ಭಾನುವಾರ, ಮೇ 08, 2016

ಮಿಂಚ್ಕಲ್


ಸುಮಾರು ೧೦ ವರ್ಷಗಳ ಹಿಂದೆ, ಗೆಳೆಯ ದಿನೇಶ್ ಹೊಳ್ಳ ಮಿಂಚುಕಲ್ಲಿಗೆ ಚಾರಣ ಆಯೋಜಿಸಿದ್ದರು. ಆ ಚಾರಣಕ್ಕೆ ತೆರಳಲು ನನಗೆ ಆಗಿರಲಿಲ್ಲ. ಘಟ್ಟದ ಕೆಳಗಿನಿಂದ ಮಿಂಚುಕಲ್ಲನ್ನು ಏರುವುದು ಒಂದು ಸವಾಲೇ ಸರಿ. ಅದು ಕಷ್ಟಕರ ಹಾದಿಯಾಗಿದ್ದು, ಬಹಳ ನಡೆಯಬೇಕಾಗುವುದು. ಆ ಚಾರಣ ತಪ್ಪಿದ್ದಕ್ಕೆ ನಾನು ಒಳಗೊಳಗೇ ಸಂತೋಷಪಟ್ಟಿದ್ದೆ.



೨೦೧೩ರ ಮಾರ್ಚ್ ತಿಂಗಳಲ್ಲಿ, ರಮೇಶ್ ಕಾಮತ್ ನೇತೃತ್ವದಲ್ಲಿ ನಾವು ಏಳು ಮಂದಿ ಮಿಂಚುಕಲ್ಲಿಗೆ ಹೊರಡಲು ಆಣಿಯಾದೆವು. ಆದರೆ ಚಾರಣ ಹಾದಿ ಘಟ್ಟದ ಮೇಲಿನಿಂದ ಆಗಿತ್ತು. ಚಾರಣ ಆರಂಭಿಸುವ ಹಳ್ಳಿಗೆ ಅದೊಂದು ಸಂಜೆ ಬಂದು ದೇವಾಲಯದ ಮುಂದೆ ರಾತ್ರಿ ಕಳೆದೆವು.


ಮರುದಿನ ಮುಂಜಾನೆ ಸುತ್ತಲೂ ಬೆಟ್ಟಗಳೆಲ್ಲಾ ಮಂಜಿನಲ್ಲಿ ಸ್ನಾನ ಮಾಡುತ್ತಿದ್ದವು. ಅದೊಂದು ಸುಂದರ ದೃಶ್ಯವಾಗಿತ್ತು. ಹಲವಾರು ವರ್ಷಗಳ ಹಿಂದೆ ಮೇರುತಿ ಬೆಟ್ಟದ ತುದಿಯನ್ನೇರಿದಾಗ ಅಲ್ಲಿಂದಲೂ ಇದೇ ತೆರನಾದ ದೃಶ್ಯವನ್ನು ಆನಂದಿಸಿದ್ದೆವು.


ಮುಂಜಾನೆ ಆರಕ್ಕೇ ಚಾರಣವನ್ನು ಆರಂಭಿಸಿದೆವು. ಈ ದಾರಿಯಾಗಿ ಚಾರಣಕ್ಕೆ ತೆರಳುವವರಿಗೆ ಊರಿನ ಮೂರು ನಾಯಿಗಳು ಎಂದಿಗೂ ಜೊತೆ ನೀಡುತ್ತವೆ. ಅವು ಕೂಡಾ ನಮ್ಮೊಂದಿಗೆ ಚಾರಣಕ್ಕೆ ಅಣಿಯಾದವು.



 
ಹಿತವಾದ ವಾತಾವರಣದಲ್ಲಿ ಆರಂಭವಾದ ಚಾರಣವನ್ನು ಆನಂದಿಸುತ್ತಾ ಮುಂದೆ ಸಾಗಿದೆವು. ಈ ದಾರಿಯಾಗಿ ಮಿಂಚುಕಲ್ಲಿಗೆ ತೆರಳುವುದು ಬಹಳ ಸುಲಭ. ಚಾರಣದುದ್ದಕ್ಕೂ ಹಾದಿ ತೆರೆದ ಸ್ಥಳದ ಮೂಲಕ ಹಾದುಹೋಗುವುದರಿಂದ ಎಲ್ಲೆಲ್ಲೂ ಪ್ರಕೃತಿಯ ಸುಂದರ ನೋಟ ಲಭ್ಯ.



