ಭಾನುವಾರ, ಜೂನ್ 29, 2008

ಗುಡ್ಡದ ಚೆಲುವು


ಈ ದಾರಿಯಲ್ಲಿ ಪ್ರಯಾಣಿಸುವಾಗ ಈ ಬೆಟ್ಟ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿತ್ತು. ಬೆಟ್ಟದ ಹೆಸರೇನೆಂದು ಗೊತ್ತಿರಲಿಲ್ಲ. ಆದರೆ ಅದನ್ನು ನೋಡಿದಾಗಲೆಲ್ಲಾ ಅದರ ತುದಿಗೊಂದು ಸಲ ಭೇಟಿ ನೀಡಬೇಕೆಂಬ ಆಸೆ ಹೆಚ್ಚಾಗುತ್ತಿತ್ತು. ಮೊನ್ನೆ ಮೇ ೪ರಂದು ರಾಕೇಶ್ ಹೊಳ್ಳ ಮತ್ತು ಅಶೋಕ, ಇಬ್ಬರೊಂದಿಗೆ ಆ ಬೆಟ್ಟದೆಡೆ ಹೊರಟೆ. ರಾಕೇಶ್ ಶರವೇಗದಲ್ಲಿ ಬೈಕ್ ಓಡಿಸಿದರೆ ನಾನು ಬಹಳ ನಿಧಾನ. ದಾರಿಯಲ್ಲಿ ಸಿಗುವ ದೇವಸ್ಥಾನವೊಂದರಲ್ಲಿ ಇವರಿಬ್ಬರು ಬೋರ್ ಹೊಡೆಸಿಕೊಂಡು ನನಗೆ ಕಾಯುತ್ತಿದ್ದರು. 'ಎಂತ ಮಾರ್ರೆ ನೀವು. ನಾವು ದೇವಿಗೆ ನಮಸ್ಕಾರ ಹಾಕಿ, ದೇವಸ್ಥಾನಕ್ಕೆ ೩ ಸುತ್ತು ಹಾಕಿ, ಚಾ ಕುಡ್ದು, ಅಚೀಚೆ ನೋಡಿ ಎಲ್ಲ ಮಾಡಾಯ್ತು ಆದ್ರೂ ನಿಮ್ಮ ಪತ್ತೆ ಇಲ್ಲ.....' ಎಂದು ರಾಕೇಶ ತನ್ನ ಅಸಹನೆಯನ್ನು ವ್ಯಕ್ತಪಡಿಸಿದ.

ಅಶೋಕನ ಪ್ರಕಾರ ನಾವು ತೆರಳುವುದು ಅಂಬಾರಗುಡ್ಡ ಇರಬಹುದು. ಅಂಬಾರಗುಡ್ಡ ಹೆಸರು ನಾನು ಕೇಳಿದ್ದೆ. ಇಲ್ಲಿ ಮ್ಯಾಂಗನೀಸ್ ಗಣಿಗಾರಿಕೆಯ ವಿರುದ್ಧ ರಾಮಚಂದ್ರಾಪುರ ಮಠದ ಸ್ವಾಮಿಗಳ ನೇತೃತ್ವದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದಾಗ ಗಣಿಗಾರಿಕೆ ಸ್ಥಗಿತಗೊಂಡಿತ್ತು ಎಂದು ಓದಿದ ನೆನಪು. ಅಶೋಕನಿಗಂತೂ ನಾವು ತೆರಳುವುದು ಅಂಬಾರಗುಡ್ಡಕ್ಕೇ ಎಂಬುದು ಖಚಿತವಾಗಿತ್ತು. ಆದರೆ ನನಗೆ ಸಂಶಯವಿತ್ತು.

