ಭಾನುವಾರ, ಜೂನ್ 05, 2016

ಮಣಕೇಶ್ವರ ದೇವಾಲಯ - ಲಕ್ಕುಂಡಿ


ಮಣಕೇಶ್ವರ ದೇವಾಲಯವು ತ್ರಿಕೂಟಾಚಲವಾಗಿದ್ದು, ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿರುವ ಮೂರು ಗರ್ಭಗುಡಿಗಳಿಗೆ ಪ್ರತ್ಯೇಕ ಅಂತರಾಳಗಳಿವೆ.ಎಲ್ಲಾ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದೆ. ನವರಂಗದಲ್ಲಿ ನಾಲ್ಕು ಕಂಬಗಳ ನಡುವೆ, ಮೇಲ್ಛಾವಣಿಯಲ್ಲಿ ಆಕರ್ಷಕ ಕೆತ್ತನೆಯಿದೆ.

 

ನವರಂಗದ ಕಂಬವೊಂದರ ಮೇಲೆ ೧೨ನೇ ಶತಮಾನದ ಶಾಸನವೊಂದನ್ನು ಕಾಣಬಹುದು. ಪಾಳುಬಿದಿದ್ದ ದೇವಾಲಯವನ್ನು ಪುರಾತತ್ವ ಇಲಾಖೆ ದುರಸ್ತಿಪಡಿಸಿದೆ.


ದೇವಾಲಯದ ಮುಂದೆನೇ ಸುಂದರವಾದ ಹಾಗೂ ವಿಶಾಲವಾದ ಬಾವಿಯೊಂದಿದೆ. ಇದನ್ನು ಮುಸುಕುನ ಬಾವಿ ಅಥವಾ ಸಿದ್ಧರ ಬಾವಿ ಎಂದು ಕರೆಯುತ್ತಾರೆ. ಆದರೆ ಶಾಸನಗಳಲ್ಲಿ ಈ ಬಾವಿಯನ್ನು ನಾಗರಬಾವಿ ಎಂದು ಕರೆಯಲಾಗಿದೆ.ಸುಂದರ ಮೆಟ್ಟಿಲುಗಳನ್ನು ಹಾಗೂ ಆಕರ್ಷಕ ಗೋಪುರಗಳುಳ್ಳ ಮಂಟಪಗಳನ್ನು ಹೊಂದಿರುವ ಈ ಬಾವಿ ನೋಡುಗರ ಮನಸೂರೆಗೊಳ್ಳುತ್ತದೆ. ಬಾವಿಯ ಎಲ್ಲಾ ಮಂಟಪಗಳು ಖಾಲಿಯಿದ್ದರೂ, ಪಂಚಶಾಖಾ ದ್ವಾರ ಮತ್ತು ಗಜಲಕ್ಷ್ಮೀಯಿಂದ ಪರಿಪೂರ್ಣವಾಗಿ ಅಲಂಕೃತಗೊಂಡಿವೆ.


ಈ ಬಾವಿಯ ಸಮೀಪದಲ್ಲೇ ಇರುವ ಶಾಸನದಲ್ಲಿ, ಆದಿಕೇಯ ಕೇಶವ ದೇವ ಎಂಬವನ ಮೊಮ್ಮಗನಾಗಿದ್ದ ಹಾಗೂ ವಿಷ್ಣು ಭಟ್ಟ ಎಂಬವನ ಮಗನಾಗಿದ್ದ, ಕೇಶವ ಎಂಬವನು ಈ ಕೆರೆಯ ನಿರ್ವಹಣೆಗಾಗಿ ವಾರ್ಷಿಕ ಒಂದಷ್ಟು ಹಣವನ್ನು ನೀಡುತ್ತಿರುವುದಾಗಿ ಬರೆಯಲಾಗಿದೆ.


ಈ ಶಾಸನವು ಇಸವಿ ೧೧೯೫ರದ್ದಾಗಿದ್ದು, ಅದು ಹೊಯ್ಸಳ ದೊರೆ ಎರಡನೇ ಬಲ್ಲಾಳನ ಆಳ್ವಿಕೆಯ ಸಮಯ. ಹೊಯ್ಸಳರ ಸಮಯದಲ್ಲಿ ಕೆರೆಯ ನಿರ್ವಹಣೆಯೆ ಬಗ್ಗೆ ಶಾಸನ ದೊರೆತಿರುವ ಆಧಾರದ ಮೇರೆಗೆ, ಇತಿಹಾಸಕಾರರು ಈ ಕೆರೆಯ ನಿರ್ಮಾಣ ಚಾಲುಕ್ಯರ ಆಳ್ವಿಕೆಯ ಸಮಯದಲ್ಲಿ ಆಗಿದೆ ಎಂದು ಅಭಿಪ್ರಾಯಪಡುತ್ತಾರೆ.


ಮಣಕೇಶ್ವರ ದೇವಾಲಯವನ್ನು, ಮಣಿಕೇಶ್ವರ ಹಾಗೂ ಮಾಣಿಕ್ಯೇಶ್ವರ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಮುಸುಕಿನ ಬಾವಿಯನ್ನು ನಿರ್ಮಿಸಲು ಬಳಸಿದ ಕಲ್ಲುಗಳನ್ನೇ ಮಣಕೇಶ್ವರ ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿದೆ.

2 ಕಾಮೆಂಟ್‌ಗಳು:

Srik ಹೇಳಿದರು...

bahaLa suMdaravaagide ee dEvasthaana.

tuMbaa Thanks Rajesh ee chendada photo blog barediddakke.

Srik

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,
ಧನ್ಯವಾದ.