ಸೋಮವಾರ, ಡಿಸೆಂಬರ್ 11, 2006

ಕಣಿವೆಯಲ್ಲೊಂದು ಜಲಪಾತ


ಆರ್.ವಿಶ್ವನಾಥ್ ಬರೆದಿದ್ದ ಲೇಖನವನ್ನು ಕಿಸೆಯಲ್ಲಿಟ್ಟುಕೊಂಡು ಈ ಹಳ್ಳಿಯಲ್ಲಿ ನಿನ್ನೆ ರವಿವಾರ ಮುಂಜಾನೆ ೮.೪೫ಕ್ಕೆ ರಿಕ್ಷಾದಿಂದ ಕೆಳಗಿಳಿದಾಗ ಎದುರಾದರು ನೇತ್ರಾವತಿ ಮತ್ತು ಮಹಾದೇವಿ. ಇವರಲ್ಲಿ ಕೃಷ್ಣ ಕುಣಬಿಯ ಬಗ್ಗೆ ವಿಚಾರಿಸಿದಾಗ, 'ಕೃಷ್ಣ ಇಲ್ಲೇ ಅವ್ನೆ. ಕರೀಲೀ' ಎಂದಾಗ 'ಹೂಂ'ಅನ್ನುವ ಮೊದಲೇ, 'ಕೃಷ್ಣಣ್ಣಾ, ಕೂ..ಹೂಯ್.... ಕೇಳ್ಕೊಂಡ್ ಬಂದವ್ರೆ' ಎಂದು ಕರೆದಾಯ್ತು. ಈ ಮಹಾದೇವಿ ಚೀರಾಡಿದ ರೀತಿಗೆ ದಡಬಡಿಸಿ ಓಡೋಡಿ ಬಂದ ಕೃಷ್ಣ. ಅವನನ್ನು ಹಿಂಬಾಲಿಸಿ ಬಂದನು ಪರಮೇಶ್ವರ.

ಗಿಡಕಂಟಿಗಳನ್ನು ಸರಿಸಿ ದಾರಿ ಮಾಡಲು, ಕತ್ತಿಯನ್ನು ಸೊಂಟಕ್ಕೆ ನೇತಾಡಿಸಿ ಕೃಷ್ಣ ಮತ್ತು ಪರಮೇಶ್ವರ ಮುನ್ನಡೆದರು. ಈ ಹಳ್ಳ, ಬೆಟ್ಟದಿಂದ ಜಿಗಿದು ೯ ಜಲಪಾತಗಳನ್ನು ಸೃಷ್ಟಿಸಿ ಕೊಡಸಳ್ಳಿ ಹಿನ್ನೀರನ್ನು ಸೇರುತ್ತದೆ. ಚಾರಣದ ದಾರಿ 1ನೇ ಹಂತದವರೆಗೆ 'ಪೀಸ್ ಆಫ್ ಕೇಕ್'. ನಂತರ ಶುರುವಾಗುವುದೇ ದಾರಿಯಿಲ್ಲದ ಕಡೆ ದಾರಿ ಮಾಡಿಕೊಂಡು ಕಡಿದಾದ ಇಳಿಜಾರಿನಲ್ಲಿ ಇಳಿಯುವುದು. ಈ ೯ ಹಂತಗಳಲ್ಲಿ ೩ ಹಂತಗಳನ್ನು ಅವುಗಳ ಮುಂದೆ ಬುಡದಲ್ಲಿ ನಿಂತು ನೋಡಬೇಕಿದ್ದಲ್ಲಿ ದೊಡ್ಡ ಬಂಡೆಗಳನ್ನು, ಮರಗಳ ಬೀಳುಗಳನ್ನು ಹಿಡಿದು ಸರ್ಕಸ್ ಮಾಡಿ ಹತ್ತಿ ಮತ್ತೆ ಇಳಿಯಬೇಕು.

ಒಂದು ಹಂತವನ್ನು ನೋಡಿ, ಕಲ್ಲು ಬಂಡೆಗಳನ್ನು ಹತ್ತಿ ದಾಟಿ, ಕಾಡನ್ನು ಪ್ರವೇಶಿಸಿ, ಮತ್ತೆ ಇಳಿಜಾರಿನಲ್ಲಿ ದಾರಿ ಮಾಡಿಕೊಂಡು ಮುಂದಿನ ಹಂತದ ಪಾರ್ಶ್ವಕ್ಕೆ ಬಂದು, ಮತ್ತೊಮ್ಮೆ ಕಲ್ಲು ಬಂಡೆಗಳನ್ನು ಹತ್ತಿ ಆ ಹಂತದ ಮುಂಭಾಗಕ್ಕೆ ಬರುವುದು. ಹೀಗೆ ಪ್ರತಿಯೊಂದು ಹಂತವನ್ನು ವೀಕ್ಷಿಸಿದೆವು. ಪ್ರಮುಖ ಹಂತವಾದ ೯ನೇ ಹಂತ ಸುಂದರವಾಗಿದ್ದು, ಹಲವಾರು ಮಿನಿ ಜಲಪಾತಗಳನ್ನು ಹೊಂದಿದೆ. ಇಲ್ಲಿ ಕಳೆದ ೨೦ ನಿಮಿಷ 'ಮೆಮೊರೇಬಲ್'. ಈ ಹಂತದ ಚೆಲುವು ವರ್ಣಿಸಲು ಶಬ್ದಗಳು ಸಾಲದು. ಸುಮಾರು ೧೨೦ಅಡಿ ಎತ್ತರವಿರುವ ಈ ಹಂತಕ್ಕೆ 'ಪ್ರಮುಖ ಜಲಪಾತ' ಎನ್ನಬಹುದು. ನಂತರ ಸಿಗುವ ೯ನೇ ಹಂತ ದಾಟಿ ಸ್ವಲ್ಪ ಮುಂದೆ ಇರುವ ಕೊಡಸಳ್ಳಿ ಹಿನ್ನೀರಿನಲ್ಲಿ ಈ ಹಳ್ಳ ಲೀನವಾಗುವುದು.

1ನೇ ಹಂತದಿಂದ, ಕೊನೆಯ ಹಂತದವರೆಗೆ ಸುಮಾರು ೧೦೦೦ ಅಡಿಯವರೆಗೆ ಇಳಿಯುತ್ತಾ 'ಫುಲ್ ಎಂಜಾಯ್' ಮಾಡುತ್ತಾ ಬಂದ ನಂತರ, ಹಿಂತಿರುಗುವಾಗ ಉಂಟಾದ ಆಯಾಸ...... ವೆಲ್ ಇಟ್ ಇಸ್ ಪಾರ್ಟ್ ಆಫ್ ದ ಚಾರಣ. ಹಳ್ಳಿಯಿಂದ ಕೊಡಸಳ್ಳಿ ಹಿನ್ನೀರಿನವರೆಗೆ ನಮಗೆ ತಗಲಿದ ಸಮಯ ೪ ತಾಸು. ನಂತರ ಮರಳಿ ಹಳ್ಳಿಗೆ, ಜಲಪಾತವಿರುವ ಕಣಿವೆಯ ಬದಿಯಲ್ಲಿರುವ, ಕೊಡಸಳ್ಳಿ ಹಿನ್ನೀರಿನಲ್ಲಿ ಮುಳುಗಿರುವ ಹಿಂದೆ ಜನವಾಸವಿದ್ದ ತೋಟಗಳ ನಡುವೆ ಕಾಲುದಾರಿಯಲ್ಲಿ ಘಟ್ಟ ಹತ್ತಿ ಬಂದಾಗ ತಗಲಿದ ಅವಧಿ ೨ ತಾಸು.

1 ಕಾಮೆಂಟ್‌: