ಭಾನುವಾರ, ಜನವರಿ 10, 2016

ಬಸವೇಶ್ವರ ದೇವಾಲಯ - ಲಕ್ಕುಂಡಿ

 

ಈ ದೇವಾಲಯವನ್ನು ಹಾಲುಗುಂದ ಬಸವೇಶ್ವರ ಎಂದು ಕರೆಯಲಾಗುತ್ತದೆ. ತ್ರಿಕೂಟ ಶೈಲಿಯ ದೇವಾಲಯದ ಎಲ್ಲಾ ಗರ್ಭಗುಡಿಗಳಲ್ಲಿ ಶಿವಲಿಂಗಗಳಿವೆ. ಇಲ್ಲಿ ನಂದಿಯ ದೊಡ್ಡ ಮೂರ್ತಿಯಿರುವುದರಿಂದ, ಈ ದೇವಾಲಯವನ್ನು ಬಸವೇಶ್ವರ ದೇವಾಲಯವೆಂದು ಕರೆಯಲಾಗುತ್ತದೆ.ದೇವಾಲಯದ ಎಲ್ಲಾ ಗರ್ಭಗುಡಿಗಳು ಪ್ರತ್ಯೇಕ ಅಂತರಾಳವನ್ನು ಹೊಂದಿವೆ. ದೇವಾಲಯವು ಒಂದೇ ನವರಂಗವನ್ನು ಹೊಂದಿದ್ದು, ಇಲ್ಲಿ ನಾಲ್ಕು ಕಂಬಗಳಿವೆ. ನಂದಿಯು ಕೂಡಾ ನವರಂಗದಲ್ಲೇ ಆಸೀನನಾಗಿದ್ದಾನೆ.


ದೇವಾಲಯದ ದ್ವಾರವು ಪಂಚಶಾಖೆಗಳನ್ನು ಹೊಂದಿದ್ದು, ಆಕರ್ಷಕ ಕೆತ್ತನೆಗಳನ್ನು ಈ ಶಾಖೆಗಳಲ್ಲಿ ಕಾಣಬಹುದು. ಪ್ರಥಮ, ದ್ವಿತೀಯ, ಚತುರ್ಥ ಹಾಗೂ ಪಂಚಮಿ ಶಾಖೆಗಳಲ್ಲಿ ಕ್ರಮವಾಗಿ ವಜ್ರತೋರಣ, ಬಳ್ಳಿತೋರಣದ ನಡುವೆ ಕೆತ್ತಲಾಗಿರುವ ವಾದ್ಯಗಾರರು, ಕೀರ್ತಿಮುಖ-ಪೂರ್ಣಕುಂಭ-ತೋರಣಗಳಿಂದ ಅಲಂಕೃತ ಆಕರ್ಷಕ ಸ್ತಂಭ ಮತ್ತು ಹೂತೋರಣವನ್ನು ಕಾಣಬಹುದು.ತೃತೀಯ ಶಾಖೆಯಲ್ಲಿ ಇಕ್ಕೆಲಗಳಲ್ಲಿ ಗಂಡು-ಹೆಣ್ಣು ಜೋಡಿ ನೃತ್ಯ ಮಾಡುವುದನ್ನು ಅತಿ ಸುಂದರವಾಗಿ ಕೆತ್ತಲಾಗಿದೆ. ಇಲ್ಲಿರುವ ವ್ಯತ್ಯಾಸವೆಂದರೆ ದ್ವಾರದ ಎಡಭಾಗದಲ್ಲಿರುವ ಜೋಡಿ ಮತ್ತು ಬಲಭಾಗದಲ್ಲಿರುವ ಜೋಡಿಯನ್ನು ಭಿನ್ನವಾಗಿ ತೋರಿಸಲಾಗಿದೆ. ಎಡಭಾಗದಲ್ಲಿ ತೋರಿಸಿರುವ ಜೋಡಿಯ ನೃತ್ಯ ಭಂಗಿಗಳೇ ಆಕರ್ಷಕವಾಗಿವೆ.ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದ್ದರೆ, ತಳಭಾಗದಲ್ಲಿ ಶಾಖೆಗೊಂದರಂತೆ ಮಾನವ ರೂಪದ ೫ ಮೂರ್ತಿಗಳಿವೆ.ನಂದಿಯು ನವರಂಗಲ್ಲಿದ್ದರೂ, ಪೂರ್ವದಲ್ಲಿರುವ ಶಿವಲಿಂಗಕ್ಕೆ ಮುಖಮಾಡಿಕೊಂಡಿದೆ. ಎಲ್ಲೆಡೆ ಪಶ್ಚಿಮದಲ್ಲಿರುವ ಗರ್ಭಗುಡಿಗೆ ನಂದಿ ಮುಖಮಾಡಿ ಕುಳಿತಿರುತ್ತಾನೆ. ಆದರೆ ಇಲ್ಲಿ ಹಾಗಿಲ್ಲದಿರುವುದು ವೈಶಿಷ್ಟ್ಯ.ಎಲ್ಲಾ ಗರ್ಭಗುಡಿಗಳು ಪಂಚಶಾಖೆಗಳನ್ನು ಮತ್ತು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿವೆ. ಮೂರೂ ಗರ್ಭಗುಡಿಯ ದ್ವಾರದ ಪಂಚಶಾಖೆಗಳು ಕೂಡಾ, ಪ್ರಮುಖ ದ್ವಾರದಲ್ಲಿರುವಂತೆ ವಜ್ರತೋರಣ, ವಾದ್ಯಗಾರರು, ಜೋಡಿ ನೃತ್ಯಗಾರರು, ಸ್ತಂಭ ಹಾಗೂ ಹೂತೋರಣಗಳನ್ನು ಹೊಂದಿವೆಯಾದರೂ, ಅವೆಲ್ಲಾ ನಶಿಸುತ್ತಿವೆ.ಈ ದೇವಾಲಯದಲ್ಲಿರುವ ಮೂರು ಶಿವಲಿಂಗಗಳು ಒಂದೇ ತೆರನಾಗಿಲ್ಲ. ಅವುಗಳ ಆಕಾರ ಹಾಗೂ ಗಾತ್ರದಲ್ಲಿ ವ್ಯತ್ಯಾಸವಿರುವುದು ಇಲ್ಲಿನ ಇನ್ನೊಂದು ವೈಶಿಷ್ಟ್ಯ.ದೇವಾಲಯ ವಿಶಾಲವಾದ ಕೆರೆಯ ತಟದಲ್ಲಿದೆ ಮತ್ತು ಬಳಿಯಲ್ಲಿಯೇ ಇರುವ ಎಂದೂ ಬತ್ತದ ಪುರಾತನ ಬಾವಿಯನ್ನು ಮಜ್ಜಲ ಬಾವಿ ಎಂದು ಕರೆಯುತ್ತಾರೆ.


ಆಂದ ಹಾಗೆ ಲಕ್ಕುಂಡಿ ಹಾಗೂ ಆಸುಪಾಸಿನ ಜನರು ಹೊಸ ವಾಹನ (ಹೆಚ್ಚಾಗಿ ಬೈಕು, ಟ್ರಾಕ್ಟರು) ಖರೀದಿಸಿದರೆ, ಅವನ್ನು ತಂದು ಮೊದಲ ಪೂಜೆ ಸಲ್ಲಿಸುವುದು ಬಸವೇಶ್ವರನಿಗೆ.

ಕಾಮೆಂಟ್‌ಗಳಿಲ್ಲ: