ಭಾನುವಾರ, ಜುಲೈ 26, 2015

ಮಾನ್ ಜಲಧಾರೆ...


ಹಳ್ಳಿಯಿಂದ ಸುಮಾರು ಒಂದು ಕಿಮಿ ದೂರ ನಮ್ಮ ವಾಹನವನ್ನು ನಿಲ್ಲಿಸಿ ನಡೆಯಲಾರಂಭಿಸಿದೆವು. ಎಡಬದಿಯಲ್ಲಿ ದೂರದಲ್ಲಿ ಬೆಟ್ಟಗಳ ಸಾಲು. ಸಮೀಪದಲ್ಲಿ ಗದ್ದೆಗಳ ಸಾಲು. ನಾವು ವಿಶಾಲ ಕಣಿವೆಯಲ್ಲಿ ಇದ್ದ ಊರಿಗೆ ಇಳಿಯುತ್ತಿದ್ದೆವು. ನಮ್ಮ ಬಲಬದಿಯಲ್ಲಿದ್ದ ಬೆಟ್ಟವನ್ನು ಕೊರೆದು ನಿರ್ಮಿಸಿದ ರಸ್ತೆಯಲ್ಲೀಗ ನಾವು ನಡೆಯುತ್ತಿದ್ದೆವು.


ಈ ಹಳ್ಳಿ ಬಿರುಸು ಮಳೆಗಾಲದ ದಿನಗಳಲ್ಲಿ ಹೆಚ್ಚಾಗಿ ಮಂಜಿನಲ್ಲಿ ಮುಳುಗಿರುತ್ತದೆ. ಅಂದು ನೋಟ ಶುಭ್ರವಾಗಿತ್ತು. ಮಂಜಿನ ಪತ್ತೆಯಿರಲಿಲ್ಲ.


ಹಳ್ಳಿಯಲ್ಲಿರುವ ಶಾಲೆಯ ಬಳಿ ನಮ್ಮ ಪೂರ್ವನಿಯೋಜಿತ ಇಬ್ಬರು ಮಾರ್ಗದರ್ಶಿಗಳು ನಮ್ಮನ್ನು ಬರಮಾಡಿಕೊಂಡರು. ನಂತರ ಶಾಲೆಯ ಬದಿಯಲ್ಲೇ ಇದ್ದ ಕಾಲುಮಾರ್ಗದಲ್ಲಿ ಚಾರಣ ಆರಂಭವಾಯಿತು.


ಇದು ಕೇವಲ ೪೦ ನಿಮಿಷಗಳ ಚಾರಣ. ಮಳೆಗಾಲದ ಸೊಬಗು ಎಲ್ಲೆಡೆ ರಾರಾಜಿಸುತ್ತಿತ್ತು. ಹಸಿರು ಹಾಸಿದ ಇಳೆಯ ಮೇಲೆ ನಡೆಯುವುದೇ ಒಂದು ಆಹ್ಲಾದಕರ ಅನುಭವ.


ಸ್ವಲ್ಪ ಹೊತ್ತಿನ ಬಳಿಕ ಜಲಧಾರೆಯಿರುವ ಸಣ್ಣ ಕಣಿವೆಗೆ ಇಳಿಯಲಾರಂಭಿಸಿದೆವು. ನಂತರ ದಟ್ಟವಾಗಿ ಹಬ್ಬಿಕೊಂಡಿದ್ದ ಮರಗಳ ನಡುವೆ ಸಾಗುವ ಕಾಲುಹಾದಿ.


ಜಲಧಾರೆ ಸಮೀಪಿಸುತ್ತಿದ್ದಂತೆ ಮರಗಳ ನಡುವೆ ಚೆನ್ನಾಗಿ ಟ್ರಿಮ್ ಮಾಡಿದಂತೆ ಹಬ್ಬಿಕೊಂಡಿದ್ದ ಕುರುಚಲು ಗಿಡಗಳು. ಈ ಕಾಲುಹಾದಿ ಜಲಧಾರೆಯ ಮುಂದೆ ಬಂದು ಕೊನೆಗೊಳ್ಳುತ್ತದೆ.


ಸುಮಾರು ೬೦-೭೦ ಅಡಿ ಎತ್ತರವಿರುವ ಜಲಧಾರೆಯಿದು. ಮಳೆಗಾಲದ ನಂತರ ನೀರಿನ ಹರಿವು ಕ್ಷೀಣಿಸಿ, ಡಿಸೆಂಬರ್‌ನಲ್ಲಿ ಬತ್ತಿಹೋಗುತ್ತದೆ.


