ನವೆಂಬರ್ ೨೧, ೨೦೦೪ರಂದು ನಮ್ಮ ಈ ಜಲಪಾತಕ್ಕೆ. ಮಂಗಳೂರು ಯೂತ್ ಹಾಸ್ಟೆಲ್ ನವೆಂಬರ್ ತಿಂಗಳ ಚಾರಣಕ್ಕೆ ಯಾವುದಾದರೊಂದು ಸ್ಥಳ ಸೂಚಿಸಿ ಎಂದು ಗೆಳೆಯ ದಿನೇಶ್ ಹೊಳ್ಳರು ವಿನಂತಿಸಿದಾಗ, ಈ ಜಲಪಾತಕ್ಕೆ ಭೇಟಿ ನೀಡುವ ಬಗ್ಗೆ ಸೂಚಿಸಿದೆ. ನಮ್ಮಲ್ಲಿ ಯಾರೂ ಅಲ್ಲಿಗೆ ತೆರಳಿರಲಿಲ್ಲ. ಈ ಜಲಪಾತಕ್ಕೆ ಚಾರಣ ಆರಂಭಿಸುವ ಸ್ಥಳವಾದ ಚಕ್ತಿಕಲ್ ಎಂಬಲ್ಲಿಗೆ ಅಲ್ಲೆಲ್ಲೋ ದಾರಿ ಇದೆ ಎಂದು ನಾರಾಯಣ ಕಲ್ಲಿಕೋಣೆ ಹೇಳಿದ್ದು ನೆನಪಿತ್ತು. ದಾರಿ ಗೊತ್ತಿಲ್ಲದೆ, ಚಾರಣಕ್ಕೆ ಹೊರಟ ದಿನ ವಿನಾ ಕಾರಣ ತೊಂದರೆಗೆ ಒಳಗಾಗುವುದು ಬೇಡವೆಂದು ಚಾರಣ ನಿಗದಿಪಡಿಸಿದ ದಿನದ ಹಿಂದಿನ ಆದಿತ್ಯವಾರ ಚಕ್ತಿಕಲ್ ಕಡೆ ಯಮಾಹ ಓಡಿಸಿದೆ.
ಚಕ್ತಿಕಲ್ ನಲ್ಲಿ ಕೊನೆಯ ಮನೆಯ ತೋಟದಲ್ಲಿ ಸ್ವಲ್ಪ ನಡೆದು, ಬೇಲಿ ಹಾರಿ, ಮತ್ತೆ ಒಂದೆರಡು ನಿಮಿಷ ನಡೆದರೆ ಸಿಗುವ ಹಳ್ಳಗುಂಟ ಮೇಲ್ಗಡೆ ನಡೆದರೆ ೧೫೦ನಿಮಿಷಗಳ ಬಳಿಕ ಈ ಜಲಪಾತ ತಲುಪಬಹುದು. ತೂದಳ್ಳಿಯಿಂದ ಚಕ್ತಿಕಲ್ ಕಡೆಗೆ ತೆರಳುವಾಗ ಎಡಕ್ಕೆ ದೂರದಲ್ಲಿ ೨ ಜಲಪಾತಗಳು ಧುಮುಕುವ ಸುಂದರ ದೃಶ್ಯ ಲಭ್ಯ.
ನಾನು ಚಕ್ತಿಕಲ್ಲಿನ ಕೊನೆಯ ಮನೆಯನ್ನು ತಲುಪಿದಾಗ ಮನೆಯೊಡತಿ ಮತ್ತು ಆಕೆಯ ಮಗಳು ಮಾತ್ರ ಅಲ್ಲಿದ್ದರು. ಅವರಿಬ್ಬರು ನನಗೆ ಮನೆ ದಾಟಿ ಮುಂದಕ್ಕೆ ಹೋಗಲು ಬಿಡಲೇ ಇಲ್ಲ. 'ನಿಮ್ಗೆ ನಾವು ಹೋಗ್ಲಿಕ್ಕೆ ಬಿಡುದಿಲ್ಲ. ಎರಡು ವಾರಗಳ ಹಿಂದಷ್ಟೆ ಅಲ್ಲಿ ಬೆಂಗ್ಳೂರಿನ ಒಬ್ರು ತೀರ್ಕೊಂಡ್ರು. ಅವ್ರಿಬ್ರೇ ಹೋಗಿದ್ರು. ನೀವೊಂದು ಐದಾರು ಜನ ಬಂದ್ರೆ ಸರಿ' ಎಂದು ಹೇಳಿ, ಚಹಾ ಕುಡಿಸಿ ವಾಪಾಸ್ ಕಳಿಸಿದರು. ನನಗಂತೂ ಒಬ್ಬನೇ ಹೋಗುವ ಇರಾದೆ ಇರಲಿಲ್ಲ. ಆ ಮನೆಯಲ್ಲಿನ ಗಂಡಸರೆಲ್ಲರೂ ಹೊರಗೆ ತೆರಳಿದ್ದರಿಂದ ನಾನು ಬೇರೇನೂ ಮಾಡುವಂತಿರಲಿಲ್ಲ. ಮುಂದಿನ ವಾರ ೧೫ ಚಾರಣಿಗರೊಂದಿಗೆ, 'ನೀವು ಐದು ಅಂದ್ರಿ, ನಾನು ಹದಿನೈದು ಜನರೊಂದಿಗೆ ಬಂದಿದ್ದೇನೆ' ಎನ್ನುತ್ತಾ ಮತ್ತೆ ಹಾಜರಾದ ನನ್ನನ್ನು ಕಂಡು ಅವರಿಗೆ ಆಶ್ಚರ್ಯ.
