ಭಾನುವಾರ, ಜನವರಿ 06, 2008

ಗಂಗಡಿಕಲ್ಲು


ಡಿಸೆಂಬರ್ ೨೦೦೭ರ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಗಂಗಡಿಕಲ್ಲಿಗೆ. ಇಲ್ಲಿಗೆ ಹೋಗಬೇಕೆಂದು ನನ್ನ ಬಹುದಿನದ ಆಸೆಯಾಗಿತ್ತು. ಹಾಗೇನೇ ಈ ಚಾರಣ ಕಾರ್ಯಕ್ರಮಕ್ಕೆ 'ಗಂಗಡಿಕಲ್ಲು' ತಾಣ ಎಂದು ನಾನು ಸೂಚಿಸಿರುವ ಹಿಂದೆ ಇರುವ ಸ್ವಾರ್ಥವೂ ಅದೇ. ಡಿಸೆಂಬರ್ ೨೨ ಹಾಗೂ ೨೩ರಂದು ಹೋಗೋಣವೆಂದು ಮಂಗಳೂರು ಯೂತ್ ಹಾಸ್ಟೆಲಿನ 'ಆರ್ಗನೈಸಿಂಗ್ ಸೆಕ್ರೆಟರಿ' ದಿನೇಶ್ ಹೊಳ್ಳ ನಿರ್ಧರಿಸಿ ಎಲ್ಲರಿಗೂ 'ಎಸ್.ಎಮ್.ಎಸ್' ಮಾಡಿಬಿಡಿ ಎಂದು ನನಗೆ ಅಪ್ಪಣೆ ಹೊರಡಿಸಿದರು.

ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಸುಧೀರ್ ಕುಮಾರ್ ವಹಿಸಿಕೊಂಡಿದ್ದರು. ೩೩ ಚಾರಣಿಗರಿಗೆ ರಾಷ್ಟ್ರೀಯ ಉದ್ಯಾನ ಪ್ರವೇಶಿಸಲು ಅನುಮತಿ, ಚಾರಣದ ಅನುಮತಿ, ಗೈಡ್ ಒಬ್ಬನನ್ನು ಗೊತ್ತುಮಾಡುವುದು ಮತ್ತು ಶನಿವಾರ ರಾತ್ರಿ ತಂಗಲು ವ್ಯವಸ್ಥೆ ಇವೆಲ್ಲವನ್ನು ನಗುಮೊಗದ ದಂಪತಿ ಸುಧೀರ್ ಮತ್ತು ಆರತಿ ವಹಿಸಿಕೊಂಡರು. ಶನಿವಾರ ರಾತ್ರಿ ಊಟ ಮತ್ತು ತಂಗುವ ವ್ಯವಸ್ಥೆಯನ್ನು ಸುಧೀರ್ ಕುಮಾರ್ ಬಜಗೋಳಿಯಲ್ಲಿರುವ ತನ್ನ ಮನೆಯಲ್ಲಿ ಮಾಡಿದ್ದರು. ಮಂಗಳೂರಿನಿಂದ ಬರುವವರೆಲ್ಲಾ ಎಂದಿನಂತೆ ಮೋಹನನ 'ಶಕ್ತಿ'ಯಲ್ಲಿ ಬಜಗೋಳಿ ತಲುಪಿದರೆ, ಉಡುಪಿಯಿಂದ ಹೊರಟವರು ಬೈಕುಗಳಲ್ಲಿ ತಲುಪಿದರು. ಕೆಲಸವಿದ್ದುದರಿಂದ ನನಗೆ ಮತ್ತು ಪತ್ನಿ ಲೀನಾಳಿಗೆ ಆ ದಿನ ಹೊರಡಲಾಗಲಿಲ್ಲ. ರಾತ್ರಿ ಸುಧೀರ್ ಮನೆಯವರು ಭರ್ಜರಿ ಔತಣವನ್ನು ಎಲ್ಲರಿಗೂ ಉಣಬಡಿಸಿದರು. ವಿಶಾಲವಾದ ಅಂಗಣದಲ್ಲಿ ಕ್ಯಾಂಪ್ ಫಯರ್ ಕೂಡಾ ನಡೆಯಿತು. ಅಗೋಸ್ಟ್ ೨೦೦೭ರಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಬಳಿಕ ದಂಪತಿಗಳಾಗಿ ಪ್ರಥಮ ಬಾರಿ ಚಾರಣಕ್ಕೆ ಬಂದಿದ್ದ ವಿನಯ್ ಮತ್ತು ಕವಿತಾ ರಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನ ಮಾಡಲಾಯಿತು.

