ಶನಿವಾರ, ಡಿಸೆಂಬರ್ 12, 2009

ಮನೆಗೆ ಬಿತ್ತು ಬೀಗ

ನಿನ್ನೆ (ಡಿಸೆಂಬರ್ ೧೦, ೨೦೦೯) ಹಳದೀಪುರದ ನಾನು ಬಹಳ ಪ್ರೀತಿಸುತ್ತಿದ್ದ ನಮ್ಮ ಮೂಲ ಮನೆಗೆ ಬೀಗ ಬಿತ್ತು. ಈ ಮನೆಯಲ್ಲಿ ವಾಸವಿದ್ದ ಚಿಕ್ಕಪ್ಪ ನವೆಂಬರ್ ೨೨, ೨೦೦೯ ರಂದು ಮೃತರಾದರು. ಆದ್ದರಿಂದ ೧೯೦೮ ರಿಂದ ೨೦೦೯ ರವರೆಗೆ ನೂರಾ ಒಂದು ವರ್ಷ ಜನರ ವಾಸವಿದ್ದ ಮನೆಗೆ ಈಗ ಬೀಗ ಜಡಿಯಲಾಗಿದೆ.

ಈ ಮನೆಯಲ್ಲಿ ೨೦೦೧ ರವರೆಗೆ ತುಂಬು ಸಂಸಾರ ವಾಸವಾಗಿತ್ತು: ಚಿಕ್ಕಪ್ಪ, ಚಿಕ್ಕಮ್ಮ ಮತ್ತು ೩ ಗಂಡು ಮಕ್ಕಳು. ೨೦೦೧ ರಲ್ಲಿ ಚಿಕ್ಕಮ್ಮ ತೀರಿಕೊಂಡರು. ಅಮ್ಮನನ್ನು ಬಹಳ ಪ್ರೀತಿಸುತ್ತಿದ್ದ ಹಿರಿಮಗ ನೀತಿನ ಅಮ್ಮ ತೀರಿಕೊಂಡ ಆ ಮನೆಯಲ್ಲಿರಲಾಗದೆ ದೂರದೂರಿಗೆ ಉದ್ಯೋಗಕ್ಕೆ ಸೇರಿಕೊಂಡ. ಎರಡನೇಯವನು ಡಿಸೆಂಬರ್ ೭, ೨೦೦೮ ರಂದು ೨೫ರ ಯುವ ವಯಸ್ಸಿನಲ್ಲಿ ತೀರಿಕೊಂಡ. ಈಗ ಚಿಕ್ಕಪ್ಪ ಅವರಿಬ್ಬರನ್ನು ಹಿಂಬಾಲಿಸಿದ್ದಾರೆ. ಮನೆಯಲ್ಲಿ ಉಳಿದವನು ಈಗ ಕೊನೆಯ ಮಗ ೨೧ ವರ್ಷ ವಯಸ್ಸಿನ ನಯನ ಮಾತ್ರ. ಈಗ ನಿತಿನ ಉದ್ಯೋಗವಿದ್ದ ಊರಿಗೆ ಹಿಂದಿರುಗಿದ. ನಯನ, ಆಡ್ಕಾರದ (ಹೊನ್ನಾವರ-ಗೇರುಸೊಪ್ಪಾ ರಸ್ತೆಯಲ್ಲಿದೆ) ತನ್ನ ತಾಯಿಯ ಮನೆ ಸೇರಿಕೊಂಡಿದ್ದಾನೆ.

ನಾವಂತೂ ಉಡುಪಿಗೆ ಬಂದು ೩೨ ವರ್ಷಗಳಾದವು. ಅದಕ್ಕೂ ಮೊದಲು ೫ ವರ್ಷ ಹಳಿಯಾಳದಲ್ಲಿದ್ದೆವು. ಆದರೂ ನನಗೆ ಹಳದೀಪುರದ ಈ ಮನೆಯೇ ಮನೆ. ನಾಲ್ಕಾರು ದಿನ ರಜೆ ಬಂತೆಂದರೆ ನಾನಿಲ್ಲಿ ಹಾಜರು. ರಜೆ ಬರುವ ಮೊದಲೇ ಚಿಕ್ಕಪ್ಪನಿಂದ ಅಪ್ಪನಿಗೆ ನನ್ನನ್ನು ಮತ್ತು ತಮ್ಮನನ್ನು ಕಳಿಸುವಂತೆ ಪತ್ರ ಬರುತ್ತಿತ್ತು. ೧೯೯೫ರ ನಂತರ ಓದು ಮತ್ತು ಉದ್ಯೋಗದ ಕಾರಣಗಳಿಂದ ಮನಬಂದಂತೆ ಹಳದೀಪುರಕ್ಕೆ ತೆರಳಲು ಆಗುತ್ತಿರಲಿಲ್ಲವಾದರೂ, ಅವಕಾಶ ಸಿಕ್ಕಾಗೆಲ್ಲಾ ಅಲ್ಲಿರುತ್ತಿದ್ದೆ.


