ಭಾನುವಾರ, ಮೇ 29, 2011

ಲಕ್ಷ್ಮೀನರಸಿಂಹ ದೇವಾಲಯ - ವಿಘ್ನಸಂತೆ


ವಿಘ್ನಸಂತೆಯ ಲಕ್ಷ್ಮೀ ನರಸಿಂಹ ದೇವಾಲಯದ ಅರ್ಚಕ ವಾಸವಿರುವುದು ೩ ಕಿಮಿ ದೂರವಿರುವ ಇನ್ನೊಂದು ಹಳ್ಳಿಯಲ್ಲಿ. ಅಲ್ಲಿ ವಿಚಾರಿಸಿದಾಗ ಅವರು ಕೆಲವೊಂದು ದಿನಗಳ ಮಟ್ಟಿಗೆ ಎಲ್ಲೋ ತೆರಳಿರುವುದಾಗಿ ತಿಳಿದುಬಂತು. ಬೀಗದಕೈ ಬಗ್ಗೆ ವಿಚಾರಿಸಿದರೆ ಯಾರಿಗೂ ಏನೂ ಗೊತ್ತಿಲ್ಲ. ಅದಾಗಲೇ ಸಮಯ ಸಂಜೆ ೬.೧೫ ಆಗಿತ್ತು. ಇನ್ನು ಸಮಯ ವ್ಯರ್ಥ ಮಾಡುವುದು ಬೇಡವೆಂದು ವಿಘ್ನಸಂತೆಯತ್ತ ತೆರಳಿದೆ.


ಸಣ್ಣ ದಿಬ್ಬದ ಮೇಲೆ ಸ್ಥಿಥಗೊಂಡಿರುವ ಈ ತ್ರಿಕೂಟ ದೇವಾಲಯವನ್ನು ಹೊಯ್ಸಳರು ಇಸವಿ ೧೨೮೬ರಲ್ಲಿ ನಿರ್ಮಿಸಿದ್ದಾರೆ. ದೇವಾಲಯದ ಹೊರಗೋಡೆಯಲ್ಲಿ ಪ್ರತಿ ಕಲ್ಲಿನ ಕಂಬಗಳ ನಡುವೆ ಕಮಲವೊಂದನ್ನು ಕೆತ್ತಲಾಗಿದ್ದು ಬಿಟ್ಟರೆ ಬೇರೆ ಯಾವ ಭಿತ್ತಿಚಿತ್ರಗಳೂ ಇಲ್ಲ. ಪ್ರಮುಖ ಗರ್ಭಗುಡಿಯ ಮೇಲಿನ ಗೋಪುರ ಮಾತ್ರ ಉಳಿದುಕೊಂಡಿದೆ. ಗೋಪುರವನ್ನು ಮೂರು ತಾಳಗಳಲ್ಲಿ ನಿರ್ಮಿಸಲಾಗಿದ್ದು ಮೇಲೊಂದು ಪದ್ಮವನ್ನಿರಿಸಿ ಅದರ ಮೇಲೆ ಕಲಶವನ್ನಿರಿಸಲಾಗಿದೆ.


ದೇವಾಲಯದ ಮೇಲ್ಛಾವಣಿಯ ಸುತ್ತಲೂ ಕೆತ್ತನೆಯಿದೆ. ಇವಕ್ಕೆ ’ಕೈಪಿಡಿ’ ಎನ್ನಲಾಗುತ್ತದೆ. ಹೆಚ್ಚಿನ ಹೊಯ್ಸಳ ದೇವಾಲಯಗಳಲ್ಲಿ ಕೈಪಿಡಿಯಿದ್ದು ಅವುಗಳ ಕೆತ್ತನೆಗಳಿಗೆ ವಿಶೇಷ ಗಮನ ನೀಡಲಾಗುತ್ತದೆ. ಕೈಪಿಡಿ ಇದ್ದರೆ ದೇವಾಲಯಕ್ಕೊಂದು ಮುಕುಟವಿದ್ದಂತೆ ಎಂದು ನಂಬಲಾಗುತ್ತದೆ.