ದಾರಿ ಕೊನೆಗೊಳ್ಳುವಲ್ಲಿಂದ, ಏಳೆಂಟು ಅಡಿ ಕೆಳಗಿಳಿದರೆ ಜಲಧಾರೆಯ ಬುಡಕ್ಕೆ ಹೋಗಬಹುದು.


ಹಳ್ಳಿಯನ್ನು ಹಿಂದೆ ಬಿಟ್ಟು, ನಮ್ಮ ವಾಹನದೆಡೆ ನಡೆಯುತ್ತಿರುವಾಗ ಮಂಜಿನ ಪರದೆ ಹಳ್ಳಿಯನ್ನು ಆವರಿಸಿಕೊಳ್ಳತೊಡಗಿತ್ತು.

ಭಾನುವಾರ, ಜುಲೈ 19, 2015

ಸೋಮಲಿಂಗೇಶ್ವರ ದೇವಾಲಯ - ಲಕ್ಕುಂಡಿ


ಲಕ್ಕುಂಡಿಯ ಹೊಲವೊಂದರಲ್ಲಿ, ಊರಿನ ಗದ್ದಲದಿಂದ ಸ್ವಲ್ಪ ದೂರ, ಶಾಂತ ಪರಿಸರದಲ್ಲಿ ನೆಲೆಗೊಂಡಿದ್ದಾನೆ ಸೋಮಲಿಂಗೇಶ್ವರ. ಇಲ್ಲಿ ನಂದಿ ದೇವಾಲಯದ ಹೊರಗೆ ತನ್ನದೇ ಆದ ಮಂಟಪದಲ್ಲಿ ನೆಲೆಗೊಂಡಿದ್ದಾನೆ.


ನಂದಿಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿರುವ ದೇವಾಲಯದ ಮುಂಭಾಗ ಸ್ವಲ್ಪ ಹಾನಿಗೊಂಡಿತ್ತು ಹಾಗೂ ಕಲ್ಲುಗಳು ಸಡಿಲಗೊಂಡಿದ್ದವು. ಒಂದು ಪಾರ್ಶ್ವದಲ್ಲಿ ನವರಂಗದ ಹೊರಗೋಡೆಯಷ್ಟು ಭಾಗದ ಕಲ್ಲಿನ ಕವಚಗಳು ಕಣ್ಮರೆಯಾಗಿದ್ದವು.


ಈಗ ಪುರಾತತ್ವ ಇಲಾಖೆ ದೇವಾಲಯವನ್ನು ದುರಸ್ತಿಪಡಿಸಿದೆ. ದುರಸ್ತಿಯ ನಂತರದ ಚಿತ್ರವನ್ನು ಮೇಲೆ ಕಾಣಬಹುದು.


ಶಿಖರದ ಎರಡು ಸ್ತರಗಳನ್ನು ಮಾತ್ರ ಈಗ ಕಾಣಬಹುದು. ದೇವಾಲಯದ ಹೊರಗೋಡೆಯಲ್ಲಿ ಭಿತ್ತಿಚಿತ್ರಗಳಿಲ್ಲ. ಎಲ್ಲಾ ದಿಕ್ಕುಗಳಲ್ಲಿ ಗೋಪುರವುಳ್ಳ ಮಂಟಪಗಳನ್ನು ಮಾತ್ರ ಕೆತ್ತಲಾಗಿದೆ.


ದೇವಾಲಯದ ದ್ವಾರವು ಪಂಚಶಾಖೆಗಳನ್ನು ಹೊಂದಿದ್ದು, ಮೇಲ್ಭಾಗದ ಗಜಲಕ್ಷ್ಮೀಯ ಕೆತ್ತನೆಯಿದೆ. ಎಲ್ಲಾ ಐದೂ ಶಾಖೆಗಳು ಹೊಂದಿದ್ದ ಅಲಂಕಾರಿಕಾ ಕೆತ್ತನೆಗಳನ್ನು ಈಗ ನಶಿಸಿವೆ.


