ಮಂಗಳವಾರ, ನವೆಂಬರ್ 27, 2012
ಗುರುವಾರ, ನವೆಂಬರ್ 15, 2012
ಭಾನುವಾರ, ನವೆಂಬರ್ 11, 2012
ತಿರುಪತೇಶ್ವರ ದೇವಾಲಯ - ಹಾನಗಲ್
ತೋಟಗಾರಿಕಾ ಇಲಾಖೆಯ ಪ್ರಾಂಗಣದೊಳಗೆ ಇರುವ ತಿರುಪತೇಶ್ವರ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ಜೀರ್ಣೋದ್ಧಾರಗೊಳಿಸಿ ಮೂಲ ರೂಪಕ್ಕೆ ತಂದಿದೆ. ಮೊದಲು ಹಾನಗಲ್ನಲ್ಲಿದ್ದ ಕೋಟೆಯ ಪ್ರದೇಶವಾಗಿರುವ ಸ್ಥಳದಲ್ಲೇ ಈಗ ತೋಟಗಾರಿಕಾ ಇಲಾಖೆಯಿದೆ.
ಈ ಏಕಕೂಟ ದೇವಾಲಯದ ಮುಖಮಂಟಪಕ್ಕೆ ೩ ದಿಕ್ಕುಗಳಿಂದ ಪ್ರವೇಶವಿದೆ. ಮುಖಮಂಟಪದ ಸುತ್ತಲೂ ಕಕ್ಷಾಸನವಿದ್ದು, ನಟ್ಟನಡುವೆ ನಾಲ್ಕು ಸುಂದರ ಕಂಬಗಳ ನವರಂಗವಿದೆ. ಕಕ್ಷಾಸನದ ಮೇಲೆ ೧೨ ಕಂಬಗಳಿವೆ. ಅಂತರಾಳದ ಮತ್ತು ಗರ್ಭಗುಡಿಯ ದ್ವಾರಗಳಲ್ಲಿರುವ ಕೆತ್ತನೆಗಳು ನಶಿಸಿಹೋಗಿವೆ. ಅಂತರಾಳದ ದ್ವಾರದಲ್ಲಿದ್ದ ಜಾಲಂಧ್ರಗಳು ಕಣ್ಮರೆಯಾಗಿವೆ. ನಂದಿಯ ಮೂರ್ತಿಯೊಂದು ಅಂತರಾಳದಲ್ಲಿದೆ ಮತ್ತು ಗರ್ಭಗುಡಿಯಲ್ಲೊಂದು ಶಿವಲಿಂಗವಿದೆ.
ನವರಂಗದಲ್ಲಿ ೯ ಅಂಕಣಗಳಿವೆ. ಆದರೆ ಎಲ್ಲಾ ಅಂಕಣಗಳು ಸಮಾನ ಅಕಾರದಲ್ಲಿಲ್ಲ! ನಟ್ಟನಡುವೆ ಇರುವ ಅಂಕಣ ಚೌಕಾಕಾರದಲ್ಲಿದ್ದರೆ, ಇದರ ಸುತ್ತಲೂ ಇರುವ ಉಳಿದ ೮ ಅಂಕಣಗಳು ಆಯತಾಕಾರದಲ್ಲಿವೆ. ನಡುವೆ ಇರುವ ಅಂಕಣದಲ್ಲಿ ೯ ಸುಂದರ ತಾವರೆಗಳನ್ನು ಕೆತ್ತಲಾಗಿದ್ದು, ೩ ತರಹದ ತಾವರೆಗಳನ್ನು ಕಾಣಬಹುದು. ಉಳಿದ ಅಂಕಣಗಳಲ್ಲಿ ೬ ತಾವರೆಗಳನ್ನು ಕೆತ್ತಲಾಗಿದ್ದು, ೨ ರೀತಿಯ ತಾವರೆಗಳನ್ನು ಕಾಣಬಹುದು.
ಮುಖಮಂಟಪಗಳ ಛಾವಣಿಯಲ್ಲೂ ತಲಾ ೬ ತಾವರೆಗಳನ್ನು ಕೆತ್ತಲಾಗಿದೆ. ಇವುಗಳನ್ನೂ ಅಂಕಣಗಳೆಂದು ಪರಿಗಣಿಸಿದರೆ ಒಟ್ಟು ಅಂಕಣಗಳ ಸಂಖ್ಯೆ ೧೨ ಆಗುತ್ತದೆ.
