ಭಾನುವಾರ, ಜೂನ್ 21, 2015

ಶಾಂತಿಗ್ರಾಮದ ದೇವಾಲಯಗಳು


ಶಿಲಾಶಾಸನಗಳಲ್ಲಿ ದೊರಕಿರುವ ಮಾಹಿತಿಯ ಪ್ರಕಾರ ಹೊಯ್ಸಳ ದೊರೆ ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲಾ ದೇವಿಯು ೧೨ನೇ ಶತಮಾನದಲ್ಲಿ ಶಾಂತಿಗ್ರಾಮವೆಂಬ ಊರನ್ನು ಸ್ಥಾಪಿಸಿದಳು. ಶಾಂತಿಗ್ರಾಮದಲ್ಲಿ ನಾಲ್ಕು ಪ್ರಮುಖ ದೇವಾಲಯಗಳಿವೆ. ಇವುಗಳಲ್ಲಿ ಒಂದು ದೇವಾಲಯದ ನಿರ್ಮಾಣ ಹೊಯ್ಸಳ ಆಳ್ವಿಕೆಯ ಕಾಲದ ನಂತರ ಆಗಿದ್ದು, ಉಳಿದ ಮೂರು ದೇವಾಲಯಗಳ ನಿರ್ಮಾಣ ಹೊಯ್ಸಳರ ಆಳ್ವಿಕೆಯ ಸಮಯದಲ್ಲಿ ಆಗಿದೆ. ಈ ಮೂರು ದೇವಾಲಯಗಳನ್ನು ಶಾಂತಲಾದೇವಿ ನವೀಕರಣಗೊಳಿಸಿದ್ದಳು ಎಂಬ ಮಾಹಿತಿಯುಳ್ಳ ಶಾಸನ ಶಾಂತಿಗ್ರಾಮದಲ್ಲಿ ದೊರಕಿದೆ.


ಕೇಶವ ದೇವಾಲಯವನ್ನು ಹೊಯ್ಸಳರ ಆಳ್ವಿಕೆಯ ಸಮಯದ ನಂತರ ನಿರ್ಮಾಣಗೊಂಡಿರುವುದಾಗಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಕಾಲಕಾಲಕ್ಕೆ ನವೀಕರಣಗೊಂಡಿರುವ ದೇವಾಲಯದ ಮೂಲ ರೂಪ ಹೊಯ್ಸಳ ದೇವಾಲಯಗಳಂತೆ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ದೇವಾಲಯಕ್ಕೆ ಬೀಗ ಹಾಕಿದ್ದರಿಂದ ನಮಗೆ ಒಳಗೆ ತೆರಳಲು ಆಗಲಿಲ್ಲ.


ಕೇಶವ ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಭಿತ್ತಿಚಿತ್ರಗಳಿಲ್ಲ. ಹಲವಾರು ಸಣ್ಣ ಗೋಪುರಗಳನ್ನು ಹೊರಗೋಡೆಯುದ್ದಕ್ಕೂ ಕೆತ್ತಲಾಗಿದೆ. ಅಲ್ಲಲ್ಲಿ ಕೆಲವು ದೇವದೇವಿಯರ ಮೂರ್ತಿಗಳನ್ನು ಕಾಣಬಹುದು. ಆದರೆ ಇವುಗಳನ್ನು ತೀರಾ ಇತ್ತೀಚೆಗೆ ನಿರ್ಮಿಸಲಾಗಿದೆ.


ದೇವಾಲಯವು ಮುಖಮಂಟಪ, ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿರುವುದನ್ನು ಕಾಣಬಹುದು.


ನರಸಿಂಹ ದೇವಾಲಯವನ್ನು ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿದ್ದು, ದೇವಾಲಯವು ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಗರ್ಭಗುಡಿಯ ಮೇಲೆ ಸಾಮಾನ್ಯ ಗೋಪುರವಿದೆ ಮತ್ತು ಹೊರಗೋಡೆಯಲ್ಲಿ ಯಾವ ಕೆತ್ತನೆಗಳೂ ಇಲ್ಲ.