ಹೊಸಕೊಪ್ಪದಲ್ಲಿ ಮನೆಯೊಂದರ ಬಳಿ ಮಾಹಿತಿ ಕೇಳೋಣವೆಂದು ನಿಂತೆವು. ಮನೆಯ ಯಜಮಾನ ಒಳಗಿನಿಂದಲೇ ಜೋರಾಗಿ ಒದರುತ್ತಾ ಮಾಹಿತಿ ನೀಡುತ್ತಿದ್ದರೆ ನಾವು ಹೊರಗಿನಿಂದ ಜೋರಾಗಿ ಒದರುತ್ತಾ ಪ್ರಶ್ನೆ ಕೇಳುತ್ತಿದ್ದೆವು. 'ಒಳ್ಗೆ ಬನ್ನಿ. ನಾನು ತಿಂಡಿ ತಿಂತಾ ಇದ್ದೀನಿ. ಸ್ವಲ್ಪ ಹೊತ್ತು ಕೂತ್ಕೊಂಡು ಹೋಗಿ' ಎಂದು ಒಳಗೆ ಕರೆದರು. ಇವರು ಪ್ರಭಾಕರ ಹೆಗಡೆ. ಆ ಬೆಟ್ಟದ ಹೆಸರು ಅಂಬಾರಗುಡ್ಡ ಎಂದು ತಿಳಿಸಿ, ಹೋಗುವ ದಾರಿಯನ್ನೂ ತಿಳಿಸಿ, ಹಿಂತಿರುಗುವಾಗ ಎಷ್ಟೇ ತಡವಾದರೂ ಪರವಾಗಿಲ್ಲ ಮನೆಗೆ ಬಂದು ಊಟ ಮಾಡಿಕೊಂಡೇ ತೆರಳಬೇಕೆಂದು ನಮ್ಮನ್ನು ಕಳಿಸಿಕೊಟ್ಟರು.

ಗಣಿಗಾರಿಕೆ ಇದ್ದ ಕಾರಣ ಅಂಬಾರಗುಡ್ಡದ ಮೇಲಿನವರೆಗೂ ರಸ್ತೆಯಿದೆ. ಕೊನೆಗೊಂದು ೩೦ ನಿಮಿಷ ನಡೆದರಾಯಿತಷ್ಟೇ. ಇಲ್ಲಿ ನೆಲವನ್ನು ಅಗೆಯಬೇಕಾಗಿಲ್ಲ, ಗುಡಿಸಿದರೂ ಮ್ಯಾಂಗನೀಸ್ ಅದಿರು ಸಿಗುತ್ತದೆ. ಅಲ್ಲಲ್ಲಿ ಅದಿರನ್ನು ಬಗೆದು ರಾಶಿ ಹಾಕಲಾಗಿತ್ತು. ದೂರದಲ್ಲಿ ಕೊಡಾಚಾದ್ರಿ ಶಿಖರ ಮತ್ತು ಬೆಟ್ಟಗಳ ಶ್ರೇಣಿ ಕಾಣುತ್ತಿತ್ತು. ಸುತ್ತಲೂ ಹಳ್ಳಿಗಳಿವೆ. ಆದರೆ ಒಂದು ಪಾರ್ಶ್ವದಲ್ಲಿ ಸುಂದರವಾದ ಕಣಿವೆಯಿದೆ. ಈ ಕಣಿವೆ ದಾಟಿ, ಮಳೆ ಕಾಡೊಂದನ್ನು ದಾಟಿದರೆ ಇನ್ನೊಂದು ಬೆಟ್ಟ. ಮುಂದಿನ ಸಲ ಇಲ್ಲಿಗೆ ಬಂದರೆ ಆ ಬೆಟ್ಟಕ್ಕೂ ತೆರಳಬೇಕು. ಕಣಿವೆಯ ಸೌಂದರ್ಯವನ್ನು ಆನಂದಿಸುತ್ತಾ ನಿಧಾನವಾಗಿ ಅಂಬಾರಗುಡ್ಡದ ತುದಿಯನ್ನು ಸಮೀಪಿಸತೊಡಗಿದೆವು.

