ಆಗೋಸ್ಟ್ ೧೩, ೨೦೦೬ ಆದಿತ್ಯವಾರ. ಯಾವುದೇ ಪೂರ್ವನಿಯೋಜಿತ ಪ್ರಯಾಣ/ಚಾರಣ ಇದ್ದಿರಲಿಲ್ಲ. ಅಲ್ಲದೇ ಮುನ್ನಾ ದಿನ ವಿಪರೀತ ಕೆಲಸವಿದ್ದುದರಿಂದ ಮನೆಗೆ ಬರುವಾಗ ಮಧ್ಯರಾತ್ರಿ ದಾಟಿತ್ತು. ಬೆಳಗ್ಗೆ ತಡವಾಗಿ ಎದ್ದು ಸುಮಾರು ೯.೩೦ಕ್ಕೆ ಉದಯವಾಣಿ ಓದಲು ಕುಳಿತರೆ, ಮೊದಲ ಪುಟದಲ್ಲೇ ಜೋಗ ಜಲಪಾತದ ರಮಣೀಯವಾಗಿ ಮೈತುಂಬಿಕೊಂಡು ಧುಮುಕುತ್ತಿರುವ ಅದ್ಭುತ ಚಿತ್ರ. ಆರು ಸಲ ಜೋಗಕ್ಕೆ ಹೋದರೂ, ಸಿಕ್ಕಿದ ನೋಟದಿಂದ ಸಮಾಧಾನವಿರಲಿಲ್ಲ. ಚಿತ್ರ ನೋಡಿದ ಕೂಡಲೇ, ಉದಯವಾಣಿಯನ್ನು ಅಲ್ಲೇ ಬಿಟ್ಟು, ಗಡಿಬಿಡಿಯಲ್ಲಿ ಸ್ನಾನ, ಉಪಹಾರ ಮುಗಿಸಿ ಸರಿಯಾಗಿ ೧೦ಕ್ಕೆ ನನ್ನ ಹೀರೋ ಹೊಂಡ ಪ್ಯಾಶನ್ ಏರಿ ಜೋಗಕ್ಕೆ ಹೊರಟೇಬಿಟ್ಟೆ. ದಾರಿಯುದ್ದಕ್ಕೂ ಮಳೆ ಮಳೆ ಮಳೆ. ಕೊಲ್ಲೂರು ತನಕ ಅಗಾಗ ಮಳೆ ಸುರಿಯುತ್ತಾ ಇತ್ತು. ಕೊಲ್ಲೂರು ದಾಟಿ ಕಾರ್ಗಲ್ ಮುಟ್ಟುವ ತನಕ ಎಡೆಬಿಡದೆ ಸುರಿದ ಮಳೆ, ನಾನು ಜೋಗ ಸಮೀಪಿಸಿದಂತೆ ನಿಂತಿತು. ಸಮಯ ಮಧ್ಯಾಹ್ನ ೨.೩೦ ಹಾಗೂ ಕ್ರಮಿಸಿದ ದೂರ ೧೬೩ ಕಿಮಿ.
