ಭಾನುವಾರ, ಡಿಸೆಂಬರ್ 25, 2011
ಭಾನುವಾರ, ಡಿಸೆಂಬರ್ 18, 2011
ಲಕ್ಷ್ಮೀನರಸಿಂಹ ದೇವಾಲಯ - ಜಾವಗಲ್
ತ್ರಿಕೂಟ ಶೈಲಿಯ ಈ ದೇವಾಲಯ ಮುಖಮಂಟಪ, ಸುಖನಾಸಿ ಮತ್ತು ನವರಂಗಗಳನ್ನು ಹೊಂದಿದೆ. ನಾಲ್ಕು ತೋಳಿನ ನವರಂಗದ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರಿದ್ದಾರೆ. ಸುಮಾರು ಆರು ಅಡಿ ಎತ್ತರವಿದ್ದು ಸುಂದರವಾಗಿ ಕೆತ್ತಲಾಗಿರುವ ಈ ದ್ವಾರಪಾಲಕರನ್ನು ’ಗರುಡ ದ್ವಾರಪಾಲಕರು’ ಎಂದು ಕರೆಯಲಾಗುತ್ತದೆಯಂತೆ ಮತ್ತು ವಿಜಯನಗರ ಅರಸರ ಕಾಲದಲ್ಲಿ ಇವನ್ನು ಅಳವಡಿಸಲಾಗಿದೆಯೆಂದು ನಂಬಲಾಗಿದೆ. ನವರಂಗದ ದ್ವಾರದ ಮುಂದೆ ನರ್ತಕಿಯೊಬ್ಬಳು ತಲೆಯ ಮೇಲೆ ಎರಡೂ ಕೈಗಳನ್ನು ಜೋಡಿಸಿ ಸ್ವಾಗತಕೋರುವ ಭಂಗಿಯಲ್ಲಿರುವ ಕೆತ್ತನೆಯನ್ನು ನೆಲದಲ್ಲಿ ಬಿಡಿಸಲಾಗಿದೆ. ಸಾಮಾನ್ಯವಾಗಿ ಕೆಳದಿ ಅರಸರ ದೇವಾಲಯಗಳಲ್ಲಿರುವ ಈ ಶೈಲಿಯನ್ನು ಇಲ್ಲಿಯೂ ಕಂಡು ಆಶ್ಚರ್ಯವಾಯಿತು.
ದೇವಾಲಯದ ೩ ಗರ್ಭಗುಡಿಗಳಿಗೂ ಒಂದೇ ನವರಂಗವಿದೆ. ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ. ಎಲ್ಲಾ ಗರ್ಭಗುಡಿಗಳಿಗೆ ಮತ್ತು ನವರಂಗಕ್ಕೆ ಗ್ರಾನೈಟ್ ಹಾಸಲಾಗಿದೆ. ಪ್ರಮುಖ ಗರ್ಭಗುಡಿಯಲ್ಲಿ ಶ್ರೀಧರ ವಿನ್ಯಾಸದ ವಿಷ್ಣುವಿನ ವಿಗ್ರಹವಿದ್ದರೆ, ಉಳಿದೆರಡು ಗರ್ಭಗುಡಿಗಳಲ್ಲಿ ವೇಣುಗೋಪಾಲ ಮತ್ತು ಲಕ್ಷ್ಮೀನರಸಿಂಹ ದೇವರ ಮೂರ್ತಿಗಳಿವೆ. ಎಲ್ಲಾ ೩ ವಿಗ್ರಹಗಳೂ ಬಹಳ ಸುಂದರವಾಗಿವೆ. ಪ್ರಮುಖ ದೇವರು ಶ್ರೀಧರನಾದರೂ ದೇವಾಲಯವನ್ನು ಲಕ್ಷ್ಮೀನರಸಿಂಹ ದೇವಾಲಯ ಎಂದೇ ಕರೆಯಲಾಗುತ್ತದೆ. ನಾವು ತೆರಳಿದಾಗ ಲಕ್ಷ್ಮೀನರಸಿಂಹನಿಗೆ ಕ್ಷೀರಾಭಿಷೇಕ ನಡೆಯುತ್ತಿತ್ತು.
ಈ ದೇವಾಲಯದ ರಚನೆ ಹಾರ್ನಹಳ್ಳಿ, ಹೊಸಹೊಳಲು, ಸೋಮನಾಥಪುರ ಮತ್ತು ನುಗ್ಗೇಹಳ್ಳಿಯ ದೇವಾಲಯಗಳನ್ನು ಹೋಲುತ್ತದೆ. ಸೋಮನಾಥಪುರ ಮತ್ತು ನುಗ್ಗೇಹಳ್ಳಿ ದೇವಾಲಯಗಳ ಶಿಲ್ಪಿ ’ಮಲ್ಲಿತಮ್ಮ’ನೇ ಈ ದೇವಾಲಯದಲ್ಲಿಯೂ ಕೆಲಸ ಮಾಡಿದ್ದಾನೆ ಎಂದು ಇತಿಹಾಸಕಾರರ ಅಭಿಪ್ರಾಯ.
ತ್ರಿಕೂಟ ಶೈಲಿಯ ದೇವಾಲಯವಾದರೂ ಪ್ರಮುಖ ಗರ್ಭಗುಡಿಯ ಮೇಲೆ ಮಾತ್ರ ಗೋಪುರವಿದೆ. ದೇವಾಲಯದ ಹೊರಗೋಡೆಯಲ್ಲಿರುವ ೧೩೭ ಶಿಲ್ಪಗಳನ್ನು ನೋಡಲು ತುಂಬಾ ಸಮಯ ಬೇಕು. ಪ್ರತಿಯೊಂದು ಕೆತ್ತನೆಯೂ ಅದ್ಭುತ, ಸುಂದರ.
ಹೊಯ್ಸಳರು ನಿರ್ಮಿಸಿದ ದೇವಾಲಯಗಳ ಬಾಹ್ಯ ಸೌಂದರ್ಯ ಚೆನ್ನಾಗಿರುತ್ತದೆ. ಎಲ್ಲಾ ಕೆತ್ತನೆಗಳನ್ನು ನೋಡುತ್ತಾ ಸಮಯ ಹೋದದ್ದೆ ಅರಿವಾಗುವುದಿಲ್ಲ.
ಬುಧವಾರ, ಡಿಸೆಂಬರ್ 14, 2011
ಕೆನ್ಬೆರ್ರಾದಲ್ಲಿ ರಾಹುಲ್ ದ್ರಾವಿಡ್
ಆಸ್ಟ್ರೇಲಿಯಾದ ರಾಜಧಾನಿ ಕೆನ್ಬೆರ್ರಾದಲ್ಲಿ ಇಂದು ನಡೆದ ವಾರ್ಷಿಕ ’ಡೊನಾಲ್ಡ್ ಬ್ರಾಡ್ಮನ್ ಒರೇಷನ್’ನಲ್ಲಿ ಈ ಬಾರಿ ಪ್ರಮುಖ ಭಾಷಣದ ಗೌರವ ರಾಹುಲ್ ದ್ರಾವಿಡ್ಗೆ. ಇಸವಿ ೨೦೦೦ದಿಂದ ಪ್ರತಿ ವರ್ಷ ನಡೆಯುವ ಈ ಸಮಾರಂಭದಲ್ಲಿ ಒಬ್ಬ ಗಣ್ಯ ಕ್ರಿಕೆಟಿಗನನ್ನು ಪ್ರಮುಖ ಭಾಷಣ ನೀಡಲು ಆಹ್ವಾನಿಸಲಾಗುತ್ತದೆ. ಆ ಗೌರವಕ್ಕೆ ಪಾತ್ರನಾದ ಮೊದಲ ವಿದೇಶಿ ಕ್ರಿಕೆಟಿಗ ಎಂಬ ಗೌರವ ಕೂಡಾ ದ್ರಾವಿಡ್ ಪಾಲಿಗೆ.
ರಾಹುಲ್ ದ್ರಾವಿಡ್ರನ್ನು ಮುಖ್ಯ ಭಾಷಣಕಾರನಾಗಿ ಮಾತನಾಡಲು ಆಹ್ವಾನಿಸಲಾಗಿದೆ ಎಂದು ಸುಮಾರು ಒಂದು ತಿಂಗಳ ಹಿಂದೆ ತಿಳಿದುಬಂದಾಗ, ಇದೊಂದು ಅತ್ಯುತ್ತಮ ಭಾಷಣವಾಗಲಿದೆ ಎಂದು ಅಂದೇ ಗ್ರಹಿಸಿದ್ದೆ. ಏನೇ ಮಾಡಿದರೂ ಅಲ್ಲಿ ಉತ್ಕೃಷ್ಟ ನಿರ್ವಹಣೆ ತೋರುವುದು ದ್ರಾವಿಡ್ ಹಳೇ ಚಾಳಿ. ದ್ರಾವಿಡ್ ಭಾಷಣವನ್ನು ಇಲ್ಲಿ ಓದಬಹುದು. ವಿಡಿಯೋ ಇಲ್ಲಿ ನೋಡಬಹುದು.
ರಾಹುಲ್ ದ್ರಾವಿಡ್ರನ್ನು ಮುಖ್ಯ ಭಾಷಣಕಾರನಾಗಿ ಮಾತನಾಡಲು ಆಹ್ವಾನಿಸಲಾಗಿದೆ ಎಂದು ಸುಮಾರು ಒಂದು ತಿಂಗಳ ಹಿಂದೆ ತಿಳಿದುಬಂದಾಗ, ಇದೊಂದು ಅತ್ಯುತ್ತಮ ಭಾಷಣವಾಗಲಿದೆ ಎಂದು ಅಂದೇ ಗ್ರಹಿಸಿದ್ದೆ. ಏನೇ ಮಾಡಿದರೂ ಅಲ್ಲಿ ಉತ್ಕೃಷ್ಟ ನಿರ್ವಹಣೆ ತೋರುವುದು ದ್ರಾವಿಡ್ ಹಳೇ ಚಾಳಿ. ದ್ರಾವಿಡ್ ಭಾಷಣವನ್ನು ಇಲ್ಲಿ ಓದಬಹುದು. ವಿಡಿಯೋ ಇಲ್ಲಿ ನೋಡಬಹುದು.
ಭಾನುವಾರ, ಡಿಸೆಂಬರ್ 11, 2011
ಕುಂಭಕಲ್ಲು
ಜನವರಿ ೨೦೦೪ರ ಅದೊಂದು ದಿನ ದಿನೇಶ್ ಹೊಳ್ಳ ಕರೆ ಮಾಡಿ ಕುಂಭಕಲ್ಲು ನೋಡಿ ಬರೋಣವೇ ಎಂದಾಗ ಒಪ್ಪಿಕೊಂಡೆ. ಯಮಾಹದಲ್ಲಿ ಉಡುಪಿಯಿಂದ ಹೊರಟು ಬೆಳ್ತಂಗಡಿ ತಲುಪಿದಾಗ ಹೊಳ್ಳ ಅಲ್ಲಿ ಅದಾಗಲೇ ಬಂದುಬಿಟ್ಟಿದ್ದರು. ಅಲ್ಲಿಂದ ಮುಂದೆ ಚಾರ್ಮಾಡಿಗೆ ತೆರಳಿದೆವು. ಇಲ್ಲಿಯ ಫೇಮಸ್ (?) ಗೈಡ್ ಇಸುಬು ಸ್ವಲ್ಪ ಬ್ಯುಸಿ ಇದ್ದಂತೆ ನಾಟಕವಾಡುತ್ತಿದ್ದ. ಸ್ವಲ್ಪ ಹೆಚ್ಚು ಹಣ ಕೊಡುತ್ತೇನೆಂದು ಹೊಳ್ಳರು ಹೇಳಿದಾಗ ಆಸಾಮಿ ನಮ್ಮೊಂದಿಗೆ ಬರಲು ಕೂಡಲೇ ರೆಡಿಯಾದ! ಆದರೆ ೩ ಮಂದಿ ನನ್ನ ಯಮಾಹದಲ್ಲಿ ಹೇಗೆ ತೆರಳುವುದು? ಮೊದಲು ಇಸುಬುವನ್ನು ಚಾರಣ ಆರಂಭವಾಗುವೆಡೆ (ಚಾರ್ಮಾಡಿಯಿಂದ ೧೭ ಕಿ.ಮಿ) ಇಳಿಸಿ ಹೊಳ್ಳರನ್ನು ಪಿಕ್ ಮಾಡಲು ಚಾರ್ಮಾಡಿಗೆ ಹಿಂತಿರುಗಿ ಬರುವಾಗ, ದಿನೇಶ್ ಹೊಳ್ಳ ಅದಾಗಲೇ ೭ಕಿ.ಮಿ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿಯಾಗಿತ್ತು. ಅಸಾಧಾರಣ ಮನುಷ್ಯ!
ಈ ಪೈಲಟ್ ಟ್ರೆಕ್ನ ಸುಮಾರು ಎರಡು ವರ್ಷದ ಬಳಿಕ ಡಿಸೆಂಬರ್ ೨೫, ೨೦೦೫ರಂದು ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಕಾರ್ಯಕ್ರಮವನ್ನು ದಿನೇಶ್ ಹೊಳ್ಳರು ಇದೇ ಕುಂಭಕಲ್ಲಿಗೆ ಆಯೋಜಿಸಿದರು. ಮತ್ತದೇ ದಾರಿ. ಹಿಂದಿನ ಬಾರಿ ನಿದ್ರೆ ಮಾಡಿದ್ದ ಸ್ಥಳ ತಲುಪಿದಾಗ ಮತ್ತೆ ಸುಸ್ತು. ಮತ್ತೆ ಇಲ್ಲೇ ಮಲಗೋಣವೇ ಎಂಬ ವಿಚಾರ ಬಂದರೂ ಹೇಗೋ ಮಾಡಿ ಅಲ್ಲಿಂದ ಮುನ್ನಡೆದೆ. ಕಾಡಿನ ನಡುವೆ ಕಾಲುದಾರಿ. ಮುಂದೆ ಒಂದು ಹಳ್ಳ. ಇಲ್ಲಿ ದಣಿವಾರಿಸಿದ ನಂತರ ದಾರಿಯೇ ಇಲ್ಲದಲ್ಲಿ ಎಲ್ಲೋ ಮೇಲೇರಬೇಕು. ಸ್ವಲ್ಪ ಸಮಯದ ಬಳಿಕ ಕಾಡು ಅಂತ್ಯ ಕಂಡು ಓಪನ್ ಜಾಗ. ಆದರೂ ಕುಂಭಕಲ್ಲಿನ ತುದಿ ಮೆಟ್ಟಬೇಕಾದರೆ ಇನ್ನೆರಡು ಸಣ್ಣ ಬೆಟ್ಟಗಳನ್ನು ದಾಟಬೇಕಾಗಿತ್ತು. ಅದಾಗಲೇ ನಮ್ಮ ಗುಂಪಿನ ಒಂದಿಬ್ಬರು ಕುಂಭಕಲ್ಲಿನ ತುದಿ ತಲುಪಿ ಅಲ್ಲಿ ಚುಕ್ಕಿಗಳಂತೆ ಕಾಣುತ್ತಿದ್ದರು!
ಆಳೆತ್ತರ ಬೆಳೆದ ಹುಲ್ಲುಗಳ ನಡುವೆ ದಾರಿ ಮಾಡಿಕೊಂಡು, ಭಾರವೆನಿಸತೊಡಗಿದ್ದ ಜೀವವನ್ನು ಎಳೆಯುತ್ತಾ ಹೇಗೋ ಮುನ್ನಡೆದೆ. ಬೆಟ್ಟವನ್ನೇರುವುದು ನನಗೆಂದು ಇಷ್ಟ ಇಲ್ಲ. ಆದರೆ ಬೆಟ್ಟದ ತುದಿಯಿಂದ ಕಾಣುವ ದೃಶ್ಯಕ್ಕಾಗಿ ಮನಸು ಹಾತೊರೆಯುತ್ತಿರುತ್ತದೆ. ಆದ್ದರಿಂದ ಮನಸ್ಸಿನ ಸುಖಕ್ಕಾಗಿ ದೇಹವನ್ನು ದಂಡಿಸುವುದು. ಯಾವಾಗಲೂ ಜೋಕ್ಸ್ ಮಾಡುವ ರಮೇಶ್ ಕಾಮತ್ ಇಂದು ಮಂಕಾಗಿದ್ದರು. ಇನ್ನೇನು ಕುಂಭಕಲ್ಲಿನ ತುದಿ ಸ್ವಲ್ಪವೇ ದೂರದಲ್ಲಿರುವಾಗ ’ಅಬ್ಬಾ, ಏನೋ ಆಗ್ತಿದೆ, ಎದೆ ನೋಯುತ್ತಿದೆ, ಡಾಕ್ಟ್ರೇ (ಚಾರಣಿಗ ವಿಜೇಶ್) ಇಲ್ಲಿ ಬನ್ನಿ, ಏನೋ ಸರಿಯಿಲ್ಲ’ ಎನ್ನುತ್ತಾ ಅಲ್ಲಿದ್ದ ಬಂಡೆಗೆ ಒರಗಿ ಕೂತುಬಿಟ್ಟರು. ವಿಜೇಶ್ ಏನೋ ಮಾಡಿ ಒಂದೆರಡು ಮಾತ್ರೆ ನೀಡಿದ ಬಳಿಕ ಕಾಮತರಿಗೆ ಸ್ವಲ್ಪ ನಿರಾಳವೆನಿಸಿತು.
