ಸೋಮವಾರ, ಸೆಪ್ಟೆಂಬರ್ 01, 2008

ಕಾಳಿ ಕೊಳ್ಳದ ಕಥೆ/ವ್ಯಥೆ - ೫

ಮುರುಡೇಶ್ವರ ವಿದ್ಯುತ್ ಸಂಸ್ಥೆ ಕಾಳಿ ನದಿಗೆ ೫ನೇ ಅಣೆಕಟ್ಟನ್ನು ನಿರ್ಮಿಸಲು ಮುಂದಾಗಿತ್ತು. ದಾಂಡೇಲಿ ಸಮೀಪದ ’ಮಾವ್ಲಿಂಗಿ’ ಎಂಬಲ್ಲಿಂದ ೫ ಕಿ.ಮಿ. ನದಿಗುಂಟ ಮೇಲ್ಗಡೆ ಅಣೆಕಟ್ಟನ್ನು ನಿರ್ಮಿಸುವ ಇರಾದೆಯಿತ್ತು. ಕದ್ರಾ ಮತ್ತು ಕೊಡಸಳ್ಳಿ ಅಣೆಕಟ್ಟುಗಳ ಬಳಿಕ ಕಾಳಿ ಕೊಳ್ಳದಲ್ಲಿ ಕಾಡಿನ ನಾಶಕ್ಕೆ ಆಸ್ಪದವಿರುವಂತಹ ಯಾವುದೇ ಅಣೆಕಟ್ಟನ್ನು ಇನ್ನು ಮುಂದೆ ನಿರ್ಮಿಸಲಾಗುವುದಿಲ್ಲ ಎಂಬ ಅದೇಶವನ್ನು ೧೯೮೭ರಲ್ಲಿ ರಾಜ್ಯ ಸರಕಾರ ಸಂಸತ್ತಿನಲ್ಲಿ ಹೊರಡಿಸಿತ್ತು. ಇದನ್ನು ಕಡೆಗಣಿಸಿ ಮುರುಡೇಶ್ವರ ಸಂಸ್ಥೆ ಈ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ಪಡೆಯಲು ಹರಸಾಹಸ ಮಾಡಿತು. ೧೮೦ ಕೋಟಿ ರೂಪಾಯಿ ವೆಚ್ಚದಲ್ಲಿ ೨೧೦ ಹೆಕ್ಟೇರ್ ಕಾಡನ್ನು ಮುಳುಗಿಸಿ ಈ ಅಣೆಕಟ್ಟನ್ನು ನಿರ್ಮಿಸಿ ಕೇವಲ ೧೭ ಮೆಗಾವ್ಯಾಟ್(!) ವಿದ್ಯುತ್ ಉತ್ಪಾದಿಸುವ ಮಂಡನೆಯನ್ನು ಮುರುಡೇಶ್ವರ ಸಂಸ್ಥೆ ಸರಕಾರದ ಮುಂದೆ ಇಟ್ಟಿತು.

ಭ್ರಷ್ಟ ಸರಕಾರಕ್ಕೆ ಅನುಮೋದನೆ ನೀಡುವ ಇರಾದೆಯಿತ್ತೇನೋ. ಆದರೆ ೧೯೮೭ರ ಆ ಆದೇಶ ಮತ್ತು ಆ ಅದೇಶವನ್ನು ಗೌರವಿಸಲು ಸೂಚಿಸಿದ ನ್ಯಾಯಾಲಯ; ಈ ವಿಷಯಗಳ ಮುಂದೆ ಸರಕಾರ ಏನೂ ಮಾಡುವಂತಿರಲಿಲ್ಲ. ಯಲ್ಲಾಪುರದಿಂದ ಸತತವಾಗಿ ಆರಿಸಿ ಬರುತ್ತಿರುವ (ಈ ಬಾರಿ ಸೋತಿದ್ದಾರೆ), ಕನ್ನಡ ಸರಿಯಾಗಿ ಮಾತನಾಡಲು ಬರದ ಕಾಡು ಕಳ್ಳ ಮಂತ್ರಿಯೊಬ್ಬರ ಸಂಪೂರ್ಣ ಬೆಂಬಲ ಮುರುಡೇಶ್ವರ ಸಂಸ್ಥೆಗಿತ್ತು. ಈ ಅಣೆಕಟ್ಟಿನ ನಿರ್ಮಾಣದಿಂದ ಪರಿಸರದ ಮೇಲೆ ಉಂಟಾಗುವ ಹಾನಿಯ ಬಗ್ಗೆ ಮುರುಡೇಶ್ವರ ಸಂಸ್ಥೆ ಎರಡು ದೋಷಪೂರಿತ ವರದಿಗಳನ್ನು ಸರಕಾರಕ್ಕೆ ಸಲ್ಲಿಸಿ ವಂಚನೆ ಮಾಡಲು ಹೊರಟಾಗ ಈ ವಂಚನೆಯನ್ನು ಬಯಲಿಗೆಳೆದದ್ದು ಕಾಳಿ ಬಚಾವೋ ಆಂದೋಲನ. ಮುರುಡೇಶ್ವರ ಸಂಸ್ಥೆಯ ಪ್ರತಿ ಹೆಜ್ಜೆಯನ್ನು ಊಹಿಸಿ ಅದಕ್ಕಿಂತ ಒಂದು ಹೆಜ್ಜೆ ಮುಂದಿದ್ದ ಕಾಳಿ ಬಚಾವೋ ಆಂದೋಲನ ಸರಕಾರ ಈ ಯೋಜನೆಯನ್ನು ಕೈ ಬಿಡುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಸೂಪಾ ಮತ್ತು ಬೊಮ್ಮನಹಳ್ಳಿ ಅಣೆಕಟ್ಟುಗಳ ನಡುವೆ ಈ ಅಣೆಕಟ್ಟನ್ನು ನಿರ್ಮಿಸುವ ಇರಾದೆ ಇತ್ತು. ಹಾಗೆಲ್ಲಾದರೂ ಆಗಿದ್ದಿದ್ದರೆ ದಾಂಡೇಲಿಯ ಪ್ರಮುಖ ಆಕರ್ಷಣೆಯಾಗಿರುವ ’ವೈಟ್ ರಿವರ್ ರಾಫ್ಟಿಂಗ್’ ಕಣ್ಮರೆಯಾಗುತ್ತಿತ್ತು.

ಕಾಳಿಯ ನೀರು ಕುಡಿಯಲಿಕ್ಕೆ ಯೋಗ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ತನ್ನ ತ್ಯಾಜ್ಯಗಳನ್ನು ಶುದ್ಧೀಕರಿಸದೆ ನೇರವಾಗಿ ಕಾಳಿಯ ಒಡಲಿಗೆ ಬಿಡುತ್ತಿರುವ ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಕಾರ್ಖಾನೆ. ಈ ಕಾರಣದಿಂದ ಬೊಮ್ಮನಹಳ್ಳಿ ಜಲಾಶಯದ ತುಂಬಾ ವೆಸ್ಟ್ ಕೋಸ್ಟ್ ಕಾರ್ಖಾನೆಯ ತ್ಯಾಜ್ಯ ತುಂಬಿಕೊಂಡಿದೆ. ಹೀಗೆ ಜಲಾಶಯದಲ್ಲಿ ಸಂಗ್ರಹವಾಗಿರುವ ಈ ತ್ಯಾಜ್ಯಗಳು ಅಂತರ್ಜಲವನ್ನು ಎಷ್ಟು ಕಲುಷಿತಗೊಳಿಸಿವೆಯೆಂದರೆ ಸುತ್ತಮುತ್ತಲ ಹಳ್ಳಿಗಳಲ್ಲಿ ನೀರು ಕುಡಿಯಲು ಯೋಗ್ಯವಾಗಿಲ್ಲ.