ಹಲವಾರು ಸಣ್ಣ ಪುಟ್ಟ ಬೆಟ್ಟಗಳನ್ನು ಸುತ್ತುವರಿದು ದಾಟಿ ಹಾಗೂ ಹಲವಾರು ದಿಣ್ಣೆಗಳನ್ನು ಏರಿಳಿದು ಮುಂದೆ ಸಾಗಿದೆವು.



ಕೆಲವೆಡೆ ಒಂದು ಸಣ್ಣ ಬೆಟ್ಟದ ತುದಿ ತಲುಪಿದಾಗ ಮುಂದಿನ ಸುಂದರ ದೃಶ್ಯದ ಅನಾವರಣ. ಕಣ್ಮುಂದೆ ಕಾಣುತ್ತಿರುವ ದೃಶ್ಯದ ಮೂಲಕವೇ ನಾವೀಗ ಹಾದುಹೋಗಬೇಕೆಂಬ ರೋಮಾಂಚನ.



ದೂರದೂರಕ್ಕೂ ಬೆಟ್ಟಗಳೇ ರಾರಾಜಿಸುತ್ತಿದ್ದವು. ೩೬೦ ಕೋನದ ಎಲ್ಲಾ ಮೂಲೆಗಳಲ್ಲೂ ಸಾಲು ಸಾಲು ವಿವಿಧ ಗಾತ್ರದ ಆಕಾರದ ಬೆಟ್ಟಗಳು. ಅವುಗಳದ್ದೇ ಸಾಮ್ರಾಜ್ಯ. ಅವುಗಳದ್ದೇ ರಾಜ್ಯಭಾರ.



ಚಾರಣದ ಸಮಯದಲ್ಲಿ ಮಾತನಾಡುವುದನ್ನು ನಾನು ಎಂದಿಗೂ ಇಷ್ಟಪಡುವುದಿಲ್ಲ. ಅದರಲ್ಲೂ ನಾನು ಎಂದಿಗೂ ಉಳಿದವರಿಗಿಂತ ಹಿಂದೆಯೇ ಇದ್ದಿರುತ್ತೇನೆ. ಈ ಚಾರಣದಲ್ಲಂತೂ ಇದ್ದ ಏಳು ಜನರಲ್ಲಿ ಎರಡು ತಂಡಗಳಾಗಿದ್ದವು. ಒಂದು ತಂಡ ಮುಂದೆ ಸಾಗುತ್ತಿದ್ದು ಅದರಲ್ಲಿ ಆರು ಜನರು ಮತ್ತು ಮೂರು ನಾಯಿಗಳಿದ್ದರೆ ಇನ್ನೊಂದು ಒಂದು ವ್ಯಕ್ತಿಯ ತಂಡ ಹಿಂದೆ ಇತ್ತು. ಬೀಸುವ ಗಾಳಿಯ ಸದ್ದು ಮಾತ್ರ ನನ್ನ ಸಂಗಾತಿ. ಆ ಮೂರು ನಾಯಿಗಳಲ್ಲಿ, ಒಂದು ನಾಯಿ ನಾನು ಬಂದೇನೋ ಇಲ್ಲವೋ ಎಂದು ಖಾತ್ರಿ ಮಾಡಿಕೊಂಡು ನಂತರ ಮುಂದೆ ಸಾಗುತ್ತಿತ್ತು!!



ಹಿಂದಿನಿಂದ ಹೀಗೆ ಒಬ್ಬನೇ ಬರಬೇಕಾದರೆ ಚಾರಣವನ್ನು ಬಹಳ ಆನಂದಿಸಿದೆ. ಇಂತಹ ವಿಶಿಷ್ಟ ಒಂಟಿತನ ಮತ್ತೆ ಮತ್ತೆ ಸಿಗದು. ಚಾರಣದಲ್ಲಿ ಮಾತ್ರ ಅದು ಲಭ್ಯವಾಗುವುದು. ಇಲ್ಲಂತೂ ಜೊತೆಯಾಗಿದ್ದ ಬೆಟ್ಟಗಳೂ ಅಪರಿಮಿತ ಆನಂದ ನೀಡಿದವು.


 
ಒಂದೆಡೆ ವಿಶ್ರಮಿಸಲು ಸುಮಾರು ಹದಿನೈದು ನಿಮಿಷ ಕಳೆದೆವು. ಇಲ್ಲಿಂದ ಕುಂಭಕಲ್ಲು ಕಾಣುತ್ತಿತ್ತು.



ನಂತರ ಮತ್ತೆ ಬೆಟ್ಟ ದಿಣ್ಣೆಗಳ ನಡುವಿನಿಂದ ಚಾರಣ ಸಾಗಿತು. ಕೊನೆಗೂ ದೂರದಲ್ಲಿ, ಮತ್ತೊಂದು ವಿಶಾಲ ಪ್ರದೇಶದ ಅಂಚಿನಲ್ಲಿ ಮಿಂಚುಕಲ್ಲಿನ ಮೊದಲ ನೋಟ ಪ್ರಾಪ್ತಿಯಾಯಿತು.



ಎಡಭಾಗದಲ್ಲಿ ಆಳವಾದ ಇಳಿಜಾರಿನ ಕಣಿವೆ. ಅಲ್ಲಿ ಸಣ್ಣ ಶೋಲಾ ಕಾಡುಗಳ ಹಾಗೂ ಅವನ್ನು ಸುತ್ತುವರಿದ ಬೆಟ್ಟಗಳ ನೋಟ.



ಕೊನೆಗೂ ಮಿಂಚುಕಲ್ಲಿನ ತುದಿ ತಲುಪಿದೆವು. ಸಮಯ ೧೦ ಆಗಿತ್ತು. ಗಮ್ಯಸ್ಥಾನ ತಲುಪಲು ನಮಗೆ ನಾಲ್ಕು ತಾಸು ಬೇಕಾಯಿತು. ಆದರೆ ನಾವು ಬಹಳ ನಿಧಾನವಾಗಿ ಚಾರಣ ಮಾಡಿದ್ದೆವು. ಅಲ್ಲಲ್ಲಿ ನಿಲ್ಲುತ್ತ, ಹರಟುತ್ತಾ, ತುಂಬಾನೇ ರಿಲ್ಯಾಕ್ಸ್ ಆಗಿ ಮಾಡಿದ ಚಾರಣವಿದು. ಸ್ವಲ್ಪ ವೇಗವಾಗಿ ನಡೆದರೆ ಎರಡುವರೆ ಅಥವಾ ಮೂರು ತಾಸುಗಳಲ್ಲಿ ಮಿಂಚುಕಲ್ಲು ತಲುಪಬಹುದು.



 
ಮಿಂಚುಕಲ್ಲಿನ ಮೇಲೆ ವಿಶಾಲ ಸ್ಥಳವಿದೆ. ಇಲ್ಲಿ ಸುಮಾರು ಒಂದು ತಾಸು ಕಳೆದೆವು. ಮಿಂಚುಕಲ್ಲಿನ ಇನ್ನೊಂದು ತುದಿಯಲ್ಲಿ ಕಣಿವೆಯಿದ್ದು, ಈ ಕಣಿವೆಯಾಚೆಯಿರುವ ಬೃಹತ್ ಬೆಟ್ಟವೇ ಅಮೇದಿಕಲ್ಲು. ಈ ದೃಶ್ಯಗಳನ್ನು ಸವಿಯುತ್ತಾ ಅಲ್ಲಿ ಸುಮಾರು ಸಮಯ ಕಳೆದೆವು.



ಸುಮಾರು ೧೧ ಗಂಟೆಗೆ ಅಲ್ಲಿಂದ ಹಿಂತಿರುಗಲು ಶುರು ಮಾಡಿದೆವು. ಈಗ ಬಿಸಿಲು ನಿಧಾನವಾಗಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಿತ್ತು.



ಆದರೂ ಅಂತಹ ತೊಂದರೆಯೇನಿಲ್ಲದೆ ಅಲ್ಲೊಂದೆರಡು ಮರಗಳಿದ್ದ ಜಾಗದೆಡೆ ತಲುಪಿ ಊಟ ಮಾಡಿ ವಿಶ್ರಮಿಸಿದೆವು. ಮತ್ತೆ ಚಾರಣ ಆರಂಭಿಸಿದಾಗ ಸಮಯ ೨ ದಾಟಿತ್ತು. ಈಗ ಬಿಸಿಲಿನ ತಾಪ ನನ್ನ ವೇಗವನ್ನು ಕುಂಠಿತಗೊಳಿಸಿತ್ತು. ನೀರು ಬೇಗನೇ ಖಾಲಿಯಾಗತೊಡಗಿತ್ತು.


 
ನಾವು ಮುಂಜಾನೆ ಚಾರಣ ಆರಂಭಿಸಿದಾಗ ಒಂದು ದೊಡ್ಡ ಇಳಿಜಾರನ್ನು ದಾಟಿ ಬಂದಿದ್ದೆವು. ಹಿಂತಿರುಗುವಾಗ, ದಾರಿಯ ಕೊನೆಯಲ್ಲಿ ಸಿಗುವ ಈ ಏರುಹಾದಿಯನ್ನು ಕ್ರಮಿಸಲು ನನಗೆ ಬಹಳ ಕಷ್ಟವಾಗಲಿದೆ ಎಂದು ನಾನು ಮುಂಜಾನೆಯೇ ಗ್ರಹಿಸಿದ್ದೆ. ನಾವು ಮಿಂಚುಕಲ್ಲು ತುದಿ ತಲುಪಿದಾಗ ವಿವೇಕ್ ಕಿಣಿ, ಎಲ್ಲರಿಗೂ ಒಂದೊಂದು ಕಿತ್ತಳೆ ಹಣ್ಣನ್ನು ನೀಡಿದ್ದರು. ಈ ಏರುಹಾದಿಯ ನೆನಪಾಗಿ, ಆ ಜೀವರಕ್ಷಕ ಕಿತ್ತಳೆಯನ್ನು ನಾನು ಹಾಗೆಯೇ ಇಟ್ಟುಕೊಂಡಿದ್ದೆ. ನೀರನ್ನೂ ಸುಮಾರಾಗಿ ಇಟ್ಟುಕೊಂಡಿದ್ದೆ.



ಅದಾಗಲೇ ಎಂಟು ತಾಸಿನ ಚಾರಣ ಮಾಡಿಯಾಗಿತ್ತು. ಆದರೆ ಈ ಕೊನೆಯ ಭಾಗ ಶುರುವಾಗುವ ಮೊದಲೇ ಮಾನಸಿಕವಾಗಿ ತೊಂದರೆ ನೀಡಲು ಆರಂಭಿಸಿತ್ತು. ನಿಧಾನವಾಗಿ ಹೆಜ್ಜೆಯಿಡಲು ಆರಂಭಿಸಿದೆ. ಐದೈದು ಹೆಜ್ಜೆಗೂ ವಿರಮಿಸಿದೆ. ಇಲ್ಲಿ ವಿವೇಕ್ ನೀಡಿದ್ದ ಕಿತ್ತಳೆ ಆಪತ್ಬಾಂಧವನಾಗಿ ಪ್ರಯೋಜನಕ್ಕೆ ಬಂದಿತು. ಕಿತ್ತಳೆಯಲ್ಲಿ ೧೦ ಎಸಳುಗಳು ಇರುತ್ತವೆ. ಇಲ್ಲೊಂದು, ಅಲ್ಲೊಂದು ಮತ್ತೆ ಮುಂದೆ ಮತ್ತೊಂದು ಎಂದು ಮೊದಲೇ ನಿರ್ಧರಿಸಿ ಮೇಲೆ ತಲುಪಿದಾಗ ಕೊನೆಯ ಎಸಳನ್ನು ಬಾಯೊಳಗಿಟ್ಟೆ. ಸುಮಾರು ೩೦ ನಿಮಿಷ ಆ ರಣಬಿಸಿಲಿನಲ್ಲಿ ಬಹಳ ಕಷ್ಟದಿಂದ ಮೇಲೇರಿದ್ದನ್ನು ಎಂದೂ ಮರೆಯಲಾರೆ.