ಭಾನುವಾರ, ಜೂನ್ 07, 2015

ಕರ್ಕಿಗುಡ್ಡಕ್ಕೆ...


೨೦೧೦ ನವೆಂಬರ್ ತಿಂಗಳ ಅದೊಂದು ದಿನ ರಮೇಶ್ ಕಾಮತರ ಕಾರಿನಲ್ಲಿ ಗೆಳೆಯ ಅಶೋಕ್ ಹೆಬ್ಬಾರರ ಮನೆಯೆಡೆ ಹೊರಟೆವು. ತನ್ನ ಮನೆಯ ಹಿಂಭಾಗದಲ್ಲಿದ್ದ ಈ ಕರ್ಕಿಗುಡ್ಡಕ್ಕೆ ಚಾರಣಗೈಯಲು ಬರುವಂತೆ ಬಹಳ ದಿನದಿಂದ ಹೆಬ್ಬಾರರ ಆಹ್ವಾನವಿತ್ತು. ಮುಂಜಾನೆ ಸುಮಾರು ೧೦ ಗಂಟೆ ಹೊತ್ತಿಗೆ ಮಲೆನಾಡಿನ ಸುಂದರ ಪರಿಸರದಲ್ಲಿ ನೆಲೆಗೊಂಡಿರುವ ಅಶೋಕ್ ಅವರ ಮನೆ ತಲುಪಿದೆವು. ಈ ಚಾರಣವನ್ನು ಆಯೋಜಿಸಿದ್ದು ಅಶೋಕ್ ಹೆಬ್ಬಾರರ ಆತ್ಮೀಯ ಗೆಳೆಯನಾಗಿರುವ ರಾಕೇಶ್ ಹೊಳ್ಳ.


ಅಲ್ಲಿ ನಮಗಾಗಿ ರುಚಿ ರುಚಿ ಕಾಯಿ ಹೋಳಿಗೆ ಮತ್ತು ತುಪ್ಪವನ್ನು ಅಶೋಕ ಮತ್ತು ಅವರ ಅಮ್ಮ ರೆಡಿ ಮಾಡಿ ಇಟ್ಟಿದ್ದರು. ಅದನ್ನು ಸವಿದು, ಸ್ವಲ್ಪ ಸಮಯ ವಿಶ್ರಮಿಸಿ ಕರ್ಕಿಗುಡ್ಡದೆಡೆ ನಮ್ಮ ಚಾರಣ ಆರಂಭಿಸಿದೆವು. ದಾರಿಯಲ್ಲಿ ಸಿಗುವುದು ತೀರ್ಥಕೆರೆ ಎಂಬ ಸಣ್ಣ ಜಲಧಾರೆ. ನೀರಿನ ಹರಿವು ಕಡಿಮೆಯಿತ್ತು. ಸುಮಾರು ೩೫-೪೦ ಅಡಿ ಎತ್ತರದ ಜಲಧಾರೆ.


ಅಲ್ಲಿಂದ ಮುಂದೆ ಹದವಾದ ಏರುಹಾದಿಯಲ್ಲಿ ಚಾರಣ ಸಾಗಿತು. ಸುಮಾರು ಎತ್ತರದವರೆಗೆ ಹೀಗೆ ಸಾಗಿದ ಬಳಿಕ, ಸುತ್ತಮುತ್ತಲಿನ ದೃಶ್ಯಗಳು ಕಾಣಲಾರಂಭಿಸಿದವು. ಈ ಕಾಲುಹಾದಿ ಮುಂದಿನ ಊರನ್ನು ಸಂಪರ್ಕಿಸುವ ದಾರಿಯಾಗಿದ್ದು, ನಮ್ಮ ಗುರಿಯಾಗಿದ್ದ ಕರ್ಕಿಗುಡ್ಡವನ್ನು ತಲುಪಲು ಒಂದೆಡೆ ಕವಲು ದಾರಿ ಹಿಡಿದು ನೇರವಾಗಿ ಏರಲು ಆರಂಭಿಸಬೇಕು. ಚಳಿಗಾಲದ ಸಮಯವಾಗಿದ್ದರಿಂದ ಬಿಸಿಲಿನ ಕಿರಿಕಿರಿಯಿಲ್ಲ. ತಣ್ಣಗಿನ ಗಾಳಿ ಮುದ ನೀಡುತ್ತಿತ್ತು. ಮೋಡ ಕವಿದಂತಹ ವಾತಾವರಣ. ಚಾರಣಕ್ಕೆ ಯೋಗ್ಯವಾದಂತಹ ವಾತಾವರಣ.


ಮೇಲೇರಿದಂತೆ ಒಂದು ಸಮತಟ್ಟಾದ ಪ್ರದೇಶ ಸಿಗುವುದು. ನಾವು ಚಾರಣ ಆರಂಭಿಸಿ ಸುಮಾರು ಒಂದುವರೆ ತಾಸು ಕಳೆದಿತ್ತು. ಅಲ್ಲಿವರೆಗೆ ತಲುಪಲು ಕಷ್ಟಕರವಾದ ಏರುಹಾದಿ ಕ್ರಮಿಸಿ ಬಂದಿದ್ದೆವು. ಈ ಸಣ್ಣ ಬೆಟ್ಟದ ತುದಿಯಲ್ಲಿರುವ ಸಮತಟ್ಟಾದ ಪ್ರದೇಶವನ್ನು ತಲುಪುವವರೆಗೂ ಅಲ್ಲಿಂದ ಮುಂದೆ ಏನಿದೆ ಎಂದು ಕಾಣುತ್ತಿರಲಿಲ್ಲ. ಅದೇ ಕರ್ಕಿಗುಡ್ಡದ ತುದಿ ಎಂದು ನಾನು ಅಂದುಕೊಂಡಿದ್ದೆ. ಆದರೆ ಅಲ್ಲಿಂದ ಕಂಡುಬಂದ ದೃಶ್ಯ ನನ್ನನ್ನು ಒಂದು ಕ್ಷಣ ಕಕ್ಕಾಬಿಕ್ಕಿಗೊಳಿಸಿತು.


ಅಲ್ಲಿ ಮುಂದಿತ್ತು ಕರ್ಕಿಗುಡ್ಡದ ಮೈನವಿರೇಳಿಸುವಂತಹ ನೋಟ. ಒಂದು ಕ್ಷಣ ನಾನು ಬೆಚ್ಚಿಬಿದ್ದೆ. ಆ ಕಡಿದಾದ ಬೆಟ್ಟವನ್ನೇರಲು ನನ್ನಿಂದ ಸಾಧ್ಯವೇ ಎಂಬ ಅನುಮಾನ ಮೂಡಲಾರಂಭಿಸಿತು. ಕರ್ಕಿಗುಡ್ಡದ ಆ ಅದ್ಭುತ ನೋಟವನ್ನು ಮನಸಾರೆ ಸವಿದೆವು. ಅಲ್ಲಿ ಸುಮಾರು ಹೊತ್ತು ವಿಶ್ರಮಿಸಿ ನಂತರ ಕರ್ಕಿಗುಡ್ಡದ ತುದಿಯತ್ತ ಮುನ್ನಡೆದೆವು. ಪ್ರಾರಂಭದಲ್ಲಿ ಸಲೀಸಾಗಿದ್ದ ದಾರಿ, ಮೇಲೇರುತ್ತಾ ಹೋದಂತೆ ಕಡಿದಾಯಿತು. ನೇರವಾಗಿ ಮೇಲೇರಲು ಸಾಧ್ಯವಾಗದೆ ಸುತ್ತಿಬಳಸಿ ಮುಂದೆ ಹೋಗಬೇಕಾಯಿತು. ಪೊದೆಗಳನ್ನೆಲ್ಲಾ ಹಿಡಿದು, ಏನೇನೋ ಕಸರತ್ತು ಮಾಡಿ ಶಿಖರದೆಡೆ ಸಾಗಿದೆವು.


ಮುಂದಕ್ಕೆ ಹೋದಂತೆ ಕರ್ಕಿಗುಡ್ಡದ ಶಿಖರ ಇನ್ನಷ್ಟು ದೂರವಿದ್ದಂತೆ ಭಾಸವಾಗತೊಡಗಿತ್ತು. ನಾವು ಏರಿ ಬಂದ ದಾರಿಯತ್ತ ಹಿಂದಿರುಗಿ ನೋಡಿದರೆ, ನಾವು ಬಂದ ದಾರಿ ಕಂಡು, ನಮಗೇ ಆಶ್ಚರ್ಯವಾಗತೊಡಗಿತು. ಬಿಸಿಲು ಇರದಿದ್ದರೆ ಏರುವುದು ಎಂದಿಗೂ ಸುಲಭ. ಸುಮಾರು ಎರಡು ತಾಸಿನ ಚಾರಣದ ಬಳಿಕ ಕರ್ಕಿಗುಡ್ಡದ ನೆತ್ತಿಯನ್ನು ತಲುಪಿದೆವು. ಅಂದು ಗಾಳಿ ಬಹಳ ರಭಸವಾಗಿ ಬೀಸುತ್ತಿತ್ತು. ಸೂರ್ಯನ ಪತ್ತೆ ಇರಲಿಲ್ಲ. ಹೀಗಾಗಿ ಕರ್ಕಿಗುಡ್ಡದಲ್ಲಿ ಒಂದು ತಾಸಿಗೂ ಅಧಿಕ ಸಮಯವನ್ನು ಕಳೆದೆವು.


ಅಲ್ಲಿಂದ ಹಿಂತಿರುಗಲು ಮನಸಾಗುತ್ತಿರಲಿಲ್ಲ. ಆದರೂ ಒಲ್ಲದ ಮನಸಿನಿಂದ ಹೊರಟೆವು. ಈಗ ಅಶೋಕ ಬೇರೊಂದು ದಾರಿಯಲ್ಲಿ ನಮ್ಮನ್ನು ಕರ್ಕಿಗುಡ್ಡದಿಂದ ಕೆಳಗಿಳಿಸಿದರು. ಶಿಖರದಿಂದ ಹಾಗೇ ಮುನ್ನಡೆದು ’ರಿಡ್ಜ್ ವಾಕ್’ ಮಾಡುತ್ತಾ, ಕರ್ಕಿಗುಡ್ಡಕ್ಕೆ ತಾಗಿಕೊಂಡೇ ಇದ್ದ ಇನ್ನೆರಡು ಸಣ್ಣ ಶಿಖರಗಳ ಮೇಲಿನಿಂದ ಹಾದು ನಂತರ ಕಾಡಿನೊಳಗೆ ಇಳಿದೆವು.


ನಾನಿನ್ನೂ ಬೆಟ್ಟದ ಇಳಿಜಾರಿನಲ್ಲಿಯೇ ಕೆಳಗಿಳಿದು ಬರುತ್ತಿದ್ದೆ. ಅದಾಗಲೇ ಬೆಟ್ಟದ ತಳ ತಲುಪಿದ್ದ ನನ್ನ ಕೆಲವು ಸಹಚಾರಣಿಗರು, ದೊಡ್ಡ ಪೊದೆಯ ಹಿಂದೆ ಕಣ್ಮರೆಯಾದರು. ಕ್ಷಣಾರ್ಧದಲ್ಲಿ ಪೊದೆಯ ಇನ್ನೊಂದು ಬದಿಯಿಂದ ದಷ್ಟಪುಷ್ಟವಾಗಿದ್ದ ಕಡವೆಯೊಂದು ಹೊರಬಂದು ನಾಗಾಲೋಟಗೈಯುತ್ತಾ ಸುಮಾರು ದೂರ ಓಡಿ ಕಣ್ಮರೆಯಾಯಿತು. ಅನಿರೀಕ್ಷಿತವಾಗಿ ವನ್ಯಮೃಗವೊಂದು ಕಾಣಸಿಕ್ಕಿದ್ದು ನನ್ನ ಅದೃಷ್ಟ.


ಕರ್ಕಿಗುಡ್ಡಕ್ಕೆ ತೆರಳುವಾಗ ನಮಗೆ ಕಾಡೇ ಸಿಕ್ಕಿರಲಿಲ್ಲ. ಆದರೆ ಈಗ ಹಿಂತಿರುಗುವಾಗ, ಬೆಟ್ಟಗಳನ್ನು ದಾಟಿ ಕೆಳಗಿಳಿದ ಬಳಿಕ ಸುಮಾರು ಒಂದು ತಾಸು ಕಾಡಿನೊಳಗೇ ನಡೆದು, ತೀರ್ಥಕೆರೆ ಜಲಧಾರೆಯ ಬದಿಯಿಂದ ಹಾದು, ಅಶೋಕ್ ಅವರ ಮನೆ ತಲುಪಿದೆವು.


ನಂತರ ಅಶೋಕನ ಹೆತ್ತವರು ನಮ್ಮನ್ನು ಉಪಚರಿಸಿದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಉತ್ತಮ ಊಟೋಪಚಾರ ನಮ್ಮ ಚಾರಣದ ದಣಿವನ್ನು ಸಂಪೂರ್ಣವಾಗಿ ನೀಗಿಸಿತು. ಈ ರೀತಿಯ ಆತಿಥ್ಯ ದೊರಕಲು ಏನೋ ಪುಣ್ಯ ಮಾಡಿರಬೇಕು ನಾವು.  ಅಂತಹ ಸಜ್ಜನರ ಸುಂದರ ಮನೆಯಲ್ಲಿ ಕುಳಿತು, ಸ್ವಾದಭರಿತ ಊಟ ಸವಿಯುವ ಪುಣ್ಯ ಮತ್ತೆ ಮತ್ತೆ ಸಿಗದು. ಇಂತಹ ನೆನಪುಗಳೇ ಚಾರಣಿಗರಿಗಿರುವ ಅಮೂಲ್ಯ ಸೊತ್ತು.

2 ಕಾಮೆಂಟ್‌ಗಳು:

sunaath ಹೇಳಿದರು...

ಅಬ್ಬಾ! ಹುಲ್ಲಿನಲ್ಲಿಯೇ ಶೀರ್ಷಾಸನ!

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,
ಧನ್ಯವಾದ.