ಭಾನುವಾರ, ಜುಲೈ 27, 2008

ಜಲಧಾರೆಯನ್ನು ಹುಡುಕುತ್ತಾ ....

ದಿನಾಂಕ: ಜುಲಾಯಿ ೧೭, ೨೦೦೫

ಮುಂಜಾನೆ ೬ಕ್ಕೇ ಹೊರಟ ನಾನು ಮತ್ತು ಅನಿಲ್, ಲಾಲ್ಗುಳಿ ಜಲಧಾರೆಯನ್ನು ನೋಡುವ ಇರಾದೆಯಿಂದ ಈ ಪ್ರಯಾಣವನ್ನು ಶುರುಮಾಡಿದ್ದೆವು. ಮೊದಲೆಲ್ಲಾ ಈ ದಾರಿಯಾಗಿ ಪ್ರಯಾಣಿಸುವಾಗ ಲಾಲ್ಗುಳಿಗೆ ತಿರುವು ಪಡೆಯುವಲ್ಲಿ ’ಸುಂದರ ಲಾಲ್ಗುಳಿ ಜಲಧಾರೆಗೆ ಸ್ವಾಗತ’ ಎಂದು ಹೆದ್ದಾರಿಯ ಪಕ್ಕದಲ್ಲೇ ರಾರಾಜಿಸುತ್ತಿದ್ದ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಫಲಕವನ್ನೂ ಪ್ರತಿ ಸಲವೂ ತಪ್ಪದೇ ನೋಡುತ್ತಿದ್ದೆ. ಆದರೆ ಈಗ ಲಾಲ್ಗುಳಿಗೆ ತಿರುವು ಪಡೆಯುವಲ್ಲಿ ಬಂದರೆ ಆ ಫಲಕ ಅಲ್ಲಿರಲಿಲ್ಲ! ಸ್ವಲ್ಪ ಹುಡುಕಾಡಿದಾಗ ಅಲ್ಲೇ ಬದಿಯಲ್ಲಿ ರಸ್ತೆಯಿಂದ ಸ್ವಲ್ಪ ಒಳಗೆ ನುಚ್ಚುನೂರಾಗಿ ಬಿದ್ದಿದ್ದ ಫಲಕ ಕಾಣಿಸಿತು.

ಲಾಲ್ಗುಳಿಗೆ ಇನ್ನೂ ಐದಾರು ಕಿ.ಮಿ. ಇರುವಾಗ ದಾರಿಯಲ್ಲಿ ಸಿಕ್ಕ ಒಬ್ಬರಲ್ಲಿ ಜಲಧಾರೆಯ ಬಗ್ಗೆ ಮಾಹಿತಿ ಕೇಳಿದಾಗ, ’ನಾನು ಈ ಊರಿನವನಲ್ಲ..ಆದರೂ ಲಾಲ್ಗುಳಿಯಲ್ಲಿ ಫಾಲ್ಸ್ ಇರೋ ಹಂಗೆ ಕಾಣುದಿಲ್ಲ...ನಾನಂತೂ ಕಳೆದ ೧೫ ವರ್ಷಗಳಿಂದ ಇಲ್ಲಿಗೆ ಬರ್ತಾ ಇದ್ದೇನೆ, ಫಾಲ್ಸ್ ಇರೋ ಬಗ್ಗೆ ನಂಗಂತೂ ಗೊತ್ತಿಲ್ಲ’ ಎಂದಾಗ ನಾವಿಬ್ಬರು ಇನ್ನೂ ಗೊಂದಲಕ್ಕೊಳಗಾದೆವು. ಆದರೂ ಲಾಲ್ಗುಳಿಗೆ ಪ್ರಯಾಣ ಮುಂದುವರಿಸಿದೆವು. ಲಾಲ್ಗುಳಿಯಲ್ಲಿ ಮನೆಯೊಂದರ ಗೇಟಿನ ಬಳಿ ಇಬ್ಬರು ಹಳ್ಳಿಗರು ಹರಟೆ ಹೊಡೆಯುತ್ತಿದ್ದರು. ಅವರಲ್ಲಿ ವಿಚಾರಿಸಿದಾಗ, ಅವರಿಬ್ಬರು ಮತ್ತು ಅವರ ಜೊತೆಗೆ ಇದ್ದ ಹುಡುಗ ಮೆಲ್ಲನೆ ನಕ್ಕರು. ನಾವು ಎಲ್ಲಿಂದ ಬಂದೆವು ಎಂದು ತಿಳಿದುಕೊಂಡ ಬಳಿಕ, ’ಅಷ್ಟು ದೂರದಿಂದ ಬಂದ್ರಾ...ಇಲ್ಲಿ ಫಾಲ್ಸೇ ಇಲ್ಲ..’ ಎನ್ನಬೇಕೆ.

ಅಂತರ್ಜಾಲದಲ್ಲಿ ಮತ್ತು ಪ್ರಮುಖ ದಿನಪತ್ರಿಕೆಗಳಲ್ಲಿ ಲಾಲ್ಗುಳಿ ಜಲಧಾರೆಯ ಬಗ್ಗೆ ಭಾರೀ ಹೊಗಳಿಕೆಯ ಲೇಖನಗಳನ್ನು ಓದಿ ನೋಡೋಣವೆಂದು ಬಂದರೆ ಜಲಧಾರೆನೇ ಇಲ್ಲ! ಜೋರಾಗಿ ಮಳೆ ಬಂದಾಗ ಒಂದೆರಡು ತಾಸು ನೀರು ಇರಬಹುದು ಎಂದು ಆ ಹಳ್ಳಿಗರು ಊಹಿಸಿದರು. ಲಾಲ್ಗುಳಿಯಲ್ಲಿ ಈಗ ಜಲಧಾರೆಯನ್ನು ನೋಡಿದವರೇ ಇಲ್ಲವಂತೆ! ಈ ಮಾತನ್ನು ನನಗಂತೂ ನಂಬಲಿಕ್ಕೆ ಆಗಲಿಲ್ಲ. ಅವರೊಂದಿಗೆ ಒಂದಷ್ಟು ಹೊತ್ತು ಮಾತನಾಡಿ ಅಲ್ಲಿಂದ ಹೊರಟೆವು.

ಕಾಳಿ ನದಿಗೆ ಬೊಮ್ಮನಹಳ್ಳಿಯಲ್ಲಿ ಅಣೆಕಟ್ಟು ನಿರ್ಮಿಸಿದ ಬಳಿಕ ಸುಮಾರು ೧೫ ಕಿ.ಮಿ. ದೂರ ಕಾಳಿ ನದಿ ಭೂಮಿಯ ಮೇಲ್ಮೈಯಿಂದ ಮಾಯ. ಕಾಳಿಯ ಇದೇ ೧೫ ಕಿ.ಮಿ ಹರಿವಿನ ಪಾತ್ರದಲ್ಲಿ ಲಾಲ್ಗುಳಿ ಜಲಧಾರೆ ಇದೆ (ಇತ್ತು). ಈಗ ಜೋರಾಗಿ ಮಳೆ ಬಂದಾಗ ಒಂದೆರಡು ತಾಸು ನೀರು ಬೀಳುತ್ತದಂತೆ. ಹಳ್ಳಿಗರಲ್ಲಿ ಹೆದ್ದಾರಿಯ ಪಕ್ಕದಲ್ಲಿದ್ದ ಆ ಫಲಕದ ಬಗ್ಗೆ ಕೇಳಿದೆವು. ವಿದ್ಯಾರ್ಥಿಗಳ ಗುಂಪೊಂದು ಆ ಫಲಕವನ್ನು ನೋಡಿ ಜಲಧಾರೆಯನ್ನು ನೋಡಲು ಲಾಲ್ಗುಳಿಗೆ ಬಂದಿತ್ತಂತೆ. ಜಲಧಾರೆಯೇ ಇಲ್ಲ ಎಂದು ತಿಳಿಯಲು, ಹಿಂತಿರುಗಿ ಹೋಗುವಾಗ ಆ ಫಲಕವನ್ನು ಕಿತ್ತೊಗೆದು, ಒಡೆದು ಹಾಕಿ ರಸ್ತೆಯಿಂದ ಒಳಗೆಲ್ಲೋ ಒಗೆದು ಹೋಗಿಬಿಟ್ಟರಂತೆ! ಒಳ್ಳೆಯ ಕೆಲಸವೇ ಮಾಡಿದರೆನ್ನಿ. ಹಾಸ್ಯಾಸ್ಪದ ವಿಷಯವೆಂದರೆ, ಆ ಫಲಕವನ್ನು ಕಂಡ ಅರಣ್ಯ ಇಲಾಖೆಯ ಸಿಬ್ಬಂದಿಗಳು, ತಮ್ಮ ಇಲಾಖೆಗೇ ಗೊತ್ತಿಲ್ಲದ ಜಲಧಾರೆ ಪ್ರವಾಸೋದ್ಯಮ ಇಲಾಖೆಗೆ ಹೇಗೆ ಗೊತ್ತಾಯಿತು, ನೋಡೇಬಿಡೋಣವೆಂದು ಜಲಧಾರೆಯ ಅಸ್ತಿತ್ವವನ್ನು ಕಂಡುಹುಡುಕಲು ಲಾಲ್ಗುಳಿಗೆ ಆಗಮಿಸಿದ್ದು!

