ಭಾನುವಾರ, ಅಕ್ಟೋಬರ್ 19, 2008

ಜಲಧಾರೆ - ದೇವಸ್ಥಾನ


ಹಿಡ್ಲುಮನೆಯಲ್ಲಿ ಗದ್ದೆಗಳನ್ನು ದಾಟಿ ಸಿಗುವ ತೊರೆಯೊಂದರ ಜಾಡನ್ನು ಹಿಡಿದು ನಡೆದರೆ ಒಂದರ ಬಳಿಕ ಒಂದರಂತೆ ಹಿಡ್ಲುಮನೆ ಜಲಧಾರೆಯ ೭ ಹಂತಗಳು. ೩ನೇ ಹಂತ ೪೦ ಅಡಿಯಷ್ಟು ಎತ್ತರವಿದೆ ಮತ್ತು ಪ್ರಮುಖ ಹಂತವಾದ ೭ನೇ ಹಂತವು ೮೦ ಅಡಿಯಷ್ಟು ಎತ್ತರವಿದೆ. ಉಳಿದ ಹಂತಗಳು ಹೆಚ್ಚೆಂದರೆ ೧೫-೨೦ ಅಡಿಯಷ್ಟು ಎತ್ತರವಿರಬಹುದು.


೨೦೦೪ ಮೇ ತಿಂಗಳಲ್ಲಿ ರಮೇಶ್ ಕಾಮತ್-ರೊಂದಿಗೆ ಹಿಡ್ಲುಮನೆ ಜಲಧಾರೆಗೆ ತೆರಳಿದ್ದೆ. ಕೆಲವೊಂದೆಡೆ ರಸ್ತೆ ನನ್ನ ಯಮಾಹಾವೇ ಒದ್ದಾಡುವಷ್ಟು ಹದಗೆಟ್ಟಿತ್ತು. ಮೇ ತಿಂಗಳಾದ್ದರಿಂದ ನೀರಿನ ಪ್ರಮಾಣ ಬಹಳ ಕಡಿಮೆಯಿತ್ತು. ಅಕ್ಟೋಬರ್ ೨೦೦೫ರ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಕಾರ್ಯಕ್ರಮದ ಜವಾಬ್ದಾರಿಯನ್ನು ದಿನೇಶ್ ಹೊಳ್ಳ ನನ್ನ ಮೇಲೆ ಹೊರಿಸಿದ್ದರು. ಹಿಡ್ಲುಮನೆಗೆ ಮೇ ತಿಂಗಳಲ್ಲಿ ತೆರಳಿದಾಗಲೇ ರಸ್ತೆ ಅಷ್ಟು ಕೆಟ್ಟಿರುವಾಗ ಈಗ ಅಕ್ಟೋಬರ್ ತಿಂಗಳಲ್ಲಿ ಹೇಗಿರಬಹುದೋ ಎಂಬ ಕಳವಳ ಶುರುವಾಗಿ ಬೇರೆ ದಾರಿಯಿದೆಯೇ ಎಂದು ನೋಡಿ ಬರೋಣವೆಂದು ಹಿಡ್ಲುಮನೆಗೆ ಹೊರಟೆ.


ಈ ಬಾರಿ ಅನಿಲ್ ನನ್ನೊಂದಿಗಿದ್ದು, ನಾವಿಬ್ಬರು ಬೇರೊಂದು ದಾರಿಯಲ್ಲಿ ಹಿಡ್ಲುಮನೆಯತ್ತ ಹೊರಟೆವು. ಈ ದಾರಿ ಚೆನ್ನಾಗಿದ್ದರಿಂದ ಒಂದು ವಾರದ ಬಳಿಕ ಬರುವಾಗ ಇದೇ ದಾರಿಯಲ್ಲಿ ಬಂದರಾಯಿತು ಎಂದು ಹಿಡ್ಲುಮನೆಯತ್ತ ಮುಂದುವರಿದೆವು. ಹಿಡ್ಲುಮನೆಯ ವೈಶಿಷ್ಟ್ಯವೆಂದರೆ ಪ್ರಮುಖ ಹಂತದಿಂದ ಕೆಳಗಿನವರೆಗೆ (ಮೊದಲ ಹಂತದವರೆಗೆ) ನೀರು ಕರಿ ಕಲ್ಲಿನ ಪದರಗಳ ಮೇಲೇ ಹರಿದುಕೊಂಡು ಬರುತ್ತದೆ. ಮಧ್ಯದಲ್ಲೆಲ್ಲೂ ಮಣ್ಣಿರುವ ನೆಲವೇ ಇಲ್ಲ. ಇಷ್ಟೇ ಅಲ್ಲದೇ ನೀರಿನಲ್ಲೇ ನಡೆಯುತ್ತಾ ಸಲೀಸಾಗಿ ಮೇಲಕ್ಕೇರಬಹುದು. ಈ ಕಲ್ಲಿನ ಪದರಗಳ ಮೇಲಿನಿಂದ ಸತತವಾಗಿ ನೀರು ಹರಿಯುತ್ತಿದ್ದರೂ ಜಾರಿ ಬೀಳುವ ಸಂಭವವೇ ಇಲ್ಲ! ಎರಡೂ ಬದಿಯಲ್ಲಿ ದಟ್ಟ ಕಾಡು. ತಂಪು ನೀರಿನಲ್ಲೇ ಮೇಲೇರಬೇಕಾದ್ದರಿಂದ ಎರಡೂ ಪಾದಗಳು ’ಥಂಡಾ’ ಹೊಡೆಯಲು ಶುರುಮಾಡಿದ್ದವು. ೩ನೇ ಹಂತದ ಬಳಿ ಹಳ್ಳದಿಂದ ಬದಿಗೆ ಸರಿದು ಮೇಲೇರಬೇಕು.


