ಕರ್ನಾಟಕ ೨೦೦೭-೦೮ ಋತುವಿನ ರಣಜಿ ಋತುವನ್ನು ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಮುಗಿಸಿತು. ರತ್ನಗಿರಿಯಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರವನ್ನು ಇನ್ನಿಂಗ್ಸ್ ಮತ್ತು ೧೨೯ ರನ್ನುಗಳಿಂದ ಸೋಲಿಸಿ ೧೬ ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕರ್ನಾಟಕ ತೃಪ್ತಿಪಡಬೇಕಾಯಿತು. ಆಡಿದ ೭ ಪಂದ್ಯಗಳಲ್ಲಿ ೨ ವಿಜಯ, ೪ ಡ್ರಾ ಮತ್ತು ಒಂದು ಸೋಲು ಕರ್ನಾಟಕದ ಸಾಧನೆ.
ಮೈಸೂರಿನಲ್ಲಿ ನಡೆದ ಸೌರಾಷ್ಟ್ರದ ವಿರುದ್ಧದ ಪಂದ್ಯದಲ್ಲಿ ನಾಯಕ ಯೆರೆ ಗೌಡರ ಮೂರ್ಖತನದ ಆಟದಿಂದ ಗೆಲ್ಲಬಹುದಾದ ಪಂದ್ಯವನ್ನು ಸೋತ ಕರ್ನಾಟಕ ಸೆಮಿ ಫೈನಲ್ ಪ್ರವೇಶಿಸುವ ಸಾಧ್ಯತೆಯನ್ನು ಅಂದೇ ಕಳೆದುಕೊಂಡಿತ್ತು. ಗೆಲ್ಲಲು ೫ ಎಸೆತಗಳಲ್ಲಿ ೭ ಓಟಗಳ ಅವಶ್ಯಕತೆ ಇರುವಾಗ ಒಂಟಿ ಓಟ ತೆಗೆದು ಕೊನೆಯ ಆಟಗಾರ ಅಪ್ಪಣ್ಣ ಮುಂದಿನ ಎಸೆತ ಎದುರಿಸುವಂತೆ ಮಾಡಿದರಲ್ಲ ಯೆರೆ ಗೌಡ! ಅಪ್ಪಣ್ಣ ಆ ಎಸೆತದಲ್ಲೇ ನೆಗೆದುಬಿದ್ದರು. ಅವರೊಂದಿಗೆ ಕರ್ನಾಟಕವೂ ನೆಗೆದುಬಿತ್ತು. ಯೆರೆ ಗೌಡರಿಗೆ ಶಾಪ ಹಾಕಿದವರೆಷ್ಟೋ... ನನ್ನನ್ನೂ ಸೇರಿಸಿ! ಇಷ್ಟೊಂದು ಅನುಭವವಿರುವ ಯೆರೆ ಗೌಡ ಸ್ವಲ್ಪ ತಲೆ ಖರ್ಚು ಮಾಡಿ ಅಡಿದ್ದಿದ್ದರೆ ಕರ್ನಾಟಕ ಸೌರಾಷ್ಟ್ರ ವಿರುದ್ಧದ ಪಂದ್ಯವನ್ನು ಗೆದ್ದು ಈಗ ಅಂಕಪಟ್ಟಿಯಲ್ಲಿ ೨೧ ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿ ಉತ್ತರ ಪ್ರದೇಶದ ವಿರುದ್ಧ ಬೆಂಗಳೂರಿನಲ್ಲಿ ಸೆಮಿಫೈನಲ್ ಆಡುವ ಅವಕಾಶವಿತ್ತು.
ಈ ಋತುವಿನಲ್ಲಿ ಕರ್ನಾಟಕದ ವೈಫಲ್ಯಕ್ಕೆ ಪ್ರಮುಖ ಕಾರಣ, ಆರಂಭಿಕ ಜೊತೆಯಾಟದ ವೈಫಲ್ಯ ಮತ್ತು ಸ್ಪಿನ್ ವಿಭಾಗದಲ್ಲಿ ಅಪ್ಪಣ್ಣನ ವೈಫಲ್ಯ. ರಾಬಿನ್ ಉತ್ತಪ್ಪ ಕಳೆದ ಋತುವಿನ ಮ್ಯಾಜಿಕ್ ಮತ್ತೆ ತೋರಿಸಲು ವಿಫಲರಾದರು. ೫ ಪಂದ್ಯಗಳನ್ನಾಡಿದ ರಾಬಿನ್ ಗಳಿಸಿದ್ದು ೨೭ರ ಸರಾಸರಿಯಲ್ಲಿ ೧೮೮ ಓಟಗಳನ್ನು ಮಾತ್ರ.
