ಭಾನುವಾರ, ಏಪ್ರಿಲ್ 17, 2011

ಮಲ್ಲಿಕಾರ್ಜುನ ದೇವಾಲಯ - ಕುರುವತ್ತಿ


ಕುರುವತ್ತಿಯ ದಾರಿಯಲ್ಲಿ ಬಣ್ಣಬಣ್ಣದ ಜಟಕಾ ಬಂಡಿಗಳು ನಮಗೆ ಎದುರಾಗುತ್ತಿದ್ದವು. ಅವುಗಳನ್ನು ಎಳೆಯುತ್ತಿದ್ದ ಎತ್ತುಗಳ ಸಿಂಗಾರವೇನೂ ಕಡಿಮೆಯಿರಲಿಲ್ಲ. ಕೋಡುಗಳಿಗೆ ಬಣ್ಣ, ಹಣೆಯಲ್ಲಿ ಕುಂಕುಮ ಮತ್ತು ಮೈತುಂಬಾ ಬಣ್ಣದ ಚಿತ್ತಾರ. ಅವುಗಳಿಗೂ ಮತ್ತು ಜಟಕಾ ಬಂಡಿಯೊಳಗಿದ್ದವರಿಗೂ ಸಂಭ್ರಮ. ಕೆಲವೊಂದೆಡೆ ಹೊಲಗಳಲ್ಲಿ, ಮರದ ನೆರಳಲ್ಲಿ ಜಟಕಾ ಬಂಡಿಗಳನ್ನು ನಿಲ್ಲಿಸಿ, ಸಂಸಾರ ಸಮೇತ ಪ್ರಯಾಣಿಸುತ್ತಿದ್ದವರು ಒಟ್ಟಾಗಿ ಊಟ ಮಾಡುವುದು, ಆಯಾಸ ಪರಿಹಾರ ಮಾಡಿಕೊಳ್ಳುವುದು ಕಾಣಬರುತ್ತಿತ್ತು. "ಏನ್ಪಾ ಇದು? ಜಾತ್ರಿ ಐತೇನು ಎಲ್ಲಾರ?’ ಎಂದು ಗೆಳೆಯ ನಿರಂಜನ ಪಾಟೀಲನ ಪ್ರಶ್ನೆ. ಕುರುವತ್ತಿ ತಲುಪಿದಾಗ ಅಲ್ಲಿ ಜಾತ್ರೆ! ಕುರುವತ್ತಿಯ ಮಲ್ಲಿಕಾರ್ಜುನ ದೇವಾಲಯದ ವರ್ಷದ ಜಾತ್ರೆ. ದೇವಾಲಯದಲ್ಲಿ ಪೂಜೆಯ ಭರಾಟೆ. ಎಲ್ಲೆಲ್ಲೂ ಜನಸಮೂಹ.


ಮಲ್ಲಿಕಾರ್ಜುನ ದೇವಾಲಯ ಗರ್ಭಗುಡಿ ಮತ್ತು ನವರಂಗಗಳನ್ನು ಹೊಂದಿದೆ. ನವರಂಗಕ್ಕೆ ಮುಖಮಂಟಪಗಳಿರುವ ೩ ದ್ವಾರಗಳಿವೆ. ಜಾತ್ರೆ ಪ್ರಯುಕ್ತ ಜನಜಂಗುಳಿ ಎಷ್ಟಿತ್ತೆಂದರೆ ಕಷ್ಟದಲ್ಲಿ ಒಂದೇ ದ್ವಾರವನ್ನು ಕೂಲಂಕುಷವಾಗಿ ವೀಕ್ಷಿಸಲು ಸಾಧ್ಯವಾಯಿತು. ಈ ದ್ವಾರ ಅಪೂರ್ವ ಕೆತ್ತನೆಯನ್ನು ಹೊಂದಿದ್ದು ೭ ತೋಳುಗಳನ್ನು ಹೊಂದಿದೆ. ದ್ವಾರದ ಇಕ್ಕೆಲಗಳಲ್ಲಿ ಸುಂದರ ಕೆತ್ತನೆ ಕೆಲಸವಿರುವ ಕಲ್ಲಿನ ೭ ಪದರಗಳು/ಹಂತಗಳು. ಪ್ರತಿ ಹಂತದ ತಳಭಾಗದಲ್ಲಿ ದ್ವಾರಪಾಲಕೆಯರ ಸುಂದರ ಕೆತ್ತನೆ. ಹಾಗಾಗಿ ಒಟ್ಟು ಇಕ್ಕೆಲಗಳಲ್ಲಿ ೧೪ ದ್ವಾರಪಾಲಕೆಯರು. ಬಾಗಿಲಿನ ಮೇಲ್ಗಡೆ ಗಜಲಕ್ಷ್ಮೀಯ ಮತ್ತೂ ಸುಂದರ ಕೆತ್ತನೆ. ಗಜಲಕ್ಷ್ಮೀಯ ಇಕ್ಕೆಲಗಳಲ್ಲಿರುವ ೬ ಆನೆಗಳ ಕೆತ್ತನೆಯೂ ಆಕರ್ಷಕ.