ಆದಿತ್ಯವಾರ ಮುಂಜಾನೆ ೪.೧೫ಕ್ಕೆ ನನ್ನ 'ಪ್ಯಾಶನ್' ಬೈಕಿನಲ್ಲಿ ಲೀನಾಳೊಂದಿಗೆ ಮನೆಯಿಂದ ಹೊರಬಿದ್ದೆ. ೫೦ ಕಿಮಿ ದೂರವಿರುವ ಬಜಗೋಳಿ ತಲುಪಿ, ಸುಧೀರ್ ಗೆ ಫೋನಾಯಿಸಿ ದಾರಿ ಕೇಳಿಕೊಂಡು ಅವರ ಮನೆ ತಲುಪಿದಾಗ ಸಮಯ ಮುಂಜಾನೆ ೫.೪೦. ಕೆಲವರು ಅದಾಗಲೇ ಎದ್ದು ಹರಟೆ ಹೊಡೆಯುತ್ತಿದ್ದರೆ, ಇನ್ನು ಕೆಲವರು ನಿಧಾನವಾಗಿ ಕಣ್ಣು ಬಿಡುತ್ತಿದ್ದರು. ಸುಧೀರ್ ಮನೆಯಲ್ಲೇ ಬೆಳಗ್ಗಿನ ಉಪಹಾರ ಮುಗಿಸಿ ಗಂಗಡಿಕಲ್ಲಿಗೆ ಚಾರಣ ಆರಂಭಿಸುವ ಸ್ಥಳ ತಲುಪಿ, ಗೈಡನ್ನು ಕರೆತರಲು ಅದಾಗಲೇ ಭಗವತಿಗೆ ಧಾವಿಸಿದ್ದ ಬೈಕೊಂದು ಆತನನ್ನು ಕರೆತಂದ ಬಳಿಕ ಚಾರಣ ಆರಂಭಿಸಿದಾಗ ಸಮಯ ೮.


