ಗುರುವಾರ, ಅಕ್ಟೋಬರ್ 07, 2010

ಅವಿತಿರುವ ಚೆಲುವೆಯತ್ತ...


ನಾಲ್ಕು ವರ್ಷಗಳ ಹಿಂದೆ ಜಲಧಾರೆಯೊಂದಕ್ಕೆ ಭೇಟಿ ನೀಡಿ ಹಿಂತಿರುಗುವಾಗ ಕಡಿದಾದ ಏರುದಾರಿಯಲ್ಲಿ ಬಳಲಿ ಒಂದೆಡೆ ಕುಳಿತು ವಿಶ್ರಮಿಸುತ್ತಿದ್ದೆ. ಆಗ ದೂರದಲ್ಲಿ ಮಗದೊಂದು ಬೆಟ್ಟದಲ್ಲಿ ಜಲಧಾರೆಯೊಂದು ನೇರ ರೇಖೆಯಂತೆ ಧುಮುಕುತ್ತಿರುವುದು ಕಾಡಿನ ನಡುವಿನಿಂದ ಅಸ್ಪಷ್ಟವಾಗಿ ಕಾಣುತ್ತಿತ್ತು. ಜೊತೆಯಲ್ಲಿದ್ದ ಹಳ್ಳಿಗರಲ್ಲಿ ವಿಚಾರಿಸಿದಾಗ ಅದೇ ಹಳ್ಳಿಯ ಪರಿಧಿಯೊಳಗಿರುವ ಇನ್ನೊಂದು ಜಲಧಾರೆಯದು ಎಂದು ತಿಳಿದುಬಂತು. ಮಳೆಗಾಲದಲ್ಲಿ ಹೋಗಲು ಅಸಾಧ್ಯ ಮತ್ತು ಮಳೆ ಸ್ವಲ್ಪ ಕಡಿಮೆಯಾದರೆ ಜಲಧಾರೆಯಲ್ಲಿ ನೀರೇ ಇರುವುದಿಲ್ಲ ಎಂಬುವುದನ್ನೂ ಹಳ್ಳಿಗರು ತಿಳಿಸಿದರು. ಅಂತೂ ನಾಲ್ಕು ವರ್ಷಗಳ ಬಳಿಕ ಮೊನ್ನೆ ರವಿವಾರ ಸರಿಯಾದ ’ಟೈಮಿಂಗ್’ ನೋಡಿ ಜಲಧಾರೆಯೆಡೆ ಹೊರಟೆ. ನನ್ನೊಡನೆ ಮೂರ್ನಾಲ್ಕು ಚಾರಣಿಗರು ಬರಬಹುದು ಎಂದುಕೊಂಡರೆ ಸಂಖ್ಯೆ ೧೪ ತಲುಪಿತ್ತು! ಆದರೆ ಎಲ್ಲರೂ ಪ್ರಕೃತಿ ಪ್ರಿಯರು ಎಂಬುವುದು ಸಮಾಧಾನದ ವಿಷಯ.


ಸಾಧಾರಣವಾಗಿರುವ ಮತ್ತು ನೇರವಾಗಿ ಧುಮುಕುವ ಸರಳ ಜಲಧಾರೆಯಾಗಿರಬಹುದೆಂಬ ನನ್ನ ಊಹೆ ತಪ್ಪಾಗಿತ್ತು! ಪ್ರಕೃತಿ ತನ್ನ ಆರಾಧಕರನ್ನು ಮತ್ತೆ ಮತ್ತೆ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ ಎಂಬ ಮಾತಲ್ಲಿ ಯಾವುದೇ ಸಂಶಯವಿಲ್ಲ. ನಾನು ಇದುವರೆಗೆ ಭೇಟಿ ನೀಡಿರುವ ಅತ್ಯುತ್ತಮ ಜಲಧಾರೆಗಳಲ್ಲಿ ಇದೂ ಒಂದು. ಆ ನೋಟ, ಆ ಅನುಭವ ಮತ್ತು ಆ ಪರಿಸರ ಎಲ್ಲವೂ ಸ್ವರ್ಗಸದೃಶ. ಈ ಜಲಧಾರೆಗೆ ದಾರಿ ಬೆಟ್ಟವೊಂದರ ಇಳಿಜಾರಿನಲ್ಲಿ ಸಾಗಿ ನಂತರ ಹಳ್ಳಗುಂಟ ಸಾಗುತ್ತದೆ. ಕೊನೆಯ ೨೦ ನಿಮಿಷಗಳ ಚಾರಣ ವಿವಿಧ ಗಾತ್ರಗಳ ಕಲ್ಲು ಬಂಡೆಗಳ ರಾಶಿಯನ್ನು ಏರುತ್ತಾ ಸಾಗಬೇಕಾಗುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಇಂತಹ ಒಂದು ಬಂಡೆಯನ್ನೇರಿ ಮುಂದಿನ ದಾರಿಗಾಗಿ ಕತ್ತೆತ್ತಿದರೆ ಕಾಣುವುದು ಜಲಧಾರೆಯ ಅದ್ಭುತ ಮತ್ತು ಅಪ್ರತಿಮ ನೋಟ. ಆ ಕ್ಷಣದಲ್ಲಿ ಕಂಡುಬಂದ ಈ ಜಲಧಾರೆಯ ಸೊಬಗು ವರ್ಣಿಸಲಸಾಧ್ಯ. ಇಂತಹ ತಾಣಗಳನ್ನು ಸೃಷ್ಟಿಸಿ, ಅಲ್ಲಿಗೆ ಭೇಟಿ ನೀಡಲು ಅವಕಾಶವನ್ನೂ ಕಲ್ಪಿಸುವ ಆ ಸೃಷ್ಟಿಕರ್ತನಿಗೆ ಅನಂತ ಧನ್ಯವಾದಗಳು.