ನವರಂಗದಲ್ಲಿ ಸುಂದರ ಕೆತ್ತನೆಯಿರುವ ೪ ಕಂಬಗಳು. ಇಲ್ಲಿ ಅಂತರಾಳವಿಲ್ಲ. ನವರಂಗದಿಂದ ನೇರವಾಗಿ ಗರ್ಭಗುಡಿಗೆ ಪ್ರವೇಶ. ಗರ್ಭಗುಡಿಯ ಬಾಗಿಲು ೫ ತೋಳಿನದ್ದು ಮತ್ತು ಮೇಲ್ಗಡೆ ಸುಂದರ ಕೆತ್ತನೆಯನ್ನು ಹೊಂದಿರವಂತದ್ದು. ಪ್ರತಿ ತೋಳಿನಲ್ಲೂ ದ್ವಾರಪಾಲಕೆಯರ ಕೆತ್ತನೆ. ಮಲ್ಲಿಕಾರ್ಜುನನನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಆ ನೂಕುನುಗ್ಗಲಿನ ನಡುವೆ ನಾಲ್ಕಾರು ಚಿತ್ರಗಳನ್ನು ತೆಗೆದರೂ ಯಾವುದೂ ಸರಿ ಬರಲಿಲ್ಲ. ದೇವಾಲಯದಲ್ಲಿ ನಂದಿ ಎಲ್ಲೂ ಕಾಣಬರಲಿಲ್ಲ. ಜನಜಂಗುಳಿಯ ಮಧ್ಯೆ ಎಲ್ಲಿ ಮಾಯವಾಗಿತ್ತೋ ಏನೋ. ದೇವಾಲಯದ ಒಳಗೆ ನಡೆಯುತ್ತಿದ್ದ ಪೂಜೆ, ಹವನ ಇತ್ಯಾದಿಗಳಿಂದ ಹೊರಹೊಮ್ಮುತ್ತಿದ್ದ ಹೊಗೆ ಎಲ್ಲಾ ಕಡೆ ಆವರಿಸಿತ್ತು. ಅಲ್ಲಿಂದ ಓಡಿಹೋದರೆ ಸಾಕೆನಿಸುತ್ತಿತ್ತು.


ಸುತ್ತಮುತ್ತಲಿನ ಹಳ್ಳಿಗಳ ಜನರು/ರೈತರು ತಮ್ಮ ಜಾನುವಾರುಗಳನ್ನು ಸಿಂಗರಿಸಿ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಪೂಜೆ ಅರ್ಪಿಸಲು ಕರೆತಂದಿದ್ದರು. ಜನಜಂಗುಳಿಯ ನಡುವೆ ಜಾನುವಾರುಜಂಗುಳಿ! ಅವುಗಳಿಗೂ ಅದೇನೋ ಸಂಭ್ರಮ. ಈ ಗಲಾಟೆಯಲ್ಲಿ ಗೆಳೆಯ ನಿರಂಜನ ಮತ್ತು ಆತನ ಪತ್ನಿ ಸವಿತಾ ಅದೆಲ್ಲಿ ಮಾಯವಾದರೋ ಏನೋ. ಅವರನ್ನು ಹುಡುಕುತ್ತಾ ದೇವಾಲಯಕ್ಕೊಂದು ಸುತ್ತು ಬಂದರೂ ಇಬ್ಬರದ್ದೂ ಪತ್ತೆಯಿಲ್ಲ. ಇಬ್ಬರನ್ನೂ ಹುಡುಕುತ್ತಾ ದೇವಾಲಯದಿಂದ ದೂರಬಂದು ಪ್ರಮುಖ ಬೀದಿಯಲ್ಲಿ ಸುತ್ತಾಡತೊಡಗಿದೆ. ನಂತರ ನಮ್ಮ ವಾಹನದ ಬಳಿ ಬಂದರೂ ಅಲ್ಲೂ ಇವರಿಬ್ಬರ ಸುಳಿವಿಲ್ಲ. ನಂತರ ಅವರನ್ನು ಹುಡುಕುತ್ತಾ ಕುರುವತ್ತಿಯಲ್ಲಿ ನಾನು ನೋಡಲೇಬೇಕೆಂದಿದ್ದ ತುಂಗಭದ್ರಾ ನದಿ ತಟದತ್ತ ಹೆಜ್ಜೆ ಹಾಕಿದೆ.


ಚಾಲುಕ್ಯ ದೊರೆ ಒಂದನೇ ಸೋಮೇಶ್ವರ ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದನು. ಇದರಿಂದ ಬೇಸತ್ತ ಸೋಮೇಶ್ವರ ಇಸವಿ ೧೦೬೮ರಲ್ಲಿ ಕುರುವತ್ತಿಯಲ್ಲೇ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಆ ಸ್ಥಳ ನೋಡೋಣವೆಂದು ನದಿತಟಕ್ಕೆ ತೆರಳಿದರೆ ಅಲ್ಲಿ ಕಣ್ಣಿಗೆ ಕಾಣುವಷ್ಟು ದೂರಕ್ಕೂ ಜನರು...ಜಾನುವಾರುಗಳು....ಜಟಕಾ ಬಂಡಿಗಳು!


ಆ ಜಾಗ ನಿರ್ಜನವಾಗಿದ್ದಲ್ಲಿ ಹೇಗೆ ಕಾಣಬಹುದೆಂದು ಕೇವಲ ಕಲ್ಪನೆ ಮಾಡಿ ಸಂತುಷ್ಟನಾದೆ. ಈಗ ನದಿಯ ಹರಿವು, ನದಿಪಾತ್ರದ ನಡುವೆ ಆಳವಾಗಿದ್ದ ಸ್ಥಳಕ್ಕೆ ಮಾತ್ರ ಸೀಮಿತವಾಗಿದೆ. ಸಾವಿರ ವರ್ಷಗಳ ಹಿಂದೆ ಬೇಸಗೆಯಲ್ಲೂ ನದಿಪಾತ್ರದ ಸಂಪೂರ್ಣ ಅಗಲಕ್ಕೂ ತುಂಗಭದ್ರೆ ಹರಿಯುತ್ತಿದ್ದಿರಬಹುದು. ಸೋಮೇಶ್ವರ ನದಿಗೆ ಹಾರಿ ಕೊಚ್ಚಿಹೋದ ದಿಕ್ಕಿನೆಡೆ ಮತ್ತು ಆ ಘಟನೆಗೆ ಮೂಕಸಾಕ್ಷಿಯಾಗಿದ್ದ ದೂರದಲ್ಲಿ ಕಾಣುತ್ತಿದ್ದ ಬೆಟ್ಟಗಳ ಶ್ರೇಣಿಯನ್ನು ನೋಡುತ್ತಾ ಸ್ವಲ್ಪ ಸಮಯ ಕಳೆದೆ. ಆ ದಿನ ಜಾತ್ರೆ ಇರದಿದ್ದರೆ ಅಲ್ಲೊಂದಷ್ಟು ಸಮಯ ಕುಳಿತು ವಿರಮಿಸುತ್ತಿದ್ದೆ... ಅಷ್ಟು ಚೆನ್ನಾಗಿದೆ ಕುರುವತ್ತಿಯ ತುಂಗಭದ್ರಾ ನದಿಯ ತೀರ. ಆಗ ಸವಿತಾಳ ಫೋನು, ’ಕಾರಿನ ಸಮೀಪ ಇದ್ದೀವಿ’ ಎಂದು.