ಶಾಂತಿಗ್ರಾಮದಲ್ಲಿ ಇರುವ ದೇವಾಲಯಗಳ ಪೈಕಿ, ಈ ದೇವಾಲಯಕ್ಕೆ ಭಕ್ತರ ಭೇಟಿ ಹೆಚ್ಚು. ಹರಕೆ, ಮದುವೆ ಹಾಗೂ ಇನ್ನಿತರ ಸಮಾರಂಭಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಭಕ್ತರು ದೇವಾಲಯಕ್ಕೆ ದೊಡ್ಡ ಗೋಪುರವುಳ್ಳ ಪ್ರವೇಶ ದ್ವಾರವನ್ನು ನಿರ್ಮಿಸಿದ್ದಾರೆ. ಹಾಗೇನೆ, ದೇವಾಲಯದ ಸುತ್ತಲೂ ಮಾಡು ಹಾಕಿಸಲಾಗಿದೆ. ದೇವಾಲಯದೊಳಗೆ ನೆಲಕ್ಕೆಲ್ಲಾ ಮಾರ್ಬಲ್ಲು.


ನರಸಿಂಹ ದೇವಾಲಯವೆಂದು ಕರೆಯಲಾಗುತ್ತಿದೆಯಾದರೂ, ಗರ್ಭಗುಡಿಯಲ್ಲಿರುವ ಮೂರ್ತಿಯು ನರಸಿಂಹನು ಯೋಗಾಸನದಲ್ಲಿರುವುದನ್ನು ತೋರಿಸುತ್ತಿದೆ. ಹಾಗಾಗಿ ಈ ದೇವಾಲಯವನ್ನು ಯೋಗನರಸಿಂಹ ದೇವಾಲಯವೆಂದೂ ಕರೆಯಲಾಗುತ್ತದೆ.


ದ್ವಿಕೂಟ ಶೈಲಿಯ ವೀರಭದ್ರ ದೇವಾಲಯವು ಪಾಳುಬೀಳುತ್ತಿದೆ. ದೇವಾಲಯಕ್ಕೆ ಬೀಗ ಹಾಕಲಾಗಿದ್ದರಿಂದ ಹೊರಗಿನಿಂದ ನೋಡಿಯೇ ತೃಪ್ತಿಪಡಬೇಕಾಯಿತು.


ದೇವಾಲಯದ ಪ್ರಮುಖ ದ್ವಾರವು ಯಾವುದೇ ಅಲಂಕಾರಗಳಿಲ್ಲದ ಪಂಚಶಾಖೆಗಳನ್ನು ಹೊಂದಿದೆ. ಲಲಾಟದಲ್ಲಿ ಮಾಸುತ್ತಿರುವ ಗಜಲಕ್ಷ್ಮೀ ಹಾಗೂ ತಳದಲ್ಲಿ ದ್ವಾರಪಾಲಕರನ್ನು ಕಾಣಬಹುದು. ಮುಖಮಂಟಪ, ನವರಂಗ ಮತ್ತು ಎರಡು ಗರ್ಭಗುಡಿಗಳನ್ನು ಈ ದೇವಾಲಯ ಹೊಂದಿದೆ.


ಪಶ್ಚಿಮದಲ್ಲಿರುವ ಪ್ರಮುಖ ಗರ್ಭಗುಡಿಯಲ್ಲಿ ವೀರಭದ್ರನ ವಿಗ್ರಹವಿದೆ. ದಕ್ಷಿಣದಲ್ಲಿರುವ ಎರಡನೇ ಗರ್ಭಗುಡಿಯಲ್ಲಿರುವ ಮೂರ್ತಿಯ ಬಗ್ಗೆ ಮಾಹಿತಿ ದೊರಕಲಿಲ್ಲ. ಪ್ರಮುಖ ಗರ್ಭಗುಡಿಯ ಮೆಲೆ ಗೋಪುರವಿದ್ದು, ಇದರ ಹೊರಕವಚ ಕಳಚಿಬೀಳುತ್ತಿದೆ. ದೇವಾಲಯವು ಭವ್ಯ ಮುಖಮಂಟಪವನ್ನು ಹೊಂದಿದ್ದ ಕುರುಹನ್ನು ಕಾಣಬಹುದು. ಈ ದೇವಾಲಯದಲ್ಲಿ ಕಾಳಿಯ ಎಂಟು ಕೈಗಳುಳ್ಳ (ಮಹಿಷಾಸುರಮರ್ದಿನಿ) ಅದ್ಭುತ ಮೂರ್ತಿಯಿದೆ. ನಮಗದನ್ನು ನೋಡಲಾಗಲಿಲ್ಲ. ಇದೇ ಕಾರಣಕ್ಕೆ ಊರವರು ಈ ದೇವಾಲಯವನ್ನು ಕಾಳಮ್ಮ ದೇವಾಲಯವೆಂದು ಕರೆಯುತ್ತಾರೆ.


ದೇವಾಲಯದ ಸ್ಥಿತಿ ಕಂಡರೆ ಖೇದವಾಗದೆ ಇರದು. ಕಲ್ಲಿನ ರಾಶಿಯನ್ನು ಪೇರಿಸಿ ಇಟ್ಟಂತೆ ಕಾಣುತ್ತಿದೆ ಒಂದೊಮ್ಮೆ ರಾರಾಜಿಸುತ್ತಿದ್ದ ಈ ದೇವಾಲಯ. ನವರಂಗದ ಹೊರಗೋಡೆಯ ಕಲ್ಲಿನ ಕವಚಗಳೇ ಮಾಯವಾಗುತ್ತಿವೆ! ಯಾರ ಮನೆ ಸೇರಿವೆಯೇನೋ! ತನ್ನ ವಾಸಸ್ಥಾನದ ಜೀರ್ಣೋದ್ಧಾರದ ನಿರೀಕ್ಷೆಯಲ್ಲಿದ್ದಾನೆ ವೀರಭದ್ರ.


ಶಾಂತಿಗ್ರಾಮದಲ್ಲಿ ಹೊಯ್ಸಳರು ಇಸವಿ ೧೧೨೩ರಲ್ಲಿ ನಿರ್ಮಿಸಿದ ಧರ್ಮೇಶ್ವರ ದೇವಾಲಯ ನಮಗೆ ಸಿಗಲಿಲ್ಲ. ಊರವರಲ್ಲಿ ವಿಚಾರಿಸಿದರೆ ನಾವು ಅದಾಗಲೇ ನೋಡಿದ್ದ ಮೂರು ದೇವಾಲಯಗಳತ್ತ ಕೈ ತೋರಿಸುತ್ತಿದ್ದರೇ ವಿನ: ಧರ್ಮೇಶ್ವರನ ವಿಷಯವೇ ಅವರಿಗೆ ಗೊತ್ತಿರಲಿಲ್ಲ. ಈಗ ಬೇರೆ ಹೆಸರಿನಿಂದ ಕರೆಯಲಾಗುತ್ತಿರಬಹುದು. ಆದರೂ, ನಮಗೆ ಈ ಧರ್ಮೇಶ್ವರನ ಕುರುಹೇ ಸಿಗಲಿಲ್ಲ. ಇನ್ನೂ ಸ್ವಲ್ಪ ಹುಡುಕಿದರೆ ಸಿಗುತ್ತಿತ್ತೇನೋ. ಆದರೆ ಅದಾಗಲೇ ಶಾಂತಿಗ್ರಾಮದ ಪ್ರಾಚೀನ ದೇವಾಲಯಗಳ ಸ್ಥಿತಿ-ದುಸ್ಥಿತಿ ಕಂಡು ನಿರಾಶರಾಗಿದ್ದ ನಾವು ಅಲ್ಲಿಂದ ಹೊರಟೆವು.

2 ಕಾಮೆಂಟ್‌ಗಳು:

ಕನಸು ಕಂಗಳ ಹುಡುಗ ಹೇಳಿದರು...

ಒಳ್ಳೆಯ ಮಾಹಿತಿ ಸರ್...........

ರಾಜೇಶ್ ನಾಯ್ಕ ಹೇಳಿದರು...

ರಾಘವೇಂದ್ರ,
ಧನ್ಯವಾದ.