ಈ ಬ್ಲಾಗಿನ ಓದುಗರಿಗೆ ನನ್ನ ಗೆಳೆಯ ದಿನೇಶ್ ಹೊಳ್ಳ ಪರಿಚಿತ ಹೆಸರು. ಐದಾರು ವರ್ಷಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಚಾರಣ ಸ್ಥಳಗಳ ಬಗ್ಗೆ ದಿನೇಶ್ ಬರೆಯುತ್ತಿದ್ದರು. ಈ ಮಧ್ಯೆ ಪ್ರಜಾವಾಣಿ ಪತ್ರಿಕೆಯವರು ಚಾರಣ ಸಂಬಂಧಿತ ಏನಾದರೂ ಬರೆಯುವಂತೆ ದಿನೇಶರನ್ನು ಕೋರಿದಾಗ, ಚಾರಣ ಸ್ಥಳಗಳ ಬಗ್ಗೆ ಬರೆಯುವುದರ ಬದಲು ಚಾರಣದ ಸಮಯದಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ಬರೆಯುತ್ತಿದ್ದಾರೆ. ಪ್ರಜಾವಾಣಿ ಮಂಗಳೂರು ಆವೃತ್ತಿಯಲ್ಲಿ ಪ್ರಕಟಗೊಳ್ಳುವ ತಮ್ಮ ಈ ಲೇಖನಗಳನ್ನು ಇಲ್ಲಿ ಪ್ರಕಟಿಸಲು ಅನುಮತಿ ನೀಡಿದ ದಿನೇಶ್ ಹೊಳ್ಳರಿಗೆ ಧನ್ಯವಾದ.
ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯಲ್ಲಿ ಚಾರ್ಮಾಡಿ ಮತ್ತು ಕುದುರೆಮುಖವನ್ನು ಜೋಡಿಸುವ ದುರ್ಗದಬೆಟ್ಟದ ಬಂಡಾಜೆ ಜಲಪಾತಕ್ಕೆ ನಾವು ಚಾರಣಕ್ಕೆ ಅಣಿಯಾಗಿದ್ದಾಗ ನಮ್ಮ ಮಿತ್ರ ಬೆಂಗಳೂರಿನ ಮಹಾನಗರದ ಐಷಾರಾಮ ಬದುಕಿನಲ್ಲಿ ಮೆರೆಯುತ್ತಿದ್ದ ರಾಧಾಕೃಷ್ಣ ರಾವ್ ಎಂಬವರಿಗೆ ಸುದ್ದಿ ತಲುಪಿ ನಮ್ಮೊಂದಿಗೆ ಬಂದಿದ್ದರು. ಬೆಳ್ತಂಗಡಿಯಿಂದ ವಳಂಬ್ರ ನಾರಾಯಣ ಗೌಡರ ಮನೆಯವರೆಗೆ ಗಾಡಿಯಲ್ಲಿ ಹೋಗಿ ಅಲ್ಲಿಂದ ಕಾನನ ಶಿಖರವನ್ನೇರಿ ಸಂಜೆ ನಾಲ್ಕು ಗಂಟೆಗೆ ಬಂಡಾಜೆ ಜಲಪಾತದ ತುದಿ ತಲುಪಿದ್ದೆವು.