ನಂತರದ ದೃಶ್ಯ ಬಹಳ ಸುಂದರ. ನಾಲ್ಕನೇ, ಐದನೇ ಮತ್ತು ಆರನೇ ಹಂತಗಳು, ಒಂದರ ಮೇಲೊಂದು, ನೀರಿನ ಸುಂದರ ಹರಿವಿನಿಂದ ಅಲಂಕೃತಗೊಂಡ ಮೆಟ್ಟಿಲುಗಳಂತೆ ಕಾಣುತ್ತಿದ್ದವು. ಇಷ್ಟೇ ಸಾಲದೆಂಬಂತೆ ಇಕ್ಕೆಲಗಳಲ್ಲಿ ಕಾಡಿನ ಹಸಿರ ತೋರಣ. ಮೇಲಿನಿಂದ ಕಾಡಿನ ಚಪ್ಪರ. ಈ ಹಂತಗಳನ್ನು ದಾಟಿ ನಾನು ಪ್ರಮುಖ ಹಂತದ ಬಳಿ ತಲುಪುವಷ್ಟರಲ್ಲಿ ಅನಿಲ್ ಅದಾಗಲೇ ಸ್ನಾನಕ್ಕಿಳಿದಿದ್ದ.


ಮುಂದಿನ ವಾರವೇ ಯೂತ್ ಹಾಸ್ಟೆಲ್ ತಂಡದೊಂದಿಗೆ ಮತ್ತೆ ಹಿಡ್ಲುಮನೆಯಲ್ಲಿದ್ದೆ. ಮೋಹನನ ’ಶಕ್ತಿ’ ದಾರಿಯಲ್ಲಿ ಇಳಿಜಾರೊಂದನ್ನು ಇಳಿದ ತಕ್ಷಣವೇ ಸ್ತಬ್ಧವಾಯಿತು. ಕತ್ತಲಾಗುತ್ತಿದ್ದರಿಂದ ಜಲಧಾರೆಯ ೩ನೇ ಹಂತದವರೆಗೆ ಮಾತ್ರ ತೆರಳಿದೆವು. ನಾವು ಹಿಂತಿರುಗುವಷ್ಟರಲ್ಲೇ ಮೋಹನ, ’ಶಕ್ತಿ’ಯನ್ನು ಇಳಿಜಾರನ್ನು ಹತ್ತಿಸುವ ವಿಫಲ ಪ್ರಯತ್ನ ಮಾಡುತ್ತಿದ್ದ. ಗಾಲಿಗಳು ಒದ್ದೆ ನೆಲದಲ್ಲಿ ಜಾರಿ ಹಿಂದಕ್ಕೆ ಬರುತ್ತಿದ್ದವು. ಅಚೀಚೆ ಬೆಳೆದಿದ್ದ ಗಿಡಗಳನ್ನು ತಂದು ಚಕ್ರದ ಕೆಳಗೆ ಇಟ್ಟು ಏನೇನೋ ಮಾಡಿ ಇಳಿಜಾರನ್ನು ಮೇಲೇರುವಂತೆ ಮಾಡಿದಾಗ ಸುಮಾರು ೪೦ ನಿಮಿಷಗಳು ಕಳೆದುಹೋದವು.


ಇಷ್ಟೆಲ್ಲಾ ಆಗುವಾಗ ನನ್ನ ಕ್ಯಾಮರಾಗಳಿದ್ದ ಬ್ಯಾಗ್ ಮತ್ತು ರೈನ್-ಕೋಟ್ ಇದ್ದ ಬ್ಯಾಗುಗಳನ್ನು ಅಲ್ಲೇ ಪೊದೆಯೊಂದರ ಬಳಿ ಇರಿಸಿದ್ದೆ. ಈಗ ನೋಡಿದರೆ ರೈನ್-ಕೋಟ್ ಇದ್ದ ಬ್ಯಾಗ್ ಮಾತ್ರ ಇತ್ತು. ೨ ಕ್ಯಾಮರಾಗಳಿದ್ದ ಬ್ಯಾಗ್ ಮಾಯ! ಆ ದಾರಿಯಾಗಿ ಒಬ್ಬ ಹಳ್ಳಿಗ ಹೋಗಿದ್ದನ್ನು ನಮ್ಮಲ್ಲಿ ಒಂದಿಬ್ಬರು ನೋಡಿದ್ದರು. ಆತನೇ ಒಯ್ದಿರಬೇಕೆಂದು ಎಲ್ಲರಿಗೂ ಖಚಿತವಾಗಿತ್ತು. ಈಗ ಕತ್ತಲಲ್ಲಿ ಆತನನ್ನು ಎಲ್ಲಿ ಹುಡುಕುವುದು? ’ಶಕ್ತಿ’ ಯನ್ನು ಆ ತೊಡಕಿನಿಂದ ದಾಟಿಸಿದೆವೆಂದು ಎಲ್ಲರೂ ಸಂತೋಷಪಡುತ್ತಿರಬೇಕಾದರೆ, ನನ್ನ ಕ್ಯಾಮರಾಗಳು ಕಳೆದುಹೋದ ಘಟನೆ. ಸ್ವಲ್ಪ ಮುಂದೆ ಹಳ್ಳಿಗರ ಗುಂಪೂಂದು ಕಾಣಿಸಿದಾಗ, ನಮ್ಮ ಸುಧೀರ್ ಕುಮಾರ್ ಅವರಲ್ಲಿ ಬ್ಯಾಗ್ ಕಳೆದುಹೋಗಿದ್ದರ ಬಗ್ಗೆ ತಿಳಿಸಿ, ನನ್ನ ಮನೆಯ ದೂರವಾಣಿ ಸಂಖ್ಯೆಯನ್ನು ಅವರಿಗೆ ನೀಡಿ, ಆ ದಾರಿಯಾಗಿ ಒಬ್ಬ ಹಳ್ಳಿಗ ಹೋದದ್ದನ್ನೆಲ್ಲಾ ಅವರಿಗೆ ತಿಳಿಸಿದರು.

ಇಲ್ಲಿ ನಮಗೆ ಸುಮಾರು ಒಂದು ಗಂಟೆ ಕಳೆದುಹೋಯಿತು. ಸಿಗಂದೂರಿನ ಹೋಟೇಲಿನ ಯಜಮಾನರೊಂದಿಗೆ ದೂರವಾಣಿಯಲ್ಲೇ ಮಾತನಾಡಿ ೨೭ ಚಾರಣಿಗರಿಗೆ ಆ ದಿನ ರಾತ್ರಿಯ ಊಟ ತಯಾರು ಇಡಲು ಸೂಚಿಸಿದ್ದೆ. ಅಂತೆಯೇ ದೇವಸ್ಥಾನದಲ್ಲಿ ತಂಗಲು ವ್ಯವಸ್ಥೆ ಮಾಡಲೂ ವಿನಂತಿಸಿದ್ದೆ. ಅವರದ್ದು ಒಂದೇ ವಿನಂತಿ. ರಾತ್ರಿ ೮ ಗಂಟೆಯ ಒಳಗೆ ಬಂದುಬಿಡಿ ಎಂದು. ನಮ್ಮ ಈಗಿನ ಪರಿಸ್ಥಿತಿ ನೋಡಿದರೆ ಅದು ಸಾಧ್ಯವೇ ಇರಲಿಲ್ಲ.

ಮುಂದೆ ಸಿಗುವ ತೊರೆಯ ಬಳಿ ಈಗ ಇದ್ದೆವು. ತೊರೆಯ ಒಂದು ತುದಿಯಲ್ಲಿ ದೊಡ್ಡ ಕೊಳವೆಯೊಂದನ್ನು ರಸ್ತೆಯ ಅಂಚಿಗೆ ಹೂತಿಡಲಾಗಿತ್ತು. ಬರುವಾಗ ಇಳಿಜಾರಾಗಿದ್ದರಿಂದ ’ಶಕ್ತಿ’ ಸಲೀಸಾಗಿ ಬಂತು. ಈಗ ಹಿಂದಿನ ಗಾಲಿಗಳು ಆ ಕೊಳವೆಯನ್ನು ಮೇಲೇರಿ ದಾಟಲು ಕೇಳಲೇ ಇಲ್ಲ. ಇಲ್ಲಿ ಮತ್ತಷ್ಟು ಸಮಯ ವ್ಯರ್ಥವಾಯಿತು. ೨೦ ನಿಮಿಷಗಳ ಪ್ರಯತ್ನದ ಬಳಿಕ ಹಿಂದಿನ ಗಾಲಿಗಳು ಕೊಳವೆ ದಾಟಿದವು ಆದರೆ ಒಂದು ದೊಡ್ಡ ಶಬ್ದದೊಂದಿಗೆ. ’ಶಕ್ತಿ’ಯ ಯಾವುದೋ ಭಾಗ ಹಾನಿಗೊಳಗಾಗಿತ್ತು. ಆದರೂ ಮೋಹನ ತನ್ನ ಮುಖಭಾವದಲ್ಲಿ ಏನನ್ನೂ ತೋರ್ಗೊಡದೆ ಸಿಗಂದೂರಿನತ್ತ ಹೊರಟ. ಆ ತೊರೆಯಿಂದ ಸಿಗಂದೂರು ೩೬ಕಿಮಿ ದೂರ. ಸಮಯ ೭.೪೫ ಆಗಿತ್ತು. ಈಗ ಮೊಬೈಲ್ ಸಿಗ್ನಲ್ ಸಿಗುತ್ತಿದ್ದರಿಂದ ಸಿಗಂದೂರಿಗೆ ಕರೆ ಮಾಡಿ ಬರಲು ತಡವಾಗುವುದೆಂದು ತಿಳಿಸಿದೆ.

ಯಾವಾಗಲೂ ಶರವೇಗದಲ್ಲಿ ’ಶಕ್ತಿ’ ಓಡಿಸುವ ಮೋಹನ, ಈಗ ತುಂಬಾ ನಿಧಾನವಾಗಿ ಚಲಾಯಿಸುತ್ತಿದ್ದ. ಬ್ಯಾಕೋಡಿನಲ್ಲಿ ಒಂದೈದು ನಿಮಿಷ ’ಶಕ್ತಿ’ಯನ್ನು ನಿಲ್ಲಿಸಿ ಅದೇನೋ ತಪಾಸಣೆಯನ್ನು ಮೋಹನ ಮಾಡತೊಡಗಿದಾಗ ನನಗೆ ಕಳವಳ ಶುರುವಾಗಿತ್ತು. ಕಾದು ಕಾದು ಬೇಸತ್ತು ಎಲ್ಲಾದರೂ ಸಿಗಂದೂರಿನ ಭಟ್ಟರು ಹೋಟೇಲನ್ನು ಮುಚ್ಚಿಬಿಟ್ಟರೆ? ತಂಡದ ಉಳಿದ ಸದಸ್ಯರು ಕಾಮತರ ಹಾಸ್ಯ ಚಟಾಕಿಗಳನ್ನು ಎಂಜಾಯ್ ಮಾಡುವುದರಲ್ಲಿ ಮಗ್ನರಾಗಿದ್ದರು. ಶಕ್ತಿಯ ತುಂಬಾ ನಗುವಿನ ಸ್ಫೋಟ. ಅಂತೂ ೧೦.೧೫ಕ್ಕೆ ಸಿಗಂದೂರಿನಲ್ಲಿದ್ದೆವು. ೩೬ ಕಿಮಿ ಕ್ರಮಿಸಲು ೧೫೦ ನಿಮಿಷಗಳು! ಇಷ್ಟು ನಿಧಾನವಾಗಿ ಮೋಹನ ನಿದ್ರೆಯಲ್ಲೂ ವಾಹನ ಚಲಾಯಿಸಿವುದಿಲ್ಲ. ದಣಿದಿದ್ದ ಎಲ್ಲರೂ ಭರ್ಜರಿಯಾಗಿಯೇ ಊಟ ಮಾಡಿದರೆನ್ನಿ. ಇಲ್ಲೂ ಕಾಮತರ ಹಾಸ್ಯ ಚಟಾಕಿಗಳು ಅವ್ಯಾಹತವಾಗಿ ಮುಂದುವರಿದವು. ಹೋಟೇಲಿನ ಸಿಬ್ಬಂದಿಗಳೂ ನಮಗೆ ಬಡಿಸುವಾಗ ಕಾಮತರ ಹಾಸ್ಯ ಚಟಾಕಿಗಳಿಗೆ ಬಿದ್ದು ಬಿದ್ದು ನಗುತ್ತಿದ್ದರು!!


ಸಿಗಂದೂರಿನ ಚೌಡೇಶ್ವರಿ ದೇವಿಗೆ ಮುಂಜಾನೆ ೪ಕ್ಕೇ ಮಹಾಪೂಜೆ. ಮುಂಜಾನೆ ೩ಕ್ಕೆ ನಾವೆಲ್ಲರೂ ಮಲಗಿದ್ದ ವಿಶಾಲ ಕೊಠಡಿಯ ಬಾಗಿಲನ್ನು ಬಡಿಯುತ್ತಾ, ’ಏಳಿ, ಏಳಿ, ಪೂಜೆಯ ಸಮಯ, ಇನ್ನೊಂದು ತಾಸು ಮಾತ್ರ. ಎದ್ದು ತಯಾರಾಗಿ’ ಎನ್ನುತ್ತಾ ಎಬ್ಬಿಸುತ್ತಿದ್ದರು. ಪ್ರತಿ ೫ ನಿಮಿಷಕ್ಕೊಮ್ಮೆ ಬಂದು ಬಾಗಿಲು ಬಡಿಯುತ್ತಾ ಎಬ್ಬಿಸಿ ಹೋಗುತ್ತಿದ್ದರು. ರಾತ್ರಿ ಎಲ್ಲರೂ ಮಲಗುವಾಗಲೇ ೧೨ ದಾಟಿತ್ತು. ಎಬ್ಬಿಸಿದವನಿಗೆ ಒಂದಷ್ಟು ಹಿಡಿಶಾಪ ಹಾಕಿದರೂ, ೪.೧೫ರ ಹೊತ್ತಿಗೆ ನಮ್ಮಲ್ಲಿ ಹೆಚ್ಚಿನವರು, ಸ್ನಾನ ಮುಗಿಸಿ ದೇವಿಯ ಸನ್ನಿಧಾನದಲ್ಲಿದ್ದರು.

ತನ್ನಲ್ಲಿದ್ದ ಸಲಕರಣೆಗಳಿಂದ ಸ್ವಲ್ಪ ದುರಸ್ತಿ ಕಾರ್ಯವನ್ನು ಸಿಗಂದೂರಿನಲ್ಲೇ ಮಾಡಿದ್ದ ಮೋಹನ, ಈಗ ತುಮರಿಯಲ್ಲಿ ಸುಮಾರು ೪೫ ನಿಮಿಷ ’ಶಕ್ತಿ’ಯ ದುರಸ್ತಿ ಕಾರ್ಯವನ್ನು ಮುಂದುವರಿಸಿದ. ಹೊಸಗದ್ದೆಯ ನಾಗರಾಜ್ ಮನೆಗೆ ಭೇಟಿ ನೀಡಿ, ದಬ್ಬೆ ಜಲಧಾರೆಗೆ ಚಾರಣ ಮಾಡಿದ ಬಳಿಕ ಭೀಮೇಶ್ವರಕ್ಕೆ ಭೇಟಿ ನೀಡಿ ಕಾರ್ಯಕ್ರಮ ಮುಕ್ತಾಯಗೊಳಿಸಿದೆವು.

ಮನೆ ತಲುಪಿದಾಗ ನನಗೊಂದು ಅಚ್ಚರಿ ಕಾದಿತ್ತು. ’ಕ್ಯಾಮರಾಗಳಿದ್ದ ಬ್ಯಾಗು ಸಿಕ್ಕಿದೆ’ ಎಂಬ ದೂರವಾಣಿ ಕರೆ ಬಂದಿತ್ತು. ಮರುದಿನ ಮುಂಜಾನೆ ೫ಕ್ಕೇ ಹಿಡ್ಲುಮನೆಗೆ ಹೊರಟೆ. ಅಲ್ಲಿ ತಲುಪಿದಾಗ ಹಳ್ಳಿಗರು ಒಬೊಬ್ಬರಾಗಿ ಒಟ್ಟುಗೂಡಿದರು. ಕ್ಯಾಮಾರಾಗಳಿದ್ದ ಬ್ಯಾಗನ್ನು ಒಯ್ದವನ ಮನೆಗೆ ತಲುಪಿದೆವು. ಆ ದಿನ ರಾತ್ರಿ ದಾರಿಯಲ್ಲಿ ಸಿಕ್ಕ ಹಳ್ಳಿಗರೊಂದಿಗೆ ಆ ದಾರಿಯಾಗಿ ತೆರಳಿದ ಹಳ್ಳಿಗನೊಬ್ಬನ ಮೇಲೆ ನಾವು ಸಂಶಯ ವ್ಯಕ್ತಪಡಿಸಿದ್ದರಿಂದ, ಅವರು ಆ ದಾರಿಯಲ್ಲಿರುವ ಐದಾರು ಮನೆಗಳಲ್ಲಿ ವಿಚಾರಿಸಿದಾಗ ಒಂದು ಮನೆಯವರು ತಮ್ಮಲ್ಲಿ ಬ್ಯಾಗ್ ಇದ್ದದ್ದನ್ನು ತಿಳಿಸಿದ್ದರು.

’ಅಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಬ್ಯಾಗ್ ತಗೊಂಡುಬಂದೆ’ ಎಂದು ಆತ ಹೇಳಿದ್ದು ’ಸುಳ್ಳು’ ಎಂದು ತಿಳಿಯಲು ಯಾರಿಗೂ ಹೆಚ್ಚಿನ ಸಮಯ ಬೇಕಾಗಿರಲಿಲ್ಲ. ಆ ಮನುಷ್ಯ ಊರಿನ ಎಲ್ಲರೂ ಇದರ ಬಗ್ಗೆ ಮಾತನಾಡುತ್ತಿರುವಾಗ ಹೆದರಿ ’ವಾರಸುದಾರರಿಲ್ಲದೆ ಈ ಬ್ಯಾಗ್ ಬಿದ್ದಿತ್ತು. ಅದ್ಕೆ ಎತ್ಕೊಂಡು ಬಂದೆ’ ಎಂದು ರೀಲು ಬಿಟ್ಟಿದ್ದ. ’ಹಾಗಿದ್ದಲ್ಲಿ, ನನ್ನ ಮತ್ತೊಂದು ಬ್ಯಾಗನ್ನು ಯಾಕೆ ಅಲ್ಲೇ ಬಿಟ್ಟು ಬಂದೆ. ಅದನ್ನೂ ಎತ್ಕೊಂಡು ಬರಬೇಕಾಗಿತ್ತಲ್ಲವೇ..’ ಎಂದು ನಾನು ಕೇಳಲು ಬಾಯಿ ತೆರೆದವ ಸುಮ್ಮನಾದೆ. ಕ್ಯಾಮರಾಗಳು ಸಿಕ್ಕಿದ್ದೇ ನನಗೆ ಬಹಳ ಸಂತೋಷವಾಗಿತ್ತು. ಇನ್ನು ಆ ವಿಷಯವನ್ನು ಮುಂದಕ್ಕೆ ಒಯ್ಯಲು ನನಗೆ ಆಸಕ್ತಿಯಿರಲಿಲ್ಲ. ಬ್ಯಾಗಿನ ಎಲ್ಲಾ ಕೋಣೆಗಳನ್ನು ಅವರು ತಡಕಾಡಿದ ಕುರುಹುಗಳಿದ್ದವು. ಧನ ರೂಪದಲ್ಲಿ ಏನೂ ಸಿಗದೆ ಅವರು ನಿರಾಶರಾದರೇನೋ. ಮುಖಂಡನಂತಿದ್ದ ಒಬ್ಬ ’ಕ್ಷಮಿಸಿ ಸಾರ್. ನಿಮಗೆ ತೊಂದರೆ ಆಯಿತು. ಎಂದೂ ಹೀಗೆ ಆಗಿರಲಿಲ್ಲ ಇಲ್ಲಿ....’, ಎಂದು ಕಳ್ಳತನವಾದದ್ದನ್ನು ಪರೋಕ್ಷವಾಗಿ ಒಪ್ಪುತ್ತಾ ಕ್ಷಮೆಯಾಚಿಸಿದ.

13 ಕಾಮೆಂಟ್‌ಗಳು:

  1. ಚೆನ್ನಾಗಿದೆ ಬರಹ, ನಿಮ್ಮ ಬರಹ ನೋಡುವಾಗಲೆಲ್ಲ ನಮ್ಮ ಯೂತ್‌ ಹಾಸ್ಟೆಲ್‌ ಟ್ರೆಕ್ಕಿಂಗ್ ನೆನಪು. ಬೆಂಗ್ಲೂರಲ್ಲೂ ನಾವು ಕೆಲವೊಮ್ಮೆ ಸಿಕ್ಕಿದ ಗುಡ್ಡೆ ಹತ್ತಲು ಹೋಗುತ್ತೇವೆ. ಆದ್ರೆ, ಆ ಖುಷಿ ಸಿಗೋದಿಲ್ಲ.

    ಪ್ರತ್ಯುತ್ತರಅಳಿಸಿ
  2. ನಮ್ಮೂರ ಬಳಿಯ ಜಲಪಾತ!:) ನನ್ನ ಅಪ್ಪ ಈ ಜಲಪಾತವನ್ನು ಶೋಧಿಸಿದ ತಂಡದಲ್ಲಿದ್ದರು:) ನಾನೂ ಕೆಲಬಾರಿ ಹೋಗಿ ಬಂದಿದ್ದೇನೆ... ನೈಸ್..

    ಪ್ರತ್ಯುತ್ತರಅಳಿಸಿ
  3. ಏನ್ ಸ್ವಾಮಿ, ಯಾವ್ದೋ ಟ್ರೆಕ್‍ಗೆ ಹೋಗಿ, ಇನ್ಯಾವ್ದೋ ಟ್ರೆಕ್ ಬಗ್ಗೆ ಬರೀತೀರಾ?? ಇರಲಿ ಇರಲಿ.. ;-)

    ಪ್ರತ್ಯುತ್ತರಅಳಿಸಿ
  4. ನಾವು ಕೊಡಚಾದ್ರಿಯಿಂದ ಬರುವಾಗ ಹಿಡ್ಲುಮನೆ ಜಲಪಾತದ ದಾರಿಯಲ್ಲಿ ಬಂದು, ಜಲಪಾತ ಇಳಿಯುವಷ್ಟರಲ್ಲಿ ಸಾಕಾಗಿಹೋಗಿತ್ತು. ಆಗ ತಾನೇ ಮಳೆಗಾಲ ಮುಗಿದಿತ್ತು ಬೇರೆ. ಜಾರಿ ಜಾರಿ ಸಾಕಾಯಿತು ನೋಡಿ. ಆದರೆ ಒಂದು ಬೇಜಾರಿನ ಸುದ್ದಿ ಎಂದರೆ ಈಗ ಹಿಡ್ಲುಮನೆ ಜಲಪಾತದ ಬುಡದಲ್ಲಿ ಸ್ನಾನ ಮಾಡುವುದು ಬಹಳ ಕಷ್ಟವಂತೆ. ನೀರಿಗಿಂತ ಗಾಜಿನ ಚೂರುಗಳೇ ಜಾಸ್ತಿಯಂತೆ ಅಲ್ಲಿ...

    [ಪರಿಸರಪ್ರೇಮಿ] ನಿನಗೆ ಗೊತ್ತಿಲ್ಲ ಅನ್ಸತ್ತೆ, ಇವರ ಬ್ಲಾಗು ಇವರಿಗಿಂತ ೨೦-೩೦ ಪ್ರವಾಸ/ಚಾರಣ ಹಿಂದೆ ಇರತ್ತಂತೆ.

    ಪ್ರತ್ಯುತ್ತರಅಳಿಸಿ
  5. ವ್ಹಾಹ್ ಚೆಂದದ ಚಿತ್ರಗಳು. ನವಿರಾಗಿ ಬರೆದಿದ್ದೀರಾ.

    ಪ್ರತ್ಯುತ್ತರಅಳಿಸಿ
  6. Olle lekhana...
    Nanoo hOgideeni Hidlumanege. December koneyalli.... aavaaga jaastri neeriralilla. Aadre
    Chennaagide.

    ಪ್ರತ್ಯುತ್ತರಅಳಿಸಿ
  7. ಫೋಟೋಗಳೆಲ್ಲಾ ಮನಸೂರೆಗೊಂಡವು.. ಅದರಲ್ಲೂ ರಡನೆಯ ಚಿತ್ರ ತುಂಬಾ ತುಂಬಾ ಇಷ್ಟವಾಯಿತು. ಗುಡ್ಡದಿಂದಿಳಿದು ಬಂದ ಹಸುರಿನ ಬಣ್ಣ ಪೈರುಗಳನ್ನೆಲ್ಲಾ ತುಂಬಿಕೊಂಡಿರುವಂತೆ ಕಂಗೊಳಿಸುತ್ತಿದೆ.

    ಪ್ರತ್ಯುತ್ತರಅಳಿಸಿ
  8. ನೀರಿನಲ್ಲಿ ನಡೆಯುತ್ತಿರುವ ಚಿತ್ರವನ್ನು ಅಚ್ಚರಿಯಾಯಿತು. ಆದರೆ ಶ್ರೀಕಾಂತ್ ಹೇಳುವಂತೆ ಗಾಜುಗಳು ಇದ್ದರೆ ತುಂಬಾ ಕಷ್ಟ.

    ನನ್ನ ಅನುಭವದಂತೆ ಮಳೆಗಾಲದಲ್ಲಿ ಜಲಪಾತಗಳ ಕಡೆ ಹೋಗಬೇಕು. ಇಂಬಳಕ್ಕೆ ಹೆದರಿ "ಕೆಟ್ಟ" ಜನ ಬರುವುದಿಲ್ಲ.

    ಪ್ರತ್ಯುತ್ತರಅಳಿಸಿ
  9. ಪ್ರಿಯಾ,
    ಧನ್ಯವಾದ. ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ಬೆಟ್ಟಗಳಿಗೆ ಚಾರಣಗೈಯುವ ಅನುಭವವೇ ಬೇರೆ. ಆದರೂ ಆಗಾಗ ಚಾರಣಕ್ಕೆ ಹೋಗುತ್ತಾ ಇರುತ್ತೀರಲ್ಲ. ಅದೇ ಸಂತೋಷ.

    ಶ್ರೀನಿಧಿ,
    "ನನ್ನ ಅಪ್ಪ ಈ ಜಲಪಾತವನ್ನು ಶೋಧಿಸಿದ ತಂಡದಲ್ಲಿದ್ದರು". ಅಭಿನಂದನೆಗಳು ಕಣ್ರೀ ಅವರಿಗೆ. ೧೦-೧೫ ವರ್ಷಗಳ ಹಿಂದಿನ ಮಾತಿರಬೇಕು ಅಲ್ವೇ?.

    ಅರುಣ್,
    ಅದು ಯಾವಾಗಲೂ ಹಾಗೇರಿ. ಹೋಗಿ ಬಂದ ಕೂಡಲೇ ಲೇಖನ ಬರೆಯೋದು ಬೋರು. ಯಾವಾಗಲೋ ಬರೆದಿದ್ದನ್ನು ಯಾವಾಗಲೋ ಅಪ್ಲೋಡ್ ಮಾಡುವುದು.

    ಶ್ರೀಕಾಂತ್,
    "ಒಂದು ಬೇಜಾರಿನ ಸುದ್ದಿ ಎಂದರೆ ಈಗ ಹಿಡ್ಲುಮನೆ ಜಲಪಾತದ ಬುಡದಲ್ಲಿ ಸ್ನಾನ ಮಾಡುವುದು ಬಹಳ ಕಷ್ಟವಂತೆ. ನೀರಿಗಿಂತ ಗಾಜಿನ ಚೂರುಗಳೇ ಜಾಸ್ತಿಯಂತೆ ಅಲ್ಲಿ..."
    ಈ ವಿಷಯ ಗೊತ್ತಿರಲಿಲ್ಲ ನೋಡಿ. ನಾನು ಕೊನೆಯ ಬಾರಿ ತೆರಳಿದ್ದು ೩ ವರ್ಷಗಳ ಹಿಂದೆ. ಆವಾಗಂತೂ ಸ್ವಚ್ಛವಾಗಿತ್ತು. ಯಾವುದೇ ಅಪಾಯವಿರಲಿಲ್ಲ. ಇತ್ತೀಚೆಗೆ ಬಾಟಲಿ ಪ್ರಿಯರು ಲಗ್ಗೆ ಇಡುತ್ತಿದ್ದಿರಬೇಕು.

    ಜೋಮನ್, ಅನ್ನಪೂರ್ಣ.
    ಧನ್ಯವಾದಗಳು.

