ಶನಿವಾರ, ಜೂನ್ 05, 2010

ವೀರಭದ್ರೇಶ್ವರ ದೇವಾಲಯ - ನಿಲ್ಕುಂದ


ಸೂರು ಇಲ್ಲದ ಅಪರೂಪದ ದೇವಾಲಯವಿದು. ನೀಲ್ಕುಂದದ ವೀರಭದ್ರೇಶ್ವರನಿಗೆ ಮೊದಲಿನಿಂದಲೇ ಸೂರು ಇರಲಿಲ್ಲ ಎಂಬುವುದು ಹಳ್ಳಿಗರ ವಾದ. ಈಗ ೫ ವರ್ಷದ ಹಿಂದೆ ಅಲ್ಲಿ ಇಲ್ಲಿ ಕಾಡಿ ಬೇಡಿ ದೇಣಿಗೆ ಒಟ್ಟು ಮಾಡಿ ಹಳ್ಳಿಗರೇ ಕಾಂಕ್ರೀಟ್ ಸೂರನ್ನು ನಿರ್ಮಿಸಿದ್ದಾರೆ. ಈ ಕೆಲಸವಿನ್ನೂ ಪೂರ್ತಿಗೊಂಡಿಲ್ಲ. ನೀಲ್ಕುಂದ ಬಸ್ಸು ನಿಲ್ದಾಣದ ಸಮೀಪದಲ್ಲೇ ಈ ದೇವಾಲಯವಿದ್ದರೂ ಪ್ರವಾಸಿಗರ ಗಮನ ಸೆಳೆಯುವುದರಲ್ಲಿ ದೇವಾಲಯ ವಿಫಲಗೊಳ್ಳುತ್ತದೆ. ಮೊದಲ ನೋಟಕ್ಕೆ ಏನೂ ವಿಶೇಷ ಕಾಣಬರುವುದಿಲ್ಲ. ದೊಡ್ಡ ಗಾತ್ರದ ಕಪ್ಪು ಕಲ್ಲುಗಳನ್ನು ಒತ್ತೊತ್ತಾಗಿ ನಿಲ್ಲಿಸಿ ಆಯತಾಕಾರದ ಏನೋ ಒಂದು ಕಟ್ಟಡವನ್ನು ನಿರ್ಮಿಸಿದಂತೆ ತೋರುತ್ತದೆ. ಈಗ ನಿರ್ಮಿಸಲಾಗಿರುವ ಕಾಂಕ್ರೀಟ್ ಛಾವಣಿ ಮತ್ತು ಮೊದಲಿನಿಂದಲೂ ಇದ್ದ ಕರಿಕಲ್ಲಿನ ಗೋಡೆಗಳು ಒಂದಕ್ಕೊಂದು ಮ್ಯಾಚ್ ಆಗುವುದಿಲ್ಲ. ಸರಕಾರದಿಂದ ಅನುದಾನ ಬರದೇ ಅರ್ಧಕ್ಕೆ ನಿಲ್ಲಿಸಲಾಗಿರುವ ಯಾವುದೋ ಕಟ್ಟಡ ಎಂಬ ಭಾವನೆ ಬರದೇ ಇರಲಾರದು. ದೇವಾಲಯ ಅಂತ ಗೊತ್ತೇ ಆಗುವುದಿಲ್ಲ.


ಊರಿನ ಸಮೀಪವಿರುವ ಜಲಧಾರೆಯ ಕರಿಕಲ್ಲುಗಳನ್ನು ಬಳಸಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಜಲಧಾರೆಯ ಸಮೀಪ ದೇವಾಲಯಕ್ಕೆಂದು ಕಲ್ಲುಗಳನ್ನು ಕೆತ್ತಿ ಅಲ್ಲೇ ಬಿಟ್ಟಿರುವುದನ್ನು ಈಗಲೂ ಕಾಣಬಹುದು. ಜಲಧಾರೆಯಿಂದ ದೇವಾಲಯದವರೆಗೆ ಕಲ್ಲುಗಳನ್ನು ಸಾಗಿಸಿರುವುದೇ ಸೋಜಿಗದ ವಿಷಯ. ದೇವಾಲಯದ ನಿರ್ಮಾಣವನ್ನು ಅರ್ಧಕ್ಕೇ ಯಾಕೆ ನಿಲ್ಲಿಸಲಾಯಿತು ಎಂಬ ಬಗ್ಗೆ ಮಾಹಿತಿ ನನಗೆ ಸಿಗಲಿಲ್ಲ. ಹಳ್ಳಿಗರ ಪ್ರಕಾರ ನಡೆದಿರುವುದು ಇದು - ’ಒಂದೇ ರಾತ್ರಿಯಲ್ಲಿ ದೇವಾಲಯವನ್ನು ನಿರ್ಮಿಸಬೇಕೆಂದು ದೇವತೆಗಳು(!) ಪಣ ತೊಟ್ಟಿದ್ದು, ಸೂರು ನಿರ್ಮಾಣಕ್ಕೆ ಕೈ ಹಾಕಬೇಕೆನ್ನುವಾಗ ಬೆಳಕು ಹರಿದಿದ್ದರಿಂದ ದೇವಾಲಯದ ನಿರ್ಮಾಣ ಅಷ್ಟಕ್ಕೇ ನಿಂತುಹೋಯಿತು. ಜಲಧಾರೆಯ ಬಳಿ ಕಾಣುವ ಒಪ್ಪವಾಗಿ ಕೆತ್ತಲಾಗಿರುವ ಕಲ್ಲುಗಳನ್ನು ಕೂಡಾ ಬೆಳಕು ಹರಿದಿದ್ದರಿಂದ ಅಲ್ಲೇ ಬಿಟ್ಟು ದೇವತೆಗಳು ಹಾರಿಹೋದರು’ - ಅಬ್ಬಾ, ಕತೆ ಹಣೆಯುವುದು ಎಂದರೆ ಇದು!


