ತನ್ನ ೧೭ರ ಹರೆಯದಲ್ಲೇ ರಾಜ್ಯ ತಂಡಕ್ಕೆ ಆಡುವ ಮೂಲಕ ರಣಜಿಗೆ ಪಾದಾರ್ಪಣೆ ಮಾಡಿದವರು ರಾಬಿನ್ ಉತ್ತಪ್ಪ. ಫರೀದಾಬಾದಿನಲ್ಲಿ ಹರ್ಯಾನ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ೩೨ ಎಸೆತಗಳನ್ನು ಎದುರಿಸಿ ೪೦ ಓಟಗಳನ್ನು ಗಳಿಸಿದರು. ಈಗಲೂ ಅದೇ ರೀತಿಯಲ್ಲಿ ಆಡುತ್ತಿದ್ದಾರೆ. ರಾಬಿನ್ ಒಬ್ಬ ಶಾಟ್-ಲೆಸ್ ವಂಡರ್. ಈತನಲ್ಲಿರುವುದೇ ನಾಲ್ಕೈದು ರೀತಿಯ ಹೊಡೆತಗಳು. ಅದನ್ನೇ ಬಂಡವಾಳ ಮಾಡಿಕೊಂಡು ಈವರೆಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು. ಆದರೆ ಇನ್ನು ಮುಂದೆ ತನ್ನ ಆಟವನ್ನು ಗಣನೀಯವಾಗಿ ಸುಧಾರಿಸದಿದ್ದರೆ, ಕ್ರಿಕೆಟಿಗನೊಬ್ಬನಿಗೆ ’ಬ್ರೆಡ್ ಎಂಡ್ ಬಟರ್’ ಎನ್ನುವ ಹೊಡೆತಗಳನ್ನು ತನ್ನ ಆಟದಲ್ಲಿ ಅಳವಡಿಸಕೊಳ್ಳದಿದ್ದರೆ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲೇ ಜೀವನ ಕಳೆಯುವ ಸಾಧ್ಯತೆಗಳಿವೆ.
ರಾಜ್ಯ ತಂಡಕ್ಕೆ ಅರುಣ್ ಕುಮಾರ್ ನಂತರ ಒಬ್ಬ ಸಮರ್ಥ ಆರಂಭಿಕ ಆಟಗಾರನಾಗಿ ದೊರಕಿದವರು ರಾಬಿನ್. ಆಟದ ಶೈಲಿ ವೇಗವಾಗಿ ರನ್ ಗಳಿಸುವುದು. ಬೌಂಡರಿ ಮತ್ತು ಸಿಕ್ಸರ್ ಬಾರಿಸುವುದೇ ರನ್ ಗಳಿಸಲು ಇರುವ ಏಕೈಕ ದಾರಿ ಎಂಬ ಮನೋಭಾವ. ರಾಜ್ಯಕ್ಕೆ ಆಡಿದ ಆರಂಭದ ದಿನಗಳಲ್ಲಿ ’ಬೌಲರ್ಸ್ ಅಸ್ಸಾಸಿನ್’ ಎಂಬ ಹೆಸರು ಉತ್ತಪ್ಪನಿಗಿತ್ತು. ಈಗೀಗ ರಾಬಿನ್ ಆಡುತ್ತಿರುವ ಪರಿ ನೋಡಿದರೆ ಇದೇ ಬೌಲರುಗಳು ’ರಾಬಿನ್ಸ್ ಅಸ್ಸಾಸಿನ್ಸ್’ಗಳಾಗಿದ್ದಾರೆ ಎನ್ನಬಹುದೇನೋ.
