ಭಾನುವಾರ, ಮಾರ್ಚ್ 20, 2016

ನರಸಿಂಹ ದೇವಾಲಯ ಮತ್ತು ಸೂರ್ಯನಾರಾಯಣ ದೇವಾಲಯ - ಮಾಗಳ


ಮಾಗಳ. ತುಂಗಭದ್ರಾ ನದಿಯ ತಟದಲ್ಲಿರುವ ಪ್ರಶಾಂತ ಸುಂದರ ಹಳ್ಳಿ. ಇಲ್ಲಿರುವ ನರಸಿಂಹ ಮತ್ತು ಸೂರ್ಯನಾರಾಯಣ ದೇವಾಲಯಗಳು ಭೇಟಿಗೆ ಯೋಗ್ಯವಾದಂತವು. ಸೂರ್ಯನಾರಾಯಣ ದೇಗುಲ ಊರ ನಡುವೆ ಇದ್ದರೆ, ನರಸಿಂಹ ದೇವಾಲಯ ಊರ ಹೊರಗೆ, ತುಂಗಭದ್ರಾ ನದಿಯ ತಟದಲ್ಲಿದೆ.ಮೊದಲು ನದಿತಟದಲ್ಲಿರುವ ನರಸಿಂಹನ ದರ್ಶನ ಪಡೆದು ಬರೋಣವೆಂದು ತೆರಳಿದೆವು. ಮಾಗಳದ ಹೊರವಲಯದಲ್ಲಿರುವ ನರಸಿಂಹ ದೇಗುಲ ತಲುಪಬೇಕಾದರೆ ಗದ್ದೆಗಳ ನಡುವಿರುವ ರಸ್ತೆಯಲ್ಲಿ ೨ ಕಿಮಿ ದೂರ ಕ್ರಮಿಸಬೇಕು. ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಪಕ್ಷಿಗಳ ಸಂತೆ. ಗದ್ದೆಗಳ ಏರಿಯ ಮೇಲೆ ಸಾಲಿನಲ್ಲಿ ಕುಳಿತಿದ್ದವು. ಗದ್ದೆಗಳ ಆಚೆಗೆ ಸಣ್ಣ ದಿಬ್ಬವೊಂದರ ಮೇಲೆ ಸ್ಥಿತವಾಗಿರುವ ದೇವಾಲಯದ ನೋಟ ಸುಂದರ.


ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನೊಳಗೊಂಡಿರುವ ದೇವಾಲಯ ಶಿಥಿಲಗೊಳ್ಳುತ್ತಿದೆ. ದೇವಸ್ಥಾನಕ್ಕೆ ತಾಗಿಕೊಂಡೇ ಇರುವ ಕಟ್ಟಡವೊಂದು ಸಂಪೂರ್ಣವಾಗಿ ಕುಸಿದಿದೆ. ಅದೇನೆಂದು ತಿಳಿಯಲಿಲ್ಲ. ಪುರಾತತ್ವ ಇಲಾಖೆ ಸ್ವಲ್ಪ ಮಟ್ಟಿಗೆ ದೇವಾಲಯವನ್ನು ಕಾಪಾಡಿಕೊಂಡಿದೆ. ದೇವಸ್ಥಾನದಲ್ಲಿ ಅಂತಹ ವಿಶೇಷವೇನಿಲ್ಲ. ತುಂಗಭದ್ರೆಯ ಪ್ರಶಾಂತ ಹರಿವನ್ನು ಆನಂದಿಸಬೇಕಾದಲ್ಲಿ ಇಲ್ಲಿಗೆ ಭೇಟಿ ನೀಡಬೇಕು.


ಗರ್ಭಗುಡಿಯಲ್ಲಿ ನರಸಿಂಹನು ಹಿರಣ್ಯಕಷಿಪುವಿನ ವಧೆ ಮಾಡುವ ಮೂರ್ತಿಯಿದೆ. ತ್ರಿಶಾಖಾ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಅಂತರಾಳದ ದ್ವಾರವೂ ತ್ರಿಶಾಖಾ ಶೈಲಿಯದ್ದಾಗಿದ್ದು ಇಲ್ಲೂ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕಾಣಬಹುದು.


ದೇವಾಲಯದ ನವರಂಗದಲ್ಲಿ ಗಣೇಶನ ಮತ್ತು ಶಿವನ ಮೂರ್ತಿಯನ್ನು ಕಾಣಬಹುದು. ದೇವಾಲಯದ ದ್ವಾರವು ತ್ರಿಶಾಖಾ ಶೈಲಿಯದ್ದಾಗಿದ್ದು, ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಹಾಗೂ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದೆ.


ಕಲ್ಯಾಣಿ ಚಾಲುಕ್ಯರಿಂದ ನಿರ್ಮಿತಗೊಂಡಿರುವ ಈ ದೇವಾಲಯದ ಮುಂದೆ ಪ್ರವೇಶ ಗೋಪುರದಂತಹ ರಚನೆ. ಈ ತರಹದ ರಚನೆ ಬಹಳ ವಿರಳ.

 

ಬಹುಶ: ಆಗಿನ ಕಾಲದಲ್ಲಿ ತುಂಗಭದ್ರೆಯ ಹರಿವು ಈ ಪ್ರವೇಶ ಗೋಪುರದವರೆಗೆ ವ್ಯಾಪಿಸಿದ್ದು, ನದಿ ತಟದಿಂದ ದೇವಾಲಯವನ್ನು ಪ್ರವೇಶಿಸಲು ಈ ಗೋಪುರವನ್ನು ರಚಿಸಿರಬಹುದು.

 

ಈಗ ತುಂಗಭದ್ರೆ ಸುಮಾರು ೫೦ ಮೀಟರುಗಳಷ್ಟು ದೂರದಲ್ಲಿ ಹರಿಯುತ್ತಿದ್ದಾಳೆ. ಆದರೂ ಮಳೆಗಾಲದಲ್ಲಿ ದೇವಾಲಯದ ಸಮೀಪದವರೆಗೂ ನದಿಯ ಹರಿವು ವ್ಯಾಪಿಸುವಂತೆ ತೋರುತ್ತದೆ.ಮಾಗಳ ಹಳ್ಳಿಯ ನಟ್ಟನಡುವೆ ಸೂರ್ಯನಾರಾಯಣನ ಸನ್ನಿಧಿ ಇದೆ. ಪುರಾತತ್ವ ಇಲಾಖೆಯ ಸಿಬ್ಬಂದಿ ರಜೆಯಲ್ಲಿದ್ದರಿಂದ ಪ್ರಾಂಗಣ ಮತ್ತು ದೇವಾಲಯಕ್ಕೆ ಬೀಗ ಜಡಿದಿತ್ತು. ಪ್ರಾಂಗಣದ ಗೋಡೆ ಹಾರಿ ಒಳಗೆ ತೆರಳಿದೆ. ಆದರೆ ದೇವಾಲಯವನ್ನು ಹೊರಗಿನಿಂದ ನೋಡಿಯೇ ತೃಪ್ತಿಪಡಬೇಕಾಯಿತು. ಆದರೂ ಬೇರೆ ಯಾವ ದೇವಾಲಯದಲ್ಲೂ ನಾನು ಕಾಣದ ’ಕಿಂಡಿ ರಚನೆ’ ಇಲ್ಲಿದ್ದ ಕಾರಣ, ಈ ಕಿಂಡಿಗಳ ಮೂಲಕ ದೇವಾಲಯದ ಒಳಗೆ ಇಣುಕಿ ನವರಂಗವನ್ನು ನೋಡಲು ಸಾಧ್ಯವಾಯಿತು.ಇದೊಂದು ಗೋಪುರರಹಿತ ತ್ರಿಕೂಟಾಚಲ ದೇವಸ್ಥಾನ. ಮೊದಲಿದ್ದ ಗೋಪುರ ಈಗ ಕುಸಿದಿದೆಯೋ ಅಥವಾ ಮೊದಲಿನಿಂದಲೂ ಇರಲಿಲ್ಲವೋ ಎಂದು ಸ್ಪಷ್ಟವಾಗಿ ಹೇಳಲು ಅಸಾಧ್ಯ. ದೇವಸ್ಥಾನದ ಪ್ರಮುಖ ಬಾಗಿಲಿನ ಇಕ್ಕೆಲಗಳಲ್ಲಿ ವಿಶಿಷ್ಟ ರೀತಿಯ ಜಾಲಂಧ್ರಗಳ ರಚನೆ. ಒಟ್ಟಾರೆ ಭರ್ತಿ ೯೦ ಸಣ್ಣ ಸಣ್ಣ ಜಾಲಂಧ್ರಗಳು. ಆದರೆ ಪ್ರಮುಖ ಗರ್ಭಗುಡಿಯ ಬಾಗಿಲನ್ನೂ ಹಾಕಿದ್ದರಿಂದ ನವರಂಗದಿಂದ ಮುಂದೆ ನೋಡಲು ಸಾಧ್ಯವಾಗಲಿಲ್ಲ.ದೇವಸ್ಥಾನ ಪ್ರವೇಶಿಸಿದೊಡನೆ ಎರಡೂ ಬದಿಗಳಲ್ಲಿ ಆಸೀನರಾಗಲು ಜಗುಲಿಯ ರಚನೆಯಿದೆ. ಈ ಜಗುಲಿಯ ಮೇಲೆ ಕಲಾತ್ಮಕ ಕೆತ್ತನೆಯಿರುವ ೪ ಕಂಬಗಳಿವೆ. ಈ ದೇವಾಲಯದ ಭುವನೇಶ್ವರಿಯಲ್ಲಿರುವ ಕೆತ್ತನೆಗಳು ಉತ್ಕೃಷ್ಟವಾಗಿದ್ದು ಜಿಲ್ಲೆಯ ಇತರ ದೇವಾಲಯಗಳಿಗಿಂತ ಶ್ರೇಷ್ಠವಾದದ್ದು ಎಂದು ಓದಿದ್ದೆ. ಆದರೆ ದೇವಾಲಯಕ್ಕೆ ಬೀಗ ಜಡಿದಿದ್ದರಿಂದ ಈ ಕೆತ್ತನೆಗಳನ್ನು ನೋಡಲು ಸಾಧ್ಯವಾಗಲಿಲ್ಲ. ನವರಂಗದಿಂದ ೩ ಗರ್ಭಗುಡಿಗಳಿಗೆ ಬಾಗಿಲುಗಳು ತೆರೆದುಕೊಳ್ಳುತ್ತವೆ. ಪ್ರತಿ ಗರ್ಭಗುಡಿಗೂ ಅಂತರಾಳ ಇದ್ದಂತೆ ತೋರುತ್ತಿತ್ತು.

 

ದೇವಾಲಯಕ್ಕೆ ಸುತ್ತು ಹಾಕಿದರೆ, ಅಲ್ಲಲ್ಲಿ ಕಾಲನ ದಾಳಿಗೆ ದೇವಾಲಯ ನಲುಗುತ್ತಿರುವ ಚಿಹ್ನೆಗಳನ್ನು ಕಾಣಬಹುದು. ಆದರೂ ಪುರಾತತ್ವ ಇಲಾಖೆ ದೇವಾಲಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಉತ್ತಮ ಕೆಲಸವನ್ನೇ ಮಾಡುತ್ತಿದೆ. ಮಾಗಳದಲ್ಲಿ ಇಂತಹ ವಿಶಿಷ್ಟ ವಿನ್ಯಾಸದ ದೇವಾಲಯವನ್ನು ನಾನು ನಿರೀಕ್ಷಿಸಿರಲಿಲ್ಲ.

4 ಕಾಮೆಂಟ್‌ಗಳು:

Krishnamurty Kulkarni ಹೇಳಿದರು...

ಮಾಗಳ ಗ್ರಾಮ ಯಾವ ಜಿಲ್ಲೆಯಲ್ಲಿ ಬರುತ್ತದೆ? ತುಂಗಭದ್ರಾ ನದಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ಹರಿಯುತ್ತದೆ. ಆದ್ದರಿಂದ ಕರ್ನಾಟಕದಲ್ಲಿಯೋ ಅಥವಾ ಆಂಧ್ರದಲ್ಲಿಯೋ?ಹಾಗೆಯೇ ಮಾಗಳಕ್ಕೆ ಹೋಗಲು ಸಂಚಾರಕ್ರಮ ಹೇಗಿದೆ ಎಂದು ದಯವಿಟ್ಟು ತಿಳಿಸಿ.

Lakshmipati ಹೇಳಿದರು...

ರಾಜೇಶ್....

ದೇವಾಲಯ ಸುಂದರವಾಗಿದೆ... ಹಾಗೆಯೆ ಅದರ ಸುತ್ತ ಮುತ್ತ ಇರುವ ಪರಿಸರವು ಕೂಡ ಸುಂದರವಾಗಿದೆ.

ಮಾಹಿತಿಗೆ ಧನ್ಯವಾದಗಳು.

ಲಕ್ಷ್ಮೀಪತಿ

ರಾಜೇಶ್ ನಾಯ್ಕ ಹೇಳಿದರು...

ಕೃಷ್ಣಮೂರ್ತಿ,
ಅಂತರ್ಜಾಲದಲ್ಲಿ ಕನ್ನಡದಲ್ಲಿ ’ಮಾಗಳ ದೇವಾಲಯಗಳು’ ಎಂದು ಅಥವಾ ಆಂಗ್ಲ ಭಾಷೆಯಲ್ಲಿ ’ಮಾಗಳ ಟೆಂಪಲ್ಸ್’ ಎಂದು ಹುಡುಕಿದರೆ ಎಲ್ಲಾ ಮಾಹಿತಿ ದೊರಕುವುದು. ಧನ್ಯವಾದ.

ಲಕ್ಷ್ಮೀಪತಿ,
ಧನ್ಯವಾದ.

ಅಭಿಷೇಕ ಈಟಿ ಮಾಗಳ ಹೇಳಿದರು...

ಮಾಗಳ ಎಂಬ ಪ್ರಸಿದ್ಧ ಐತಿಹಾಸಿಕ ಗ್ರಾಮವಾಗಿದ್ದು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿದೆ ಹಾಗೂ ಹೂವಿನಹಡಗಲಿ ತಾಲೂಕಿನಿಂದ ಬರೀ ೨೦ ಕಿ.ಮೀ ಅಂತರದಲ್ಲಿದೆ..
ದಾವಣಗೆರೆ-ಮಾಗಳ- ೭೦ ಕಿ.ಮೀ
ಹಾವೇರಿ-ಮಾಗಳ-೬೫ ಕಿ.ಮೀ
ಗದಗ-ಮಾಗಳ-೭೦ ಕಿ.ಮೀ
ಬಳ್ಳಾರಿ-ಮಾಗಳ- ೧೫೦ ಕಿ.ಮೀ