11 ಕಾಮೆಂಟ್‌ಗಳು:

  1. Nijavagiyu adhbhuta Jaladhare, Avitiruva chaluveya sobhagu torisida nimage dhanyavadagalu..............
    Leena.

    ಪ್ರತ್ಯುತ್ತರಅಳಿಸಿ
  2. ರಾಜೇಶ್

    ಹೊಸ ಸುಂದರಿಯ ದರ್ಶನ ಮಾಡಿಸಿದ್ದಕ್ಕಾಗಿ ಧನ್ಯವಾದಗಳು.

    ಲಕ್ಷ್ಮೀಪತಿ

    ಪ್ರತ್ಯುತ್ತರಅಳಿಸಿ
  3. ರಾಜೇಶ್,

    ಮನಮೋಹಕವಾಗಿ ಕಾಣಿಸ್ತಿದೆ ಜಲಧಾರೆ..
    ಸುಂದರ ಜಲಪಾತ ತೋರಿಸಿದ್ದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  4. I am speachless! Thanks Rajesh for such a wonderful discovery!

    ಪ್ರತ್ಯುತ್ತರಅಳಿಸಿ
  5. ರಾಜೇಶ್,

    ಇಂತಹ ಅವಿತಿರುವ ಚೆಲುವೆಯರು ಇನ್ನೆಷ್ಟೋ...:-)
    ಸೊಗಸಾದ ಜಲಪಾತ, ಎರಡನೆಯ ಫೋಟೋ ಸೂಪರ್.

    ಪ್ರತ್ಯುತ್ತರಅಳಿಸಿ
  6. ಪ್ರೋತ್ಸಾಹಿಸಿದ ಎಲ್ಲಾ ಗೆಳೆಯರಿಗೂ ಧನ್ಯವಾದಗಳು. ಚೆಲುವೆಯರ ನೋಟವೇ ಚಂದ. ಮಾರುಹೋಗದಿರಲು ಅಸಾಧ್ಯ.

    ಪ್ರತ್ಯುತ್ತರಅಳಿಸಿ
  7. ಮೊದಲೊಮ್ಮೆಯೂ ಹೇಳಿದ್ದೆ.. ಈಗಲೂ ಹೇಳುತ್ತಿರುವೆ... ನಿಮ್ಮ ಸೌಭಾಗ್ಯವ ಕಂಡು ಹೊಟ್ಟೆಯುರಿಯಾಗುತ್ತಿದೆ :) ಫೋಟೋದಲ್ಲೇ ಆಗಲಿ... ನೋಡುವ ಅಲ್ಪ ಭಾಗ್ಯವಾದರೂ ನಮಗಿತ್ತಿದ್ದೀರಿ. ಅದಕ್ಕಾಗಿ ತುಂಬಾ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  8. ರಾಜೇಶ್ ನಾಯ್ಕರಿಗೆ ವಂದನೆ.
    ಅವಿತಿರುವ ಚೆಲುವೆಯತ್ತ ಲೇಖನ, ಹಾಗೂ ಇತರ ಲೇಖನ ಓದಿದೆ. ಚೆನ್ನಾಗಿದೆ. ಆದರೆ ನೀವು ಎಲ್ಲಿಗೆ ಹೋದದ್ದು? ಅದು ಎಲ್ಲಿ ಇರುವ ಸ್ಥಳ ಇತ್ಯಾದಿ ಯಾವ ಮಾಹಿತಿಯನ್ನೂ ಬರೆಯಲಿಲ್ಲ. ದಯವಿಟ್ಟು ಅದನ್ನು ತಿಳಿಸಿ. ಚಾರಣಿಗರಿಗೆ ಪ್ರವಾಸದ ಹುಚ್ಚು ಇರುವ ನನ್ನಂಥವರಿಗೆ ಅನುಕೂಲವಾಗುತ್ತದೆ.
    ಮಾಲಾ

    ಪ್ರತ್ಯುತ್ತರಅಳಿಸಿ
  9. ಮಾಲಾ,
    ದಾರಿಯ ಬಗ್ಗೆ ಮಾಹಿತಿ ನಾನು ಎಂದೂ ನೀಡುವುದಿಲ್ಲ. ಜಲಧಾರೆ ಅಥವಾ ಬೆಟ್ಟ ಗುಡ್ಡಗಳ ಬಗ್ಗೆಯಾದರೆ ಕೆಲವೊಮ್ಮೆ ತಾಣದ ಹೆಸರನ್ನೂ ನಾನು ಹಾಕುವುದಿಲ್ಲ. ಪ್ರಕೃತಿ ಬಗ್ಗೆ ಕಾಳಜಿ ಇಲ್ಲದವರಿಗೆ ಇಂತಹ ಮಾಹಿತಿ ದೊರಕಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ. ಕ್ಷಮೆಯಿರಲಿ.

    ಪ್ರತ್ಯುತ್ತರಅಳಿಸಿ