ಗೋಪುರದ ಮೂರು ಬದಿಯಲ್ಲಿ (ಮುಂಭಾಗ ಹೊರತುಪಡಿಸಿ) ಸಣ್ಣ ಸಣ್ಣ ಕಲಾತ್ಮಕ ಕೆತ್ತನೆಗಳಿವೆ. ಮೇಲ್ನೋಟಕ್ಕೆ ಎಲ್ಲಾ ಬದಿಯಲ್ಲೂ ಒಂದೇ ತರಹದ ಕೆತ್ತನೆಗಳಿವೆ ಎಂದೆನಿಸಿದರೂ ಸೂಕ್ಷ್ಮವಾಗಿ ಪ್ರಮುಖ ಕೆತ್ತನೆಗಳನ್ನು ಗಮನಿಸಿದರೆ ಎಲ್ಲೂ ಪುನರಾವರ್ತನೆ ಕಂಡುಬರುವುದಿಲ್ಲ. ಅಷ್ಟೆತ್ತರದಲ್ಲಿರುವ ಈ ಕೆತ್ತನೆಗಳನ್ನು ಸರಿಯಾಗಿ ನೋಡುವುದು ಅಸಾಧ್ಯ. ಚೆನ್ನಾದ ಕ್ಯಾಮರಾ ಇದ್ದರೆ ಉತ್ತಮ ಚಿತ್ರಗಳನ್ನು ತೆಗೆಯಬಹುದು.


ದೇವಾಲಯವಿರುವ ದಿಬ್ಬಕ್ಕಿರುವ ನಾಲ್ಕಾರು ಮೆಟ್ಟಿಲುಗಳನ್ನೇರಿದ ಕೂಡಲೇ ಸ್ವಾಗತ ನೀಡುವುವು ಕುಳಿತುಕೊಂಡ ಭಂಗಿಯಲ್ಲಿರುವ ಎರಡು ಆನೆಗಳು. ಅದೇಕೋ ಈ ಕಲ್ಲಿನ ಆನೆಗಳು ಬಹಳ ಮುದ್ದಾಗಿ ಕಂಡವು.


ಅಪರೂಪದ ಮತ್ತು ಸರಳ ವಿನ್ಯಾಸದ ಎರಡು ಕಂಬಗಳ ಹೊರಚಾಚು ಮುಖಮಂಟಪವನ್ನು ದೇವಾಲಯವು ಹೊಂದಿದೆ. ಮುಖಮಂಟಪದ ಮೇಲ್ಛಾವಣಿಯ ಒಳಮೇಲ್ಮೈಯಲ್ಲಿ ಕಲಾತ್ಮಕ ಕೆತ್ತನೆಯನ್ನು ಕಾಣಬಹುದು. ದೇವಾಲಯದ ಪ್ರಮುಖ ದ್ವಾರವು ಐದು ತೋಳುಗಳನ್ನು ಹೊಂದಿದೆ.


ಈ ದೇವಾಲಯದಲ್ಲಿ ೩ ವಿಶೇಷತೆಗಳಿವೆ. ಪ್ರಮುಖ ದ್ವಾರದ ಮೇಲ್ಭಾಗದಲ್ಲಿ ಎಲ್ಲೆಡೆ ಇರುವಂತೆ ಗಜಲಕ್ಷ್ಮೀಯ ಕೆತ್ತನೆಯಿರದೆ ವೇಣುಗೋಪಾಲನ ಸುಂದರ ಕೆತ್ತನೆಯಿದೆ. ಇಕ್ಕೆಲಗಳಲ್ಲಿ ಗೊಲ್ಲರು, ಗೋಪಿಕಾ ಸ್ತ್ರೀಯರು ಮತ್ತು ಹಸುಗಳು ವೇಣುಗೋಪಾಲನಿಗೆ ನಮಸ್ಕರಿಸುವ ದೃಶ್ಯದ ಕೆತ್ತನೆಯಿದೆ.


ಎರಡನೇ ವಿಶೇಷತೆಯೇನೆಂದರೆ ದೇವಾಲಯದ ಪ್ರಾಮುಖ ದ್ವಾರದ ನೇರ ಮೇಲಕ್ಕೆ ಛಾವಣಿಯಲ್ಲಿರುವ ಕೈಪಿಡಿಯಲ್ಲಿ ನಾಟ್ಯಗಣಪತಿಯ ಸುಂದರ ಕೆತ್ತನೆಯಿದೆ. ನಾಟ್ಯಗಣೇಶನೂ ಆಗಿದ್ದು ಬಲಮುರಿಯೂ ಆಗಿರುವುದು ಇನ್ನೂ ವಿಶೇಷ. ಮೂರನೆಯದಾಗಿ ದೇವಾಲಯದ ಒಳಗಿರುವ ಲಕ್ಷ್ಮೀನರಸಿಂಹ ವಿಗ್ರಹ. ಲಕ್ಷ್ಮೀಯು ನರಸಿಂಹನ ತೊಡೆಯ ಮೇಲೆ ಆಸೀನಳಾಗಿದ್ದು, ಆಕೆಯ ಪಾದ ಕಮಲವೊಂದರ ಮೇಲಿದೆ. ಪಾದದ ಭಾರವನ್ನು ತಾಳುವಂತೆ ಕಮಲಕ್ಕೆ ಆನೆಯೊಂದು ತನ್ನ ಸೊಂಡಿಲನ್ನು ಆಧಾರವಾಗಿ ನೀಡಿರುವ ಸುಂದರ ಕೆತ್ತನೆ (ಈ ಮಾಹಿತಿ ಕೆಳಗೆ ನೀಡಿರುವ ಕೊಂಡಿಯಲ್ಲಿ ದೊರಕಿತು. ದೇವಾಲಯಕ್ಕೆ ಬೀಗ ಹಾಕಲಾಗಿದ್ದರಿಂದ ನನಗೆ ಈ ಸುಂದರ ಮೂರ್ತಿಯನ್ನು ನೋಡಲಾಗಲಿಲ್ಲ).