ಬೊಮ್ಮನಹಳ್ಳಿ ಅಣೆಕಟ್ಟನ್ನು ೭೦ರ ದಶಕದ ಕೊನೆಯಲ್ಲೇ ನಿರ್ಮಿಸಿರುವಾಗ ಈ ಜಲಧಾರೆ ಕಣ್ಮರೆಯಾಗಿತ್ತು ಎನ್ನಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಗೆ ಇದರ ಬಗ್ಗೆ ಅರಿವೇ ಇಲ್ಲದಿರುವುದು ಸೋಜಿಗ. ಆ ಫಲಕವನ್ನು ನೋಡಿ ಬಹಳಷ್ಟು ಜನರು ಲಾಲ್ಗುಳಿವರೆಗೆ ತೆರಳಿ ಬೇಸ್ತು ಬಿದ್ದಿದ್ದರು. ಅದಕ್ಕೇ ನಮ್ಮನ್ನು ಕಂಡು ಆ ಹಳ್ಳಿಗರು ಮೆಲ್ಲನೆ ನಕ್ಕಿದ್ದು...ಇನ್ನೊಂದು ಜೋಡಿ ಮಿಕ ಎಂದು!

6 ಕಾಮೆಂಟ್‌ಗಳು:

  1. ಇಷ್ಟೆಲ್ಲಾ ಕಡೆ ಸುತ್ತಲು ನಿಮಗೆ ಅವುಗಳ ವಿಷಯ ಹೇಗೆ ತಿಳಿಯುತ್ತದೆ??

    ಪ್ರತ್ಯುತ್ತರಅಳಿಸಿ
  2. ನೀವು ಈ ಲೇಖನ ಬರೆದದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ನಾನು ಯಾವತ್ತಾದರೂ ಒಂದು ದಿನ ಬೇಸ್ತು ಬೀಳುತ್ತಿದ್ದೆ.

    ಪ್ರವಾಸೋದ್ಯಮ ಇಲಾಖೆಯವರ ವೆಬ್ ಸೈಟ್ ನೋಡಿ ಇದು ಭಾರಿ ಜಲಪಾತವಿರಬೇಕು ಎಂದುಕೊಂಡಿದ್ದೆ!! http://www.karnatakatourism.org/nature_Cascading_LalguliFalls.htm

    ಪ್ರತ್ಯುತ್ತರಅಳಿಸಿ
  3. ಚೆನ್ನಾಗಿದೆ ಚೆನ್ನಾಗಿದೆ.
    - ಮಂಜುನಾಥ ಸ್ವಾಮಿ

    ಪ್ರತ್ಯುತ್ತರಅಳಿಸಿ
  4. ಹಹ್ಹಹ್ಹ....
    ನಿಮ್ಮ ಲೇಖನ ಓದುವ ಮೊದಲು ಫೋಟೋ ನೋಡುವುದು ನನ್ನ ಅಭ್ಯಾಸ. ಇಲ್ಲಿ ಫೋಟೋ ಕಾಣದಾಗಲೇ ಏನೋ ಎಡವಟ್ಟು ಅನ್ನಿಸ್ತು, ಓದಿದಾಗ ಅರ್ಥವಾಯ್ತು. ಏನೇ ಇರಲಿ, ಹುಡುಕಿಕೊಂಡು ಹೋಗಿ ಉಳಿದ ಚಾರಣಿಗರ ಸಮಯ ಉಳಿಸಿ ಪುಣ್ಯ ಕಟ್ಟಿಕೊಂಡ್ರಿ :)

    ಪ್ರತ್ಯುತ್ತರಅಳಿಸಿ
  5. full Tuss pataaki!

    naavu innashtu kaadanna, jalapaatagalanna, konege nadigaLannee maaya maduvantha jadoogaararu.. nimage tiLidillave?!!

    ಪ್ರತ್ಯುತ್ತರಅಳಿಸಿ
  6. ಹರೀಶ,
    ಗೆಳೆಯರ ಮೂಲಕ, ಚಾರಣಿಗರ ಮೂಲಕ .....

    ಅರವಿಂದ್,
    ಲಾಲ್ಗುಳಿ ಜಲಧಾರೆ ಎಂದು ದೋಂಡೋಲೆ ಜಲಧಾರೆಯ ಚಿತ್ರವನ್ನು ಹಾಕಿದ್ದಾರೆ ಅಡ್ನಾಡಿಗಳು!

    ಮಂಜುನಾಥ್,
    ಥ್ಯಾಂಕ್ಸ್.

    ವೇಣು,
    ನನಗೂ ಎಲ್ಲೂ ಆ ಜಲಧಾರೆಯ ಚಿತ್ರ ಸಿಗದೇ ಇದ್ದಾಗ ಅದರ ಇರುವಿಕೆಯ ಬಗ್ಗೆ ಸಂಶಯವಿತ್ತು. ಆದರೂ ಕುತೂಹಲ ನೋಡೇಬರೋಣವೆಂದು. ಬೇಸ್ತು ಬಿದ್ದಿದ್ದಂತೂ ಹೌದು ಬಿಡಿ.

    ಶ್ರೀಕಾಂತ್,
    ನೀವಂದದ್ದು ಸರಿ. ಆದರೂ ಆ ಜಾದೂವನ್ನು ನೋಡೋಣವೆಂದು ತೆರಳಿದ್ದೆ!

    ಪ್ರತ್ಯುತ್ತರಅಳಿಸಿ