ಅಂದು - ಇಂದು
ಅಂತರ್ಜಾಲದಲ್ಲಿ ಹುಡುಕಾಡಿದಾಗ ದೇವಾಲಯದ ತುಂಬಾ ಹಳೇ ಚಿತ್ರಗಳು ಸಿಕ್ಕಿದವು. ಅವನ್ನೇ ಇಲ್ಲಿ ಬಳಸಿದ್ದೇನೆ. ಕೆಳಗಿರುವುದು ಕುರುವತ್ತಿ ಮಲ್ಲಿಕಾರ್ಜುನ ದೇವಾಲಯದ 1857ರಲ್ಲಿ ತೆಗೆದ ಚಿತ್ರ ಮತ್ತು 2008ರಲ್ಲಿ ತೆಗೆದ ಚಿತ್ರಗಳು.


ಆಗಲೂ ಒಂದು ಪ್ರಾಂಗಣದೊಳಗೆ ದೇವಾಲಯವಿದ್ದಂತೆ ತೋರುತ್ತಿದೆ.ಗೋಪುರಕ್ಕೆ ಆಗಲೇ ಬಣ್ಣ ಬಳಿಯಲಾಗಿತ್ತು! 150 ವರ್ಷಗಳ ಬಳಿಕವೂ ಅದು ಮುಂದುವರಿದುಕೊಂಡು ಬಂದಿದೆ. ಮುಖಮಂಟಪ ಹಾಗೇ ಇದೆ.


ಮೇಲಿರುವುದು ದೇವಾಲಯದ ಹೋರಗೋಡೆಯಲ್ಲಿರುವ ಭಿತ್ತಿಚಿತ್ರಗಳಲ್ಲೊಂದು. ಹಳೇ ಚಿತ್ರ 1885ರಲ್ಲಿ ತೆಗೆದದ್ದು, ಹೊಸ ಚಿತ್ರ 123 ವರ್ಷಗಳ ಬಳಿಕ. ಕವಾಟದೊಳಗಿದ್ದ ಕೆತ್ತನೆ ಮಾಯವಾಗಿದೆ! ಉಳಿದ ಕೆತ್ತನೆಗಳು ಹಾಗೇ ಉಳಿದುಕೊಂಡಿವೆ.


ಮೇಲಿನ ಚಿತ್ರ 1857ರಲ್ಲಿ ತೆಗೆದದ್ದು. ಈಗ ಈ ಕೆತ್ತನೆಯೇ ಮಲ್ಲಿಕಾರ್ಜುನ ದೇವಾಲಯದಲ್ಲಿಲ್ಲ! ನವರಂಗದ ದ್ವಾರಕ್ಕಿಂತ ಸ್ವಲ್ಪ ಮೊದಲೇ ಈ ಸುಂದರ ಕೆತ್ತನೆ ಇತ್ತು ಎಂಬುದನ್ನು ಗಮನಿಸಬಹುದು.

4 ಕಾಮೆಂಟ್‌ಗಳು:

  1. ರಾಜೇಶ್,

    ಒಳ್ಳೆಯ ಲೇಖನ.
    ಮಾಹಿತಿಗಾಗಿ ಧನ್ಯವಾದಗಳು.

    ಲಕ್ಷ್ಮೀಪತಿ.

    ಪ್ರತ್ಯುತ್ತರಅಳಿಸಿ
  2. ಹಳೆಯ ಚಿತ್ರಗಳನ್ನು ಹುಡುಕಿ ಕೊಟ್ಟಿರುವಿರಿ. ತುಂಬ ಉತ್ತಮವಾದ ಪ್ರಯತ್ನ.

    ಪ್ರತ್ಯುತ್ತರಅಳಿಸಿ
  3. Very nice posts , amazing temple , especailly the carving shared in the photo . Thanks for sharing . Team G square

    ಪ್ರತ್ಯುತ್ತರಅಳಿಸಿ
  4. ಲಕ್ಷ್ಮೀಪತಿ, ಸುನಾಥ್
    ಧನ್ಯವಾದ.

    ಧೀರಜ್,
    ಧನ್ಯವಾದ. ಗೋಪುರಕ್ಕೆ ಬಣ್ಣ ಬಳಿಯದೇ ಇದ್ದಲ್ಲಿ ದೇವಾಲಯ ಇನ್ನೂ ಚೆನ್ನಾಗಿ ಕಾಣುತ್ತಿತ್ತು.

    ಪ್ರತ್ಯುತ್ತರಅಳಿಸಿ