ಗುರುವಾರ, ಸೆಪ್ಟೆಂಬರ್ 27, 2012

ವೀರಭದ್ರ ದೇವಾಲಯ - ನೇರಲಿಗೆ


ನೇರಲಿಗೆಯಲ್ಲಿ ವೀರಭದ್ರ ದೇವಾಲಯವಿರುವ ಮಾಹಿತಿಯೇನೋ ಸಿಕ್ಕಿತು. ಆದರೆ ಇದು ಪ್ರಾಚೀನ ದೇವಾಲಯವೋ ಎಂಬುವುದರ ಬಗ್ಗೆ ಮಾಹಿತಿ ದೊರಕಲಿಲ್ಲ. ಆರು ವರ್ಷಗಳ ಹಿಂದೆ ನೇರಲಿಗೆಯಿಂದ ಕೇವಲ ಒಂದು ಕಿಮಿ ದೂರದಲ್ಲಿ ಹಾದುಹೋಗಿದ್ದೆ. ಅಂದು ಊರಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಇಂದು ಮಾಹಿತಿಯಿದ್ದು ಮತ್ತೆ ಊರಿನ ಸಮೀಪದಿಂದ ಹಾದುಹೋಗುವವನಿದ್ದೆ. ನೇರಲಿಗೆಗೆ ಹೋಗಬೇಕಾದರೆ ನನ್ನ ನಿಗದಿತ ಹಾದಿಯಿಂದ ಸುಮಾರು ೨೫ ಕಿಮಿ ದೂರ ಕ್ರಮಿಸಿ ನಂತರ ಮತ್ತೆ ೧೮ ಕಿಮಿ ವಾಪಾಸು ಬಂದು ನಿಗದಿತ ದಾರಿಯನ್ನು ಸೇರಬೇಕಾಗಿತ್ತು. ಸಮಯದ ಅಭಾವ ಕಾಡುತ್ತಿದ್ದರೂ, ಮತ್ತೊಮ್ಮೆ ನೇರಲಿಗೆಯ ಸಮೀಪ ನಾನು ಬರುವ ಸಾಧ್ಯತೆಗಳು ಬಹಳ ಕಡಿಮೆ ಎಂದು ಅರಿತು ವೀರಭದ್ರನನ್ನು ನೋಡೇಬಿಡೋಣವೆಂದು ನಿರ್ಧರಿಸಿದೆ. ಒಂದು ವೇಳೆ ಇದು ಪ್ರಾಚೀನ ದೇವಾಲಯವಾಗಿರದಿದ್ದಲ್ಲಿ ಅಲ್ಲಿವರೆಗೆ ಬಂದದ್ದು ವ್ಯರ್ಥವಾಗಲಿದೆ ಎಂಬ ಯೋಚನೆಯೇ ನನ್ನನ್ನು ಕಾಡುತ್ತಿತ್ತು.


ನೇರಲಿಗೆಯಲ್ಲಿ ಮಠದಂತೆ ತೋರುವ ಕಟ್ಟಡವನ್ನು ದಾಟಿ ಸ್ವಲ್ಪ ಮುಂದೆ ಮನೆಯೊಂದರಲ್ಲಿ ಕೇಳಿದರೆ ಆ ಮನೆಯವರು ಅದೇ ಕಟ್ಟಡದತ್ತ ತೋರಿಸಿ ಅದೇ ವೀರಭದ್ರ ದೇವಾಲಯವೆಂದು ಹೇಳಿದಾಗ ಭಾರಿ ನಿರಾಸೆಯಾಯಿತು. ವಿನಾಕಾರಣ ಸಮಯ ವ್ಯರ್ಥವಾಯಿತಲ್ಲ ಎಂದು ಅಲ್ಲಿವರೆಗೆ ಬರುವ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ನನ್ನನ್ನೇ ಶಪಿಸುತ್ತಾ, ಬಂದದಕ್ಕಾದರೂ ನೋಡಿಬರೋಣವೆಂದು ದೇವಾಲಯದ ಒಳಗೆ ತೆರಳಿದೆ.


ನೆಲಕ್ಕೆ ಮಾರ್ಬಲ್ ಹಾಕಿದ್ದ ಚೌಕಾಕಾರದ ಹಜಾರದಂತಹ ಕೋಣೆಯನ್ನು ದಾಟಿದ ಕೂಡಲೇ ಅಂತರಾಳ ಮತ್ತು ಅಲ್ಲಿಂದಲೇ ಗರ್ಭಗುಡಿಯಲ್ಲಿರುವ ವೀರಭದ್ರನ ದರ್ಶನ. ಗರ್ಭಗುಡಿಯ ದ್ವಾರಕ್ಕೆ ಬೆಳ್ಳಿಯ ಲೇಪನ ಮಾಡಿದಂತೆ ಬಣ್ಣ ಸಾರಲಾಗಿತ್ತು. ವಿದ್ಯುತ್ ನಾನು ಬಂದ ಸಮಯ ನೋಡಿಯೇ ಕೈಕೊಟ್ಟಿತ್ತು. ಕತ್ತಲಲ್ಲಿ ನಾಲ್ಕಾರು ಚಿತ್ರಗಳನ್ನು ತೆಗೆದು, ಸರಿಯಾಗಿ ಬಂದವೋ ಎಂದು ಪರೀಕ್ಷಿಸಬೇಕಾದರೆ ಒಂದೆರಡು ವೈಶಿಷ್ಟ್ಯಗಳು ಕಂಡುಬಂದವು.


ಒಂದೇ ದ್ವಾರದಲ್ಲಿ ಗಜಲಕ್ಷ್ಮೀಯ ಎರಡು ಕೆತ್ತನೆಗಳಿರುವುದು ಗಮನ ಸೆಳೆಯಿತು. ದ್ವಾರದ ಲಲಾಟದಲ್ಲಿ ಯಕ್ಷ ಮತ್ತು ಯಕ್ಷಿಯರಿಂದ ಸುತ್ತುವರಿದ ಗಜಲಕ್ಷ್ಮೀಯಿದೆ. ದ್ವಾರದ ಮೇಲಿರುವ ಅಡ್ಡಪಟ್ಟಿಯಲ್ಲಿ ಮಕರತೋರಣದಿಂದ ಅಲಂಕೃತ ಗಜಲಕ್ಷ್ಮೀಯ ಇನ್ನೊಂದು ಕೆತ್ತನೆಯಿದ್ದು ಇದು ಲಲಾಟದಲ್ಲಿರುವ ಗಜಲಕ್ಷ್ಮೀಗಿಂತ ದೊಡ್ಡದಿದೆ. ಎರಡು ಗಜಲಕ್ಷ್ಮೀಗಳ ನಡುವೆ ಪ್ರಾಣಿಗಳ (ಪಕ್ಷಿಗಳ?) ಸಾಲೊಂದನ್ನು ಕೆತ್ತಲಾಗಿದೆ. ಅವು ಪ್ರಾಣಿಗಳೋ ಪಕ್ಷಿಗಳೋ ಎಂದೇ ಗೊತ್ತಾಗಲಿಲ್ಲ. ಡೈನೋಸಾರ್ ತರಹ ಕಾಣುತ್ತಿದ್ದವು. ಗರ್ಭಗುಡಿಯ ದ್ವಾರಕ್ಕೆ ಜಾಲಂಧ್ರಗಳಿದ್ದು ದ್ವಾರಪಾಲಕರೂ ಇದ್ದಾರೆ.


