ಬುಧವಾರ, ಜುಲೈ 16, 2008

ಕಾಳಿ ಕೊಳ್ಳದ ಕಥೆ/ವ್ಯಥೆ - ೨

ಸೂಪಾ ಅಣೆಕಟ್ಟು: ೧೦೧ ಮೀಟರ್ ಎತ್ತರ, ೩೩೨ ಮೀಟರ್ ಉದ್ದ ಮತ್ತು ೧೦೫೭ ಚ.ಕಿ.ಮಿ ಜಲಾನಯನ ಪ್ರದೇಶ.

ಕಾನೇರಿ ಅಣೆಕಟ್ಟು: ೨೭ ಮೀಟರ್ ಎತ್ತರ, ೧೪೬ ಮೀಟರ್ ಅಗಲ ಮತ್ತು ೯೬ ಚ.ಕಿ.ಮಿ ಜಲಾನಯನ ಪ್ರದೇಶ.

ಸೂಪಾ ಅಣೆಕಟ್ಟನ್ನು ಒಂದು ’ಎಂಜಿನಿಯರಿಂಗ್ ಅದ್ಭುತ’ ಎಂದು ಕರ್ನಾಟಕ ವಿದ್ಯುತ್ ನಿಗಮ ಬಣ್ಣಿಸುತ್ತದೆ. ಆದರೆ ಅಸಲಿ ವಿಷಯವೆಂದರೆ ಸೂಪಾ ಅಣೆಕಟ್ಟಿನ ಮೂಲ ವಿನ್ಯಾಸದಲ್ಲೇ ದೋಷವಿದೆ. ಇದೇ ಕಾರಣದಿಂದ ನಿರ್ಮಾಣದ ಮೊದಲ ೨೦ ವರ್ಷಗಳಲ್ಲಿ (೧೯೯೪ ಹೊರತುಪಡಿಸಿ) ಅಣೆಕಟ್ಟು ಗರಿಷ್ಠ ಮಟ್ಟವನ್ನು ತಲುಪುವಲ್ಲಿ ವಿಫಲವಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳೇ ಈ ಅಣೆಕಟ್ಟಿನ ವೈಫಲ್ಯದ ಬಗ್ಗೆ ಸಮ್ಮತಿ ಸೂಚಿಸುತ್ತಾರೆ. ನಿರ್ಮಾಣದ ಮೊದಲು ಮಾಡಿದ ಸರ್ವೇ ಪ್ರಕಾರ ದೊಡ್ಡ ಅಣೆಕಟ್ಟನ್ನು ನಿರ್ಮಿಸುವ ನಿರ್ಧಾರ ಮಾಡಲಾಯಿತು. ಆದರೆ ಈ ಸರ್ವೇ ಅನೇಕ ಲೋಪಗಳಿಂದ ಕೂಡಿತ್ತು. ಸೂಪಾ ಅಣೆಕಟ್ಟಿನ ವೈಫಲ್ಯದ ಬಗ್ಗೆ ಕೇಳಿದರೆ ಕ.ವಿ.ನಿ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗಲಿಲ್ಲ ಎಂದು ಮುಂಗಾರಿನ ಮೇಲೆ ಗೂಬೆ ಕೂರಿಸುತ್ತಾರೆ.

ಕಾಳಿ ಮತ್ತು ಕಾಳಿಯ ಉಪನದಿ ಪಂಢಾರಿ ನದಿಯ ಪ್ರದೇಶಗಳಲ್ಲಿ ಆಗುವ ಮಳೆಯ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡೇ ಸೂಪಾ ಅಣೆಕಟ್ಟನ್ನು ನಿರ್ಮಿಸಲಾಗಿರುವಾಗ, ಅಣೆಕಟ್ಟು ನಿರ್ಮಾಣದ ಬಳಿಕ ’ಮುಂಗಾರು ವೈಫಲ್ಯ’ ಎಂಬ ಸಬೂಬು ನೀಡುವುದು ಎಷ್ಟು ಸಮಂಜಸ? ಅಥವಾ ಆಗುವ ಮಳೆಯ ಪ್ರಮಾಣವನ್ನು ಸಮರ್ಪಕವಾಗಿ ಅಂದಾಜಿಸದೆ, ಅಧಿಕವೆಂದು ತೋರಿಸಿ, ಅಷ್ಟು ನೀರನ್ನು ತಡೆಹಿಡಿಯಲು ದೊಡ್ಡ ಅಣೆಕಟ್ಟನ್ನು ನಿರ್ಮಿಸಬೇಕೆಂಬ ಲೋಪಭರಿತ ಸರ್ವೇ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತೇ?. ಇದರ ಪರಿಣಾಮ ಅನಾವಶ್ಯಕವಾಗಿ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚುವರಿ ಕಾಡು ಭೂಮಿ ಸೂಪಾ ಹಿನ್ನೀರಿನಲ್ಲಿ ಮುಳುಗಿಹೋಯಿತು. ಕಾಳಿ ಕೊಳ್ಳದ ಅವ್ಯಾಹತ ಲೂಟಿಗೆ ಸೂಪಾ ಅಣೆಕಟ್ಟು ನಾಂದಿ ಹಾಡಿತು ಎನ್ನಬಹುದು. ಸೂಪಾ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾದಷ್ಟು ಅರಣ್ಯ ಭೂಮಿ, ಕೃಷಿ ಭೂಮಿ ಮತ್ತು ಹಳ್ಳಿಗಳು ಕಾಳಿಗೆ ನಿರ್ಮಿಸಲಾದ ಉಳಿದ ಅಣೆಕಟ್ಟುಗಳಲ್ಲಿ ಮುಳುಗಡೆಯಾಗಿಲ್ಲ. ಸೂಪಾದ ಹಿನ್ನೀರಿನ ಅಗಾಧತೆ ನೋಡಿದರೆ ಈ ಬಗ್ಗೆ ಊಹಿಸಬಹುದು. ಕಳೆದ ನಾಲ್ಕಾರು ವರ್ಷಗಳಲ್ಲಿ ಸೂಪಾ ತುಂಬುತ್ತಿದೆ ಅಂದರೆ, ಅಣೆಕಟ್ಟಿನಲ್ಲಿ ಹೂಳು ತುಂಬಿದೆ ಎಂದರ್ಥವೇ ವಿನ: ೨೦ ವರ್ಷಗಳ ಹಿಂದೆ ನಿರೀಕ್ಷಿಸಿದಷ್ಟು ಮಳೆ ಈಗ ಆಗುತ್ತಿದೆ ಎಂದಲ್ಲ.