೫೦೦೦೦ಕ್ಕೂ ಅಧಿಕ ಕ್ಯುಸೆಕ್ಸ್ ನೀರನ್ನು ಲಿಂಗನಮಕ್ಕಿ ಜಲಾಶಯದಿಂದ ಹೊರಬಿಟ್ಟಿದ್ದರಿಂದ ಜೋಗ ಜಲಪಾತ ೧೦ ಮಳೆಗಾಲಗಳ ಬಳಿಕ ಮತ್ತೊಮ್ಮೆ ರಮಣೀಯವಾಗಿ ಧುಮುಕುವ ದೃಶ್ಯ ನೋಡಲು ಜನಜಾತ್ರೆಯೇ ಅಲ್ಲಿ ಸೇರಿತ್ತು. ಕರ್ನಾಟಕ - ಗೋವಾ ಗಡಿಯಲ್ಲಿರುವ ದೂದಸಾಗರ್ ಜಲಪಾತವನ್ನು ಯಾಕೆ ಆ ಹೆಸರಿನಿಂದ ಕರೆಯುತ್ತಾರೆ ಎಂಬುದು, ಜಲಪಾತ ನೋಡಿದ ಬಳಿಕ ನನಗೆ ತಿಳಿದಿತ್ತು. ಆಕಾಶದಿಂದ ಹಾಲಿನ ರಾಶಿಯೇ ಧರೆಗೆ ಬೀಳುತ್ತಿರುವಂತೆ ಕಾಣುವ ದೂದಸಾಗರ್ ಜಲಪಾತದ ದೃಶ್ಯ ಅದ್ಭುತ. ಇದರ ಮುಂದೆ ನನಗೆ ಇದುವರೆಗೆ ನಮ್ಮ ಜೋಗ ನೀರಸ ಎಂದೆನಿಸುತ್ತಿತ್ತು. ಆದರೆ ದೂದಸಾಗರ್ ಮೇಲ್ಭಾಗದಲ್ಲಿ, ಜೋಗ ಜಲಪಾತಕ್ಕಿರುವಂತೆ ಯಾವುದೇ ಆಣೆಕಟ್ಟು ಇಲ್ಲ. ಲಿಂಗನಮಕ್ಕಿ ಆಣೆಕಟ್ಟು ಇರದಿದ್ದರೆ ಜೋಗ ಜಲಪಾತ ಹೇಗಿರಬಹುದು ಎಂಬುದು ಊಹಿಸುವುದು ಕಷ್ಟ. ಆದರೆ ಆ ದಿನ ಜೋಗ 'ಎಟ್ ಇಟ್ಸ್ ಬೆಸ್ಟ್' ನೋಡಿದ ಬಳಿಕ, ಜೋಗವನ್ನು 'ನೀರಸ' ಎಂದು ಕಲ್ಪನೆ ಮಾಡಿಕೊಳ್ಳುವ ಅಪರಾಧ ಮಾಡಲಾರೆ.
೫೦೦೦೦ಕ್ಕೂ ಅಧಿಕ ಕ್ಯುಸೆಕ್ಸ್-ನಷ್ಟು ಹಾಲಿನಂತೆ ಕಾಣುವ ಜಲರಾಶಿ ಒಂದೇ ನೆಗೆತಕ್ಕೆ ೯೩೦ ಅಡಿ ಆಳಕ್ಕೆ ಧುಮುಕುವ ದೃಶ್ಯ ನೋಡಿ ಬೆರಗಾದೆ. ಅಲ್ಲೇ ನಿಂತಿದ್ದು 'ಪೈನಾಪಲ್' ಮಾರುತ್ತಿದ್ದ ಸ್ಥಳೀಯ ಯುವಕನೊಬ್ಬ 'ಅಪರೂಪ ಸಾರ್, ಹೀಗೆ ನೀರು ಬೀಳೋದು ಅಪರೂಪ. ನಾನಂತೂ ನೋಡೇ ಇಲ್ಲ. ಇದು ಹಾಲಲ್ಲದೇ ಮತ್ತೇನು'? ಆಗಾಗ ಮಳೆ ಬೀಳುತ್ತಾ ಇತ್ತು. 'ಹಾಲು' ಧುಮುಕುತ್ತಾ ಇತ್ತು. ನೋಡುವವರು ನೋಡುತ್ತಲೇ ಇದ್ದರು. ಮತ್ತಷ್ಟು ಜನರು ಬರುತ್ತಾ ಇದ್ದರು. ಆದರೆ ಯಾರೂ ಕದಲುತ್ತಿರಲಿಲ್ಲ. ಜಲಪಾತದ ಮುಂದಿರುವ ಶರಾವತಿಯ ಕಣಿವೆಯಲ್ಲಿ ಮಂಜು ತುಂಬಿ ಏನೇನೂ ಕಾಣದಿದ್ದರೂ, ಜಲಪಾತದ ಸುತ್ತ ಮಂಜು ಇರದೇ 'ಕ್ಲಿಯರ್ ವ್ಯೂ' ಲಭ್ಯವಿತ್ತು.