ತನ್ನ ಮೊದಲ ರಣಜಿ ಋತುವಿನಲ್ಲಿ ಒಂದೇ ಪಂದ್ಯ ಆಡಿದ ರಾಬಿನ್, ೨ನೇ ಋತುವಿನಲ್ಲಿ ೨ ಪಂದ್ಯ ಆಡಿ ೮.೦೦ರ ಸರಾಸರಿಯಲ್ಲಿ ರನ್ನು ಗಳಿಸಿ ವೈಫಲ್ಯ ಕಂಡರು. ೩ನೇ ಮತ್ತು ೪ನೆ ಋತುಗಳಲ್ಲಿ ಕ್ರಮವಾಗಿ ೪೨.೦೦ ಮತ್ತು ೩೫.೦೦ ಸರಾಸರಿಯಲ್ಲಿ ಸಾಧಾರಣ ಆಟ ತೋರ್ಪಡಿಸಿದರು. ಇದೇ ಸಮಯದಲ್ಲಿ ತನ್ನ ಚೊಚ್ಚಲ ಅಂತರಾಷ್ಟ್ರೀಯ ಏಕದಿನ ಪಂದ್ಯವನ್ನೂ ಆಡಿದರು. ಆದರೆ ರಾಬಿನ್ ನಿಜವಾಗಿ ತನ್ನ ನೈಜ ಬ್ಯಾಟಿಂಗ್ ಸಾಮರ್ಥ್ಯ ತೋರ್ಪಡಿಸಿದ್ದು ೨೦೦೬-೦೭ರ ರಣಜಿ ಋತುವಿನಲ್ಲಿ. ಭರ್ಜರಿ ಫಾರ್ಮಿನಲ್ಲಿದ್ದ ರಾಬಿನ್, ೭ ಪಂದ್ಯಗಳಲ್ಲಿ ೬೬.೦೦ರ ಸರಾಸರಿಯಂತೆ ೮೫೪ ಓಟಗಳನ್ನು ಕಲೆಹಾಕಿದರು. ಇಲ್ಲಿದ್ದವು ೪ ಶತಕಗಳು. ಆಗ ರಾಬಿನ್ ಭಾರತ ತಂಡಕ್ಕೆ ಮತ್ತೆ ಆಯ್ಕೆಯಾದರು. ಹಾಗಾಗಿ ಆ ಋತುವಿನ ಸೆಮಿ-ಫೈನಲ್ ಪಂದ್ಯಕ್ಕೆ ರಾಬಿನ್ ಇರಲಿಲ್ಲ ಮತ್ತು ಕರ್ನಾಟಕ ಸೋತಿತು.
ನಂತರ ಒಂದು ವರ್ಷ ರಾಷ್ಟ್ರ ತಂಡದೊಡನೆ ರಾಬಿನ್ ಹನಿಮೂನ್! ಇದೇ ಸಮಯದಲ್ಲಿ ಟ್ವೆಂಟಿ೨೦ ವಿಶ್ವಕಪ್ ಗೆದ್ದ ತಂಡದಲ್ಲಿ ಉತ್ತಮ ಸಾಧನೆ. ನಂತರ ಆಸ್ಟ್ರೇಲಿಯ ಪ್ರವಾಸದಲ್ಲಿ ಏಕದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಉತ್ತಮ ನಿರ್ವಹಣೆ. ಇಲ್ಲೇ ಎಡವಟ್ಟು ಆಗಿರಬಹುದು ಎಂದು ತೋರುತ್ತದೆ. ಆಸ್ಟ್ರೇಲಿಯ ವಿರುದ್ಧದ ೨ ಫೈನಲ್ ಪಂದ್ಯಗಳಲ್ಲಿ ಸಚಿನ್ ಜೊತೆ ಉತ್ತಪ್ಪನ ಆರಂಭಿಕ ಜೊತೆಯಾಟ ಭಾರತ ಎರಡೂ ಪಂದ್ಯಗಳನ್ನು ಗೆಲ್ಲಲು ಮುಖ್ಯ ಕಾರಣವಾಯಿತು. ಆದರೆ ಇಲ್ಲಿ ಉತ್ತಪ್ಪ ತನ್ನ ಎಂದಿನ ಬಿರುಸಿನ ಆಟವನ್ನು ತೋರ್ಪಡಿಸಿರಲಿಲ್ಲ. ವಿಕೆಟ್ ಕಳಕೊಳ್ಳದಂತೆ ನಿಧಾನವಾಗಿ ಆಡಿ ಉತ್ತಮ ಅಡಿಪಾಯ ಹಾಕುವ ರೀತಿಯಲ್ಲಿ ಆಡುವಂತೆ ಅವರಿಗೆ ಸೂಚನೆ ನೀಡಲಾಗಿತ್ತು. ಅದೇ ರೀತಿಯಲ್ಲಿ ಉತ್ತಪ್ಪ ಆಡಿದರು ಕೂಡಾ. ಆ ಕ್ಷಣದಿಂದಲೇ ಉತ್ತಪ್ಪನ ಎಲ್ಲ ಹೊಡೆತಗಳು ಮಾಯವಾದಂತೆ ಭಾಸವಾಗತೊಡಗಿದವು.