ದೇವಾಲಯದ ಒಳಭಾಗದ ರಚನೆಯನ್ನು ಸುಲಭದಲ್ಲಿ ತಿಳಿದುಕೊಳ್ಳಬಹುದಾದಂತಹ ಸರಳ ವಿನ್ಯಾಸ ಈ ದೇವಾಲಯದ್ದು. ಎಲ್ಲಾ ಗರ್ಭಗುಡಿಗಳಿಗೂ ಸಾಮಾನ್ಯ ನವರಂಗವಿದ್ದು ಅಂತರಾಳ ಇದ್ದಂತೆ ಅನಿಸುವುದಿಲ್ಲ. ದೇವಾಲಯದ ಪ್ರಮುಖ ಗರ್ಭಗುಡಿಯಲ್ಲಿ ಚನ್ನಕೇಶವನ ವಿಗ್ರಹವಿದ್ದು, ಉಳಿದೆರಡು ಗರ್ಭಗುಡಿಗಳಲ್ಲಿ ವೇಣುಗೋಪಾಲ ಮತ್ತು ಲಕ್ಷ್ಮೀನರಸಿಂಹ ಮೂರ್ತಿಗಳಿವೆ.

ಮಾಹಿತಿ: ಇಲ್ಲಿಂದ ಮತ್ತು ಇಲ್ಲಿಂದ

7 ಕಾಮೆಂಟ್‌ಗಳು:

  1. ಉತ್ತಮ ವಿವರಗಳನ್ನು ಕೊಟ್ಟಿದ್ದೀರಿ. ‘ವಿಘ್ನಸಂತೆ’ ಎನ್ನುವ ಹೆಸರು ವಿಚಿತ್ರವಾಗಿದೆ! ಇದರ ಅರ್ಥ ಮತ್ತು ಕಾರಣಗಳು ದೊರೆಯಬಹುದೆ?

    ಪ್ರತ್ಯುತ್ತರಅಳಿಸಿ
  2. ವಿಘ್ನಸಂತೆ - ಹೆಸರೇ ವಿಚಿತ್ರವಾಗಿದೆ... ದೇಗುಲಗಳ ವೈಶಿಷ್ಟ್ಯಗಳನ್ನ ಪತ್ತೆ ಹಚ್ಚೋದನ್ನ ನಿಮ್ಮಿಂದ ಕಲೀಬೇಕು ನಾನು... :)

    ಪ್ರತ್ಯುತ್ತರಅಳಿಸಿ
  3. ಸುಶೀಲ್,
    ಧನ್ಯವಾದ.

    ಸುನಾಥ್,
    ಧನ್ಯವಾದ. ಊರಿನ ಒಬ್ಬರನ್ನು ಕೇಳಿದಾಗ ’ಮೊದಲು ಇಲ್ಲಿ ಬಹಳ ಯಜ್ಞಗಳು ನಡೆಯುತ್ತಿದ್ದ ಕಾರಣ, ಊರಿನ ಹೆಸರು ಆಗ ಯಜ್ಞಸಂತೆ ಅಂತ ಇತ್ತು. ಅದೇ ಕ್ರಮೇಣ ವಿಘ್ನಸಂತೆ ಎಂದಾಯಿತು’ ಎಂಬ ಮಾಹಿತಿ ನೀಡಿದರು. ’ಯಜ್ಞಕ್ಕೂ ಮತ್ತು ವಿಘ್ನಕ್ಕೂ ಬಹಳ ವ್ಯತ್ಯಾಸವಿದೆಯಲ್ಲಾ. ಸಮೀಪದ ಶಬ್ದಗಳಾದರೆ ಕ್ರಮೇಣ ಊರಿನ ಹೆಸರು ಹಾಗೆ ಬದಲಾಗುವುದು ಸಹಜ.’ ಎಂದು ನಾನು ಕೇಳಿದಾಗ ಅವರು, ’ನನಗೆ ಅಷ್ಟೇ ಗೊತ್ತಿರೋದು ಸ್ವಾಮಿ’ ಎಂದರು. ಅದಾಗಲೇ ಕತ್ತಲಾಗುತ್ತಿದ್ದರಿಂದ ಮುಂದಿನ ಬಾರಿ ಸಮಗ್ರ ಮಾಹಿತಿ ಪಡೆಯೋಣವೆಂದು ಅಲ್ಲಿಂದ ನಿರ್ಗಮಿಸಿದೆ. ವಿಘ್ನಸಂತೆಯಲ್ಲೇ ಬಾಲಲಿಂಗೆಶ್ವರ ಎಂಬ ಇನ್ನೊಂದು ದೇವಾಲಯವಿದ್ದು, ಅದನ್ನು ನೋಡಲು ನಮ್ಮಲ್ಲಿ ಸಮಯವಿರಲಿಲ್ಲ. ಮುಂದಿನ ಬಾರಿ ಬಾಲಲಿಂಗೇಶ್ವರನ ದರ್ಶನ ಪಡೆಯಲು ತೆರಳಿದಾಗ, ಊರಿನ ಹೆಸರಿನ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತೋ ನೋಡೋಣ.

    ಪ್ರಶಾಂತ್,
    ಊರಿನ ಹೆಸರೇ ಪ್ರಮುಖ ಆಕರ್ಷಣೆ. ಆ ಹೆಸರು ಬಂದ ಕಾರಣ ಬೇರೇನಾದರೂ ಇದ್ದರೆ ತಿಳಿಸಿಬಿಡಿ. ಧನ್ಯವಾದ.

    ಪ್ರತ್ಯುತ್ತರಅಳಿಸಿ
  4. Very nice , we too loved the temple very much , but sad we could not see inside since the priest had gone some where for function . Thanks for information .

    ಪ್ರತ್ಯುತ್ತರಅಳಿಸಿ
  5. maanya Rajesh naikravare, Laxminarshimha Devaalaya nOdidare moorti chikkadu keerti doddadu embantide. ondane photo nodidaaga ondu saamaanya devstaandante kandare, sookshmavaagi nodidaaga yava beluru helebeedu kalege Endu kammi illa. intaha devstaanagalannu mattu kaleyannu huduki nammantaha sommarigalige parichaya maadikodiviralla nimage naavugalu chirrunigalu. intaha lekanagalu chitragalu nimminda hechchu barali endu haraisutta, nimage yasassu sigali. jayavaagali. vandanegalodane.

    ಪ್ರತ್ಯುತ್ತರಅಳಿಸಿ
  6. ಧೀರಜ್ ಅಮೃತಾ,
    ನಿಮ್ಮ ಬ್ಲಾಗಿನಿಂದಲೇ ಈ ದೇವಾಲಯದ ಇರುವಿಕೆಯ ಬಗ್ಗೆ ನನಗೆ ತಿಳಿಯಿತು. ನಿಮಗೆ ಧನ್ಯವಾದಗಳು. ಬೀಗ ಎಲ್ಲೋ ಇರುವುದರಿಂದಲೇ ಹಲವಾರು ದೇವಾಲಯಗಳನ್ನು ಹೊರಗಿನಿಂದಲೇ ನೋಡಿ ಸಂತೃಪ್ತಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೀಗ ಮತ್ತು ಅದು ಇರುವ ಮನೆ ನಂತರ ಬೀಗ ಇಟ್ಟುಕೊಳ್ಳುವ ವ್ಯಕ್ತಿ ಇವಿಷ್ಟನ್ನು ಹುಡುಕುವಷ್ಟರಲ್ಲಿ ಬಹಳಷ್ಟು ಸಮಯ ಕಳೆದುಹೋಗುತ್ತದೆ.

    ನಂಜುಂಡರಾಜು,
    ಧನ್ಯವಾದ. ಸಾಧ್ಯವಾದಷ್ಟು ಸಮಯ ಪ್ರಯಾಣದ ಅನುಭವಗಳನ್ನು ಇಲ್ಲಿ ದಾಖಲಿಸುವುದು ಜಾರಿಯಲ್ಲಿರುತ್ತದೆ. ತಮ್ಮ ಪ್ರೋತ್ಸಾಹವಿರಲಿ.

    ಪ್ರತ್ಯುತ್ತರಅಳಿಸಿ