೨೦೦೭ರ ಎಪ್ರಿಲ್ ತಿಂಗಳಲ್ಲಿ ನಡೆದ ನನ್ನ ವಿವಾಹವೇ ಈ ಮನೆಯಲ್ಲಿ ನಡೆದ ಕೊನೆಯ ಸಮಾರಂಭ. ನನ್ನ, ಅಪ್ಪನ ಮತ್ತು ಅಮ್ಮನ ಪರಿಚಯದವರೆಲ್ಲಾ ಉಡುಪಿ ಮತ್ತು ಆಸುಪಾಸಿನ ಸಮೀಪದವರಾಗಿದ್ದರೂ ಮತ್ತು ಅಮ್ಮನಿಗೆ ಉಡುಪಿಯಲ್ಲೇ ನನ್ನ ಮದುವೆ ನಡೆಯಬೇಕೆಂಬ ಆಸೆ ಇದ್ದರೂ, ನಾನು ಮಾತ್ರ ಮದುವೆ ಹಳದೀಪುರದ ಮನೆಯಲ್ಲೇ ನಡೆಯಬೇಕೆಂದು ಪಟ್ಟು ಹಿಡಿದು ಮದುವೆ ದಿಬ್ಬಣ ಅಲ್ಲಿಂದಲೇ ಹೊರಡುವಂತೆ ನೋಡಿಕೊಂಡಿದ್ದೆ. ಆಗ ಚಿಕ್ಕಪ್ಪ ತುಂಬು ಸಂಭ್ರಮದಿಂದ ಆಚೀಚೆ ಓಡಾಡಿದ್ದರು. ಅವರ ಸಂಭ್ರಮವನ್ನು ಕಂಡು ಹಳದೀಪುರವೇ ಬೆರಗಾಗಿತ್ತು. ಮದುವೆ ನಡೆಯುತ್ತಿದ್ದಲ್ಲಿಯೂ ಅದೇ ಸಂಭ್ರಮ ಮುಂದುವರಿದಿತ್ತು. ಅತಿಥಿಗಳನ್ನು ಬರಮಾಡಿಕೊಳ್ಳುವುದೇನು... ಬೀಳ್ಕೊಡುವುದೇನು... ಮದುವೆ ನಂತರದ ಎರಡು ದಿನಗಳಲ್ಲಿರುವ ಔತಣ ಸಮಾರಂಭದಲ್ಲೂ ಅದೇ ಉತ್ಸಾಹ, ಸಂತೋಷ. ಮತ್ತೆ ಯುವಕನಾಗಿದ್ದರು ಚಿಕ್ಕಪ್ಪ. ತನ್ನ ಅಣ್ಣನ ಮಗನ ಮದುವೆಗೇ ಈ ಪರಿ ಸಂಭ್ರಮಿಸುತ್ತಿರಬೇಕಾದರೆ ಇನ್ನು ತನ್ನ ೩ ಗಂಡುಮಕ್ಕಳ ವಿವಾಹದಲ್ಲಿ ಇನ್ಯಾವ ಪರಿ ಸತೋಷಪಟ್ಟಾನು ಈತ, ಎಂದು ಹಳದೀಪುರ ಆಡಿಕೊಳ್ಳುತ್ತಿತ್ತು. ಆದರೆ... ಆ ದಿನಗಳು ಬರಲೇ ಇಲ್ಲ.