ನಂತರ ನಡೆದ ಐಪಿಎಲ್ ಪಂದ್ಯಾಟದಲ್ಲಿ ಮುಂಬೈ ಪರ ಆಡಿದ ಉತ್ತಪ್ಪ ೩೦೦ಕ್ಕೂ ಹೆಚ್ಚಿನ ಓಟಗಳನ್ನು ಗಳಿಸಿದರಾದರೂ ನಿರೀಕ್ಷಿತ ಸಾಧನೆಯಾಗಿರಲಿಲ್ಲ. ವೇಗವಾಗಿ ರನ್ನು ಗಳಿಸಲು ಪರದಾಡತೊಡಗಿದರು. ಅದುವರೆಗೆ ತನ್ನ ಬತ್ತಳಿಕೆಯಲ್ಲಿದ್ದ ಸೀಮಿತ ಸಾಧನಗಳಿಂದ ರನ್ನುಗಳನ್ನು ಸೂರೆಗೊಳ್ಳುತ್ತಿದ್ದ ಉತ್ತಪ್ಪನಿಗೆ ಕಡಿವಾಣ ಹಾಕಲು ಬೌಲರುಗಳು ಕಲಿತುಬಿಟ್ಟಿದ್ದರು. ಸೀಮಿತ ಹೊಡೆತಗಳಿದ್ದರೆ ಇದೇ ಅಪಾಯ. ಎಲ್ಲಾ ರೀತಿಯ ಹೊಡೆತಗಳನ್ನು ಆಡುವಲ್ಲಿ ನಿಸ್ಸೀಮರಾದ ಕ್ರಿಕೆಟಿಗರಿಗೆ ಕಡಿವಾಣ ಹಾಕುವುದು ಕಷ್ಟದ ಕೆಲಸ. ಆದರೆ ರಾಬಿನ್ ಅಂತಹ ಆಟಗಾರನಾಗಿರಲಿಲ್ಲ. ಇಂದಿಗೂ ಆಗಿಲ್ಲ. ಒಬ್ಬ ಯುವ ಕ್ರಿಕೆಟಿಗ ರಾಷ್ಟ್ರೀಯ ಕ್ರಿಕೆಟ್ ಇರಲಿ ಅಥವಾ ಅಂತರಾಷ್ಟ್ರೀಯ ಕ್ರಿಕೆಟ್ ಇರಲಿ ಎಲ್ಲಾ ಪಂದ್ಯಗಳಲ್ಲೂ ಮತ್ತು ಯಾವಾಗಲೂ ಕಲಿಯುವ ಮನೋಭಾವ ಹೊಂದಿರಬೇಕು. ಆದರೆ ರಾಬಿನ್, ಏಳು ವರ್ಷಗಳ ಹಿಂದೆ ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಹೇಗೆ ಆಡಿದರೋ, ಅದೇ ರೀತಿಯಲ್ಲಿ ಇಂದಿಗೂ ಆಡುತ್ತಿದ್ದಾರೆ. ಕಲಿತ ಹೊಸ ಹೊಡೆತವೆಂದರೆ ವಿಕೆಟ್ ಹಿಂದೆ ’ಸ್ಕೂಪ್’ ಮಾಡುವುದು ಮಾತ್ರ!