ಅದಾಗಲೇ ಸಂಜೆ ೪ ಗಂಟೆ ಆಗಿತ್ತು. ಜಲಪಾತದ ಮೇಲ್ಭಾಗದಲ್ಲಿರುವ ಸೇತುವೆ ದಾಟಿ ವಿಶ್ವೇಶ್ವರಯ್ಯ ಪಾಯಿಂಟ್ ಕಡೆಗೆ ಹೋಗಬೇಕೆಂಬ ಇರಾದೆ ಇದ್ದರೂ ಸಮಯದ ಅಭಾವದಿಂದ ಆ ನಿರ್ಧಾರವನ್ನು ಕೈಬಿಟ್ಟೆ. ಮರುದಿನ ಮತ್ತೆ ಉದಯವಾಣಿಯಲ್ಲಿ ಜೋಗದ ಚಿತ್ರ. ಈ ಬಾರಿ ವಿಶ್ವೇಶ್ವರಯ್ಯ ಪಾಯಿಂಟ್ ನಿಂದ ತೆಗೆದ ಚಿತ್ರ. ನಂಬಲಾಗದಷ್ಟು ಅದ್ಭುತವಾಗಿತ್ತು. ಜೋಗ ಜಲಪಾತವೆಂದು ಹೇಳಲು ಅಸಾಧ್ಯವಾದಷ್ಟು ಜಲರಾಶಿ! ಆ ಕಡೆ ಹೋಗದೆ ಹಿಂತಿರುಗಿದಕ್ಕಾಗಿ ಪರಿತಪಿಸತೊಡಗಿದೆ. ನಂತರ ಮತ್ತೆ ೬ ದಿನಗಳ ಕಾಲ ಲಿಂಗನಮಕ್ಕಿಯ ಎಲ್ಲಾ ಗೇಟುಗಳನ್ನು ತೆರೆದಿಡಲಾಗಿತ್ತು. ದಾಖಲೆ ೮ ದಿನಗಳ ಕಾಲ ಎಲ್ಲಾ ಗೇಟುಗಳನ್ನು ತೆರೆದಿಡಲಾಗಿತ್ತು. ಗೇರುಸೊಪ್ಪಾ ಸಮೀಪದ ಹಳ್ಳಿಗಳಾದ ಮಾಗೋಡು, ಹೈಗುಂದ, ಕಂಬ್ಳಕೋಡು, ಅಡ್ಕಾರ, ಮಾವಿನಹೊಳೆ, ಬಳ್ಕೂರು, ಕುದ್ರಿಗಿ ಇತ್ಯಾದಿ ಪ್ರದೇಶಗಳಲ್ಲಿ ನೆರೆ.
ಈ ಬಾರಿ ಏನಾಗುವುದು? ಮತ್ತೆ ಜೋಗ ವಿಜೃಂಭಿಸಲಿದೆಯೇ? ಹಾಗಾದರೆ ಮತ್ತೆ ನೋಡುಗರಿಗೆ ಸುಗ್ಗಿ ಆದರೆ ಗೇರುಸೊಪ್ಪಾ ಸುತ್ತಲಿನ ಹಳ್ಳಿಗರ ಪಾಡು.....? ಲಿಂಗನಮಕ್ಕಿಯ ಅಧಿಕಾರಿಗಳು ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯ ಪ್ರಮಾಣವನ್ನು ಗಮನಿಸಿ ಅದೇ ರೀತಿ ನೀರಿನ ಮಟ್ಟವನ್ನು ಕಾಯ್ದಿರಿಸಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಅಪಾರ ಪ್ರಮಾಣದಲ್ಲಿ ಜಲಾಶಯಕ್ಕೆ ಹರಿದು ಬರುವ ನೀರನ್ನು ಇಟ್ಟುಕೊಳ್ಳಲಾಗದೇ ಹಿಂದಿನ ವರ್ಷದಂತೆ ಮತ್ತೆ ಕೊನೇ ಕ್ಷಣದಲ್ಲಿ ಸಿಕ್ಕಾಪಟ್ಟೆ ನೀರನ್ನು ಹೊರಬಿಡಬೇಕಾಗಬಹುದು.
ಕಳೆದ ವರ್ಷ ನಾನು ನಿಮ್ಮ ಹಾಗೆ ಟೀವಿಯಲ್ಲಿ ಜೋಗವನ್ನು ನೋಡಿ ಊರಿಗೆ ಧಾವಿಸಿದ್ದೆ!! ನೀರು ತುಂಬಿ ಹರಿಯುವಾಗ ಜೋಗ ನೋಡುವುದೇ ಒಂದು ಅಧ್ಬುತ ಅನುಭವ.
ಪ್ರತ್ಯುತ್ತರಅಳಿಸಿಹೊಟ್ಟೆ ಉರಿಸ್ತಿದೀರಾ ರಾಜೇಶ್.. ನಾನೂ ಹೋಗ್ಬೇಕು ಅನ್ನಿಸ್ತಿದೆ.. ಊರಿಗೆ ಹೋದಂಗೂ ಆಗತ್ತೆ... ಊಂ.. ನೋಡ್ತೀನಿ ತಾಳಿ.. :)
ಪ್ರತ್ಯುತ್ತರಅಳಿಸಿThis is just unbelievable!!
ಪ್ರತ್ಯುತ್ತರಅಳಿಸಿThanks sir.
Super photos!! ee varsha kooda aa vaibhava kaanutto ilvo nodbeku...
ಪ್ರತ್ಯುತ್ತರಅಳಿಸಿ//saayodarolage nodu omme jogada gundi...
photo noDi hotte oritu...garunteeyagi a sarti hoglebeku.
ಪ್ರತ್ಯುತ್ತರಅಳಿಸಿಫೋಟೊ ಚೆನ್ನಾಗಿದೆ.ಪ್ರವಾಸಿ ತಾಣಗಳ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ. ರಾಜ್ಯದ ಪ್ರವಾಸೋದ್ಯಮ ಇಲಾಖೆ ಸೈಟಲ್ಲೂ ಇಷ್ಟು ಮಾಹಿತಿ ಇಲ್ಲ. ಇದನ್ನೇ ರಾಜ್ಯದ ಅಧಿಕೃತ ಸೈಟ್ ಅಂತ ಘೋಷಿಸಬಹುದು.
ಪ್ರತ್ಯುತ್ತರಅಳಿಸಿಚಿತ್ರಗಳು ಅದ್ಭುತವಾಗಿವೆ.. ಹೋದ್ ವರ್ಷ ಜೋಗಕ್ಕೆ ಹೋಗಲಾಗಲಿಲ್ಲ. ಈ ವರ್ಷ ಹೋಗಬೇಕು...
ಪ್ರತ್ಯುತ್ತರಅಳಿಸಿರಾಜೇಶ್,
ಪ್ರತ್ಯುತ್ತರಅಳಿಸಿಹೋದವಾರ ಕೆಲಸದ ಮೇಲೆ ಹೊರಗೆ ಹೋಗಿದ್ದೆ, ಕೂಡಲೇ ಓದಲಾಗಲಿಲ್ಲ. ಇವತ್ತು ಓದಿದೆ. ತುಂಬಿ ಭೋರ್ಗರೆಯುವ ಹಾಲಹೊಳೆಯು ಕಣ್ಮುಂದೇ ಬಂದ ಅನುಭವ..
ಜಲಪಾತದ ಹರಿವು,ಅಣೆಕಟ್ಟೆಯ ಮಿತಿ, ಪ್ರವಾಸಿಗಳ ಸುಗ್ಗಿ ಮತ್ತು ಸುತ್ತಲ ಹಳ್ಳಿಗಳ ಅಪಾಯ ಸೂಚನೆ ಎಲ್ಲವನ್ನೂ ಮಿತವಾದ ಆದರೆ ಆಳವಾದ ಪದಗಳಲ್ಲಿ ಕಟ್ಟಿಕೊಟ್ಟಿದ್ದೀರಿ. ಸುಂದರ ಜೋಗವನ್ನು ವೀಕ್ಷಿಸಿ ಮೈಮರೆಯುವ ಕ್ಷಣದಲ್ಲಿ, ನಮ್ಮೆಲ್ಲರ ಮನೆಗಳಿಗೆ ಬೆಳಕಾಗಿ ಮುಳುಗಡೆಯಾದ ಹಲವು ಪುಟ್ಟ ಊರುಗಳ ಮಿಣುಕು ನೆನಪು ಬಂದರೆ, ಮನಸ್ಸು ಕೃತಜ್ಞತೆಯಿಂದ ಮಾಗುತ್ತದೆ.
ಓದಿ ತುಂಬ ಹಿತವಾಯಿತು. ಅಲ್ಲೆ ಕೆಲಕಾಲ ಮೈಮರೆತ ಗುಂಗಿನಿಂದ ಹೊರಬಂದರೂ ಈಗ ಮನದಲ್ಲಿ ಜಲಧಾರೆ...
ವಾವ್.. ನಾನು ಓಬೀರಾಯನ ಕಾಲದಲ್ಲಿ ತೆಗೆದ ನೀರಿಲ್ಲದ ಜೋಗದ ಚಿತ್ರವನ್ನ ಇಟ್ಕೊಂಡು ಇದು ಜೋಗ ಅಂದ್ಕೊಳ್ತಾ ಇದ್ರೆ ನೀವು ನಾನು ನೋಡಲಿಕ್ಕಾಗದ ಜೋಗ ತೋರಿಸಿದ್ದೀರಾ.. ಹೋಗ್ಬೇಕು, ನೋಡ್ಬೇಕು ಅನಿಸ್ತಿದೆ...!
ಪ್ರತ್ಯುತ್ತರಅಳಿಸಿಅರವಿಂದ್,
ಪ್ರತ್ಯುತ್ತರಅಳಿಸಿಸರಿಯಾದ ಮಾಹಿತಿ ಇಲ್ಲದೆ ಬಹಳಷ್ಟು ಜನರು ಮಿಸ್ ಮಾಡ್ಕೊಂಡ್ರು.
ಸುಶ್ರುತ,
ಹೋಗಿ ಬನ್ನಿ... ಚಿತ್ರಗಳನ್ನು ಹಾಕುವಿರಂತೆ ಬ್ಲಾಗಿನಲ್ಲಿ.
ಶ್ರೀಕಾಂತ್,
ಧನ್ಯವಾದಗಳು.
ಪ್ರಶಾಂತ್,
ಈ ವರ್ಷ... ? ನೋಡೋಣ.
ಮಹಾಂತೇಶ್,
ಸರಿಯಾದ ಮಾಹಿತಿ ಪಡ್ಕೊಂಡು ಹೋಗುವಿರಂತೆ...ನೀರು ಬಿಟ್ಟಿದ್ದಾರೋ ಇಲ್ವೋ ಎಂದು.
ವಿನಾಯಕ್,
ಬಹಳ ಹೊಗಳಿಬಿಟ್ಟಿದ್ದೀರಾ.... ಥ್ಯಾಂಕ್ಸ್.
ಪರಿಸರ ಪ್ರೇಮಿ,
ಥ್ಯಾಂಕ್ಸ್.
ಸಿಂಧು,
ಅಣೆಕಟ್ಟು ಮತ್ತು ಹಿನ್ನೀರು ಇದ್ದಲ್ಲೆಲ್ಲಾ ನೋವಿನ ಕಥೆಗಳು ಇರ್ಲೇಬೇಕು. ಒಂದೆರಡು ಕ್ಷಣ, ತಮ್ಮದಾಗಿದ್ದ ಎಲ್ಲವನ್ನೂ ಕಳಕೊಂಡವರ ಬಗ್ಗೆ ಯೋಚಿಸುವುದನ್ನು ಬಿಟ್ಟು ಬೇರೇನೂ ಮಾಡಲಾಗದ ಸ್ಥಿತಿ ನಮ್ಮೆಲ್ಲರದು. ಜೋಗ ಭೋರ್ಗರೆಯಬೇಕು ಎಂದು ನಾಡಿನ ಎಲ್ಲಾ ಜನರು ಕಾಯುತ್ತ ಕುಳಿತರೆ... ಗೇರುಸೊಪ್ಪಾ ಅಣೆಕಟ್ಟಿನ ನದಿಪ್ರದೇಶದ ಹಳ್ಳಿಗಳ ಜನರು ಮಾತ್ರ ಜೋಗ ಭೋರ್ಗರೆಯಲೇಬಾರದು ಎಂದು ದೇವರಲ್ಲಿ ಮೊರೆಯಿಡುತ್ತಾರೆ.
ಶ್ರೀ,
ಸ್ವಾಗತ ಬ್ಲಾಗಿಗೆ. ಬರ್ತಾ ಇರಿ.