ಹೊಯ್ಸಳ ಶೈಲಿಯ ಈ ದೇವಾಲಯದ ಮೂಲ ಗೋಪುರ ಶಿಥಿಲಗೊಂಡು ಬಿದ್ದುಹೋಗಿದ್ದು, ಈಗ ಅದರ ಸ್ಥಾನದಲ್ಲಿ ವಿಕಾರವಾಗಿ ಕಾಣುವ ಗೋಪುರವೊಂದಿದೆ. ದೇವಾಲಯದ ಹೊರಗೋಡೆಯಲ್ಲಿ ಕೆಲವೆಡೆ ಮಂಟಪಗಳು, ಬಳ್ಳಿಗಳು, ತಾವರೆಗಳು ಮತ್ತು ಯಕ್ಷ ಯಕ್ಷಿಯರ ಕೆತ್ತನೆಗಳನ್ನು ಕಾಣಬಹುದು. ಇಸವಿ ೧೧೫೦ರ ಬಳಿಕ ಈ ದೇವಾಲಯ ನಿರ್ಮಾಣವಾಗಿರಬಹುದೆಂದು ಇತಿಹಾಸಕಾರರ ಅಭಿಪ್ರಾಯ.
ತೋಟಗಾರಿಕೆ ಇಲಾಖೆಯ ಪ್ರಾಂಗಣಕ್ಕಿರುವ ಮುಳ್ಳುಬೇಲಿಯ ಸುತ್ತ ಪೊದೆಗಳು ಬೆಳೆದಿರುವುದರಿಂದ ಅಲ್ಲಿ ನುಸುಳಲು ಪ್ರಯತ್ನಿಸುವುದು ವ್ಯರ್ಥ. ಗೇಟಿಗೆ ಬೀಗ ಹಾಕಿ ಇದ್ದರೆ ಸುಮಾರು ೧೦ ಅಡಿ ಎತ್ತರದ ಗೇಟನ್ನು ಸ್ವಲ್ಪ ನಿಗಾವಹಿಸಿ ದಾಟಬೇಕಾಗುತ್ತದೆ. ಗೇಟಿನ ಮೇಲ್ಭಾಗದಲ್ಲಿ ಸರಳುಗಳ ಚೂಪಾದ ಈಟಿಯಂತಹ ಭಾಗವಿರುವುದರಿಂದ ಸ್ವಲ್ಪ ಕಾಲು ಜಾರಿದರೂ ಅಪಾಯ. ರಜಾದಿನಗಳಂದು ತೆರಳಿದರೆ ಗೇಟಿಗೆ ಬೀಗ ಹಾಕಿಯೇ ಇರುತ್ತದೆ.
ಅಂದು - ಇಂದು:
ಇದು ೧೮೮೫ರಲ್ಲಿ ತೆಗೆದ ತಿರುಪತೇಶ್ವರ ದೇವಾಲಯದ ಚಿತ್ರ. ದೇವಾಲಯದ ಮುಖಮಂಟಪ ಮತ್ತು ಗೋಪುರದ ಮೇಲೆ ಬೆಳೆದಿರುವ ಗಿಡ, ಪೊದೆ ಇತ್ಯಾದಿಗಳನ್ನು ಗಮನಿಸಿ. ಮುಖಮಂಟಪವೂ ಶಿಥಿಲಗೊಂಡಿರುವುದನ್ನು ಕಾಣಬಹುದು.
ಗೋಪುರವನ್ನೇ ಆವರಿಸಿರುವ ಗಿಡ ಮತ್ತು ಬಳ್ಳಿಗಳು ಅದನ್ನೇ ಬಲಿ ತೆಗೆದುಕೊಂಡವು ಎನ್ನಬಹುದು. ಏಕೆಂದರೆ ಈಗ ಮೂಲ ಗೋಪುರವೇ ಇಲ್ಲ. ಈಗ ದೇವಾಲಯದ ಪರಿಸರ ಆಗಿನಂತಿಲ್ಲ. ಸುತ್ತಲೂ ಸ್ವಚ್ಛವಾಗಿದ್ದು, ನಿರ್ಮಲವಾಗಿದೆ.
ಭಾನುವಾರ, ನವೆಂಬರ್ 04, 2012
ಅಂದಕೇಶ್ವರ ದೇವಾಲಯ - ಹೂಲಿ
ಹೂಲಿ ಕೆರೆಯ ಸುಂದರ ನೋಟವನ್ನು ಸವಿಯುತ್ತ ಮುನ್ನಡೆದರೆ ಕೆಂಪು ರಂಗನ್ನು ಹೊತ್ತು ನಿಂತಿರುವ ಬೆಟ್ಟಗಳ ಅದ್ಭುತ ದೃಶ್ಯ. ಬೆಟ್ಟಗಳ ತಪ್ಪಲಿನಲ್ಲೇ ಅಲ್ಲಲ್ಲಿ ಸುಂದರ ಕಲಾಕೃತಿಗಳಂತೆ ತೋರುವ ದೇವಾಲಯಗಳು. ಕೆರೆಯ ಏರಿಯ ಮೇಲೆ ಮೊದಲು ಸಿಗುವುದು ಅಂದಕೇಶ್ವರನ ಪಾಳುಬೀಳುತ್ತಿರುವ ಸನ್ನಿಧಿ. ಈ ದೇವಾಲಯದ ಸುತ್ತಲೂ ಮುಳ್ಳಿನ ಪೊದೆಗಳನ್ನು ರಾಶಿ ಹಾಕಲಾಗಿತ್ತು. ಅವುಗಳನ್ನು ದಾಟಿ ದೇವಾಲಯದ ಸಮೀಪ ತೆರಳುವುದಕ್ಕೆ ಹರಸಾಹಸ ಪಡಬೇಕಾಯಿತು.
ಇದೊಂದು ಅಪರೂಪದ ದ್ವಿಕೂಟ ದೇವಾಲಯ. ಒಂದು ಗರ್ಭಗುಡಿಯಲ್ಲಿ ಮಾತ್ರ ಶಿವಲಿಂಗವಿದ್ದು ಮತ್ತು ಈ ಗರ್ಭಗುಡಿಯ ಮೇಲಿನ ಗೋಪುರ ಮಾತ್ರ ಅಲ್ಪಸ್ವಲ್ಪ ಉಳಿದುಕೊಂಡಿದೆ. ಎರಡನೇ ಗರ್ಭಗುಡಿ ಖಾಲಿಯಾಗಿದ್ದು ಅದರ ಮೇಲಿನ ಗೋಪುರ ಎಂದೋ ಬಿದ್ದುಹೋಗಿದೆ. ಅಷ್ಟೇ ಅಲ್ಲದೆ ಈ ಗರ್ಭಗುಡಿಯ ಒಳಗೆ ನಿಧಿಯ ಆಸೆಗಾಗಿ ಅಗೆಯಲಾಗಿದೆ. ಕಾಲ ಗೋಪುರವನ್ನು ವಿನಾಶಿಸಿದರೆ ಮಾನವ ಗರ್ಭಗುಡಿಯನ್ನೇ ವಿರೂಪಗೊಳಿಸಿದ. (ಎರಡನೇ ಬಾರಿ ತೆರಳಿದಾಗ ಈ ಗರ್ಭಗುಡಿಯಲ್ಲಿ ಅಗೆಯಲಾಗಿದ್ದ ಗುಂಡಿಯನ್ನು ಮುಚ್ಚಿ ಸರಿಪಡಿಸಿ ಶಿವಲಿಂಗವನ್ನು ಸ್ಥಾಪಿಸಲಾಗಿತ್ತು!)
ದೇವಾಲಯದ ಪ್ರಮುಖ ದ್ವಾರ ನವರಂಗಕ್ಕೇ ತೆರೆದುಕೊಳ್ಳುತ್ತದೆ. ನವರಂಗದ ಎರಡೂ ಬದಿಗಳಲ್ಲಿ ದ್ವಾರರಹಿತ ಅಂತರಾಳಗಳು ಮತ್ತು ನಂತರ ಗರ್ಭಗುಡಿಗಳು. ನವರಂಗದಲ್ಲಿ ಅಲಂಕಾರಿಕ ಬಳ್ಳಿ ಕೆತ್ತನೆ ಮತ್ತು ಪ್ರಭಾವಳಿ ಕೆತ್ತನೆ ಇರುವ ನಾಲ್ಕು ಕಂಬಗಳಿವೆ. ಎರಡು ಕಂಬಗಳ ಪ್ರಭಾವಳಿ ಕೆತ್ತನೆ ಮಾತ್ರ ಉಳಿದುಕೊಂಡಿವೆ. ಈ ಕಂಬಗಳ ನಡುವೆ ಇರುವ ರಂಗಸ್ಥಳದಲ್ಲಿ ಕೂಡಾ ಅಗೆದು ಹಾಕಲಾಗಿದೆ.