ಮೊದಲಿಗೆ ಸಿಗುವ ಸಣ್ಣ ಮಳೆಕಾಡೊಂದನ್ನು ಬಿಟ್ಟರೆ ನಂತರ ಬೇರೆಲ್ಲೂ ಸೂರ್ಯನಿಂದ ರಕ್ಷಣೆ ಸಿಗದು. ಸುಮಾರು ಅರ್ಧ ಗಂಟೆ ಜೀಪ್ ದಾರಿಯಲ್ಲೇ ಚಾರಣ. ಮೊದಲಿಗೇ ಸಿಗುವ ಮಳೆಕಾಡಿನಿಂದ ಹೊರಬಂದರೆ ಗಂಗಡಿಕಲ್ಲಿನ ತುದಿ ಕಾಣಸಿಗುತ್ತದೆ ಮತ್ತು ನಂತರ ಕಾಣುತ್ತಲೇ ಇರುತ್ತದೆ. ಅದಾಗಲೇ ಬೆಟ್ಟಗಳನ್ನು ಹಾಸಿಕೊಂಡಿದ್ದ ಹಸಿರು, ತಿಳಿ ಹಸಿರು ಬಣ್ಣಕ್ಕೆ ತಿರುಗಿತ್ತು. ಸಂಪೂರ್ಣವಾಗೇನೂ ಒಣಗಿಲ್ಲವಲ್ಲ ಎಂಬ ಸಮಾಧಾನದೊಂದಿಗೆ ಮುಂದುವರಿದೆ. ಚಾರಣದ ಆರಂಭದಲ್ಲೇ ನಾನು ಹಿಂದೆ ಬಿದ್ದಾಗಿತ್ತು. ಲೀನಾಳನ್ನು ಹುಡುಕಿದರೆ ಮುಂದೆಲ್ಲೋ ದೂರದಲ್ಲಿ ಅನಾಯಾಸವಾಗಿ ಬೆಟ್ಟವೇರುತ್ತಿದ್ದಳು. ಮುಂದೆ ನೋಡಿದಷ್ಟು ಮೇಲಕ್ಕೆ ಏರುಹಾದಿ. ಎಂದಿನಂತೆ ಸಂದೀಪ ನನಗೆ ಜೊತೆಗಾರ. ಈ ಸಂದೀಪ ಅಜಾನುಬಾಹು. ತನ್ನದಲ್ಲದೇ ಇನ್ನಿಬ್ಬರ 'ಬ್ಯಾಕ್ ಪ್ಯಾಕ್' ಗಳನ್ನೂ ತನ್ನ ಬೆನ್ನಿಗೇರಿಸಿ ಬರುತ್ತಿದ್ದ.

ಕೆಲವರು 'ಶಾರ್ಟ್ ಕಟ್' ಎಂದು ನೇರವಾಗಿ ಬೆಟ್ಟವೇರಲಾರಂಭಿಸಿದರು. ನನಗಂತೂ ಇವೆಲ್ಲಾ ಸಾಧ್ಯವಿಲ್ಲದ ಮಾತು. ನನ್ನದೇ ವೇಗದಲ್ಲಿ ನಿಧಾನವಾಗಿ ಆಮೆ ಗತಿಯಲ್ಲಿ ಬೆಟ್ಟ ಗುಡ್ಡಗಳ ರಮಣೀಯ ದೃಶ್ಯವನ್ನು ಸಂಪೂರ್ಣವಾಗಿ ಆನಂದಿಸುತ್ತಾ ಮುನ್ನಡೆದೆ. ಗಂಗಡಿಕಲ್ಲಿನ ಎದುರುಗಡೆಗೆ ಕುರಿಂಗಲ್ಲು ಇದೆ. ಸರಳರೇಖೆಯಂತೆ ಇರುವ ಕಾಡಿನ ಪರಿಧಿಯನ್ನು ಭೇದಿಸಿ ಮೊನಚಾದ ಕಲ್ಲೊಂದು ಆಕಾಶದೆಡೆ ಮುಖ ಮಾಡಿ ನಿಂತಿರುವಂತೆ ಕುರಿಂಗಲ್ಲು ಕಾಣುವುದು. ಎಪ್ರಿಲ್ ೨೦೦೭ರಲ್ಲಿ ಕುರಿಂಗಲ್ಲಿಗೆ ಚಾರಣ ಮಾಡಿದ್ದೆವು.


ಜೀಪ್ ದಾರಿ ಮುಗಿದ ನಂತರ ಏರುಹಾದಿ ಶುರುವಾದಲ್ಲೇ ಕಾಲುದಾರಿ ಶುರು. ನಾನಿನ್ನೂ ಅರ್ಧ ದಾರಿ ಕ್ರಮಿಸಿರಲಿಲ್ಲ, ನಮ್ಮ ತಂಡದ ಯುವ ಕಾಲುಗಳು ಅದಾಗಲೇ ಗಂಗಡಿಕಲ್ಲಿನ ತುದಿ ತಲುಪಿ ಆಚೀಚೆ ಓಡಾಡುತ್ತಿದ್ದರು. ಕೊನೆಕೊನೆಗೆ ಏರುಹಾದಿ ಸ್ವಲ್ಪ ಕಡಿದಾಗಿದೆ ಎಂಬುದನ್ನು ಬಿಟ್ಟರೆ ದಾರಿಯೇನೂ ಕಷ್ಟವಿಲ್ಲ. ಸ್ವಸ್ಥ ಚಾರಣಿಗರಿಗೆ ಗಂಗಡಿಕಲ್ಲಿನ ತುದಿ ತಲುಪಲು ೯೦ ನಿಮಿಷ ಧಾರಾಳ.