ಅಪ್ಪನಿಗೆ ಇನ್ನೂ ೪ ತಮ್ಮಂದಿರಿದ್ದಾರೆ. ಇವರೆಲ್ಲರೂ ದೂರದ ಊರುಗಳಲ್ಲಿ ಉದ್ಯೋಗದಲ್ಲಿದ್ದಾರೆ. ಒಬ್ಬರು ವಿದೇಶದಲ್ಲಿದ್ದಾರೆ. ೧೪ನೇ ದಿವಸದ ನಂತರ ಎಲ್ಲರೂ ಹಿಂತಿರುಗಿದ ಬಳಿಕ ಮೊನ್ನೆ ಬುಧವಾರ ರಾತ್ರಿ ಮಲಗಿದಾಗ ಅದೇನೋ ಬೇಸರ. ನಾಳೆ ಮನೆಗೆ ಬೀಗ ಎಂಬ ಯೋಚನೆ. ನಿನ್ನೆ ಮುಂಜಾನೆ ನೀತಿನ ಮತ್ತು ನಯನ ಇಬ್ಬರನ್ನೂ ಹೊನ್ನಾವರದ ನ್ಯಾಯಾಲಯಕ್ಕೆ ಕರೆದೊಯ್ದು, ಇವರಿಬ್ಬರೇ ಚಿಕ್ಕಪ್ಪನ ವಾರಿಸುದಾರರು ಎಂದು ಸಾಬೀತುಪಡಿಸಲು ಅವಶ್ಯವಿದ್ದ ಕಾಗದ ಪತ್ರಗಳನ್ನೆಲ್ಲಾ ರೆಡಿ ಮಾಡಿ ನ್ಯಾಯಾಧೀಶರ ಸಹಿ ಹಾಕಿ ಮನೆಗೆ ಹಿಂತಿರುಗಿದಾಗ ಮಧ್ಯಾಹ್ನ ೩ ಗಂಟೆ.

ಅಪ್ಪ ಊಟ ಮಾಡಿ ನಮಗಾಗಿ ಕಾಯುತ್ತಿದ್ದರು. ನಾವು ೩ ಮಂದಿ ಬೇಗನೇ ಊಟ ಮುಗಿಸಿದೆವು. ಚಿಕ್ಕಪ್ಪನ ಬಲಗೈ ಬಂಟನಂತಿದ್ದ ಪಕ್ಕದ್ಮನೆ ಉದಯನದ್ದೇ ಅಡಿಗೆ. ಎಲ್ಲಾ ಕೋಣೆಗಳಿಗೂ ಒಂದೊಂದಾಗಿ ಬೀಗ ಹಾಕುವ ಪ್ರಕ್ರಿಯೆ ಶುರುವಾಯಿತು. ನನಗಂತೂ ನೋಡಲಾಗುತ್ತಿರಲಿಲ್ಲ. ನಯನ ಬಿಕ್ಕಿ ಬಿಕ್ಕಿ ಅಳುತ್ತಾ ಬೀಗ ಜಡಿಯುತ್ತಿದ್ದ. ಆತನ ಅಳು ಜೋರಾಗುತ್ತಿದ್ದಂತೆಯೇ, ಆತನನ್ನು ಬದಿಗೆ ಕುಳ್ಳಿರಿಸಿ, ಉದಯನಿಗೆ ಬೀಗ ಹಾಕಲು ಹೇಳಿದೆ. ಮೊದಲು ಮಾಳಿಗೆಗೆ ತೆರಳಿ ಅಲ್ಲಿನ ೨ ಕೋಣೆಗಳಿಗೆ ಬೀಗ ಜಡಿದು ಬಂದೆವು. ನಂತರ ಅಡಿಗೆ ಮನೆಗೆ ಮತ್ತು ಇನ್ನುಳಿದ ೨ ಕೋಣೆಗಳಿಗೆ. ನಂತರ ದೇವರ ಕೋಣೆಗೆ ತೆರಳಿ ನಾನು, ಅಪ್ಪ, ನಯನ ಮತ್ತು ನೀತಿನ ದೇವರಿಗೆ ನಮಸ್ಕರಿಸಿ ಬಂದೆವು. ದೇವರ ಕೋಣೆಯಿಂದ ಹೊರಬರುವಾಗ ದು:ಖ ತಾಳಲಾಗದೆ ಅಪ್ಪ ಗಳಗಳನೆ ಅತ್ತುಬಿಟ್ಟರು. ಉದಯ ಅವರನ್ನು ಅಪ್ಪಿ ಹಿಡಿದು ಸಮಾಧಾನಗೊಳಿಸತೊಡಗಿದ. ಯಾವುದೇ ಸನ್ನಿವೇಶದಲ್ಲೂ ಗಟ್ಟಿಗನಾದ ನನಗೂ ನಾನು ಭಾವುಕನಾಗುವುದನ್ನು ತಡೆದುಕೊಳ್ಳಲು ಅಪ್ಪ ಆ ಪರಿ ಅಳುವುದನ್ನು ನೋಡಿದಾಗ ಆಗಲಿಲ್ಲ. ಕಣ್ಣುಗಳು ತೇವಗೊಂಡರೂ ಕೂಡಲೇ ಸಾವರಿಸಿಕೊಂಡೆ. ಈ ದೇವರ ಕೋಣೆಗೇ ಲೀನಾ ಬಲಗಾಲಿಟ್ಟು ಒಳಗೆ ಬಂದದ್ದು ಆಗ ನೆನಪಾಯಿತು. ನಾವು ಮನೆಯ ಗೇಟು ದಾಟಿದ ಬಳಿಕ ದೇವರ ಕೋಣೆಗೆ ಬೀಗ ಹಾಕಿ ಬೀಗದಕೈ ತಂದುಕೊಡುವಂತೆ ಉದಯನಿಗೆ ಸೂಚಿಸಿದೆ.


ತುಳಸಿಗೂ ನಮಸ್ಕರಿಸಿ, ಗೇಟು ದಾಟಿದಾಗ ಅಲ್ಲಿ ನೆರೆದಿದ್ದ ಕೇರಿಯ ಜನರೆಲ್ಲರ ಕಣ್ಣಲ್ಲೂ ನೀರು. ಹಳದೀಪುರದವರೆಲ್ಲರ ಪಾಲಿಗೂ ನಯನ ’ಪುಟ್ಟು’ ಆಗಿದ್ದ. ಕೊಂಕಣಿಯಲ್ಲಿ ಪುಟ್ಟು ಎಂದರೆ ’ಸಣ್ಣವ’ ಎಂದು. ಇನ್ನು ಈ ಪುಟ್ಟು ಇಲ್ಲಿರುವುದಿಲ್ಲ ಎಂದು ಎಲ್ಲರಿಗೂ ವಿಷಾದ. ಅಳು ಎಲ್ಲಾ ಜೋರಾಗುತ್ತಿದ್ದಂತೆಯೇ, ಅಪ್ಪನನ್ನು ರಿಕ್ಷಾದೊಳಗೆ ಕುಳ್ಳಿರಿಸಿ, ಮನೆಯೆಡೆ ಶೂನ್ಯವಾಗಿ ದಿಟ್ಟಿಸುತ್ತಿದ್ದ ನೀತಿನನನ್ನು ರಿಕ್ಷಾದೊಳಗೆ ತಳ್ಳಿದೆ. ಅಷ್ಟರಲ್ಲಿ ಉದಯ ದೇವರ ಕೋಣೆಯ ಬೀಗದಕೈ ತಂದುಕೊಟ್ಟ. ಆ ಜಾಗ ಬಿಟ್ಟು ಕದಲಲು ಒಪ್ಪದ ನಯನನನ್ನು ಉದಯ ಧೈರ್ಯದ ಮಾತುಗಳನ್ನಾಡಿ, ಬೈದು ರಿಕ್ಷಾದೊಳಗೆ ಕುಳ್ಳಿರಿಸಿದ. ನಂತರ ನಾನು ಕುಳಿತುಕೊಂಡ ಬಳಿಕ ಆಟೋ ಹೊನ್ನಾವರ ಬಸ್ಸು ನಿಲ್ದಾಣದೆಡೆ ದೌಡಾಯಿಸಿತು. ಸಂಜೆ ೪ರ ಸಮಯವಾಗಿತ್ತು.

15 ಕಾಮೆಂಟ್‌ಗಳು:

  1. ಓದಿ ಒಂಥರಾ ಬೇಜಾರಾಯಿತು. ಮುಂದಿನ ವರ್ಷಗಳಲ್ಲಿ ನಮ್ಮ ಹಳ್ಳಿಗಳ ಹಲವಾರು ಮನೆಗಳಿಗೆ ಇದೇ ರೀತಿ ಬೀಗಬೀಳುವುದು ಖಾತ್ರಿ ಇದೆ.

    ಪ್ರತ್ಯುತ್ತರಅಳಿಸಿ
  2. ಬರಹ ತುಂಬಾ ಚೆನ್ನಾಗಿದೆ. ಮನ ಮುಟ್ಟಿತು. ಮುಂದೊಂದು ದಿನ ನಾವು ಸಹ ಈ ರೀತಿ ಬೇರುಗಳ ಕಳಚಿಕೊಂಡು ಪೇಟೆಗೆ ಹೋಗುವ ಸಾದ್ಯತೆ ಹೆಚ್ಚಾಗಿದೆ.

    ಪ್ರತ್ಯುತ್ತರಅಳಿಸಿ
  3. ಓದುತ್ತಿದ್ದಂತೆ, ನನ್ನ ಕಣ್ಣುಗಳೂ ಸಹ ತೇವಗೊಂಡವು.

    ಪ್ರತ್ಯುತ್ತರಅಳಿಸಿ
  4. ಓದಿ ಬಹಳ ಬೇಸರವಾಯಿತು... ನಿನ್ನೆ ಅಲ್ಲಿ, ಇಂದಿಲ್ಲಿ, ನಾಳೆ ಇನ್ನೆಲ್ಲೋ?!

    ಪ್ರತ್ಯುತ್ತರಅಳಿಸಿ
  5. ಪ್ರಿಯ ರಾಜೇಶ್,

    ತುಂಬ ದು:ಖವೆನಿಸುವ ಸಂಗತಿಯನ್ನ ಹಾಕಿದ್ದೀರಿ. ಇದು ಒಂದು ಮನೆಯ ಕತೆ ಅಂತ ನನಗೆ ಅನಿಸುತ್ತಿಲ್ಲ.

    ನೀವು ಬರೆದ ಕಾಳಿ,ನೇತ್ರಾವತಿ,ಮತ್ತು ಇತರೇ ಪ್ರಕೃತಿಯನ್ನ ವಿಕೃತಿಗೊಳಿಸುವ ಘಟನೆಗಳಷ್ಟೇ ತೀವ್ರವಾಗಿ ನಮ್ಮ ನಮ್ಮಲ್ಲೇ ಘಟಿಸುತ್ತಿರುವ ಇದಕ್ಕೆ ಏನು ಮಾಡಬೇಕೋ ಗೊತ್ತಾಗುತ್ತಿಲ್ಲ.

    :(

    ಪ್ರೀತಿಯಿಂದ
    ಸಿಂಧು

    ಪ್ರತ್ಯುತ್ತರಅಳಿಸಿ
  6. Nimma latest post odi bahala bejaarayitu. Namma halligalelladara katheye nimma ee lekhana emdu tiLidu hrudaya bhaaravaayitu. Namma berugaLige navu antukondaroo adannu uLisalaarada paristhithiya bagge duhkhavaayitu. Nimage ee duhkhavannu bharisuva shakti devaru karunisali endu korikolluttene.

    ಪ್ರತ್ಯುತ್ತರಅಳಿಸಿ
  7. ಹ್ರದಯ ತಟ್ಟುವ ಬರಹ,
    ಮನಸ್ಸಿಗೆ ಏನೋ ವೇದನೆಯಾಯಿತು
    ಹಳ್ಳಿಗಳಲ್ಲಿ ಇದು ತೀರಾ ಮಾಮೂಲಿಯಾಗುತ್ತಿದೆ
    ಕೆಲಸದ ನಿಮಿತ್ತ ಹೊರಹೋಗುವ ನಮ್ಮನ್ಥವರಿಂದಾಗಿ ಹಳ್ಳಿ
    ಅನಾಥವಾಗುತ್ತಿದೆ

    ಪ್ರತ್ಯುತ್ತರಅಳಿಸಿ
  8. ಇದು ಒಂದು ಬೇಸರದ ಅನುಭವ. ನಮ್ಮಿಂದ ಏನೂ ಮಾಡಲಾಗುತ್ತಿಲ್ಲವಲ್ಲ ಎಂಬ ವಿಚಾರವು ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ.

    ಇದು ಇಂದಿನ ಹಳ್ಳಿಗಳ ದುಸ್ಥಿತಿ.

    ಪ್ರತ್ಯುತ್ತರಅಳಿಸಿ
  9. ಓದಿ ಬಹಳ ಬೇಸರವಾಯಿತು,ಮನಮುಟ್ಟುವಂತೆ ನಿಮ್ಮ ಮನೆಯ ಬಗೆ ಬರೆದಿದ್ದಿರಿ. ಏಲ್ಲಾ ಹಳ್ಳಿಯ ಮನೆಗಳ ದುಸ್ಥಿತಿ ಹೀಗೆಯೆ ಇದೆ ಅನ್ನಬಹುದು.
    ನಿಮ್ಮ ಹಳದಿಪುರದ ಮನೆಯಲ್ಲಿ ಒಂದು ದಿನ ವಾಸ್ತವ್ಯ ಮಾಡಿದ ನೆನಪು ಇನ್ನು ಸಹ ಇದೆ.೧೨ ಗಂಟೆ ರಾತ್ರಿ ನಾವು ತಲಪಿದ್ದರೂ ಸಹ ನಮಗೆ ಒಳ್ಳೆಯ ಸ್ವಾಗತ ಸಿಕ್ಕಿತ್ತು,ಮರೆಯಲಾಗದ ಅನುಭವ.