ದೊಡ್ಡ ದೊಡ್ಡ ಬಂಡೆಗಳು ಮತ್ತು ಹಳ್ಳದ ಎರಡೂ ಬದಿ ದಟ್ಟ ಕಾಡು. ದಾರಿಯಲ್ಲಿ ಹಳ್ಳದ ನಡುವೆ ಸಣ್ಣ ಬಂಡೆಯೊಂದರ ಅಡಿಯಲ್ಲಿ ಮರಿ ಹೆಬ್ಬಾವೊಂದು ಮುದುಡಿ ಕುಳಿತಿತ್ತು. ನಾವು ಹಿಂತಿರುಗುವಾಗಲೂ ಅದು ಹಾಗೇ ಅದೇ ಸ್ಥಿತಿಯಲ್ಲಿ ಇತ್ತು.
ಕೂಸಳ್ಳಿಗಿಂತ ಕಷ್ಟದ ಚಾರಣವಿದು. ಕೆಲವೊಂದು ಕಡೆ ಅಗಾಧ ಗಾತ್ರದ ಬಂಡೆಗಳನ್ನು ದಾಟಲು ಬಹಳ ಶ್ರಮಪಡಬೇಕಾಗುತ್ತಿತ್ತು. ಮೊದಮೊದಲು ಸಾಧಾರಣವಾಗಿದ್ದ ಏರುಹಾದಿ ನಂತರ ಕಠಿಣಗೊಳ್ಳತೊಡಗಿತು. ನೀರಿನ ಹರಿವನ್ನೇ ಮರೆಮಾಚಿ ನಿಂತಿದ್ದ ದೈತ್ಯ ಗಾತ್ರದ ಬಂಡೆಗಳು ಎಲ್ಲಾ ಕಡೆ. ಒಂದೆರಡು ಕಡೆ ಬಂಡೆಗಳು ಅದೆಷ್ಟು ದೊಡ್ಡವಿದ್ದವೆಂದರೆ, ಅವುಗಳ ಮೇಲೇರಲು ನಾವು ಸ್ವಲ್ಪ ಹಿಂದಕ್ಕೆ ಸರಿದು, ವೇಗವಾಗಿ ಓಡಿ ಬಂದು, ೪೫ ಡಿಗ್ರಿ ಆಕಾರದಲ್ಲಿದ್ದ ಬಂಡೆಗಳ ಮೇಲೆ ಸುಮಾರು ೮-೧೦ ಹೆಜ್ಜೆಗಳಷ್ಟು ಓಡಿ ಅವುಗಳ ಮೇಲೆ ತಲುಪಬೇಕಿತ್ತು. ಈ ಬಂಡೆಗಳ ಮೇಲ್ಮೈ ನಯವಾಗಿದ್ದರಿಂದ ಜಾರುತ್ತಿತ್ತು. ಆದ್ದರಿಂದ ಕೆಲವೊಮ್ಮೆ ವೇಗ ಸಾಲದೆ, ಮೇಲೆ ತಲುಪಲು ಇನ್ನೂ ಒಂದೆರಡು ಅಡಿ ಇರುವಾಗಲೇ ಜಾರಿ, ಪಾರ್ಕುಗಳಲ್ಲಿ ಮಕ್ಕಳು ಜಾರುಗುಂಡಿಯಲ್ಲಿ ಜಾರಿ ಕೆಳಗೆ ಬರುವಂತೆ ಮತ್ತೆ ಬಂಡೆಯ ಬುಡಕ್ಕೆ ಬರುವುದು. ನಾನೂ ಒಂದು ಸಾರಿ ಜಾರಿ ಮರಳಿ ಕೆಳಗೆ ಬಂದೆ. ಎರಡನೇ ಪ್ರಯತ್ನದಲ್ಲಿ ಮತ್ತೆ ಜಾರುವೆ ಎನ್ನುವಷ್ಟರಲ್ಲಿ ಅದಾಗಲೇ ಮೇಲೇರಿದ್ದ ಪ್ರವೀಣ್, ನನ್ನ ಮುಂಚಾಚಿದ ಕೈಯನ್ನು ಹಿಡಿದು ಮೇಲೆಳೆದುಕೊಂಡರು. ರಮೇಶ್ ಕಾಮತರಂತೂ ೨ ಬಾರಿ ವೇಗ ಸಾಲದೆ ಬಂಡೆಯ ನಯವಾದ ಮೇಲ್ಮೈ ಮೇಲೆ ಕುಳಿತು ಮಕ್ಕಳಂತೆ ಕೆಳಗೆ ಜಾರಿಹೋದರು.
ಎಷ್ಟೇ ನಡೆದರೂ ಬಂಡೆಗಳ ರಾಶಿ ಮುಗಿಯುತ್ತಿರಲಿಲ್ಲ. ಕೊನೆಕೊನೆಗೆ ಜಲಪಾತ ಸಮೀಪಿಸಿದಂತೆ ಏರುಹಾದಿ ಮತ್ತಷ್ಟು ಕಠಿಣಗೊಂಡಿತು. ನಮ್ಮ ತಂಡದ ಕೆಲವು ಸದಸ್ಯರು ಜಲಪಾತದ ಬುಡದ ಸಮೀಪ ನಿಂತು ನಮ್ಮತ್ತ ಕೈ ಬೀಸುತ್ತಿದ್ದರು. ಅವರು ಸಮೀಪದಲ್ಲೇ ಇದ್ದಂತೆ ಕಂಡರೂ, ನಾವು ಅವರ ಸಮೀಪ ತಲುಪುತ್ತಿರುವಂತೆ ಅನಿಸುತ್ತಿರಲಿಲ್ಲ. ಕಣ್ಣ ಮುಂದೆ ಜಲಪಾತ ಧುಮುಕುತ್ತಿರುವುದು ಕಾಣಿಸುತ್ತಿದ್ದರೂ, ಅದರ ಸಮೀಪ ತಲುಪಲು ಬಹಳ ಪರದಾಡಬೇಕಾಯಿತು. ಕೊನೆಯ ೩೦ ನಿಮಿಷಗಳ ಏರುಹಾದಿ ಬಹಳ ಕಷ್ಟಕರವಾಗಿತ್ತು.
ಪ್ರಿಯ ರಾಜೇಶ್,
ಪ್ರತ್ಯುತ್ತರಅಳಿಸಿಎಂದಿನಂತೆ - ಹೋಗಿ ನೋಡದಿದ್ದರೆ ಬದುಕು ವ್ಯರ್ಥ ಅನಿಸುವಂತಹ ಅಪೂರ್ವ ವಿವರಣೆ..
"ಸುಮ್ಮನೆ ಬಂಡೆಯ ಮೇಲೆ ಮೈ ಚಾಚಿ ಆಗಸಕ್ಕೆ ಮುಖ ಮಾಡಿ ಆಷ್ಟು ಎತ್ತರದಿಂದ ನೀರು ಧುಮುಕುವುದನ್ನು ನೋಡುತ್ತ ಮಲಗಿದರೆ ಅದೊಂದು ಬೇರೆನೇ ಲೋಕ.." ತುಂಬ ನಿಜ. ನಾವೊಂದೆರಡು ಸಲ ಹೆಬ್ಬೆಗೆ ಹೋದಾಗ ಆದ ಈ ಅನುಭವ ಈಗ ನೆನಪಾದರೂ ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ.
ನೀವು ಕಳಿಸಿದ "ನಿಸರ್ಗ" ಈ-ಝೈನ್ ಎಲ್ಲಿ ಸಿಗುತ್ತದೆ. ನನಗೆ ಬಂದಿರುವುದು ಬರಿಯ ಮುಖಪುಟ ಮಾತ್ರ.
ಪ್ರೀತಿಯಿರಲಿ,
ಸಿಂಧು
ಸಿಂಧು,
ಪ್ರತ್ಯುತ್ತರಅಳಿಸಿ'ನಿಸರ್ಗ'ವನ್ನು, ಬೇಕಾದ ವಿವರಗಳೊಂದಿಗೆ ಮತ್ತೊಮ್ಮೆ ನಿಮ್ಮ ವಿ-ಅಂಚೆ ವಿಳಾಸಕ್ಕೆ ಕಳಿಸಿದ್ದೇನೆ. ಸಂಬಂಧಪಟ್ಟವರಿಗೆ ನಿಮ್ಮ ವಿ-ಅಂಚೆ ವಿಳಾಸ ನೀಡಿದರೆ, 'ನಿಸರ್ಗ' ಪ್ರತಿ ತಿಂಗಳು ನಿಮಗೆ ಓದಲು ಸಿಗುತ್ತೆ.
super photos, Rajesh. Nimma posts nodta idre nange asooye aagutte, naanu malenaadina ond oornalli hutta baardittaa anta...
ಪ್ರತ್ಯುತ್ತರಅಳಿಸಿBTW, hoda vaara nimma oorina kade bandidde - 3 dina alle idde. Nimmanna contact maadona andre nimma number irlilla :(