ಅಂತರಾಳದಲ್ಲಿ ವೀರಭದ್ರನತ್ತ ಮುಖ ಮಾಡಿ ಸಾಷ್ಟಾಂಗ ನಮಸ್ಕಾರ ಮಾಡುವ ಭಂಗಿಯಲ್ಲಿ ವ್ಯಕ್ತಿಯೊಬ್ಬನ ಉಬ್ಬುಶಿಲ್ಪವಿದೆ. ಅಲ್ಲಿನವರಿಗೆ ಅದರ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ. ತಂಡಗದ ಚನ್ನಕೇಶವ ದೇವಾಲಯದಲ್ಲೂ ಇದೇ ತರಹದ ಉಬ್ಬುಶಿಲ್ಪವಿದ್ದು ಅದು ದೇವಾಲಯದ ಹೊರಗೆ ಇದೆ. ಅಂತರಾಳದ ದ್ವಾರಕ್ಕೆ ಒರಗಿಕೊಂಡು ಮಹಿಷಮರ್ದಿನಿಯ ಕೆತ್ತನೆಯೊಂದನ್ನು ಇರಿಸಲಾಗಿದೆ.


’ಇನ್ನೇನು, ಎಲ್ಲಾ ನೋಡಿ ಆಯಿತು’ ಎಂದು ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ಅಲ್ಲಿದ್ದ ಒಬ್ಬರು, ’ಅವ್ರಿಗೆ(ನನಗೆ) ಈಶ್ವರನ ಗುಡಿ ತೋರಿಸ್ಲಿಲ್ಲೇನ್ರಿ..’ ಎಂದು ಅರ್ಚಕರನ್ನು ಕೇಳಿದರು. ’ಇಲ್ಲೆಲ್ಲಿ ಈಶ್ವರನ ಗುಡಿ’ ಎಂದು ನಾನು ನಿರುತ್ಸಾಹದಿಂದ ಆಕಡೆ ಈಕಡೆ ನೋಡುತ್ತಿರಬೇಕಾದರೆ ಆ ವ್ಯಕ್ತಿ ನನ್ನನ್ನು ಮತ್ತೆ ವೀರಭದ್ರ ದೇವಾಲಯದೊಳಗೆ ಕರೆದೊಯ್ದರು!


ಈಗ ಬಂತು ನೋಡಿ ದೇವಾಲಯ ನೋಡುವ ಅಸಲಿ ಮಜಾ. ವೀರಭದ್ರನ ಗರ್ಭಗುಡಿಯ ಸ್ವಲ್ಪ ಮೊದಲು ಎಡಭಾಗದಲ್ಲಿರುವ ತೆರೆದ ಜಾಗದಲ್ಲಿ ನುಸುಳಿದರೆ ಅಲ್ಲಿ ಈಶ್ವರನ ದೇವಾಲಯ! ಕತ್ತಲಲ್ಲಿ ಏನೂ ಕಾಣುತ್ತಿರಲಿಲ್ಲ. ದೇವಾಲಯದ ಬಾಗಿಲು ತೆರೆದಾಗಷ್ಟೇ ಅಲ್ಲಿನ ದೃಶ್ಯ ಅನಾವರಣಗೊಂಡಿತು. ವೀರಭದ್ರ ದೇವಾಲಯ ಪಶ್ಚಿಮಾಭಿಮುಖವಾಗಿದ್ದರೆ, ಈಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನೊಳಗೊಂಡಿದೆ.


ನವರಂಗದಲ್ಲಿ ನಾಲ್ಕು ಕಂಬಗಳಿದ್ದು ಅವುಗಳಿಗೆ ನೀಲಿ ಬಣ್ಣ ಬಳಿಯಲಾಗಿದೆ. ಈ ನಾಲ್ಕು ಕಂಬಗಳ ನಡುವೆ ಎರಡು ನಂದಿಗಳನ್ನು ಒಂದು ಕಾಂಕ್ರೀಟ್ ಪೀಠದ ಮೇಲೆ ಇರಿಸಲಾಗಿದೆ.


ನವರಂಗದಲ್ಲಿರುವ ೬ ದೇವಕೋಷ್ಠಗಳಲ್ಲಿ ಮಹಿಷಮರ್ದಿನಿ, ಬ್ರಹ್ಮ, ಸಪ್ತಮಾತೃಕೆಯರು ಹಾಗೂ ನಾಗದೇವರು, ಸರಸ್ವತಿ, ಲಕ್ಷ್ಮೀನರಸಿಂಹ ಮತ್ತು ದೇವಿಯೊಬ್ಬಳ(ಯಾವ ದೇವಿ ಎಂದು ತಿಳಿಯಲಿಲ್ಲ) ಮೂರ್ತಿಗಳನ್ನು ಇರಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ ಈ ೬ ಮೂರ್ತಿಗಳು ಭಗ್ನಗೊಂಡಿಲ್ಲ. ಆದರೆ ಬಿಳಿ ಪಾಚಿಯ ಹಾವಳಿಗೆ ಮತ್ತು ಊರವರ ತೈಲ ಅಭಿಷೇಕಗಳಿಗೆ ಸಿಲುಕಿ ನೈಜ ರೂಪವನ್ನು ಕಳಕೊಂಡಿವೆ. ಇವನ್ನು ಸ್ವಚ್ಛಗೊಳಿಸಿ ಮತ್ತೆ ನಳನಳಿಸುವಂತೆ ಮಾಡಿದರೆ ಅವುಗಳ ಅಂದಕ್ಕೆ ಸಾಟಿಯೇ ಇರದು.


ಪಂಚಶಾಖ ಶೈಲಿಯ ಅಂತರಾಳದ ದ್ವಾರಕ್ಕೆ ಬೆಳ್ಳಿಯ ಬಣ್ಣದ ಲೇಪನ ಮಾಡಲಾಗಿದೆ. ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಇಲ್ಲಿ ಗಜಲಕ್ಷ್ಮೀಗೆ ಚಾಮರ ಬೀಸುತ್ತಿರುವ ಪರಿಚಾರಿಕೆಯರನ್ನೂ ತೋರಿಸಿರುವುದು ವಿಶೇಷ. ದ್ವಾರದ ಶಾಖೆಗಳಲ್ಲಿ ಕ್ರಮವಾಗಿ ಚೌಕವಜ್ರತೋರಣ, ಬಳ್ಳಿಸುರುಳಿ, ಸ್ತಂಭ, ಸಂಗೀತಗಾರರು ನರ್ತಕಿಯರು ಮತ್ತು ಅಂಕು ಡೊಂಕು ಬಳ್ಳಿಯನ್ನು ಕೆತ್ತಲಾಗಿದೆ.


ನಾಲ್ಕನೇ ಶಾಖೆಯನ್ನು ಜಾಲಂಧ್ರವನ್ನಾಗಿಯೂ ಪರಿವರ್ತಿಸಿದ ಶಿಲ್ಪಿಯ ನೈಪುಣ್ಯತೆಯನ್ನು ಗಮನಿಸಿ. ವೃತ್ತದೊಳಗೆ ಸಂಗೀತಗಾರರನ್ನು ಮತ್ತು ನರ್ತಕಿಯರನ್ನು ಅದ್ಭುತವಾಗಿ ಕೆತ್ತಿದ ಬಳಿಕ ಅಳಿದುಳಿದ ಜಾಗವನ್ನೇ ಜಾಲಂಧ್ರದ ರೂಪದಲ್ಲಿ ಬಳಸಲು ಅನುವು ಮಾಡಿಕೊಟ್ಟಿದ್ದಾನೆ.


ಈ ನಾಲ್ಕನೇ ಶಾಖೆಯು ಹಾಗೇ ಮೇಲಕ್ಕೆ ಮುಂದುವರಿದು ದ್ವಾರದ ಮೇಲಿನ ಆಡ್ಡಪಟ್ಟಿಯಾಗಿರುವುದನ್ನು ಕಾಣಬಹುದು. ಇಲ್ಲಿ ನಡುವೆ ಶಿವನ ತಾಂಡವನೃತ್ಯದ ಕೆತ್ತನೆಯಿದ್ದು ಇಕ್ಕೆಲಗಳಲ್ಲಿ ತಲಾ ೩ ಕೆತ್ತನೆಗಳಿವೆ. ಅವೇನೆಂದು ತಿಳಿಯಲಿಲ್ಲ. ಶಾಖೆಗಳ ತಳಭಾಗದಲ್ಲಿ ತ್ರಿಶೂಲ, ಢಮರುಗ ಮತ್ತು ಗದಾಧಾರಿಯಾಗಿರುವ ಶಿವನ ಮಾನವ ರೂಪವನ್ನು ತೋರಿಸಲಾಗಿದೆ. ಶಿವನ ಬಳಿಯಲ್ಲಿ ಇರುವುದು ಪಾರ್ವತಿ ಇರಬಹುದು. ಪಾರ್ವತಿಯ ನಂತರ ಇರುವ ಕೆತ್ತನೆ ಯಾರದೆಂದು ಗೊತ್ತಾಗಲಿಲ್ಲ.


ಗರ್ಭಗುಡಿಯಲ್ಲಿ ಸುಂದರ ಪಾಣಿಪೀಠದ ಮೇಲೆ ಆಕರ್ಷಕ ಶಿವಲಿಂಗವಿದೆ. ಗರ್ಭಗುಡಿಯ ದ್ವಾರಕ್ಕೆ ಚಿನ್ನದ ಬಣ್ಣದ ಲೇಪನ ಮಾಡಲಾಗಿದೆ. ಈ ದ್ವಾರವು ಪಂಚಶಾಖ ತರಹದಾಗಿದ್ದು ಕೊನೆಯ ಎರಡು ಶಾಖೆಗಳ ಕೆತ್ತನೆ ಅಳಿಸಿಹೋಗಿದೆ ಅಥವಾ ಅವುಗಳ ಮೇಲೆ ಏನನ್ನೂ ಕೆತ್ತದೆ ಹಾಗೇ ಬಿಟ್ಟಿರಬಹುದು. ಮೊದಲ ಮೂರು ಶಾಖೆಗಳಲ್ಲಿ ಚೌಕವಜ್ರತೋರಣ, ಬಳ್ಳಿಸುರುಳಿ ಮತ್ತು ಸ್ತಂಭವನ್ನು ಕೆತ್ತಲಾಗಿದೆ.


ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಯಾರಿದ್ದಾನೆ ನೋಡಿ.... ಗಣೇಶ! ಅದು ಕೂಡಾ ಚಾಮರಧಾರಿ ಪರಿಚಾರಿಕೆಯರೊಂದಿಗೆ. ಇದನ್ನು ನೋಡಿ ಅಚ್ಚರಿ, ಸೋಜಿಗ ಮತ್ತು ಆನಂದ ಎಲ್ಲವೂ ಒಟ್ಟಿಗೆ ಆಯಿತು. ಗಣೇಶ ಲಲಾಟದಲ್ಲಿ ಹೀಗೆ ಏಕಮಾತ್ರವಾಗಿ ಪ್ರತ್ಯೇಕವಾಗಿ ಕಾಣಬರುವುದು ಬಹಳ ಅಪರೂಪ ಎಂದೇ ನನ್ನ ಭಾವನೆ.


ವೀರಭದ್ರನ ಗರ್ಭಗುಡಿಯ ಮೇಲೆ ದೊಡ್ಡ ಗೋಪುರವಿದ್ದರೆ ಈಶ್ವರನ ಗರ್ಭಗುಡಿಯ ಮೇಲೆ ಸಣ್ಣ ಗೋಪುರವೊಂದಿದೆ. ಈ ಗೋಪುರಗಳನ್ನು ನಂತರ ನಿರ್ಮಿಸಿದಂತೆ ತೋರುತ್ತದೆ. ದೇವಾಲಯದ ಹೊರಗೋಡೆಯಲ್ಲಿ ಕೆಲವು ಗೋಪುರಗಳನ್ನು ಕೆತ್ತಲಾಗಿದೆ ಮತ್ತು ಪಾರ್ಶ್ವಕ್ಕೊಂದರಂತೆ ಇರುವ ಎರಡು ದೇವಕೋಷ್ಠಗಳು ಖಾಲಿ ಇದ್ದು ಗೋಪುರದಿಂದ ಅಲಂಕೃತಗೊಂಡಿವೆ.


ಈಶ್ವರ ದೇವಾಲಯದ ಪ್ರಮುಖ ದ್ವಾರದ ಮೇಲಿರುವ ಗಜಲಕ್ಷ್ಮೀಯ ಕೆತ್ತನೆ ನಶಿಸಿಹೋಗಿದೆ. ಇದು ಬಹಳ ಅಲಂಕೃತ ಕೆತ್ತನೆಯಾಗಿದ್ದನ್ನು ಕಾಣಬಹುದು. ಗಜಲಕ್ಷ್ಮೀಯ ಎಡಭಾಗದಲ್ಲಿ ಇನ್ನೊಂದು ಆನೆ ಸೊಂಡಿಲಿನಲ್ಲಿ ಪಾತ್ರೆಯೊಂದನ್ನು ಹಿಡಿದು ಸೇವೆಗೆ ಅಣಿಯಾಗಿ ನಿಂತಿರುವುದನ್ನು ಕಾಣಬಹುದು. ಅಲ್ಲಿ ಇಬ್ಬರು ಪರಿಚಾರಿಕೆಯನ್ನೂ ತೋರಿಸಲಾಗಿದೆ. ಮಕರವನ್ನೂ ಕೆತ್ತಲಾಗಿದ್ದು ಅದರ ಹಿಂದೆ ಹೆಂಗಸೊಬ್ಬಳನ್ನು ತೋರಿಸಲಾಗಿದೆ. ಬಲಭಾಗದಲ್ಲಿಯೂ ಇದೇ ರೀತಿ ಕೆತ್ತನೆಯಿದ್ದು ಅದು ಸಂಪೂರ್ಣವಾಗಿ ನಶಿಸಿರುವುದನ್ನು ಕಾಣಬಹುದು. ನಾಲ್ಕು ಆನೆಗಳು, ಆರು ಪರಿಚಾರಿಕೆಯರು, ಎರಡು ಮಕರಗಳು ಮತ್ತು ಆಭರಣಧಾರಿಣಿ ಗಜಲಕ್ಷ್ಮೀ! ಇಷ್ಟು ಅಲಂಕೃತ ಗಜಲಕ್ಷ್ಮೀ ಕಾಣಬರುವುದು ಬಹಳ ವಿರಳ. ಈ ಅಮೋಘ ಕೆತ್ತನೆ ಹಾನಿಯಾಗದೇ ಉಳಿದಿದ್ದರೆ ಕಣ್ತುಂಬಾ ಸವಿಯಬಹುದಿತ್ತು.


ಒಂದೇ ಕಟ್ಟಡದೊಳಗೆ ವಿರುದ್ಧ ದಿಕ್ಕಿಗೆ ಮುಖ ಮಾಡಿ ಎರಡು ದೇವಾಲಯಗಳಿರುವುದು ಅಪರೂಪವಿರಬಹುದು. ಈಶ್ವರ ದೇವಾಲಯ ಅಚ್ಚರಿಗಳ ಸರಮಾಲೆಯನ್ನೇ ನನಗೆ ನೀಡಿತು. ನೇರಲಿಗೆಗೆ ಬರುವ ನಿರ್ಧಾರ ಮಾಡಿದ್ದು ಒಳ್ಳೆಯದಾಯಿತು. ಎಲ್ಲೂ ಕಾಣದ ಕೆಲವು ವೈಶಿಷ್ಟ್ಯಗಳನ್ನು ಈ ಜೋಡಿ ದೇವಾಲಯಗಳಲ್ಲಿ ಕಾಣುವ ಭಾಗ್ಯ ನನ್ನದಾಯಿತು. ಈ ದೇವಾಲಯದ ಅಭಿವೃದ್ಧಿಗಾಗಿ ಒಂದು ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯನ್ನು ಸರಕಾರ ಈ ತಿಂಗಳು ಹೊರಡಿಸಿದೆ.

ಮಂಗಳವಾರ, ಸೆಪ್ಟೆಂಬರ್ 18, 2012

ಸಿದ್ಧೇಶ್ವರ ದೇವಾಲಯ - ಕಲ್ಲೂರ


ಕಲ್ಲೂರಿನಲ್ಲಿ ಅನತಿ ದೂರದಲ್ಲೇ ಕಾಣುತ್ತಿದ್ದ ಬಿಳಿ-ನಸುಗೆಂಪು ಬಣ್ಣಗಳ ಬೆಟ್ಟಗಳ ಸಾಲಿನತ್ತ ದಾರಿ ಸಾಗುತ್ತಿತ್ತು. ಈ ಕಣಿವೆಯಲ್ಲಿ ಬೆಟ್ಟಗಳ ನೋಟವೇ ಚಂದ. ಬೆಟ್ಟದ ಬುಡದಲ್ಲೇ ಅಪಾರ ಸಂಖ್ಯೆಯ ವೃಕ್ಷಗಳ ನಡುವೆ ಸಿದ್ಧೇಶ್ವರ ನೆಲೆಗೊಂಡಿದ್ದಾನೆ. ದೇವಾಲಯವು ಸಂಪೂರ್ಣವಾಗಿ ಆಧುನೀಕರಣಗೊಂಡಿದ್ದು ಗ್ರಾನೈಟ್ ಹಾಸಿತ ಮುಖಮಂಟಪ, ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿದೆ. ಚಾಲುಕ್ಯ ಕಾಲದ, ಚನ್ನಬಸವೇಶ್ವರರು ನಿರ್ಮಿಸಿದ ದೇವಾಲಯವಿದೆಂದು ನಂಬಲಾಗಿದೆ. ಕೆಂಪು, ಹಸಿರು, ಬಿಳಿ, ಹಳದಿ ಹೀಗೆ ಸಿಕ್ಕ ಎಲ್ಲಾ ಬಣ್ಣಗಳಿಂದ ದೇವಾಲಯವನ್ನು ’ಅಲಂಕರಿಸಲಾಗಿದೆ’.


ಬಹಳ ಪ್ರಶಾಂತ ವಾತಾವರಣವನ್ನು ಹೊಂದಿರುವ ಈ ಸ್ಥಳವು ಏಕಾಂತ ಬಯಸುವವರಿಗೆ ಪ್ರಶಸ್ತ ಸ್ಥಳ. ಬಹಳಷ್ಟು ಮುನಿಗಳು ಇಲ್ಲಿ ತಪಸ್ಸು ಮಾಡಿದ್ದಾರೆ ಎಂದೂ ನಂಬಲಾಗಿದೆ. ’ಕಲ್ಯಾಣ ಬಸಪ್ಪನ ಕಲ್ಲು’ ಎಂಬ ಹೆಸರಿನ ಕಲ್ಲೊಂದು ಇಲ್ಲಿದೆ. ನಮ್ಮ ಮನದಾಸೆಯನ್ನು ಮನದಲ್ಲೇ ನೆನೆಸಿ ಈ ಕಲ್ಲನ್ನು ಎತ್ತಲು ಪ್ರಯತ್ನಿಸಬೇಕು. ಮನದಾಸೆ ಪೂರೈಸುವುದಾದರೆ ನಮ್ಮಿಂದ ಆ ಕಲ್ಲನ್ನು ಎತ್ತಲು ಸಾಧ್ಯ. ಇಲ್ಲವಾದರೆ ಎತ್ತಲು ಆಗುವುದಿಲ್ಲ. ಇದನ್ನೆಲ್ಲಾ ನಂಬದಿದ್ದರೂ ಪ್ರಯತ್ನಿಸೋಣವೆಂದು ಆ ಕಡೆ ಹೆಜ್ಜೆ ಹಾಕಿದರೆ ಅಲ್ಲಿ ಅದಾಗಲೇ ಜನರು ತುಂಬಿಹೋಗಿದ್ದರು. ಪ್ರವಾಸಕ್ಕೆಂದು ಬಂದಿದ್ದ ಶಾಲಾ ಮಕ್ಕಳು, ಅವರ ಮಾಸ್ತರರು, ಅಕ್ಕವ್ರು, ಇತರ ಪ್ರವಾಸಿಗರು ಹೀಗೆ ಬಹಳಷ್ಟು ಜನರು ಅಲ್ಲಿದ್ದರಿಂದ ಅಲ್ಲಿಂದ ದೂರಸರಿದೆ.


ದೇವಾಲಯಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದ ಸಾಧುವೊಬ್ಬರು (ನಾವು ಅಲ್ಲಿಂದ ಹಿಂತಿರುಗುವವರೆಗೂ ಇವರು ಪ್ರದಕ್ಷಿಣೆ ಹಾಕುತ್ತಲೇ ಇದ್ದರು) ’ಮ್ಯಾಲ್ ಹೋಗಿ ಕಾಲ್ ತೊಳ್ಕೊಂಡ್ ಬಂದು ದ್ಯಾವ್ರ ದರ್ಶನ ಮಾಡ್ರಿ’ ಎಂದಾಗ, ಈ ’ಮ್ಯಾಲ’ ಎಂದರೆ ಎಲ್ಲಿ ಎಂದು ತಿಳಿಯದಾಯಿತು. ಬೆಟ್ಟದ ಮೇಲೋ, ಬಲಕ್ಕೋ, ಎಡಕ್ಕೋ ಎಂದು ಆಚೀಚೆ ನೋಡುತ್ತಿರಬೇಕಾದರೆ ದೇವಾಲಯದ ಹಿಂಭಾಗದಲ್ಲಿ ಎಡಕ್ಕೆ ಮೆಟ್ಟಿಲುಗಳು ಕಾಣಿಸಿದವು.


ಮೆಟ್ಟಿಲುಗಳನ್ನು ಸಮೀಪಿಸಿದಂತೆ ರಭಸವಾಗಿ ನೀರು ಬೀಳುವ ಶಬ್ದ. ಶಬ್ದ ಮಾತ್ರ ಎಲ್ಲಿಂದ ಹೊರಹೊಮ್ಮುತ್ತಿತ್ತು ಎಂದು ಗೊತ್ತಾಗುತ್ತಿರಲಿಲ್ಲ. ಸುಮಾರು ಹದಿನೈದು ಮೆಟ್ಟಿಲುಗಳನ್ನು ಹತ್ತಿದ ಬಳಿಕ ಸಣ್ಣ ಕಮಾನು. ಈಗ ನೀರು ಬೀಳುವ ಶಬ್ದ ಇನ್ನೂ ಜೋರಾಗಿ ಬಹಳ ಸಮೀಪ ಇದ್ದಂತೆ ಕೇಳುತ್ತಿದ್ದರೂ, ಕಾಣುತ್ತಿರಲಿಲ್ಲ. ಬಲಭಾಗದಲ್ಲಿ ನೋಡಿದರೆ ಬೆಟ್ಟ ಕೊರೆದು ಬೃಹದಾಕಾರದ ಗುಹೆಯೊಂದು ಸ್ವಾಭಾವಿಕವಾಗಿ ನಿರ್ಮಿತಗೊಂಡಿದೆ. ಮೇಲಕ್ಕೆ ದೊಡ್ಡ ಗೋಡೆಯಂತೆ ಎತ್ತರಕ್ಕೆ ನಿಂತಿರುವ ಬೆಟ್ಟ. ಕಮಾನಿನ ನಂತರ ಇನ್ನೊಂದೈದು ಮೆಟ್ಟಿಲುಗಳು. ಬೆಟ್ಟದ ಬುಡಕ್ಕೇ ಬಂದು ನಿಂತದ್ದಾಯಿತು. ಮುಂದೆನೇ ಸಣ್ಣ ಗುಹೆಯಾಕಾರದ ರಚನೆ. ಆ ಗುಹೆಯೊಳಗಿನಿಂದ ನೀರು ಹರಿದು ಬರುತ್ತಿತ್ತು. ನೀರು ಬೀಳುವ ಶಬ್ದ ಮಾತ್ರ ಇನ್ನೂ ಜೋರಾಗಿ ಕೇಳುತ್ತಿತ್ತು. ನೀರು ಹರಿದುಬರುವಲ್ಲಿ ಸ್ವಲ್ಪ ಇಣುಕಿ ನೋಡಿದರೆ ವಿಸ್ಮಯ!


ಅಲ್ಲೊಂದು ದಪ್ಪನೆಯ ಬೇರು ಬೆಟ್ಟದ ನಡುವನ್ನೇ ಸೀಳಿ ಕೆಳಗಿಳಿದುಬಂದಿದೆ. ಈ ಬೇರು ಇಳಿದುಬಂದಿರುವ ರಂಧ್ರದಿಂದಲೇ ನೀರು ರಭಸದಿಂದ ಹೊರಹೊಮ್ಮುತ್ತ ಸುಮಾರು ೧೦ ಅಡಿ ಎತ್ತರದಿಂದ ಬೀಳುತ್ತಾ ದೊಡ್ಡ ಶಬ್ದವನ್ನು ಮಾಡುತ್ತಿತ್ತು. ಮೇಲಕ್ಕಂತೂ ಮೈಲುಗಟ್ಟಲೆ ಹಬ್ಬಿಕೊಂಡಿರುವ ಬೋಳು ಬೆಟ್ಟ. ಆ ನೀರಿನ ಮೂಲವೇ ಒಂದು ವಿಚಿತ್ರ (ನಂತರ ಆ ಸಾಧುವಿನ ಬಳಿ ಕೇಳಿದರೆ ’ಸಿದ್ಧೇಶ್ವರನ ಮಹಿಮೆ’ ಎಂದರು). ನೀರಂತೂ ಅದೆಷ್ಟು ತಂಪಾಗಿತ್ತೆಂದರೆ ನಂಬುವುದು ಅಸಾಧ್ಯ. ಆ ಬಿಸಿಲ ನಾಡಿನಲ್ಲಿ ಇದೊಂದು ವಿಸ್ಮಯವೇ ಸರಿ. ನೋಡಿದಷ್ಟೂ ನಂಬಲಾಗುತ್ತಿರಲಿಲ್ಲ. ಇದನ್ನು ಬಿಟ್ಟು ಅಲ್ಲಿ ಜನರು ಕಲ್ಲು ಎತ್ತಲು ಮುಗಿಬಿದ್ದಿದ್ದಾರಲ್ಲ ಎಂದೆನಿಸತೊಡಗಿತ್ತು. ಒಳ್ಳೆಯದೇ ಆಯಿತು. ಅರ್ಧ ಗಂಟೆಯಷ್ಟು ಅತ್ಯುತ್ತಮ ಸಮಯವನ್ನು ಪ್ರಕೃತಿಯ ಈ ವಿಸ್ಮಯವನ್ನು ನೋಡುತ್ತಾ ಕಳೆದೆ. ಇನ್ನೂ ವಿಚಿತ್ರವೆಂದರೆ ನಾನಲ್ಲಿರುವಷ್ಟು ಸಮಯ ಒಬ್ಬನೇ ಒಬ್ಬ ಅಲ್ಲಿಗೆ ಬರದೇ ಇದ್ದದ್ದು! ಎಲ್ಲರೂ ದೇವಾಲಯಕ್ಕೆ ಬರುವುದು, ಕಲ್ಲೆತ್ತುವುದು, ಹೋಗುವುದು ಇಷ್ಟನ್ನೇ ಮಾಡುತ್ತಿದ್ದರು.


ಇಲ್ಲಿ ಪ್ರತಿ ವರ್ಷವೂ ಹೊಸ್ತಿಲ ಹುಣ್ಣಿಮೆಯ ನಂತರದ ಮಂಗಳವಾರ ರಥೋತ್ಸವ ಜರುಗುತ್ತದೆ. ರಥೋತ್ಸವದ ಮುನ್ನಾ ದಿನ ಅಂದರೆ ಸೋಮವಾರ ದೊಡ್ಡ ಹಣತೆಯಲ್ಲಿ ದೀಪ ಬೆಳಗಿಸಿ ದೇವಾಲಯದ ಹಿಂದೆ ಬೆಟ್ಟದ ಮೇಲೆ ಇರಿಸಲಾಗುತ್ತದೆ. ಸುತ್ತಮುತ್ತಲಿನ ಹಳ್ಳಿಗಳ ಜನರು ಆ ದಿನ ಉಪವಾಸವಿದ್ದು, ಈ ದೀಪದ ದರ್ಶನವಾದ ಬಳಿಕ ಊಟ ಮಾಡುತ್ತಾರೆ. ದೇವಾಲಯದ ಗರ್ಭಗುಡಿಯಲ್ಲಿ ಬಸವೇಶ್ವರನ ಮುಖವಾಡವನ್ನು ಶಿವಲಿಂಗಕ್ಕೆ ತೊಡಿಸಲಾಗಿದ್ದು, ನಾಗನ ಹೆಡೆಯ ಆಸರೆಯನ್ನೂ ಲಿಂಗಕ್ಕೆ ನೀಡಲಾಗಿದೆ. ಇಲ್ಲಿ ಗರ್ಭಗುಡಿಯ ಒಳಗೆ ತೆರಳಿ ಶಿವಲಿಂಗವನ್ನು ಮುಟ್ಟಿ ನಮಸ್ಕರಿಸಬಹುದು.


ಸಿದ್ಧೇಶ್ವರ ದೇವಾಲಯದ ಇನ್ನೊಂದು ವಿಶೇಷವೆಂದರೆ ಇಲ್ಲಿನ ಅರ್ಚಕ ಶಿಸ್ತಾಗಿ ಪ್ಯಾಂಟು ಮತ್ತು ಅಂಗಿ ಧರಿಸಿ ಆಚೀಚೆ ಓಡಾಡಿಕೊಂಡಿರುತ್ತಾನೆ. ಹೊರಗಿನಿಂದ ನಮಸ್ಕರಿಸಿ ತೆರಳುವವರಿಗೆ ಆತ ಏನನ್ನೂ ಕೊಡುವುದಿಲ್ಲ. ಗರ್ಭಗುಡಿಯ ಒಳಗೆ ಯಾರಾದರೂ ತೆರಳಿದರೆ ಛಂಗನೆ ಎಲ್ಲಿಂದಲೋ ಪ್ರತ್ಯಕ್ಷನಾಗುತ್ತಾನೆ. ತೀರ್ಥದ ರೂಪದಲ್ಲಿ ಪಂಚಾಮೃತ ಮತ್ತು ಅಲ್ಲೇ ಗಂಧವನ್ನು ಕೆರೆದು ನೀಡುತ್ತಾನೆ. ಉಳಿದ ದೇವಾಲಯಗಳಂತೆ ಗಂಧವನ್ನು ಮೊದಲೇ ಕೆರೆದು ಬಟ್ಟಲಿನಲ್ಲಿ ಸಂಗ್ರಹಿಸಿ ಇಡುವುದಿಲ್ಲ.

ಭಾನುವಾರ, ಸೆಪ್ಟೆಂಬರ್ 16, 2012

ಚಾರಣ ಚಿತ್ರ - ೨೧


ದಟ್ಟ ಕಾನನದ ನಡುವೆ ಜಲಧಾರೆಯ ಸೊಬಗು...

