ಸೋಮವಾರ, ಏಪ್ರಿಲ್ 04, 2016

ಕಲ್ಲೇಶ್ವರ ದೇವಾಲಯ - ಹಿರೇಹಡಗಲಿ


ಹಿರೇಹಡಗಲಿಯಲ್ಲಿ ರಸ್ತೆ ಬದಿಯಲ್ಲೇ ಕೆರೆಯ ತಟದಲ್ಲಿ ಇರುವ ಕಲ್ಲೇಶ್ವರ ದೇವಸ್ಥಾನ. ಪುರಾತತ್ವ ಇಲಾಖೆಯ ಸುಪರ್ದಿಗೆ ಒಳಪಟ್ಟಿರುವ ಈ ದೇವಸ್ಥಾನ ಸುಂದರವಾಗಿದ್ದು ಸುತ್ತಲೂ ಅಂದವಾದ ಉದ್ಯಾನವನ ಇದೆ. ಕನ್ನಡನಾಡಿಗೆ ಈ ದೇವಾಲಯ ಕಲ್ಯಾಣಿ ಚಾಲುಕ್ಯರ ದೊರೆ ತ್ರೈಲೋಕ್ಯ ಮಲ್ಲದೇವನ ಕೊಡುಗೆ. ಇಸವಿ ೧೦೫೭ರ ಸುಮಾರಿಗೆ ಈ ದೇವಾಲಯವನ್ನು ನಿರ್ಮಿಸಲಾಗಿದೆಯೆಂದು ಶಾಸನಗಳು ತಿಳಿಸುತ್ತವೆ.ಈ ದೇವಾಲಯದಲ್ಲಿ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳಿವೆ. ನವರಂಗದಲ್ಲೊಂದು ಮತ್ತು ಮುಖಮಂಟಪದಲ್ಲೊಂದರಂತೆ ೨ ನಂದಿಗಳು. ಮುಖಮಂಟಪ ಮತ್ತು ದೇವಸ್ಥಾನಕ್ಕೆ ಸುಮಾರು ೧೫-೨೦ ಅಡಿಗಳಷ್ಟು ಅಂತರವಿದೆ. ಅಲ್ಲಿ ನಂದಿಯ ಅತ್ಯಾಕರ್ಷಕ ಮೂರ್ತಿಯಿದೆ. ಇಲ್ಲಿನ ನಂದಿಯನ್ನು ಕಟ್ಟೆ ಬಸವೇಶ ಎಂದೂ ಕರೆಯಲಾಗುತ್ತದೆ. ನಂದಿಯ ಹಿಂದೊಂದು ಗರ್ಭಗುಡಿ. ಅದರಲ್ಲಿ ಸೂರ್ಯನಾರಾಯಣ ದೇವರ ಸುಂದರ ವಿಗ್ರಹ. ಕೆಲವೊಂದು ದೇವಾಲಯಗಳಲ್ಲಿರುವಂತೆ ಇಲ್ಲೂ ಗರ್ಭಗುಡಿಗೆ ಮುಖಮಾಡಿಕೊಂಡು ಸೂರ್ಯನಾರಾಯಣನ ಗರ್ಭಗುಡಿ.
 