ಕಳೆದ ಋತುವಿನ ಸೆಮಿಫೈನಲ್ ಪಂದ್ಯದಲ್ಲಿ ರಣಜಿಗೆ ಪಾದಾರ್ಪಣ ಮಾಡಿದ್ದ ಮೈಸೂರಿನ ಕೆ ಬಿ ಪವನ್ ಈ ಋತುವಿನಲ್ಲಿ ಭರ್ಜರಿ ಬ್ಯಾಟಿಂಗ್ ತೋರ್ಪಡಿಸಿದರು. ರಾಹುಲ್ ದ್ರಾವಿಡ್ ಜೊತೆ ಮೊದಲೆರಡು ಪಂದ್ಯಗಳಲ್ಲಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದ ಪವನ್, ಆ ಮಹಾನ್ ಆಟಗಾರನ ಜೊತೆ ಆಡಿ ಕಲಿತಿರುವುದನ್ನು ಮುಂದಿನ ಪಂದ್ಯಗಳಲ್ಲಿ ಬಳಸಿಕೊಂಡರು. ೨ ಶತಕ ಮತ್ತು ೨ ಶತಕಾರ್ಧಗಳನ್ನು ಒಳಗೊಂಡು ೪೨ರ ಸರಾಸರಿಯಲ್ಲಿ ೪೧೮ ಓಟಗಳನ್ನು ಪವನ್ ಗಳಿಸಿದರು. ಯಾವುದೇ ಸಂಶಯವಿಲ್ಲದೇ ಕೆ.ಬಿ.ಪವನ್ ೨೦೦೭-೦೮ ಋತುವಿನ 'ಶೋಧ' ಎನ್ನಬಹುದು.
ಯೆರೆ ಗೌಡ ಮತ್ತೊಮ್ಮೆ ಬಾಲಂಗೋಚಿಗಳನ್ನು ಒಂದೆಡೆ ಇರಿಸಿ ಇನ್ನಿಂಗ್ಸ್ ಆಡುವ ತನ್ನ ಅಪೂರ್ವ ಕಲೆಯನ್ನು ತೋರ್ಪಡಿಸಿದರು. ರಾಜಸ್ಥಾನದ ವಿರುದ್ಧ ಕೊನೆಯ ಹುದ್ದರಿಗೆ ಅಯ್ಯಪ್ಪನೊಂದಿಗೆ ಶತಕದ ಜೊತೆಯಾಟ ಮಾಡಿದ್ದು ಯೆರೆ ಗೌಡರ ಜಿಗುಟುತನಕ್ಕೆ ಸಾಕ್ಷಿ. ಮಹಾರಾಷ್ಟ್ರದ ವಿರುದ್ಧವೂ ಸಮಯೋಚಿತ ಶತಕ ಬಾರಿಸಿ ತಂಡವನ್ನು ಬೃಹತ್ ಮೊತ್ತದೆಡೆ ಕೊಂಡೊಯ್ಯುವಲ್ಲಿ ಯೆರೆ ಪ್ರಮುಖ ಪಾತ್ರ ವಹಿಸಿದರು. ಆದರೆ ಪ್ರಮುಖ ಪಂದ್ಯವೊಂದರಲ್ಲಿ ಯೆರೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದಿದ್ದರೆ ಕರ್ನಾಟಕಕ್ಕೆ ಬಹಳ ಪ್ರಯೋಜನವಾಗುತ್ತಿತ್ತು. ಏನೇ ಆದರೂ ಸೌರಾಷ್ಟ್ರದ ವಿರುದ್ಧದ ಪಂದ್ಯವನ್ನು ನನಗಂತೂ ಮರೆಯಲಾಗದು. ಯೆರೆಯ ಮೂರ್ಖತನ ಕರ್ನಾಟಕಕ್ಕೆ ಬಲು ದುಬಾರಿಯಾಯಿತು. ೬೨ರ ಸರಾಸರಿಯಲ್ಲಿ ೨ ಶತಕಗಳೊಂದಿಗೆ ೩೭೧ ಓಟಗಳು ಗೌಡರ ಸಾಧನೆ.