ಗುರುವಾರ, ಸೆಪ್ಟೆಂಬರ್ 06, 2012

ಚನ್ನಕೇಶವ ದೇವಾಲಯ - ನಾಗಲಾಪುರ


ಇಲ್ಲಿ ದೊರೆತಿರುವ ಕೊನೆಯ ಹೊಯ್ಸಳ ದೊರೆ ೩ನೇ ಬಲ್ಲಾಳನ ಕಾಲದ ಶಾಸನಗಳ ಪ್ರಕಾರ ನಾಗಲಾಪುರ ಒಂದು ಪ್ರಸಿದ್ಧ ಅಗ್ರಹಾರವಾಗಿದ್ದು, ಹೊಯ್ಸಳ ಕಾಲದ ಇತರ ಅಗ್ರಹಾರಗಳಂತೆ ಇಲ್ಲೂ ವಿಷ್ಣು (ಚನ್ನಕೇಶವ) ಮತ್ತು ಶಿವ (ಕೇದಾರೇಶ್ವರ) ದೇವಾಲಯಗಳ ನಿರ್ಮಾಣವಾಯಿತು ಎಂದು ತಿಳಿದುಬಂದಿದೆ. ಊರ ನಟ್ಟನಡುವೆ ಪೂರ್ವಾಭಿಮುಖವಾಗಿರುವ ಚನ್ನಕೇಶವ ದೇವಾಲಯವನ್ನು ಇಸವಿ ೧೨೬೦ರಲ್ಲಿ ಹೊಯ್ಸಳ ದೊರೆ ೩ನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಯಿತು. ಶಿಥಿಲಗೊಂಡಿದ್ದ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ಶ್ರಮವಹಿಸಿ ಜೀರ್ಣೋದ್ಧಾರಗೊಳಿಸಿ ಕಾಪಾಡಿಕೊಂಡಿದೆ.


ಜಗತಿಯ ಮೇಲಿರುವ ದೇವಾಲಯದ ಗೋಪುರ ಮತ್ತು ಮುಖಮಂಟಪ ಬಿದ್ದುಹೋಗಿವೆ. ನವರಂಗದ ಹೊರಗೋಡೆಯೂ ಒಂದು ಪಾರ್ಶ್ವದಲ್ಲಿ ಸಂಪೂರ್ಣವಾಗಿ ನಾಶವಾಗಿದ್ದು ಅಲ್ಲಿ ಬದಲಿ ಕಲ್ಲುಗಳನ್ನು ಬಳಸಿ ಪುನ: ನಿರ್ಮಿಸಲಾಗಿದೆ. ಗರ್ಭಗುಡಿಯ ಹೊರಗೋಡೆ ಮಾತ್ರ ಏನೂ ಹಾನಿಯಾಗದೆ ಉಳಿದುಕೊಂಡಿದೆ.


ನವರಂಗದಲ್ಲಿರುನ ನಾಲ್ಕು ಕಂಬಗಳನ್ನು ಸುಂದರವಾಗಿ ನಿರ್ಮಿಸಲಾಗಿದೆ. ಬಹಳ ಹಿಂದೆ ಈ ಕಂಬಗಳಿಗೆ ಬಳಿಯಲಾಗಿದ್ದ ಸುಣ್ಣವನ್ನು ಸಾಧ್ಯವಾದಷ್ಟು ಮಟ್ಟಿಗೆ ಅಳಿಸಲಾಗಿದೆ. ನವರಂಗದ ಛಾವಣಿಯಲ್ಲೂ ಉತ್ತಮ ಕೆತ್ತನೆಗಳಿವೆ.


ಅಂತರಾಳದ ದ್ವಾರವು ಆರು ತೋಳುಗಳನ್ನು ಹೊಂದಿದ್ದು, ಇವುಗಳಲ್ಲಿ ೩ನೇ ಮತ್ತು ೫ನೇ ತೋಳುಗಳನ್ನೇ ಜಾಲಂಧ್ರಗಳನ್ನಾಗಿ ಮಾರ್ಪಾಡಿಸಿ ಶಿಲ್ಪಿ ತನ್ನ ಚಾಕಚಕ್ಯತೆಯನ್ನು ತೋರಿದ್ದಾನೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಅಂತರಾಳದ ದ್ವಾರದ ಮೇಲೆ ವಿಷ್ಣುವಿನ ಎರಡು ರೂಪಗಳ ಕೆತ್ತನೆಯಿರುವುದು. ಲಲಾಟದಲ್ಲಿ ಒಂದು ಕೆತ್ತನೆಯಿದ್ದರೆ ಇನ್ನೊಂದು ದ್ವಾರದ ಮೇಲಿನ ಅಡ್ಡಪಟ್ಟಿಯಲ್ಲಿ ಇಕ್ಕೆಲಗಳಲ್ಲಿ ಮಕರಗಳಿಂದ ಅಲಂಕೃತಗೊಂಡು ಇದೆ.


ಗರ್ಭಗುಡಿಯಲ್ಲಿ ಮೂರ್ತಿಗೆ ಸಂಬಂಧಿಸಿದಂತೆ ದ್ವಂದ್ವಗಳಿವೆ. ಮೊದಲು ಇಲ್ಲಿ ಚನ್ನಕೇಶವನ ವಿಗ್ರಹವಿದ್ದು ನಂತರ ವಿಜಯನಗರ ಅರಸರ ಆಳ್ವಿಕೆಯ ಸಮಯದಲ್ಲಿ ವೆಂಕಟೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು ಎಂದು ಹೇಳಲಾಗುತ್ತದೆ. ಅದೇನೇ ಇರಲಿ ವಿಗ್ರಹವಂತೂ ಸುಂದರವಾಗಿದೆ.


ದೇವಾಲಯದ ಹೊರಗೋಡೆಯಲ್ಲಿ ಆರು ಪಟ್ಟಿಕೆಗಳಿವೆ. ಮೊದಲ ಮೂರು ಪಟ್ಟಿಕೆಗಳಲ್ಲಿ ಕ್ರಮವಾಗಿ ಆನೆ, ಅಶ್ವಾರೋಹಿಗಳು ಮತ್ತು ಬಳ್ಳಿಸುರುಳಿಯನ್ನು ಕೆತ್ತಲಾಗಿದೆ. ಅಶ್ವಾರೋಹಿಗಳ ಕೆತ್ತನೆಯಂತೂ ಮನೋಜ್ಞವಾಗಿದೆ. ನಾಲ್ಕನೇ ಪಟ್ಟಿಕೆ ಖಾಲಿಯಿದೆ. ಪೌರಾಣಿಕ ಕಥೆಗಳನ್ನು ಬಿಂಬಿಸುವ ಕೆತ್ತನೆಯ ಕೆಲಸ ಯಾವುದೋ ಕಾರಣದಿಂದ ಬಾಕಿ ಉಳಿದಿರಬಹುದು. ಐದನೇ ಪಟ್ಟಿಕೆಯಲ್ಲಿ ಮಕರಗಳಿದ್ದರೆ ಆರನೇ ಪಟ್ಟಿಕೆಯಲ್ಲಿ ಹಂಸಗಳಿವೆ.


ಪಟ್ಟಿಕೆಗಳ ಮೇಲೆ ಹೊರಗೋಡೆಯ ಮಧ್ಯಭಾಗದಲ್ಲಿ ಉದ್ದಕ್ಕೂ ದೇವ ದೇವಿಗಳ ಸುಂದರ ಕೆತ್ತನೆಗಳಿವೆ. ಒಂದಕ್ಕಿಂತ ಒಂದು ಮನಸೂರೆಗೊಳ್ಳುವ ಕಲಾಕೃತಿಗಳು. ಎಷ್ಟು ಕಣ್ತುಂಬಿಕೊಂಡರೂ ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆ. ಈ ಎಲ್ಲಾ ಕೆತ್ತನೆಗಳನ್ನು ನೋಡುತ್ತಾ ಹೋದರೆ ಸಮಯ ಕಳೆದದ್ದೇ ಅರಿವಾಗುವುದಿಲ್ಲ. ಈ ಅಜ್ಞಾತ ಶಿಲ್ಪಿಯ ಕೈಚಳಕಕ್ಕೆ ಮಾರುಹೋಗದೆ ಇರಲು ಅಸಾಧ್ಯ.

ಮಂಗಳವಾರ, ಸೆಪ್ಟೆಂಬರ್ 04, 2012

ಸೋಮೇಶ್ವರ ದೇವಾಲಯ - ಕೋಟುಮಚಗಿ


ಶಾಸನಗಳಲ್ಲಿ ಈ ಊರನ್ನು ’ಉಮಚಗಿ’ ಎಂದು ಕರೆಯಲಾಗಿದೆ. ನಂತರದ ದಿನಗಳಲ್ಲಿ ಇಲ್ಲೊಂದು ಕೋಟೆ ಅಸ್ತಿತ್ವಕ್ಕೆ ಬಂದಿದ್ದರಿಂದ ಊರಿನ ಹೆಸರು ’ಕೋಟುಮಚಗಿ’ ಆಗಿದೆ ಎಂದು ಇತಿಹಾಸಕಾರರ ಅಭಿಪ್ರಾಯ. ಇಲ್ಲಿರುವ ಸೋಮೆಶ್ವರ ದೇವಾಲಯವನ್ನು ೧೧ನೇ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ.


ದೇವಾಲಯದ ಮುಖಮಂಟಪ ಮತ್ತು ನವರಂಗವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಗರ್ಭಗುಡಿಯ ಹೊರಗೋಡೆ ಮಾತ್ರ ತನ್ನ ಮೂಲರೂಪದಲ್ಲಿ ಉಳಿದುಕೊಂಡಿದೆ. ಶಾಸನಗಳಲ್ಲಿ ಈ ದೇವಾಲಯವನ್ನು ಸ್ವಯಂಭೂ ಸೋಮೇಶ್ವರ ದೇವಾಲಯವೆಂದು ಕರೆಯಲಾಗಿದೆ.


ನವರಂಗದಲ್ಲಿ ಸ್ಠಳಾವಕಾಶವೇ ಇಲ್ಲ! ಮೊದಲೇ ಸಣ್ಣದಾಗಿರುವ ನವರಂಗದಲ್ಲಿ ಆಷ್ಟು ಒತ್ತೊತ್ತಾಗಿ ಕಂಬಗಳನ್ನು ರಚಿಸಿ, ಕಂಬದಿಂದ ಕಂಬಕ್ಕೆ ಕಮಾನುಗಳನ್ನು ರಚಿಸಲಾಗಿದೆ. ಮಸೀದಿಗಳಲ್ಲಿ ಮತ್ತು ಇತರ ಇಸ್ಲಾಮಿಕ್ ಕಟ್ಟಡಗಳಲ್ಲಿರುವ ಕಮಾನುಗಳ ರಚನೆಯನ್ನು ಇಲ್ಲಿ ಕಂಡು ಬಹಳ ಆಶ್ಚರ್ಯವಾಯಿತು. ಊರಿನವರ ಪ್ರಕಾರ ಭಾಗಶ: ಹಾನಿಗೊಳಗಾಗಿದ್ದ ದೇವಾಲಯವನ್ನು ಬಿಜಾಪುರ ಸುಲ್ತಾನರ ಕಾಲದಲ್ಲಿ ಅಭಿವೃದ್ಧಿಪಡಿಸಲಾಗಿರುವುದರಿಂದ ಈ ಕಮಾನುಗಳ ರಚನೆಯಾಗಿರಬಹುದು.


ಗರ್ಭಗುಡಿ ಸಂಪೂರ್ಣವಾಗಿ ಮಾರ್ಬಲೀಕರಣಗೊಂಡಿದೆ. ಅಂತರಾಳದಲ್ಲಿ ನಂದಿಯ ಮೂರ್ತಿಯಿದೆ. ಶಾಸನಗಳಿಂದ ಈ ಊರು ಅಗ್ರಹಾರವಾಗಿತ್ತು ಎಂದು ತಿಳಿದುಬರುತ್ತದೆ. ಮಹಾಪಾಂಡಿತ್ಯ ಹೊಂದಿದ್ದ ವಿದ್ವಾಂಸರು ಮತ್ತು ಉನ್ನತ ವರ್ಗದ ಬ್ರಾಹ್ಮಣರು ನೆಲೆಸಿದ್ದ ಈ ಊರು ಒಂದು ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು.


ಊರಿನ ಎರಡು ಕೆರೆಗಳ ಮಧ್ಯೆ ಎತ್ತರದ ಸ್ಥಳದಲ್ಲಿ ಆಕರ್ಷಕ ಪ್ರವೇಶದ್ವಾರವಿರುವ ಪ್ರಾಂಗಣದಲ್ಲಿ ಸೋಮೇಶ್ವರ ದೇವಾಲಯವಿದೆ. ದೇವಾಲಯದ ಸುತ್ತಲೂ ತಿಳಿಯಾದ ಹುಲ್ಲುಹಾಸು ಮತ್ತು ಸದ್ದಿಲ್ಲದ ಪ್ರಶಾಂತ ವಾತಾವರಣ ಇಲ್ಲಿ ಬಹಳ ಸಮಯ ಕಳೆಯಲು ನನಗೆ ಪ್ರೇರಣೆ ನೀಡಿತು. ಸೂರ್ಯ ಮುಳುಗುವವರೆಗೂ ಇಲ್ಲೇ ಇದ್ದು ನಂತರ ಮನೆಯೆಡೆ ಹೊರಟೆವು.


ಐತಿಹಾಸಿಕವಾಗಿ ಕೋಟುಮಚಗಿ ಬಹಳ ಪ್ರಾಮುಖ್ಯತೆಯನ್ನು ಹೊಂದಿರುವ ಸ್ಥಳ. ಇಲ್ಲಿ ಕಲ್ಮೇಶ್ವರ ಎಂಬ ಪ್ರಾಚೀನ ದೇವಾಲಯವೂ ಇದೆ. ಆದರೆ ಅದೀಗ ಸಂಪೂರ್ಣವಾಗಿ ನವೀಕರಣಗೊಂಡಿದೆ. ಸೋಮೇಶ್ವರ ದೇವಾಲಯ ನಿರ್ಮಾಣಗೊಂಡ ಬಗ್ಗೆ ಇರುವ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಹೇಶ ಸಂಕನಗೌಡರ ಇವರ ಬ್ಲಾಗಿನಲ್ಲಿ ಓದಬಹುದು. ಕೋಟುಮಚಗಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಬಹುದು.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಭಾನುವಾರ, ಸೆಪ್ಟೆಂಬರ್ 02, 2012

ಬಿಲ್ಲೇಶ್ವರ ಮತ್ತು ಗಣಪತಿ ದೇವಾಲಯಗಳು - ಹಾನಗಲ್


ಕೇವಲ ಗರ್ಭಗುಡಿ ಮಾತ್ರ ಇರುವ ದೇವಾಲಯವಾದರೂ ಬಾಗಿಲವಾಡದಲ್ಲಿ ಉತ್ಕೃಷ್ಟ ಕೆತ್ತನೆಗಳನ್ನು ಹೊಂದಿರುವ ದೇವಾಲಯವಿದು. ಗರ್ಭಗುಡಿಯಲ್ಲಿ ಬಿಲ್ಲೇಶ್ವರ ಎಂದು ಕರೆಯಲ್ಪಡುವ ಸುಂದರವಾದ ಲಿಂಗವಿದ್ದು, ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.


ದೇವಾಲಯದ ಮುಂಭಾಗ ಏನೂ ಉಳಿದಿರಲಿಲ್ಲ. ಪ್ರಾಚ್ಯ ವಸ್ತು ಇಲಾಖೆ ಬದಲಿ ಕಲ್ಲುಗಳನ್ನು ಬಳಸಿ ಪುನ: ನಿರ್ಮಿಸಿದೆ. ಕಲ್ಯಾಣ ಚಾಲುಕ್ಯ ಶೈಲಿಯ ಈ ದೇವಾಲಯದ ಹೊರಗೋಡೆಯಲ್ಲಿ ಕೆಲವು ಗೋಪುರಗಳನ್ನು ಕಾಣಬಹುದು. ಈ ಗೋಪುರಗಳ ಕೆಳಗೆ ಮಂಟಪಗಳಿದ್ದು, ಇವುಗಳ ಒಳಗೆ ಮೊದಲು ಭಿತ್ತಿಗಳಿದ್ದಿರಬಹುದು. ಈಗ ಏನೂ ಇಲ್ಲ.


