ಭಾನುವಾರ, ಜನವರಿ 24, 2016

ಚಿಕ್ಕೇಶ್ವರ ದೇವಾಲಯ - ಚಿನ್ನ ಮುಳಗುಂದ

 

ಚಿನ್ನ ಮುಳಗುಂದದ ಶಾಲೆಯ ಬಳಿ ನಿಂತು ನೋಡಿದರೆ ಗದ್ದೆಗಳ ಅಂಚಿನಲ್ಲಿ ಅಸ್ಪಷ್ಟವಾಗಿ ದೇವಾಲಯದ ಒಂದು ಭಾಗ ಮಾತ್ರ ಕಾಣುತ್ತದೆ. ಗಿಡಗಳು, ಪೊದೆಗಳು ದೇವಾಲಯವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಮೊದಲ ನೋಟಕ್ಕೆ ದೇವಾಲಯದ ಇರುವಿಕೆಯ ಬಗ್ಗೆಯೇ ಅನುಮಾನ ಹುಟ್ಟುತ್ತದೆ.



ಶಾಲೆಯನ್ನು ದಾಟಿ ಗದ್ದೆಗಳ ಅಂಚಿನಲ್ಲಿ ನಡೆಯುತ್ತಾ ದೇವಾಲಯವನ್ನು ಸಮೀಪಿಸಿದರೆ ಇದೊಂದು ಪಾಳುಬಿದ್ದ ದೇವಾಲಯವೆಂಬ ಭಾವನೆ ಮೂಡತೊಡಗಿತು. ದೇವಾಲಯದ ಗೋಪುರವನ್ನು ಮರವೊಂದು ಸಂಪೂರ್ಣವಾಗಿ ಮರೆಮಾಚಿದೆ. ಇಕ್ಕೆಲಗಳಲ್ಲಿ ದೇವಾಲಯದ ಛಾವಣಿಯಷ್ಟು ಎತ್ತರದವರೆಗೂ ಗಿಡಗಳು ಬೆಳೆದಿವೆ.


ದೇವಾಲಯದ ಒಂದು ಪಾರ್ಶ್ವದಲ್ಲಿ ಗದ್ದೆಗಳಿದ್ದರೆ ಇನ್ನೊಂದು ಪಾರ್ಶ್ವದಲ್ಲಿ ಪೊದೆಗಳ ರಾಶಿ. ಪಾರ್ಶ್ವನೋಟದ ಚಿತ್ರ ತೆಗೆಯಲು ಈ ಪೊದೆಗಳ ನಡುವೆ ದಾರಿಮಾಡುತ್ತಾ ಸಾಗಬೇಕಾದರೆ ಸ್ವಲ್ಪ ಎಚ್ಚರ ವಹಿಸಬೇಕು. ದೇವಾಲಯದ ಈ ಪಾರ್ಶ್ವ ಬಹಿರ್ದೆಸೆ ಮಾಡುವ ತಾಣ!



೧೩ನೇ ಶತಮಾನದಲ್ಲಿ ನಿರ್ಮಿತ ಈ ದೇವಾಲಯವನ್ನು ಶಾಸನಗಳಲ್ಲಿ ’ಚಿಕ್ಕನಾಥ’ ದೇವಾಲಯವೆಂದು ಮತ್ತು ಚಿನ್ನ ಮುಳಗುಂದವನ್ನು ’ಮುನಿಗುಂದ’ವೆಂದೂ ಕರೆಯಲಾಗಿದೆ. ಈ ಏಕಕೂಟ ದೇವಾಲಯ ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನೊಳಗೊಂಡಿದೆ. ಗರ್ಭಗುಡಿಯ ಹೊರಗೋಡೆ ಮಾತ್ರ ಗಿಡಗಂಟಿಗಳಿಂದ ಮುಕ್ತವಾಗಿದೆ.



ಪಾಳು ಬಿದ್ದ ದೇವಾಲಯವೆಂದು ಒಳಗೆ ಕಾಲಿರಿಸಿದರೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಒಳಗಿನ ನೋಟ ಹೊರಗಿನ ನೋಟಕ್ಕೆ ತದ್ವಿರುದ್ಧ. ದಿನಾಲೂ ಚಿಕ್ಕೇಶ್ವರನಿಗೆ ಪೂಜೆ ಸಲ್ಲಿಸಲಾಗುತ್ತದೆ. ನವರಂಗ, ಅಂತರಾಳ ಮತ್ತು ಗರ್ಭಗುಡಿಗಳು ಬಹಳ ಸ್ವಚ್ಛವಾಗಿವೆ.



ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ಕಾಣುವುದು ನಾಲ್ಕೇ ಕಂಬಗಳಾದರೂ, ಇದು ೧೬ ಕಂಬಗಳನ್ನು ಬಳಸಿ ನಿರ್ಮಿಸಲಾಗಿರುವ ನವರಂಗ. ಇಷ್ಟು ಸಣ್ಣ ದೇವಾಲಯಕ್ಕೆ ವಿಶಾಲ ನವರಂಗ ಎನ್ನಬಹುದು.



ತ್ರಿಶಾಖ ಶೈಲಿಯ ಅಂತರಾಳದ ದ್ವಾರ ಜಾಲಂಧ್ರಗಳನ್ನು ಹೊಂದಿದೆ. ಅಂತರಾಳದಲ್ಲೇ ನಂದಿಯ ಸಣ್ಣ ವಿಗ್ರಹವಿದೆ. ದ್ವಾರದ ಇಕ್ಕೆಲಗಳಲ್ಲಿರುವ ಎರಡೂ ದೇವಕೋಷ್ಠಗಳು ಖಾಲಿ ಇವೆ.


ಗರ್ಭಗುಡಿಯಲ್ಲಿ ಚಾಲುಕ್ಯ ಶೈಲಿಯ ಪೀಠದ ಮೇಲೆ ಸುಮಾರು ಒಂದು ಅಡಿ ಎತ್ತರದ ಶಿವಲಿಂಗವಿದೆ. ಗರ್ಭಗುಡಿಯ ದ್ವಾರ ಅಲಂಕಾರರಹಿತವಾಗಿದೆ. ಲಲಾಟದಲ್ಲಿ ಇದ್ದ ಕೆತ್ತನೆ (ಗಜಲಕ್ಷ್ಮೀಯದ್ದಾಗಿರಬಹುದು) ನಶಿಸಿದೆ. ದ್ವಾರದ ತಳಭಾಗದಲ್ಲಿರುವ ಮೂರ್ತಿಗಳೂ ಅಸ್ಪಷ್ಟವಾಗಿದ್ದು ನಶಿಸಿಹೋಗಿವೆ.



ದೇವಾಲಯದ ಹೊರಗೋಡೆಯಲ್ಲಿ ೩ ದೇವಕೋಷ್ಠಗಳಿದ್ದು ಅವೂ ಖಾಲಿ ಇವೆ. ಈ ದೇವಕೋಷ್ಠಗಳ ಮೇಲೆ ಸಣ್ಣ ಶಿಖರಗಳ ರಚನೆಯಿದೆ. ದೇವಾಲಯದ ಗೋಪುರದ ಮೇಲೆ ಬೆಳೆದಿರುವ ಮರ ಗೋಪುರವನ್ನೇ ಬಲಿ ತೆಗೆದುಕೊಂಡಿದೆ. ಮರವನ್ನು ಪೂರ್ಣವಾಗಿ ಕಡಿದುಹಾಕಿ, ಗೋಪುರವನ್ನು ಸಂಪೂರ್ಣವಾಗಿ ಕಳಚಿ ಪುನ: ನಿರ್ಮಿಸುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲ.



ಆದರೂ ಗಿಡಮರಗಳು ಈ ಪರಿ ದೇವಾಲಯವನ್ನು ಆವರಿಸಿಕೊಳ್ಳುತ್ತಿರಬೇಕಾದರೆ ಹಳ್ಳಿಗರು ಕಡ್ಲೆಕಾಯಿ ತಿನ್ನುತ್ತಿದ್ದರೇ? ಪೂಜೆ ಸಲ್ಲಿಸುವ ಭಕ್ತಿ ಇರುವಾಗ ದೇವಾಲಯವನ್ನು ಸ್ವಚ್ಛಗೊಳಿಸಲು ಯಾಕೆ ಅಸಡ್ಡೆ? ಈಗ ಪರಿಸ್ಥಿತಿ ಕೈಮೀರಿದೆ. ದೇವಾಲಯದ ಮೇಲ್ಭಾಗವನ್ನು ಸಂಪೂರ್ಣವಾಗಿ ಬಿಚ್ಚಿ ಮತ್ತೆ ನಿರ್ಮಿಸುವುದೇ ಉಳಿದಿರುವ ದಾರಿ. ಪ್ರಾಚ್ಯ ವಸ್ತು ಇಲಾಖೆ ದೇವಾಲಯದ ಜೀರ್ಣೋದ್ಧಾರಕ್ಕೆ ತಯಾರಾಗಿದೆ. ಆದರೆ ಹಳ್ಳಿಗರು ದೇವಾಲಯವನ್ನು ಬಿಚ್ಚಲು ಬಿಡರು. ಆದ್ದರಿಂದ ಚಿಕ್ಕೇಶ್ವರ ಇನ್ನೂ ಗಿಡಮರಪೊದೆಗಳಿಂದ ಆವೃತನಾಗಿಯೇ ಇದ್ದಾನೆ.

2 ಕಾಮೆಂಟ್‌ಗಳು:

Lakshmipati ಹೇಳಿದರು...

ದೇವಾಲಯದೊಳಗೆ ಮರವೋ... ಇಲ್ಲ ಮರದೊಳಗೆ ದೇವಾಲಯವೋ.....

ರಾಜೇಶ್ ನಾಯ್ಕ ಹೇಳಿದರು...

ಲಕ್ಷ್ಮೀಪತಿ,
ಹ್ಹ ಹ್ಹ.. ಆ ನಿರ್ಧಾರ ಮಾಡುವುದೇ ಕಷ್ಟ!