ರಣಜಿ ಪಂದ್ಯಗಳಲ್ಲಿ ದೆಹಲಿ ತಂಡವನ್ನು ಒಬ್ಬ ಯುವ ಕ್ರಿಕೆಟಿಗ ಪ್ರತಿನಿಧಿಸುತ್ತಿದ್ದ. ಉತ್ತಪ್ಪನಂತೆ ಆತನೂ ರಾಷ್ಟ್ರ ತಂಡದಲ್ಲಿ ಒಂದೆರಡು ಅವಕಾಶ ಪಡೆದಿದ್ದ ಮತ್ತು ಆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದರಲ್ಲಿ ವಿಫಲನಾಗಿದ್ದ. ೨೦೦೭ರ ವಿಶ್ವಕಪ್ ಪಂದ್ಯಾವಳಿಗೆ ಈ ಆಟಗಾರ ಮತ್ತು ಉತ್ತಪ್ಪನ ನಡುವೆ ಆರಂಭಿಕ ಆಟಗಾರನ ಸ್ಥಾನಕ್ಕೆ ಪೈಪೋಟಿಯಿತ್ತು. ಕೊನೆಗೂ ಉತ್ತಪ್ಪನೇ ಆಯ್ಕೆಯಾದ. ತುಂಬಾ ನಿರಾಶನಾದ ದೆಹಲಿಯ ಆ ಕ್ರಿಕೆಟಿಗ ಅದನ್ನು ಹೇಳಿಕೊಂಡ ಕೂಡ. ಆದರೆ ಉತ್ತಪ್ಪ ಅದೇ ಲೆವೆಲ್-ನಲ್ಲಿ ಇದ್ದುಬಿಟ್ಟರೆ, ಈತ ಮಾತ್ರ ತನ್ನ ಆಟವನ್ನು ಬಹಳ ಸುಧಾರಿಸಿಕೊಂಡ. ದೇಶೀಯ ಪಂದ್ಯಗಳಲ್ಲಿ ಮತ್ತೆ ರನ್ನುಗಳನ್ನು ಸೂರೆಗೈದ. ಅತ್ತ ಉತ್ತಪ್ಪ ವಿಶ್ವಕಪ್-ನಲ್ಲಿ ಹೀನಾಯವಾಗಿ ವೈಫಲ್ಯವನ್ನು ಕಂಡರು. ಉತ್ತಪ್ಪನನ್ನು ತಂಡದಲ್ಲಿಟ್ಟುಕೊಂಡೇ ಆಯ್ಕೆಗಾರರು ದೆಹಲಿಯ ಈ ಕ್ರಿಕೆಟಿಗನ ಸಾಧನೆಯನ್ನು ಗಮನಿಸಿ ಆತನಿಗೆ ಮತ್ತೊಂದು ಅವಕಾಶವನ್ನು ನೀಡಿದರು. ಸಿಕ್ಕ ಈ ಎರಡನೇ ಅವಕಾಶವನ್ನು ಗೌತಮ್ ಗಂಭೀರ್ ಯಾವ ಪರಿ ಬಳಸಿಕೊಂಡರೆಂಬುದು ಮತ್ತೆ ಹೇಳಬೇಕಾಗಿಲ್ಲ. ತನ್ನ ಆಟವನ್ನು ಬಹಳ ಸುಧಾರಿಸಿಕೊಂಡ ಎಲ್ಲ ಹೊಡೆತಗಳನ್ನು ಆಡುವ ಗೌತಮ್ ಗಂಭೀರ್ ಹೆಸರು ಈಗ ಎಲ್ಲಾ ರೀತಿಯ (೨೦-೨೦, ಏಕದಿನ, ಟೆಸ್ಟ್) ಪಂದ್ಯಗಳಲ್ಲಿ ಭಾರತ ತಂಡದ ಅಂತಿಮ ಹನ್ನೊಂದರ ಆಯ್ಕೆ ಮಾಡುವಾಗ ಮೊದಲಿಗೆ ಇರುತ್ತದೆ. ಕೇವಲ 2 ವರ್ಷಗಳ ಹಿಂದೆ ಪ್ರತಿಸ್ಪರ್ಧಿಗಳಾಗಿದ್ದವರು ಉತ್ತಪ್ಪ ಮತ್ತು ಗಂಭೀರ್. ಈಗ ಗಂಭೀರ್ ಎಲ್ಲಿ ... ಉತ್ತಪ್ಪ ಎಲ್ಲಿ? ಹೋಲಿಕೆಯೇ ಇಲ್ಲ.