ನವರಂಗಕ್ಕೆ ೨ ಬಾಗಿಲುಗಳಿವೆ. ಇವುಗಳಲ್ಲಿ ಒಂದಕ್ಕೆ ಸುಂದರವಾದ ಮುಖಮಂಟಪವಿದೆ. ಆದರೆ ಇದು ಮುಖ್ಯ ಬಾಗಿಲಿನಂತೆ ಕಾಣುತ್ತಿಲ್ಲ. ಈ ಏಕಕೂಟ ದೇವಾಲಯದ ಪ್ರಮುಖ ಬಾಗಿಲು ೫ ತೋಳಿನದ್ದಾಗಿದ್ದು, ಮೇಲ್ಭಾಗದಲ್ಲಿ ಗಜಲಕ್ಷ್ಮಿಯ ಆಕರ್ಷಕ ಕೆತ್ತನೆಯನ್ನು ಹೊಂದಿದೆ. ಈ ಬಾಗಿಲಿನ ಒಂದು ಬದಿಗೆ ೭ರಂತೆ ೧೪ ದ್ವಾರಪಾಲಕೆಯರ ಕೆತ್ತನೆ. ಗರ್ಭಗುಡಿಯಲ್ಲಿರುವ ಶಿವಲಿಂಗ ಪಾಣಿಪೀಠದ ಗಾತ್ರಕ್ಕೆ ಹೋಲಿಸಿದರೆ ಸಣ್ಣದಾಗಿ ಕಾಣುತ್ತದೆ.ಗೋಪುರವನ್ನು ೩ ತಾಳಗಳಲ್ಲಿ ನಿರ್ಮಿಸಲಾಗಿದ್ದು ಅತ್ಯಾಕರ್ಷಕ ಕಲಶವನ್ನು ಮೇಲೆ ಸ್ಥಾಪಿಸಲಾಗಿದೆ. ಗೋಪುರದ ಮೇಲಿರುವ ಕೆತ್ತನೆಗಳೆಲ್ಲಾ ಕಳಚಿಕೊಂಡಿವೆ. ದೇವಾಲಯದ ಮೇಲ್ಛಾವಣಿಯುದ್ದಕ್ಕೂ ಕೈಪಡಿಯಿದ್ದು ಸುಂದರ ಕೆತ್ತನೆಗಳನ್ನು ಇದರಲ್ಲಿ ಮಾಡಲಾಗಿದೆ.


ಈ ದೇವಾಲಯದ ಬಾಹ್ಯ ಸೌಂದರ್ಯ ಆಂತರಿಕ ಸೌಂದರ್ಯಕ್ಕಿಂತ ಅದೆಷ್ಟೋ ಚೆನ್ನಾಗಿದೆ. ಸುತ್ತಲೂ ಇರುವ ಸುಂದರ ಮತ್ತು ಅಪ್ರತಿಮ ಕೆತ್ತನೆಯನ್ನು ನೋಡಲು ಬಹಳ ಸಮಯ ಬೇಕಾಗುತ್ತದೆ. ಮುಖಮಂಟಪದ ಹಿಂಭಾಗ ಮತ್ತು ದೇವಾಲಯದ ಒಂದು ಪಾರ್ಶ್ವ ಸಂಪೂರ್ಣವಾಗಿ ಕುಸಿದುಬಿದ್ದಿತ್ತು. ಅದನ್ನು ಪುರಾತತ್ವ ಇಲಾಖೆ ಮತ್ತೆ ನಿರ್ಮಿಸಿದೆ. 
ದೇವಾಲಯ ಚಾಲುಕ್ಯ ನಿರ್ಮಾಣ ಶೈಲಿಯಿದ್ದರೂ, ನಂತರದ ದಿನಗಳಲ್ಲಿ ಹೊಯ್ಸಳರು ತಮ್ಮ ಛಾಪು ಮೂಡಿಸಿದ್ದಾರೆ. ಸುತ್ತಲೂ ಇರುವ ಕೆತ್ತನೆಗಳಲ್ಲಿ ಹೊಯ್ಸಳರ ’ಸಿಂಹ’ ಕೆತ್ತನೆ ಕೆಲವೊಂದೆಡೆ ರಾರಾಜಿಸುತ್ತಿದೆ.

2 ಕಾಮೆಂಟ್‌ಗಳು:

Lakshmipati ಹೇಳಿದರು...

ಸುಂದರವಾದ ದೇವಾಲಯದ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.

ಲಕ್ಷ್ಮೀಪತಿ

ರಾಜೇಶ್ ನಾಯ್ಕ ಹೇಳಿದರು...

ಲಕ್ಷ್ಮೀಪತಿ,
ಧನ್ಯವಾದ.