ಮಹಾರಾಷ್ಟ್ರದ ವಿರುದ್ಧ ಒಂದು ಪಂದ್ಯದಲ್ಲಿ ಆಡಿದ ದೇವರಾಜ್ ಪಾಟೀಲ್ ವಿಫಲರಾದ ಕಾರಣ, ತಿಲಕ್ ನಾಯ್ಡು ಮತ್ತೆ ಮುಂದಿನ ಋತುವಿಗೆ ತನ್ನ ಸ್ಥಾನವನ್ನು ಭದ್ರಗೊಳಿಸಿರಬಹುದು. ತಿಲಕ್ ಸಾಧಾರಣ ಪ್ರದರ್ಶನ ನೀಡಿದರು. ಒಂದು ಶತಕ ಮತ್ತು ಒಂದು ಶತಕಾರ್ಧದೊಂದಿಗೆ ೪೭ರ ಸರಾಸರಿಯಲ್ಲಿ ೩೨೬ ತಿಲಕ್ ಸಾಧನೆ. ಕಳೆದ ೧೦ ವರ್ಷಗಳಿಂದ ಆಡುತ್ತಿರುವ ತಿಲಕ್ ಕರ್ನಾಟಕಕ್ಕೆ ಬಲೂ ಅವಶ್ಯವಿರುವಾಗ ಕೆಲವು ಸಮಯೋಚಿತ ಆಟ ಆಡುವುದರಲ್ಲಿ ಈಗಲೂ ವಿಫಲರಾಗುತ್ತಿದ್ದಾರೆ. ಋತುವಿನ ಆರಂಭದಲ್ಲೇ ಒಂದು ಶತಕ ಬಾರಿಸಿದರೆ ತನ್ನ ಜವಾಬ್ದಾರಿ ಮುಗಿಯಿತು ಎಂಬ ಧೋರಣೆಯಿದ್ದರೆ ತಿಲಕ್ ತಂಡದಲ್ಲಿದ್ದು ಪ್ರಯೋಜನವಿಲ್ಲ. ಆದರೆ ತಿಲಕ್ ನಾಯ್ಡುಗೆ ಗಾಡ್ ಫಾದರ್ ಸಪೋರ್ಟ್ ಇದೆ. ಮತ್ತೆ ಮುಂದಿನ ಋತುವಿನಲ್ಲಿ ತಿಲಕ್ ವಿಕೆಟ್ ಕೀಪರ್ ಆಗಿ ಬರಲಿದ್ದಾರೆ.
ಕಳೆದ ಋತುವಿನ 'ಶೋಧ' ಆಗಿದ್ದ ಚಂದ್ರಶೇಖರ್ ರಘು ಈ ಬಾರಿ ನಿರಾಸೆಗೊಳಿಸಿದರು. ಒಂದೆರಡು ಉತ್ತಮ ಇನ್ನಿಂಗ್ಸ್-ಗಳನ್ನು ಬಿಟ್ಟರೆ ಇವರಿಂದ ನಿರೀಕ್ಷಿತ ಮಟ್ಟದಲ್ಲಿ ರನ್ನುಗಳು ಹರಿದುಬರಲಿಲ್ಲ. ೪ ಶತಕಾರ್ಧಗಳೊಂದಿಗೆ ೪೫ರ ಸರಾಸರಿಯಲ್ಲಿ ೩೫೯ ಓಟಗಳು ರಘು ಸಾಧನೆ. ಉಳಿದಂತೆ ಎರಡೇ ಪಂದ್ಯಗಳನ್ನಾಡಿದ ಭರತ್ ಚಿಪ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರಿಗೆ ತನ್ನನ್ನು ಕಡೆಗಣಿಸಿದ್ದಕ್ಕಾಗಿ ಸರಿಯಾದ ಉತ್ತರ ನೀಡಿದ್ದಾರೆ. ಮಹಾರಾಷ್ಟ್ರದ ವಿರುದ್ಧ ಬಿರುಸಿನ ಆಟ ಪ್ರದರ್ಶಿಸಿ ಶತಕದ ಬಾರಿ ಆಡಿದ ಭರತ್, ತಂಡದಲ್ಲಿ ಸ್ಥಿರವಾದ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಮುಂದಿನ ಋತುವಿನಲ್ಲಾದರೂ ಅಯ್ಕೆಗಾರರು ಭರತ್ ಚಿಪ್ಲಿಯನ್ನು ಎಲ್ಲಾ ಪಂದ್ಯಗಳಲ್ಲಿ ಆಡಿಸಲಿ. ಸುಧೀಂದ್ರ ಶಿಂದೆ ಆಡಿದ ಒಂದೆರಡು ಪಂದ್ಯಗಳಲ್ಲಿ ನಿರಾಸೆ ಮಾಡಲಿಲ್ಲ. ಅಮಿತ್ ವರ್ಮಾ ಮತ್ತು ದೇವರಾಜ್ ಪಾಟೀಲ್ ಸಿಕ್ಕಿದ ಒಂದೇ ಅವಕಾಶದ ಸದುಪಯೋಗ ಮಾಡಿಕೊಳ್ಳಲು ವಿಫಲರಾದರು.