ದಾಂಡೇಲಿಯ ನಂತರ ಕಾಳಿಯ ದಂಡೆಯಲ್ಲಿರುವ ಜಮೀನು ಕೃಷಿಗೆ ಯೋಗ್ಯವಾಗಿಲ್ಲ. ವೆಸ್ಟ್ ಕೋಸ್ಟ್ ಕಾರ್ಖಾನೆಯ ತ್ಯಾಜ್ಯ, ನದಿಯಲ್ಲಿ ನೀರು ಹೆಚ್ಚಾದಾಗ ತೇಲಿ ಬಂದು ಗದ್ದೆಗಳನ್ನು ಕೃಷಿಗೆ ಅಯೋಗ್ಯವನ್ನಾಗಿ ಮಾಡಿವೆ. ಈ ಜಮೀನಿನಲ್ಲಿ ಈಗ ಏನೂ ಬೆಳೆಯಲಾಗುತ್ತಿಲ್ಲ. ಕಾಳಿಯನ್ನೇ ನಂಬಿಕೊಂಡಿದ್ದ ಇಲ್ಲಿನ ಜನರಿಗೆ ಈಗ ಆ ನೀರನ್ನೇ ಬಳಸಲಾಗದಂತಹ ಪರಿಸ್ಥಿತಿ. ಕಲುಷಿತ ನೀರನ್ನು ಕುಡಿದು ಮೃತಪಡುವ ಜಾನುವಾರುಗಳು, ಹಲವಾರು ರೋಗಗಳಿಂದ ಬಳಲಿ ಆಸ್ಪತ್ರೆಗೆ ದಾಖಲಾಗುವ ಹಳ್ಳಿಗರು ಇವೆಲ್ಲಾ ಗಮನಕ್ಕೆ ಬಾರದೆ ನಡೆಯುತ್ತಿವೆ. ಗರ್ಭದಲ್ಲೇ ಶಿಶುವಿನ ಮರಣ, ಚರ್ಮ ರೋಗ, ಕಿಡ್ನಿ ವೈಫಲ್ಯ ಇತ್ಯಾದಿ ರೋಗಗಳಿಂದ ಜನರು ಬಳಲುತ್ತಿದ್ದಾರೆ.

ಕೆಲವೊಂದು ಹಳ್ಳಿಗಳಲ್ಲಿ ಜನರು ಹೈನುಗಾರಿಕೆಯಿಂದಲೇ ಜೀವನ ಸಾಗಿಸುತ್ತಿದ್ದರು. ಆದರೆ ಎಲ್ಲಾ ಜಾನುವಾರುಗಳು ಕಾಳಿಯ ನೀರನ್ನು ಕುಡಿದು ಮೃತಪಟ್ಟ ಬಳಿಕ ಈಗ ಇವರೆಲ್ಲಾ ಅಲ್ಲಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಒಂದೊಂದು ಮನೆಯಲ್ಲಿ ೧೦, ೧೫, ೪೦ ಹೀಗೆ ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳು ಕಾಳಿಯ ನೀರನ್ನು ಕುಡಿದು ಮೃತಪಟ್ಟಿವೆ. ಆದರೆ ಇವರ ದೂರುಗಳನ್ನು ಕೇಳುವವರು ಯಾರೂ ಇಲ್ಲ. ಜಾನುವಾರುಗಳ ಮರಣಕ್ಕೆ ಪರಿಹಾರ ನೀಡುವವರೂ ಇಲ್ಲ. ಇನ್ನೂ ಕೆಲವೆಡೆ ಕೃಷಿಯನ್ನು ನಂಬಿಕೊಂಡಿದ್ದ ಕುಟುಂಬಗಳ ಸದಸ್ಯರೂ ಕಾಳಿಯ ಕಲುಷಿತ ನೀರಿನಿಂದ ತಮ್ಮ ಜಮೀನು ಕೃಷಿಗೆ ಅಯೋಗ್ಯವಾದ ಬಳಿಕ ದಿನಗೂಲಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಕಾಳಿ ನದಿಯನ್ನು ತಾನು ಯಾವುದೇ ರೀತಿಯಲ್ಲಿ ಕಲುಷಿತ ಮಾಡುತ್ತಿಲ್ಲ ಎಂದೇ ವೆಸ್ಟ್ ಕೋಸ್ಟ್ ಕಾರ್ಖಾನೆ ಹೇಳಿಕೆ ನೀಡುತ್ತಿದೆ. ಸಂಸ್ಥೆ ಇತ್ತೀಚೆಗೆ ತ್ಯಾಜ್ಯ ಶುದ್ಧೀಕರಣ ಮಾಡುತ್ತಿದೆ ಎಂದು ಕೇಳಿ ಬರುತ್ತಿದೆಯಾದರೂ, ಸಂಸ್ಥೆಯಿಂದ ತ್ಯಾಜ್ಯ ಹರಿದು ಬರುವ ಮೋರಿಯನ್ನು ಗಮನಿಸಿದರೆ ಆ ಮಾತನ್ನು ನಂಬುವುದು ಅಸಾಧ್ಯ.

ಮರಳು ಸಾಗಣೆಯ ದಂಧೆ ಕೂಡಾ ಕಾಳಿ ಕೊಳ್ಳವನ್ನು ಕಾಡುತ್ತಿದೆ. ಸೂಪಾ ಅಣೆಕಟ್ಟಿನ ಸಮೀಪ ಪಾಂಢರಿ ನದಿಯಿಂದ ಅವ್ಯಾಹತವಾಗಿ ಮರಳು ಲೂಟಿಯ ದಂಧೆ ನಡೆಯುತ್ತಿದೆ. ಇದನ್ನು ವಿರೋಧಿಸಿದವರಿಗೆ ಮರಳು ಮಾಫಿಯಾ ಜೀವ ಬೆದರಿಕೆಯನ್ನೊಡ್ಡಿ ಮರಳು ಲೂಟಿಯನ್ನು ನಡೆಸುತ್ತಿದೆ. ಐದಾರು ವರ್ಷಗಳ ಹಿಂದೆ ನಡೆದಷ್ಟು ಅವ್ಯಾಹತವಾಗಿ ಮರಳು ಲೂಟಿ ಈಗ ನಡೆಯುತ್ತಿಲ್ಲ. ಆದರೆ ಅದಾಗಲೇ ಆದ ಹಾನಿ? ಪಾಂಢರಿ ನದಿ ಕೆಲವೊಂದೆಡೆ ತನ್ನ ಗಾತ್ರದಲ್ಲಿ ದುಪ್ಪಟ್ಟಾಗಿದೆ. ನದಿ ಕೊರೆತ ಪಾಂಢರಿಯಲ್ಲಿ ಕಳೆದ ನಾಲ್ಕಾರು ವರ್ಷಗಳಿಂದ ಆಗುತ್ತಿದೆ ಅದ್ದರಿಂದ ಸಡಿಲಗೊಂಡ ಮಣ್ಣು ಕುಸಿದು ಕಾಡು ನದಿಯ ಒಡಲು ಸೇರುತ್ತಿದೆ ಎಂಬುದು ಬೇಸರದ ಸಂಗತಿ. ಮರಳು ಸಾಗಣೆಯ ದಂಧೆ ದಾಂಡೇಲಿಯ ಮೊದಲೇ ಕಾಳಿ ನದಿ ಪಾತ್ರಕ್ಕೆ ಸೀಮಿತವಾಗಿದೆ. ದಾಂಡೇಲಿಯ ನಂತರ ಕಾಳಿ ಇಷ್ಟು ಕಲುಷಿತಗೊಂಡಿದ್ದಾಳೆಂದರೆ ಮರಳು ಮಾಫಿಯಾಕ್ಕೂ ಕಾಳಿ ದಂಡೆಯ ಮರಳು ಬೇಡವಾಗಿದೆ!

ಕಾಳಿ ಕೊಳ್ಳದಲ್ಲಿ ಕಳೆದ ೫ ವರ್ಷಗಳಿಂದ ಯಾವುದೇ ಘಟನೆಗಳು ನಡೆದಿಲ್ಲ. ಎಲ್ಲವೂ ಶಾಂತವಾಗಿದೆ. ಇದಕ್ಕೆ ಮುಖ್ಯ ಕಾರಣ ಕಾಳಿ ಬಚಾವೋ ಆಂದೋಲನ. ದಾಂಡೇಲಿಯಲ್ಲಿ ಅಣೆಕಟ್ಟನ್ನು ನಿರ್ಮಿಸುವ ಪ್ರಸ್ತಾವವನ್ನು ಸರಕಾರ ನೆನೆಗುದಿಗೆ ತಳ್ಳುವಲ್ಲಿ ಬಹಳ ಬಹಳ ಪ್ರಮುಖ ಪಾತ್ರ ವಹಿಸಿದ್ದು ಕಾಳಿ ಬಚಾವೋ ಆಂದೋಲನ.

ಕಾನೂನನ್ನು ತಿರುಚಿ ಅಥವಾ ಇನ್ನೇನಾದರೂ ಮಾಡಿ ಏನೇ ಆಗಲಿ, ಆಣೆಕಟ್ಟು ನಿರ್ಮಿಸಿಯೇ ಸಿದ್ಧ ಎಂದು ಹೊರಟಿದ್ದ ಮುರುಡೇಶ್ವರ ವಿದ್ಯುತ್ ಸಂಸ್ಥೆಗೆ ಕಾನೂನಿನ ಚೌಕಟ್ಟಿನೊಳಗಿದ್ದುಕೊಂಡೇ ಚೆಳ್ಳೆಹಣ್ಣು ತಿನ್ನಿಸಿದ್ದು ಕಾಳಿ ಬಚಾವೋ ಆಂದೋಲನ. ಈ ಅಂದೋಲನ ಜೀವಂತವಾಗಿರುವುದರಿಂದ ಸೂಪಾ ಹಿನ್ನೀರಿನ ಪ್ರದೇಶದಲ್ಲಿ ಮರಳು ಸಾಗಣೆ ದಂಧೆ ಸ್ವಲ್ಪ ಹಿಡಿತದಲ್ಲಿದೆ. ಸುಂದರ್ ಲಾಲ್ ಬಹುಗುಣರವರು ಕಾಳಿ ನದಿಯ ಪರ ಹೋರಾಟದಲ್ಲಿ ಭಾಗವಹಿಸಿ ಈ ಆಂದೋಲನದ ಬಲ ವೃದ್ಧಿಸಿದರು. ರಾಜ್ಯ ಮಟ್ಟದಲ್ಲಿ ಆಗೀಗ ಸುದ್ದಿ ಮಾಡುತ್ತಿದ್ದ ’ಕಾಳಿ’ ಈಗ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡತೊಡಗಿದಾಗ ಸರಕಾರ ಕಾಳಿ ಬಚಾವೋ ಆಂದೋಲನವನ್ನು ಗಂಭೀರವಾಗಿ ಪರಿಗಣಿಸಬೇಕಾಯಿತು.