ದೇವಾಲಯ ಎಲ್ಲಾ ರೀತಿಯಲ್ಲೂ ಅಪೂರ್ಣವಾಗಿದೆ. ಹೊರಗೋಡೆಯಲ್ಲಿರುವ ಕೆತ್ತನೆಗಳಿರಲಿ, ೩ ದ್ವಾರಗಳ ನಿರ್ಮಾಣವಿರಲಿ, ಗರ್ಭಗುಡಿಯ ಪ್ರದಕ್ಷಿಣಾ ಪಥವಿರಲಿ, ನವರಂಗದ ಕಂಬಗಳಿರಲಿ ಹೀಗೆ ಎಲ್ಲಿ ಗಮನಿಸಿದರೂ ದೇವತೆಗಳು ಅದ್ಯಾವ ಗಡಿಬಿಡಿಯಲ್ಲಿದ್ದರೋ ಎಂದು ಅಚ್ಚರಿ ಹುಟ್ಟಿಸುತ್ತದೆ. ದೇವಾಲಯ ನಿರ್ಮಾಣದಲ್ಲಿ ಎಂದೂ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಆ ಕಾಲದಲ್ಲಿ ಏನೋ ಒಂದು ಮಹತ್ತರವಾದ ಘಟನೆ ಸಂಭವಿಸಿದ್ದು ದೇವಾಲಯ ನಿರ್ಮಾಣ ಇಷ್ಟಕ್ಕೇ ನಿಂತುಹೋಗಿದ್ದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಿರಬಹುದು.


ಯಾವಾಗ ದೇವಾಲಯ ನಿರ್ಮಿಸಲಾಯಿತು ಎಂಬ ಮಾಹಿತಿಯೂ ನನಗೆ ಸಿಗಲಿಲ್ಲ. ೧೫ನೇ ಶತಮಾನದಲ್ಲಿ ವೈಭವದಿಂದ ಮೆರೆದಿದ್ದ ದೇವಾಲಯ ಎಂದಷ್ಟೇ ತಿಳಿದುಬಂತು. ಇಂದಿನ ಶೋಚನೀಯ ಸ್ಥಿತಿ ನೋಡಿದರೆ ಅಂದು ರಥೋತ್ಸವ ಮತ್ತು ಗುಗ್ಗಳ ಸೇವೆಗಳು ನಡೆಯುತ್ತಿದ್ದವು ಎಂದರೆ ನಂಬಲಾಗದು. ವೀರಭದ್ರೇಶ್ವರನಿಗೆ ಇಂದು ಪೂಜೆ ಸಲ್ಲಿಸಲು ಬರುವವರ ಸಂಖ್ಯೆ ಕೂಡಾ ವಿರಳ. ಇದೊಂದು ವೀರಶೈವ ಸಂಪ್ರದಾಯದ ದೇವಾಲಯ.


ವಿಶಾಲ ನವರಂಗ, ಅಂತರಾಳ, ಪ್ರದಕ್ಷಿಣಾ ಪಥ ಮತ್ತು ಗರ್ಭಗುಡಿಗಳನ್ನು ದೇವಾಲಯ ಹೊಂದಿದೆ. ಪ್ರಮುಖ ದ್ವಾರದ ಇಕ್ಕೆಲಗಳಲ್ಲಿ ನಿಂತಿರುವ ಭಂಗಿಯಲ್ಲಿ ತಲಾ ಎರಡು ಸಿಂಹಗಳ ಕೆತ್ತನೆಯಿದೆ. ಪಾರ್ಶ್ವಕ್ಕೊಂದರಂತೆ ಇನ್ನೆರಡು ದ್ವಾರಗಳಿದ್ದೂ, ಎಲ್ಲಾ ದ್ವಾರಗಳು ನವರಂಗಕ್ಕೇ ತೆರೆದುಕೊಳ್ಳುತ್ತವೆ. ನವರಂಗದಿಂದ ಸುಮಾರು ೩ ಅಡಿ ಎತ್ತರದಲ್ಲಿ ಅಂತರಾಳವಿದೆ. ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರಂತೆ ಕೆತ್ತನೆಗಳಿವೆ ಮತ್ತು ಇಲ್ಲಿಂದಲೇ ಪ್ರದಕ್ಷಿಣಾ ಪಥ ಆರಂಭವಾಗುತ್ತದೆ.


ಗರ್ಭಗುಡಿಯ ಇಕ್ಕೆಲಗಳಲ್ಲೂ ಇನ್ನೆರಡು ಕೆತ್ತನೆಗಳಿವೆ. ಗರ್ಭಗುಡಿಯ ದ್ವಾರದ ಮೇಲೆ ಹೆಚ್ಚಿನೆಡೆ ಗಜಲಕ್ಷ್ಮೀಗೆ ಆನೆಗಳು ನಮಸ್ಕರಿಸುವ ಕೆತ್ತನೆಯಿರುತ್ತದೆ. ಇಲ್ಲಿ ಶಿವಲಿಂಗಕ್ಕೆ ಆನೆಗಳು ನಮಸ್ಕರಿಸುವ ಕೆತ್ತನೆಯಿದೆ. ಗರ್ಭಗುಡಿಯಲ್ಲಿರುವ ವೀರಭದ್ರೇಶ್ವರನ ಮೂರ್ತಿಯನ್ನು ಕೆಂಪು ಹೊದಿಕೆಯಿಂದ ಸುತ್ತಲಾಗಿತ್ತು.


ದೇವಾಲಯದ ಕರಿಕಲ್ಲುಗಳ ಮೇಲೆ ಕಪ್ಪು ಹಾವಸೆ ಬೆಳೆದು ಇದ್ದ ಕೆತ್ತನೆಗಳೆಲ್ಲಾ ಸಮೀಪಕ್ಕೆ ಹೋಗಿ ನಿಂತರೂ ಗಮನಕ್ಕೆ ಬರುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಸುಂದರ ಕೆತ್ತನೆಗಳಿವೆ. ಬೇರೆಲ್ಲೂ ಕಾಣದ ಕೆಲವು ಎಕ್ಸ್-ಕ್ಲೂಸಿವ್ ಕೆತ್ತನೆಗಳ ಒಡೆಯ ಈ ವೀರಭದ್ರೇಶ್ವರ. ಬೇಡರ ಕಣ್ಣಪ್ಪ ತನ್ನ ಕಣ್ಣನ್ನು ಕೀಳುವ ಕೆತ್ತನೆ ಗಮನ ಸೆಳೆಯಿತು.


ಗಣೇಶನ ಕೆತ್ತನೆ, ಆಕಳು ಕರುವಿಗೆ ಹಾಲುಣಿಸುವ ಕೆತ್ತನೆ, ಹನುಮಂತನ ಕೆತ್ತನೆ, ಹುಲಿ ಜಿಂಕೆಯನ್ನು ನೋಡುತ್ತಾ ಘರ್ಜಿಸುವ ಕೆತ್ತನೆ, ಅನೇಕ ಮಿಥುನ ಶಿಲ್ಪಗಳು, ಶೌಚಕ್ಕೆ ತೆರಳಿದ ಬಳಿಕ ತೊಳೆದುಕೊಳ್ಳುವ ಕೆತ್ತನೆ, ಇತ್ಯಾದಿ.


ಪುರಾತತ್ವ ಇಲಾಖೆಯ ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿದ್ದಾರೆಯೇ ವಿನ: ಇಲಾಖೆಯ ಸುಪರ್ದಿಗೆ ಒಳಪಡಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಊರಿನವರಾದರೂ ಕೆತ್ತನೆಗಳ ಮೇಲಿರುವ ಧೂಳು, ಹಾವಸೆಗಳನ್ನು ಶುದ್ಧಗೊಳಿಸಿದರೆ ಇದ್ದದ್ದನ್ನಾದರೂ ಉಳಿಸಿಕೊಳ್ಳಬಹುದು.

ಮಾಹಿತಿ: ಸಂದೇಶ ಹೆಗಡೆ

5 ಕಾಮೆಂಟ್‌ಗಳು: