ಭಾನುವಾರ, ಅಕ್ಟೋಬರ್ 01, 2006

ಆಗುಂಬೆಯ ಸಂಜೆಯೂ......'ಹ್ಹಿ ಹ್ಹಿ'ಯು

ಆದಿತ್ಯವಾರಗಳಂದು ಯಾವುದೇ ಚಾರಣ ಇರದಿದ್ದರೆ ಸಂಜೆ ಆಗುಂಬೆಗೆ ಹೋಗುವುದು ರೂಢಿಯಾಗಿಬಿಟ್ಟಿದೆ. ಮಧ್ಯಾಹ್ನ ೩ಕ್ಕೆ ಉಡುಪಿಯಿಂದ ಹೊರಟು, ಸೋಮೇಶ್ವರದಲ್ಲಿ ಬಿಸಿ ಬಿಸಿ ನೀರ್ ದೋಸೆ ಅಥವಾ ಗೋಳಿಬಜೆ ತಿಂದು, ಆಗುಂಬೆ ಚೆಕ್-ಪೋಸ್ಟ್ ಬಳಿ ಚಹಾ ಅಂಗಡಿ ಇಟ್ಟುಕೊಂಡಿರುವ ಪಡಿಯಾರ್-ಗೆ ವಿಶ್ ಮಾಡಿ ಸಂಜೆ ಸುಮಾರು ಐದಕ್ಕೆ ಆಗುಂಬೆಯ ಗೆಸ್ಟ್-ಹೌಸ್ ಮುಂದಿರುವ ಕಲ್ಲಿನ ಆಸನದ ಮೇಲೆ ಆಸೀನರಾದರೆ ಆಗುಂಬೆಯ ಸಂಜೆ ಸವಿಯುವ ಭಾಗ್ಯ ನಮ್ಮದು.

ಈ ಗೆಸ್ಟ್-ಹೌಸ್ ಸ್ವಲ್ಪ ಎತ್ತರದಲ್ಲಿರುವುದರಿಂದ ಆಗುಂಬೆಯ ಸುಂದರ ನೋಟ ಇಲ್ಲಿಂದ ಲಭ್ಯ. ಹಕ್ಕಿಗಳ ಚಿಲಿಪಿಲಿ, ಅಹ್ಲಾದಕರ ವಾತಾವರಣ, ಅನತಿ ದೂರದಲ್ಲಿ ಕಾಣುವ ರಸ್ತೆಯಲ್ಲಿ 'ಭರ್ರ್' ಎಂದು ಹಾದುಹೋಗುವ ಮಿನಿ ರಾಕ್ಷಸರು (ಮಿನಿ ಬಸ್ಸುಗಳು), 'ಕೋಳಿ ಮಾಡುವ ಸಾರ್, ಇರಿ ಊಟಕ್ಕೆ' ಎಂದು ಒತ್ತಾಯಿಸುವ ಅಲ್ಲಿನ ಮೇಟಿ, ಅಲ್ಲೇ ಸಮೀಪದಲ್ಲಿ ಕಾಣುವ ಶಾಲಾ ಮೈದಾನದಲ್ಲಿ ವಾಲಿಬಾಲ್, ಥ್ರೋಬಾಲ್ ಇತ್ಯಾದಿ ಆಡುವ ಹೆಣ್ಮಕ್ಕಳ ಕೂಗಾಟ ಮತ್ತು ಇವೆಲ್ಲದಕ್ಕೆ ತಕ್ಕಂತೆ ನಮ್ಮ ಹರಟೆ. ಕಡು ಬೇಸಿಗೆಯಲ್ಲೂ ಹಸಿರನ್ನು ಉಳಿಸಿಕೊಳ್ಳುವ ಆಗುಂಬೆಯ ಸಂಜೆ ಅದ್ಭುತ! ಆಗುಂಬೆಯ ಸಂಜೆಯ ವೈಶಿಷ್ಟ್ಯತೆ ಅನುಭವಿಸಿದವರಿಗೇ ಗೊತ್ತು.