ವೆಸ್ಟ್ ಕೋಸ್ಟ್ ಕಾರ್ಖಾನೆಗೆ ಈ ಕಾಳಿ ಬಚಾವೋ ಆಂದೋಲನ ಬಹು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜನರ ತೊಂದರೆಗಳಿಗೆ ಸ್ಪಂದಿಸದೇ, ತಮ್ಮ ಕಾರ್ಖಾನೆಯ ತ್ಯಾಜ್ಯಗಳಿಂದ ಕಾಳಿ ಕೊಳ್ಳದ ಜನರ ಸ್ವಾಸ್ಥ್ಯವನ್ನು ಹದಗೆಡಿಸುತ್ತಾ, ರಾಜಕಾರಣಿಯೊಬ್ಬನನ್ನು ಜೇಬಿನೊಳಗಿಟ್ಟುಕೊಂಡು ಹಾಯಾಗಿದ್ದ ಈ ಸಂಸ್ಥೆಗೆ ತನ್ನ ಜವಾಬ್ದಾರಿಯ ಪಾಠ ಹೇಳಿಕೊಟ್ಟದ್ದು ಕಾಳಿ ಬಚಾವೋ ಆಂದೋಲನ. ಸುತ್ತಮುತ್ತಲ ಹಳ್ಳಿಗಳಲ್ಲಿ ಕಾಳಿ ನದಿಯಿಂದ ಬಾಧಿತ ಜನರನ್ನು ನೇರವಾಗಿ ಸಂಸ್ಥೆಯ ಮುಖ್ಯಸ್ಥರೊಡನೆಯೇ ಮುಖಾಮುಖಿ ಭೇಟಿ ಮಾಡಿಸಲಾಯಿತು. ಕಾಳಿ ಬಚಾವೋ ಆಂದೋಲನದ ಅಂತರ್ಜಾಲ ತಾಣದಲ್ಲಿ ಹಳ್ಳಿಗರು ತಮ್ಮ ತೊಂದರೆಗಳನ್ನು ಹೇಳಿಕೊಳ್ಳುವ ಚಿತ್ರಗಳಿವೆ.

ದಾಂಡೇಲಿಯಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಮಾಡಲಾಯಿತು. ಕಾಳಿ ನದಿ ಪಾತ್ರದುದ್ದಕ್ಕೂ ಇರುವ ಹಳ್ಳಿಗಳಲ್ಲೂ ಪಾದಯಾತ್ರೆ ಮಾಡಿ ಜನರಿಗೆ ಆಂದೋಲನದ ಬಗ್ಗೆ ಮಾಹಿತಿ ನೀಡಲಾಯಿತು. ಈ ಎಲ್ಲಾ ವಿಷಯಗಳ ಬಗ್ಗೆ ಮತ್ತು ವೆಸ್ಟ್ ಕೋಸ್ಟ್ ಕಾರ್ಖಾನೆಯ ನಿರ್ಲಕ್ಷ್ಯದ ಬಗ್ಗೆ ವಿವರವಾದ ಲೇಖನಗಳು ಕಾಳಿ ಬಚಾವೋ ಆಂದೋಲನದ ಅಂತರ್ಜಾಲ ತಾಣದಲ್ಲಿದೆ. ಕಾಳಿ ಬಚಾವೋ ಆಂದೋಲನದ ಆಫೀಸುಗಳು ಶಿರಸಿ ಮತ್ತು ಬೆಂಗಳೂರಿನಲ್ಲಿವೆ.

ಕಾಳಿ ಕೊಳ್ಳವನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕು. ಅದನ್ನು ರಕ್ಷಿಸುವ ಜವಾಬ್ದಾರಿಯಿರುವ ಸರಕಾರವೇ ಅದನ್ನು ಅಳಿಸುವ ಪ್ರಯತ್ನದಲ್ಲಿ ಮುಂದಾಳತ್ವ ವಹಿಸಿರುವುದು ವಿಪರ್ಯಾಸ. ಕಾಳಿ ಕೊಳ್ಳದಿಂದ ಈಗ ವಾರ್ಷಿಕ ೧೨೦೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಸರಕಾರದ ಪ್ರಕಾರ ಕಾಳಿ ಕೊಳ್ಳದಿಂದ ಹೆಚ್ಚೆಂದರೆ ೧೭೦೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಬಹುದು ಮತ್ತು ಆ ಇರಾದೆ ಸರಕಾರಕ್ಕೆ ಇದೆ ಕೂಡಾ. ಇನ್ನೊಂದು ಅಣೆಕಟ್ಟು ಬರಲಾರದು ಆದರೆ ಇರುವ ೪ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ವಿದ್ಯುತ್ ಘಟಕಗಳ ಸಂಖ್ಯೆ ಹೆಚ್ಚಾಗಬಹುದು.

ಕಾಳಿ ಕೊಳ್ಳದ ಅಣೆಕಟ್ಟುಗಳಿಂದ ನೆಲೆ ಕಳೆದುಕೊಂಡ ೧೫೦೦೦ ಕುಟುಂಬಗಳು ಎಲ್ಲೆಲ್ಲಿ ಹೋಗಿ ಬದುಕು ರೂಪಿಸಿಕೊಂಡಿದ್ದಾರೋ? ಇವರೆಲ್ಲರ ತ್ಯಾಗ ನಾವು ಮರೆಯಬಾರದು.

8 ಕಾಮೆಂಟ್‌ಗಳು:

  1. ಅನೇಕ ತಲೆಮಾರುಗಳಿಂದ ಇದ್ದ ಮನೆಯನ್ನು ಬಿಡುವಾಗ ನಿರಾಶ್ರಿತರ ಮನದ ಸ್ಠಿತಿ ಹೇಗಿರಬಹುದು.

    ನಾನು ಹುಟ್ಟುವುದಕ್ಕೆ ಬಹಳ ಮುಂಚೆಯೇ ನಮ್ಮ ಪೂರ್ವಿಕರಿದ್ದ ಮನೆ ಮುಳುಗಡೆಯಾಯಿತು. ಆದರೂ ಮುಳುಗಡೆಯಾದ ಆ ಜಾಗಕ್ಕೆ ಹೋದರೆ ಹೃದಯ ಭಾರವಾಗುತ್ತದೆ. ಇನ್ನು ಅಲ್ಲಿಯೇ ಬಾಳಿ ಬದುಕಿದವರಿಗೆ ಹೇಗೆ ಅನ್ನಿಸಬೇಡ.

    ಸರಿಯಾಗಿ ನಿಭಾಯಿಸಿದರೆ ಈಗಿರುವ ವಿದ್ಯುತ್ ಘಟಕಗಳಿಂದಲೇ ರಾಜ್ಯದ ಅವಶ್ಯಕತೆಯನ್ನು ಪೂರೈಸಬಹುದು. ಆದರೆ KPCL ಹಾಗೂ ಸರ್ಕಾರಕ್ಕೆ ಅದು ಬೇಡ!!

    ಪ್ರತ್ಯುತ್ತರಅಳಿಸಿ
  2. ಅಂತರ್ಜಲವನ್ನು ಮಲಿನಗೊಳಿಸುತ್ತಿರುವ ಬೇಜವಾಬ್ದಾರಿ ಉದ್ದಿಮೆಗಳಿಗೆ ಕಡಿವಾಣ ಹಾಕುವದು ಹೇಗೆ?

    ಪ್ರತ್ಯುತ್ತರಅಳಿಸಿ
  3. ನೀವು ಕೊಡುತ್ತಿರುವ ಮಾಹಿತಿ ನಿಜಕ್ಕೂ ಮೆಚ್ಚುವಂತಹದು.
    ಬರೆಹ ಸರಕಾರದ, ಅಧಿಕಾರಿಗಳ ಕಣ್ಣು ತೆರೆಸಲಿ.

    ಪ್ರತ್ಯುತ್ತರಅಳಿಸಿ
  4. ಭಯಾನಕ ಸತ್ಯಗಳನ್ನು ಹೊರಗೆಡವಿದ್ದೀರಿ. ಉತ್ತರ ಕನ್ನಡದ ಪರಿಸರ ಸುರಕ್ಷಿತವಾಗಿದೆ ಎಂದು ತಪ್ಪು ತಿಳುವಳಿಕೆಯಲ್ಲಿದ್ದೆ ನಾನು.

    ಪ್ರತ್ಯುತ್ತರಅಳಿಸಿ
  5. ಕಾಳಿ ಕೊಳ್ಳದ ಕೊಳ್ಳೆಯನ್ನು ಸವಿವರವಾಗಿ ತಿಳಿಸಿದ್ದೀರಿ.ಕಾಳಿ ಬಚಾವೊ ಆಂದೋಲನದ ಬಗ್ಗೆ, ಅವರ ಪ್ರಶಂಸನೀಯ ಕಾರ್ಯವನ್ನು ನಮಗೆ ಪರಿಚಯಿಸಿದ್ದೀರಿ. ಧನ್ಯವಾದಗಳು.

    ಕಾಳಿ ಕೊಳ್ಳದ 'ಅಭಿವೃದ್ಧಿ' ಕಾರ್ಯಗಳಿಗಾಗಿ ನಿರಾಶ್ರಿತರಾದ ಜನತೆ ಹೇಗೆ, ಎಲ್ಲಿ ಹೋದರೂ ತಮ್ಮ ನೆಮ್ಮದಿಯ ಜೀವನವನ್ನು ಮತ್ತೆ ಪಡೆಯಲಾರರು. ೧೫೦೦೦ ಕುಟುಂಬಗಳು ಎಂಬುದು ಬರಿಯ ಲೆಕ್ಖಾಚಾರ ಅಷ್ಟೇ. ಅದು ಕೇವಲ ಒಂದೇ ಕುಟುಂಬವಾದರು ನಮ್ಮ ಅಮಾನವೀಯತೆಗೆ ಸಾಕ್ಷಿ.

    ಪ್ರತ್ಯುತ್ತರಅಳಿಸಿ
  6. ಅರವಿಂದ್,
    ಆ ನೋವನ್ನು, ಯಾತನೆಯನ್ನು ಕಲ್ಪಿಸಲು ಅಸಾಧ್ಯ. ಅನುಭವಿಸಿದವರಿಗೇ ಗೊತ್ತು.

    ಸುನಾಥ್,
    ಕಡಿವಾಣ ಹಾಕಲು ಪರಿಸರ ಪ್ರೇಮಿ ಸರಕಾರವಿರಬೇಕು. ಅದು ಅಸಾಧ್ಯ.

    ಮಿಥುನ್,
    ಥ್ಯಾಂಕ್ಸ್.

    ಶರಶ್ಚಂದ್ರ,
    ಇವೆಲ್ಲಾ ಆಗಿಹೋದ ಅನಾಹುತಗಳು. ಇನ್ನು ಮುಂದೆ ಹಲವಾರು ಅನಾಹುತಗಳು ಸಾಲುಗಟ್ಟಿ ನಿಂತಿವೆ!

    ಶ್ರೀಕಾಂತ್,
    ಥ್ಯಾಂಕ್ಸ್.

    ಪ್ರತ್ಯುತ್ತರಅಳಿಸಿ
  7. ನಿಮ್ಮ ಈ ಸರಣಿ ಬಹಳ ಚೆನ್ನಾಗಿದೆ. ಇತ್ತೀಚೆಗಷ್ಟೇ ದಾಂಡೇಲಿಗೆ ಹೋಗಿದ್ದೆ. ಅಲ್ಲಿ ಸೇತುವೆಯೊಂದರ ಮೇಲೆ ರಾತ್ರಿ ಕತ್ತಲಲ್ಲಿ ಕೂತು ಕಾಳಿಯ ಸದ್ದು ಕೇಳಿದ್ದೆ. ಆಪ್ಯಾಯಮಾನ ಅನ್ನಿಸಿತ್ತು.

    ಕಾಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿದಿತ್ತಾದರೂ, ಇಷ್ಟೊಂದು ವಿವರಗಳು ಗೊತ್ತಿರಲಿಲ್ಲ. ನಿಮ್ಮ ಪರಿಸರ ಕಾಳಜಿಗೆ ವಂದೇ.

    ಪ್ರತ್ಯುತ್ತರಅಳಿಸಿ