ನಾನು ತುದಿ ತಲುಪಿದಾಗ ಸಮಯ ೧೦ ಆಗಿತ್ತು. ಅದಾಗಲೇ ಮೇಲೆ ತಲುಪಿ ಒಂದು ಸುತ್ತು ಪ್ರಕೃತಿಯನ್ನು ಆನಂದಿಸಿದ ಲೀನಾ, ಬಳಿಗೆ ಬಂದು,' ಎಷ್ಟು ಹೊತ್ತು ನಿಮ್ಗೆ...ಇಷ್ಟೆಲ್ಲಾ ಟ್ರೆಕ್ ಮಾಡ್ತೀರಾ .. ಬರುದಂತೂ ಯಾವಾಗಲೂ ಲಾಸ್ಟ್. ನಾನು ೯.೨೦ಕ್ಕೆ ಬಂದಿದ್ದೇನೆ. ನಿಮಗಿಂತ ೪೦ ನಿಮಿಷ ಮೊದಲು' ಎಂದು ಕೊಂಕು ಮಾತನಾಡಿದಳು. 'ಆಯ್ತು, ಮಾರಾಯ್ತಿ...೪೦ ನಿಮಿಷ ಬೇಗ ಬಂದಿದ್ದೀಯ ಎಂದು ನಿನಗೆ ಪ್ರಶಸ್ತಿ ನೀಡೋಣ' ಎಂದಾಗ ಮುಖ ಸೊಟ್ಟಗೆ ಮಾಡಿ ಆ ಕಡೆ ಹೋದಳು.


ಗಂಗಡಿಕಲ್ಲಿನ ಮತ್ತೊಂದು ಬದಿಯಲ್ಲಿನ ದೃಶ್ಯ ಅದ್ಭುತ. ಪ್ರಕೃತಿಯ ಮನಮೋಹಕ ರಚನೆಗೆ ಇದೊಂದು ಉನ್ನತ ಉದಾಹರಣೆ. ಇಲ್ಲಿ ಲಕ್ಯಾ ನದಿ ಬೆಟ್ಟ ಗುಡ್ಡಗಳ ನಡುವೆ ವಿಶಾಲ ಕೊಳಗಳನ್ನು ಸೃಷ್ಟಿಸಿದೆ. ಲಕ್ಯಾ ಅಣೆಕಟ್ಟಿನ ಮನ ಕೆಡಿಸುವ ನೋಟ ಬಿಟ್ಟರೆ, ಉಳಿದದ್ದೆಲ್ಲಾ ಸ್ವರ್ಗ ಸಮಾನ. ಫೋಟೋ ತೆಗೆದಷ್ಟು ಅಸಮಧಾನ ಎಲ್ಲಿ ಸರಿಯಾಗಿ ಬರುತ್ತೋ ಇಲ್ವೋ ಎಂದು. ಮತ್ತಷ್ಟು ಫೋಟೋಗಳನ್ನು ತೆಗೆದೆ. ಗಂಗಡಿಕಲ್ಲಿಗೆ ಚಾರಣಿಗರು ಬರುವುದೇ ಈ ದೃಶ್ಯವನ್ನು ವೀಕ್ಷಿಸಲು. ನಾವು ತೆರಳಿದಾಗ ಹಸಿರು ಸ್ವಲ್ಪ ಕಡಿಮೆಯಾಗಿತ್ತು. ಚಾರಣಿಗ ನಿರಂಜನ್ ಮಂಜುನಾಥ್ ಒಂದೆರಡು ತಿಂಗಳ ಮೊದಲು ಗಂಗಡಿಕಲ್ಲಿಗೆ ತೆರಳಿದಾಗ ತೆಗೆದ ಚಿತ್ರ ಇಲ್ಲಿದೆ.