ಚಾರ್ಮಾಡಿ ಶ್ರೇಣಿಯ ಸೂಪರ್ ಸ್ಟಾರುಗಳಾದ ಎತ್ತಿನಭುಜ, ಅಮೇದಿಕಲ್ಲು ಮತ್ತು ಮಿಂಚುಕಲ್ಲುಗಳ ಮುಂದೆ ಕುಂಭಕಲ್ಲು ಕುಬ್ಜನಾದರೂ ಇವೆಲ್ಲದರ ನಡುವೆ ಇರುವುದರಿಂದ ಸುತ್ತಲೂ ಅಮೋಘ ದೃಶ್ಯಾವಳಿ. ಆದರೆ ಕುಂಭಕಲ್ಲಿನ ಕೆಳಗೆನೇ ಎಸ್ಟೇಟುಗಳ ಅವ್ಯಾಹತ ಹಾವಳಿ. ಕಾಡು ಮರೆಯಾಗಿದೆ. ಮರೆಯಾಗುತ್ತಿದೆ.
ಭಾನುವಾರ, ನವೆಂಬರ್ 27, 2011
ಅಮೇದಿಕಲ್ಲು ಮತ್ತು ಕರಡಿ
ಗೆಳೆಯ ದಿನೇಶ್ ಹೊಳ್ಳ ಬರೆಯುತ್ತಾರೆ...
ಆ ಬೆಟ್ಟವನ್ನೇರುವುದು ಹವ್ಯಾಸಿ ಚಾರಣಿಗರಿಗೊಂದು ಸವಾಲೇ ಹೌದು. ಅದರ ಎತ್ತರವೇ ಅಂತದ್ದು! ಕಡಿದಾದ ಪ್ರಪಾತವನ್ನೇರಿ ಶೃಂಗ ಭಾಗವನ್ನು ತಲುಪುವಾಗ ಎಂತವನಿಗೂ ಒಮ್ಮೆಗೆ ಚಾರಣದ ಸಹವಾಸವೇ ಬೇಡವಿತ್ತೆಂದು ಅನಿಸಿದರೆ ಅದು ಆ ಬೆಟ್ಟದ ತಪ್ಪಂತೂ ಅಲ್ಲವೇ ಅಲ್ಲ. ಶಿಶಿಲ ಸಮೀಪದ ಅಮೇದಿಕಲ್ಲು ಪರ್ವತವೇ ಅಂತದ್ದು. ಹಿಂದೆ ೩ ಬಾರಿ ಈ ಪರ್ವತವನ್ನೇರಿದ್ದರೂ ಒಮ್ಮೆ ’ಆರೋಹಣ’ದ ಅಶೋಕವರ್ಧನರ ಜತೆ ಅದನ್ನೇರುವ ಸುಯೋಗ ನನ್ನ ಪಾಲಿಗೆ ಲಭಿಸಿತ್ತು. ಎಂತಹ ಚಾರಣಿಗರಿಗೂ ಸಾಹಸಿಗ ಅಶೋಕವರ್ಧನರ ಜತೆಗೆ ಚಾರಣ ಮಾಡುವುದೆಂದರೆ ಖುಷಿ ಮತ್ತು ಕುತೂಹಲ. ಯಾಕೆಂದರೆ ಕರಾವಳಿ ಜಿಲ್ಲೆಗಳಲ್ಲಿ ಚಾರಣ ಎಂಬುದಕ್ಕೆ ಅರ್ಥ ಕೊಟ್ಟವರೇ ಅಶೋಕವರ್ಧನರು. ಅಂದು ಅಶೋಕವರ್ಧನರ ಜತೆ ಇದ್ದವರು ಸಾಮಾನ್ಯರೇನಲ್ಲ. ನಾನು ಅತೀವ ಅಭಿಮಾನ ಇಟ್ಟ ದೇವು ಹನೇಹಳ್ಳಿ , ನೀರೇನ್ ಜೈನ್, ಅಭಯಸಿಂಹ (’ಗುಬ್ಬಚ್ಚಿಗಳು’) ಮುಂತಾದ ಸಮಾನ ಮನಸ್ಕರು ಒಟ್ಟು ಸೇರಿದಾಗ ಆ ಚಾರಣದ ಸಂಭ್ರಮವನ್ನು ಹೇಗೆ ಹೇಳಲಿ? ಎಷ್ಟೋ ಚಾರಣ ಮಾಡಿಯೂ, ಚಾರಣ ಸಂಘಟಿಸಿಯೂ ಅಂದಿನ ಅಮೇದಿಕಲ್ಲು ಚಾರಣವು ನನ್ನ ನೆನಪಿನ ಚಾರಣಪುಟದಲ್ಲಿ ಅಚ್ಚಳಿಯದೇ ಉಳಿದಿದೆ.
ಬೆಳಿಗ್ಗೆ ಐದು ಗಂಟೆಗೇ ಹೊರಟ ನಮ್ಮ ತಂಡ ನೆರಿಯಕ್ಕೆ ಹೋಗಿ ಅಲ್ಲಿನ ಖಾಸಗಿ ಎಸ್ಟೇಟಿನವರ ಅನುಮತಿ ಪಡೆದು ಅವರ ತೋಟದೊಳಗಿನಿಂದ ಕಾನನವ ನುಗ್ಗಿ ಅಮೇದಿಕಲ್ಲು ಶಿಖರವನ್ನೇರಿದೆವು. ಕುದುರೆಮುಖ ವನ್ಯಜೀವಿ ಪ್ರತಿಷ್ಠಾನದ ನೀರೇನ್ ಜೈನಿಗೆ ನೀರು ನಾಯಿಯನ್ನು ನೋಡಬೇಕೆಂಬ ಕುತೂಹಲ. ದಾರಿಯುದ್ದಕ್ಕೂ ನೀರು ನಾಯಿಗಳ ಇರುವಿನ ಕುರುಹು ಲಭಿಸಿತೇ ಹೊರತು ನೀರು ನಾಯಿಗಳು ಕಾಣಿಸಲೇ ಇಲ್ಲ. ಪಶ್ಚಿಮ ಘಟ್ಟದ ಬಗ್ಗೆ ಅಪಾರ ಜ್ಞಾನ ಭಂಡಾರವೇ ಆಗಿರುವ ದೇವು ಹನೇಹಳ್ಳಿಯವರಿಂದ ನೀರು ನಾಯಿಗಳ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ಅಮೇದಿಕಲ್ಲಿನ ಶೃಂಗ ಭಾಗದಿಂದ ಸ್ವಲ್ಪ ಕೆಳಗೆ ಇರುವ ದಟ್ಟ ಅರಣ್ಯದಲ್ಲಿ ನಮ್ಮ ರಾತ್ರಿಯ ವಿಶ್ರಾಂತಿ. ರಾತ್ರಿಯೂಟಕ್ಕೆ ಬೆಂಕಿ ಎಬ್ಬಿಸಿ ನೀರು ಇಟ್ಟು ಇನ್ನೇನು ಅಕ್ಕಿ ಹಾಕಬೇಕೆಂದಿರುವಾಗ ಎಲ್ಲಿತ್ತೋ ಏನೋ? ಅನಿರೀಕ್ಷಿತ ಮಳೆ ಧಾರಾಕಾರವಾಗಿ ಸುರಿಯಬೇಕೇ? ಊಟವಿಲ್ಲದಿದ್ರೂ ಪರ್ವಾಗಿಲ್ಲ, ಮಲಗೋದಾದರೆ ಹೇಗೆ? ನಮ್ಮ ಜತೆಗಿದ್ದ ಐತಾಳರು ಬಂಡೆಯೊಂದರ ಅಡಿಯಲ್ಲಿ ಒಲೆ ನಿರ್ಮಿಸಿ ಗಂಜಿ ಬೇಯಿಸಿ ನಮ್ಮ ಪಾಲಿಗೆ ಅಪರಂಜಿಯಾದರು. ಹೊಟ್ಟೆ ತುಂಬ ಗಂಜಿ ಉಂಡರೂ ಮಲಗಲಾಗದೆ ಮಳೆಯ ಅಭಿಷೇಕದಿಂದ ಪಟ್ಟಾಂಗ ಹೊಡೆಯುತ್ತಾ ಕುಳಿತಿದ್ದೆವು. ನಾವು ಗಂಜಿಯನ್ನು ಕುಡಿದಂತೆ ಜಿಗಣೆಗಳು ನಮ್ಮ ರಕ್ತವನ್ನು ಕುಡಿದದ್ದು ಗೊತ್ತೇ ಆಗಲಿಲ್ಲ.
ಬೆಳಿಗ್ಗೆ ಐದು ಗಂಟೆಗೇ ಎದ್ದು ಅಮೇದಿಕಲ್ಲಿನ ತುದಿಭಾಗಕ್ಕೆ ಕತ್ತಲಲ್ಲೇ ಹೊರಟಿದ್ದೆವು. ಅಮೇದಿಕಲ್ಲಿನ ಶಿರಭಾಗವೆಂದರೆ ಅದೊಂದು ಬೃಹದಾಕಾರದ ಬಂಡೆ. ಸ್ವಲ್ಪ ನಿಧಾನಕ್ಕೆ ಜಾಗರೂಕರಾಗಿ ಏರಬೇಕಾಗುತ್ತದೆ. ಸ್ವಲ್ಪ ಜಾರಿದರೂ ಆಳಾವಾದ ಪ್ರಪಾತ. ನಾನು ಕತ್ತಲೆಯಲ್ಲೇ ಉಳಿದವರಿಗಿಂತ ಮೊದಲೇ ಬಂಡೆಯ ತುದಿ ಏರಿ ಹಾಯಾಗಿ ಮಲಗಿಕೊಂಡೆ. ನಾನು ಮೇಲೇರಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಅವರೆಲ್ಲ ನಿಧಾನವಾಗಿ ಬಂಡೆ ಏರಿ ಬರುತ್ತಿದ್ದಾಗ ನಾನು ಮಲಗಿ ಒಂದು ಕಾಲಿನ ಮೇಲೆ ಇನ್ನೊಂದು ಕಾಲನ್ನು ಮಡಿಚಿ ಅವರು ಬರುತ್ತಿರುವುದನ್ನೇ ನೋಡುತ್ತಿದ್ದೆ. ಅವರೆಲ್ಲರೂ ಮೇಲ್ಭಾಗದ ಬಂಡೆಯ ಒಂದು ಮಗ್ಗುಲಲ್ಲಿ ನನ್ನಿಂದ ೨೦ ಅಡಿ ಅಂತರದಲ್ಲಿ ಸಾಲಾಗಿ ನಿಂತು ಏನನ್ನೋ ತದೇಕಚಿತ್ತದಿಂದ, ಗಂಭೀರದಿಂದ ನೋಡುತ್ತಿದ್ದರು. ಜತೆಗೆ ಏನೋ ಪಿಸುಪಿಸು ಮಾತನಾಡುತ್ತಿದ್ದರು. ಅವರು ಗುಟ್ಟುಗುಟ್ಟಾಗಿ ಏನು ಮಾತನಾಡುತ್ತಿದ್ದಾರೆ ಎಂದು ನಾನು ಸೂಕ್ಷ್ಮವಾಗಿ ಕೇಳಿಸಿಕೊಂಡೆ.
ಆಗ ಒಬ್ಬರು ’ಕಡವೆ, ಕಡವೆ!’ ಎಂದೂ ಇನ್ನೊಬ್ಬರು ’ಇಲ್ಲಾ ಕರಡಿ, ಕರಡಿ’ ಎಂದೂ ಮತ್ತೊಬ್ಬರು ’ಎರಡು ಕರಡಿಗಳು ಹತ್ತಿರ ಹತ್ತಿರ ಇವೆ’ ಎಂದೂ ಹೇಳುತ್ತಿದ್ದರು. ಆ ಕತ್ತಲೆಯಲ್ಲಿ ಅವರಿಗೆ ಯಾವ ಕರಡಿ, ಯಾವ ಕಡವೆಯಾದರೂ ಹೇಗೆ ಕಾಣಲು ಸಾಧ್ಯ ಎಂದು ನಾನು ಕುತೂಹಲದಿಂದ ಮಲಗಿದ್ದಲಿಂದಲೇ ಸ್ವಲ್ಪ ಮಗ್ಗಲು ಬದಲಿಸಿ ಕಳಗೆ ನೋಡಲಾರಂಭಿಸಿದೆ. ಕರಡಿ, ಕಡವೆ ಬಿಡಿ, ಕತ್ತಲೆ ಬಿಟ್ಟು ಬೇರೆ ಏನೂ ಕಾಣಿಸಲಿಲ್ಲ. ನಾನು ಅಲುಗಾಡಿದ ತಕ್ಷಣವೇ ಅವರು ’ಶ್... ಹೊರಟಿತು... ಹೊರಟಿತು...!’ ಅನ್ನುತ್ತಿದ್ದರು. ಮತ್ತೆ ಮಾತೇ ಇಲ್ಲ. ನಾನು ಅವರನ್ನು ನೋಡುತ್ತಲೇ ಇದ್ದೆ. ಅವರು ಸ್ತಬ್ಧವಾದಾಗ ನಾನು ಎದ್ದು ಕುಳಿತೆ. ಆಗ ದೇವು ಹನೇಹಳ್ಳಿಯವರು ’ಹೊಳ್ಳಾ... ಹೊಳ್ಳಾ...’ ಎಂದು ಕರೆಯುತ್ತಿದ್ದಾಗ ನಾನು ’ಓ’ ಅಂದಾಗ ಅವರು ’ಕೈಯೆತ್ತಿ... ಕಾಲೆತ್ತಿ’ ಎನ್ನುತ್ತಿದ್ದರು. ಅರೆ... ಇವರೇನು ಬೆಳಗ್ಗಿನ ವ್ಯಾಯಾಮ ಹೇಳಿಕೊಡುತ್ತಿದ್ದಾರೋ? ಎಂದು ನಾನು ಎದ್ದು ನಿಂತಾಗ ಅವರೆಲ್ಲರೂ ಒಮ್ಮೆಲೇ ’ಹೋ... ಹೋ...’ ಎಂದು ನಗಲಾರಾಂಭಿಸಿದರು.
ಅಷ್ಟು ಹೊತ್ತು ಅವರು ಕುತೂಹಲದಿಂದ ಯಾವ ಕರಡಿಯನ್ನು ನೋಡುತ್ತಿದ್ದರೋ ಅದು ನಾನೇ ಆಗಿದ್ದೆ. ನನ್ನನ್ನೇ ಕರಡಿಯೆಂದು ಭಾವಿಸಿ ಅವರು ಮೌನವಾಗಿ ವೀಕ್ಷಿಸುತ್ತಿದ್ದರು. ಕತ್ತಲೆಯಿದ್ದರೂ ಕಲ್ಲಿನ ಮೇಲೆ ನಾನು ಮಲಗಿ ಕಾಲಿನ ಮೇಲೆ ಕಾಲಿಟ್ಟು ಆಗಾಗ ಕಾಲನ್ನು ಸ್ವಲ್ಪ ಅಲುಗಾಡಿಸುತ್ತಿದ್ದುದು ಅವರಿಗೆ ಏನೋ ಅಸ್ಪಷ್ಟವಾಗಿ ಒಂದು ಜೀವಂತ ವಸ್ತುವಿನಂತೆ ಕಾಣಿಸುತ್ತಿತ್ತು. ಅಂದು ಚಾರಣದ ಕೊನೆಯವರೆಗೂ ನನ್ನನ್ನು ಎಲ್ಲರೂ ’ಕರಡಿ ಹೊಳ್ಳ’ ಎಂದು ತಮಾಷೆ ಮಾಡುತ್ತಿದ್ದರು. ಇಂದಿಗೂ ಅಮೇದಿಕಲ್ಲು ಎಂದಾಕ್ಷಣ ಮತ್ತೆ ಮತ್ತೆ ಅದೇ ’ಕರಡಿ’ ನೆನಪುಗಳು.
ಭಾನುವಾರ, ನವೆಂಬರ್ 20, 2011
ವಿರೂಪಾಕ್ಷ ದೇವಾಲಯ - ಬಿಳಗಿ
ಐತಿಹಾಸಿಕವಾಗಿ ಬಹಳ ಪ್ರಾಮುಖ್ಯತೆಯುಳ್ಳ ಸ್ಥಳ ಬಿಳಗಿ. ಇಲ್ಲಿ ದೊರಕಿರುವ ೧೫೭೧ರ ಶಿಲಾಶಾಸನವೊಂದರ ಪ್ರಕಾರ ವಿರೂಪಾಕ್ಷ ದೇವಾಲಯವನ್ನು ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
ವಿರಳವಾಗಿ ಕಾಣಬರುವ ಸ್ವಾಗತ ಮಂಟಪವನ್ನು ಇಲ್ಲಿ ಕಾಣಬಹುದು. ದೇವಾಲಯದ ಹೊರಗೂ ಮತ್ತು ಒಳಗೂ ವಿಶ್ರಮಿಸಲು ಅವಕಾಶವಿರುವಂತೆ ನಿರ್ಮಿಸಲಾಗಿರುವ ಸ್ವಾಗತ ಮಂಟಪದ ದ್ವಾರದಲ್ಲಿ ದ್ವಾರಪಾಲಕರನ್ನು ಕೆತ್ತಲಾಗಿದೆ. ಇಬ್ಬರೂ ದ್ವಾರಪಾಲಕರು ಭಿನ್ನವಾಗಿದ್ದಾರೆ. ಮುಖರೂಪ, ಪೋಷಾಕು, ನಿಂತಿರುವ ರೀತಿ ಎಲ್ಲವೂ ಭಿನ್ನವಾಗಿವೆ. ದ್ವಾರಪಾಲಕರು ಒಂದೇ ರೀತಿಯಲ್ಲಿರುವುದನ್ನು ನೋಡಿ ನೋಡಿ ಇಲ್ಲಿ ಭಿನ್ನವಾಗಿರುವುದನ್ನು ಗಮನಿಸಿದಾಗ ವಿಚಿತ್ರವೆನಿಸಿತು. ಇಬ್ಬರು ದ್ವಾರಪಾಲಕರೆಂದರೆ ಇಬ್ಬರು ಪ್ರತ್ಯೇಕ ವ್ಯಕ್ತಿಗಳು ತಾನೆ? ಮುಖದ ರೂಪದಲ್ಲಿ ಬದಲಾವಣೆ ಸಹಜವಿರಬಹುದು ಆದರೆ ಪೋಷಾಕು, ಆಯುಧ, ಇತ್ಯಾದಿಗಳಲ್ಲಿ ಭಿನ್ನತೆ?
ನಂದಿಮಂಟಪದ ನಾಲ್ಕೂ ಕಂಬಗಳಲ್ಲಿ ಹಲವಾರು ಕೆತ್ತನೆಗಳನ್ನು ಕಾಣಬಹುದು. ಶಂಖ ಊದುತ್ತಿರುವ ವ್ಯಕ್ತಿಯೊಬ್ಬನ ಕೆತ್ತನೆ ಸ್ವಾಗತ ಮಂಟಪ ದಾಟಿದ ಕೂಡಲೇ ಕಾಣಬರುತ್ತದೆ. ದೇವಾಲಯಕ್ಕೆ ಬರುವವರಿಗೆ ಶಂಖ ಊದುವ ಮೂಲಕ ಸ್ವಾಗತ ಕೋರುವ ಸಂಕೇತವಿರಬಹುದು.
ನಂದಿಯ ಮೂರ್ತಿ ನುಣುಪಾಗಿ ಸುಂದರವಾಗಿದೆ. ಕೆಲವೆಡೆ ನಂದಿಯು ರೌದ್ರಾವತಾರ ತಾಳಿದಂತೆ ಅಥವಾ ಕೋಪಿಷ್ಠನಂತೆ ಕಾಣಬರುತ್ತದೆ. ಆದರೆ ಇಲ್ಲಿ ಸೌಮ್ಯಮುಖಭಾವವನ್ನು ಹೊಂದಿರುವ ನಂದಿಯನ್ನು ಕಾಣಬಹುದು.
ಮುಖಮಂಟಪದ ಪ್ರವೇಶಿಸುವಲ್ಲಿ ಉದ್ದಂಡ ನಮಸ್ಕಾರ ಮಾಡುವ ಶೈಲಿಯಲ್ಲಿ ಮಹಿಳೆಯೊಬ್ಬಳ ಚಿತ್ರವನ್ನು ನೆಲದಲ್ಲಿ ಕಾಣಬಹುದು. ಕೆಳದಿ ಅರಸರ ಎಲ್ಲಾ ದೇವಾಲಯಗಳಲ್ಲಿ ಮತ್ತು ಕದಂಬರ ಕೆಲವು ದೇವಾಲಯಗಳಲ್ಲಿ ಈ ತರಹದ ಚಿತ್ರಗಳನ್ನು ಕಾಣಬಹುದು. ತಾವು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ್ತವಾಗಲೆಂದು ಅರಸರು, ರಾಣಿಯರು, ದಾಸಿಯರು, ರಾಜನರ್ತಕಿಯರು ತಮ್ಮ ಚಿತ್ರವನ್ನು ಬಿಡಿಸುವಂತೆ ದೇವಾಲಯ ನಿರ್ಮಾಣಗೊಳ್ಳುವಾಗ ಕೋರಿಕೊಳ್ಳುತ್ತಾರೆ. ಇಲ್ಲಿ ’ದಾಸಿ’ ಎಂದು ಬರೆದಿರುವುದನ್ನು ಗಮನಿಸಬಹುದು. ದೇವಾಲಯದೊಳಗೆ ಬರುವವರು ಇವನ್ನು ತುಳಿದೇ ಬರಬೇಕಾಗುವುದರಿಂದ ಆ ರೀತಿಯಲ್ಲಿ ಪ್ರಾಯಶ್ಚಿತ್ತ ದೊರಕಿದಂತಾಗುವುದು ಎಂಬ ನಂಬಿಕೆ.
ಕಕ್ಷಾಸನ ಹೊಂದಿರುವ ಮುಖಮಂಟಪದಲ್ಲಿ ೮ ಕಂಬಗಳಿವೆ. ನಡುವೆ ಇರುವ ನಾಲ್ಕು ಕಂಬಗಳಲ್ಲಿ ಅಲ್ಪ ಸ್ವಲ್ಪ ಕೆತ್ತನೆಗಳನ್ನು ಕಾಣಬಹುದು. ಅಂಕಣದಲ್ಲಿ ತಾವರೆಯ ಕೆತ್ತನೆಯಿದೆ. ಅಂತರಾಳದ ದ್ವಾರಕ್ಕೂ ದ್ವಾರಪಾಲಕರಿದ್ದಾರೆ. ಇಲ್ಲೂ ಪೋಷಾಕಿನಲ್ಲಿ ವ್ಯತ್ಯಾಸ ಕಾಣಬಹುದು.
ಅಂತರಾಳದ ದ್ವಾರಕ್ಕೆ ಯಾವಾಗಲೂ ಬೀಗ ಹಾಕಿರುತ್ತದೆ. ಅಂತರಾಳದಲ್ಲಿ ಗಣೇಶನ ಮೂರ್ತಿಯೊಂದು ಕಂಡುಬಂದಿತು. ಇಲ್ಲಿಂದಲೇ ಪ್ರದಕ್ಷಿಣಾ ಪಥವೂ ಆರಂಭಗೊಳ್ಳುತ್ತದೆ. ಚತುರ್ಶಾಖಾ ದ್ವಾರವುಳ್ಳ ಗರ್ಭಗುಡಿಯಲ್ಲಿ ಎತ್ತರವಾದ ಪಾಣಿಪೀಠದ ಮೇಲೆ ಶಿವಲಿಂಗವಿದೆ. ಗರ್ಭಗುಡಿಯ ಮೇಲೆ ಕದಂಬ ನಗರ ಶೈಲಿಯ ಸಣ್ಣ ಶಿಖರವಿದೆ.
ದೇವಾಲಯದ ಹೊರಗೋಡೆಯಲ್ಲಿ ಮೂರು ಪಾರ್ಶ್ವಗಳಲ್ಲಿ ಮೂರು ಸುಂದರ ಕೆತ್ತನೆಗಳನ್ನು ಜಾಲಂಧ್ರಗಳ ರೂಪದಲ್ಲಿ ಕೆತ್ತಲಾಗಿದೆ. ಒಂದನೇಯದರಲ್ಲಿ ನರ್ತಕಿಯೊಬ್ಬಳು ನೃತ್ಯ ಮಾಡುತ್ತಿದ್ದು ವಾದ್ಯಗಾರರಿಂದ ಸುತ್ತುವರಿದಿರುವಂತೆ ತೋರಿಸಲಾಗಿದೆ. ನರ್ತಕಿಯ ಮೇಲೆ ಗಣೇಶನನ್ನು ಕೆತ್ತಲಾಗಿದೆ. ಎರಡನೇ ಕೆತ್ತನೆಯಲ್ಲಿರುವವರು ಶಿವ ಪಾರ್ವತಿಯರಾಗಿರಬಹುದು ಎಂದು ನನ್ನ ಊಹೆ. ಮೂರನೆಯದು ಏನೆಂದು ನನಗೆ ತಿಳಿಯಲಿಲ್ಲ. ಪ್ರದಕ್ಷಿಣಾ ಪಥಕ್ಕೆ ಬೆಳಕು ಹರಿಯಲು ಸಹಕಾರಿಯಾಗುವಂತೆ ಈ ಕೆತ್ತನೆಗಳನ್ನು ಜಾಲಂಧ್ರಗಳ ರೂಪದಲ್ಲಿ ನಿರ್ಮಿಸಲಾಗಿದೆ.
ಆಗಿನ ಕಾಲದಲ್ಲಿ ಬಿಳಗಿಯನ್ನು ’ಶ್ವೇತಪುರ’ವೆಂದು ಕರೆಯಲಾಗುತ್ತಿತ್ತು. ಇಲ್ಲಿ ಕೋಟೆ ಮತ್ತು ಅರಮನೆಗಳು ಇದ್ದವು. ಈಗ ಅವುಗಳ ಕುರುಹು ಕೂಡಾ ಇಲ್ಲ. ಪ್ರಮುಖ ಜೈನ ಧಾರ್ಮಿಕ ಕೇಂದ್ರವಾಗಿದ್ದ ಬಿಳಗಿಯನ್ನು ಆಳಿದವರು ಜೈನರು. ಇಲ್ಲಿರುವ ಅಗಾಧ ಗಾತ್ರದ ಪಾರ್ಶ್ವನಾಥ ಬಸದಿಯನ್ನು ಇಸವಿ ೧೫೯೩ರಲ್ಲಿ ಜೈನ ದೊರೆ ’ನರಸಿಂಹ’ ಎಂಬವನು ನಿರ್ಮಿಸಿದನು. ಈತ ಬಿಳಗಿಯ ಸ್ಥಾಪಕನೂ ಹೌದು. ತದನಂತರ ಇಸವಿ ೧೬೫೦ರಲ್ಲಿ ಜೈನ ದೊರೆ ’ರಾಜಪ್ಪರಾಜ’ನ ಯುವರಾಜ ’ಘಾಟೆಒಡೆಯ’ ಎಂಬವನು ಈ ಬಸದಿಯನ್ನು ಈಗಿರುವ ಅಗಾಧ ಗಾತ್ರಕ್ಕೆ ವಿಸ್ತರಿಸಿ ಅಭಿವೃದ್ಧಿಪಡಿಸಿದನು.
ಬಿಳಗಿಯಲ್ಲೊಂದು ಪ್ರಾಚೀನ ಬಾವಿಯಿದೆ. ಇದನ್ನು ’ಗೋಲಬಾವಿ’ ಎಂದು ಕರೆಯುತ್ತಾರೆ. ಸಂಪೂರ್ಣವಾಗಿ ಮುಚ್ಚಿಹೋಗಿದ್ದ ಈ ಬಾವಿಯನ್ನು ಊರವರ ಸಹಕಾರದಿಂದ ಪ್ರಾಚ್ಯ ವಸ್ತು ಇಲಾಖೆ ಮತ್ತೆ ಅಗೆದು ತೆಗೆದು ತನ್ನ ಮೂಲ ರೂಪಕ್ಕೆ ಬರುವಂತೆ ಮಾಡಿದೆ. ಈಗ ಈ ಗೋಲಬಾವಿ ಬಿಳಗಿಯ ಪ್ರಮುಖ ಆಕರ್ಷಣೆ.
ಅಂದು - ಇಂದು
ಮೇಲಿರುವುದು ವಿರೂಪಾಕ್ಷ ದೇವಾಲಯದ ೧೮೯೦ರಲ್ಲಿ ತೆಗೆದ ಚಿತ್ರ. ದೇವಾಲಯದ ಪಾರ್ಶ್ವಗಳಲ್ಲಿ ಜಾಲಂಧ್ರಗಳ ರೂಪದಲ್ಲಿ ಈಗಿರುವ ಮೂರಕ್ಕಿಂತ ಹೆಚ್ಚಿನ ಕಿಂಡಿಗಳಿದ್ದವು ಎಂಬುವುದನ್ನು ನಿಖರವಾಗಿ ಹೇಳಬಹುದು. ಚಿತ್ರದಲ್ಲಿ ಕಾಣುವ ಒಂದೇ ಪಾರ್ಶ್ವದಲ್ಲಿ ನಾಲ್ಕು ಕಿಂಡಿಗಳನ್ನು ಕಾಣಬಹುದು. ಈಗ ಉಳಿದಿರುವುದು ಒಂದು ಮಾತ್ರ. ಚಿತ್ರದಲ್ಲಿ ಕಾಣುವ ಮುಖಮಂಟಪಕ್ಕೆ ಇದ್ದ ಹೆಚ್ಚುವರಿ ಪ್ರವೇಶವನ್ನು ಈಗ ಮುಚ್ಚಲಾಗಿದೆ.
ಕಪ್ಪು ಬಿಳುಪಿನಲ್ಲಿರುವುದು ಪಾರ್ಶ್ವನಾಥ ಬಸದಿಯ ೧೮೮೫ರ ಚಿತ್ರ. ವರ್ಣ ಚಿತ್ರ ೨೦೧೧ರದ್ದು.
ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ
ಭಾನುವಾರ, ಅಕ್ಟೋಬರ್ 02, 2011
ಸವೆದ ಹಾದಿ...
ಇಂದಿಗೆ ಸರಿಯಾಗಿ ಏಳು ವರ್ಷಗಳ (ಅಕ್ಟೋಬರ್ ೩, ೨೦೦೪) ಹಿಂದೆ ತೆಗೆದ ಚಿತ್ರವಿದು. ಗೆಳೆಯ ಲಕ್ಷ್ಮೀನಾರಾಯಣ(ಪುತ್ತು), ಮಧುಕರ್ ಕಳಸ್ ಮತ್ತು ನಾನು ದೇವಕಾರ್ ಜಲಧಾರೆಯ ಸಮೀಪ ತೆಗೆಸಿಕೊಂಡ ಚಿತ್ರ. ಲುಂಗಿಯಲ್ಲಿ ನಾನು ಕೈಗೊಂಡ ಮೊದಲ ಮತ್ತು ಕೊನೆಯ ಚಾರಣ! ಅಂಗಿ ಕೂಡಾ ಧರಿಸದೇ ಕೈಗೊಂಡ ಮೊದಲ ಮತ್ತು ಕೊನೆಯ ಚಾರಣವೂ ಹೌದು. ಅವರಿಬ್ಬರು ಸ್ವಲ್ಪವೂ ಬೆವರಿಲ್ಲ. ಆದರೆ ನಾನು ಬೆವರಿನಲ್ಲಿ ತೊಯ್ದುಹೋಗಿದ್ದೆ. ತುಂಬಾ ತುಂಬಾ ನೆನಪು ಬರುವ ಪ್ರಯಾಣ ಮತ್ತು ಚಾರಣವಿದು. ಮಧುಕರ್ ಈಗ ದೇವಕಾರ್ ಬಿಟ್ಟು ಸಮೀಪದ ಕಳಚೆಗೆ ಸ್ಥಳಾಂತರಗೊಂಡಿದ್ದಾರೆ. ಪುತ್ತು, ಶಾಶ್ವತವಾಗಿ ಹಳದೀಪುರ ಬಿಟ್ಟು ಗೋವಾಗೆ ತೆರಳಿ ಎರಡು ವರ್ಷಗಳೇ ಕಳೆದವು. ನಾನು ಉಡುಪಿಯಲ್ಲೇ ಇದ್ದರೂ ದೇವಕಾರಿಗೆ ಕೊನೆಯ ಭೇಟಿ ನೀಡಿ ನಾಲ್ಕು ವರ್ಷಗಳಾದವು. ಆದರೂ ಈ ಸ್ಥಳದ ಗುಂಗು ನನ್ನನ್ನು ಬಿಟ್ಟು ತೆರಳಿಲ್ಲ. ಇಂದು (ಅಕ್ಟೋಬರ್ ೨) ದೇವಕಾರಿಗೆ ಮೊದಲ ಭೇಟಿ ನೀಡಿ ಸರಿಯಾಗಿ ಏಳು ವರ್ಷಗಳಾದವು. ಹಾಗೇನೇ ನಿನ್ನೆ (ಅಕ್ಟೋಬರ್ ೧) ’ಅಲೆಮಾರಿಯ ಅನುಭವಗಳು’ ಐದು ವರ್ಷಗಳನ್ನು ಪೂರ್ಣಗೊಳಿಸಿತು. ಈ ಪರಿ ಬರೆದು ರಾಶಿ ಹಾಕಲಿರುವೆನೆಂದು ಕಲ್ಪಿಸಿರಲಿಲ್ಲ. ಎಷ್ಟೇ ಕೆಟ್ಟದಾಗಿ ಬರೆದರೂ ಓದಿ ಪ್ರೋತ್ಸಾಹಿಸಿದ ತಮಗೆಲ್ಲರಿಗೂ ಧನ್ಯವಾದಗಳು.
