla ennuvudakke inta gatanegale nidarshana.. Nimma joligeyallidda anubava keli namagu aseyaguttide, avara atitya saviyalu mattu jaladhareya darshanakke..

    ಪ್ರತ್ಯುತ್ತರಅಳಿಸಿ
  3. Rajesh,
    Nimma blog browse madodhe khushi bere blogsgintha thumba different and unique. Onthara "Devalaya and Jalapatha" kaipidi thara idhe.
    Devasthana neevu thegiyo photos mathe avu nijavaglu nammalli idhava antha ankolovastu beauty...
    Nimma niranthar payana heege saagali...

    Satish

    ಪ್ರತ್ಯುತ್ತರಅಳಿಸಿ
  4. ನಮಸ್ಕಾರ
    ನಾವು ೪ ಮಂದಿ ನಿಸರ್ಗ ಪ್ರಿಯರು, ಮುಂದಿನ ತಿಂಗಳು ಚಾರಣ ಹೋಗೋ ಪ್ಲಾನ್ ಮಾಡ್ತಾ ಇದೀವಿ. ಸ್ವಲ್ಪ ಇಂಥ ಜಲಪಾತಗಳ ಮಾಹಿತಿ ಕೊಡ್ತೀರ. ದಯವಿಟ್ಟು ಮೇಲ್ ಮಾಡಿ. sada19@gmail.com
    ನನ್ನ ನಂಬರ್ ೯೯೪೫೬೮೭೩೫೧.

    ಪ್ರತ್ಯುತ್ತರಅಳಿಸಿ
  5. ವಾಂಡರರ್,
    ಈ ಜಲಧಾರೆಗೆ ಭೇಟಿ ನೀಡಿದ್ದು ೨೦೧೦ರಲ್ಲಿ! ಧನ್ಯವಾದ.

    ಅಶೋಕ್,
    ನಿಮ್ಮ ಮನೆಗೆ ಬಂದಾಗಲೂ ಇದೇ ರೀತಿ ಆತಿಥ್ಯ ನೀಡಿದ್ದೀರಿ. ಆ ಸುಂದರ ಚಾರಣ ಮತ್ತು ನಿಮ್ಮ ಮನೆಯವರು ನೀಡಿದ ಆತಿಥ್ಯದ ಬಗ್ಗೆ ಬರೆಯಲು ಇನ್ನೂ ಬಾಕಿ ಇದೆ.

    ಸತೀಶ್,
    ನಮ್ಮ ರಾಜ್ಯದಲ್ಲಿ ಬೇಕಾದಷ್ಟು ಪ್ರಾಚೀನ ದೇವಾಲಯಗಳಿವೆ, ಜಲಧಾರೆಗಳಿವೆ. ನೋಡಿದಷ್ಟು ಮುಗಿಯುವುದಿಲ್ಲ. ಧನ್ಯವಾದ.

    ವೀರಭದ್ರ ಮತ್ತು ಸದಾಶಿವ,
    ದಾರಿ ಮತ್ತು ಮಾಹಿತಿ ಇವುಗಳನ್ನೆಲ್ಲಾ ದಯವಿಟ್ಟು ಕೇಳಬೇಡಿ. ಯಾವುದೇ ಮಾಹಿತಿ ನಾನು ನೀಡಲಾರೆ. ಹುಡುಕುವಿರಂತೆ. ಖಂಡಿತವಾಗಿಯೂ ಸಿಕ್ಕಿಬಿಡುತ್ತದೆ.

    ಧೀರಜ್ ಅಮೃತಾ,
    ಧನ್ಯವಾದ.

    ಪ್ರತ್ಯುತ್ತರಅಳಿಸಿ
  6. ಅನಾಮಧೇಯ,
    ನೀವು ಪುಕ್ಕಲು ಸ್ವಭಾವದವರು ಅಂತ ತೋರುತ್ತೆ. ಸ್ವಲ್ಪ ಧೈರ್ಯ ತೋರಿಸಿ, ನಿಮ್ಮ ಹೆಸರು ಬರೆದು ಅಭಿಪ್ರಾಯ ವ್ಯಕ್ತಪಡಿಸಿದರೆ ಚೆನ್ನಾಗಿರುವುದು. ಸಲಹೆಗಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