ಬೇಸಗೆಯ ಹಿತವಾದ ಬಿಸಿಲು, ಚಳಿಗಾಲದ ಮೈ ನಡುಗಿಸುವ ಚಳಿ ಮತ್ತು ಮಳೆಗಾಲದ ಅಬ್ಬರದ ಮಳೆ ಇದನ್ನೆಲ್ಲಾ ಆಗುಂಬೆಯಲ್ಲಿ ಅನುಭವಿಸಿ ಮತ್ತೆ ಮತ್ತೆ ಅಲ್ಲಿಗೆ ತೆರಳುವ ತವಕ ನಮ್ಮ ಗುಂಪಿನ ಪ್ರತಿಯೊಬ್ಬನಿಗೆ. ಆ ಕಲ್ಲಿನ ಬೆಂಚಿನಲ್ಲಿ ಕುಳಿತು ವಿವಿಧ ಪಕ್ಷಿಗಳನ್ನು ಗುರುತಿಸುವ ಪ್ರಯತ್ನ, ಆಗುಂಬೆಯಲ್ಲಿ ಜಾಗ ಖರೀದಿಸುವ ಮಾತು ಇತ್ಯಾದಿಗಳ ಹರಟೆ. ಬೆನ್ನು ಬಿಡದಂತೆ ಬೆನ್ನು ಹತ್ತುವ ಮಳೆರಾಯನ ಆಗುಂಬೆಯ ಅವತಾರವನ್ನು ಒಮ್ಮೆಯಾದರೂ ನೋಡಬೇಕು. ಬೀಳುತ್ತಿರುವ ಮಳೆಯ ನಡುವೆ ರೈನ್ ಕೋಟ್ ಧರಿಸಿಯೇ ಆ ಕಲ್ಲಿನ ಬೆಂಚಿನಲ್ಲಿ ಆಸೀನರಾಗಿ 'ಮಳೆ ವೀಕ್ಷಣೆ' ಮಾಡುತ್ತಾ ಹರಟೆ ಹೊಡೆಯುವುದೇ ಮಜಾ.

ಆಗುಂಬೆ ಚೆಕ್ ಪೋಸ್ಟ್ ಬಳಿಯ ತನ್ನ ಚಹಾ ಅಂಗಡಿಯಲ್ಲಿ ಬಿಸಿ ಬಿಸಿ ಚಟ್ಟಂಬಡೆ ಮತ್ತು ಬಿಸ್ಕುಟಂಬಡೆ ಕರಿಯುವ ಪಡಿಯಾರ್, ಬಹುಶಃ ಆಗುಂಬೆಯಲ್ಲೇ ಇದ್ದು ಹೆಚ್ಚು ಕಮಾಯಿಸುವವರಲ್ಲೊಬ್ಬ. ಈತನ ಚಟ್ಟಂಬಡೆ ಹಾಗೂ ಬಿಸ್ಕುಟಂಬಡೆಗಳ ರುಚಿಗೆ ಮಾರುಹೋಗದವರಿಲ್ಲ. ನಾವು ಆಗುಂಬೆಗೆ ತೆರಳುವಾಗ ಪಡಿಯಾರ್-ಗೆ 'ವಿಶ್' ಮಾಡುವ ಅರ್ಥವೇನೆಂದರೆ 'ಒಂದು ತಾಸಿನಲ್ಲಿ ಹಿಂತಿರುಗಿ ಬರಲಿದ್ದೇವೆ. ಒಂದಷ್ಟು ಚಟ್ಟಂಬಡೆ ಹಾಗೂ ಬಿಸ್ಕುಟಂಬಡೆಗಳನ್ನು ನಮಗಾಗಿ ತೆಗೆದಿಡು'. ಆದ್ದರಿಂದ ಸಂಜೆ ಸುಮಾರು ೬ಕ್ಕೆ ಆಗುಂಬೆ ಗೆಸ್ಟ್ ಹೌಸ್-ನಿಂದ ಉಡುಪಿಗೆ ಹೊರಡುವಾಗ ನಮಗಿರುವ ಟೆನ್ಶನ್ ಚಟ್ಟಂಬಡೆ/ಬಿಸ್ಕುಟಂಬಡೆ ತಿನ್ನಲು ಸಿಗುತ್ತೊ ಇಲ್ವೋ ಎಂಬುದಲ್ಲ, ಬದಲಾಗಿ 'ಹ್ಹಿ ಹ್ಹಿ' ನೋಡಲು ಸಿಗುತ್ತಾನೋ ಇಲ್ವೋ ಎಂಬುದು. ಈ 'ಹ್ಹಿ ಹ್ಹಿ' ಅಲ್ಲೇ ಆಗುಂಬೆ 'ಚೆಕ್ ಪೋಸ್ಟ್'ನಲ್ಲಿ ವಾಸಿಸುವ ನಾಯಿ. ಎಲ್ಲಿಂದಲೋ ಬಂದು ಚೆಕ್-ಪೋಸ್ಟ್ ಬಳಿಯಲ್ಲಿ ಆಚೀಚೆ ಓಡಾಡುತ್ತಿರುವಾಗ, ಅಲ್ಲಿನ ಸಿಬ್ಬಂದಿ ಅದಕ್ಕೆ ಆಶ್ರಯ ನೀಡಿರುವುದರಿಂದ ಈಗ 'ಹ್ಹಿ ಹ್ಹಿ' ಅಲ್ಲೇ ಇರುತ್ತಾನೆ.