ನವರಂಗದಲ್ಲಿ ನಾಲ್ಕು ಕಂಬಗಳಿವೆ. ಮೇಲ್ಛಾವಣಿಯಲ್ಲಿ ಕಮಲದ ಕೆತ್ತನೆಯಿದೆ. ಇರುವ ಎರಡು ದೇವಕೋಷ್ಠಗಳು ಖಾಲಿಯಾಗಿವೆ. ಇಲ್ಲೇ ಗೋಡೆಯಲ್ಲಿ ಶಾಸನವೊಂದನ್ನು ಕಾಣಬಹುದು.


ಅಂತರಾಳ ಹಾಗೂ ಗರ್ಭಗುಡಿಯ ದ್ವಾರಗಳೂ ದೇವಾಲಯದ ದ್ವಾರವನ್ನೇ ಹೋಲುತ್ತವೆ. ಈ ಮೂರೂ ದ್ವಾರಗಳು ಏಕಪ್ರಕಾರವಾಗಿದ್ದು, ಪಂಚಶಾಖೆಗಳನ್ನು ಹಾಗೂ ಗಜಲಕ್ಷ್ಮೀಯನ್ನು ಹೊಂದಿವೆ. ಶಾಖೆಗಳಲ್ಲಿದ್ದ ಕೆತ್ತನೆಗಳು ನಶಿಸಿವೆ.


ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ದೇವಲಯದ ಒಳಗೆ ಸ್ವಚ್ಛವಾಗಿದ್ದರೂ, ಎಲ್ಲೆಡೆ ಬಹಳ ಹಿಂದೆನೇ ಸುಣ್ಣ ಬಳಿದಿರುವುದು ಕಂಡುಬರುತ್ತದೆ. ಕಾಲಕ್ರಮೇಣ ಈ ಸುಣ್ಣ ಅಲ್ಲಲ್ಲಿ ಅಳಿಸಿಹೋಗಿದ್ದು, ದ್ವಾರದ ಕೆತ್ತನೆಗಳೂ ವಿರೂಪಗೊಂಡಿವೆ.


ಸಣ್ಣ ದೇವಾಲಯವಾದರೂ ಸುಂದರವಾಗಿರುವ ಸೋಮಲಿಂಗೇಶ್ವರನ ಸನ್ನಿಧಿಯಲ್ಲಿ ಒಳಭಾಗದ ಕೆತ್ತನೆಗಳು ನಶಿಸದೇ ಇದ್ದಲ್ಲಿ ಚೆನ್ನಾಗಿರುತ್ತಿತ್ತು. ಈ ದೇವಾಲಯದ ನಿರ್ಮಾತೃ ಹಾಗೂ ನಿರ್ಮಾಣದ ಕಾಲದ ಬಗ್ಗೆ ಮಾಹಿತಿ ದೊರಕಲಿಲ್ಲ.

ಭಾನುವಾರ, ಜುಲೈ 12, 2015

ಹುಲ್ಲುಗುಡ್ಡದ ಜಲಧಾರೆಗಳು...


ಅಗಸ್ಟ್ ೮, ೨೦೦೬. ಒಂಬತ್ತು ವರ್ಷಗಳ ಹಿಂದಿನ ಚಾರಣವಿದು. ಜಲಧಾರೆಗಿಂತಲೂ ಅಂದು ನಾವು ಸಾಗಿದ ದಾರಿ ಎಂದೂ ಮರೆಯಲಾಗದಂಥದ್ದು. ಅಂದು ನನ್ನಲ್ಲಿದ್ದ ಕ್ಯಾಮರಾದಿಂದ ಎಷ್ಟು ಚಿತ್ರಗಳನ್ನು ತೆಗೆದರೂ ಒಂದೂ ಸರಿ ಬಂದಿರಲಿಲ್ಲ. ಅಷ್ಟು ಕತ್ತಲೆಯಿತ್ತು ಆ ಕಾಡಿನೊಳಗೆ.


ಜೊತೆಗೆ ನಿರಂತರವಾಗಿ ಸುರಿಯುತ್ತಿದ್ದ ಮಳೆ. ಎಲ್ಲೆಂದರಲ್ಲಿ ಕಾಲಿಗೇರುತ್ತಿದ್ದ ಇಂಬಳಗಳು. ಒದ್ದೆಯಾದ ತರಗೆಲೆಗಳಿಂದ ಕಪ್ಪಾಗಿ ಕಾಣುತ್ತಿದ್ದ ಕಾಡಿನ ನೆಲ. ಅಗಾಧ ಗಾತ್ರದ ಮರಗಳಿಂದ ವಿವಿಧ ರೀತಿಗಳಲ್ಲಿ ಧರೆಗಿಳಿಯುತ್ತಿದ್ದ ಮಳೆ. ಒಂಥರಾ ಮೌನ ಮತ್ತು ಕಾಡಿನ ಹಾಗೂ ಮಳೆಯ ಒಂಥರಾ ಸದ್ದು ಕೂಡಾ.


ಸ್ಥಳೀಯ ಮಾರ್ಗದರ್ಶಿಗಳಿಲ್ಲದೆ ಈ ಕಾಡನ್ನು ಹೊಕ್ಕರೆ ದಾರಿ ತಪ್ಪಿ ಆಂಡಲೆಯುವುದು ಕಟ್ಟಿಟ್ಟ ಬುತ್ತಿ. ಅಂತಹ ಘನಘೋರ ಕಾಡಿನಲ್ಲಿ ಇದುವರೆಗೆ ನಾನಂತೂ ಚಾರಣಗೈದಿಲ್ಲ.


ಹಳ್ಳಿಯ ಅಂಚಿನಲ್ಲಿ ಹರಿಯುವ ಎರಡು ಹಳ್ಳಗಳನ್ನು ದಾಟಿದ ಕೂಡಲೇ ಕಾಡು ನಿಧಾನವಾಗಿ ನಮ್ಮನ್ನು ತನ್ನ ತೆಕ್ಕೆಗೆ ಬರಸೆಳೆಯುತ್ತದೆ. ನಮಗರಿವಿಗೆ ಬರುವ ಮೊದಲೇ ನಾವು ಎಲ್ಲೋ ಕಾಡಿನೊಳಗೆ. ಅಂದಿನ ಮಳೆ ಕಾಡನ್ನು ಇನ್ನೂ ಘೋರವನ್ನಾಗಿ ಕಾಣುವಂತೆ ಮಾಡಿರಬಹುದು.


ಸುಮಾರು ೯೦ ನಿಮಿಷದ ಚಾರಣದ ಬಳಿಕ ಜಲಧಾರೆಯ ದರ್ಶನ. ಸುಮಾರು ೫೦ ಅಡಿ ಎತ್ತರದ ಜಲಧಾರೆ. ದಟ್ಟ ಕಾಡಿನ ನಡುವೆ ಜಲಕನ್ಯೆಯ ಭೋರ್ಗರೆತದ ಸುಮಧುರ ಸದ್ದು.


ಹಿಂದಿರುಗಿ ಬರುವಾಗ ಬೇರೊಂದು ದಾರಿಯಿಂದ ಕರೆತಂದ ನಮ್ಮ ಮಾರ್ಗದರ್ಶಿಗಳು ಮತ್ತೊಂದು ಜಲಧಾರೆಯ ದರ್ಶನ ಮಾಡಿಸಿದರು.


ಸುಮಾರು ೪೦ ಅಡಿ ಎತ್ತರವಿದ್ದು ಸುಂದರವಾಗಿರುವ ಈ ಜಲಧಾರೆಯನ್ನು ನಿರ್ಮಿಸಿರುವ ಹಳ್ಳವೇ ನಾವು ಚಾರಣ ಆರಂಭಿಸಿದಾಗ ದಾಟಿದ ಎರಡನೇ ಹಳ್ಳ.

ಸೋಮವಾರ, ಜುಲೈ 06, 2015

ಉಂಚಳ್ಳಿಯ ಚೆಂದುಳ್ಳಿ...


ನಾಲ್ಕಾರು ಸಲ ಈ ಜಲಧಾರೆಗೆ ತೆರಳಿದರೂ, ಪ್ರತೀ ಸಲ ವೀಕ್ಷಣಾ ಕಟ್ಟೆಯಿಂದ ನೋಡಿ ತೃಪ್ತಿಪಟ್ಟಿದ್ದೆ ವಿನ: ಕಣಿವೆಯ ಕೆಳಗಿಳಿದು ಜಲಧಾರೆಯ ಬುಡಕ್ಕೆ ತೆರಳಿರಲಿಲ್ಲ.


ಎಪ್ರಿಲ್ ೨೦೧೫ರ ಉಡುಪಿ ಯೂತ್ ಹಾಸ್ಟೆಲ್ ಚಾರಣವನ್ನು ಈ ಜಲಧಾರೆಗೆ ಆಯೋಜಿಸೋಣವೆಂದು ನಾನು ಉಡುಪಿ ಯೂತ್ ಹಾಸ್ಟೆಲ್ ಅಧ್ಯಕ್ಷರಿಗೆ ಸಲಹೆ ನೀಡುವ ಹಿಂದೆ ನನ್ನ ಸ್ವಾರ್ಥವೂ ಇತ್ತು.