ಲಕ್ಯಾ ಅಣೆಕಟ್ಟು ನಿರ್ಮಾಣಗೊಳ್ಳುವ ಮೊದಲು ಲಕ್ಯಾ ನದಿ ಇವೇ ಬೆಟ್ಟಗುಡ್ಡಗಳ ನಡುವೆ ದಾರಿ ಕಂಡುಕೊಂಡು ಮುಂದಕ್ಕೆ ಹರಿದು ಭದ್ರಾ ನದಿಯನ್ನು ಸೇರುತ್ತಿತ್ತು. ಈಗ ಅಣೆಕಟ್ಟು ನಿರ್ಮಿಸಿ ಅಲ್ಲಿಗೇ ಲಕ್ಯಾ ನದಿಯ ಹರಿವನ್ನು ಕೊನೆಗೊಳಿಸಲಾಗಿದೆ. ಗಂಗಡಿಕಲ್ಲಿನಿಂದ ದೂರದಲ್ಲಿ ಲಕ್ಯಾ ಅಣೆಕಟ್ಟಿನ ಮೊದಲು ಬೆಟ್ಟಗುಡ್ಡಗಳ ನಡುವೆ ವಿಶಾಲ ಕೊಳಗಳು ಕಾಣುವುದು ಇದೇ ಕಾರಣದಿಂದ. ಮುಂದೆ ಹರಿಯಲಾಗದ ಲಕ್ಯಾ ನದಿ ಅಲ್ಲಲ್ಲಿ ಈ ವಿಶಾಲವಾದ ಕೊಳಗಳನ್ನು ನಿರ್ಮಿಸಿದೆ. ಮಳೆಗಾಲದಲ್ಲಿ ಲಕ್ಯಾ ಅಣೆಕಟ್ಟಿನ ಮೇಲೆ ನಡೆದರೆ ದೂರದಲ್ಲಿ ಮಳೆಕಾಡಿನ ನಡುವೆ ಲಕ್ಯಾ ನದಿಯ ನೀರು ಸುಮಾರು ೫೦ ಅಡಿ ಎತ್ತರದ ಜಲಧಾರೆಯನ್ನು ನಿರ್ಮಿಸುವುದನ್ನು ಕಾಣಬಹುದು. ಈ ಜಲಧಾರೆ ನೇರವಾಗಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ಅದಿರಿನ ಮಣ್ಣಿಗೇ ಧುಮುಕುತ್ತದೆ.


ಗಂಗಡಿಕಲ್ಲಿನ ತುದಿಯಲ್ಲೊಂದು 'ವಾಚ್ ಟವರ್'. ಈಗ ತುಕ್ಕು ಹಿಡಿದು ಕಳಚಿ ಬೀಳುತ್ತಿದೆ. ತುದಿಯಲ್ಲಿ ಉದ್ದಕ್ಕೆ ಫುಟ್ಬಾಲ್ ಅಂಕಣವೊಂದರ ಎರಡರಷ್ಟು ಜಾಗ. ಅಗಲ ಹೆಚ್ಚೆಂದರೆ ೧೦-೪೦ ಅಡಿ ಇರಬಹುದು. ಬಿಸಿಲಲ್ಲೇ ಕುಳಿತಿರಬೇಕು. ಒಂದೆರಡು ಬಂಡೆಗಳು ಹೊರಚಾಚಿರುವುದರಿಂದ ಅವುಗಳ ಕೆಳಗೆ ನೆರಳಿನಲ್ಲಿ ಕುಳಿತುಕೊಂಡು ವಿಶ್ರಮಿಸಬಹುದು. ಅಲ್ಲಿ ಆನೆಯ ಲದ್ದಿಗಳಿದ್ದವು. ಇಲ್ಲೆಲ್ಲಿಯ ಆನೆ ಎಂದು ಗೈಡ್ ನ್ನು ಕೇಳಿದಾಗ, ಕುದುರೆಮುಖದ ಕಾಡುಗಳಲ್ಲಿ ೩ ಆನೆಗಳಿವೆ ಎಂಬ ಮಾಹಿತಿ ಸಿಕ್ಕಿತು. ಸುಮಾರು ೧೨.೩೦ಕ್ಕೆ ಕೆಳಗಿಳಿಯಲು ಆರಂಭಿಸಿ ೧.೩೦ಕ್ಕೆ ರಸ್ತೆ ಬಳಿ ಇದ್ದೆವು. ಮುಂಜಾನೆ ಭಗವತಿಗೆ ಗೈಡ್ ಕರಕೊಂಡು ಬರಲು ತೆರಳಿದಾಗ ಅಕ್ಕಿಯನ್ನು ಕೊಟ್ಟು ಮಧ್ಯಾಹ್ನ ಬರುತ್ತೇವೆ, ಗಂಜಿ ಮಾಡಿ ಇಡಿ ಎಂದು ವಿನಂತಿಸಿದ್ದರಿಂದ ಅಲ್ಲಿ ತೆರಳಿದಾಗ ಗಂಜಿ ರೆಡಿ ಇತ್ತು. ನಂತರ ಲಕ್ಯಾ ಅಣೆಕಟ್ಟಿಗೆ ಭೇಟಿ ನೀಡಿ ಮರಳಿದೆವು ಗೂಡಿಗೆ.

11 ಕಾಮೆಂಟ್‌ಗಳು:

  1. ವ್ಹಾವ್!! ಬಹಳ ದಿನಗಳಾದ ಮೇಲೆ ಬಂದ ನಿಮ್ಮ ಚಾರಣದ ಲೇಖನ ಖುಷಿ ಕೊಟ್ಟಿತು. ಚಿತ್ರಗಳು ಉತ್ತಮವಾಗಿ ಬಂದಿವೆ. ಕುದುರೆಮುಖದ ಕಾಡಿನಲ್ಲಿ ಚಾರಣ ಮಾಡಬೇಕೆಂದು ಬಹುದಿನದ ಆಸೆ. ಆದರೆ ಕುದುರೆಮುಖದಲ್ಲಿ ಚಾರಣ ಮಾಡುವುದಕ್ಕಿಂತ ಅದಕ್ಕೆ ಅನುಮತಿ ತೆಗೆದುಕೊಳ್ಳುವುದೇ ತ್ರಾಸು.

    ಪ್ರತ್ಯುತ್ತರಅಳಿಸಿ
  2. ರಾಜೇಶ್,

    ತುಂಬ ದಿನಗಳ ನಂತರ ಚಾರಣಬರಹ ಓದಿ ಗಂಗಡಿಕಲ್ಲಿಗೆ ಹೋಗಿಬಂದಷ್ಟೇ ಖುಷಿಯಾಯಿತು.ಇಷ್ಟು ದಿನ ರಾಜೇಶ್ ನ ನೋಡಲು ಮಾತ್ರ ಕುತೂಹಲ ಇತ್ತು. ಈಗ ಲೀನಾರನ್ನೂ ಮುಂಚೆ ನೋಡ್ಬೇಕು.. :)

    ಪ್ರೀತಿಯಿಂದ
    ಸಿಂಧು

    ಪ್ರತ್ಯುತ್ತರಅಳಿಸಿ
  3. ಅರವಿಂದ್,
    ಈಗ ಅನುಮತಿ ಸುಲಭದಲ್ಲೇ ಸಿಗುತ್ತದೆ. ಆದರೆ ಮಾರ್ಗದರ್ಶಿಯನ್ನು ಜೊತೆಗೆ ಕರೆದೊಯ್ಯಲೇಬೇಕು.