ಕೆಳ ದವಡೆಯ ಹಲ್ಲುಗಳು ಹೊರಚಾಚಿ ಮೇಲ್ತುಟಿಯನ್ನು ಮರೆಮಾಡಿರುವುದರಿಂದ ನಗುತ್ತಾ ಇರುವಂತೆ ಈ ನಾಯಿ ಕಾಣಿಸುತ್ತದೆ. ಈ 'ಹ್ಹಿ ಹ್ಹಿ' ಎಂದರೆ ನಮಗೆ ಬಹಳ ಪ್ರೀತಿ. ತೊಡೆಯ ಮೇಲೆ ಮುಂಗಾಲುಗಳನ್ನಿಟ್ಟು ಆಸೆಯಿಂದ ತಿಂಡಿ ಬೇಡುವ ಆತನ ಭಂಗಿ, ನಾವು ಕಿಸೆಯೊಳಗೆ ಕೈ ಹಾಕಿದರೆ ಆಸೆಯಿಂದ ನೋಡುವ ಆತನ ಕಣ್ಣುಗಳು, ಬಡಕಲು ದೇಹವಿದ್ದರೂ ಉತ್ಸಾಹದ ಚಿಲುಮೆಯಂತಿರುವ 'ಹ್ಹಿ ಹ್ಹಿ' ಯನ್ನು ನೋಡದೇ ನಮ್ಮ ಆಗುಂಬೆ ಭೇಟಿ ಅಪೂರ್ಣ. ಕಳೆದ ಅಗೋಸ್ಟ್ ತಿಂಗಳಂದು ನಗರಕ್ಕೆ ಹೋದಾಗ, ಹಿಂತಿರುಗಿ ಬರುವಾಗ ಆಗುಂಬೆಯ ಮೂಲಕ ಬಂದೆ. ಪಡಿಯಾರ್ ಅಂಗಡಿ ಮುಚ್ಚುತ್ತಿದ್ದ. ರುಚಿಯಾದ ಚಟ್ಟಂಬಡೆ ತಿನ್ನಲು ಸಿಗಲಿಲ್ಲ ಎಂದು ನಿರಾಸೆಯಾದರೂ, 'ಹ್ಹಿ ಹ್ಹಿ' ಯನ್ನು ನೋಡಿ ಸಂತೋಷವಾಯಿತು. ಇದ್ದ ಕೆಲವು ಬಿಸ್ಕಿಟ್ ಚೂರುಗಳನ್ನು ಕೊಟ್ಟಾಗ ಆನಂದದಿಂದ 'ಹ್ಹಿ ಹ್ಹಿ' ತಿಂದ. ಮೊನ್ನೆ ಸೆಪ್ಟೆಂಬರ್ ೧೬ರಂದು ಮತ್ತೊಮ್ಮೆ ಆಗುಂಬೆಗೆ ತೆರಳಿದಾಗ, 'ಹ್ಹಿ ಹ್ಹಿ' ನಾಪತ್ತೆ. ಐದಾರು ದಿನಗಳಿಂದ ಆತನ ಪತ್ತೆಯಿಲ್ಲ ಎಂದು ಪಡಿಯಾರ್ ಹಾಗೂ ಚೆಕ್-ಪೋಸ್ಟ್ ಸಿಬ್ಬಂದಿಗಳು ತಿಳಿಸಿದಾಗ ಏನೋ ಕಳವಳ. ಉಡುಪಿಯಲ್ಲಿ ಗೆಳೆಯರಿಗೆ 'ಹ್ಹಿ ಹ್ಹಿ' ನಾಪತ್ತೆಯಾಗಿರುವುದು ತಿಳಿಸಿದಾಗ 'ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅಲ್ಲೇ ಅಡ್ದಾಡುತ್ತಿರುವ ಚಿಟ್ಟೆ ಹುಲಿಗೆ ಬಲಿಯಾಗಿರಬಹುದು ಅಥವಾ ಸಂಗಾತಿಯನ್ನರಸಿ ಹೋಗಿರಬಹುದು' ಎಂಬ ಮಾತು. 'ಹ್ಹಿ ಹ್ಹಿ' ಎರಡು ಬಾರಿ ಆ ಚಿಟ್ಟೆ ಹುಲಿಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ. ಮೊರನೇ ಸಲ ಅದೃಷ್ಟ ಕೈಕೊಟ್ಟಿತೇ... ಅಥವಾ ಸಂಗಾತಿಯನ್ನರಸಿ ಹೋಗಿದ್ದನೇ..? ಎಂಬುದು ಮುಂದಿನ ಸಲ ಆಗುಂಬೆಗೆ ತೆರಳುವಾಗ ಉತ್ತರ ಸಿಗುವ ಪ್ರಶ್ನೆ.

'ಹ್ಹಿ ಹ್ಹಿ' ಯನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

2 ಕಾಮೆಂಟ್‌ಗಳು: