ಮಂಗಳವಾರ, ಮಾರ್ಚ್ 31, 2015

ಬಂದಳಿಕೆಯ ದೇವಾಲಯಗಳು


ಸುಮಾರು ೧೦೦೦ ವರ್ಷಗಳವರೆಗೆ ವೈಭವದಿಂದ ಮೆರೆದ ಇತಿಹಾಸ ಪ್ರಸಿದ್ಧ ಸ್ಥಳ ಬಂದಳಿಕೆ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ರಾಜಧಾನಿಯಾಗಿ ಮೆರೆದಿದ್ದ ಊರಿದು. ಇಸವಿ ೮೩೪ ರಿಂದ ೧೩೪೬ರ ವರೆಗಿನ ಅನೇಕ ಶಾಸನಗಳು ಇಲ್ಲಿ ದೊರೆತಿವೆ. ಈ ಶಾಸನಗಳಲ್ಲಿ ಕದಂಬರು, ವಿಜಯನಗರದ ಅರಸರು, ರಾಷ್ಟ್ರಕೂಟರು, ಸೇವುಣರು, ಕಳಚೂರಿ ಅರಸರು, ಯಾದವರು ಮತ್ತು ಚಾಲುಕ್ಯರು ನೀಡಿರುವ ದಾನ ದತ್ತಿ ವಿವರಗಳಿವೆ. ಇಲ್ಲಿರುವ ಪುರಾತನ ಕೆರೆ ನಾಗರಕೆರೆ ಈಗಲೂ ನಳನಳಿಸುತ್ತಿದೆ. ಈ ಕೆರೆಯ ನೀರು ನಾಗರಹಳ್ಳವಾಗಿ ಹರಿದು ವರದಾ ನದಿಯನ್ನು ಸೇರುತ್ತದೆ.


ಬಂದಳಿಕೆಯನ್ನು ಪ್ರವೇಶಿಸಿದ ಕೂಡಲೇ ಕೆರೆಯ ತಟದಲ್ಲೇ ಮೊದಲಿಗೆ ಎದುರಾಗುವುದು ಶಾಂತಿನಾಥ ಬಸದಿ. ಬಂದಳಿಕೆ ರಾಜಧಾನಿಯಾಗಿ ಮೆರೆದಿದ್ದ ಸಮಯದಲ್ಲಿ ಆಸ್ಥಾನ ಕವಿಯಾಗಿದ್ದು, ಮಹಾಪಾಂಡಿತ್ಯವನ್ನು ಹೊಂದಿದವನಾಗಿದ್ದ ಶಾಂತಿನಾಥನಿಗಾಗಿ ಕಟ್ಟಿಸಿದ ಬಸದಿಯಿದು. ಕರಿಕಲ್ಲಿನ ವಿಗ್ರಹವಿರುವ ಗರ್ಭಗುಡಿ, ಅಂತರಾಳ ಮತ್ತು ಸುಖನಾಸಿಯನ್ನು ಈ ಬಸದಿ ಹೊಂದಿದೆ. ಸುಖನಾಸಿಯಲ್ಲಿ ಇರುವ ಕಂಬಗಳ ಮೇಲೆ ಏನೇನೋ ಬರಹಗಳು, ವೃತ್ತಾಕಾರದ ಚಿತ್ರದೊಳಗೆ ಮತ್ತೇನೋ ಅಕ್ಷರಗಳು. ಇವುಗಳೇನೆಂದು ತಿಳಿಯಲಿಲ್ಲ. ಬಸದಿಯ ಹೊರಗಡೆ ಒಂದೆರಡು ರುಂಡವಿಲ್ಲದ ದೇವಿಯರ ಮೂರ್ತಿಗಳು ಬಿದ್ದಿದ್ದವು.


ಸ್ವಲ್ಪ ಮುಂದೆ ತೆರಳಿದರೆ ದೊಡ್ಡ ಪ್ರಾಂಗಣದೊಳಗೆ ತ್ರಿಮೂರ್ತಿ ದೇವಾಲಯ, ಮಹಾನವಮಿ ದಿಬ್ಬ, ಸಹಸ್ರಲಿಂಗ ಮತ್ತು ಸೋಮೇಶ್ವರ ದೇವಸ್ಥಾನ ಇವಿಷ್ಟು ಇವೆ. ತ್ರಿಮೂರ್ತಿ ದೇವಸ್ಥಾನವನ್ನು ತ್ರಿಮೂರ್ತಿ ನಾರಾಯಣ ದೇವಾಲಯವೆಂದೂ ಕರೆಯುತ್ತಾರೆ. ಈ ದೇವಾಲಯವನ್ನು ಇಸವಿ ೧೧೬೦ರಲ್ಲಿ ಹತ್ತನೇ ಕಲ್ಯಾಣಿ ಚಾಲುಕ್ಯರ ದೊರೆ ೩ನೇ ತೈಲಪನ ಕಾಲದಲ್ಲಿ ತ್ರಿಕೂಟ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯ, ಚಾಲುಕ್ಯರು ಕೆಲವೊಂದೆಡೆ ತಮ್ಮ ಏಕಕೂಟ ಮತ್ತು ದ್ವಿಕೂಟ ಶೈಲಿಯನ್ನು ಬಿಟ್ಟು ತ್ರಿಕೂಟ ಶೈಲಿಯಲ್ಲಿ ದೇವಾಲಯ ನಿರ್ಮಿಸಿರುವುದಕ್ಕೆ ಒಂದು ಉದಾಹರಣೆ.


ಪ್ರಮುಖ ಗರ್ಭಗುಡಿಯ ಗೋಪುರ ಹಾನಿಗೊಳಗಾಗಿ ಕುಸಿದಿದೆ. ೨ ಗರ್ಭಗುಡಿಗಳಲ್ಲಿ ಶಿವಲಿಂಗವಿದ್ದರೆ, ಎಡಕ್ಕಿರುವ ಗರ್ಭಗುಡಿಯಲ್ಲಿ ವಿಷ್ಣುವಿನ ವಿಗ್ರಹವಿದೆ. ಎಲ್ಲಾ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದ್ದು, ಪ್ರತ್ಯೇಕ ಅಂತರಾಳಗಳಿವೆ. ಈ ದೇವಾಲಯದಲ್ಲಿ ೨ ನಂದಿಗಳಿವೆ. ದೇವಾಲಯದ ಹೊರಗಡೆ ಒಂದು ನಂದಿ ಇದ್ದರೆ, ಇನ್ನೊಂದು ನಂದಿ ಅದಕ್ಕೆ ನೇರವಾಗಿ ಪ್ರಮುಖ ಗರ್ಭಗುಡಿಯ ಅಂತರಾಳದಲ್ಲಿದೆ. ಸಿಕ್ಕಿರುವ ಕೆಲವೊಂದು ವೀರಗಲ್ಲುಗಳನ್ನು ದೇವಾಲಯದ ಸಮೀಪದಲ್ಲೇ ಇಡಲಾಗಿದೆ.


ದೇವಾಲಯದ ಮುಂದಿರುವ ವಿಶಾಲ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು ಎಂದು ನಂಬಲಾಗಿದೆ. ತ್ರಿಮೂರ್ತಿ ನಾರಾಯಣ ದೇವಾಲಯದ ಮುಂಭಾಗದ ಪ್ರದೇಶ ಪ್ರಮುಖ ಬೀದಿಯಾಗಿದ್ದು, ಹಬ್ಬದ ದಿನಗಳ ಸಮಯದಲ್ಲಿ ಮೆರವಣಿಗೆ ನಡೆಯುತ್ತಿತ್ತು ಎಂದು ಕವಿ ಶಾಂತಿನಾಥ ವಿವರಿಸಿದ್ದಾನೆ. ಈತ ರಚಿಸಿದ ಕಾವ್ಯ ’ಸುಕುಮಾರ ಚರಿತಂ’ನಲ್ಲಿ ಬಂದಳಿಕೆಯ ಎಲ್ಲಾ ವೈಭವಗಳನ್ನು ವರ್ಣಿಸಲಾಗಿದ್ದು, ಇದರ ಹಸ್ತಪ್ರತಿಗಳನ್ನು ಮೈಸೂರು ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಇಂದಿನವರೆಗೂ ಜೋಪಾನವಾಗಿ ಸಂರಕ್ಷಿಸಿಡಲಾಗಿದೆ.


ತ್ರಿಮೂರ್ತಿ ನಾರಾಯಣ ದೇವಾಲಯದಿಂದ ಸ್ವಲ್ಪ ಮುಂದೆ ದಿಬ್ಬವೊಂದರ ಮೇಲೆ ಸಭಾಮಂಟಪವಿದೆ. ಇದಕ್ಕೆ ಮಹಾನವಮಿ ದಿಬ್ಬ ಎಂದು ಹೆಸರು. ಹಬ್ಬ ಹರಿದಿನಗಳು ವಿಜೃಂಭಣೆಯಿಂದ ನಡೆಯುತ್ತಿದ್ದ ಸಮಯದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದ ಸ್ಥಳ ಇದು. ಇನ್ನೂ ಸ್ವಲ್ಪ ಮುಂದೆ ಇನ್ನೊಂದು ದಿಬ್ಬದ ಮೆಲೆ ಸಹಸ್ರಲಿಂಗ ಇದೆ. ಸೋಜಿಗದ ವಿಷಯವೆಂದರೆ ಇಲ್ಲೀಗ ಒಂದೂ ಲಿಂಗವಿಲ್ಲ! ಹಾನಿಗೊಳಗಾಗಿ ಮುಗ್ಗರಿಸುತ್ತಿರುವ ಎರಡು ನಂದಿ ಮೂರ್ತಿಗಳನ್ನು ಬಿಟ್ಟರೆ ಇಲ್ಲಿ ಮತ್ತೇನೂ ಇಲ್ಲ.


ಸಹಸ್ರಲಿಂಗದಿಂದ ಸ್ವಲ್ಪ ಮುಂದೆ ಇದೆ ಸುಂದರ ಸೋಮೇಶ್ವರ ದೇವಾಲಯ. ಈ ದೇವಾಲಯವನ್ನು ಆನೆಕಲ್ಲು ಸೋಮಯ್ಯ ದೇವಾಲಯವೆಂದೂ ಕರೆಯುತ್ತಾರೆ. ಹನ್ನೊಂದನೇ ಕಲ್ಯಾಣಿ ಚಾಲುಕ್ಯ ದೊರೆ ೩ನೇ ಜಗದೇಕಮಲ್ಲನ ಕಾಲದಲ್ಲಿ ಮಾಜೆಯ ನಾಯಕ ಎಂಬವನು ಈ ದೇವಾಲಯವನ್ನು ನಿರ್ಮಿಸಿದನು. ದೇವಾಲಯದ ದ್ವಾರದ ಇಕ್ಕೆಲಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಹೇಳುವ ಸುಂದರ ಕೆತ್ತನೆಗಳಿರುವ ಜಾಲಂಧ್ರಗಳಿವೆ. ಗರ್ಭಗುಡಿಯಲ್ಲಿ ಉದ್ದನೆಯ ಶಿವಲಿಂಗ. ಅಂತರಾಳದಲ್ಲಿ ಸುಂದರ ಪೀಠದ ಮೇಲೆ ನಂದಿ. ನವರಂಗದಲ್ಲಿ ಎಡಕ್ಕೆ ೩, ಬಲಕ್ಕೆ ೩ ಮತ್ತು ಅಂತರಾಳ ದ್ವಾರದ ಇಕ್ಕೆಲಗಳಲ್ಲಿ ೨, ಹೀಗೆ ಒಟ್ಟು ೮ ಕವಾಟಗಳಿದ್ದವು. ದೇವ ದೇವಿಯರ ಸುಂದರ ವಿಗ್ರಹಗಳು ಇಲ್ಲಿದ್ದವೇನೋ... ಈಗ ಏನೂ ಇಲ್ಲ.


ಬಂದಳಿಕೆಯಲ್ಲಿ ಇನ್ನೂ ೨ ದೇವಾಲಯಗಳು - ಕಪಿಲೇಶ್ವರ ಮತ್ತು ರಾಮೇಶ್ವರ - ಇವೆ ಎಂದು ಓದಿದ್ದೆ. ಆದರೆ ಅವೆಲ್ಲಿ ಇವೆ ಎಂದು ತಿಳಿದವರು ಯಾರೂ ಸಿಗಲಿಲ್ಲ. ಸ್ವಲ್ಪ ಹುಡುಕಾಡಿ, ನಿರಾಸೆಯಿಂದ ಅಲ್ಲಿಂದ ಹೊರಟೆವು.

ಮಾಹಿತಿ: ಜಯದೇವಪ್ಪ ಜೈನಕೇರಿ ಮತ್ತು ಮಂಜುನಾಥ