ಭಾನುವಾರ, ಸೆಪ್ಟೆಂಬರ್ 18, 2011
ಕಪಿಲೇಶ್ವರ ದೇವಾಲಯ - ದಾವಣೀಬೈಲು
ಸುಮಾರು ೭೦೦ ವರ್ಷಗಳ ಹಿಂದಿನ ದೇವಾಲಯ ಎಂಬ ಮಾಹಿತಿ ಹೊರತುಪಡಿಸಿ ದೇವಾಲಯದ ಬಗ್ಗೆ ಬೇರೆ ಯಾವ ಮಾಹಿತಿಯೂ ಲಭ್ಯವಿಲ್ಲ. ದೇವಾಲಯದ ಮುಂದೆ ವಿಶಾಲವಾದ ಕೆರೆಯಿದ್ದು ದೇವಾಲಯದ ಮುಖಮಂಟಪದಿಂದ ಅದೊಂದು ಸುಂದರ ನೋಟ.
ಭವ್ಯವಾಗಿ ನಿರ್ಮಿಸಲಾಗಿರುವ ಮುಖಮಂಟಪಕ್ಕೆ ಮೂರು ದಿಕ್ಕುಗಳಿಂದ ಪ್ರವೇಶವಿದ್ದು ಸುತ್ತಲೂ ಕಕ್ಷಾಸನವಿದೆ. ಮುಖಮಂಟಪದಲ್ಲಿ ಒಟ್ಟು ೩೨ ಕಂಬಗಳಿದ್ದು ಇವುಗಳಲ್ಲಿ ೧೬ ಕಂಬಗಳನ್ನು ಕಕ್ಷಾಸನದ ಮೇಲೆ ನಿರ್ಮಿಸಲಾಗಿದೆ.
ಮುಖಮಂಟಪದಲ್ಲಿರುವ ೨೫ ಅಂಕಣಗಳಲ್ಲಿ ವಿವಿಧ ರೀತಿಯ ತಾವರೆಗಳನ್ನು ಕಾಣಬಹುದು. ಕೆಲವು ಅಂಕಣಗಳಲ್ಲಿನ ಕೆತ್ತನೆಗಳು ನಶಿಸಿದ್ದರೂ ಹೆಚ್ಚಿನವು ಉಳಿದುಕೊಂಡಿವೆ.
ಮುಖಮಂಟಪದ ನಟ್ಟನಡುವಿನ ಅಂಕಣ ಬಹಳ ಆಕರ್ಷಕವಾಗಿದೆ. ವೃತ್ತವೊಂದರ ಒಳಗೆ ೨೫ ತಾವರೆಗಳನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ಕೆಲವು ತಾವರೆಗಳು ತಮ್ಮ ಕೋಷ್ಠದಿಂದ ನಾಪತ್ತೆಯಾಗಿವೆ ಮತ್ತು ಇನ್ನೂ ಕೆಲವು ಭಾಗಶ: ಅಳಿಸಿಹೋಗಿವೆ. ಆದರೂ ಈ ರಚನೆ ಆಕರ್ಷಕವಾಗಿದ್ದು ಗಮನ ಸೆಳೆಯುತ್ತದೆ.
ಇದೊಂದು ಅದ್ಭುತ ಮತ್ತು ಸೃಜನಶೀಲ ಕೆತ್ತನೆ. ವೃತ್ತದೊಳಗೆ ಹಲವಾರು ಚೌಕಗಳು, ಆ ಚೌಕಗಳ ನಡುವೆ ಹಾಗೂ ಹೊರಗೆ ತಾವರೆಗಳು ಮತ್ತು ೨ ಚೌಕಗಳನ್ನು ಒಂದರೊಳಗೊಂದು ನುಸುಳುವ ರೀತಿಯಲ್ಲಿ ಕೆತ್ತಿರುವುದು ಇವೆಲ್ಲಾ ಶಿಲ್ಪಿಯ ನೈಪುಣ್ಯತೆಗೆ ಸಾಕ್ಷಿಯಾಗಿವೆ.
ಮುಖಮಂಟಪದ ಛಾವಣಿಯ ಹೊರಚಾಚಿದ ಭಾಗದಲ್ಲಿ ಪ್ರಾಣಿ ಪಕ್ಷಿಗಳನ್ನು ತೋರಿಸಲಾಗಿದೆ. ಸಿಂಹ, ಆನೆ ಮತ್ತು ಹಂಸಗಳ ವೈವಿಧ್ಯಮಯ ಕೆತ್ತನೆಗಳನ್ನು ಇಲ್ಲಿ ಕಾಣಬಹುದು.
ನವರಂಗದ ದ್ವಾರವು ಅಷ್ಟಶಾಖೆಗಳಿಂದ ಅಲಂಕೃತಗೊಂಡಿದ್ದು ಲಲಾಟದಲ್ಲಿ ಲಕ್ಷ್ಮೀಯ ಕೆತ್ತನೆಯಿದೆ. ದ್ವಾರದ ಮೇಲ್ಗಡೆ ೬ ಸಣ್ಣ ಗೋಪುರಗಳಿವೆ. ಎಲ್ಲಾ ಶಾಖೆಗಳು ತೋರಣಗಳಿಂದ ಅಲಂಕೃತವಾಗಿವೆ.
ನವರಂಗದ ದ್ವಾರದ ಪಾರ್ಶ್ವಗಳಲ್ಲಿರುವ ಸ್ತಂಭಗಳ ತಳಭಾಗದಲ್ಲಿ ಚಾಮರಧಾರಿಯರನ್ನು ಬಹಳ ಸುಂದರವಾಗಿ ತೋರಿಸಲಾಗಿದೆ.
ನವರಂಗದಲ್ಲಿ ನಾಲ್ಕು ಕಂಬಗಳಿವೆ ಮತ್ತು ನಾಲ್ಕು ದೇವಕೋಷ್ಠಗಳಿವೆ. ಎಲ್ಲಾ ದೇವಕೋಷ್ಠಗಳು ಖಾಲಿಯಾಗಿವೆ. ಅಂತರಾಳದ ದ್ವಾರವು ಅಲಂಕಾರರಹಿತ ಸಪ್ತಶಾಖೆಗಳನ್ನು ಹೊಂದಿದ್ದು ಲಲಾಟದಲ್ಲಿ ಲಕ್ಷ್ಮೀಯನ್ನು ಹೊಂದಿದೆ. ದ್ವಾರದ ಮೇಲಿನ ಅಡ್ಡಪಟ್ಟಿಯಲ್ಲಿ ಆರು ಕೆತ್ತನೆಗಳಿದ್ದು ಅವೇನೆಂದು ತಿಳಿಯಲಿಲ್ಲ.