ರಾತ್ರಿಯ ಅಡುಗೆಗೆ ಹಾಗೂ ಶಿಬಿರಾಗ್ನಿಗೆ ಕಟ್ಟಿಗೆ ಒಟ್ಟು ಸೇರಿಸಲು ನಾವು ಹೋದಾಗ ರಾಧಾಕೃಷ್ಣ ರಾವ್ ನಮ್ಮೊಂದಿಗಿದ್ದರು. ಒಣ ಕಟ್ಟಿಗೆಯೊಂದನ್ನು ಅವರು ಎತ್ತಿದಾಗ ಅದರ ಅಡಿಯಲ್ಲಿ ಚಿಕ್ಕ ಹಾವೊಂದು ಮುದುಡಿ ಮಲಗಿತ್ತು. ಹಾವಿನ ಬಗ್ಗೆ ಏನೂ ಅರಿಯದ ಅವರಿಗೆ ಅದೊಂದು ಆಘಾತದ ಕ್ಷಣವಾಗಿತ್ತು. ಅದು ಸಾಮಾನ್ಯ ಹಾವು, ಭಯ ಪಡಬೇಡಿ ಎಂದು ನಾವು ಹೇಳಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಅವರಿರಲಿಲ್ಲ. ಅಷ್ಟರವರೆಗೆ ತುಂಬಾ ಉತ್ಸಾಹದಿಂದ ಇದ್ದ ರಾಯರಿಗೆ ಹಾವಿನ ನೋಟದಿಂದ ಎಲ್ಲವೂ ಸ್ತಬ್ಧವಾಯಿತು. ನಾವೆಷ್ಟೆ ಧೈರ್ಯ ತುಂಬಿದರೂ ಅವರ ಭಯ ಕಡಿಮೆಯಾಗುತ್ತಿರಲಿಲ್ಲ. ರಾತ್ರಿ ಊಟ ಮಾಡುವಾಗಲೂ ತನ್ನ ಪಾದದ ಅಡಿಗೆ ಟಾರ್ಚ್ ಬೆಳಕನ್ನು ಹರಡಿ ಹಾವು ಬಂದಿರಬಹುದು ಎಂದು ಸಂಶಯ ಪಡುತ್ತಿದ್ದರು.
ಊಟದ ನಂತರ ಶಿಬಿರಾಗ್ನಿಯ ಸುತ್ತಲೂ ಎಲ್ಲರೂ ಸಂತೋಷದಿಂದ ಇದ್ದಾಗ ರಾಯರಿಗೆ ಅಲ್ಲಿ ಹಾವೇ ಕಾಣಿಸುತ್ತಿತ್ತು. ನನ್ನನ್ನು ದೂರ ಕರೆದು ಅವರು ಕೇಳಿದ ಪ್ರಶ್ನೆ ಏನು ಗೊತ್ತೇ? ’ಈಗ ನಾವು ಮಲಗಿದ ಮೇಲೆ ಆ ಹಾವು ಬಂದರೆ?’ ಎಂದು. ರಾತ್ರಿ ಇಡೀ ಬೆಂಕಿ ಉರಿಯುತ್ತಿರಲಿದ್ದು ನಾವು ಬೆಂಕಿಯ ಸುತ್ತಲೂ ಮಲಗುವುದೆಂದೂ, ಬೆಂಕಿಯ ಕಾವಿಗೆ ಯಾವ ಹಾವೂ ಬರುವುದಿಲ್ಲ ಎಂದರೂ ಅವರಿಗೆ ನನ್ನ ಮಾತಲ್ಲಿ ನಂಬಿಕೆಯೇ ಇಲ್ಲ. ಅವರನ್ನು ಬೆಂಕಿಯ ಹತ್ತಿರ ಮಲಗಲು ಹೇಳಿ ಅವರ ಪಕ್ಕದಲ್ಲೇ ನಾನು ಮತ್ತು ಇತರರು ಮಲಗಿಕೊಂಡೆವು. ಆಗ ಅವರಿಗೆ ತಾನು ಹಾವಿನಿಂದ ಬಚಾವಾದರೂ ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರು. ಅವರ ಗೊಣಗಾಟ ಮುಂದುವರಿಯುತ್ತಿದ್ದಂತೆಯೇ ನಾನು ನನ್ನ ಸ್ಲೀಪಿಂಗ್ ಬ್ಯಾಗಿನ ಒಳತೂರಿ ’ಶುಭ ರಾತ್ರಿ’ ಎಂದು ಹೇಳಿ ನಿದ್ರಾಲೋಕಕ್ಕೆ ಜಾರಿದೆ.
ರಾತ್ರಿ ಒಂದೂವರೆ ಗಂಟೆಗೆ ನಾನು ಬೆಂಕಿಗೆ ಕಟ್ಟಿಗೆ ಹಾಕಲೆಂದು ಎದ್ದಾಗ ರಾಯರು ತನ್ನ ಬೆಡ್-ಶೀಟಿನಿಂದ ಮುಖ ಮಾತ್ರ ಹೊರಗೆ ಹಾಕಿ ನನ್ನನ್ನೇ ನೋಡುತ್ತಿದ್ದರು. ನಾನು ಎದ್ದಾಗ ಅವರಿಗೆ ತಾಗಿರಬಹುದು, ಅದಕ್ಕೆ ಅವರಿಗೆ ಎಚ್ಚರವಾಗಿರಬಹುದೆಂದು ಯೋಚಿಸುತ್ತಿದ್ದಾಗ ಅವರು ಹೇಳಿದ್ದು ಕೇಳಿ ಆಶ್ಚರ್ಯವಾಯಿತು. ಅವರು ಅಷ್ಟರವರೆಗೂ ನಿದ್ದೆನೇ ಮಾಡಿರಲಿಲ್ಲವಂತೆ. ಹಾವಿನ ಭಯ ಅವರನ್ನು ಕಾಡುತ್ತಲೇ ಇತ್ತು. ಅದಲ್ಲದೇ ಅವರಿಗೆ ಮೂತ್ರ ವಿಸರ್ಜನೆಗೆ ಹೋಗಲು ಇದ್ದು, ಹೋಗಲು ಹಾವಿನ ಭಯ. ಬನ್ನಿ ಎಂದಾಗ ಮನಸ್ಸಿಲ್ಲದಿದ್ದರೂ ಭಯದಿಂದಲೇ ನನ್ನೊಂದಿಗೆ ಬಂದರು. ಎರಡು ಟಾರ್ಚ್-ಗಳ ಬೆಳಕನ್ನು ಅವರ ಕಾಲ ಬುಡಕ್ಕೆ ಹಾಕಿ ’ಬನ್ನಿ... ಬನ್ನಿ...’ ಎಂದು ನಾನು ಕರೆದೊಯ್ಯುತ್ತಿರಬೇಕಾದರೆ ಟಾರ್ಚ್ ಬೆಳಕು ಆಫ್ ಆದ ಕೂಡಲೇ ಬೊಬ್ಬೆ ಹಾಕುತ್ತಿದ್ದರು. ಒಂದು ಟಾರ್ಚ್ ಬೆಳಕನ್ನು ಆ ಕಡೆ ಏನೋ ಶಬ್ದವಾಯಿತೆಂದು ಅತ್ತ ಹೊರಳಿಸಿದೆ. ಏನು ಶಬ್ದವಿರಬಹುದೆಂದು ನೀರ ಸಮೀಪವೇ ಇದ್ದ ಒಂದು ಗೆಲ್ಲನ್ನು ಹಿಡಿದು ಬಗ್ಗಿ ನೋಡಲು ನಾನು ಯತ್ನಿಸಿದಾಗ ಒಮ್ಮೆಲೇ ನಾನು ಹೆದರಿಹೋದೆ. ಯಾಕೆಂದರೆ ನಾನು ಹಿಡಿದದ್ದು ಗೆಲ್ಲಾಗಿರಲಿಲ್ಲ. ಅದು ಎರಡು ಗೆಲ್ಲುಗಳ ನಡುವೆ ಮಲಗಿದ್ದ ಹಸಿರು ಹಾವಾಗಿತ್ತು!
ಹಾವಿನ ಬಣ್ಣ ಹಸಿರಾಗಿದ್ದರಿಂದ ಆ ಕತ್ತಲಲ್ಲಿ ಅದು ಹಸಿರು ಗೆಲ್ಲುಗಳ ನಡುವೆ ಗೆಲ್ಲಿನಂತೇ ಕಾಣುತ್ತಿತ್ತು. ನಾನು ಒಮ್ಮೆಲೇ ’ಹಾವು’ ಎಂದು ಹಿಂದಕ್ಕೆ ಬಂದುದನ್ನು ರಾಯರು ಗಮನಿಸುತ್ತಲೇ ಇದ್ದು ಮತ್ತೆ ಅವರಲ್ಲಿ ಹಾವಿನ ಭಯ ವೃದ್ಧಿಯಾಗತೊಡಗಿತು. ಮೊದಲೇ ಹಾವಿನ ಭಯದಿಂದ ನಿದ್ರೆಯೂ ಮಾಡದ ಅವರು ಈಗಂತೂ ಪ್ರಜ್ಞೆ ತಪ್ಪಿ ಬೀಳುವುದೊಂದೇ ಬಾಕಿ. ನಾನು ಅವರನ್ನು ಮತ್ತೆ ಮಲಗುವ ಜಾಗಕ್ಕೆ ಕರೆದುಕೊಂಡು ಹೋಗೋಣವೆಂದು ಟಾರ್ಚ್ ಬೆಳಕು ಹಾಕಿದಾಗ ರಾಯರು ಅಲ್ಲಿ ನಾಪತ್ತೆ! ಸಂಜೆ ಚಿಕ್ಕ ಹಾವನ್ನು ನೋಡಿಯೇ ಹೆದರಿದ್ದ ಅವರು ಈಗ ಅದಕ್ಕಿಂತ ೩ ಪಟ್ಟು ದೊಡ್ಡ ಹಸಿರು ಹಾವನ್ನು ಕಂಡು ಇನ್ನಷ್ಟು ಹೆದರಿ ಓಡೋಡಿ ಬಂದು ಬೆಡ್ ಶೀಟ್ ಹೊದೆದು ಮಲಗಿಬಿಟ್ಟಿದ್ದರು.
ಬೆಳಕಾಗಿ ಚೆನ್ನಾದ ಬಿಸಿಲು ಬಿದ್ದರೂ ರಾಯರ ಅಳುಕು ಮಾತ್ರ ಕಡಿಮೆಯಾಗಲೇ ಇಲ್ಲ. ’ಚಾರಣದ ಉತ್ಸಾಹ’ವೆಲ್ಲವನ್ನೂ ಹಾವು ನುಂಗಿಬಿಟ್ಟಿತ್ತು. ಅದು ಅವರ ಮೊದಲ ಹಾಗೂ ಕೊನೆಯ ಚಾರಣವಾಗಿದ್ದು, ಇಂದಿಗೂ ಫೋನಿನಲ್ಲಿ ಕುಶಲೋಪರಿ ಮಾತನಾಡುತ್ತಿದ್ದರೆ ಚಾರಣ ಎಂದಾಕ್ಷಣ ಕಾಲ್ ಕಟ್ ಮಾಡಿಬಿಡುತ್ತಾರೆ. ಬಂಡಾಜೆಯ ಹಾವು ಅವರಿಗೆ ಆ ರೀತಿ ಕಾವು ಕೊಟ್ಟಿತ್ತು.
ದಿನೇಶ್ ಹೊಳ್ಳ.
paapa.. haagella hedrsbaardu kaNree..