    ಸಿಂಧು,
    ಧನ್ಯವಾದಗಳು. ಭೇಟಿಯಾಗೋಣ.

    ಪ್ರತ್ಯುತ್ತರಅಳಿಸಿ
  4. ರಾಜೇಶ,
    ಚೆನ್ನಾದ ಚಾರಣಗಾಥೆ. ಚಿತ್ರಗಳಂತೂ ಬೆರಗು ಹುಟ್ಟಿಸುವ ಹಾಗಿವೆ. ಹೋಗಲೆಬೇಕು.
    -ಟೀನಾ

    ಪ್ರತ್ಯುತ್ತರಅಳಿಸಿ
  5. ರಾಜೇಶ್ ಸಾರ್ ,

    ಕಾಕತಾಳೀಯವೋ ಏನೋ, ೨೦೦೭ರ ಡಿಸೆಂಬರ್ ೨೨ ರಿಂದ ೨೫ ರವರೆಗೆ ನಾನು ಭಗವತಿಯಲ್ಲಿದ್ದು, ಕುರಿಂಜಲ್ ಮತ್ತು ಗಂಗಡಿಕಲ್ಲು ಬೆಟ್ಟಹತ್ತಿ ಬಂದೆ. ಅದರ ಚಿತ್ರಗಳು ಇಲ್ಲಿವೆ
    pics-by-prasanna.fotopic.net

    ಭಗವತಿಯಂತು ಅಧ್ಭುತವಾದ ಸ್ಠಳ. ಅನುಮತಿಯಂತು ತುಂಬ ಸುಲಭವಾಗಿ ಸಿಕ್ತು.

    ಕುದ್ರೆಮುಖ ಪೀಕ್ ಹತ್ತ ಬೇಕೆನ್ನುವ ನನ್ನ ಇಚ್ಛೆಗೆ ತಣ್ಣಿರೆರೆಚಿದವನು ಅಲ್ಲಿನ ಗೈಡ್ ಚಿನ್ನಯ್ಯ. ನನ್ನ ೭ ವರ್ಷದ ಮಗನಿಗೆ ಹತ್ತಲು ಆಗುವುದಿಲ್ಲ ಎಂದದ್ದರಿಂದ. ಆನೆಝರಿ ಮುಂದಿನ ಗುರಿ.

    ಪ್ರತ್ಯುತ್ತರಅಳಿಸಿ
  6. ಟೀನಾ,
    ಧನ್ಯವಾದಗಳು. ಬರ್ತಾ ಇರಿ ಇಲ್ಲಿಗೆ.

    ಪ್ರಸನ್ನ,
    ಅದೇ ಸಮಯದಲ್ಲಿ ನೀವೂ ಅಲ್ಲಿದ್ದದ್ದು ಕಾಕತಾಳೀಯವೇ ಎನ್ನಿ. ಆ ಚಿನ್ನಯ್ಯನ ಮಾತನ್ನು ನೀವು ಕೇಳಬಾರದಿತ್ತು. ಮಕ್ಕಳು ಸಲೀಸಾಗಿ ಬೆಟ್ಟವನ್ನೇರುತ್ತಾರೆ. ಕುದುರೆಮುಖ, ಒಂದೆರಡು ಕಡೆ ಬಿಟ್ಟರೆ ಸುಲಭದ ಚಾರಣ.

    ಪ್ರತ್ಯುತ್ತರಅಳಿಸಿ
  7. ರಾಜೇಶ್ ಸಾರ್,
    ಹೊರಡುವ ಮುನ್ನ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಆದರೆ ನಿಮ್ಮ ಸಂಪರ್ಕ ಸಿಗಲೇ ಇಲ್ಲ. ಬಹುಶಃ ನಿಮ್ಮನ್ನು ಭೇಟಿಯಾಗುವ ಅದೃಷ್ಟವಿಲ್ಲ. ಭಗವತಿಯಿಂದಲೂ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಉಹುಂ ನೀವು ಸಿಗಲೇ ಇಲ್ಲ. ಅಕ್ಟೋಬರ್ ನಲ್ಲಿ ಕುದುರೆಮುಖ ಪೀಕ್ ಗುರಿಯಿಟ್ಟಿದ್ದೇನೆ.

    ಪ್ರತ್ಯುತ್ತರಅಳಿಸಿ
  8. ರಾಜೇಶರೆ

    ಓದಲು ಖುಶಿಯಾಯಿತು. ಗಂಗಡಿಕಲ್ಲಿನಲ್ಲೇ ಅಲ್ಲವೆ ತುಂಗಾ/ಭದ್ರಾ/ನೇತ್ರಾವತಿಗಳ ಉಗಮವಾದ ಗಂಗಾಮೂಲ ಇರುವುದು?

    -ಹಂಸಾನಂದಿ

    ಪ್ರತ್ಯುತ್ತರಅಳಿಸಿ
  9. ಹಂಸಾನಂದಿ,
    ಗಂಗಾಮೂಲ, ಗಂಗಡಿಕಲ್ಲಿನಿಂದ ಸ್ವಲ್ಪ ದೂರದಲ್ಲಿರುವುದು. ಕುದುರೆಮುಖ ರಸ್ತೆಯ ಎಡ ಪಾರ್ಶ್ವದಲ್ಲಿ ೨ಕಿಮಿ ದೂರದಲ್ಲಿ ಗಂಗಡಿಕಲ್ಲು ಇದ್ದರೆ, ಬಲ ಪಾರ್ಶ್ವದಲ್ಲಿ ೧ ಕಿಮಿ ದೂರದಲ್ಲಿ ಗಂಗಾಮೂಲ.

    ಪ್ರತ್ಯುತ್ತರಅಳಿಸಿ
  10. Woww!! You have given us a delicious supper this time.

    I have a doubt...

    Can this be done in one day? We have a couple of days this time when we visit Mangalore. Can u please guide us thru to this place?

    Mathe innondu notice : From Yamaha to Passion? recently? Congrats.

    ಪ್ರತ್ಯುತ್ತರಅಳಿಸಿ
  11. ಶ್ರೀಕಾಂತ್,
    ಗಂಗಡಿಕಲ್ಲಿಗೆ ಒಂದು ದಿನ ಧಾರಾಳ. ಮಲ್ಲೇಶ್ವರದ ಅರಣ್ಯ ಇಲಾಖೆ ಕಚೇರಿಯಲ್ಲಿ ಸಂಬಂಧಿತ 'ಫೀಸ್' ಗಳನ್ನು ಪಾವತಿಸಿ, ಮಾರ್ಗದರ್ಶಿಯನ್ನು ಫಿಕ್ಸ್ ಮಾಡಿಕೊಂಡುಬಿಟ್ಟರೆ ನಂತರ ಎಲ್ಲಾ ಸಲೀಸು.
    ಪ್ಯಾಶನ್ ಬೈಕ್ ಮೊದಲಿನಿಂದಲೇ ಇತ್ತು. ಚಾರಣಕ್ಕೆ ಹೆಚ್ಚಾಗಿ ಯಮಾಹಾ ಬಳಸುತ್ತೇನೆ. ರಸ್ತೆ ಚೆನ್ನಾಗಿದ್ದರೆ ಮಾತ್ರ ಪ್ಯಾಶನ್.

    ಪ್ರತ್ಯುತ್ತರಅಳಿಸಿ