ಆನ್ ಡ್ರೈವ್, ಕವರ್ ಡ್ರೈವ್ ಮತ್ತು ಸ್ಟ್ರೈಟ್ ಡ್ರೈವ್ ಈ ೩ ಹೊಡೆತಗಳಿಲ್ಲದಿದ್ದರೆ ಒಬ್ಬ ಕ್ರಿಕೆಟಿಗ ಆಗಲು ಹೇಗೆ ಸಾಧ್ಯ. ರಾಬಿನ್ ಅಪರೂಪಕ್ಕೊಮ್ಮೆ ಕವರ್ ಡ್ರೈವ್ ಆಡುತ್ತಾರೆ ಎಂಬುದನ್ನು ಹೊರತುಪಡಿಸಿದರೆ ಅವರಲ್ಲಿ ಈ ಹೊಡೆತಗಳ ಕೊರತೆಯಿದೆ. ಅವರು ಆಡುವುದು ’ಲಾಫ್ಟೆಡ್ ಆನ್ ಡ್ರೈವ್’ ಮಾತ್ರ. ಈ ಹೊಡೆತಕ್ಕೇ ಎಷ್ಟೋ ಸಲ ತಮ್ಮ ವಿಕೆಟ್ ಕಳಕೊಂಡಿದ್ದಾರೆ. ಒಂದೆರಡು ಹೆಜ್ಜೆ ಮುಂದೆ ಬಂದು ಚೆಂಡನ್ನು ಎತ್ತಿ ಬಾರಿಸುವ ಕೆಟ್ಟ ಹೊಡೆತ ಇದ್ದೇ ಇದೆ. ಅಡ್ಡ ಬ್ಯಾಟಿನ ಹೊಡೆತಗಳೇ ರಾಬಿನ್ ಆಟದಲ್ಲಿ ತುಂಬಿಹೋಗಿವೆ. ಬರೀ ಸ್ಟೈಲ್ ಮಾಡಿಕೊಂಡು, ಒಂದು ಸಲ ಕ್ರಾಸ್ ತೋರುವ ಹಾರ ಹಾಕಿಕೊಂಡು ಮತ್ತೊಂದು ಸಲ ಇನ್ನೊಂದೇನೋ ತೋರುವ ಹಾರ ಹಾಕ್ಕೊಂಡು, ತಲೆ ಕೂದಲನ್ನು ಅಡ್ಡಡ್ಡ ಕತ್ತರಿಸಿಕೊಂಡು, ಲೇಟೇಸ್ಟ್ ಕಾರುಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಅಡ್ಡಾಡುತ್ತ, ’ಹ್ಯಾಪನಿಂಗ್’(!?) ಜಾಗಗಳಿಗೆ ಎಡತಾಕುತ್ತಾ, ಬೇಕಾಬಿಟ್ಟಿ ತಿನ್ನುತ್ತಾ ತೂಕ ಹೆಚ್ಚಿಸಿಕೊಳ್ಳುತ್ತಾ, ಹೊಟ್ಟೆ ಬೆಳೆಸಿಕೊಳ್ಳುತ್ತಾ, ಸಂಕಟ ಬಂದಾಗ ಕುಕ್ಕೆ ಸುಬ್ರಹ್ಮಣ್ಯ ಮತ್ತು ಇನ್ನಷ್ಟು ಸಂಕಟ ಬಂದಾಗ ಯೇಸುಕ್ರಿಸ್ತ ಎನ್ನುತ್ತಾ ಇರುವುದನ್ನು ಬಿಟ್ಟು ತನ್ನ ಆಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಅಭ್ಯಾಸ ಮಾಡುವುದು ಒಳ್ಳೆಯದು.