ಪ್ರತ್ಯುತ್ತರಅಳಿಸಿgammattuntu marayre
ಪ್ರತ್ಯುತ್ತರಅಳಿಸಿಆಗುಂಬೆ ಚಾರಣದಲಿ ಹಾವಿನದೇ ಮಾತು ನನಗು ಚಂದ್ರುಗೆ. ಚಾರಣ ನಂತರ ಕುಂದಾದ್ರಿ ಬೆಟ್ಟದ ಮೇಲೆ ರಾತ್ರಿ ತಂಗಿದ್ದೆವು, ಗರುಡಗಂಬದ ಮುಂದೆ ಸ್ಲೀಪಿಂಗ್ ಮ್ಯಾಟ್ ಮೇಲೆ ಎಲ್ಲರಿಗೂ ನಿದ್ರೆ, ನನಗೆ ಮಾತ್ರ ನಿದ್ರಾ ದೇವಿ ಕೃಪೆ ತೋರಲಿಲ ಆಗು ಇಗು ಮಾಡಿ ೪:೩೦ಗಂಟ ಹೋದ್ದಾಡಿ, ಬೆಂಕಿ ಕಾಯಿಸುವ ಅಂತ ಹೋದರೆ ಒಂದು ಹೆಬ್ಬಾವು(ಮರಿ) ನಾವು ಮಲಗಿರುವ ಜಾಗದಿಂದ ನುಸುಲ್ಕೊಂಡ್ ಹೋಗುತ್ತಾ ಇದೆ, ಕುಡಲ್ಲೇ ಎಲ್ಲರನು ಹೆಚ್ಚರಿಸಿದೆ,
ಪ್ರತ್ಯುತ್ತರಅಳಿಸಿಪಕ್ಕದಲಿ ಮಲಗಿದ ಶ್ರೀನಿವಾಸ್ ಹೇಳ್ತಾರೆ ಅವರ ಕಾಲ ಮೇಲೆ ಹರಿದು ನಿಮ್ಮ ಮ್ಯಾಟಿನ ಕೆಳಗೆ ನುಸಿಲೋದನ ನೋಡಿದೆ ,ಬೇರೆಯವರಿಗೆ ಹೇಳಿದರೆ ಹೆದರುವರು ನಿದ್ದೆ ಮಾಡುವುದಿಲ ಎಂದು ಸುಮ್ಮನೆ ಇದ್ದೆ, ಅದು ಏನೋ ತಿಂದು ಮ್ಯಾಟಿನ ಕೆಳಗೆ ಬೆಚ್ಚಗೆ ಇದೆ ಅಂತ ಮಲಗಿದೆ, ಇವಾಗ ತನ್ನ ಗೂಡಿಗೆ ಮರಳುತ ಇದೆ..
ಇದು ಆದ ಮೇಲೆ ಯಾವ ಚಾರಣಕೆ ಹೋದರು ಹಾವಿನದೇ ಚಿಂತೆ...
ಆ ಹಾವಿನ ೨ ಛಾಯಾ ಚಿತ್ರಗಳು
http://lh3.ggpht.com/_17bpKkVaQM8/SUYUT7VxaLI/AAAAAAAAExE/ayleJNnX_mc/s720/IMG_3639.JPG
http://lh3.ggpht.com/_17bpKkVaQM8/SUYUXSu7JqI/AAAAAAAAExM/zfeuuCfgCl4/s720/IMG_3640.JPG
ಹ್ಹ್ ಹ್ಹ ಹ್ಹ ಹ್ಹ.... ಅವರ ಭಯ ಕನ್ಡು ನಗು ಬನ್ತು...
ಪ್ರತ್ಯುತ್ತರಅಳಿಸಿನಿಮ್ಮ ಚಾರಣ ಚೆನ್ನಾಗಿ ಬರೆದಿದ್ದೀರ.
ಅರುಣ್, ಮಿಥುನ್, ಸುನಿಲ್, ಗಿರೀಶ್
ಪ್ರತ್ಯುತ್ತರಅಳಿಸಿಧನ್ಯವಾದ. ಹಾವುಗಳೆಂದರೆ ನನಗೂ ವಿಪರೀತ ಭಯ. ಒಂದೆಡೆ ರಸೆಲ್ಸ್ ವೈಪರ್, ಇನ್ನೊಂದೆಡೆ ಯಾವುದೋ ಹಾವು ಮತ್ತು ಮಗದೊಂದೆಡೆ ಮರಿ ಹೆಬ್ಬಾವೊಂದು ಸಿಕ್ಕಿದ್ದು ಬಿಟ್ಟರೆ ಬೇರೆಲ್ಲೂ ಹಾವಿನ ದರ್ಶನವಾಗಿಲ್ಲ.