ಭಾನುವಾರ, ಆಗಸ್ಟ್ 24, 2014

ಜಲಸಂಗಿಯ ಮದನಿಕೆಯರು - ೩


ಮೇಲಿನ ಕೆತ್ತನೆಯಲ್ಲಿ ಆ ಮದನಿಕೆ ನಿಂತಿರುವ ಮಾದಕ ಭಂಗಿಯನ್ನು ನೋಡಿ. ಬಲಗೈಯನ್ನು ತಲೆಯ ಹಿಂಭಾಗಕ್ಕೆ ಆನಿಸಿ, ಎಡಗೈಯಿಂದ ಅದನ್ನು ಹಿಡಿದು ನಿಂತಿರುವ ರೀತಿ ನೋಡಿ ನಾನಂತೂ ಹಳ್ಳಕ್ಕೆ ಬಿದ್ದೆ!


ಬಲಗೈಯ ಎರಡು ಬೆರಳುಗಳು ಎಡಗೈಯೊಳಗೆ ಮತ್ತು ಎಡಗೈಯ ಅವೇ ಎರಡು ಬೆರಳುಗಳು ಬಲಗೈಯೊಳಗೆ ಇರುವಂತೆ ನಿಂತಿರುವ ಸೃಜನಾತ್ಮಕ ಕೆತ್ತನೆಯಿದು. ನಾನು ಕೂಡಾ ಹಾಗೇ ನಿಲ್ಲಲು ಪ್ರಯತ್ನಿಸಿ ಬಹಳ ಸಮಯದ ನಂತರ ಉಭಯ ಕೈಗಳ ಬೆರಳುಗಳನ್ನು ಕೆತ್ತನೆಯಲ್ಲಿರುವಂತೆ ಸರಿಯಾದ ಸ್ಥಳಗಳಲ್ಲಿ ಇರಿಸಲು ಸಫಲನಾದೆ!


ಶಿಲ್ಪಿಯು ಆಕೆಯ ಹೊಟ್ಟೆಯನ್ನು ಕೆತ್ತಿರುವ ರೀತಿಯನ್ನು ಗಮನಿಸಿ. ಆ ರೀತಿ ಅಂಕೊಡೊಂಕಾಗಿ ನಿಲ್ಲಬೇಕಾದರೆ ಹೊಟ್ಟೆ ಪಡೆಯುವ ಸಣ್ಣ ತಿರುವುಗಳನ್ನು ಕಲ್ಪಿಸಿ ರಚಿಸಿರುವ ಉಬ್ಬುತಗ್ಗುಗಳು ಅದ್ಭುತ. ಆಕೆಯ ಕೈಯಲ್ಲಿ ಬಳೆಗಳನ್ನು ಕೆತ್ತಿರುವುದನ್ನು ಗಮನಿಸಿ.


ಅಮ್ಮ ಮತ್ತು ಮಗು. ದ್ರಾಕ್ಷಿಯ ಗೊಂಚಲನ್ನು ಹಿಡಿದಿರುವ ಅಮ್ಮ. ಅದನ್ನು ನೀಡುವಂತೆ ರಂಪಾಟ ಮಾಡುತ್ತಿರುವ ಮಗು. ಅಮ್ಮನ ಶಾಂತಚಿತ್ತ ಸುಂದರ ಮುಖ ಚೆನ್ನಾಗಿ ಮೂಡಿಬಂದಿದೆ.


ವಾದ್ಯ ನುಡಿಸುತ್ತಿರುವ ಮದನಿಕೆ. ಸರ್ವ ಮದನಿಕೆಯರನ್ನು ಸರ್ವಾಭರಣಧಾರಿಯಾಗಿರಿಸಿ ಅವರನ್ನು ಕಂಗೊಳಿಸುವಂತೆ ಮಾಡಿದ್ದಾನೆ ಶಿಲ್ಪಿ.


ಈ ಮದನಿಕೆಯ ಎಡಗಾಲಿನ ಪಾದರಕ್ಷೆ ಯಥಾಸ್ಥಾನದಲ್ಲಿದೆ. ಅದರೆ ಬಲಗಾಲಿನ ಪಾದರಕ್ಷೆಯನ್ನು ತಲೆಯ ಮೇಲೆ ಎತ್ತಿ ಹಿಡಿದಿದ್ದಾಳೆ.

2 ಕಾಮೆಂಟ್‌ಗಳು:

Srik ಹೇಳಿದರು...

ಅದ್ಭುತ!

ಒಂದು ಪ್ರಶ್ಣೆ - ನೀವು ನೋಡಿರುವ ಕನ್ನಡ ನಾಡಿನ ಎಲ್ಲಾ ಸುಂದರ ದೇವಾಲಯಗಳಲ್ಲಿ ನಿಮ್ಮನ್ನು ಅತ್ಯಂತ ಸೂರೆಗೊಂಡಿರುವ ದೇವಾಲಯ/ಕೆತ್ತನೆ ಯಾವುದು?

ಯಾಕೆ ಕೇಳಿದೆ ಎಂದರೆ, ನೀವು ನೋಡಿರುವ ಎಲ್ಲವನ್ನೂ ನೋಡಲು ನಮ್ಮಂತಹ ಹುಲುಮಾನವರಿಗೆ ನ್ಸಾಧ್ಯವಿಲ್ಲ, ಆದ್ದರಿಂದ!

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,

ಎಲ್ಲಾ ದೇವಾಲಯಗಳೂ ಚೆನ್ನಾಗಿಯೇ ಇವೆ. ಆದರೆ ಮನಸೂರೆಗೊಂಡಿದ್ದು ಜಲಸಂಗಿಯ ಕಲ್ಲೇಶ್ವರ (ಕಲ್ಮೇಶ್ವರ) ದೇವಾಲಯ. ಈ ದೇವಾಲಯದಲ್ಲಿರುವ ಗಣೇಶನ ಕೆತ್ತನೆ, ಶಾಸನ ಸುಂದರಿಯ ಕೆತ್ತನೆ ಹಾಗೂ ಉಳಿದ ಮದನಿಕೆಯರ ಕೆತ್ತನೆ ಬಹಳ ಅಪರೂಪದ್ದು. ಧನ್ಯವಾದ.