ಎರಡೂ ಗರ್ಭಗುಡಿಗಳೂ ಪಂಚಶಾಖಾ ದ್ವಾರಗಳನ್ನು ಮತ್ತು ಲಲಾಟದಲ್ಲಿ ಹೊರಚಾಚು ಗಜಲಕ್ಷ್ಮೀಯನ್ನು ಹೊಂದಿವೆ. ಪೂರ್ವದ ಗರ್ಭಗುಡಿಯ ಶಾಖೆಗಳ ಕೆತ್ತನೆಗಳೆಲ್ಲಾ ನಶಿಸಿಹೋಗಿವೆ. ಆದರೆ ಪಶ್ಚಿಮದ ಗರ್ಭಗುಡಿಯ ಶಾಖೆಗಳು ಉತ್ತಮ ಕೆತ್ತನೆಗಳನ್ನು ಹೊಂದಿವೆ. ಇಲ್ಲಿ ವಜ್ರತೋರಣ, ನಾಟ್ಯಗಾರರು ವಾದ್ಯಗಾರರು, ನಾಗದೇವರು, ಸ್ತಂಭ ಮತ್ತು ವಿವಿಧ ಪ್ರಾಣಿಗಳ ಕೆತ್ತನೆಗಳನ್ನು ಕಾಣಬಹುದು.
ತಳಭಾಗದಲ್ಲಿ ಮಾನವರೂಪದ ಐದು ಕೆತ್ತನೆಗಳಿವೆ. ಇವುಗಳಲ್ಲಿ ೩ ಹೆಣ್ಣುರೂಪದಲ್ಲಿದ್ದರೆ ಉಳಿದೆರಡು ಗಂಡುರೂಪದಲ್ಲಿವೆ. ಬಹಳ ಹಿಂದೆನೇ ಬಳಿಯಲಾಗಿರುವ ಸುಣ್ಣದ (ಈಗ ಸ್ವಲ್ಪ ಮಟ್ಟಿಗೆ ಅಳಿಸಿ ತೆಗೆಯಲಾಗಿದೆ) ಪ್ರಭಾವ ಕೆತ್ತನೆಗಳ ಅಂದವನ್ನು ಹಾಳುಗೆಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಪಶ್ಚಿಮದ ಗರ್ಭಗುಡಿಯ ಅಂತರಾಳದ ಮೇಲೆ ಒಂದು ಅದ್ಭುತ ಕೆತ್ತನೆಯಿದೆ. ಮಕರತೋರಣದಿಂದ ಅಲಂಕೃತಗೊಂಡ ತ್ರಿಮೂರ್ತಿಗಳ ಅಪೂರ್ವ ಮತ್ತು ವಿಶಿಷ್ಟ ಚಿತ್ರಣವನ್ನು ಇಲ್ಲಿ ತೋರಿಸಲಾಗಿದೆ. ಶಿವನನ್ನು ತಾಂಡವೇಶ್ವರನ ರೂಪದಲ್ಲಿ ತೋರಿಸಲಾಗಿದ್ದು, ಅಕ್ಕಪಕ್ಕದಲ್ಲಿ ವಾದ್ಯ ನುಡಿಸುವವರ ಕೆತ್ತನೆಯಿದೆ. ಶಿವನ ಬಲಭಾಗದಲ್ಲಿ ಹಂಸಪೀಠದ ಮೇಲೆ ಬ್ರಹ್ಮನಿದ್ದಾನೆ. ಎಡಭಾಗದಲ್ಲಿ ಗರುಡಪೀಠದ ಮೇಲಿರುವ ವಿಷ್ಣುವಿನ ಕೆತ್ತನೆಯೇ ವಿಶಿಷ್ಟವಾಗಿದೆ. ವಿಷ್ಣುವಿಗೂ ೩ ತಲೆಗಳಿರುವಂತೆ ತೋರಿಸಲಾಗಿದೆ. ಉಗ್ರನರಸಿಂಹನ ರೂಪದ ಎರಡು ಹೆಚ್ಚುವರಿ ತಲೆಗಳನ್ನು ವಿಷ್ಣುವಿಗೆ ನೀಡಲಾಗಿದೆ!