    ಪ್ರತ್ಯುತ್ತರಅಳಿಸಿ
  10. ವಿದಾಯ-ಯಾವುದೇ ಆಗಲಿ ಬಲು ಘೋರ...ಮನಸ್ಸು ಸಾವಿನ ಕುರಿತು ಗಂಭೀರವಾಗುವುದು ಇಂಥ ಸಂದರ್ಭಗಳಲ್ಲೇ ಅನಿಸುತ್ತದೆ.

    ಪ್ರತ್ಯುತ್ತರಅಳಿಸಿ
  11. ಛೇ...
    ಅಂದು ಉತ್ತರ ಕನ್ನಡದ ಚಾರಣಕ್ಕೆ ಹೋಗುವ ಮುನ್ನಾ ದಿನ ನಿಮ್ಮ ಹಳದೀಪುರದ ಮನೆಯ ಮಹಡಿಯಲ್ಲಿ ನಾವು ಚಾರಣಿಗ ಮಿತ್ರರೆಲ್ಲ ಮಲಗಿದ್ದ ನೆನಪು ಇನ್ನೂ ಮಾಸಿಲ್ಲ, ಮಾಸುವುದೂ ಇಲ್ಲ, ಅಂತಹ ಮನೆಗೆ ಬೀಗ ಹಾಕುವುದೆಂದರೆ ನಿಜಕ್ಕೂ ಕರುಳುಹಿಂಡುವ ಪರಿಸ್ಥಿತಿ....ನೀವೆಲ್ಲರೂ ಕನಿಷ್ಠ ವರ್ಷಕ್ಕೆ ನಾಲ್ಕು ಬಾರಿಯಾದರೂ ಒಟ್ಟು ಸೇರಿ ಈ ಮನೆಯಲ್ಲಿನ ಜೀವಂತಿಕೆ ಉಳಿಯುವಂತೆ ಮಾಡುವ ಅವಕಾಶಗಳು ಬರಲಿ ಎಂದು ಹಾರೈಸುವೆ.

    ಪ್ರತ್ಯುತ್ತರಅಳಿಸಿ
  12. ಟಿಪ್ಪಣಿ ಬರೆದ ಗೆಳೆಯರಿಗೆಲ್ಲರಿಗೂ ವಂದನೆಗಳು. ಬೀಗ ಜಡಿಯದೇ ಬೇರೆ ವಿಧಾನ ಸದ್ಯಕ್ಕಿರಲಿಲ್ಲ. ಇನ್ನು ಮುಂದೆ ಏನಾಗುತ್ತೋ ಭಗವಂತನೇ ಬಲ್ಲ. ಆದರೂ ವರ್ಷಕ್ಕೊಮ್ಮೆ ಚೌತಿಯಂದು ಮನೆ ಮಂದಿಯೆಲ್ಲಾ ಸೇರುವುದು ಇದ್ದೇ ಇದೆ. ಮನೆಯ ಮಕ್ಕಳೆಲ್ಲಾ ದೂರದ ಊರುಗಳಲ್ಲಿ ಹೊಟ್ಟೆಪಾಡಿಗೆ ತೆರಳಿದಾಗ, ಮನೆಯಲ್ಲೇ ಇದ್ದವರ ಜೀವನ ಏರುಪೇರಾದರೆ ಹೀಗೇ ಆಗುವುದು. ’ಇತ್ತ ಮನೆಯನ್ನೂ ಬಿಡಲಾಗದು, ಅತ್ತ ಉದ್ಯೋಗ ನೀಡಿದ ಊರನ್ನೂ ಬಿಡಲಾಗದು’, ಎಂಬ ಪರಿಸ್ಥಿತಿ. ನೀವೆಲ್ಲರೂ ಹೇಳಿದಂತೆ ನಮ್ಮ ಹಳ್ಳಿಗಳ ಹೆಚ್ಚಿನ ಮನೆಗಳಿಗೆ ಇದೇ ಪರಿಸ್ಥಿತಿ ಬೇರೆ ಬೇರೆ ಕಾರಣಗಳಿಂದ ಬರುತ್ತಿದೆ.

    ಪ್ರತ್ಯುತ್ತರಅಳಿಸಿ