ಅಗಾಧ ಪ್ರಮಾಣದ ಕಾಡು ಮತ್ತು ನಾಡು ಮುಳುಗಿಸಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ತನ್ನಾದರೂ ಉತ್ಪಾದಿಸಲಾಗುತ್ತಿದೆಯೇ? ಅದೂ ಇಲ್ಲ! ಸೂಪಾದಲ್ಲಿರುವ ೨ ವಿದ್ಯುತ್ ಘಟಕಗಳಿಂದ ಕೇವಲ ೧೦೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಅಗಾಧ ಪ್ರಮಾಣದ ಜಲಾನಯನ ಪ್ರದೇಶ ಮತ್ತು ಅಪಾರ ನೀರಿನ ಸಂಗ್ರಹಣೆ ಇರುವಾಗ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವೇಕೆ ಕಡಿಮೆ? ಈ ಪ್ರಶ್ನೆಗೆ ಕ.ವಿ.ನಿ ಕೊಡುವ ಉತ್ತರವೇನೆಂದರೆ, ’ಸೂಪಾ ಅಣೆಕಟ್ಟಿನ ಉದ್ದೇಶ ನೀರನ್ನು ಸಂಗ್ರಹಿಸಿ, ಬೊಮ್ಮನಹಳ್ಳಿ ಅಣೆಕಟ್ಟಿಗೆ ಅವಶ್ಯವಿದ್ದಾಗ ಪೂರೈಸುವುದೇ ವಿನ: ಅಧಿಕ ಪ್ರಮಾಣದಲ್ಲಿ ಸೂಪಾದಲ್ಲೇ ವಿದ್ಯುತ್ ಉತ್ಪಾದಿಸುವ ಸಲುವಾಗಿ ಅಲ್ಲ’ ಎಂದು! ಪ್ರತಿ ದಿನ ಮುಂಜಾನೆ ಮತ್ತು ಮಧ್ಯಾಹ್ನ ನೀರನ್ನು ಸೂಪಾ ಅಣೆಕಟ್ಟಿನಿಂದ ಬಿಡಲಾಗುತ್ತದೆ. ಮುಂಜಾನೆ ಬಿಡುವ ನೀರಿನಲ್ಲೇ ಅರಣ್ಯ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳು ’ವೈಟ್ ರಿವರ್ ರಾಫ್ಟಿಂಗ್’ ನಡೆಸುತ್ತವೆ.

ಸೂಪಾ ಅಣೆಕಟ್ಟಿನಲ್ಲಿ ೨೫,೦೦೦ ಎಕರೆಗಳಷ್ಟು ಕಾಡು ನಾಶವಾಯಿತು. ಹಿನ್ನೀರಿನಲ್ಲಿ ಮುಳುಗಲಿರುವ ದಟ್ಟಾರಣ್ಯವನ್ನು ಕೊಳ್ಳೆ ಹೊಡೆಯಲು ದಾಂಡೇಲಿ-ಹಳಿಯಾಳ ಪ್ರದೇಶದ ಪ್ರಮುಖ ರಾಜಕಾರಣಿಗಳ ನಡುವೆ ಪೈಪೋಟಿ. ನಾಚಿಕೆಗೇಡು! ಸೂಪಾ ಹಿನ್ನೀರಿನಲ್ಲಿ ಮುಳುಗಿದ ಹಳ್ಳಿಗಳ ಸಂಖ್ಯೆ ೪೭. ಕಾಳಿ ನದಿಯನ್ನು ಆರಾಧಿಸುತ್ತಾ, ಅದನ್ನೇ ನಂಬಿ ಜೀವನ ನಡೆಸುತ್ತಿದ್ದ ಗೌಳಿ, ಕುಣಬಿ, ಸಿದ್ಧಿ ಮತ್ತು ಮರಾಠಿ ಜನಾಂಗದ ಜನರಿಗೆ ದಿಕ್ಕೇ ತೋಚದಂತಹ ಪರಿಸ್ಥಿತಿ. ಇವರಿಗೆಲ್ಲ ಪರಿಹಾರ ದೊರಕಿದೆಯೋ ಇಲ್ಲವೋ ಎಂಬುವುದು ಊಹೆಗೆ ಬಿಟ್ಟ ವಿಷಯ.

ಸೂಪಾ ಪಟ್ಟಣ ಹಿನ್ನೀರಿನಲ್ಲಿ ಮುಳುಗುವುದರಿಂದ ತಾಲೂಕು ಕೇಂದ್ರವನ್ನು ಜೋಯಿಡಾಗೆ ವರ್ಗಾಯಿಸಲಾಯಿತು. ಸೂಪಾ ಪಟ್ಟಣದ ನಿವಾಸಿಗಳಿಗೆ ಗಣೇಶಗುಡಿಯ ಸಮೀಪ ’ರಾಮನಗರ’ ಎಂಬ ಹೊಸ ಪಟ್ಟಣವನ್ನು ನಿರ್ಮಿಸಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಯಿತು. ರಾಮನಗರ ಇದ್ದ ಜಾಗದಲ್ಲಿ ದಟ್ಟ ಅರಣ್ಯವಿತ್ತು. ಸೂಪಾ ಹಿನ್ನೀರಿನಲ್ಲಿ ಮುಳುಗಿಸಿದ ಅರಣ್ಯ ಸಾಲದೆಂಬಂತೆ ಸರಕಾರ ಸುಮಾರು ೮೦೦-೧೦೦೦ ಹೆಕ್ಟೇರುಗಳಷ್ಟು ಅರಣ್ಯವನ್ನು ಕಡಿದು ರಾಮನಗರವನ್ನು ನಿರ್ಮಿಸಿತು! ಆದರೆ ರಾಮನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇತ್ತು. ಆದಿವಾಸಿ ಜನಾಂಗದ ಕೆಲವು ಕುಟುಂಬಗಳಿಗೂ ರಾಮನಗರದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಸೌಕರ್ಯಗಳ ಕೊರತೆಯಿಂದ ಬೇಸತ್ತ ಇವರು ಆಸುಪಾಸಿನ ಕಾಡುಗಳನ್ನು ಕಡಿದು ಜಮೀನು ಮಾಡಿಕೊಂಡು ಜೀವನ ಸಾಗಿಸುವ ಪ್ರಯತ್ನ ಮಾಡತೊಡಗಿದರು. ಕಾಡಿಗೆ ನಿರಂತರ ಹಾನಿ ಮಾತ್ರ ಮುಂದುವರಿಯಿತು.

ವ್ಯವಸಾಯ ಮಾಡಲು ಸೂಪಾ ಅಣೆಕಟ್ಟಿನ ನೀರನ್ನು ಬಳಸುವ ಅವಕಾಶ ಅದಕ್ಕಾಗಿ ತಮ್ಮ ಜಮೀನು ಕಳಕೊಂಡ ಈ ಜನರಿಗೆ ಇರಲಿಲ್ಲ! ಅಣೆಕಟ್ಟು ನಿರ್ಮಾಣದ ಬಳಿಕ, ನೀರಾವರಿ ಸೌಲಭ್ಯವನ್ನು ನೀಡಲಾಗುವುದು ಎಂಬ ಅಶ್ವಾಸನೆ ಹಾಗೇ ಉಳಿಯಿತು. ನೀರಿನ ಸೌಲಭ್ಯವಿಲ್ಲದೆ ತಮಗೆ ನೀಡಿದ್ದ ಜಮೀನಿನಲ್ಲಿ ಏನನ್ನೂ ಬೆಳೆಯಲಾಗದ ಜನರು ತಮ್ಮ ಜಮೀನನ್ನೆಲ್ಲಾ ಮಾರಿಬಿಟ್ಟಿದ್ದಾರೆ ಹಾಗೂ ಲೀಸ್-ಗೆ ಸಂಸ್ಥೆಯೊಂದಕ್ಕೆ ಬಿಟ್ಟುಕೊಟ್ಟಿದ್ದಾರೆ. ರಾಮನಗರದಲ್ಲಿ ಆಸ್ಪತ್ರೆ, ಶಾಲೆ, ದೇವಸ್ಥಾನ ಇತ್ಯಾದಿಗಳನ್ನು ನಿರ್ಮಿಸಿದ ಸರಕಾರ ಮತ್ತೆ ರಾಮನಗರದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