ಯಕ್ಷ ಮತ್ತು ಯಕ್ಷಿಯರನ್ನು ಇಕ್ಕೆಲಗಳಲ್ಲಿರುವ ಎರಡೂ ಮಕರಗಳ ಮೇಲೆ ತೋರಿಸಲಾಗಿದೆ. ತ್ರಿಮೂರ್ತಿಗಳ ಮೇಲ್ಭಾಗದಲ್ಲಿ ಅಷ್ಟದಿಕ್ಪಾಲಕರನ್ನು ತಮ್ಮ ತಮ್ಮ ವಾಹನಗಳ ಸಮೇತ ತೋರಿಸಲಾಗಿದೆ. ಈ ಕೆತ್ತನೆಯ ಕೆಳಗೆ ೨-೩ ಸಾಲುಗಳಲ್ಲಿ ಬರೆದಿರುವ ಶಾಸನವಿದೆ. ಖಂಡಿತವಾಗಿಯೂ ಈ ಪಾಳುಬಿದ್ದ ದೇವಾಲಯದಲ್ಲಿ ಇಂತಹ ಸುಂದರ ಕಲಾಕೃತಿಯನ್ನು ನಾನು ನಿರೀಕ್ಷಿಸಿರಲಿಲ್ಲ.
ಅಂದಕೇಶ್ವರನ ಪ್ರಮುಖ ದ್ವಾರ ಬಹಳ ಸುಂದರವಾಗಿದ್ದು ವಿಶಿಷ್ಟ ಕೆತ್ತನೆಗಳುಳ್ಳ ಐದು ತೋಳುಗಳನ್ನು ಹೊಂದಿದೆ. ದ್ವಾರದ ತಳಭಾಗದಲ್ಲಿ ಇಕ್ಕೆಲಗಳಲ್ಲಿ ತೋಳಿಗೊಂದರಂತೆ ಮಾನವರೂಪದ ಐದು ಕೆತ್ತನೆಗಳಿವೆ. ಇವುಗಳ ಮೇಲೆ ವಜ್ರತೋರಣ, ನಾಟ್ಯಗಾರರು ವಾದ್ಯಗಾರರು, ನೃತ್ಯ ಮಾಡುತ್ತಿರುವ ಜೋಡಿ, ಸ್ತಂಭ ಮತ್ತು ಬಳ್ಳಿಕೆತ್ತನೆಗಳನ್ನು ಕಾಣಬಹುದು.
ಸ್ವಲ್ಪ ಹಾನಿಗೊಳಗಾಗಿದ್ದರೂ ಲಲಾಟದಲ್ಲಿರುವ ಗಜಲಕ್ಷ್ಮೀಯ ಕೆತ್ತನೆಯನ್ನು ನೋಡುವುದೇ ಚಂದ. ಗಜಲಕ್ಷ್ಮೀಯ ಕೆತ್ತನೆಯಲ್ಲಿ ನಾಲ್ಕು ಆನೆಗಳನ್ನು ತೋರಿಸಲಾಗಿದೆ. ಇಕ್ಕೆಲಗಳಲ್ಲಿ ಅಷ್ಟದಿಕ್ಪಾಲಕರನ್ನು ಕಾಣಬಹುದು. ದೇವಾಲಯದ ಸ್ಥಿತಿಗೆ ಹೋಲಿಸಿದರೆ ಪ್ರಮುಖ ದ್ವಾರದ ಈ ಸುಂದರ ಶಿಲ್ಪಕಲೆ ಇನ್ನೂ ಉಳಿದಿರುವುದೇ ಸೋಜಿಗ.
ಪಶ್ಚಿಮದ ಗರ್ಭಗುಡಿಯ ಹೊರಗೋಡೆ ಮಾತ್ರ ಉಳಿದುಕೊಂಡಿದೆ. ಪೂರ್ವದ ಗರ್ಭಗುಡಿಯ ಹೊರಗೋಡೆ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ. ಇದೇ ಕಾರಣದಿಂದ ಹೊರಗಿನಿಂದ ನೋಡಿದಾಗ ಇದೊಂದು ಏಕಕೂಟ ದೇವಾಲಯವೆಂದೇ ನಾನು ತಿಳಿದುಕೊಂಡಿದ್ದೆ. ಒಳಗೆ ತೆರಳಿದ ಬಳಿಕವೇ ದ್ವಿಕೂಟ ದೇವಾಲಯವೆಂದು ಅರಿವಾದದ್ದು!
ಅಂದಕೇಶ್ವರ ದೇವಾಲಯದ ಇನ್ನೊಂದು ಪ್ರಮುಖ ವೈಶಿಷ್ಟ್ಯವೆಂದರೆ ದೇವಾಲಯ ನಿರ್ಮಾಣಕ್ಕೆ ಬಳಸಲಾದ ಎಲ್ಲಾ ಕಲ್ಲುಗಳ ಮೇಲೆ ಶಿಲ್ಪಿಗಳು ತಮ್ಮ ಹೆಸರನ್ನು ಬರೆದಿರುವುದು.