ವಾಹನ ನಿಲ್ಲಿಸುವ ಸ್ಥಳದಿಂದ ಒಂದು ತಾಸಿನಲ್ಲಿ ನಾವು ಜಲಧಾರೆಯ ಬುಡ ತಲುಪಿದ್ದೆವು. ಬಿಸಿಲಿನ ತಾಪ ಎಲ್ಲರನ್ನೂ ಕಂಗೆಡಿಸಿತ್ತು. ಕೂಡಲೇ ನೀರಿಗಿಳಿದ ಸುಮಾರು ಚಾರಣಿಗರು ಅಲ್ಲೇ ಸಮಯ ಕಳೆದರು.


ಜಲಧಾರೆಯ ಮುಂದೆ ಇರುವ ಎತ್ತರದ ಸ್ಥಳದಲ್ಲಿ ಬಂಡೆಯೊಂದರ ನೆರಳಿನಲ್ಲಿ ಕುಳಿತು ಜಲಧಾರೆಯ ಸೌಂದರ್ಯವನ್ನು, ಅಗಾಧತೆಯನ್ನು ವಿಸ್ಮಯಭರಿತನಾಗಿ ಆನಂದಿಸಿದೆ.


ಕಲ್ಲಿನ ಪದರಗಳ ವಿಶಿಷ್ಟ ರಚನೆ ಮನಸೆಳೆಯಿತು. ನೀರಿನ ರಭಸಕ್ಕೆ ಹಲವಾರು ವರ್ಷಗಳಿಗೆ ಒಂದರಂತೆ, ಬಂಡೆಗಳು ಸಡಿಲಗೊಂಡು ಜಲಧಾರೆಯ ತಳಕ್ಕೆ ಉರುಳಿಬೀಳುತ್ತಿವೆ.


ಜಲಧಾರೆಯ ಬುಡದಲ್ಲಿರುವ ಅತ್ಯಾಕರ್ಷಕ ಕೊಳ ಸ್ಥಳದ ಸೌಂದರ್ಯವನ್ನು ಉತ್ತುಂಗಕ್ಕೆ ಏರಿಸಿತ್ತು. 


ಅಲ್ಲಿ ನಾನೊಬ್ಬನೇ ಸುಮಾರು ಒಂದು ತಾಸು ಕುಳಿತಿದ್ದೆ. ಬಾಲ್ಕನಿಯಲ್ಲಿ ಕುಳಿತ ನನ್ನ ಮುಂದೆ ಜಲಧಾರೆ ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತಿತ್ತು. ಮೂರು ಸೀಳುಗಳಲ್ಲಿ ಮೂರು ವಿವಿಧ ರೀತಿಗಳಲ್ಲಿ ನೀರು ಕೆಳಗಿಳಿದು ಬರುವ ದೃಶ್ಯ ನೋಡುತ್ತಾ ಮೈಮರೆತೆ.


ಮಳೆಗಾಲದಲ್ಲಿ ಶಿವನ ತಾಂಡವನೃತ್ಯದಂತೆ ರೌದ್ರಾವತಾರ ತಾಳುವ ಈ ಜಲಧಾರೆ, ಈಗ, ಹೇಗೆ ಕೈಲಾಸದಲ್ಲಿ ಶಿವ ತನ್ನ ಶಾಂತ ರೂಪದಲ್ಲಿ ಮಂದಹಾಸ ಬೀರುತ್ತಿರುತ್ತಾನೋ ಅದೇ ರೀತಿಯಲ್ಲಿ ಸೌಮ್ಯವತಿಯಾಗಿ ತನ್ನ ಇನ್ನೊಂದು ರೂಪವನ್ನು ಪ್ರದರ್ಶಿಸುತ್ತಿತ್ತು.


ಶಿವನ ಎರಡು ರೂಪಗಳಂತೆ, ಈ ಜಲಧಾರೆಯ ಎರಡು ರೂಪಗಳು ಕೂಡಾ ಮನಸಿನಲ್ಲಿ ಅಚ್ಚಳಿಯದಂತೆ ಇರುವ ಹೊಳಹುಗಳು.