ಗರ್ಭಗುಡಿಯ ದ್ವಾರ ಸಂಪೂರ್ಣವಾಗಿ ಅಲಂಕಾರರಹಿತವಾಗಿದೆ! ಲಲಾಟವೂ ಖಾಲಿ. ಗರ್ಭಗುಡಿಯೂ ಖಾಲಿ. ಗರ್ಭಗುಡಿಯಲ್ಲಿ ೯ ಅಂಕಣಗಳಿದ್ದು ಪ್ರತಿಯೊಂದರಲ್ಲೂ ತಾವರೆಗಳನ್ನು ಕೆತ್ತಲಾಗಿದೆ.
ಬಹಳ ಹಿಂದೆ ನಿಧಿಶೋಧಕರು ಶಿವಲಿಂಗವನ್ನು ಕಿತ್ತೆಸೆದು ಗರ್ಭಗುಡಿಯನ್ನು ಅಗೆದುಹಾಕಿದ್ದರು. ಅಂದಿನಿಂದ ಇಂದಿನವರೆಗೆ ಶಿವಲಿಂಗವು ದೇವಾಲಯದ ಹೊರಗೆ ಅನಾಥವಾಗಿ ಬಿದ್ದುಕೊಂಡಿದೆ. ನಂದಿಯ ಮೂರ್ತಿಯನ್ನು ತೆಗೆಯಲಾಗಿದ್ದು ಅದನ್ನು ಕೂಡ ಹಾನಿಗೊಂಡಿರುವ ಶಿವಲಿಂಗದ ಸಮೀಪದಲ್ಲೇ ಕಾಣಬಹುದು.
ಕಕ್ಷಾಸನದ ಹೊರಗೋಡೆಯಲ್ಲಿ ಸ್ತಂಭಗಳನ್ನು ಕೆತ್ತಲಾಗಿದೆ. ಪ್ರತಿ ಸ್ತಂಭದ ಮೇಲೆ ಪುಟ್ಟ ಗೋಪುರವನ್ನು ರಚಿಸಲಾಗಿದೆ. ಈ ಸ್ತಂಭಗಳ ನಡುವೆ ಏಕತೋರಣವಿದ್ದರೆ, ಗೋಪುರಗಳ ನಡುವೆ ವಿವಿಧ ಕೆತ್ತನೆಗಳಿವೆ.
ಈ ಕೆತ್ತನೆಗಳಲ್ಲಿ ಸಿಂಹ, ಗಣೇಶ, ವಾದ್ಯಗಾರರು, ನೃತ್ಯಗಾರರು, ಆನೆ, ವಾನರ, ಮಾರ್ಜಾಲ, ಶ್ವಾನ, ಅಶ್ವ ಇತ್ಯಾದಿಗಳನ್ನು ಕಾಣಬಹುದು.
ದೇವಾಲಯದ ಹೊರಗೋಡೆಯಲ್ಲಿ ದಿಕ್ಕಿಗೊಂದರಂತೆ ಗೋಪುರ ಹೊಂದಿರುವ ೩ ಖಾಲಿ ದೇವಕೋಷ್ಠಗಳಿವೆ. ಇವುಗಳಲ್ಲಿ ಒಂದರ ಗೋಪುರದಲ್ಲಿ ಈ ಕೆಳಗಿನ ಕೆತ್ತನೆಯಿತ್ತು.
ಕರಿಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿರುವುದರಿಂದ ದೇವಾಲಯವನ್ನು ’ಕಪ್ಪುಗೋಡು ಕಪಿಲೇಶ್ವರ ದೇವಾಲಯ’ವೆಂದೂ ಕರೆಯುತ್ತಾರೆ. ನಾನು ಚಿತ್ರ ತೆಗೆಯುತ್ತಿರಬೇಕಾದರೆ ಓಮ್ನಿಯೊಂದು ದೇವಾಲಯದ ಬಳಿ ಬಂತು. ಅದರ ಚಾಲಕ ಸ್ಥಾನದಲ್ಲಿದ್ದ ಯುವ ವ್ಯಕ್ತಿ ಇಳಿದು ಬಂದು ನನ್ನ ಬಗ್ಗೆ ಮಾಹಿತಿ ಕೇಳತೊಡಗಿದ. ಆತನ ಪ್ರಶ್ನೆಗಳಿಂದ ಆಶ್ಚರ್ಯಚಕಿತನಾದರೂ ಸಭ್ಯನಂತೆ ತೋರುತ್ತಿದ್ದ ಕಾರಣ ತಾಳ್ಮೆಯಿಂದ ಉತ್ತರ ನೀಡಿದೆ.
ಆತ ಅದೇ ಊರಿನ ವ್ಯಕ್ತಿಯಾಗಿದ್ದು ದೇವಾಲಯದ ಟ್ರಸ್ಟಿನ ಮುಖ್ಯಸ್ಥನೂ ಹೌದು. ಪಾಳು ಬಿದ್ದ ದೇವಾಲಯವನ್ನು ಈ ಮಟ್ಟಕ್ಕೆ ದುರಸ್ತಿ ಮಾಡಿದರೂ ಊರಿನ ಕೆಲವರು ದೇವಾಲಯಕ್ಕೆ ಸೇರಿದ ಜಾಗವನ್ನು ಅತಿಕ್ರಮಣ ಮಾಡಲು ಮುಂದಾಗಿರುವುದನ್ನು ಅವರು ತಿಳಿಸಿದರು. ದೇವಾಲಯಕ್ಕೆ ಬರಬೇಕಾದರೆ ಹಾಕಲಾಗಿದ್ದ ಬೇಲಿಯನ್ನು ಕಿತ್ತೊಗೆಯಲಾಗಿದ್ದನ್ನು ನಾನು ಗಮನಿಸಿದ್ದೆ. ಅದೇ ವಿಷಯದ ಬಗ್ಗೆ ಮಾತನಾಡಿದ ಅವರು ದೇವಾಲಯದ ಅಭಿವೃದ್ಧಿಗೆ ಎಂದು ಊರವರು ಸೇರಿ ನಿರ್ಧಾರಮಾಡಿದ ಸ್ಥಳದಲ್ಲೇ ಬೇಲಿಯನ್ನೂ ಹಾಕಲಾಗಿತ್ತು. ಆದರೆ ಅದೇ ಬೇಲಿಯನ್ನು ಅತಿಕ್ರಮಣ ಮಾಡುವ ಹುನ್ನಾರದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದರು.
ಈ ವಿಷಯದ ಬಗ್ಗೆ ತಾನು ಪೋಲೀಸರಲ್ಲಿ ದೂರು ನೀಡಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ. ಬೇಲಿ ಕಿತ್ತೊಗೆದ ವ್ಯಕ್ತಿಗಳೇನಾದರೂ ತಮ್ಮನ್ನು ಚಿತ್ರಗಳನ್ನು ತೆಗೆದು ಬರಲು ಕಳಿಸಿದರೋ ಎಂಬ ಸಂಶಯವುಂಟಾಗಿ ವಿಚಾರಿಸಲು ಬಂದೆ ಎಂದು ಹೇಳಿ ಕ್ಷಮೆಯಾಚಿಸಿ ತೆರಳಿದರು.
ಈ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಸ್ಥಳೀಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಮುಖ್ಯಮಂತ್ರಿ ಇವರಿಗೆಲ್ಲಾ ಪತ್ರ ಬರೆದು ಭೇಟಿಯೂ ಆಗಿದ್ದಾರೆ. ತಾಲೂಕು ಕೇಂದ್ರಕ್ಕೆ ಬಹಳ ಸಮೀಪವಿರುವ ಮತ್ತು ಪ್ರಮುಖ ರಸ್ತೆಯಿಂದ ಸ್ವಲ್ಪವೇ ಒಳಗಿರುವ ಈ ಪ್ರಶಾಂತ ಸ್ಥಳದಲ್ಲಿರುವ ಸುಂದರ ದೇವಾಲಯಕ್ಕೆ ಪ್ರವಾಸಿಗರು ಭೇಟಿ ನೀಡಬೇಕು ಎಂಬ ಇರಾದೆ ಅವರದ್ದು. ಅವರ ಇರಾದೆ ಸರಿಯಾಗಿಯೇ ಇದೆ. ಆದರೆ ಪ್ರವಾಸಿ ಸ್ಥಳವಾದ ನಂತರದ ಪರಿಣಾಮ ಅವರ ಕೈಯಲ್ಲಿಲ್ಲ ಅಲ್ವೇ?
ಮಾಹಿತಿ: ಜಿ ಆರ್ ಸತ್ಯನಾರಾಯಣ