ದೇವಾಲಯದ ದ್ವಾರವು ೫ ತೋಳುಗಳನ್ನು ಹೊಂದಿದ್ದು ಮನಮೋಹಕ ಕೆತ್ತನೆಗಳನ್ನು ಹೊಂದಿದೆ. ಈ ತೋಳುಗಳಲ್ಲಿ ಕ್ರಮವಾಗಿ ವಜ್ರತೋರಣ, ನಾಗ ನಾಗಿಣಿ, ನೃತ್ಯಗಾರರು ಸಂಗೀತಗಾರರು, ವಿವಿಧ ಪ್ರಾಣಿಗಳು ಮತ್ತು ಉದ್ದನೆಯ ಬಳ್ಳಿಯನ್ನು ಅದ್ಭುತವಾಗಿ ಕೆತ್ತಲಾಗಿದೆ.


ನಾಗದೇವ ಮತ್ತು ನಾಗದೇವತೆಯರ ಬಾಲದ ಭಾಗವನ್ನು ಸುರುಳಿ ಸುತ್ತಿ ಕೆತ್ತಿರುವುದು ಶಿಲ್ಪಿಯ ನೈಪುಣ್ಯತೆಗೆ ಸಾಕ್ಷಿ. ದ್ವಾರದ ಮೇಲಿರುವ ಗಜಲಕ್ಷ್ಮೀಯ ಕೆತ್ತನೆಯೂ ಸ್ಫುಟವಾಗಿದ್ದು ಆಕರ್ಷಕವಾಗಿದೆ.


ದ್ವಾರದ ತಳಭಾಗದಲ್ಲಿ ೫ ಶಿಲ್ಪಗಳಿವೆ. ನಡುವೆ ಇರುವುದು ಮನ್ಮಥ. ಈತನ ಒಂದು ಪಾರ್ಶ್ವದಲ್ಲಿ ರತಿ ಮತ್ತು ಇನ್ನೊಂದು ಪಾರ್ಶ್ವದಲ್ಲಿ ದಕ್ಷ (ಟಗರಿನ ತಲೆಯಿರುವ ದೇವತೆ). ದಕ್ಷನ ಬದಿಯಲ್ಲಿ ಆತನ ಸೇವಕ ಮತ್ತು ರತಿಯ ಪಕ್ಕ ಆಕೆಯ ಸೇವಕಿ.


 ನಿಬ್ಬೆರಗಿನಿಂದ ಆ ಕೆತ್ತನೆಗಳನ್ನು ಬಹಳಷ್ಟು ಸಮಯ ನೋಡುತ್ತಾ ಇದ್ದೆ. ಬಿಲ್ಲೇಶ್ವರನ ದ್ವಾರವನ್ನಾದರೂ ನೋಡಲು ಹಾನಗಲ್‍ಗೆ ಭೇಟಿ ನೀಡಬೇಕು.

ಅಂದು - ಇಂದು:


ವರ್ಣ ಚಿತ್ರ ೨೦೧೧ರದ್ದು. ಕಪ್ಪು ಬಿಳುಪು ಚಿತ್ರ ಇಸವಿ ೧೮೫೬ರಲ್ಲಿ ತೆಗೆದದ್ದು. ೧೫೬ ವರ್ಷಗಳ ಹಿಂದೆ ಬಿಲ್ಲೇಶ್ವರ ದೇವಾಲಯ ಹೀಗಿತ್ತು. ದ್ವಾರದ ಲಲಾಟ ದೇವಾಲಯದ ಮುಂದೆ ಬಿದ್ದಿರುವುದನ್ನು ಗಮನಿಸಿ. ಆಗ ಅದನ್ನೇ ಮೆಟ್ಟಿಲನ್ನಾಗಿ ಬಳಸಲಾಗುತ್ತಿತ್ತೇನೋ? ಪ್ರಾಚ್ಯ ವಸ್ತು ಇಲಾಖೆ ಎಂಬ ವಿಭಾಗ ಅಸ್ತಿತ್ವಕ್ಕೆ ಬರದೇ ಇದ್ದಿದ್ದರೆ ನಾವು ಎಷ್ಟನ್ನೆಲ್ಲಾ ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದೆವು!

ಗಣಪತಿ ದೇವಾಲಯ:


ರಾಜ್ಯದಲ್ಲಿ ಇಂತಹ ದೇವಾಲಯ ಬಹಳ ಅಪರೂಪ (ಇರಲಾರದು). ದಕ್ಷಿಣಾಭಿಮುಖವಾಗಿರುವ ಈ ದೇವಾಲಯದ ಪ್ರಮುಖ ವೈಶಿಷ್ಟ್ಯವೆಂದರೆ ಇದರ ಶಿಖರ. ’ಭೂಮಿಜ ಶಿಖರ’ ಶೈಲಿಯನ್ನು ಹೊಂದಿರುವ ಗಣಪತಿ ದೇವಾಲಯ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಇಂತಹ ಶಿಖರ ಶೈಲಿ ಹೆಚ್ಚಾಗಿ ಉತ್ತರ ಭಾರತದ ದೇವಾಲಯಗಳಲ್ಲಿ ಕಾಣಬರುತ್ತದೆ.


ಮುಖಮಂಟಪವು ಕಕ್ಷಾಸನವನ್ನು ಹೊಂದಿದೆ. ನವರಂಗದ ನಾಲ್ಕು ಕಂಬಗಳ ನಡುವಿರುವ ಅಂಕಣದಲ್ಲಿ ಸುಂದರ ತಾವರೆಯನ್ನು ಕೆತ್ತಲಾಗಿದೆ.


ನಾಲ್ಕು ತೋಳುಗಳ ದ್ವಾರವಿರುವ ಗರ್ಭಗುಡಿಯಲ್ಲಿ ಗಣೇಶನ ಮೂರ್ತಿಯಿದೆ. ಗಣೇಶನನ್ನು ಪದ್ಮದ ಮೇಲೆ ಕೂರಿಸಿರುವುದು ಈ ದೇವಾಲಯದ ಇನ್ನೊಂದು ಆಕರ್ಷಣೆ.

ಅಂದು - ಇಂದು:


೧೮೮೫ ರಲ್ಲಿ ಗಣಪತಿ ದೇವಾಲಯ ಹೀಗಿತ್ತು. ಇಂದಿಗೂ ಸ್ವಲ್ಪ ಬದಲಾವಣೆ ಕಂಡದ್ದು ಬಿಟ್ಟರೆ ಹಾಗೇ ಇದೆ. ಛಾವಣಿಯನ್ನು ಈಗ ಸಂಪೂರ್ಣವಾಗಿ ಕಾಂಕ್ರೀಟ್ ಹಾಕಿ ದುರಸ್ತಿ ಮಾಡಲಾಗಿದೆ. ಕಕ್ಷಾಸನ ಮತ್ತು ಛಾವಣಿಯ ನಡುವಿರುವ ಅಂತರವನ್ನು ಊರಿನವರೇ ಮುಚ್ಚಿರುವುದನ್ನು ಗಮನಿಸಿ. ದೇವಾಲಯ ’ಸೆಗಣಿ ರೊಟ್ಟಿ’ ಒಣಗಿಸಲು ಬಳಕೆಯಾಗುತ್ತಿದ್ದ ಸಮಯವದು. ಚಿತ್ರದಲ್ಲಿ ಕಟ್ಟಿಗೆಗಳ ರಾಶಿ ಇದ್ದಲ್ಲೇ ಈಗ ಮನೆಯಿರುವುದರಿಂದ ಇದೇ ಜಾಗದಲ್ಲಿ ನಿಂತು ಚಿತ್ರ ತೆಗೆಯುವುದು ಅಸಾಧ್ಯ.