ತುದಿ ತಲುಪಿದ ಕೂಡಲೇ ಇನ್ನೊಂದು ಸುಂದರ ದೃಶ್ಯ. ಮುಂದೆ ಕೆಳಗಡೆ ಇನ್ನೊಂದು ಶಿಖರ. ಹಾವಿನಂತೆ ಮುಂದಕ್ಕೆ ಚಾಚಿಕೊಂಡಿರುವ ಈ ಬೆಟ್ಟದ ದೃಶ್ಯ ನೋಡಿ ರಾಕೇಶ ಸಂತೋಷದಿಂದ ಚೀರಾಡುತ್ತಿದ್ದ. ಅಂಬಾರಗುಡ್ಡದ ತುದಿಯಿಂದ ಹಾಗೆ ಕೆಳಗಿಳಿದು ಈ ಮತ್ತೊಂದು ಬೆಟ್ಟದ ಮೇಲಕ್ಕೆ ಬರಬಹುದು. ಈ ಬೆಟ್ಟದ ಒಂದು ಬದಿ ೯೦ ಡಿಗ್ರೀ ಪ್ರಪಾತವಿದ್ದರೆ ಇನ್ನೊಂದು ಬದಿ ಇಳಿಜಾರಾಗಿದೆ. ನಡುವೆ ನಡೆಯುತ್ತಾ ಅದರ ಇನ್ನೊಂದು ತುದಿಯತ್ತ ಸಾಗುವಾಗ ಬೀಸುತ್ತಿದ್ದ ಗಾಳಿ ನೀಡುತ್ತಿದ್ದ ಸಂತೋಷವನ್ನು ಸದಾ ಅನುಭವಿಸುತ್ತಾ ಅಲ್ಲೇ ಇದ್ದು ಬಿಡೋಣವೆಂದೆನಿಸುತ್ತಿತ್ತು. ಇಲ್ಲಿಂದ ಕೋಗಾರಿಗೆ ತೆರಳುವ ರಸ್ತೆ ಕಾಣುತ್ತಿತ್ತು. ಬಹು ದಿನದ ಆಸೆಯೊಂದು ಈಡೇರಿತು. ಅಲ್ಲೇ ಸಣ್ಣ ಗಿಡವೊಂದರ ನೆರಳಿನಲ್ಲಿ ಸುಮಾರು ಒಂದು ತಾಸು ವಿಶ್ರಮಿಸಿದೆವು.

ಅಂಬಾರಗುಡ್ಡದಲ್ಲಿ ಚಾರಣ ಕಡಿಮೆ. ಆದರೆ ಇಲ್ಲಿ ಪ್ರಕೃತಿಯ ಅನುಪಮ ಸೌಂದರ್ಯ ಲಭ್ಯ. ಎಲ್ಲಾ ಕೋನಗಳಲ್ಲಿ ಫೋಟೋಗಳನ್ನು ತೆಗೆದು ಅಲ್ಲಿಂದ ಹೊರಟವರು ಮತ್ತೆ ನಿಂತದ್ದು ಹೊಸಕೊಪ್ಪ ಪ್ರಭಾಕರ ಹೆಗಡೆಯವರ ಮನೆಯಲ್ಲಿ ಊಟಕ್ಕೆ!

11 ಕಾಮೆಂಟ್‌ಗಳು:

  1. ಅನಾಮಧೇಯಜೂನ್ 29, 2008 9:48 PM

    ನಿಮ್ಮ ಹಾಗೂ ರಾಕೇಶ್ ಮೇಲೆ ಮತ್ಸರ ಆಗುತಿದೆ.ಅಂಬಾರಗುಡ್ಡದ ಚಿತ್ರ ನೋಡಿದ ನಂತರವಂತೂ ಯಾವಾಗ ಅಂಬಾರಗುಡ್ಡಕ್ಕೆ ಹೋಗುತ್ತೆನೆ ಎಂದನಿಸುತ್ತಿದೆ.
    ಹೊಸ ಹೊಸ ಜಾಗ ಪರಿಚಯಿಸುತಿರುವ ನಿಮಗೆ ತುಂಬಾ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಚಿತ್ರಗಳು ಚೆನ್ನಗಿವೆ. ಗಣಿಗಾರಿಕೆ ನಿಂತಿರುವುದು ಸಂತಸದ ವಿಚಾರ.

    ಪ್ರತ್ಯುತ್ತರಅಳಿಸಿ
  3. ರಾಜೇಶ್,

    ಎಕ್ಸಲೆಂಟ್ ಬರಹ. ಮುಂಚೆ ಎಲ್ಲ ನಿಮ್ಮ ಲೇಖನ ಓದಿದ್ ಕೂಡಲೆ ಅಲ್ಲಿ ಹೋಗಬೇಕು, ನೀವು ಎಲ್ಲೆಲ್ಲೋ ಹೋಗ್ತೀರಲ್ಲ ಅಂತ ಹೊಟ್ಟೆ ಉರಿ ಆಗ್ತಿತ್ತು. ಈಗ ಅಸಿಡಿಟಿ ಹುಶಾರಾಗಿದೆ. :) ನಾನೇ ಅಲ್ಲಿಗೆ ಹೋದ ಅನುಭವ ಆಯಿತು. ಫೋಟೋಗಳೂ ತುಂಬ ಚೆನ್ನಾಗಿವೆ. ಇನ್ನೊಂದಿಷ್ಟು ದಿನ ನಿಮ್ಮ ಪ್ರವಾಸ/ಚಾರಣದ ಕತೆಗಳೇ ನನ್ನ ಆಧಾರ.

    ಪ್ರೀತಿಯಿಂದ
    ಸಿಂಧು

    ಪ್ರತ್ಯುತ್ತರಅಳಿಸಿ
  4. ಊರಲ್ಲಿ ಎಷ್ಟೆಲ್ಲ ನೋಡೋದಿತ್ತು.. ನೋಡ್ದೇನೇ ಹಾಗೇ ಬಂದ್ಬಿಟ್ಟೆ ಬೆಂಗಳೂರಿಗೆ.. ಇನ್ಯಾವಾಗ ಹೋಗ್ತೀನೋ ಇನ್ಯಾವಾಗ ನೋಡ್ತೀನೋ ಇವನ್ನೆಲ್ಲ.. :(

    ಪ್ರತ್ಯುತ್ತರಅಳಿಸಿ
  5. Its a great news that Manganeese oar is protected for future use, when emergency arises. Pictures are superb. Hospitable villagers of the western ghats....hats off to them :-)

    ಪ್ರತ್ಯುತ್ತರಅಳಿಸಿ
  6. ಅಂತೂ ನಮ್ಮ ಊರು ಹತ್ತಿರ ಹತ್ತಿರಕ್ಕೆ ಬಂದಿದ್ರಿ ಅಂತ ಆಯ್ತು. ನಿಮ್ಮನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುವವರದೇ ಒಂದು ಒಕ್ಕೂಟವನ್ನು ತೆರೆಯಬಹುದೇನೋ?? :) ಸುಮ್ನೆ ತಮಾಶೆಗೆ ಹೇಳ್ದೆ. ಊರಿಗೆ ಇಷ್ಟು ಹತ್ತಿರ ಇದ್ದರೂ ನಾನಿನ್ನು ಅಂಬಾರಗುಡ್ಡ ನೋಡಿಲ್ಲ ಅನ್ನಕ್ಕೆ ನಾಚಿಕೆ ಆಗ್ತ ಇದೆ. :)

    ಪ್ರತ್ಯುತ್ತರಅಳಿಸಿ
  7. ಸುಧೀರ್,
    ಅಂತೂ ಕೊನೆಗೆ ನಿಮ್ಮಿಂದ ಒಂದು ಟಿಪ್ಪಣಿ! ಅವರಿಗಾಗಿ ಇವರಿಗಾಗಿ ಕಾಯಬೇಡಿ. ಹೋಗಬೇಕೆನಿಸಿದಾಗ ಹೊರಟುಬಿಡಿ. ಇಲ್ಲವಾದಲ್ಲಿ ನೀವು ಅಂಬಾರಗುಡ್ಡವನ್ನು ನೋಡಿದಂತೇ ಇದೆ..

    ಅರವಿಂದ್ ಮತ್ತು ಶ್ರೀಕಾಂತ್,
    ಗಣಿಗಾರಿಕೆ ಸದ್ಯಕ್ಕೆ ನಿಂತಿದೆ. ಸ್ಥಳೀಯರ ಒಗ್ಗಟ್ಟು ಮತ್ತು ಹೋರಾಟಕ್ಕೆ ಸಮರ್ಪಕ ಮುಂದಾಳುತ್ವನ ಸಿಕ್ಕಲ್ಲಿ ಅಂಬಾರಗುಡ್ಡ ವಿಲ್ ಬಿ ಸೇಫ್.

    ಸಿಂಧು,
    ಮೊದಲಿನಿಂದಲೂ ಈ ಬ್ಲಾಗಿಗೆ ಪ್ರೋತ್ಸಾಹ ನೀಡುತ್ತಾ ಬಂದವರಲ್ಲಿ ತಾವೂ ಒಬ್ಬರು. ತುಂಬಾ ಥ್ಯಾಂಕ್ಸ್. ಅಂದ ಹಾಗೆ ಹೊಟ್ಟೆ ಉರಿತ ಹಿಡಿತದಲ್ಲಿರಲಿ.... (ತಮಾಷೆ)

    ಸುಶ್ರುತ,
    ನಿಮ್ಮ ವಯಸ್ಸಾದರೂ ಎನು? ಇನ್ನೂ ಯುವಕರಲ್ಲವೇ ನೀವು? ಬೇಕಾದಷ್ಟು ಸಮಯವಿದೆ ಬಿಡಿ ಅಂಬಾರಗುಡ್ಡ ಹತ್ತಲು. ಅಂಬಾರಗುಡ್ಡವೇನು....ಉಳಿದೆಲ್ಲಾ ಬೆಟ್ಟ ಗುಡ್ಡಗಳನ್ನು ಹತ್ತಿಳಿಯಬಹುದಾದಷ್ಟು ಸಮಯವಿದೆ ನಿಮ್ಮಲ್ಲಿ.