ಬೌಲಿಂಗ್ ವಿಭಾಗದಲ್ಲಿ ದಾವಣಗೆರೆಯ ವಿನಯ್ ಕುಮಾರ್ ಮಹಾರಾಷ್ಟ್ರದ ವಿರುದ್ಧ ಹ್ಯಾಟ್ರಿಕ್ ಸಾಧನೆಯೊಂದಿಗೆ ೪೦ ಹುದ್ದರಿಗಳನ್ನು ಕೇವಲ ೧೮.೫೨ ಸರಾಸರಿಯಲ್ಲಿ ಕಿತ್ತು ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಳೆದ ಋತುವಿನಲ್ಲಿ ಗಾಯಾಳಾಗಿ ತಂಡದಿಂದ ಹೊರಗಿದ್ದ ಎನ್.ಎಸ್.ಸಿ.ಅಯ್ಯಪ್ಪ ಈ ಬಾರಿ ಉತ್ತಮ ಪ್ರದರ್ಶನ ನೀಡಿದರು. ೨೪ ರ ಸರಾಸರಿಯಲ್ಲಿ ೨೫ ಹುದ್ದರಿಗಳನ್ನು ಗಳಿಸಿದ್ದು ಇವರ ಸಾಧನೆ. ವಯಸ್ಸಾದಂತೆ ಸುನಿಲ್ ಜೋಶಿ ಇನ್ನಷ್ಟು ಉತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ೧೯.೮೮ ಸರಾಸರಿಯಲ್ಲಿ ೩೪ ಹುದ್ದರಿಗಳು ಜೋಶಿ ಸಾಧನೆ.
ಕಳೆದ ಋತುವಿನಲ್ಲಿ ಬಹಳ ಉತ್ತಮ ಬೌಲಿಂಗ್ ಮಾಡಿದ್ದ ಅಪ್ಪಣ್ಣ ಈ ಬಾರಿ ನಿರಾಸೆಗೊಳಿಸಿದರು. ೪ ಪಂದ್ಯಗಳಲ್ಲಿ ೫ ಹುದ್ದರಿ ಇವರ ಸಾಧನೆ. ಹಾಗೇನೆ ಬಾಲಚಂದ್ರ ಅಖಿಲ್ ಕೂಡಾ ಈ ಬಾರಿ ನಿರಾಸೆಗೊಳಿಸಿದರು. ೪ ಪಂದ್ಯಗಳಲ್ಲಿ ಅಖಿಲ್ ಗಳಿಸಿದ್ದು ಒಂದೇ ಹುದ್ದರಿ ಮತ್ತು ಗಳಿಸಿದ್ದು ೧೫೭ ಓಟಗಳನ್ನು. ಕೊನೆಯ ಎರಡು ಪಂದ್ಯಗಳಿಗೆ ಇವರನ್ನು ಕೈ ಬಿಟ್ಟದ್ದು ಮುಂದಿನ ಋತುವಿನ ತಂಡದ ಆಯ್ಕೆಯ ಬಗ್ಗೆ ಮುನ್ಸೂಚನೆ ಎನ್ನಬಹುದು.
ಕೊನೆಯದಾಗಿ 'ತಗಡು'ಗಳ ಬಗ್ಗೆ ಒಂದಷ್ಟು. ಧರ್ಮಪೂಜೆಯನ್ನು ಅತಿಯಾಗಿ ಮಾಡುತ್ತಾ, ಧರ್ಮಪ್ರಚಾರಕನಂತೆ ವರ್ತಿಸುತ್ತಾ ತನ್ನ ಆಟದ ಮೇಲೆ ಗಮನ ಕಳಕೊಂಡು ಸತತ ವೈಫಲ್ಯ ಕಾಣುತ್ತಿದ್ದರೂ, ಸತತವಾಗಿ ನೀಡಿದ ಅವಕಾಶಗಳನ್ನು ಬಳಸಿಕೊಳ್ಳದೆ ಕಡೆಗೆ ನಿರ್ದಯವಾಗಿ ತಂಡದಿಂದ ಕಿತ್ತೊಗೆಯಲ್ಪಟ್ಟದ್ದು ಬ್ಯಾರಿಂಗ್ಟನ್ ರೋಲಂಡ್ ಅವರ ದುರಾದೃಷ್ಟ. ದೆಹಲಿ ವಿರುದ್ಧದ ಪಂದ್ಯಕ್ಕೆ ಅರ್ಹತೆಯುಳ್ಳ ರಿಯಾನ್ ನಿನಾನ್ ಬದಲು ತಂಡಕ್ಕೆ ಉದಿತ್ ಪಟೇಲನನ್ನು ಆಯ್ಕೆ ಮಾಡಿದ್ದು ಕೆ.ಎಸ್.ಸಿ.ಎ ಯಲ್ಲಿ ಪ್ರಕ್ಷ್ಯುಬ್ಧ ವಾತಾವರಣವನ್ನು ಏರ್ಪಡಿಸಿತ್ತು. ಬೃಜೇಶ್ ಪಟೇಲ್ ತನ್ನ ಮಗನನ್ನು ಆಯ್ಕೆ ಮಾಡಿಸಲು ಸಫಲರಾದರೆ, ನರಸಿಂಹರಾಜ ಒಡೆಯರ್ 'ಅನ್ಯಾಯ' ಎಂದು ಚೀರಾಡುತ್ತಿದ್ದರು. ಕಡೆಗೂ ಉದಿತ್ ಅವರನ್ನು ಅಂತಿಮ ಹನ್ನೊಂದರಲ್ಲಿ ಆಡಿಸಲಿಲ್ಲ. ಅತ್ತ ಸ್ಟುವರ್ಟ್ ಬಿನ್ನಿಗೆ ತನ್ನ ನಿಜವಾದ ಅರ್ಹತೆ ಏನೆಂಬುದು ಕೊನೆಗೂ ಅರಿವಾಗಿರಬಹುದು. ಇಂಡಿಯನ್ ಕ್ರಿಕೆಟ್ ಲೀಗ್ ಸೇರಿ ಕರ್ನಾಟಕ ತಂಡಕ್ಕೆ ಪುಣ್ಯ ಮಾಡಿದ ಈ ಅಸಾಮಿಯನ್ನು, ಇಂಡಿಯನ್ ಕ್ರಿಕೆಟ್ ಲೀಗ್ ನಲ್ಲಿ ಒಂದು ಪಂದ್ಯದಲ್ಲೂ ಆಡಿಸಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಕಸ ಗುಡಿಸುವ ಅರ್ಹತೆ ಇಲ್ಲದಿದ್ದರೂ ಬರೀ 'ರೋಜರ್ ಬಿನ್ನಿ ಮಗ' ಎಂಬ ಆಧಾರದಲ್ಲೇ ಕರ್ನಾಟಕ ತಂಡದ ಅಂತಿಮ ಹನ್ನೊಂದರಲ್ಲಿ ಆಡಿಬಿಡುತ್ತಿದ್ದ. ಈ ಅನಿಷ್ಟ ಅತ್ತ ತೊಲಗಿದ್ದು ಕನ್ನಡಿಗರ ಪುಣ್ಯ. ಒಬ್ಬ ಉದಿತ್ ಕೂಡಾ ಆ ಕಡೆ ಹೋಗಿಬಿಡುತ್ತಿದ್ದರೆ ಉಳಿದ ಪ್ರತಿಭಾವಂತ ಯುವ ಕ್ರಿಕೆಟಿಗರು ನಿಟ್ಟುಸಿರು ಬಿಡುತ್ತಿದ್ದರು. ರಿಯಾನ್ ನಿನಾನ್ ಅಂತೂ 'ಎವ್ರಿಡೇ ಈಸ್ ಕ್ರಿಸ್ಮಸ್' ಎಂದು ಹಬ್ಬ ಆಚರಿಸುತ್ತಿದ್ದರೇನೊ!
ರಾಜೇಶ ನಾಯ್ಕರೇ ಈ ಋತುವಿನ ಕರ್ನಾಟಕದ ರಣಜಿ ಯಾತ್ರೆಯನ್ನು ಪೂರ್ಣವಾಗಿ ವಿಶ್ಲೇಷಿಸಿದ್ದಕ್ಕೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿನನಗೆ ಕರ್ನಾಟಕ ರಣಜಿ ತಂಡದ ಈ ವರ್ಷದ ಸಾಧನೆಯ ನಂತರ ನನ್ನ ಮನದಲ್ಲಿ ಕೆಲವು ಪ್ರಶ್ನೆಗಳೆದ್ದಿವೆ. ತುಂಬಾ ನಿಧಾನವಾಗಿ ಆಡುವ ಯೆರೇಗೌಡರನ್ನು ಬಿಟ್ಟು ಯಾರಾದರನ್ನು ಹೊಸಬರನ್ನು ಯಾಕೇ ನಾಯಕರನ್ನಾಗಿ ಮಾಡಬಾರದು? ಇತ್ತೀಚೆಗಷ್ಟೆ ಕ್ರಿಕೆಟನಿಂದ ನಿವೃತ್ತರಾದ ವಿಜಯ ಭಾರದ್ವಾಜರನ್ನು ಬಿಟ್ಟು ಬೇರೆ ತರಬೇತುದಾರರು ಕರ್ನಾಟಕಕ್ಕೆ ಸಿಗಲಿಲ್ಲವೇ? ಅನೇಕ ತಂಡಗಳಲ್ಲಿ ೨೦ ವರ್ಷಕ್ಕಿಂತ ಕಡಿಮೆಯಿರುವ ಅನೇಕರು ಕಾಣಿಸಿಕೊಳ್ಳುತ್ತಿದ್ದಾರೆ, ನಮ್ಮಲ್ಲಿ ಏಕೆ ಇನ್ನು ಸುನೀಲ್ ಜೋಶಿ ಮತ್ತು ಯೆರೆಗೌಡರನ್ನೇ ಅವಲಂಬಿಸಿದ್ದಾರೆ. ಭಾಗವತ ಚಂದ್ರಶೇಖರರ ನಂತರ ಅನಿಲ್ ಕುಂಬ್ಳೆ ರೂಪದಲ್ಲಿ ಒಳ್ಳೆಯ ಲೆಗ್ ಸ್ಪಿನ್ನೆರರನ್ನು ಕರ್ನಾಟಕ ಸುಮಾರು ೧೦ ವರ್ಷಗಳ ನಂತರ ಕಂಡಿತು, ಮುಂದಿನ ಕುಂಬ್ಳೆ, ಚಂದ್ರಶೇಖರರನ್ನು ಕಾಣಲು ಇನ್ನು ೧೦ ವರ್ಷ ಕಾಯಬೇಕೋ? ಹೊಸ ಪ್ರತಿಭೆಗಳನ್ನು ಕಂಡುಹಿಡಿಯಲು, ಇರುವ ಪ್ರತಿಭೆಗಳಿಗೆ ಹೊಸ ರೀತಿಯ ತರಬೇತಿಯನ್ನು ಕೊಡಿಸಲು ಕರ್ನಾಟಕ ಕ್ರಿಕೆಟ್ ಸಂಸ್ಥೆ ಏನಾದರೂ ಯೋಜನೆಗಳನ್ನು ಹಾಕಿಕೊಂಡಿದೆಯಾ? ಗೊತ್ತಿದ್ದವರು ತಿಳಿಸಬೇಕು.