ಎಲ್ಲಾ ಕಡೆ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಆಗುವುದೇ ಇಲ್ಲೂ ಪುನರಾವರ್ತನೆಯಾಯಿತು. ಅಣೆಕಟ್ಟಿಗಾಗಿ ತಮ್ಮೆಲ್ಲವನ್ನೂ ಕಳಕೊಂಡು ಈಗ ಜೀವನವನ್ನು ಹೊಸದಾಗಿ ಆರಂಭಿಸುವ ದುರಾದೃಷ್ಟ. ಪರಿಹಾರ ವಿತರಣೆ ಸಮಯದಲ್ಲಿ ಸಮರ್ಥ/ಪ್ರಾಮಾಣಿಕ ಅಧಿಕಾರಿಗಳಿದ್ದು, ಕುಟುಂಬದ ಜವಾಬ್ದಾರಿಯುತ ವ್ಯಕ್ತಿಯ ಕೈಗೆ ಪರಿಹಾರ ತಲುಪಿಸಿದರೆ ಎಲ್ಲವೂ ಸರಿ. ಇಲ್ಲವಾದಲ್ಲಿ ಈ ಜನರ ಬದುಕು ಯಾರಿಗೂ ಬೇಡ. ಹಿನ್ನೀರಿನ ದೃಶ್ಯ ಕಂಡಾಗ ’ಆಹಾ, ಸುಂದರ ದೃಶ್ಯ’ ಎನ್ನುವ ನಾವು, ಒಂದು ಕ್ಷಣ ಆ ’ಸುಂದರ’ ದೃಶ್ಯದ ಹಿಂದಿರುವ ಕಣ್ಣೀರು, ಬವಣೆ, ದುಗುಡ ಇತ್ಯಾದಿಗಳನ್ನು ನೆನೆಸಿಕೊಂಡರೂ ಸಾಕು. ಬದುಕು, ಭೂಮಿ ಕಳಕೊಂಡವರ ಪಾಡನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ....ನಮ್ಮ ಬದುಕು/ಭೂಮಿ ಹಿನ್ನೀರೊಂದರ ತಳ ಸೇರುವ ತನಕ.

12 ಕಾಮೆಂಟ್‌ಗಳು:

  1. ರಾಜೇಶ್,

    ಎಂತಹ ಸತ್ಯದರ್ಶನ. ಓದಿ ತುಂಬ ಕೆಟ್ಟೆನಿಸಿದೆ. ಏನು ಮಾಡಬಹುದು ನಾವು? ಏನಾದರೂ ಹೇಳಿ.

    ನಿಮ್ಮ ಕೊನೆಯ ಪ್ಯಾರಾ ನಮ್ಮ ಎಲ್ಲ ಆಷಾಢಭೂತಿ ತನಕ್ಕೆ, ಪ್ರಗತಿಯ ಹಿಂದೆ ಓಡುತ್ತಿರುವ ದುರಾಶೆಗೆ ಹಿಡಿದ ಕನ್ನಡಿ. ಮತ್ತೆ ಮತ್ತೆ ಓದಿ ಖಿನ್ನಳಾಗಿದ್ದೇನೆ. ಏನು ಮಾಡಬಹುದು ನಾವು?

    ಪ್ರೀತಿಯಿಂದ
    ಸಿಂಧು

    ಪ್ರತ್ಯುತ್ತರಅಳಿಸಿ
  2. ಅನಾಮಧೇಯಜುಲೈ 17, 2008 12:18 PM

    ಬೆಂಗಳೂರಿನಲ್ಲಿ ಕೂತು ಹಾಗು ವೈಮಾನಿಕ ಸಮೀಕ್ಷೆಯ ಮೂಲಕ ಗೊತ್ತುಪಡಿಸಿದ ನೇತ್ರಾವತಿ ತಿರುವು ಯೋಜನೆ ಬಗೆ ದಿನೇಶ್ ಹೋಳ್ಳರ ಅರ್ಟಿಕಲ್ ಒದಿದ ನೆನಪು ಅಯಿತು.

    ದ .ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಬರುವ ಕೆಲವು ಯೋಜನೆಗಳಿಗೆ ೯೦ ಸಾವಿರ ಎಕರೆಗಿಂತ ಜಾಸ್ತಿ ಹಸಿರು ಪ್ರದೇಶ ಗೊತುಪಡಿಸಿರುವುದು ಅಲ್ಲದೆ ಯೋಜನೆಗಳಿಗೆ ನೀರು ಒದಗಿಸಲು ನೇತ್ರಾವತಿ. ಪಲ್ಗುಣಿ(ಗುರುಪುರ),
    ಶಾಂಭವಿ ನದಿಗಳಿಗೆ ಡ್ಯಾಮ್ ಕಟ್ಟಲು ಯೋಜನೆ ಹಾಕಿದ್ದು.ಇದೆಲ್ಲ ಕಾರ್ಯಗತವಾದರೆ ನಮ್ಮವರ ಗತಿ????.
    ವಿಶೇಷವೆಂದರೆ ಈ ಯೋಜನೆಯ ಪ್ಲಾನ್ ಮಾಡಿದ್ದು ಜನರಿಂದ ಅರಿಸಲ್ಪಟ್ಟ ಒಬ್ಬ ರಾಜಕಾರಣಿ.


    ಕಾಳಿ ನದಿಯ ಬಗೆ ಉಪಯುಕ್ತ ಮಾಹಿತಿಗಳು.

    ನಮ್ಮ ಗೋವಾ ಚಾರಣದಲ್ಲಿ ಕುವೆಶಿ ಒಂದು ಕ್ಯಾಂಪ್ ಇತ್ತು. ಇ ಕುವೆಶಿ ಇರುವುದು ಜೋಯಿಡಾ ತಾಲೂಕಿನಲ್ಲಿ.
    ಅಲ್ಲಿ ರಾಮನಗರದ ಬಗೆ ಕೇಳಿದ್ದೆ.

    ಜಾಸ್ತಿ ಜನರಿಗೆ ಕಾಳಿಯ ಕ(ವ್ಯ)ಥೆಯ ಬಗೆ ಗೊತ್ತುಪಡಿಸಲು ಯಾವುದಾದರು ಪೇಪರಲ್ಲಿ ಇ ಅರ್ಟಿಕಲ್ ಹಾಕಿದರೆ ಒಳ್ಳೆಯದು ಎಂದು ನನ್ನ ಭಾವನೆ.

    ಕಾಯುತ್ತಿದ್ದೆನೆ ಮುಂದಿನ ಬರಹಕ್ಕೆ

    ಪ್ರತ್ಯುತ್ತರಅಳಿಸಿ
  3. ಯಾವುದೇ ಯೋಜನೆ ಶುರು ಮಾಡುವ ಮುನ್ನ ಸ್ಥಳಿಯರಿಂದ ಜನಮತಗಣನೆ ತೆಗೆದುಕೊಳ್ಳುವುದೇ ಸೂಕ್ತ. ತಲೆ ಇಲ್ಲದ ರಾಜಕಾರಣಿಗಳು ಹಾಗು ತಲೆ ಹಿಡಿಯುವ ಸರ್ಕಾರಿ ಅಧಿಕಾರಿಗಳಿಗಲ್ಲ.

    ಪ್ರತ್ಯುತ್ತರಅಳಿಸಿ
  4. ರಾಜೇಶ್ ಸಾರ್,

    ಸಹಸ್ರಲಿಂಗ ಪ್ರದೇಶವನ್ನು ನುಂಗುವ ಯೋಜನೆ ಮತ್ತು ಮಾಗೋಡ ಜಲಪಾತವನ್ನು ಕಳೆದು ಹಾಕುವ ಬೇಡ್ತಿ ಯೋಜನೆಗಳು ಕಾರ್ಯರೂಪಕ್ಕೆ ಬರುವುದನ್ನು ತಡೆಯುವಲ್ಲಿ ಸ್ವರ್ಣವಲ್ಲಿ ಮಠಾಧೀಶರು ಶ್ರಮ ವಹಿಸಿದ್ದಾರೆ ಎಂದು ಕೇಳಿದ್ದೇನೆ. ಅದು ನಿಜವೆ? ನಿಜವಾದರೆ ಇಂತಹ ಮಠಾಧೀಶರು ಹೆಚ್ಚಾಗಲಿ.

    ಪ್ರತ್ಯುತ್ತರಅಳಿಸಿ
  5. ನಿಮ್ಮ ವರ್ಣನೆಯನ್ನು ಓದಿ ತಳಮಳವಾಯಿತು.
    ಇರಲಿ,ಒಂದು ಚಿಕ್ಕ spelling mistake ಆಗಿದೆ.
    ಪಾಂಢರಿ ಬದಲಾಗಿ ಪಂಢಾರಿ ಆಗಿದೆ.

    ಪ್ರತ್ಯುತ್ತರಅಳಿಸಿ
  6. ಅನಾಮಧೇಯಜುಲೈ 18, 2008 6:53 AM

    ರಾಜೇಶ್,

    ಖಂಡಿತವಾಗಿಯೂ ಬೇಕಿತ್ತು ಇಂಥದ್ದೊಂದು ಲೇಖನ ಸರಣಿ. ಉತ್ತರ ಕನ್ನಡ ಜಿಲ್ಲೆಯ ಮತ್ತು ಪಶ್ಚಿಮದ ಘಟ್ಟಗಳ ಲೂಟಿ ಬಗ್ಗೆ ಬರೆದು ಮುಗಿಸಲು ವರ್ಷಗಟ್ಟಲೆ ಬೇಕೇನೊ! ಒಂದಾದ ಮೇಲೆ ಮತ್ತೊಂದರಂತೆ ಕಿಂಚಿತ್ತೂ ವಿವೇಕವಿತ್ತದೆ ಈ ಜಿಲ್ಲೆಯಲ್ಲಿ ಅಣೆಕಟ್ಟೆಗಳು ನಿರ್ಮಾಣಗೊಳ್ಳುತ್ತಿವೆ. ಅದನ್ನು ವಿರೋಧಿಸಿದರೆ ಪ್ರಗತಿ ವಿರೋಧಿಯೊ ಮಣ್ಣಂಗಟ್ಟಿಯೊ ಎಂಬ ಅಪವಾದ ಬೇರೆ! ಈಗ ಬೇಡ್ತಿ, ಅಘನಾಶಿನಿ ಯೋಜನೆಗಳು ಸದ್ದು ಮಾಡುತ್ತಿವೆ. ಒಟ್ಟಾರೆ ಮುಳುಗಡೆ ಎನ್ನುವುದು ಈ ಜಿಲ್ಲೆಯ ಪಾಲಿಗೆ ನೆತ್ತಿಯ ಮೇಲೆ ಸದಾ ತೂಗುವ ಕತ್ತಿ.

    ದಯವಿಟ್ಟು ಮುಂದುವರೆಸಿ.

    -ಶ್ರೀಪ್ರಿಯೆ

    ಪ್ರತ್ಯುತ್ತರಅಳಿಸಿ
  7. ನಮ್ಮ ಸುಂದರ ಗಿರಿ ಶ್ರೇಣಿಗಳ ಕಡಿಯುವ, ಕಾಡುಗಳನ್ನು ಹಾಳು ಮಾಡುವ, ಅನ್ನದಾತರ ಬದುಕನ್ನು ಕದಿಯುವ, ಕಡೆಗೆ ಯಾರಿಗೂ ಬೆಳಕಾಗದ ಈ 'development' ನಮಗೆ ಬೇಕೆ?

    ಈ ಲೇಖನ ಮಾಲೆ ಕೇವಲ ಕಾಳಿಯೊಬ್ಬಳ ವ್ಯಥೆ ಅಲ್ಲ, ಇದು ಪ್ರತಿ ಭಾರತೀಯ ನದಿಯ ಕಣ್ಣೀರಿನ ಕಥೆ. ಎಲ್ಲರ ಕಣ್ ತೆರೆಸುವ ಇಂತಹ ಲೇಖನಗಳು ಇನ್ನಷ್ತು ಬರಲಿ. ಈ ಲೇಖನ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟಗೊಂಡರೆ awareness ಸಾಧಿಸಲು ಅನುಕೂಲವಾಗುತ್ತದೆ.

    ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಂಡರೆ ಭೂಮಿಯಮೇಲೆ ಮತ್ತಷ್ತು ದಿನ ಮಾನವ ಬಾಳಬಹುದು, ಇಲ್ಲವಾದರೆ ಮನುಜ ಕುಲ ನಶಿಸಿ ಹೋಗಲು ಮತ್ತೊಂದು ಮನ್ವಂತರಕ್ಕಾಗಿ ಕಾಯಬೇಕಿಲ್ಲ.

    ರಾಜೆಶ್ ಅವರೆ, ನಮ್ಮನ್ನೆಲ್ಲಾ ಅಳಿಸಿದ್ದು ಇನ್ನೂ ಸಾಲದೆ? ಇನ್ನೂ ಹೆಚ್ಚಿನ ವ್ಯಥೆಯನ್ನು ಕಾಳಿ ಭರಿಸುತ್ತಿದ್ದಾಳೆಯೆ?

    ಪ್ರತ್ಯುತ್ತರಅಳಿಸಿ
  8. Read this also: http://news.bbc.co.uk/2/hi/south_asia/2977169.stm

    Where are we heading?

    ಪ್ರತ್ಯುತ್ತರಅಳಿಸಿ
  9. ಪ್ರಗತಿಯ ದೂರದೃಷ್ಠಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದನ್ನು ಬಹಳ ಅರ್ಥಪೂರ್ಣವಾಗಿ ತಿಳಿಸಿದ್ದೀರಿ. ಅಗಾಧ ಪ್ರಮಾಣದ ಕಾಡು ಮತ್ತು ನಾಡು ಮುಳುಗಿಸುವ ಇಂತಹ ಯೋಜನೆಗಳನ್ನು ವಿರೋಧಿಸಬೇಕು.

    ಪ್ರತ್ಯುತ್ತರಅಳಿಸಿ
  10. excellent article boss.. ಉತ್ತರ ಕನ್ನಡ ಜಿಲ್ಲೆ ನಮ್ಮ ಗೋಸುಂಬೆ ರಾಜಕಾರಣಿಗಳ "ಅಭಿವೃದ್ಧಿ" ನಾಟಕಕ್ಕೆ experiment ಜಾಗ ಆಗೋಗಿದೆ.

    ಪರಿಹಾರ ದೊರಕಿದೆಯೋ ಇಲ್ಲವೋ ಎಂಬುವುದು ಊಹೆಗೆ ಬಿಟ್ಟ ವಿಷಯ- ಹೌದು ಈ ಬಗ್ಗೆ ಬರೆದರೆ, ಅದು ಮತ್ತೊಂದು ಸರಣಿಯೇ ಆದೀತು.

    ನಾವೆಲ್ಲರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಇದ್ದೇವಾ?

    ಪ್ರತ್ಯುತ್ತರಅಳಿಸಿ
  11. ಒಳ್ಳೆ ಲೇಖನ ರಾಜೇಶ್ ಅವ್ರೆ. ಸಿಂಧು ಅವರು ಹೇಳಿದಂತೆ ನಾವು ಈ ವಿಷಯದಲ್ಲಿ ಏನು ಮಾಡಲು ಸಾಧ್ಯ ಎಂಬುದನ್ನು ತಿಳಿಸಿ. ಕಾಲೇಜ್ ರಜೆ ಇರುವ ಸಮಯದಲ್ಲಿ ಖಂಡಿತ ನನ್ನ ಕೈ ಲಾದಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಬಲ್ಲೆ. ಪ್ರಕೃತಿಯನ್ನು ಉಳಿಸಲು ಸಮಾನ ಮನಸ್ಕರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.

    ಪ್ರತ್ಯುತ್ತರಅಳಿಸಿ
  12. ಸಿಂಧು,
    ಆಗಿ ಹೋದ ಅನಾಹುತಗಳಿಗೆ ಈಗೇನೂ ಮಾಡುವಂತಿಲ್ಲ. ಕಾಳಿ ಕೊಳ್ಳದಲ್ಲಿ ಇನ್ನು ಯಾವುದೇ ಅನಾಹುತ ನಡೆಯುವುದನ್ನು ತಡೆಯಲು ನಮ್ಮಂತಹ ಸಾಮಾನ್ಯರು ಮುಂದೇನು ಮಾಡಬಹುದು ಎಂಬುದರ ಬಗ್ಗೆ ಈ ಸರಣಿಯ ಕೊನೆಯ ಭಾಗದಲ್ಲಿ ಮಾಹಿತಿಯಿದೆ.

    ಸುಧೀರ್,
    ಅಣೆಕಟ್ಟು ನಿರ್ಮಿಸಿದರೆ ತಾನೆ ರಾಜಕಾರಣಿಗಳಿಗೆ ಬೇಗನೆ ದೊಡ್ಡ ಮಟ್ಟದ ಹಣ ದೊರಕುವುದು. ಹಾಗಾಗಿ ಕರಾವಳಿಯಲ್ಲಿ ಈ ಎಲ್ಲಾ ಗುಲ್ಲು. ಪರಿಸರದ ಬಗ್ಗೆ, ಜನರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ಜನರಿವರು.

    ಅರವಿಂದ್,
    ನೀವು ಹೇಳಿದ್ದು ಸರಿ. ಆದರೆ ಅದು ಸಾಧ್ಯವೇ? ಇಂತಹ ಯೋಜನೆಗಳನ್ನು ಕೈಗೊಳ್ಳುವಾಗ ಜನರ ಭಾವನೆಗಳಿಗೆ/ಮಾತುಗಳಿಗೆ ಬೆಲೆ ಎಲ್ಲಿ.

    ಪ್ರಸನ್ನ,
    ನೀವು ಕೇಳಿದ್ದು ಸರಿಯಾಗಿದೆ. ಮಠಾಧೀಶರೇ ಇತ್ತೀಚಿಗಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

    ಸುನಾತ್,
    ಅದು ’ಸ್ಪೆಲ್ಲಿಂಗ್ ಮಿಸ್ಟೇಕ್’ ಅಲ್ಲ. ನಿಜವಾದ ’ಮಿಸ್ಟೇಕ್’. ನಾನದನ್ನು ಪಂಢಾರಿ ಎಂದೇ ತಿಳಿದಿದ್ದೆ. ಸರಿಯಾದ ಉಚ್ಚಾರವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.

    ಅಲಕಾ,
    ಉತ್ತರ ಕನ್ನಡ ಜಿಲ್ಲೆ ’ಮುಳುಗಡೆ ಜಿಲ್ಲೆ’ಯಾಗಲು ಕಾರಣ ಅಲ್ಲಿನ ರಾಜಕಾರಣಿಗಳು ಮತ್ತು ಸ್ವತ: ಜನರು. ’ಪಕ್ಕದ ಮನೆಗೆ ಬೆಂಕಿ ಬಿದ್ದರೆ, ತನ್ನ ಮನೆಗೆ ಬಿದ್ದಿಲ್ಲವಲ್ಲ ಎಂದು ಅಡಿಕೆ ಹೆಕ್ಕಲು ಹೋದ್ನಂತೆ’. ಈ ಮನೋಭಾವ ಇರುವುದರಿಂದಲೇ ಉತ್ತರ ಕನ್ನಡ ಜಿಲ್ಲೆ ಅಣೆಕಟ್ಟುಗಳ ಜಿಲ್ಲೆಯಾಗಿದೆ. ತಾಲೂಕುಗಳ ನಡುವೆ ಒಗ್ಗಟ್ಟಿಲ್ಲ. ದುರಾಸೆಭರಿತ ರಾಜಕಾರಣಿಗಳು.ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವಷ್ಟು ಸುಲಭ ಬೇರ್ಯಾವುದೂ ಇಲ್ಲವಲ್ಲ. ಹಾಗಾಗಿ ಸರಕಾರಕ್ಕೆ ಎಲ್ಲವೂ ಸುಲಭವಾಗಿದೆ. ಈಗೀಗ ಜನರು ಸ್ವಲ್ಪ ಎಚ್ಚೆತ್ತುಕೊಂಡಿದ್ದಾರೆ. ಬೇಡ್ತಿ ಯೋಜನೆಗೆ ಪ್ರಬಲ ವಿರೋಧವಿರುವುದರಿಂದ ಸದ್ಯಕ್ಕೆ ಅದರ ಮಾತಿಲ್ಲ. ಆದರೆ ಸರಕಾರಕ್ಕೆ ಅದನ್ನು ಕಾರ್ಯಗತಗೊಳಿಸುವ ಎಲ್ಲಾ ಇರಾದೆಗಳಿವೆ. ಇದುವರೆಗೆ ಅಣೆಕಟ್ಟು ಎಂಬ ಭೂತ ಇರದ ನದಿ ಎಂದರೆ ಅಘನಾಶಿನಿ. ಇದಕ್ಕೂ ಸಾಂತಗಲ್ ಎಂಬಲ್ಲಿ ಅಣೆಕಟ್ಟು ನಿರ್ಮಿಸುವ ಇರಾದೆ ಸರಕಾರಕ್ಕಿದೆ ಮತ್ತು ಸರ್ವೇ ಕಾರ್ಯಗಳು ನಡೆದಿವೆ.