    ಶರಶ್ಚಂದ್ರ,
    ಗುಡ್ ಜೋಕ್. "ಊರಿಗೆ ಇಷ್ಟು ಹತ್ತಿರ ಇದ್ದರೂ ನಾನಿನ್ನು ಅಂಬಾರಗುಡ್ಡ ನೋಡಿಲ್ಲ ಅನ್ನಕ್ಕೆ ನಾಚಿಕೆ ಆಗ್ತ ಇದೆ" - ಇದರಲ್ಲಿ ನಾಚಿಕೆ ಏನು ಬಂತು? ನನ್ನೂರಿನ ಸಮೀಪದಲ್ಲಿರುವ ಎಷ್ಟೋ ಸುಂದರ ಸ್ಥಳಗಳನ್ನು ನಾನಿನ್ನೂ ನೋಡೇ ಇಲ್ಲ ಮತ್ತು ಕೆಲವೊಂದರ ಬಗ್ಗೆ ಮಾಹಿತಿಯೂ ನನ್ನಲ್ಲಿಲ್ಲ. ಸಮಯ ಸಿಕ್ಕಾಗ, ಮಾಹಿತಿ ದೊರಕಿದಾಗ ನಿಧಾನವಾಗಿ ನೋಡಿದರಾಯಿತು. ಸ್ಥಳಗಳನ್ನು ನೋಡುವುದು ಸ್ಪರ್ಧೆಯಲ್ಲವಲ್ಲ ....

    ಪ್ರತ್ಯುತ್ತರಅಳಿಸಿ
  8. ರಾಜೇಶ್ ಅವರೆ,

    ತುಂಬಾ ಸುಂದರ ಚಿತ್ರಗಳು! ಅಂಬಾರಗುಡ್ಡ-ಹೆಸರೇ ಆಕರ್ಷಣೀಯವಾಗಿದೆ...ಮಾನವನ ಅತೀ ದುರಾಸೆಗೆ ಅಂಬಾರಗುಡ್ಡದ ಚೆಲುವು ಬಲಿಯಾಗುತ್ತಿರುವುದು ತುಂಬಾ ಖೇದಕರ!

    ಪ್ರತ್ಯುತ್ತರಅಳಿಸಿ
  9. ತೇಜಸ್ವಿನಿ,
    ಈಗ ಸದ್ಯಕ್ಕೆ ಅಂಬಾರಗುಡ್ಡ ಸುರಕ್ಷಿತ. ಮುಂದೆಯೂ ಸುರಕ್ಷಿತವಾಗಿರುವ ಸಾಧ್ಯತೆಗಳೇ ಹೆಚ್ಚಿವೆ.

    ಪ್ರತ್ಯುತ್ತರಅಳಿಸಿ
  10. ನಾಯ್ಕ'ರೇ ನಿಮ್ಮೆಲ್ಲಾ ಲೇಖನಗಳ ಒಟ್ಟು ಗೂಡಿಸಿ ಪುಸ್ತಕವೊಂದನ್ನು ಹೊರ ತರುತ್ತೀರಿ ಎಂದಾದರೆ,
    ನಾನಂತೂ ಮೊದಲ ಪ್ರತಿ ಕೊಳ್ಳುವುದು ಖಂಡಿತ!

    ಅಧ್ಭುತ ಸಂಗ್ರಹ!!

    ಪ್ರತ್ಯುತ್ತರಅಳಿಸಿ
  11. ಬಸವರಾಜು,
    ತುಂಬಾ ಧನ್ಯವಾದ ಬಸವರಾಜು ಅವರೆ. ಪುಸ್ತಕದ ವಿಚಾರ ಸದ್ಯಕ್ಕಂತೂ ಇಲ್ಲ. ಪ್ರೋತ್ಸಾಹಕ್ಕೆ ಥ್ಯಾಂಕ್ಸ್.

    ಪ್ರತ್ಯುತ್ತರಅಳಿಸಿ