೨೦-೨೦ ವಿಶ್ವಕಪ್ ಪಂದ್ಯಾವಳಿಯ ಬಳಿಕ ಏಕದಿನ ಪಂದ್ಯವೊಂದರಲ್ಲಿ ಬ್ರೆಟ್ ಲೀ ಎಸೆತವೊಂದರಲ್ಲಿ ಉತ್ತಪ್ಪ ’ಬೀಟ್’ ಆದ ಬಳಿಕ ಲೀ, ’ಇಟ್ಸ್ ಅ ಡಿಫರೆಂಟ್ ಬಾಲ್ ಗೇಮ್ ಮೇಟ್’ ಅಂದಾಗ ರಾಬಿನ್, ’ಬಟ್ ಇಟ್ಸ್ ದ ಸೇಮ್ ಬ್ಯಾಟ್’ ಎಂಬ ಉತ್ತರ ನೀಡಿದ್ದರು. ಈಗ ಅದೇ ಬ್ಯಾಟಿನಿಂದ ರನ್ನುಗಳು ಬರುತ್ತಿಲ್ಲ. ಕಳೆದ ರಣಜಿ ಋತುವಿನಲ್ಲಿ (೨೦೦೮-೦೯) ರಾಬಿನ್ ೫೦ರ ಸರಾಸರಿಯಲ್ಲಿ ರನ್ನು ಗಳಿಸಿದರಾದರೂ ಪ್ರಬಲ ತಂಡಗಳ ವಿರುದ್ಧ ಮುಗ್ಗರಿಸಿದರು. ನಂತರ ನಡೆದ ದುಲೀಪ್ ಟ್ರೋಫಿ ಮತ್ತು ದೇವಧರ್ ಟ್ರೋಫಿ ಪಂದ್ಯಾಟಗಳಲ್ಲೂ ಉತ್ತಪ್ಪನದ್ದು ನೀರಸ ಪ್ರದರ್ಶನ. ಉತ್ತಪ್ಪ ಲಯ ಕಳೆದುಕೊಳ್ಳುತ್ತಿರುವುದು ಎದ್ದು ಕಾಣುತ್ತಿತ್ತು. ಇದೆಲ್ಲವನ್ನು ಮನಗಂಡ ಮುಂಬೈ ಇಂಡಿಯನ್ಸ್, ಉತ್ತಪ್ಪನನ್ನು ಬೆಂಗಳೂರು ರಾಯಲ್ಸ್-ಗೆ ಸಾಗಹಾಕಿದರು.
ಪಾರಂಪರಿಕ ಮತ್ತು ಹೊಸ ಕ್ರಿಕೆಟ್ ಹೊಡೆತಗಳನ್ನು ತನ್ನ ಆಟದಲ್ಲಿ ಅಳವಡಿಸಿಕೊಂಡರೆ ಉತ್ತಪ್ಪನಿಗೆ ಉಳಿಗಾಲ. ಅವೇ ಹಳಸಲು ಅಡ್ಡ ಬ್ಯಾಟಿನ ಹೊಡೆತಗಳು, ಲಾಫ್ಟೆಡ್ ಆನ್ ಡ್ರೈವ್, ಸ್ಕೂಪ್, ಒಂದೆರಡು ಹೆಜ್ಜೆ ಮುಂದೆ ಬಂದು ಎತ್ತಿ ಹೊಡೆಯುವುದು ಇವಿಷ್ಟನ್ನೇ ಆಡುತ್ತಾ ಕೂತರೆ ದೇಶೀಯ ಕ್ರಿಕೆಟಿನಲ್ಲೂ ನಂತರ ಪರದಾಡಬೇಕಾಗುತ್ತದೆ. ಅಷ್ಟಕ್ಕೂ ರಾಬಿನ್ ಬಳಿ ಉತ್ತಮ ರಕ್ಷಣಾತ್ಮಕ ಆಟ ಆಡುವ ಕಲೆಯೂ ಇಲ್ಲ. ಇತ್ತ ತಾಳ್ಮೆಯೂ ಇಲ್ಲ. ಈ ಸನ್ನಿವೇಶದಿಂದ ಹೇಗೆ ಹೊರಬರುತ್ತಾರೋ ಕಾದು ನೋಡೋಣ.
Oh my god...
ಪ್ರತ್ಯುತ್ತರಅಳಿಸಿEistella tilkondidira Robin & cricket bagge...Nice to read...
Really You are right, he lost his form,fame &charm.Ee tara adidre uddara adage...
ರಾಕೇಶ್,
ಪ್ರತ್ಯುತ್ತರಅಳಿಸಿಧನ್ಯವಾದ.