    ಶ್ರೀಕಾಂತ್,
    ಕಾಳಿ ಒಂದು ಉದಾಹರಣೆ ಅಷ್ಟೆ. ಸರಕಾರಗಳು ಇರುವುದೇ ನದಿಗಳನ್ನು ಸತ್ಯನಾಶ ಮಾಡುವುದಕ್ಕಾಗಿ. ಸದ್ಯಕ್ಕಂತೂ ಕಾಳಿ ಎಲ್ಲವನ್ನೂ ಸಹಿಸಿ ಬಾಳುತ್ತಿದ್ದಾಳೆ. ಆದರೆ ಎಷ್ಟು ಕಾಡನ್ನು, ಹಳ್ಳಿಗಳನ್ನು ಶಾಶ್ವತವಾಗಿ ಅಳಿಸಿ ಹಾಕಿದ್ದಾಳೆ ಎಂಬುದರ ಕಡೆಗೆ ಗಮನ ಹರಿಸಿದರೆ ವ್ಯಥೆಯುಂಟಾಗುತ್ತದೆ. ಎಷ್ಟು ಜನರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾಳೆ ಎಂದು ಯೋಚಿಸಿದರೆ ಬೇಸರವಾಗುತ್ತದೆ. ಇವೆಲ್ಲ ಅನಾಹುತಗಳನ್ನು ಆಕೆಯಿಂದ ಮಾಡಿಸಿದವರು ಮಾತ್ರ ಸುಖವಾಗಿದ್ದಾರೆ.

    ಮಂಜುನಾಥ್,
    ಸರಕಾರಗಳಿಗೆ ಕಾಡು ಮತ್ತು ನಾಡು ಮುಳುಗಿಸುವುದೇ ಒಂದು ಚಟವಾಗಿ ಬೆಳೆಯುತ್ತಿದೆ. ದೂರದೃಷ್ಟಿ ಇಲ್ಲದ ಮತ್ತು ಪರಿಸರ ಸಮತೋಲನದ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ಯೋಜನೆಗಳಿವು.

    ಶ್ರೀನಿಧಿ,
    ಥ್ಯಾಂಕ್ಸ್. ಉತ್ತರ ಕನ್ನಡ ಜಿಲ್ಲೆಗೆ ಸಮರ್ಥ ರಾಜಕಾರಣಿಗಳ ಕೊರತೆ ಇದ್ದೇ ಇದೆ. ತದಡಿ ಯೋಜನೆಯನ್ನು ಅಲ್ಲಿನ ಆಗಿನ ಶಾಸಕರು ವಿರೋಧಿಸಿದಷ್ಟು, ಯಾವ ಯೋಜನೆಯನ್ನೂ ಯಾವ ರಾಜಕಾರಣಿಯೂ ವಿರೋಧಿಸುವಷ್ಟು ನೈತಿಕತೆ ತೋರಿಲ್ಲ. ಎಲ್ಲರೂ ಹುಟ್ಟಾ ಕಳ್ಳರು. ಆಗಿ ಹೋದ ಘಟನೆಗಳಿಗೆ ಈಗೇನು ಮಾಡಲು ಸಾಧ್ಯ?

    ಶರಶ್ಚಂದ್ರ,
    ಆ ಬಗ್ಗೆ ಈ ಸರಣಿಯ ಅಂತಿಮ ಭಾಗದಲ್ಲಿ ಮಾಹಿತಿಯಿದೆ. ವಿದ್ಯಾರ್ಥಿಯಾಗಿರುವಾಗಲೇ ಪ್ರಕೃತಿ ಬಗ್ಗೆ ನಿಮ್ಮ ಪ್ರೀತಿ ಮೆಚ್ಚಬೇಕಾದ್ದೆ.

    ಪ್ರತ್ಯುತ್ತರಅಳಿಸಿ