    ತೇಜಸ್ವಿನಿ,
    ಆ ಫೋಟೋ ನನಗೂ ಬಹಳ ಇಷ್ಟದ್ದು. ಜಲಧಾರೆಯ ಚಿತ್ರವಲ್ಲದಿದ್ದರೂ ನನಗಿಷ್ಟವಾದ ಕಾರಣ ಆ ಚಿತ್ರವನ್ನಿ ಇಲ್ಲಿ ಹಾಕಿದ್ದು. ಹಿಡ್ಲುಮನೆ ಹಳ್ಳಿಯ ಚಿತ್ರವದು.

    ಅರವಿಂದ್,
    ನೀರಿನಲ್ಲೇ ನಡೆಯಬೇಕು. ಮಜಾವಾಗಿರುತ್ತೆ. ಎಲ್ಲೂ ಜಾರೋದಿಲ್ಲ ಎಂಬುದೇ ವಿಶೇಷ. ಗಾಜುಗಳ ಬಗ್ಗೆ ನನಗೆ ಈಗ ತಿಳಿಯಿತು. ಎಚ್ಚರದಿಂದ ಹೋಗಬೇಕಾಗಬಹುದು.

    ಪ್ರತ್ಯುತ್ತರಅಳಿಸಿ
  10. ನನ್ನ ಅತ್ತೆ ಮನೆಗೆ ಹೊಳೆಬಾಗಿಲು-ಸಿಗಂದೂರಿನ ಮೇಲೆ ಎಷ್ಟೋ ಬಾರಿ ಹೋಗಿದ್ದೇನೆ. ಆದ್ರೆ ಅಲ್ಲೇ ಒಂದು ಜಲಪಾತ ಇದೇಂತ ಗೊತ್ತಿರ್ಲಿಲ್ಲ.. ಮುಂದಿನ ಸಲ ಹೋಗುವಾಗ ಇಲ್ಲಿಗೂ ಹೋಗೋ ಪ್ಲಾನ್ ಮಾಡ್ಬೇಕಾಯ್ತು. ಥ್ಯಾಂಕ್ಸ್.

    ಪ್ರತ್ಯುತ್ತರಅಳಿಸಿ
  11. ತುಂಬಾ ಚೆನ್ನಾಗಿದೆ ನಿಮ್ಮ ಚಾರಣ ಪ್ರವಾಸ. ನೀವು ಹಿಡ್ಲುಮನೆ ಜಲಪಾತ ಸೇರಲು ಹಿಡಿದ ಅಡ್ಡದಾರಿ, ಅಲ್ಲಿ ತೆಗೆದ ಫೋಟೊಗಳು ಎಲ್ಲಾ ಚೆನ್ನಾಗಿವೆ. ಕಳೆದು ಹೋದ ಕ್ಯಾಮೆರಾ ಬ್ಯಾಗ್, ಸಿಕ್ಕಿತ್ತಲ್ಲ ಅದು ನನಗೂ ಸಂತೋಷವಾಯಿತು. ಜಲಪಾತದ ಫೋಟೊಗಳು ಚೆನ್ನಾಗಿವೆ.
    ಆಹಾಂ! ನನ್ನ ಬ್ಲಾಗಿಗೆ ದೇವರಾಯನ ದುರ್ಗದ ಕೆಲವು ಕಣ್ಣಂಚಿನ ಮಿಂಚುಗಳು ಬಂದಿವೆ ಬನ್ನಿ.
    http://chaayakannadi.blogspot.com

    ಪ್ರತ್ಯುತ್ತರಅಳಿಸಿ
  12. ಸುಶ್ರುತ,
    ಹೋಗಿ ಬನ್ನಿಪ್ಪ. ಚಂದದ ಜಲಧಾರೆ.

    ಶಿವು,
    ವಂದನೆಗಳು.

    ಪ್ರತ್ಯುತ್ತರಅಳಿಸಿ
  13. ಇದೇ! ಇದೇ ಜಲಪಾತವನ್ನೇ ನಾವು ಮೊನ್ನೆ ನೋಡಿದ್ದು!

    ಅಬ್ಬಾ! ಆ ದಾರಿ ತ್ರಾಸದಾಯಕ, ಆದರೆ ಅಷ್ಟೇ ಸಮ್ಮೋಹನಗೊಳಿಸುವ ಜಲಪಾತ.

    ಕೊಡಚಾದ್ರಿಯನ್ನು ಏರುವ ಸಮಯ ನಾವು ಹಿಡ್ಲುಮನೆಯ ಈ ಮೋಹಕ ನೋಟವನ್ನು ಸವಿದೆವು.

    ಅಲ್ಲಿ ಸ್ನಾನವನ್ನು ಸಹ ಮಾಡಿದೆವು, ಗಾಜುಗಳು ಹೆಚ್ಚು ಇರಲಿಲ್ಲ ಎನ್ನಿ ;)

    ಬರ್ತಾ ಅರಿಶಿಣಗುಂಡಿ ಜಲಪಾತವನ್ನು ಸಹ ನೋಡಿ ಬಂದೆವು. ಅದರ ಅಂದ, ಅದರ ಬುಡದಲ್ಲಿ ಈಜುವ ಅನುಭವ.... ವರ್ಣನೆಗೆ ಸಿಲುಕದ ಆನಂದ!!

    ಪ್ರತ್ಯುತ್ತರಅಳಿಸಿ